ಕಡ್ಲಿಂಗ್ಅಥವಾ ಅಪ್ಪುಗೆ ಎಂಬುದು ಸಾಂತ್ವನ ನೀಡುವ ಹೊಸ ಥೆರಪಿಯಾಗಿ ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಇದರ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ…..?

“ಹತ್ತು ವರ್ಷ ಒಂದೇ ರೂಮಿನಲ್ಲಿ ಒಟ್ಟಿಗೆ ಹಾಸ್ಟೆಲ್ ‌ನಲ್ಲಿದ್ದ ಗೆಳೆಯ ವಿದೇಶದಿಂದ ಬಂದಿದ್ದ. ಅವನನ್ನು ಸ್ವಾಗತಿಸಲು ನಾನು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಅವನು ನನ್ನನ್ನು ನೋಡಿದ ತಕ್ಷಣ ಹತ್ತಿರ ಬಂದ, ಕೈ ಕುಲುಕಲು ಎಂದುಕೊಂಡೆ, ಮತ್ತೂ ಹತ್ತಿರ ಬಂದ. ಅವನು ಹತ್ತಿರ ಬಂದಂತೆ ನಾನು ದೂರ ದೂರ ಹೋದೆ. ಅಂತೂ ಅವನು ಹತ್ತಿರ ಬಂದು ನನ್ನನ್ನು ತಬ್ಬಿಕೊಂಡ. ಅಯ್ಯೋ… ಹಾಗಾದರೆ ಅವನು ಹತ್ತಿರ ಬಂದದ್ದು ನನ್ನನ್ನು ತಬ್ಬಿಕೊಳ್ಳಲಿಕ್ಕಾಗಿಯೇ ಎಂದು ನನಗೆ ಅರ್ಥವಾಯಿತು. ಆದರೂ ಈ ರೀತಿಯ ತಬ್ಬುವಿಕೆ ನನಗಂತೂ ಅಪರಿಚಿತ. ಅವನು ವಿದೇಶದಲ್ಲಿ ಕಲಿತ ಅಭ್ಯಾಸವಿರಬೇಕು,” ನಮ್ಮ ಮನೆಯ ಹಿರಿಯರೊಬ್ಬರು ಹೇಳಿದ ಪ್ರಸಂಗವಿದು.

ಒಂದಿಪ್ಪತ್ತು ವರ್ಷಗಳ ಹಿಂದೆ ಈ ಹಗ್‌ ಅಥವಾ ಕಡ್ಲಿಂಗ್‌ ಅಥವಾ ಅಪ್ಪುಗೆ ನಮಗೆಲ್ಲಾ ಗೊತ್ತಿರದ ವಿಷಯ. ಆಗ ಯಾರಾದರೂ ಸಿಕ್ಕಿದರೆ ಅವರಿಗೆ ಕೈ ಜೋಡಿಸಿ ನಮಸ್ಕಾರ ಮಾಡುವ ಪದ್ಧತಿ ಇತ್ತು. ಕ್ರಮೇಣ ಕೈ ಕುಲುಕುವ ಪದ್ಧತಿ ಪ್ರಾರಂಭವಾಯಿತು. ಮೊದಲು ಇದು ಬರಿಯ ಗಂಡಸರ ಮಧ್ಯೆ ಇತ್ತು. ನಂತರ ಹೆಂಗಸು ಮತ್ತು ಗಂಡಸರ ನಡುವೆಯೂ ಪ್ರಾರಂಭವಾಯಿತು. ಅದರ ಮುಂದುವರಿಕೆಯ ಭಾಗವಾಗಿ ಈಗ ಅಪ್ಪುಗೆ ಅಸ್ತಿತ್ವಕ್ಕೆ ಬಂದಿದೆ. ದೃಶ್ಯ ಮಾಧ್ಯಮದಲ್ಲಿ ಇದು ಬಹಳವಾಗಿ ಕಂಡುಬರುತ್ತದೆ. ಪರಸ್ಪರ ಪರಿಚಯ ಮಾಡಿಕೊಳ್ಳಬೇಕೆಂದರೆ ಅಲ್ಲೊಂದು ಹಗುರವಾದ ಅಪ್ಪುಗೆ ಇರಲೇಬೇಕು. ಅದು ಕೈ ಮುಗಿದು ಮಾಡುವ ನಮ್ಮ ನಮಸ್ಕಾರದಷ್ಟೇ ಸಾಮಾನ್ಯವಾಗಿದೆ, ಸಹಜ ಆಗಿಹೋಗಿದೆ.

ಹೆಸರಿನ ಪುರಾಣ

ಸ್ಕಾಂಡಿನೇವಿಯಾದ ಆಡು ಭಾಷೆಯಲ್ಲಿ ಹಗ್ಗ ಎಂಬುದು `ಹಗ್‌’ ಆಯಿತು. ಅರ್ಥಾತ್‌ ಸಾಂತ್ವನ. ಇದಲ್ಲದೆ ಜರ್ಮನ್‌ ಭಾಷೆಯಲ್ಲಿ ಹೇಗನ್‌ ಇರುವುದು `ಹಗ್‌’ ಆಯಿತು ಎನ್ನುವ ಎರಡು ಸಿದ್ಧಾಂತಗಳಿವೆ.

ವಿದೇಶದ ಅಪ್ಪುಗೆ

ವಿದೇಶೀಯ ಸಂಸ್ಕೃತಿಯಲ್ಲಿ ಅಪ್ಪುಗೆಯ ಜೊತೆ ಮತ್ತೊಂದನ್ನು ಉಚಿತವಾಗಿ ನೀಡಿದರೂ ಆಯಾ ಪ್ರದೇಶದ ಸಂಸ್ಕೃತಿ, ಸಂದರ್ಭಕ್ಕೆ ಅನುಗುಣವಾಗಿ ಹಗುರವಾದ ಅಪ್ಪುಗೆ ಪ್ರೀತಿ, ವಾತ್ಸಲ್ಯ ಮತ್ತು ಗೆಳೆತನನ್ನು ಪ್ರತಿನಿಧಿಸುತ್ತದೆ. ಅನೇಕ ಬಾರಿ ಅತೀ ದುಃಖದ ಸಮಯದಲ್ಲಿ ಆತ್ಮೀಯರ ಅಪ್ಪುಗೆ ಸಾಂತ್ವನವನ್ನು ನೀಡುತ್ತದೆ. ಕೆಲವು ದೇಶಗಳು ಅಂದರೆ ಫ್ರಾನ್ಸ್, ವ್ಯಾಟಿಕನ್‌, ಅಮೆರಿಕಾ ಮತ್ತು ಸ್ಪೇನ್‌ ನಲ್ಲಿ ಅಪ್ಪುಗೆ ಸಂಸ್ಕೃತಿಯ ಒಂದು ಭಾಗವೂ ಹೌದು.

ಭಾರತದಲ್ಲಿ

2017ರಲ್ಲಿ ಕೇರಳದ ಒಬ್ಬ ಹದಿನಾರು ವರ್ಷದ ಹುಡುಗ, ಕಲಾ ವಿಭಾಗದಲ್ಲಿ ಮೊದಲ ಬಹುಮಾನ ಪಡೆದ ಒಬ್ಬ ಹುಡುಗಿಯನ್ನು ಅಪ್ಪಿಕೊಂಡಿದ್ದಕ್ಕಾಗಿ ಅವನನ್ನು ಶಾಲೆಯಿಂದ ಹೊರ ಹಾಕಿದರು. ಆದರೆ ನಂತರ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಆಜ್ಞೆಯ ಮೇರೆಗೆ ಅವನನ್ನು ಮತ್ತೆ ಶಾಲೆಗೆ ಸೇರಿಸಿಕೊಳ್ಳಲಾಯಿತಂತೆ.

ಏನೇ ಇರಲಿ, ಅಪ್ಪುಗೆ ನಮ್ಮ ದೇಶದ ಸಂಸ್ಕೃತಿಯಂತೂ ಅಲ್ಲವೇ ಅಲ್ಲ, ಆದರೆ ಈಗ ಅದು ನಮ್ಮ ದೇಶಕ್ಕೂ ಕಾಲಿಟ್ಟಿದೆ ಮತ್ತು ಇಂದಿನ ಯುವ ಜನಾಂಗದಲ್ಲಿ ಸರ್ವೇ ಸಾಮಾನ್ಯ ಆಗಿದೆ.

ಅಪ್ಪುಗೆ ಮತ್ತು ಆರೋಗ್ಯ

ಅಪ್ಪುಗೆಯಿಂದ ಆರೋಗ್ಯ ಸುಧಾರಿಸುತ್ತದೆ ಎನ್ನುತ್ತಾರೆ ತಜ್ಞರು. ದೇಹದಲ್ಲಿ ಆಕ್ಸಿಟೋಸಿನ್‌ ಪ್ರಮಾಣ ಹೆಚ್ಚಾಗುತ್ತದೆ ಮತ್ತು ರಕ್ತದ ಒತ್ತಡವನ್ನೂ ಕಡಿಮೆ ಮಾಡುತ್ತದೆ. ದೇಹದಲ್ಲಿ ಒತ್ತಡವನ್ನು ಹೆಚ್ಚಿಸುವ ಕಾರ್ಟಿಸೋಲ್ ‌ಉತ್ಪತ್ತಿಯನ್ನು ತಡೆಯುತ್ತದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಅಪ್ಪುಗೆ ನಮ್ಮ ದೇಶದಲ್ಲಿ ಜನಪ್ರಿಯವಾಗಿ ಇರುವುದಲ್ಲದೆ, ಒಂದು ಚಿಕಿತ್ಸೆ ಎಂದೂ ಸಹ ಗುರುತಿಸಿಕೊಂಡಿದೆ.

ಅಪ್ಪುಗೆಯ ಥೆರಪಿ

ಅಪ್ಪುಗೆಗೆ ಹಣವೇ? ಇದು ಥೆರಪಿಯ ರೂಪದಲ್ಲಿ ಜನಪ್ರಿಯತೆ ಪಡೆದು ಸಾಕಷ್ಟು ದುಬಾರಿಯೂ ಹೌದು ಎಂದಾಗಿದೆ. ವೃತ್ತಿಪರ ಅಪ್ಪುಗೆಕಾರ ಟ್ರೆಶರ್‌ ಎನ್ನುವವನು ಜನರಲ್ಲಿ ರಕ್ಷಣಾ ಭಾವದ ಅಪ್ಪುಗೆ ನೀಡಲು ಗಂಟೆಗೆ 2000/ ರೂ.ಗಳನ್ನು ಪಡೆಯುತ್ತಾನಂತೆ. ಅಪ್ಪುಗೆ ಸಹಕಾರ, ಸಾಂತ್ವನ, ಪ್ರೀತಿ ಹಾಗೂ ಮಮತೆಯನ್ನು ತೋರಿಸುತ್ತದೆ ಎನ್ನುವುದು ಇವನ ಅಂಬೋಣ. ಊರಿಗೆ ಬಂದವಳು ನೀರಿಗೆ ಬರುವುದಿಲ್ಲವೇ ಎನ್ನುವಂತೆ. ವಿಶ್ವಕ್ಕೆ ಬಂದದ್ದು ನಮ್ಮ ದೇಶಕ್ಕೂ ಬರಲೇ ಬೇಕು. ಇಲ್ಲಿಯೂ ವೃತ್ತಿಪರ ಕಡ್ಲರ್ ಗಳ ಜಾಹೀರಾತುಗಳು ಪ್ರಾರಂಭವಾಗಿವೆ.

ಏಕೆ…. ಹೀಗೆ…?

ಹಿಂದೆ ಒಟ್ಟು ಕುಟುಂಬಗಳಿದ್ದವು. ಮನೆಯ ತುಂಬಾ ಜನರು ಇರುತ್ತಿದ್ದರು. ಮನಸ್ಸಿಗೆ ಬೇಸರವಾದಾಗ ಸಮಾಧಾನ ಸಾಂತ್ವನ ನೀಡುವವರು ಮನೆಯಲ್ಲೇ ಇರುತ್ತಿದ್ದರು. ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಅಕ್ಕ ತಂಗಿಯರು, ಅಣ್ಣ ತಮ್ಮಂದಿರು, ಸೋದರತ್ತೆ, ಸೋದರ ಮಾವ ಎಲ್ಲರೂ ಇರುತ್ತಿದ್ದರು. ಸಂಕಷ್ಟಕ್ಕೆ ಪರಿಹಾರ, ಸಮಾಧಾನ ಎಲ್ಲವೂ ಲಭ್ಯವಿತ್ತು. ಈಗ ಮಗುವೊಂದೆ, ಮನೆಯಲ್ಲಿ ಹಿರಿಯರು ಬೇಡ. ಪರಿಣಾಮ ಏಕಾಂಗಿತನ, ಸಾಂತ್ವನವನ್ನು ಹೊರಗೆ ಹುಡುಕಿಕೊಂಡು ಹೋಗಬೇಕು. ನಾಗರಿಕತೆಯ ಪರಿಣಾಮ ಮನೆಯಲ್ಲಿ ಒಲೆ ಹಚ್ಚುವುದು ಅಪರೂಪವಾಗಿದೆ. ಎಲ್ಲ ಔಟ್‌ ಸೋರ್ಸ್‌, ಅಂತೆಯೇ ಮನಸ್ಸಿಗೆ ಶಾಂತಿ, ಸಮಾಧಾನ ಬೇಕೆಂದರೂ ಅದೂ ಔಟ್‌ಸೋರ್ಸ್‌. ಒಟ್ಟಾರೆ ಆಧುನಿಕತೆಯ ಕೊಡುಗೆಯನ್ನು ನಿರಾಕರಿಸಲಾಗದು ಅಲ್ಲವೇ?

ಮಂಜುಳಾ ರಾಜ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ