ವಾತ್ಸಲ್ಯ ಪ್ರೇಮವೆಂಬ ಮಾನವರ ಮಹಾನ್ಭಾವನೆಗೆ ಇಂಥದ್ದೇ ವ್ಯಾಖ್ಯಾನ ಎಂದು ಹೇಳಲು ಸಾಧ್ಯವಿಲ್ಲ. ಹಿಂದಿನ ಕಾಲದಿಂದಲೂ ಕವಿಗಳು ಬಗ್ಗೆ ವರ್ಣಿಸಿದ್ದೂ ವರ್ಣಿಸಿದ್ದೇ. ನಮ್ಮ ಆಧುನಿಕ ಪ್ರೇಮಿಗಳ ಪೀಕಾಟ ಯಾವ ನಿಟ್ಟಿನಲ್ಲಿದೆ ಎಂದು ಅರ್ಥ ಮಾಡಿಕೊಳ್ಳಲು ಯತ್ನಿಸೋಣವೇ…..?

“ಪ್ರೇಮದ ಬಣ್ಣ ನೂರಾರು…. ಅಲ್ಲಲ್ಲ…. ಸಾವಿರಾರು,  ಬಹುಶಃ ಕೋಟಿ ಇದ್ದರೂ ಇರಬಹುದು. ಅದಕ್ಕೇ ಇರಬೇಕು, ಅವಳು ಅಂದು ನನ್ನೆದೆಯ ಅಂಗಳದಲ್ಲಿ ಚೆಲ್ಲಿ ಹೋದ ಒಲವಿನ ಬಣ್ಣ ಯಾವುದೆಂದು ಗುರುತು ಹಿಡಿಯಲು ಸಾಧ್ಯವೇ ಆಗುತ್ತಿಲ್ಲ…..” ಫೈನಲ್ ಎಗ್ಸಾಮ್ ಗೆ ಓದುವುದನ್ನು ಬಿಟ್ಟು ಹೀಗೆ ಕಳೆದ ಮೂರ್ನಾಲ್ಕು ದಿನಗಳಿಂದ ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದ ನನ್ನ ಸ್ನೇಹಿತನೊಬ್ಬನ ತಲೆ ಬುಡವಿಲ್ಲದ ಮಾತುಗಳನ್ನು ಕೇಳಿ ಕೇಳಿ ನನಗೆ ಸಾಕಾಗಿ ಹೋಗಿತ್ತು. ಪ್ರೇಮ ಸಾಗರದಲ್ಲಿ ಮುಳುಗಿದ್ದ ಅವನು ಏನೇ ಕೇಳಿದರೂ ಎಲ್ಲದಕ್ಕೂ ಪೆದ್ದು ಪೆದ್ದಾಗಿ ಉತ್ತರ ಕೊಡುತ್ತಿದ್ದ. ಅವನ ಈ ಆಳವಾದ ಕಲ್ಪನೆಯ ಮಾತುಗಳಿಗೆ ಒಂದು ಕಡೆ ಸೋತು, ಮತ್ತೊಂದು ಕಡೆ ರೋಸಿ ಹೋಗಿ, “ಅಯ್ಯಾ ಪುಣ್ಯಾತ್ಮ…. ನೀನು ಮಾತಾಡುವ ಈ ಒಲವಿನ ಭಾಷೆ ನಮ್ಮಂಥ ಮೂರ್ಖರಿಗೆ ಅರ್ಥವಾಗದು. ನೀನು ಮೊದಲಿನ ಥರಾ ಆದರೆ ನಿನ್ನ ಕಿತ್ತು ಹೋದ ಈ ಕವಿತೆಗಳ ಚೀಟಿಯನ್ನು ಆಂಜನೇಯನ ಹುಂಡಿಯಲ್ಲಿ ಹಾಕಿ ಬರ್ತೀನಿ,” ಎಂದು ಅವನ ಕಾಲಿಗೆ ಬಿದ್ದಿದ್ದೆ.

ನನ್ನ ಮಾತಿಗೆ ಅವನು, “ಗುಜರಿ ಬಸ್ಸಿಗೇನು ಗೊತ್ತು ಮೆಟ್ರೋ ಸಾರಿಯ ಮೋಜು…. ಅಷ್ಟಕ್ಕೂ ಪ್ರೀತಿ ಎಂದರೇನು ಎಂದು ನಿನಗೆ ಗೊತ್ತೇನು…? ಪ್ರೇಮವೆಂದರೆ ಶರತ್ಕಾಲದಲ್ಲಿ ಭೂಮಿಯೆಡೆಗೆ ಜಾರುವ ಹೂಗಳು…. ಪ್ರೇಮ ನನ್ನ ಕಲ್ಪನಾ ಲೋಕದ ಬೆನ್ನೇರಿ ಬಂದ ಭೃಂಗದ ಸಂಗದಂತೆ…..” ಎಂದು ಇನ್ನೂ ಏನೋ ಹೇಳಲು ಹೊರಟಿದ್ದ. ಯಾವುದೋ ಯುರೋಪಿಯನ್‌ ಕವಿಯ ಪ್ರಭಾವಕ್ಕೆ ಸಿಲುಕಿದ ಅವನ ಈ ಕವಿತೆಯ ಗುಚ್ಛವನ್ನು ಅರ್ಧಕ್ಕೇ ತಡೆದು ನಾನು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದೆ.

ಅಂದಹಾಗೆ, ಪ್ರೇಮ ಪಾಶದಲ್ಲಿ ಸಿಲುಕುವ ಎಲ್ಲ ಪ್ರೇಮಿಗಳು ಹೀಗೇಕೆ ಬಲೆಗೆ ಸಿಕ್ಕ ಮೀನಿನಂತೆ ಒದ್ದಾಡುತ್ತಾರೆ ಎನ್ನುವುದು ಸೋಜಿಗದ ವಿಷಯ. ಮೊದ ಮೊದಲು ಈ ಪ್ರೇಮವೆಂಬ ಮೈದಾನದಲ್ಲಿ ಅಂಬೆಗಾಲು ಇಡುತ್ತಿರುವಾಗ, ತಮ್ಮ ಪ್ರಿಯಕರ/ ಪ್ರಿಯತಮೆಯರು ಎದುರಿಗೆ ಸಿಕ್ಕಾಗ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕೂ ಹೆದರಿ ಸಾಯುತ್ತಾರೆ. ಆದರೆ ನಂತರ ಅವರೇನಾದರೂ ಕಣ್ಣಿಗೆ ಕಾಣದಿದ್ದರೆ, “ಅಯ್ಯೋ ಇವತ್ತು ಯಾಕೆ ನನ್ನ ಕಣ್ಣಿಗೆ ಬಿದ್ದೇ ಇಲ್ಲವಲ್ಲ …. ಏನು ಮಾಡಲಿ ಈಗ?” ಎಂದು ಸೂರ್ಯ ಕಾಣದ ಸೂರ್ಯಕಾಂತಿಯಂತೆ ಚಡಪಡಿಸುತ್ತಾರೆ. ಇಂತಹ ಪೀಕಲಾಟವಾಡಿಸುವ ಈ ಪ್ರೇಮ ನಿಜಕ್ಕೂ ಕತ್ತಿಗಿಂತಲೂ ತೀಕ್ಷ್ಣ. ಈ ಪ್ರೇಮದ ಜಾಡು ಹಿಡಿದು ಹೋದರೆ ಅದರ ಮೂಲ ಸಿಗುವುದು ಸ್ವಲ್ಪ ಕಷ್ಟವೇ. ಈ ಒಲವು ಏಕೆ, ಎಲ್ಲಿ, ಹೇಗೆ ಮೂಡಿತು ಎಂಬ ಪ್ರಶ್ನೆಯನ್ನು ಪ್ರೇಮಿಗಳ ಮುಂದಿಟ್ಟರೆ ಮಹಾ ಸಂಶೋಧನೆಯನ್ನೇ ಮಂಡಿಸಿದರಂತೆ ವಿವರಿಸಲು ತೊಡಗುತ್ತಾರೆ. ಆದರೆ ಇದರ ಮೂಲ ವ್ಯಾಖ್ಯಾನ ಮಾಡಿ ಎಂದಾಗ ಪದಗಳೇ ಸಿಗದೇ ಮೌನಕ್ಕೆ ಜಾರುತ್ತಾರೆ. ಈ ಪ್ರೇಮವೆಂಬುದು ಒಂದು ಮಹಾನ್‌ ಕಲೆ, ಇದು ಎಲ್ಲರಿಗೂ ಒಲಿಯುವುದಿಲ್ಲ ಎಂದು ಕಲಾ ವಿಭಾಗ ಹೇಳಿದರೆ, ಈ ಪ್ರೀತಿ ಎಂದರೆ ಬೇರೆ ಏನೂ ಅಲ್ಲ, ಹಾರ್ಮೋನ್ಸ್ ಬದಲಾವಣೆಯಿಂದ. ಮೆದುಳಿನಲ್ಲಿ ಆಕ್ಸಿಟಾನ್‌ ಎಂಬ ರಾಸಾಯನಿಕ ಕ್ರಿಯೆ ಬಿಡುಗಡೆಯಾಗಿ ವಿರುದ್ಧ ಲಿಂಗಿಗಳು ಆಕರ್ಷಕ್ಕೆ ಒಳಗಾಗುತ್ತಾರೆ. ಅದೇ ಪ್ರೀತಿ ಎಂದು ವಿಜ್ಞಾನ ವಿಭಾಗ ತರ್ಕಬದ್ಧವಾಗಿ ಹೇಳುತ್ತದೆ. ಆಧ್ಯಾತ್ಮದಲ್ಲಿ ಪ್ರೇಮವೆಂದರೆ ಪರಬ್ರಹ್ಮ ಎಂದು ಉಲ್ಲೇಖಿಸಲಾಗಿದೆ.

“ಪ್ರೇಮವೇ….? ಅದೊಂದು ಥರಾ ಸೇಲ್ ‌ಇದ್ದಂಗೆ. ಇಬ್ಬರು ಪರಸ್ಪರ ಗಂಡು ಹೆಣ್ಣುಗಳು ತಮ್ಮ ಹೃದಯವನ್ನು ಸ್ಟಾಕ್‌ ಎಕ್ಸ್ ಚೇಂಜ್‌ ಮಾಡಿಕೊಂಡು ಬದುಕು ನಡೆಸುತ್ತಾರೆ. ಇವರ ಜೀವನಕ್ಕೆ ಪ್ರೀತಿಯೇ ಬಂಡವಾಳ,” ಎಂದು ವಾಣಿಜ್ಯ ವಿಭಾಗ ವ್ಯಾಖ್ಯಾನ ನೀಡುತ್ತದೆ. ಹೀಗೆ ಆಯಾ ಕೋರ್ಸ್‌ ಗಳಲ್ಲಿ ಪ್ರೇಮಕ್ಕೆ ಬೇರೆ ಬೇರೆ ವಿವರಣೆ ಇರುವುದರಿಂದ ಪ್ರೀತಿ ಎಂದರೆ ಹೀಗೇ ಎಂದು ಹೇಳುವುದು ಅಸಾಧ್ಯ.

ಸದ್ಯಕ್ಕೆ, ಪ್ರೇಮ ಎಂಬುದು ಸಾರ್ವಜನಿಕ ರೋಗವಾಗಿ ಹಬ್ಬಿದ್ದು ಕೊರೋನಾ ವೈರಸ್‌ ಗಿಂತಲೂ ವೇಗವಾಗಿ ಹಾಗೂ ಯಾವುದೇ ವಯಸ್ಸಿನ ಭೇದವಿಲ್ಲದೆ ಎಲ್ಲರಲ್ಲೂ ಹರಡುತ್ತಿದೆ. ಈ ಅಂಟು ರೋಗ ಉಂಟಾದಾಗ ಅದರ ಪ್ರಾಥಮಿಕ ಲಕ್ಷಣಗಳನ್ನು ಕಡೆಗಾಣಿಸುವಂತಿಲ್ಲ. ರಾತ್ರಿಯೆಲ್ಲಾ ನಿಶಾಚರಿಯಾಗುಳಿದು, ಕ್ಲಾಸಲ್ಲಿ ನಿದ್ದೆ ಮಾಡುವುದನ್ನು ಬಿಟ್ಟು ಹಗಲುಗನಸು ಕಾಣುವುದು. ಮೊಬೈಲ್ ‌ನೋಡುತ್ತಾ ನಗುವುದು, ಒಬ್ಬೊಬ್ಬರೇ ಮಾತಾಡುವುದು ಇವುಗಳು ಪ್ರೇಮ ಪೀಡಿತರ ಮೊದಲ ಹಂತದ ರೋಗ ಲಕ್ಷಣಗಳು. ಈ ರೀತಿ ಫ್ರೀಯಾಗಿ ಕನಸಿನ ವಿಹಾರದಲ್ಲಿ ತೇಲಾಡುವ ಪ್ರತೀ ಪ್ರೇಮ ಪುತ್ಥಳಿಗಳು ತಮ್ಮನ್ನು ರೋಮಿಯೋ ಜೂಲಿಯೆಟ್‌, ರಾಧಾ ಕೃಷ್ಣರಂಥ ಜೋಡಿಯೊಂದಿಗೆ ಹೋಲಿಸಿಕೊಂಡು ಸಂಭ್ರಮ ಪಡುತ್ತಾರೆ. ಕೊನೆಗೆ ಈ ಕೃಷ್ಣ ಬೇರೆಯವನ ರಾಧೆಯೊಂದಿಗೂ, ಆ ರಾಧೆ ಬೇರೆಯವಳ ಕೃಷ್ಣನೊಂದಿಗೂ ಮದುವೆ ಆಗುವುದರ ಮೂಲಕ ಇಬ್ಬರೂ ತಮ್ಮ ಅಮೂಲ್ಯ ಪ್ರೇಮಕ್ಕೆ ತಿಲಾಂಜಲಿ ನೀಡಿ,

ಪರಸ್ಪರರ ಮಾಜಿ ಪ್ರೇಮಿಗಳಾಗುತ್ತಾರೆ. ಇಂಥ ಪ್ರೇಮದ ವಿರಹ ಹುಲು ಮಾನವರನ್ನಷ್ಟೇ ಅಲ್ಲದೆ, ಘಟಾನುಘಟಿ ದೇವಾನುದೇವತೆಗಳನ್ನೂ ಬಿಟ್ಟಿಲ್ಲ ಎಂದರೆ ನೀವು ಖಂಡಿತವಾಗಿಯೂ ನಂಬುತ್ತೀರಿ. ಏಕೆಂದರೆ ರಾಮ ಸೀತೆ, ಚ್ಯವನ ಸುಕನ್ಯೆ, ಕಚ ದೇವಯಾನಿಯಂಥ ಪುರಾಣ, ಪುಣ್ಯ ಕಥೆಗಳನ್ನು ಈಗಾಗಲೇ ನೀವು ಕೇಳಿರುತ್ತೀರಿ ಹಾಗೂ ಪೌರಾಣಿಕ ಚಿತ್ರಗಳಲ್ಲಿ ನೋಡಿರುತ್ತೀರಿ. ಪುರಿ ಜಗನ್ನಾಥನ ಸನ್ನಿಧಾನದಲ್ಲಿ ಆಶ್ರಯ ಪಡೆದಿದ್ದ ಜಯದೇವನೆಂಬ ಸಂಸ್ಕೃತ ಕವಿ ಇಂಥದೇ ಪ್ರೇಮ ವಿರಹವನ್ನು ತನ್ನ ಕಾವ್ಯದಲ್ಲಿ ರಸವತ್ತಾಗಿ ವರ್ಣಿಸಿದ್ದಾನೆ.

“ಪ್ರಿಯೇ ಚಾರುಶೀಲೆ….ಸ್ಮರ ಗರಲ ಖಂಡನಮ್ ಮಮ ಶಿರಸಿ ಮಂಡನಂದೇಹಿ ಪದಪಲ್ಲಂ ಉದಾರಂ” ಜಯದೇವನ `ಗೀತ ಗೋವಿಂದ’ ಕಾವ್ಯದಲ್ಲಿ ಬರುವ ಈ ಸಾಲುಗಳು ಕೃಷ್ಣ ರಾಧೆಯರ ಬಗ್ಗೆ ಸಂಬಂಧಿಸಿದ್ದು. ರಾಧೆ ಕೃಷ್ಣನ ಮೇಲೆ ಸಿಟ್ಟಾಗಿ ಮುನಿಸಿಕೊಂಡಾಗ ಕೃಷ್ಣ ಅವಳನ್ನು ರಮಿಸುತ್ತಾ, “ನಿನ್ನ ಸುಕೋಮಲವಾದ ಪಾದಗಳನ್ನು ನನ್ನ ತಲೆಯ ಮೇಲಿಡು. ನಿನ್ನ ಪಾದಗಳೇ ನನ್ನ ಕಿರೀಟವಾಗಲಿ… ಪ್ರಿಯೆ ಚಾರುಶೀಲೆ,” ಎಂದು ಪರಿ ಪರಿಯಾಗಿ ಸಂತೈಸುತ್ತಾನೆ. ಈ ಕವಿಗಳೇ ಹೀಗೆ. ಕವಿಗಳು ಮೊದಲೇ ಅರ್ಧ ಹುಚ್ಚರು. ಅದರಲ್ಲೂ ಇಂಥ ಪ್ರೀತಿಗೀತಿ ಎಂಬ ಇನ್ನೊಂದು ಗೀ(ಗೋ)ಳನ್ನು ತಲೆಗೇರಿಸಿಕೊಂಡರೆ ಅವರ ಅಕ್ಕಪಕ್ಕದಲ್ಲಿ ಇದ್ದರ ಗತಿ ಏನಾಗಬೇಡ? ಅನೇಕ ಬಾರಿ ಈ ಪ್ರೇಮ ಪಕ್ಷಿಗಳು ತಾವು ಕೂಡ ಕವಿಯಾಗಿ ಏನೇನೋ ಸಾಲುಗಳನ್ನು ಗೀಚುತ್ತಾರೆ. ಗೀಚಿದರೆ ಅಷ್ಟೇ ಪರವಾಗಿಲ್ಲ. ಆದರೆ ನೋಡಿ…. ಈಗೆಲ್ಲಾ ವಾಟ್ಸ್ ಆ್ಯಪ್‌ ಇರುವುದರಿಂದ ದಿನಕ್ಕೆ ಮೂರು ಮೂರು ಬಾರಿ ಅದನ್ನೆಲ್ಲ ವಾಟ್ಸ್ ಆ್ಯಪ್‌ ಸ್ಟೇಟಸ್‌ ಗೆ ಹಾಕಿ ಎಲ್ಲರನ್ನೂ ಗೋಳು ಹೊಯ್ದುಕೊಳ್ಳುತ್ತಾರೆ. ಇತ್ತೀಚೆಗೆ ಭಗ್ನ ಪ್ರೇಮಿಯಾದ ನನ್ನ ಸ್ನೇಹಿತನೊಬ್ಬ ಫೇಸ್‌ ಬುಕ್‌, ವಾಟ್ಸ್ ಆ್ಯಪ್‌ ಅಷ್ಟೇ ಏಕೆ ಲಿಂಕ್ಡ್ ಇನ್‌ ಅಲ್ಲಿ ಕೂಡ ತನ್ನ ವಿರಹ ಗೀತೆಗಳನ್ನು ಪೋಸ್ಟ್ ಮಾಡಿದ್ದ! ಆತನ ಬರಹ ಓದಿದರೆ ನಗಬೇಕೋ ಅಥವಾ ಬಿದ್ದು ಬಿದ್ದೂ ನಗಬೇಕೋ ಎಂದು ತಿಳಿಯಲಿಲ್ಲ. ಅಷ್ಟಕ್ಕೂ, ಆತ ಬರೆದ ಸಾಲುಗಳು ಹೀಗಿದ್ದವು

“ಗೆಳತಿ…. ಮರಳಲ್ಲಿ ಬರೆದ ನಿನ್ನ ಹೆಸರು ಅಳಿದು ಹೋದ ಮೇಲೆ ನರಗಳಲ್ಲಿ ನಿನ್ನ ಹೆಸರು ಕೆತ್ತುವುದು ಚಟವಾಗಿದೆ.”

ಇನ್ನೊಂದು, “ಹುಡುಗಿ ನೀವು ಕೈ ಕೊಟ್ಟು ಹೋದ ಮೇಲೆ, ಮನಸು ಟ್ರಾಫಿಕ್‌ ಇಲ್ಲದ ಬೆಂಗಳೂರಿನ ರಸ್ತೆಯಂತೆ ಬರಡಾಗಿದೆ. ನಿನ್ನ ನೆನಪಲ್ಲಿ ಕೊರಗಿ ಕೊರಗಿ ಬಾರ್‌ ನ ಬಿಲ್ಲು ಭಾರವಾಗಿದೆ.”

ಹೀಗೆ ತಾಳ ಲಯ ಒಂದೂ ಇಲ್ಲದ ಈ ಥರದ ವೇದನೆ, ವಿರಹ, ದುಃಖಗಳನ್ನು ನೋಡಿದರೆ ನಿಜಕ್ಕೂ ಅಯ್ಯೋ ಎನಿಸುತ್ತದೆ ನಿಜ. ಆದರೆ ಅವನ ಈ ಬರಹದ ವಿರಹವನ್ನು ನಮ್ಮ ತಲೆಯಿಂದ ಕಿಡ್ನಿವರೆಗೂ ಸಾಗಿಸುವ ಈ ಪಾಗಲ್ ಪ್ರೇಮಿಗಳ ರೋದನೆಗೆ ನಾವೇಕೆ ಬಲಿಪಶುಗಳು ಇವೆಲ್ಲದರ ನಡುವೆ ಒಂದಂತೂ ನಿಜ. ಇತ್ತೀಚೆಗೆ ಬದಲಾದ ಸಾಮಾಜಿಕ ಕಟ್ಟುಪಾಡುಗಳು, ಸನ್ನಿವೇಶಗಳಿಂದ ಈಗೀಗ ಪ್ರೀತಿಯ ವಾಡಿಕೆಯೂ ಅನೇಕ ಬದಲಾವಣೆಯೊಂದಿಗೆ ಹೊಸ ರೂಪ ತಾಳಿದೆ. ಈಗಿನ ಪ್ರೇಮದ ಟರ್ಮ್ಸ್ ಅಂಡ್‌ ಕಂಡೀಶನ್ಸ್ ಪ್ರೀತಿ ಮಾಡುವವರಿಗೇ ಗೊತ್ತು. ಈ ಮೆಟ್ರೋ ಟ್ರೈನ್‌ ಗಳಲ್ಲಿ ಒದರುವ ರೆಕಾರ್ಡರ್‌ ಬಾರಿ ಬಾರಿ ಹೇಳಿದ್ದನ್ನೇ ಹೇಳುವಂತೆ ಹುಡುಗ/ಹುಡುಗಿ ಸದಾ ಪರಸ್ಪರರಿಗೆ `ಐ ಲವ್ ಯೂ’ ಎಂದು ಪದೇ ಪದೇ ಹೇಳುವುದು, ರಾತ್ರಿ 12 ಗಂಟೆಗೆ ಹುಟ್ಟಿದ ಹಬ್ಬಕ್ಕೆ ವಿಶ್‌ ಮಾಡುವುದು, ಮದುವೆ ಆದ ಒಂದು ತಿಂಗಳಿಗೆ ಕಡ್ಡಾಯವಾಗಿ, `ಒಂದು ತಿಂಗಳ ವಾರ್ಷಿಕೋತ್ಸವ'(?!)ನ್ನು ಆಚರಿಸುವುದು, ಫೇಸ್‌ ಬುಕ್‌ ನ ಬಯೋನಲ್ಲಿ ಸಿಂಗಲ್ ಬದಲಿಗೆ ಡಬ್‌….. ಅಲ್ಲಲ್ಲ…. ಎಂಗೇಜ್ಡ್ ಎಂದು ಹಾಕುವುದು ಹೀಗೆ…. ನೂರಾರು ಕರಾರುಗಳಿವೆ. ಹಿಂದೆಲ್ಲ ಪ್ರೇಮಿಗಳು ಜಾತಿ, ಮತ, ಒಳಜಾತಿ, ಗೋತ್ರ, ರಾಶಿಯಂಥ ಗೋಡೆ, ತಂತಿ ಬೇಲಿಗಳನ್ನು ಹಾರುತ್ತಿದ್ದರು. ಈಗ ತಾಯಿ ತಂದೆಯರು ಲವ್ ಮ್ಯಾರೇಜ್‌ ಗೆ ಒಪ್ಪಿಗೆ ಏನೋ ನೀಡುತ್ತಾರೆ. (ಎಷ್ಟೋ ಮನೆಗಳಲ್ಲಿ ಎಲ್ಲ ಹಿರಿಯರ ಮುಂದೆ ಇಂದಿಗೂ ಕೂಡ `ಲವ್’ ಎನ್ನುವ ಪದವನ್ನು ಗಟ್ಟಿಯಾಗಿ ಹೇಳುವಂತಿಲ್ಲ. ಹಾಗೆ ಹೇಳಿದರೆ ಏನೋ ಅಪರಾಧ ಮಾಡಿದ ರೀತಿ ಕಾಣುತ್ತಾರೆ). ಆದರೂ ಕೂಡ ಪ್ರೇಮಿಗಳು ತಮ್ಮ ತಮ್ಮಲ್ಲೇ ಇರುವ ಅನೇಕ ಕರಾರುಗಳ ಗೋಡೆಯನ್ನು ಹಾರಾಗದೇ ಮತ್ತೆ ಬೇರೆಯವರನ್ನು ಟ್ರೈ ಮಾಡಲು ಹಾಸ್ಟೆಲ್ ‌ಕಾಂಪೌಂಡ್‌ ಹಾರಲು ತೊಡಗುತ್ತಾರೆ. ಇಂತಹ ಕಾಲೇಜ್‌ ಲವರ್ಸ್‌ ಗಳು ಸಿನಿಮಾ, ಧಾರಾವಾಹಿಗಳ ಪ್ರಭಾವಕ್ಕೆ ಒಳಗಾಗಿ ಸಿಗರೇಟ್‌ ಹಚ್ಚುವುದಕ್ಕೆ ಗನ್‌ ಬಳಸುವುದು, ಹುಡುಗನಿಗೆ ಬೈಕ್‌ ಗಿಫ್ಟ್ ಕೊಡಲು ಹುಡುಗಿ ತನ್ನ ಅಜ್ಜ ಕೊಡಿಸಿದ ಹಳೆ ಚೈನ್‌ ನ್ನು ಮಾರುವುದು, ಹುಡುಗಿ ಕೈ ಕೊಟ್ಟರೆ ಬಾರ್‌ ಗೆ ಹೋಗಿ ಕುಡಿಯುತ್ತಾ ಮೈ ಕೈ ಪರಚಿಕೊಳ್ಳುವುದು…. ಇತ್ಯಾದಿ ಮಾಮೂಲು.

ತನ್ನ ತಂದೆಯಷ್ಟೇ ವಯಸ್ಸಾದ `ಹುಡುಗನನ್ನು’ ಪ್ರೀತಿಸುವುದು ಈ ರೀತಿಯ ಘೋರ ಕೆಲಸ ಹಾಗೂ ಮಹಾನ್‌ ಕಾರ್ಯಗಳನ್ನು ಮಾಡಲು ಶುರು ಮಾಡುತ್ತಾರೆ. ಈ ರೀತಿಯ ವಿಚಿತ್ರ ರೋಗಕ್ಕೆ ಪರಿಹಾರವೇ ಇಲ್ಲವೇ ಎಂದು ಕೇಳಿದರೆ, ಇಂಥ ಹೃದಯ ಕಾಯಿಲೆಗಳು ಕೆಲವು ದಿನ ಇದ್ದು ಕ್ರಮೇಣ ಕಾಲದ ನೆರಳಿನಲ್ಲಿ ಮಾಯವಾಗುತ್ತವೆ ಎಂಬುದು ನನ್ನ ಪರಿಚಯದ ಡಾಕ್ಟರ್‌ ಒಬ್ಬರ ಉತ್ತರ. ಅಷ್ಟೇ ಅಲ್ಲ, ಎಲೆಕ್ಟ್ರಿಕ್‌ ಲೈನ್‌ ಮ್ಯಾನ್‌ ಒಬ್ಬ “ಪ್ರೀತಿ ಎಂದರೆ ತಂತಿಯ ಮೇಲಿನ ನಡಿಗೆ,” ಎಂದು ಘಂಟಾನುಘೋಷವಾಗಿ ಹೇಳಿದರೆ, ನಮ್ಮ ಮನೆಯ ಮುಂದಿನ ಕುಡುಕನೊಬ್ಬ `ಪ್ರೀತಿ ಒಂದು ನಶೆ,’ ಎಂದು ಗೋಡೆಯ ಮೇಲೆ ಉಲ್ಲೇಖಿಸಿದ್ದಾನೆ.

ಒಟ್ಟಿನಲ್ಲಿ ಪ್ರೇಮ ನಿತ್ಯನೂತನ, ನವನವೀನ, ಪ್ರೇಮದ ರೀತಿ ಬದಲಾದರೂ ಅದನ್ನು ಅನುಭವಿಸುವ ನೀತಿ ಯಾವಾಗಲೂ ಒಂದೇ! ಮನಸುಗಳ ಬೆಸುಗೆಗೆ ಕಾರಣವಾಗುವ ಚಿರಕಾಲದ ಈ ಭಾವವನ್ನು ಕನ್ನಡದ ಪ್ರೇಮ ಕವಿ ಕೆ.ಎಸ್‌.ನ ತಮ್ಮ ಪದ್ಯದಲ್ಲಿ ಸೊಗಸಾಗಿ ಬಣ್ಣಿಸಿದ್ದಾರೆ  `ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಾಣದಂಥ ಹರುಷ ಕಂಡು ಮಾತಿಗೊಲಿಯದಮೃತ ಉಂಡು ದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ?’

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ