ಅತಿ ಭಾವುಕಳಾದ ಅಕ್ಷತಾ ಪ್ರೇಮಿಸಿ ಮದುವೆಯಾದ ಪತಿ ಚೇತನನನ್ನು ಬಹಳ ಹಚ್ಚಿಕೊಂಡಿದ್ದಳು. ಸಂಸಾರದ ಜವಾಬ್ದಾರಿಗಳ ಮಧ್ಯೆ ದಿಢೀರ್ಎಂದು ಆಕಸ್ಮಿಕ ಅಪಘಾತಕ್ಕೆ ಒಳಗಾದ ಚೇತನ್‌, ಇವಳನ್ನು ಒಬ್ಬಂಟಿ ಮಾಡಿ ಹೋಗಿಬಿಟ್ಟ. ಸದಾ ಅವನ ನೆನಪಲ್ಲೇ ಮುಳುಗಿದ್ದ ಅಕ್ಷತಾ, ಮುಂದೆ ತನ್ನ ಜೀವನ ನಡೆಸಲು ಹೊಸ ಸಂಗಾತಿಯನ್ನು ಆಯ್ದುಕೊಳ್ಳುವಲ್ಲಿ ಯಶಸ್ವಿಯಾದಳೇ…..?

ಡಾ. ಅಕ್ಷತಾಳ ಮನಸ್ಸು ಗೊಂದಲದಲ್ಲಿ ಬಿದ್ದಿತ್ತು. ಕನ್ನಡ ವಿಭಾಗದ ಮುಖ್ಯಸ್ಥಳಾಗಿ ಮೈಸೂರಿನ ಮಹಾರಾಣಿ ಕಾಲೇಜಿಗೆ ಹೋಗುವುದೋ ಅಥವಾ ಸಹಾಯಕ ಪ್ರಾಧ್ಯಾಪಕಿಯಾಗಿ ಇಲ್ಲೇ ಇದ್ದುಬಿಡುವುದೋ….? ಇನ್ನುಳಿದಿರುವುದೇ ನಾಲ್ಕು ವರ್ಷಗಳ ಸೇವಾ ಅವಧಿ. ಮೈಸೂರಿನದು ದೊಡ್ಡ ಮಹಿಳಾ ಕಾಲೇಜ್‌. ದೊಡ್ಡ ಕಾಲೇಜಿನಲ್ಲಿನ ಅನುಭವವೇ ಬೇರೆ ಅಲ್ಲವೇ? ಮೈಸೂರು ಸಂಪೂರ್ಣ ಹೊಸ ಪರಿಸರ. ಅಲ್ಲಿ ನನ್ನವರು ಎನ್ನುವವರು ಯಾರಿದ್ದಾರೆ? ಇಲ್ಲಿಯಾದರೂ ನನ್ನವರು ಎನ್ನುವವರು ಯಾರಿದ್ದಾರೆ? ನನ್ನವರು ಎನ್ನುವವರು ಯಾರೂ ಇಲ್ಲದಿದ್ದರೂ ಒಂದಿಷ್ಟು ಜನ ಸಂಬಂಧಿಕರು, ಸ್ನೇಹಿತರು, ಪರಿಚಯದರು ಇದ್ದಾರೆ.

ಒಂದು ಕಾಲಕ್ಕೆ ಇಲ್ಲಿ ನನ್ನವರು ಎನ್ನುವವರು ಬಹಳಷ್ಟು ಜನರಿದ್ದುದು ನಿಜವೇ. ಆದರೆ ಅವರೆಲ್ಲರ ಮನಸ್ಸುಗಳಲ್ಲಿ ನಮ್ಮ ಬಗ್ಗೆ ಲೆಕ್ಕವಿಲ್ಲದಷ್ಟು ನಿರೀಕ್ಷೆಗಳು ತುಂಬಿ ತುಳುಕಾಡುತ್ತಿದ್ದವು. ನಮ್ಮ ಕೈ ಕೊಡುಗೈ ಆಗಿದ್ದಾಗ ದೂರದವರೂ ಸಂಬಂಧ ಹುಟ್ಟಿಸಿಕೊಂಡು ಬಂದು ನಮ್ಮನ್ನು ಸುತ್ತುವರಿಯುತ್ತಿದ್ದುದು ನಿಜ.

ನಾನು, ಡಾ. ಚೇತನ್‌ ಇಬ್ಬರೂ ಯುಜಿಸಿ ಸ್ಕೇಲ್ ನಲ್ಲಿ ಸಂಬಳ ಪಡೆಯುತ್ತಿದ್ದುದರಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಚೇತನನ ತಮ್ಮಂದಿರು, ಅಕ್ಕತಂಗಿಯರಿಗೆ ಅದೆಷ್ಟೋ ಸಹಾಯ ಮಾಡಿಲ್ಲವೇ….? ಇದ್ದೊಬ್ಬ ಅವರ ಅಣ್ಣ ಮದುವೆಯಾಗಿ ಎರಡು ಮಕ್ಕಳಾಗುತ್ತಲೇ ತಾನಾಯಿತು, ತನ್ನ ಸಂಸಾರವಾಯಿತು ಎಂಬಂತೆ ಬೇರೆಯಾಗಿಬಿಟ್ಟ. ಇಬ್ಬರು ತಮ್ಮಂದಿರು, ಇಬ್ಬರು ತಂಗಿಯರ ಜವಾಬ್ದಾರಿ ನಮ್ಮ ಹೆಗಲಿಗೆ ಬಿದ್ದಿತ್ತು.

ಒಬ್ಬ ತಮ್ಮ ಹೇಗೋ ಪದವಿ ಮುಗಿಸಿಕೊಂಡು ಶಿಕ್ಷಕನಾದ. ಇನ್ನೊಬ್ಬ ತಮ್ಮ ಎಸ್‌.ಎಸ್‌.ಎಲ್.ಸಿ ಮುಗಿಸಿಕೊಂಡು ಮನೆಯಲ್ಲೇ ಇದ್ದುಕೊಂಡು ಮನೆತನದ ಜಮೀನಿನ ಉಸ್ತುವಾರಿಗೆ ನಿಂತ. ಇಬ್ಬರು ತಮ್ಮಂದಿರು, ತಂಗಿಯರ ಮದುವೆ, ಅವರ ಬಸಿರು ಬಾಣಂತನದ ಖರ್ಚುಗಳೆಲ್ಲನ್ನೂ ನಾವೇ ನಿಭಾಯಿಸಿದೆವು. ಚೇತನನ ಒಬ್ಬ ಅಕ್ಕನ ಮಗನಿಗೆ ಬಿಇ ಓದಿಸುವ ಖರ್ಚನ್ನೂ ನಾವೇ ಹೊತ್ತುಕೊಂಡಿದ್ದೆವು. ನಮ್ಮಿಂದ ಧನ ಸಹಾಯ, ಇನ್ನಿತರ ಸಹಾಯ ಪಡೆದ ಅವರಿಂದ ಈಗ, `ನಮ್ಮ ತಮ್ಮ ನಮಗೇನು ಮಾಡಿದ್ದಾನೆ, ನಮ್ಮ ಅಣ್ಣ ನಮಗೇನು ಮಾಡಿದ್ದಾನೆ….?’ ಎಂಬ ಒಡಕು ಮಾತುಗಳು ಕೇಳಿ ಬರುತ್ತಿವೆ.

pani-milta-rista-story2

ನಾವು ಅವರಿಗೆ ಇನ್ನೇನು ಮಾಡಬೇಕಿತ್ತೋ ಏನೋ….? ನಾವು ಇನ್ನೂ ಕೊಡುತ್ತಲೇ ಇರಬೇಕು ಎಂಬ ನಿಲ್ಲದ ನಿರೀಕ್ಷೆ ಅವರದು. ನಮ್ಮ ಸುಖಸಂತೋಷಗಳನ್ನು ಬದಿಗಿಟ್ಟು ನಾವು ತ್ಯಾಗಿಗಳಾಗಿದ್ದಕ್ಕೆ ಇಂತಹ ಬಿರುದು ನಮಗೆ! ನಮ್ಮ ನಿಸ್ವಾರ್ಥ ಸೇವೆಗೆ ಸಿಕ್ಕ ಪ್ರತಿಫಲ! ಆದರೂ ಅವರ ಕೊಂಕು ಮಾತುಗಳನ್ನೇನು ನಾವು ಮನಸ್ಸಿಗೆ ಹಚ್ಚಿಕೊಂಡಿಲ್ಲ. ಏಕೆಂದರೆ, `ಅದು ನಮ್ಮ ಕರ್ತವ್ಯವಾಗಿತ್ತು,’ ಎಂದು ಭಾವಿಸಿಕೊಂಡಿದ್ದೇವೆ ಅಷ್ಟೇ. ಯಾರೇನೇ ಹೊಗಳಿದರೂ, ತೆಗಳಿದರೂ ನಮಗೇನೂ ನೋವಿಲ್ಲ. ಆದರೂ ಸಹಾಯ ಪಡೆದವರು ಮಾನವೀಯತೆ ಮರೆಯಬಾರದು ಅಲ್ಲವೇ….? ಅಪಾತ್ರರಿಗೆ ಸಹಾಯ ಮಾಡಬಾರದು ಎಂದು ದಾರ್ಶನಿಕರು ಹೇಳುವ ಮಾತು ನಮ್ಮ ಹೃನ್ಮನಗಳನ್ನು ತಟ್ಟುತ್ತವೆ.

ಎರಡು ವರ್ಷಗಳ ಹಿಂದೆ ಚೇತನ್‌ ಏಕಾಏಕಿ ನನ್ನನ್ನು ಒಂಟಿಯಾಗಿ ಮಾಡಿ ಕಾಣದ ಲೋಕಕ್ಕೆ ಹೋಗಿಬಿಟ್ಟ. ಮಕ್ಕಳಿಬ್ಬರೂ ಎಂಜಿನಿಯರಿಂಗ್‌ ಪದವಿ ಮುಗಿಸಿಕೊಂಡು ಪರದೇಶದಲ್ಲಿದ್ದಾರೆ. ಚೇತನ್‌ ನ ಅಂತ್ಯ ಸಂಸ್ಕಾರಕ್ಕಷ್ಟೇ ಅವರು ಬಂದು ಹೋಗಿದ್ದು. ನಂತರ ಅವರು ಭಾರತ ದೇಶದ ಕಡೆಗೆ ಮುಖ ಸಹ ಹಾಕಿಲ್ಲ. ಮೊದಲಾದರೆ ದಿನಕ್ಕೊಮ್ಮೆಯಾದರೂ ಫೋನ್‌ ನಲ್ಲಿ, ವಿಡಿಯೋ ಕಾಲ್ ‌ನಲ್ಲಿ ಮಾತನಾಡುತ್ತಿದ್ದವರಿಗೆ ಈಗ ಮಾತುಗಳು ದುಬಾರಿಯಾಗಿವೆ. ನಾನೇ ಕಾಲ್ ‌ಮಾಡಿದಾಗ ಫೋನ್‌ ರಿಸೀವ್ ಮಾಡುವುದೂ ಅಪರೂಪ. ಮೇಲಿಂದ ಮೇಲೆ ನಾನು ಪ್ರಯತ್ನಿಸಿದಾಗ, `ಅಮ್ಮಾ, ನಾವೀಗ ಇಂಪಾರ್ಟೆಂಟ್‌ ಮೀಟಿಂಗ್‌ ನಲ್ಲಿ ಇದ್ದೇವೆ, ನಮ್ಮ ಬಾಸ್‌ ಮುಂದೆ ಕುಳಿತಿದ್ದೇವೆ. ಸದ್ಯ ಇಂಪಾರ್ಟೆಂಟ್‌ ವರ್ಕ್‌ ಮಾಡುತ್ತಿದ್ದೇವೆ, ವೆಹಿಕಲ್ ಡ್ರೈವ್ ‌ಮಾಡುತ್ತಿದ್ದೇವೆ, ನಂತರ ನಾವೇ ಫೋನ್‌ ಮಾಡುತ್ತೇವೆ,’ ಹಾಗೆ ಹೀಗೆ ಅಂತ ಏನೇನೋ ಸಬೂಬು ಹೇಳುತ್ತಾರೆ. `ಆ ನಂತರವಂತೂ ಅವರು ಫೋನ್‌ ಮಾಡಿದ್ದೇ ಇಲ್ಲ, ಅಂದರೆ…..? ಅಂದರೆ ಅವರಿಗೆ ನಾನು ಬೇಡವಾಗಿದ್ದೇನೆಯೇ….? ಚೇತನ್‌ ಇಲ್ಲದ ನನ್ನದು ಒಂಟಿ ಬದುಕು. `ಒಂಟಿ ಹಾದಿಗೆ ಬಣ್ಣಗಳಿರುವುದಿಲ್ಲ. ಚೇತನ್‌ ಇಲ್ಲದ ದಿನಗಳಿಗೆ ಸಂಜೆಗಳಿರುವುದಿಲ್ಲ,’ ಎಂಬಂತಾಗಿದೆ ನನ್ನ ಜೀವನ.

ಹಾಗಾದರೆ ನಾನು ಬದುಕುವುದಾದರೂ ಏತಕ್ಕೆ….? ನನ್ನವರು ಎನ್ನುವವರು ಯಾರೂ ಇಲ್ಲದಿರುವಾಗ ನನ್ನ ಜೀವನ ಯಾತ್ರೆಗಾದರೂ ಏನರ್ಥವಿದೆ…..? ಎಂಬ ಕಠೋರ, ನಿರಾಶಾದಾಯಕ ಪ್ರಶ್ನೆಗಳು ಆಗಾಗ ನನ್ನ ಮನದಲ್ಲಿ ಉದ್ಭವಿಸಿ ಪ್ರವಹಿಸುತ್ತಿರುತ್ತವೆ.

`ಅತ್ತು ಹಗುರವಾಗಲು ಒಂದು ಆಪ್ತ ತೋಳಿಲ್ಲದೇ ಹೋದರೆ ಮನುಷ್ಯ ಯಾವ ವಯಸ್ಸಿನಲ್ಲಿ ಬೇಕಾದರೂ ಅನಾಥತನ ಅನುಭವಿಸಬಹುದು,’ ಎಂಬಂತೆ ನಾನೂ ಅನಾಥಳಾಗುತ್ತಿದ್ದೇನೆ.

ನಾನು ಚೇತನ್‌ ನನ್ನು ಕಳೆದುಕೊಂಡ ಹೊಸದರಲ್ಲಿ ಮಗಳು ಅಭಿಜ್ಞಾ ಮತ್ತು ಸುಹಾಸ್‌, `ಅಮ್ಮಾ, ನಾವಿರುವಲ್ಲಿ ಸಾಮಾನ್ಯವಾಗಿ ಯಾವ ಗಂಡಾಗಲೀ, ಹೆಣ್ಣಾಗಲೀ ಒಂಟಿಯಾಗಿರುವುದಿಲ್ಲ. ಸಂಗಾತಿಗಳು ತೀರಿ ಹೋದ ತುಸು ದಿನಗಳಲ್ಲೇ ಕಂಪ್ಯಾನಿಯನ್‌ ಒಬ್ಬರನ್ನು ಹುಡುಕಿಕೊಂಡು ಬಿಡುತ್ತಾರೆ. ನಿನಗಂತೂ ನಮ್ಮ ಜೊತೆಗೆ ಬರಲು ಮನಸ್ಸಿಲ್ಲ. ಅಲ್ಲೇ ನೀನೊಬ್ಬ ಕಂಪ್ಯಾನಿಯನ್‌ ನನ್ನು ಏಕೆ ಹುಡುಕಿಕೊಳ್ಳಬಾರದು….? ಇದರಿಂದ ಒಂಟಿತನ ಕಾಡುವುದಿಲ್ಲ. ನಮಗೆ ಗೊತ್ತು ನೀನೂ, ಅಪ್ಪಾಜಿ ಪ್ರೀತಿಸಿ ಮದುವೆಯಾದವರು ಎಂದು. ಅಪ್ಪಾಜಿಯನ್ನು ಮರೆಯಲು ನಿನಗೆ ಅಷ್ಟು ಬೇಗ ಸಾಧ್ಯವಿಲ್ಲವೆಂದೂ ನಮಗೆ ಗೊತ್ತು. ಆದರೂ ಆದಷ್ಟು ಬೇಗ ನಿನ್ನೊಳಗೇ ಚರ್ಚಿಸಿ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡರೆ, ನಿನ್ನ ಮುಂದಿನ ಜೀವನಕ್ಕೆ ಒಳ್ಳೆಯದು ಎಂದು ನಮ್ಮ ಅಭಿಪ್ರಾಯ. ನಿನಗೇನೂ ವಯಸ್ಸಾಗಿಲ್ಲ ಎಂಬುದು ನಮ್ಮ ಅನಿಸಿಕೆ…’ ಎಂದು ಆಗಾಗ ಸಲಹೆ, ಸೂಚನೆ ಕೊಡುತ್ತಿದ್ದರು.

ನಾನು ಅವರ ಮಾತುಗಳನ್ನು ಕೇಳಿಸಿಕೊಂಡು ಹಾಗೇ ಮರೆತುಬಿಡುತ್ತಿದ್ದುದು ನಿಜ. ಚೇತನ್‌ ಜೊತೆಗಿಲ್ಲದ ಈ ಎರಡು ವರ್ಷಗಳಲ್ಲಿ ಸಾಕಷ್ಟು ವೇದನೆ, ಒಂಟಿತನ ಅನುಭವಿಸಿದ್ದೇನೆ. ತಿನ್ನಲು, ಉಣ್ಣಲು, ಉಡಲು ಯಾವುದಕ್ಕೂ ಬರವಿಲ್ಲದಿದ್ದರೂ, ಸಂಗಾತಿಯ ಸಾಂಗತ್ಯದ ಕೊರತೆ ನನ್ನನ್ನು ಕಾಡುತ್ತಿದೆ, ಹೃದಯವನ್ನು ಹಿಂಡುತ್ತಿದೆ, ಮನಸ್ಸನ್ನು ಗೋಳಾಡಿಸುತ್ತಿದೆ. ಮನೆಗೆಲಸ, ಕಾಲೇಜಿನ ತರಗತಿಗಳು, ಸಹೋದ್ಯೋಗಿಗಳ ಒಡನಾಟದಲ್ಲಿ ಹಗಲು ಹೇಗೋ ಸರಿದು ಹೋಗುತ್ತದೆ. ಆದರೆ ರಾತ್ರಿ….? ನೀರಸ ರಾತ್ರಿಗಳು ಕರಾಳ ರಾತ್ರಿಗಳಾಗತೊಡಗಿವೆ. ರಾತ್ರಿಯಾಗುತ್ತಿದ್ದಂತೆ ಚೇತನ್‌ ನನ್ನೆದೆಯೊಳಗೆ ಬಂದು ಕುಳಿತುಬಿಡುತ್ತಾನೆ, ಹೃದಯ ವೀಣೆ ಮೀಟಲು ಮುಂದಾಗುತ್ತಾನೆ. ನೆನಪುಗಳು ಪ್ರವಾಹದೋಪಾದಿಯಲ್ಲಿ ವಕ್ಕರಿಸಿಕೊಂಡು ಬಿಡುತ್ತವೆ. ಅವನ ನೆನಪಲ್ಲಿ ಅದೆಷ್ಟೋ ರಾತ್ರಿಗಳಂದು ಭಾವನೆಗಳ ಭರಪೂರ ಪ್ರವಾಹದಿಂದ ನನಗೇ ಅರಿವಿಲ್ಲದಂತೆ ತಲೆದಿಂಬು ಒದ್ದೆಯಾಗಿಬಿಡುತ್ತದೆ. ಪುಣ್ಯಾತ್ಮ ಅಷ್ಟು ಅವಸರ ಮಾಡಿ ನನ್ನ ಬಿಟ್ಟು ಹೋದದ್ದಾದರೂ ಏಕೆ…..? ಏನನ್ನು ಸಾಧಿಸಲು ಹೋದ? ನನ್ನನ್ನೂ ಅವನ ಜೊತೆಗೆ ಕರೆದುಕೊಂಡು ಹೋಗಿದ್ದರೆ ಆಗುತ್ತಿರಲಿಲ್ಲವೇ….? ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಅಂತಾರೆ. ಕೆಲವೊಂದಿಷ್ಟು ಜನ, `ಅವನ ಭೂಮಿ ಋಣ ಮುಗಿದಿತ್ತು, ಹೋದ. ನಿಂದಿನ್ನೂ ಭೂಮಿ ಋಣ ಮುಗಿದಿಲ್ಲ. ಸಾವು ಅನ್ನೋದು ನಮ್ಮ ಕೈಯಲ್ಲಿಲ್ಲ. ಭೂಮಿ ಋಣ ಮುಗೀತು ಅಂದ್ರೆ ಒಂದು ಕ್ಷಣಾನೂ ಇಲ್ಲಿ ಇರಲಿಕ್ಕೆ ಸಾಧ್ಯವಿಲ್ಲ. ಯಾರಿಗೆ ಯಾರೂ ಅನಿವಾರ್ಯವಲ್ಲ. ಕಾಲ ಎಲ್ಲವನ್ನೂ ಮರೆಸುತ್ತೆ. ಬಂದಿದ್ದನ್ನು ಅನುಭವಿಸಬೇಕು ಅಷ್ಟೇ…..’ ಅಂತ ಏನೇನೋ ಹೇಳುವರು.  ಗೊಣಗಾಟಗಳಿಗೆ ಈಗ ರಾತ್ರಿಗಳು ಕಿವಿಗೊಡುವುದಿಲ್ಲ. `ಅದೊಂದು ವೇಳೆ ನೀನೇ ಮೊದಲು ಇಹಹೋಕ ಯಾತ್ರೆ ಮುಗಿಸಿದ್ದರೆ ಚೇತನ್‌ ಮರುಮದುವೆ ಆಗುತ್ತಿರಲಿಲ್ಲವೇ….?’ ಎಂದು ಕೆಲವರು ಕೇಳುತ್ತಿರುತ್ತಾರೆ. ಆದರೆ ಅದಕ್ಕೆ ನಾನು ಕಿವಿಗೊಡುವುದಿಲ್ಲ. ಪ್ರೀತಿಸಿ ಮದುವೆಯಾಗಿ ಸುಂದರ ಬಾಳನ್ನು ಕಟ್ಟಿಕೊಟ್ಟ ಹುಡುಗನನ್ನು ಅಷ್ಟು ಬೇಗ ಮರೆಯಲು ಸಾಧ್ಯವೇ….? ನನ್ನ ಮನಸ್ಸಿನ್ನೂ ಅಷ್ಟು ಚಂಚಲವಾಗಿಲ್ಲ, ವಿಕಾರಗೊಂಡಿಲ್ಲ,’ ಹೀಗೆ ಏನೇನೋ ಯೋಚನೆಗಳು ಡಾ. ಅಕ್ಷತಾಳ ಮನದಲ್ಲಿ.

ಆ ರಾತ್ರಿ ಅಕ್ಷತಾ ಹಾಸಿಗೆಗೆ ಮೈಯೊಡ್ಡಿದಾಗ ಆಗಷ್ಟೇ ಹತ್ತು ಗಂಟೆಯಾಗಿತ್ತು. ಮರುದಿನ ಭಾನುವಾರವಾಗಿದ್ದರಿಂದ ಪಾಠದ ತಯಾರಿ ಬೇರೆ ಇರಲಿಲ್ಲ. ಇಷ್ಟ ದೈವದ ಜೊತೆಗೆ ಚೇತನ್‌ ನನ್ನೂ ಸ್ಮರಿಸುತ್ತಾ ಕಣ್ಮುಚ್ಚಿಕೊಂಡು ಮಲಗಿದಳು. ಚೇತನ್‌ ಅಕ್ಷತಾಳ ಮನದಂಗಳದಲ್ಲಿ ನಡೆದಾಡುತ್ತಾ ಎದೆಯಂಗಳದಲ್ಲಿ ಕಚಗುಳಿ ಇಡತೊಡಗಿದ.

`ರಾತ್ರಿ ಪ್ರಣಯದಾಟಕ್ಕೆ ಕಾಡಿಸುವ ಈ ತರಲೆ ಹುಡುಗನಿಲ್ಲವಲ್ಲ…. ಆರಾಮವಾಗಿ ನಿದ್ದೆ ಮಾಡು ಬೇಬಿ…..’ ಎಂದಂತಾಯಿತು. ಅಕ್ಷತಾ ಥಟ್ಟನೇ ಕಣ್ತೆರೆದು ಹಾಸಿಗೆಯ ಮಗ್ಗುಲಿಗೆ ಕಣ್ಣಾಡಿಸಿ ಚೇತನ್‌ ಗೆ ಹುಡುಕಾಟ ನಡೆಸಿದಳು. ಅಲ್ಲಿ ಅವನಿದ್ದರೆ ತಾನೇ….?

`ಎಲ್ಲ ನನ್ನ ಭ್ರಮೆ. ತುಂಟ, ತರಲೆ ಹುಡುಗ, ತಾನು ಭೌತಿಕವಾಗಿ ನನ್ನೊಂದಿಗೆ ಇರದಿದ್ದರೂ ನನ್ನನ್ನು ಕಾಡಿಸುವುದು ಬಿಟ್ಟಿಲ್ಲ ಭೂಪ! ಆದರೆ ಅವನ ತುಂಟಾಟ, ಛೇಡಿಸುವಿಕೆ, ಗೋಳು ಹೊಯ್ದುಕೊಳ್ಳುವಿಕೆಯಲ್ಲಿ ಎಷ್ಟೊಂದು ಮುದವಿತ್ತಲ್ಲ…..? ಅವನು ನನ್ನನ್ನು ಸದಾ ಕಾಡಿಸುತ್ತಲೇ ಇರಬೇಕಿತ್ತು ಎಂದು ನನ್ನ ಮನಸ್ಸು ಬಯಸುತ್ತಿದೆಯಲ್ಲವೇ….? ಹಂಬಲಿಸಿ ಬಸವಳಿಯುತ್ತಿದೆಯಲ್ಲವೇ…..?  ಗೆಳೆಯಾ, ನಿನ್ನ ಸ್ನೇಹದ ಒಡಲು ಜೇನ್ಮಳೆಯ ಹನಿಯ ಮಡಿಲು,’ ಎಂದಂದುಕೊಂಡಳು ಅಕ್ಷತಾ ಮನದೊಳಗೆ. ಅವಳ ಅಂತರಂಗದ ಮಾತನ್ನು ಕೇಳಿಸಿಕೊಂಡವನಂತೆ ಚೇತನ್‌, `ಗೆಳತೀ, ಮೆಲುನಗೆಯ ನಕ್ಕು ಮೆಲುವಾಗಿ ನನ್ನೆದೆಯ ಕಣಿವೆ ಹೊಕ್ಕವಳು ನೀನು. ಸುವ್ವಾಲಿ ಹಾಡಿ ಹೃದಯದ ಕಾಟದೊಳಗೆ ಸುಳಿದವಳು ನೀನು,’ ಎಂದು ಅವಳೆದೆಯ ಕಣಿವೆಯೊಳಗೆ ಮುಖವಿಟ್ಟು ಉಲಿದಂತಾಯಿತು. ಅವನ ಚೆಲುವಿನ ಮುಖ ಸದಾ ತನ್ನೆದೆಯ ಮೇಲೆ ಪವಡಿಸಿರಬೇಕೆಂದು ಅಕ್ಷತಾಳ ಮನಸ್ಸು ಹಪಹಪಿಸುತ್ತಿತ್ತು. ಮ್ಲಾನವದನೆಯಾದಳು. ಕಣ್ಣೀರು ಬಳಬಳನೇ ಇಳಿದು ಕೆನ್ನೆ, ಕುತ್ತಿಗೆಯನ್ನು ತಂಪು ಮಾಡಿದವು.

`ಅಕ್ಷೂ, ಈಗಲೂ ಇಷ್ಟೊಂದು ಭಾವುಕಳಾದರೆ ಹೇಗೆ…..? ನಾನೇನು ನಿನ್ನನ್ನು ನಡುದಾರಿಯಲ್ಲಿ ಬಿಟ್ಟು ಹೋಗಿಲ್ಲವಲ್ಲ….? ತುಂಬು ಜೀವನ ಅನುಭವಿಸಿದ್ದೇವೆ. ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತುಕೊಂಡಿದ್ದಾರೆ. ನಾನು ಭೌತಿಕವಾಗಿ ನಿನ್ನ ಜೊತೆಗೆ ಇರದಿದ್ದರೂ ಮಾನಸಿಕವಾಗಿ ನಿನ್ನೊಂದಿಗೇ ಇರುವೆನಲ್ಲ….! ಈ ವಯಸ್ಸಿನಲ್ಲಿ ಕಣ್ಣೀರು ಹಾಕುವುದು ನನಗೇಕೋ ಸರಿ ಕಾಣುವುದಿಲ್ಲ. ನನ್ನ ಭೂಮಿಯ ಋಣ ಮುಗಿದಿತ್ತು. ಕಣ್ಮರೆಯಾದೆ ಅಷ್ಟೇ. ಆದರೆ ಈಗಲೂ ನಾನು ನಿನ್ನೆದೆಯೊಳಗೆ ಚಿಲಿಪಿಲಿಗುಡುತ್ತಿಲ್ಲವೇ….? ಆರೋಗ್ಯದ ಬಗ್ಗೆ ಕಾಳಜಿ ಇರಲಿ ಪುಟ್ಟಾ….’ ಎಂದೆನ್ನುತ್ತಾ ಚೇತನ್‌ ತನ್ನ ಕಣ್ಣೀರು ತೊಡೆಯಲು ಮುಂದಾದ ಎಂದೆನಿಸಿತು ಅಕ್ಷತಾಳಿಗೆ.

`ಇಷ್ಟೆಲ್ಲಾ ಹಿತವಚನ ನೀಡುವವನು ನನ್ನೆದುರಿಗೇ ನಿಂತುಕೊಂಡು ಹೇಳಬಾರದೇಕೆ….? ಮಾತು ಮಾತಿಗೆ ಭೂಮಿ ಋಣ ಮುಗಿಯಿತು ಎಂದು ಹೇಳುವವನು ತನ್ನ ಜೊತೆಗೆ ನನ್ನನ್ನೂ ಕರೆದುಕೊಂಡು ಹೋಗಿದ್ದರಾಗುತ್ತಿತ್ತಲ್ಲ….? ಅಂದು ಕಾರು ಅಪಘಾತಕ್ಕೆ ಒಳಗಾದಾಗ ನಾನು ನಿನ್ನ ಮಗ್ಗುಲ್ಲಲ್ಲೇ ಇದ್ದೆನಲ್ಲ…..! ನನ್ನೊಬ್ಬಳನ್ನೇ ಬಿಟ್ಟು ನೀನು ಅವಸರವಸರವಾಗಿ ದೂರ, ಬಹುದೂರ, ಮರಳಿ ಬಾರದ ಲೋಕಕ್ಕೆ ಹೊರಟು ಹೋದೆಯಲ್ಲ, ನಿನಗೆ ಮನಸ್ಸಾದರೂ ಹೇಗೆ ಬಂತು….?’

`ಅದು ನನ್ನ ಕೈಯಲ್ಲಿ ಇತ್ತೇ…..? ನನಗಾದರೂ ನಿನ್ನನ್ನು ಬಿಟ್ಟು ಹೋಗಲು ಮನಸ್ಸಿತ್ತೇ…. ಇಲ್ಲವಲ್ಲ….? ಎಲ್ಲ ಕಾಲನ ಕೈಚಳಕ ಅಷ್ಟೇ. ಅಂದರೆ ನಿನ್ನ ಭೂಮಿ ಋಣ ಮುಗಿದಿಲ್ಲ ಅಂತ. ನಿನ್ನ ಕರ್ತವ್ಯಗಳೆಲ್ಲವನ್ನೂ ಮುಗಿಸಿಕೊಂಡು ಬಾ. ಮತ್ತೆ ಭೇಟಿಯಾಗೋಣ. ಸೀ ಯು,’ ಮತ್ತೆ ಚೇತನ್‌ ಅಕ್ಷತಾಳಿಗೆ ಮಾತಿಗೆ ಸಿಗಲಿಲ್ಲ.

ನಿದ್ರಾದೇವಿಯ ದಾರಿಯಲ್ಲಿ ನೆನಪುಗಳು ಅಡ್ಡವಾಗಿ ಕುಳಿತುಕೊಂಡಿದ್ದರಿಂದ ಆ ರಾತ್ರಿ ಅಕ್ಷತಾಳಿಗೆ ನಿದ್ರಾದೇವಿ ಬಹಳ ಹೊತ್ತಿನವರೆಗೆ ಭೇಟಿಯಾಗಲಿಲ್ಲ.

`ಪದೋನ್ನತಿಯನ್ನು ಒಪ್ಪಿಕೊಂಡು ಮೈಸೂರಿಗೆ ಹೋಗುವುದೋ, ಬಿಡುವುದೋ….?’ ಎಂಬ ಗೊಂದಲ ಅವಳ ಮನದಲ್ಲಿ ಸುತ್ತಾಡತೊಡಗಿತ್ತು. ಅದೇ ಗೊಂದಲದಲ್ಲೇ ಯಾವಾಗಲೋ ನಿದ್ರಾದೇವಿಗೆ ಶರಣಾಗಿದ್ದಳು.

ಒಂದು ಹೊತ್ತಿನಲ್ಲಿ ಅಕ್ಷತಾ ದಿಗ್ಗನೆ ಎದ್ದು ಕುಳಿತಳು. ಮೈ ಥರಗುಟ್ಟಿ ನಡಗುತ್ತಿತ್ತು. ಬೆವರು ಒತ್ತರಿಸಿಕಂಡು ಬರತೊಡಗಿತ್ತು. ಕಣ್ಣುಗಳನ್ನು ತಿಕ್ಕಿಕೊಳ್ಳುತ್ತಾ ಗೋಡೆ ಗಡಿಯಾರದ ಕಡೆಗೆ ನೋಡಿದಳು. ಬ್ರಾಹ್ಮಿ ಮುಹೂರ್ತದ ಸಮಯ ಮುಂಜಾನೆ ನಾಲ್ಕೂವರೆಯಾಗಿತ್ತು. `ಭಾಪರೇ! ಇಷ್ಟೊತ್ತು ನಾನು ಗಾಢ ನಿದ್ರೆಯಲ್ಲಿದ್ದೆ ಅಂದ ಹಾಗಾಯಿತು. ತಡೆರಹಿತ ನಿದ್ರೆ. ಹ್ಞಾಂ! ಈಗ ದಿಗ್ಗನೆದ್ದು ಕುಳಿತಿದ್ದುದು…! ಆ ಒಂದು ವಿಚಿತ್ರ ಕನಸಿನಿಂದ! ಕನಸಿನಲ್ಲಿ ನನ್ನ ಚೇತೂ ಬಂದಿದ್ದ,’ ಹೀಗೆ ಅಂದುಕೊಳ್ಳುವಷ್ಟರಲ್ಲಿ ಅಕ್ಷತಾಳ ಮನಸ್ಸು ಕನಸಿನ ನೆನಪುಗಳನ್ನು ಕೆದಕತೊಡಗಿತು.

`ನಿದ್ರಾದೇವಿ ನನ್ನನ್ನು ಆಲಂಗಿಸಿಕೊಳ್ಳದೇ ಇದ್ದುದರಿಂದ ಎದ್ದು ಕಿಟಕಿಯ ಹತ್ತಿರ ಹೋಗಿದ್ದೆ. ಕಿಟಕಿಯ ಪರದೆ ಸರಿಸಿ ಹೊರಗಡೆ ಇಣುಕಿದ್ದೆ. ಬೆಳ್ಳನೆಯ ಬೆಳದಿಂಗಳು ಎಲ್ಲೆಡೆ ಶುಭ್ರ ಹಾಲಿನಂತೆ ಪಸರಿಸಿತ್ತು. ಮೈಮರೆತು ಬೆಳದಿಂಗಳ ಸೊಬಗಿನ ಚೆಲುವನ್ನು ಭಾವುಕಳಾಗಿ ಸವಿಯತೊಡಗಿದ್ದೆ. ಅಷ್ಟರಲ್ಲಿ ನನ್ನ ನಡು ಬಳಸಿದ ಅನುಭವ. ಚೇತೂನ ಕೈಗಳ ಶೀತಲ ಸ್ಪರ್ಶ ಪುಳಕಿತಗೊಳಿಸಿತು. ಅವನನ್ನು ನನ್ನ ಬಾಹುಗಳಲ್ಲಿ ಬಂಧಿಸಬೇಕೆನ್ನುವಷ್ಟರಲ್ಲಿ ಅವನ ತುಟಿಗಳು ಕುತ್ತಿಗೆ ಕೆಳಗಿನ ನನ್ನ ತೆರೆದ ಬೆನ್ನಿನಲ್ಲಿ ಮುದ್ರೆ ಒತ್ತತೊಡಗಿದ್ದ. ಅವನ ತುಟಿಗಳು ನನ್ನ ದೇಹದ ಆ ಭಾಗದಲ್ಲಿ ತುಂಟಾಟ ಆಡುವುದು ನನಗೆ ತುಂಬಾ ಇಷ್ಟ. ಬೆಳದಿಂಗಳ ಸೊಬಗಿನ ಜೊತೆಗೆ ಅವನ ತುಟಿಗಳ ತುಂಟಾಟಕ್ಕೆ ನಾನು ಉನ್ಮತ್ತಳಾದೆ.

`ಅನೆಡೆಗೆ ತಿರುಗಿ ಅವನ ನಡು ಬಳಸಿ ಮಂಚಕ್ಕೆ ಕರೆದುಕೊಂಡು ಬಂದೆ. ಅವನ ಬೆತ್ತಲೆ ಕೂದಲೆದೆಯಲ್ಲಿ ಮುಖವಿಟ್ಟು ಸಂಭ್ರಮಿಸಿದೆ. ತೃಪ್ತಿಯಾಗಲಿಲ್ಲವೇನೋ? ಮಿಲನೋತ್ಸವದ ಪರಮಾನಂದವನ್ನು ಅನುಭವಿಸುವ ತವಕ, ತುಡಿತ ಹೆಚ್ಚಾಗಿತ್ತೇನೋ ಆಸೆಬುರುಕ ಮನಕ್ಕೆ. ಚೇತೂನನ್ನು ಮೇಲೆಳೆದುಕೊಂಡೆ. ಮಳೆಗಾಲದಲ್ಲಿ ಭೋರ್ಗರೆಯುವ ನದಿಯಂತೆ ಚೇತೂ ನನ್ನನ್ನು ಅವರಿಸಿಕೊಂಡ. ನನ್ನ ಮೈಮನಗಳು ತಣಿದಿದ್ದವು. ಅಬ್ಬರಿಸುವ ವರ್ಷಧಾರೆಗೆ ಭೂದೇವಿ ಸಂತೃಪ್ತಳಾಗುವಂತೆ ನಾನೂ ಸಂತೃಪ್ತಿಯಿಂದ ಬೀಗಿದೆ, ಸಂಭ್ರಮಿಸಿದೆ. ನನ್ನೆದೆಯಲ್ಲಿ ಮುಖವಿಟ್ಟು ಚೇತೂ ಒಂದಿಷ್ಟು ಪಿಸುಗುಟ್ಟಿದ.

`ಅಕ್ಷೂ, ನೀನು ಮೈಸೂರಿಗೆ ಹೋಗುವುದಕ್ಕೆ ಅಷ್ಟೇಕೆ ಚಿಂತೆಗೊಳಗಾಗಿರುವಿ….? ಹೊಸ ಪರಿಸರದಲ್ಲಿ ನಿನ್ನಲ್ಲಿರುವ ಪ್ರತಿಭೆ, ಜ್ಞಾನ, ಕೌಶಲ್ಯವನ್ನು ಒರೆಗೆ ಹಚ್ಚಲು ಒಂದು ಸುವರ್ಣಾವಕಾಶ ಸಿಕ್ಕಿದೆ. ಬದಲಾವಣೆ ಜಗದ ನಿಯಮ. ಸಕಾರಾತ್ಮಕವಾಗಿ ಸ್ವೀಕರಿಸು. ಹಾಗೇ ಇನ್ನೊಂದು ವಿಷಯನ್ನೂ ಹೇಳುವೆ. ಸಿಟ್ಟಾಗಬೇಡ, ಬೇಸರಿಸಿಕೊಳ್ಳಬೇಡ. ಮೈಸೂರಿನಲ್ಲಿ ನಿನ್ನ ಮನದ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಯೋಗ್ಯ ವ್ಯಕ್ತಿ ಸಿಕ್ಕರೆ ಅವನನ್ನು ಸಂಗಾತಿಯನ್ನಾಗಿ ಮಾಡಿಕೊಂಡುಬಿಡು.

`ಪ್ರಸ್ತುತ ಕಾಲಘಟ್ಟದಲ್ಲಿ ಇದೊಂದು ತೀರಾ ಸಾಮಾನ್ಯ ವಿಷಯ. ಇಳಿವಯಸ್ಸಿನಲ್ಲಿ ಗಂಡಿಗೆ ಹೆಣ್ಣಿನ ಆಸರೆ ಬೇಕು, ಹೆಣ್ಣಿಗೆ ಗಂಡಿನ ಆಸರೆ ಬೇಕು. ಬಳ್ಳಿಗೆ ಮರ ಆಸರೆಯಾಗುವಂತೆ. ಇದೊಂದು ತಪ್ಪು ನಡೆ ಎಂದು ನೀನು ಭಾವಿಸಬೇಡ. ವೃದ್ಧಾಶ್ರಮ ಅದು, ಇದು ಸೇರಿಕೊಳ್ಳುವುದಕ್ಕಿಂತ ಉತ್ತಮ ಸಂಗಾತಿಯ ಜೊತೆಗಿರುವುದೇ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ. ಇದು ನನ್ನ ಕಳಕಳಿಯ ಮನವಿ ಅಂತ ತಿಳಿದುಕೋ, ಒಪ್ಪಿಗೆ ಅಂತ ತಿಳಿದುಕೋ. ಆದೇಶ ಅಂತಾನೂ ತಿಳಿದುಕೊಂಡರೆ ತಪ್ಪೇನಿಲ್ಲ. ಶುಭಸ್ಯ ಶೀಘ್ರಂ. ಬೈ,’ ಎಂದು ಹೇಳುತ್ತಿದ್ದಂತೆ ಚೇತನ್‌ ಕಣ್ಮರೆಯಾಗಿದ್ದ. ಅಕ್ಷತಾ ನೆನಪಿನ ಸುಳಿಯಿಂದ ಹೊರಗೆ ಬಂದಾಗ ಎಲ್ಲ ಖಾಲಿ ಖಾಲಿ ಎಂದೆನಿಸತೊಡಗಿತು.

`ನಾನು ಇನ್ನೊಬ್ಬ ವ್ಯಕ್ತಿಯನ್ನು ಹುಡುಕಿಕೊಳ್ಳಬೇಕಂತೆ. ಸಂಗಾತಿಯನ್ನಾಗಿಯೂ ಮಾಡಿಕೊಳ್ಳಬೇಕಂತೆ, ಅದು ಇವನ ಕಳಕಳಿಯ ಮನವಿ, ಒಪ್ಪಿಗೆ, ಆದೇಶ ಅಂತಾನೂ ತಿಳಿದುಕೊಳ್ಳಬೇಕಂತೆ. ಚೇತೂ ಹೇಳಿದ್ದು ಸರೀನಾ….? ಚೇತೂನ ನಾನು ಮರೆತು ಬಿಡೋದಾ….?’

`ನನ್ನನ್ನು ಮರೆತುಬಿಡು ಅಂತ ನಾನೆಲ್ಲಿ ಹೇಳಿದೆ….? ನಾನ್ಯಾವಾಗಲೂ ನಿಂಜೊತೆನೇ ಇರ್ತೀನಿ. ಡೋಂಟ್‌ ವರಿ. ಗೋ ಅಹೆಡ್‌….’ ಎಂದು ಮತ್ತೆ ಚೇತು ಹೇಳಿದಂತಾಯಿತು. ಸುತ್ತಲೂ ಹುಡುಕಿದೆ. ಅವನು ನನ್ನ ಕೈಗೆ ಸಿಗಬಲ್ಲನೇ….? ಕನಸಿನಲ್ಲಿ ಅಷ್ಟೊತ್ತು ಅವನೊಂದಿಗೆ ಸರಸವಾಡಿದ್ದನ್ನು ಜ್ಞಾಪಿಸಿಕೊಂಡು ನನ್ನೊಳಗೇ ನಾನು ನಾಚಿಕೊಂಡೆ. ಅವನೊಂದಿಗೆ ಒಂದಾಗಲು ನಾನು ತವಕಿಸಿದ್ದು ನನ್ನ ಮೈ, ಮನದೊಳಗೆ ದೈಹಿಕ ಕಾಮನೆಗಳು ಇನ್ನೂ ಜೀವಂತವಾಗಿ ಇರುವುದನ್ನು ತೋರಿಸುತ್ತಿದೆಯೇ….? ಛೇ… ಛೇ…. ಹಾಗೇನಿಲ್ಲ. ಏನೋ ಚೇತೂ ನನ್ನನೆಂದು ತುಸು ಅವಸರಿಸಿದೆ ಅಷ್ಟೇ. ಇರಲಿ, ಈಗೇಕೆ ಬೇರೆ ಸಂಗಾತಿಯ ಪ್ರಶ್ನೆ….? ಇಟ್ಸ್ ಟೂ ಅರ್ಲಿ ಟು ಥಿಂಕ್‌ ಅಬೌಟ್‌ ಕಂಪ್ಯಾನಿಯರ್‌.  ಮೈಸೂರಿಗೆ ಹೋಗಿ ಕರ್ತವ್ಯಕ್ಕೆ ಹಾಜರಾಗಲು ಚೇತೂ ಹಸಿರು ನಿಶಾನೆಯಂತೂ ತೋರಿಸಿದ. ಇದೊಂದು ಸಮಾಧಾನದ ಸಂಗತಿ. ಅಕ್ಷತಾ ಮನದೊಳಗೇ ಅಂದುಕೊಂಡಳಾದರೂ ಅವಳ ಮನಸ್ಸು ಗಲಿಬಿಲಿಗೊಂಡಿತ್ತು. ಗಡಿಯಾರದ ಕಡೆಗೆ ನೋಡಿದಳು. ಬೆಳಗಿನ ಐದು ಗಂಟೆ  ತೋರಿಸುತ್ತಿತ್ತು. ಇಷ್ಟ ದೇವರನ್ನು, ಚೇತನ್‌ ನನ್ನು ಸ್ಮರಿಸಿಕೊಳ್ಳುತ್ತಾ ಹಾಸಿಗೆಯಿಂದ ಎದ್ದುಬಿಟ್ಟಳು.

ಗಲಿಬಿಲಿಗೊಂಡಿದ್ದ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಅಕ್ಷತಾ ಧ್ಯಾನದ ಮೊರೆ ಹೋಗಲು ತೀರ್ಮಾನಿಸಿದಳು. ಧ್ಯಾನಕ್ಕಾಗಿಯೇ ಮೀಸಲಿಟ್ಟಿದ ಕೋಣೆಯ ಆ ಜಾಗದಲ್ಲಿ ಆಸನವನ್ನು ಹಾಕಿಕೊಂಡು ಧ್ಯಾನಕ್ಕೆ ಕುಳಿತುಕೊಂಡಳು. ಮನಸ್ಸನ್ನು ದೇಹದಿಂದ ಪ್ರತ್ಯೇಕಿಸಿ ಧ್ಯಾನದಲ್ಲಿ ಲೀನವಾಗಲು ಅಣಿಯಾಗುತ್ತಿದ್ದಂತೆ ಮುಷ್ಟಿಯಿಂದ ತಟ್ಟನೇ ಜಾರಿಬಿದ್ದ ಮುತ್ತುಗಳು ಎಲ್ಲೆಂದರಲ್ಲಿ ಚೆಲ್ಲಿ ಹೋಗುವಂತೆ ಅವಳ ಮನಸ್ಸು ಲಂಗು ಲಗಾಮಿಲ್ಲದೇ ಹೇಂಕರಿಸುವ ಕುದುರೆಯಾಗಿಬಿಟ್ಟಿತು. ಮನಸ್ಸು ಎತ್ತೆತ್ತಲೋ ಜಿಗಿಯತೊಡಗಿತು. ತುಸು ಹೊತ್ತು ಮನಸ್ಸು ಅವಳ ಮಾತನ್ನು ಕೇಳಲಿಲ್ಲವಾದರೂ ನಿಧಾನವಾಗಿ ಮನಸ್ಸನ್ನು ಹಿಡಿತಕ್ಕೆ ತೆಗೆದುಕೊಂಡಳು ಅಕ್ಷತಾ.

ಒಂದರ್ಧ ತಾಸು ಧ್ಯಾನದಲ್ಲಿ ಮುಳುಗಿಬಿಟ್ಟಳು. ಸಹಜ ಯೋಗ ಪ್ರತಿಷ್ಠಾನದ ಶ್ರೀಗುರುದತ್ತ ಗುರೂಜಿಯವರಿಂದ ಅವಳು ಧ್ಯಾನವನ್ನು ಕಲಿತಿದ್ದಳು.. ಪ್ರತಿನಿತ್ಯ ಬೆಳಗ್ಗೆ ಒಮ್ಮೆ ಅವಳು ಅರ್ಧ ತಾಸನ್ನು ಧ್ಯಾನಕ್ಕೆ ಮೀಸಲಿಟ್ಟಿದ್ದಳಾದರೂ ಮನಸ್ಸು ಗೊಂದಲದಲ್ಲಿ ಬಿದ್ದಾಗ ಮತ್ತೆ ಧ್ಯಾನಕ್ಕೆ ಮೊರೆ ಹೋಗುತ್ತಿದ್ದಳು. ಚೇತನ್‌ ಅಗಲಿದ ನಂತರ ಧ್ಯಾನ ಅವಳ ಬಾಳಲ್ಲಿ ಶಾಂತಿ, ನೆಮ್ಮದಿ ತರುತ್ತಿದೆ. ಧ್ಯಾನದಿಂದ ಹೊರಬಂದಾಗ ಮನಸ್ಸು ಪ್ರಪಲ್ಲವಾಗಿರುತ್ತಿತ್ತು.

ಪ್ರಾತಃವಿಧಿಗಳನ್ನು ಮುಗಿಸಿಕೊಂಡು ಚಹಕ್ಕಿಟ್ಚುಕೊಂಡಳು ಅಕ್ಷತಾ. ಒಲೆಯ ಮೇಲೆ ಚಹ ಕುದಿಯುವುದನ್ನೇ ಗಮನಿಸತೊಡಗಿದಾಗ ಅವಳ ಸ್ಮೃತಿ ತಟ್ಟನೇ ನೆನಪಿನ ಬಾನಂಗಳಕ್ಕೆ ನೆಗೆಯಿತು. ಹೀಗೆ ಚಹಾ ಕುದಿಸುತ್ತಾ ನಿಂತಿರುವಾಗ ಬಹಳಷ್ಟು ಸಾರಿ ಚೇತನ್‌ ಗಪ್ಪನೇ ಬಂದು ಹಿಂದಿನಿಂದ ನನ್ನ ನಡು ಬಳಸಿ ಕುತ್ತಿಗೆ ಕೆಳಗಿನ ಬೆನ್ನಿಗೆ ತುಟಿ ಒತ್ತಿ ಕಚಗುಳಿ ಇಡುತ್ತಿದ್ದ.

`ಹೆಣ್ಣು ಎಂದರೆ ಬೆತ್ತಲಾದ ಬದುಕಿಗೆ ಬೆಳಕೆಂಬ ಭರವಸೆಯ ಅಂಗಿಯನ್ನು ಹೊಲಿದು ತೊಡಿಸೋಳು,’ ಎಂದೆನ್ನುತ್ತಾ ಚೇತನ್‌ ನನ್ನ ಕಣ್ಣುಗಳಲ್ಲಿ ಹೊಳಪು ಮೂಡಿಸುತ್ತಿದ್ದ. ಇಷ್ಟೆಲ್ಲ ನೆನಪಿಗೆ ಬರುತ್ತಲೇ ಅಕ್ಷತಾಳ ಕಣ್ಣುಗಳು ಅವಳಿಗರಿವಿಲ್ಲದಂತೆ ತೇವಗೊಂಡವು.

`ಹೌದು ಮೈಸೂರಲ್ಲಿ ನನಗೆ ಪರಿಚಯದವರು ಯಾರಿದ್ದಾರೆ…? ಬಹುಶಃ ಯಾರೂ ಇಲ್ಲವೇನೋ…? ಅರೇ, ಯಾಕಿಲ್ಲ…..? ನನ್ನ ಎಂ.ಎ, ಪಿಎಚ್‌ಡಿ ಸಹಪಾಠಿ ವಿನಯ್‌ ಮೈಸೂರಿನಲ್ಲೇ ಸೆಟಲ್ ಆಗಿದ್ದಾನಲ್ಲ….? ಮೈಸೂರಿನ ಕಾಲೇಜೊಂದರಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದಾನೆ. ಅವನನ್ನು ವಿಚಾರಿಸಿದರೆ ನನಗೆ ಮೈಸೂರಿನಲ್ಲಿ ವಸತಿ, ಇನ್ನಿತರ ಸೌಕರ್ಯಗಳ ಬಗ್ಗೆ ವ್ಯವಸ್ಥೆ ಮಾಡಿಕೊಡಬಹುದು. ಅವನೊಂದಿಗೆ ಮಾತಾಡದೇ ಒಂದು ವರ್ಷದ ಮೇಲಾಗಿದೆ. ಏನಂದುಕೊಳ್ಳುವನೋ ಏನೋ…?’ ಎಂದು ಅನುಮಾನಿಸುತ್ತಲೇ ವಿನಯ್‌ ಗೆ ಫೋನಾಯಿಸಿದಳು ಅಕ್ಷತಾ. ವಿನಯ್‌ ಹೆಸರಿಗೆ ತಕ್ಕಂತೆ ವಿನಯವಂತನೇ. ಇಬ್ಬರದೂ ಕನ್ನಡದಲ್ಲಿ ಎಂ.ಎ ಆಗಿದ್ದರಿಂದ ಪಠ್ಯದ ಬಗ್ಗೆ ತುಂಬಾನೇ ಚರ್ಚೆ ಮಾಡುತ್ತಿದ್ದರು. ಧಾರವಾಡದ ವಿನಯ್‌ ಈಗ ಮೈಸೂರಿನಲ್ಲಿದ್ದಾನೆ.

“ಅರೇ ಅಕ್ಷತಾ, ಹೇಗಿರುವಿ….? ಚೇತನ್‌ ಹೇಗಿದ್ದಾರೆ….? ಈಗ ನೆನಪಿಗೆ ಬಂದನೇ ಈ ಬಡಪಾಯಿ….?” ಕರೆ ಸ್ವೀಕರಿಸುತ್ತಲೇ ಮಾತಿಗೆ ಮುಂದಾಗಿದ್ದ ವಿನಯ್‌.

“ಇಲ್ಲಿ ನಾವೆಲ್ಲರೂ ಚೆನ್ನಾಗಿದ್ದೇವೆ. ನೀವೆಲ್ಲ ಹೇಗಿದ್ದೀರಿ…? ನಿನ್ನ ಅರ್ಧಾಂಗಿ ಹೇಗಿರುವಳು….? ಈಗ ನೆನಪಿಗೆ ಬಂದನೇ ಈ ಬಡಪಾಯಿ ಎಂದು ಕೇಳುತ್ತಿರುವಿಯೆಲ್ಲಾ… ನೀನಾದರೂ ಅದೆಷ್ಟು ಸಲ ನನ್ನೊಂದಿಗೆ ಮಾತಾಡಿರುವಿ…. ? ಈಗ ನಾನು ಮಾತಾಡಿದ್ದಕ್ಕೆ ನೀನು ಮಾತಾಡುತ್ತಿರುವಿ ತಾನೇ….?” ಎಂದು ಕೇಳಿದರೂ ಚೇತನ್‌ ನ ಅಗಲಿಕೆಯ ಬಗ್ಗೆ ಹೇಳಲಿಲ್ಲ ಅಕ್ಷತಾ.

“ತಮಾಷೆಗೆ ಹೇಳಿದೆ ಅಕ್ಷತಾ…. ನಾವು ಇಲ್ಲಿ ಚೆನ್ನಾಗಿದ್ದೇವೆ. ಮತ್ತೇನು ವಿಶೇಷ….?”

ಅಕ್ಷತಾ ತನಗೆ ಮೈಸೂರಿಗೆ ವರ್ಗಾವಣೆ ಆಗಿರುವುದನ್ನು ತಿಳಿಸುತ್ತಾ ಬರುವ ಸೋಮಾರ ತಾನಲ್ಲಿಗೆ ಬರುವುದಾಗಿ ತಿಳಿಸಿದಳು.

“ಹೌದಾ….? ಒಳ್ಳೆಯ ಸುದ್ದಿನೇ…. ಸದ್ಯಕ್ಕೆ ಒಂದು ಪುಟ್ಟ ಲಗೇಜ್‌ ನೊಂದಿಗೆ ಬಾ. ಇಲ್ಲಿ ಉಳಿದುಕೊಳ್ಳುವುದಕ್ಕೆ ನಾನು ಸೂಕ್ತ ವ್ಯವಸ್ಥೆ ಮಾಡುವೆ. ನೀನೂ ಚೇತನ್‌ ಜೊತೆಯಾಗಿ ಬರುವಿರಾ… ಅಥವಾ ನೀನೊಬ್ಬಳೇ ಬರುವಿಯಾ…?”

“ಸದ್ಯಕ್ಕೆ ನಾನೊಬ್ಬಳೇ ಬರುವೆ,” ಚುಟುಕಾಗಿ ಉತ್ತರಿಸಿದಳು ಅಕ್ಷತಾ.

“ಸರಿ ಬಾ….” ಎಂದು ಫೋನ್‌ ಇಟ್ಟ ವಿನಯ್‌.ಹೇಳಿದಂತೆ ಅಕ್ಷತಾ ಸೋಮವಾರ ಬೆಳಗ್ಗೆ ಏಳು ಗಂಟೆಗೆ ಮೈಸೂರಿನಲ್ಲಿದ್ದಳು. ವಿನಯ್‌ ಅವಳ ಆಗಮನದ ನಿರೀಕ್ಷೆಯಲ್ಲೇ ಇದ್ದ. ಅಕ್ಷತಾಳ ಕೈಯಲ್ಲಿದ್ದ ಸೂಟ್‌ ಕೇಸ್‌ ನ್ನು ತಾನು ತೆಗೆದುಕೊಂಡ. ಅವಳೆಷ್ಟೇ ಬೇಡವೆಂದರೂ, ಅವಳ ಕೊರಳಲ್ಲಿ ಮಾಂಗಲ್ಯಸರ ಕಾಣದಿದ್ದುದು ವಿನಯ್‌ ನ ಗಮನಕ್ಕೆ ಬಾರದಿರಲಿಲ್ಲ. ಥಟ್ಟಂತೆ ಕೇಳಿಯೂಬಿಟ್ಟ.

“ಎರಡು ವರ್ಷಗಳ ಹಿಂದೆ ಚೇತನ್‌, ನನ್ನನ್ನು ಒಂಟಿಯಾಗಿ ಮಾಡಿ ಹೋಗಿಬಿಟ್ಟ ವಿನಯ್‌…..” ಎಂದೆನ್ನುವಷ್ಟರಲ್ಲಿ ಭಾವುಕಳಾಗಿಬಿಟ್ಟಳು ಅಕ್ಷತಾ. ಕಣ್ಣೀರ ಧಾರೆ ಇಳಿಯತೊಡಗಿತು. ವಿನಯ್‌ ತನಗೆ ತಿಳಿದಂತೆ ಸಮಾಧಾನ ಮಾಡಿದ. ಅಷ್ಟರಲ್ಲಿ ಅವರು ಕಾರಿನ ನಿಲುಗಡೆ ಸ್ಥಳಕ್ಕೆ ಬಂದರು. ವಿನಯ್‌ ಮಾತನಾಡದೆ ಮನೆಯತ್ತ ಕಾರು ಓಡಿಸಿದ. ಮನೆಯ ವರಾಂಡದಲ್ಲಿ ಕಾರನ್ನು ನಿಲ್ಲಿಸುತ್ತಿದ್ದಂತೆ ಮನೆಯೊಳಗಿಂದ ಸುಂದರ ತರುಣಿಯೊಬ್ಬಳು ಓಡೋಡುತ್ತಾ ಬಂದು ಅಕ್ಷತಾಳ ಕಾಲಿಗೆ ನಮಸ್ಕರಿಸುತ್ತಾ, “ಬನ್ನಿ ಆಂಟಿ, ಹಾರ್ಟಿ ವೆಲ್ ‌ಕಂ ಟು ಮೈಸೂರು. ನಾನು ಸುಪ್ರೀತಾ, ಇವರ ಮಗಳು,” ಎಂದೆನ್ನುತ್ತಾ ವಿನಯ್‌ ನ ಕಡೆ ನೋಡಿದಳು.

“ಹೌದಾ….? ತುಂಬಾ ಖುಷಿಯಾಗುತ್ತಿದೆ ನಿನ್ನನ್ನು ಕಂಡು!” ಎನ್ನುತ್ತಾ ಅಕ್ಷತಾ ವಿನಯ್‌ ಮತ್ತು ಸುಪ್ರೀತಾರ ಜೊತೆಗೆ ಹೆಜ್ಜೆ ಹಾಕಿದಳು. ಅವಳ ಬ್ಯಾಗ್‌ ಈಗ ಸುಪ್ರೀತಾಳ ಕೈಯಲ್ಲಿತ್ತು. ಒಳಗೆ ಹೋಗುತ್ತಿದ್ದಂತೆ ಪುಟಾಣಿ ಮಕ್ಕಳಿಬ್ಬರು ಕಿಲಕಿಲ ನಗುತ್ತಾ ಬಂದರು. ಹೊಸಬಳನ್ನು ಎವೆ ಇಕ್ಕದೆ ನೋಡತೊಡಗಿದವು.

“ಇಬ್ಬರೂ ನನ್ನ ಮಕ್ಕಳು. ಇವನು ಪುಷ್ಕರ್‌, ಇವಳು ಪುಷ್ಕರಣಿ,” ಸುಪ್ರೀತಾ ಮಕ್ಕಳ ಬಗ್ಗೆ ಹೇಳಿದಳು.

ಅಷ್ಟೊತ್ತಿಗೆ ಅವಳ ದೃಷ್ಟಿ ಹಾಲಿನಲ್ಲಿ ಹೂವಿನ ಹಾರಗಳಿಂದ ಅಲಂಕೃತಗೊಂಡಿದ್ದ ಫೋಟೋದತ್ತ ಹರಿಯಿತು. ಅದರಲ್ಲಿದ್ದ ಉಲ್ಲೇಖ ಕಂಡು ಗಾಬರಿಯಾದಳು ಅಕ್ಷತಾ. ಮಧುರಾ ವಿನಯ್‌ ಎಂದಿತ್ತು.

“ವಿನಯ್‌, ಇದೇನಿದು…..?”

“ಹೌದು ಆಂಟಿ, ಈಗ್ಗೆ ಆರು ತಿಂಗಳ ಹಿಂದೆಯಷ್ಟೇ ಅಮ್ಮನಿಗೆ ಲೋ ಬಿಪಿಯಾಗಿ ಕೈಲಾಸವಾಸಿಯಾಗಿ ಬಿಟ್ಟರು,” ಎನ್ನುತ್ತಾ ತಂದೆ ಮಗಳಿಬ್ಬರ ಕಣ್ಣುಗಳು ತೇವಗೊಂಡವು.

ಅಕ್ಷತಾ ಸುಪ್ರೀತಾಳನ್ನು ತೆಕ್ಕೆಗೆ ಹಾಕಿಕೊಂಡಳು. ಜೊತೆಗೆ ವಿನಯ್‌ ನನ್ನೂ.

“ಸುಪ್ರೀತಾ, ಅಕ್ಷತಾ ಕೂಡ ನನ್ನಂತೆ ಏಕಾಂಗಿಯೇ. ಈಕೆಯ ಗಂಡ ಇವಳನ್ನಗಲಿ ಎರಡು ವರ್ಷಗಳಾದವಂತೆ,” ಎಂದ ವಿನಯ್‌ ಅಷ್ಟು ಹೊತ್ತಿಗೆ ಸುಂದರ ತರುಣನೊಬ್ಬ ಒಳಬಂದ.

“ಆಂಟಿ, ಇವರು ನನ್ನ ಗಂಡ ಸನಂದನ್‌,” ಎಂದು ಪರಿಚಯಿಸಿದಳು ಸುಪ್ರೀತಾ. ನಮಸ್ಕಾರಗಳು ವಿನಿಮಯವಾದವು.

“ಅಮ್ಮ ಹೋದ ಮೇಲೆ ನಾವಿಬ್ಬರೂ ಅಪ್ಪಾಜಿಯ ಜೊತೆಗೇ ಇದ್ದೇವೆ. ಹೇಗೂ ನಮಗೆ ವರ್ಕ್‌ ಫ್ರಂ ಹೋಮ್ ಇದೆಯಲ್ಲ….. ಆಂಟಿ, ಸದ್ಯಕ್ಕೆ ಮನೆ ಸಿಗುವವರೆಗೆ ನೀವು ನಮ್ಮೊಂದಿಗೆ ಇರಿ,” ಎಂದೆನ್ನುತ್ತಾ ಸುಪ್ರೀತಾ ಸೂಟ್‌ ಕೇಸ್‌ ನ್ನು ತೆಗೆದುಕೊಂಡು ಅಕ್ಷತಾಳನ್ನು ಗೆಸ್ಟ್ ರೂಮಿಗೆ ಕರೆದುಕೊಂಡು ಹೋದಳು.

ಅಕ್ಷತಾ ಕರ್ತವ್ಯಕ್ಕೆ ಹಾಜರಾದಳು. ಒಂದು ವಾರವಾದರೂ ಅವಳಿಗಾಗಿ ಮನೆ ಹುಡುಕಲು ಯಾರೂ ಪ್ರಯತ್ನಿಸಲಿಲ್ಲ. ಪುಷ್ಕರ್‌, ಪುಷ್ಕರಣಿಯ ಆಟಪಾಠಗಳು ಅಕ್ಷತಾಳಿಗೆ ಖುಷಿ ನೀಡತೊಡಗಿದ್ದವು. ಕಾಲೇಜಿನ ಕರ್ತವ್ಯ ಮುಗಿಯುತ್ತಲೇ ಅಕ್ಷತಾ ಮಕ್ಕಳ ಜೊತೆಗೆ ಮಗುವಾಗಿಬಿಡುತ್ತಿದ್ದಳು.

“ಆಂಟಿ ನೀವು ಇಲ್ಲೇ ಇದ್ದುಬಿಡಿ. ಮನೆ ಹುಡುಕುವುದೇ ಬೇಡ,” ಎಂದು ಸುಪ್ರೀತಾ ಒಂದೇ ಸಮ ದುಂಬಾಲು ಬಿದ್ದಳು. ವಿನಯ್‌, ಸನಂದನ್‌ ಸುಪ್ರೀತಾಳ ಮಾತನ್ನೇ ಪುಷ್ಟೀಕರಿಸುತ್ತಿದ್ದರು. ಮನೆಯವರೆಲ್ಲರ ಆದರಾತಿಥ್ಯ ಅವಳನ್ನು ಕಟ್ಟಿಹಾಕಿತ್ತು.

ಅಕ್ಷತಾ ಮೈಸೂರಿಗೆ ಬಂದು ಹತ್ತು ದಿನಗಳು ಹತ್ತು ಕ್ಷಣಗಳಂತೆ ಸರಿದು ಹೋಗಿದ್ದವು. ಅಂದು ಶನಿವಾರ, ಸಾಯಂಕಾಲ ಅಕ್ಷತಾ ಕಾಲೇಜಿನಿಂದ ಬಂದಾಗ ಮನೆಯಲ್ಲಿ ವಿನಯ್‌ ಮತ್ತು ಸನಂದನ್‌ ಅವರ ಸುಳಿವಿರಲಿಲ್ಲ. ಫ್ರೆಶ್‌ ಅಪ್‌ ಆಗಿ ಬಂದ ಅಕ್ಷತಾಳಿಗೆ ಸುಪ್ರೀತಾ ಕುರುಕಲು ತಿಂಡಿಯ ಜೊತೆಗೆ ಕಾಫಿ ಕೊಟ್ಟಳು.

“ಆಂಟಿ, ನಿಮ್ಮ ಮುಂದೆ ನಾನು ತೀರಾ ಚಿಕ್ಕವಳು. ನನ್ನದೊಂದೆರಡು ಮಾತುಗಳಿವೆ. ನನ್ನ ಮಾತುಗಳಲ್ಲಿ ತಪ್ಪಿದ್ದರೆ ಕ್ಷಮಿಸಿಬಿಡಿರಿ. ದಯವಿಟ್ಟು ಬೇಸರಿಸಿಕೊಳ್ಳಬೇಡಿರಿ ಮತ್ತೆ ಸಿಟ್ಟೂ ಆಗಬೇಡಿರಿ. ನಮ್ಮದೇನಿದ್ದರೂ ಇಲ್ಲಿನ ವಾಸ್ತವ್ಯ ಟೆಂಪರರಿ. ವರ್ಕ್‌ ಫ್ರಮ್ ಹೋಮ್ ಮುಗಿಯುತ್ತಲೇ ನಾನು, ಸನಂದನ್‌ ಬೆಂಗಳೂರಿಗೆ ಹೋಗಬೇಕು. ಅಂಟಿ, ನೀವೂ ಒಂಟಿಯಾಗಿದ್ದೀರಿ. ಅಪ್ಪಾಜಿಯೂ ಒಂಟಿಯಾಗಿದ್ದಾರೆ. ಅದಕ್ಕೆ ನೀವಿಬ್ಬರೇಕೆ ಜೊತೆಯಾಗಿ ಸಂಗಾತಿಗಳಾಗಬಾರದೇಕೆ….?” ಎಂದಳು ತಡರಿಸುತ್ತಾ.

ಸುಪ್ರೀತಾಳ ಮಾತುಗಳು ಅಕ್ಷತಾಳ ಎದೆಯಲ್ಲಿ ಬಾಂಬ್‌ ನಂತೆ ಸ್ಛೋಟಿಸಿದವು. ಮಾತಿಲ್ಲದೇ ತನ್ನ ಕೋಣೆ ಸೇರಿಕೊಂಡಳು. ರಾತ್ರಿ ಊಟದ ಸಮಯದಲ್ಲಿ ಯಾರ ಮುಖದಲ್ಲೂ ನಗುವಿರಲಿಲ್ಲ. ಮೌನದಲ್ಲೇ ಊಟ ಮುಗಿಸಿ ತಮ್ಮ ತಮ್ಮ ಕೋಣೆ ಸೇರಿಕೊಂಡಿದ್ದರು. ಅಕ್ಷತಾಳ ಮನಸ್ಸು ತಾಕಲಾಟದಲ್ಲಿ ಮುಳುಗೇಳತೊಡಗಿತ್ತು.

ಆ ರಾತ್ರಿ ಚೇತನ್‌ ಅಕ್ಷತಾಳ ಕನಸಲ್ಲಿ ಬಂದು, `ಅಕ್ಷೂ, ಸುಪ್ರೀತಾ ಹೇಳಿದ್ದರಲ್ಲಿ ತಪ್ಪೇನಿದೆ? ಆ ಮಗುವಿನ ಬೇಡಿಕೆ ಯೋಗ್ಯವಾಗಿದೆ. ನಮ್ಮ ಮಕ್ಕಳ ವಿಚಿತ್ರ ನಡೆಯಿಂದ ನಿನ್ನ ಮನಸ್ಸು ಘಾಸಿಗೊಂಡಿದೆ ಎಂಬುದನ್ನು ನಾನು ಬಲ್ಲೆ. ಅದೂ ಅಲ್ಲದೇ ಒಂದು ಕಾಲದಲ್ಲಿ ವಿನಯ್‌ ನಿನ್ನನ್ನು ಪ್ರೀತಿಸುತ್ತಿದ್ದರು ಎಂದು ನೀನು ಹೇಳಿದ್ದು ನನಗೆ ನೆನಪಿದೆ. ಅವರ ಪ್ರೀತಿ ಏಕಮುಖವಾಗಿತ್ತು. ನಮ್ಮಿಬ್ಬರ ಪ್ರೀತಿ ಪಕ್ವವಾಗಿ ಪಕ್ಕಾ ಆದಾಗಷ್ಟೇ ಅವರ ಪ್ರೀತಿ ಬಹಿರಂಗಗೊಂಡಿತ್ತು. ವಿನಯ್‌ ಅಷ್ಟಕ್ಕೇ ಹಿಂದಕ್ಕೆ ಸರಿದುಬಿಟ್ಟರು. ಈಗ ಅವರ ಮನದಭಿಲಾಷೆಯನ್ನು ಈಡೇರಿಸುವ ಸದವಕಾಶ ತಾನಾಗಿಯೇ ಕೂಡಿಬಂದಿದೆ. ಅವರ ಆಸೆಗೆ ತಣ್ಣೀರೆರಚಬೇಡ. ಮೇಲಾಗಿ ಬರೀ ದೈಹಿಕ ಕಾಮನೆಗಳನ್ನು ಈಡೇರಿಸಿಕೊಳ್ಳಲು ಸಂಗಾತಿ ಎಂದು ನಾನು ಹೇಳುವುದಿಲ್ಲ.

`ಈ ವಯಸ್ಸಿನಲ್ಲಿ ದೈಹಿಕ ತೃಷೆಗಾಗಿ ಮೈಮನಸ್ಸುಗಳು ಹಂಬಲಿಸುವುದು ಕಡಿಮೆಯೇ. ಪರಸ್ಪರ ಸುಖದುಃಖ ಹಂಚಿಕೊಳ್ಳಲು, ಒಂದು ಆಪ್ತ ಆತ್ಮೀಯ ಬಿಗಿದಪ್ಪುಗೆಗಾಗಿ, ಸಿಹಿ ಚುಂಬನಗಳಿಗಾಗಿ ಸಂಗಾತಿ ಬೇಕೆನಿಸುತ್ತದೆ. ಸಂಗಾತಿ ಜೊತೆಗಿದ್ದರೆ ಇಳಿ ವಯಸ್ಸಿನಲ್ಲೂ ಜೀವನೋತ್ಸಾಹ ಪುಟಿದೇಳುತ್ತದೆ. ಸುಪ್ರೀತಾ ಮತ್ತು ಅವಳ ಗಂಡ ವರ್ಕ್‌ ಫ್ರಂ ಹೋಮ್ ಮುಗಿದ ತಕ್ಷಣ ಬೆಂಗಳೂರಿಗೆ ಹೋಗುವವರೇ. ಇಲ್ಲಿ ಇರುವುದು ಬೇಡವೆಂದು ನೀನು ನಿನ್ನದೊಂದು ಬಾಡಿಗೆ ಮನೆಯಲ್ಲಿ ಸೆಟಲ್ ಆದರೆ ನೀನಲ್ಲಿ, ವಿನಯ್‌ ಇಲ್ಲಿ ಅಷ್ಟೇ. ಇಷ್ಟು ದೊಡ್ಡ ಮನೆಯಲ್ಲಿ ಅವರು ಒಂಟಿಯಾಗುತ್ತಾರೆ. ಅಪರಾತ್ರಿಯಲ್ಲಿ ಆರೋಗ್ಯದಲ್ಲಿ ಏರುಪೇರಾದರೆ ನೋಡುವವರಾರು…..?

`ಆತ್ಮವಿಶ್ವಾಸ ಕಳೆದುಕೊಂಡ ಒಂಟಿ ಮಾನವನ ದೇಹ, ಮನಸ್ಸುಗಳಿಗೆ ಬೇಗನೇ ಮುಪ್ಪಡರುತ್ತದೆ. ಸಾಕಿನ್ನು ಒಂಟಿ ಬಾಳು ನಿನಗೆ. ಮುಂದಡಿ ಇಡು. ನೀನು, ವಿನಯ್‌ ಒಂದಾಗಿ ಬಿಡಿರಿ. ನನ್ನ ಶುಭ ಹಾರೈಕೆಗಳು. ನೀನಿವತ್ತು ನನ್ನ ಮನವಿಯನ್ನು ಸ್ವೀಕರಿಸಿ ಹ್ಞೂಂ ಎಂದು ಭಾಷೆ ಕೊಡುವವರೆಗೂ ನಾನಿಲ್ಲಿಂದ ಕದಲುವುದಿಲ್ಲ. ಹತ್ತು ನಿಮಿಷಗಳ ಅವಧಿಯಲ್ಲಿ ನಿನ್ನ ಸಕಾರಾತ್ಮಕ ನಿರ್ಧಾರವನ್ನು ಪ್ರಕಟಿಸಬೇಕು,’ ಎಂದು ಅಧಿಕಾರಯುತವಾಗಿ ಹೇಳಿದ ಚೇತನ್‌.

ಅಕ್ಷತಾ ಪೇಚಿಗೆ ಬಿದ್ದಳು. ಚೆನ್ನಾಗಿ ಯೋಚಿಸಿದಳು. ಚೇತನ್‌ ನ ಮಾತು ಸರಿ ಎನಿಸಿತು. ಕೊನೆಗೆ `ಹ್ಞೂಂ…’ ಎಂದಾಗ `ಅಭಿನಂದನೆಗಳು’ ಎಂದೆನ್ನುತ್ತಾ ಚೇತನ್‌ ಅಕ್ಷತಾಳನ್ನು ಬಿಗಿದಪ್ಪಿಕೊಂಡು ಅವಳ ಚೆಂದುಟಿಗಳಿಗೆ ಮುತ್ತಿಟ್ಟು ಅಲ್ಲಿಂದ ಮರೆಯಾಗಿದ್ದ. ಅಕ್ಷತಾ ನಿರಾಳವಾಗಿ ನಿದ್ರೆಗೆ ಜಾರಿದ್ದಳು.

ಮರದಿನ ಭಾನುವಾರ ಬೆಳಗಿನ ಸಮಯ. ಲ್ಯಾಪ್‌ ಟಾಪ್‌ ಮುಂದೆ ಕೂರುವ, ಕಾಲೇಜಿಗೆ ಹೋಗುವ ಧಾವಂತವಿರಲಿಲ್ಲ. ಸುಪ್ರೀತಾ ಅಕ್ಷತಾಳ ಕೋಣೆಗೆ ಬಂದಾಗ ಹಲ್ಲುಜ್ಜಿ ಕಾಫಿಗಾಗಿ ಹಾಲ್ ‌ಗೆ ಬಂದು ಕೂತಳು.

“ಆಂಟಿ, ನನ್ನ ಮಾತಿನಿಂದ ನಿಮಗೆ ತುಂಬಾ ಬೇಸರಾಗಿದೆ ಎಂದೆನಿಸುತ್ತಿದೆ. ನಿಮ್ಮ ಮನಸ್ಸಿಗೆ ನೋವುಂಟು ಮಾಡಿಬಿಟ್ಟೆ. ನಿಮ್ಮ ಮನದ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ. ಅದಕ್ಕೇ ನಿನ್ನೆಯಿಂದ ನೀವು ಮಾತೇ ಆಡಿಲ್ಲ. ತಿಳಿವಳಿಕೆ ಕಡಿಮೆ ನನಗೆ. ನಂದು ತಪ್ಪಾಗಿದೆ. ದಯವಿಟ್ಟು ಕ್ಷಮಿಸಿಬಿಡಿ,” ಎನ್ನುತ್ತಾ ಸುಪ್ರೀತಾ ಅಕ್ಷಾತಳ ಕಾಲ ಬಳಿ ಕುಸಿದು ಕುಳಿತಳು.

ಅಕ್ಷತಾ ಸುಪ್ರೀತಾಳನ್ನು ಮೇಲೆತ್ತಿ ತನ್ನ ತೆಕ್ಕೆಗೆ ಹಾಕಿಕೊಂಡು ರೇಶಿಮೆಯಂಥ ಅವಳ ತಲೆಗೂದಲಲ್ಲಿ ಬೆರಳಾಡಿಸುತ್ತಾ ಬೆನ್ನು ಸವರತೊಡಗಿದಳು.

“ಇಟ್ಟಿಗೆಗಳು ಮನೆ ಕಟ್ಟುತ್ತವೆ. ಮನ ಕಟ್ಟುವುದಿಲ್ಲವಂತೆ. ಆದರೆ ಸುಪ್ರೀತಾ, ನಿನ್ನ ಮಾತುಗಳು ಮನೆಯನ್ನು ಕಟ್ಟಿಬಿಟ್ಟವು. ನಿನ್ನ ಮನವಿಯನ್ನು ಒಪ್ಪಿಕೊಂಡಿದ್ದೇನೆ. ಸಂತೋಷಾನಾ…..?” ಎಂದಳು ಅಕ್ಷತಾ.

“ಆಂಟಿ, ಈ ಕ್ಷಣದಿಂದ ನೀವು ನನ್ನಮ್ಮ……” ಎಂದೆನ್ನುತ್ತಾ ಸುಪ್ರೀತಾ ಅಕ್ಷತಾಳನ್ನು ಬಿಗಿದಪ್ಪಿಕೊಂಡು ಕೆನ್ನೆಗೆ ಲೊಚಲೊಚನೇ ಮುದ್ದಿಟ್ಟು ಸಂಭ್ರಮಿಸಿ, “ಅಪ್ಪಾಜಿ…. ಸನಂದನ್‌….” ಎಂದು ಜೋರಾಗಿ ಕೂಗಿದಳು. ಅವರಿಬ್ಬರೂ ಓಡೋಡಿ ಬಂದಿದ್ದರು. ಸುಪ್ರೀತಾ ಈ ಮೊದಲೇ ಎಲ್ಲ ವಿಷಯವನ್ನು ತಂದೆಯೊಂದಿಗೆ ಪ್ರಸ್ತಾಪಿಸಿ ಅವರ ಮನದಿಂಗಿತ ತಿಳಿದುಕೊಂಡಿದ್ದಳು.

“ಅಪ್ಪಾಜಿ, ನಿಮ್ಮ ಕೈ ಇತ್ತ ಕೊಡಿ……” ಎನ್ನುತ್ತಾ ವಿನಯನ ಕೈಯನ್ನು ಅಕ್ಷತಾಳ ಕೈಯಲ್ಲಿ ಸೇರಿಸಿ,

“ಆಲ್ ದಿ ಬೆಸ್ಟ್!” ಎಂದಳು. ಅವಳ ಧ್ವನಿಗೆ ಸನಂದನ್‌ ಸಹ ದನಿಗೂಡಿಸಿದ. ಅಕ್ಷತಾ, ವಿನಯ್‌ ಇಬ್ಬರ ಮುಖಗಳಲ್ಲಿ ಸಂತಸ ಅರಳಿತ್ತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ