ದೆಹಲಿಯ ನೋಯ್ಡಾ ಪ್ರದೇಶದಲ್ಲಿ 10 ವರ್ಷದ ಒಬ್ಬ ಮನೆಗೆಲಸದ ಹುಡುಗಿ ಜೊತೆ ಜಗಳವಾಡಿ, ಅದನ್ನು ಹೊಡೆದು ಬಡಿದು ಮಾಡಿದ ಮಾಲೀಕಳಾದ ಏರ್‌ ಲೈನ್ಸ್ ಪೈಲಟ್‌ ಗೆ ಕೆಲವು ದಿನ ಜೇಲು ಸೇರುವಂತಾಯಿತು. ಈಗ ದೆಹಲಿಯಲ್ಲಿ ಡೊಮೆಸ್ಟಿಕ್ ಹೆಲ್ಪರ್ಸ್‌ ಗಾಗಿಯೇ ಕಂಪನಿಗಳಿದ್ದು, ಇವುಗಳ ರೆಜಿಸ್ಟ್ರೇಷನ್‌ಪೊಲೀಸ್‌ ವೆರಿಫಿಕೇಶನ್‌ ಅನಿವಾರ್ಯವಾಗಿದೆ. ಡೆಲ್ಲಿ ಪ್ರೈ. ಪ್ಲೇಸ್ಮೆಂಟ್‌ ಏಜೆನ್ಸಿ (ರೆಗ್ಯುಲೇಶನ್‌) ಆರ್ಡರ್‌ 2014 ಈಗ ಅತಿ ಶಿಸ್ತಿನಿಂದ ಚಾಲನೆಗೆ ತರಲಾಗಿದೆ. ಇದರ ನೆರವಿಲ್ಲದೆ ಕೆಲಸ ಕೊಡಿಸುವ ಏಜೆನ್ಸಿಗಳ ಮಾಲೀಕರಿಗೆ 50 ಸಾವಿರ ದಂಡ ವಿಧಿಸಲಾಗುತ್ತದೆ.

ಎಲ್ಲಾ ಮಹಾನಗರಗಳಲ್ಲೂ ಮನೆಗೆಲಸದವರು ಅನಿವಾರ್ಯ. ಸಿಟಿ ಲೈಫ್‌ ಸ್ಟೈಲ್ ‌ಗೆ ಇದು ಅತ್ಯಗತ್ಯ ಸೇವೆ. ಇದರ ಸತತ ಸಪ್ಲೈ ಸಹ ಅತ್ಯಗತ್ಯ. ದೇಶದ ಬಡ ಜಾಗಗಳಿಂದ ಹುಡುಗ ಹುಡುಗಿಯರು ನಿರಂತರವಾಗಿ ಹಣದ ಲಾಲಸೆ, ಇನ್ನಿತರ ಆಮಿಷಗಳನ್ನೊಡ್ಡಿ ಅಥವಾ ಕಿಡ್‌ ನ್ಯಾಪ್‌ ಮಾಡಿ ಇವರನ್ನು ಮಹಾನಗರಕ್ಕೆ ಎಳೆದು ತರಲಾಗುತ್ತದೆ. ಹೀಗೆ ಮನೆಗೆಲಸಗಳಿಗೆ ಜನ ಸಿಗುತ್ತಾರೆ. ಇಂಥ ಏಜೆನ್ಸಿಗಳ ಮಾಲೀಕರು ದೊಡ್ಡ ಮೊತ್ತದ ಕಮೀಶನ್‌ ಪಡೆಯುತ್ತಾರೆ. ಹೊಸ ಟೆಕ್ನಾಲಜಿ ಇವರ ಕೆಲಸವನ್ನು ಸುಲಭಗೊಳಿಸಿದೆ. ಈ ಮಂದಿ ತಮ್ಮ ಸೇವಕರನ್ನು ಮೊಬೈಲ್ ‌ಗಳಿಂದಲೇ ಕಂಟ್ರೋಲ್ ಮಾಡುತ್ತಾರೆ.

ಎಲ್ಲಕ್ಕೂ ಮುಖ್ಯ ವಿಷಯ ಪೊಲೀಸ್‌ ವೆರಿಫಿಕೇಶನ್‌ ನದು. ಇದು ಇಡೀ ದೇಶಕ್ಕೇ ಒಂದು ಆತಂಕದ ವಿಷಯ ಆಗುತ್ತಿದೆ. ಹೇಳಲಿಕ್ಕೇನೋ ಇದು ನಾಗರಿಕರ ಸುರಕ್ಷತೆಗಾಗಿ ಇದೆ, ಆದರೆ ಇದರಲ್ಲಿ ಕೇವಲ ಉತ್ತಮ ವ್ಯಕ್ತಿಗಳ ರೆಕಾರ್ಡ್‌ ಮಾತ್ರ ಸಿಗುತ್ತದೆ. ಯಾರು ಕಿಲಾಡಿ ಅಪರಾಧಿಗಳೋ ಅವರ ಬಳಿ ಎಲ್ಲಾ ತರಹದ ನಕಲಿ ಡಾಕ್ಯುಮೆಂಟ್ಸ್ ಇದ್ದೇ ಇರುತ್ತವೆ. ಎಷ್ಟೇ ಪ್ರಯತ್ನಿಸಿದರೂ ಪೊಲೀಸರು ಇದನ್ನು ವೆರಿಫೈ ಮಾಡಲಾರರು. ಯಾವ ನಗರವೇ ಆಗಲಿ, ಸರ್ವೆಂಟ್‌ ನೀಡಿರುವ ವಿಳಾಸಕ್ಕೆ ಪೊಲೀಸ್‌ ಮಾಹಿತಿ ಕಳುಹಿಸಬಹುದಷ್ಟೇ. ಆ ವ್ಯಕ್ತಿ ಇಂಥ ಜಾಗದವರು, ಇವರು ಅಪರಾಧಿ ಅಲ್ಲ, ಉತ್ತಮ ಹಿನ್ನೆಲೆ…. ಇತ್ಯಾದಿ.

ಯಾರು ಅಸಲಿ ಅಪರಾಧಿಯೋ ತಾನು ವೆರಿಫಿಕೇಶನ್ನಿನಲ್ಲಿ ಸಿಕ್ಕಿಬೀಳುವಂಥ ಕೆಲಸ ಯಾಕೆ ಮಾಡುತ್ತಾರೆ? ಎಷ್ಟೋ ಸಾವಿರಾರು ನೌಕರಿಗಳಿಗೆ ಇಂಥ ಪೊಲೀಸ್‌ ವೆರಿಫಿಕೇಶನ್‌ ಬೇಕಾಗಿಲ್ಲ. ಇಂಥವರಲ್ಲಿ ಪಿಕ್‌ ಪಾಕೆಟರ್ಸ್‌, ವೇಶ್ಯಾವಾಟಿಕೆಗಳು, ಸಣ್ಣಪುಟ್ಟ ಡಾಬಾ, ಕಾರ್ಖಾನೆಯ ಕೆಲಸಗಾರರೂ ಸೇರಿರುತ್ತಾರೆ.

ಇದರಿಂದ ಸರ್ವೆಂಟ್ಸ್ ಗೂ ಆಪತ್ತು ತಪ್ಪಿದ್ದಲ್ಲ, ಅವರನ್ನು ಇರಿಸಿಕೊಳ್ಳುವ ಮಾಲೀಕರಿಗೂ ಸಹ. ಪೊಲೀಸರು ಶಿಸ್ತಾಗಿ ಸಮವಸ್ತ್ರ ಧರಿಸಿ ಬಂದು, ಯಾವಾಗ ಬೇಕಾದರೂ ಇಂಥ ಮನೆಗಳಲ್ಲಿ ಇಣುಕುತ್ತಾರೆ. ಭಾರತೀಯರು ಇಂದಿಗೂ ತಮ್ಮ ಮನೆ ಮುಂದೆ ಪೊಲೀಸ್‌ ಬಂದು ನಿಲ್ಲುವುದನ್ನು ಅವಮಾನಕರ ಎಂದೇ ಭಾವಿಸುತ್ತಾರೆ. ಅವರಿಂದ ಸುರಕ್ಷತೆ ಎಂದು ಭಾವಿಸುವುದೇ ಇಲ್ಲ. ವೆರಿಫಿಕೇಶನ್‌ ಹೆಸರಲ್ಲಿ ಕಮಾಯಿ ಗಿಟ್ಟಿಸಲು ಪೊಲೀಸರಿಗೆ ನಾನಾ ತಂತ್ರಗಳು ಗೊತ್ತು. ದೆಹಲಿಯ ಮನೆಗೆಲಸದ ಸಿಬ್ಬಂದಿ ಪಂಚಾಯತ್‌ ಸಂಗಮದ ಅಧಿಕಾರಿಗಳ ಪ್ರಕಾರ, ಈ ವೆರಿಫಿಕೇಶನ್‌ ಒಳ್ಳೆಯದಿದ್ದರೂ ಇದರಲ್ಲಿ ಭ್ರಷ್ಟಾಚಾರ ತಪ್ಪಿದ್ದಲ್ಲ ಅಂತಾರೆ.

ಇಡೀ ಪ್ರಕರಣದಲ್ಲಿ ಮುಖ್ಯ ವಿಷಯ ಅಂದ್ರೆ, ಪಾಪದ ಆ ಕೆಲಸದವಳ ಬಗ್ಗೆ ಯಾರಿಗೂ ಮರುಕ ಇರುವುದಿಲ್ಲ. ಇಂಥವರಿಂದ ಡಬ್ಬಲ್ ಕೆಲಸ ಅಥವಾ ದೊಡ್ಡ ಮನಿಗಳ ನಿರ್ವಹಣೆ ಮಾಡಿಸಲಾಗುತ್ತದೆ. ಮನೆಯಲ್ಲಿದ್ದುಕೊಂಡೇ ಸರ್ಕಾರದಿಂದ ಬಹಳಷ್ಟು ಸೌಲಭ್ಯ ಗಿಟ್ಟಿಸುವ ಮಾಲೀಕಳು, ದೇಶದ ಆರ್ಥಿಕ ಸ್ಥಿತಿಯಿಂದಾಗಿ ಇಂಥ ಕೆಲಸದವಳಿಗೆ ದೊಡ್ಡ ಮೊತ್ತದ ಸಂಬಳ ಅಥವಾ ಸೌಲಭ್ಯ ಒದಗಿಸಲಾರಳು. ಒಂದಿಷ್ಟು ನಿಗದಿತ ಕನಿಷ್ಠ ಸಂಬಳ, ರಾತ್ರಿ ಕಳೆಯಲು ಒಂದು ಕತ್ತಲೆ ಕೋಣೆ, 2 ಹೊತ್ತಿನ ಊಟ ನೀಡಬಲ್ಲಳಷ್ಟೆ. ವೆರಿಫಿಕೇಶನ್‌ ನಿಂದಾಗಿ ಇವರ ಸಪ್ಲೈ ಕಡಿಮೆ ಆಗುತ್ತಿದೆ, ಪರಿಣಾಮ ಇವರ ಬೇಡಿಕೆ ಹೆಚ್ಚಿ, ಮಾಮೂಲಿ ಮಾಲೀಕರು ಇಂಥವರನ್ನು ನಿಭಾಯಿಸಲಾರರು. ಗೃಹಿಣಿಗೆ ತನ್ನ ಮನೆಯವರಿಗಿಂತ ಇವರ ನಖರಾ ಸಹಿಸುವುದೇ ದೊಡ್ಡ ತಲೆ ನೋವಾಗುತ್ತದೆ. ಡೊಮೆಸ್ಟಿಕ್‌ ಸರ್ವೆಂಟ್‌ ಎಂಪ್ಲಾಯರ್ಸ್‌ ಫೆಡರೇಶನ್‌ ನಂಥ ಸಂಸ್ಥೆಗಳು ಹುಟ್ಟಿಕೊಂಡಾಗ ಮಾತ್ರ, ಇಂಥ ಮಾಲೀಕರ ಸಮಸ್ಯೆಗೆ ಪರಿಹಾರ ಸಿಗಬಹುದೇನೋ….

vihangam-police-verifivcation-1

ಸೋಶಿಯಲ್ ಮೀಡಿಯಾ ಎಂಬ ಹಿಂಸೆ

ಇತ್ತೀಚೆಗೆ ತಾಯಿ ತಂದೆಯರಿಗೆ ತಮ್ಮ ಯುವ ಪ್ರೇಮಿ ಮಕ್ಕಳನ್ನು ಹ್ಯಾಂಡಲ್ ಮಾಡುವುದೇ ಕಷ್ಟವಾಗಿದೆ. ಪ್ರೇಮಕ್ಕೆ ವಿರೋಧ ಅನ್ನೋದು ಸನಾತನ ಕಾಲದಿಂದಲೂ ಇದೆ, ಪೌರಾಣಿಕ ಕಥೆಗಳಲ್ಲೂ ಕಂಡುಬರುತ್ತದೆ. ಇದೀಗ ಟಿವಿ, ನ್ಯೂಸ್‌ ಪೇಪರ್‌, ಸೋಶಿಯಲ್ ಮೀಡಿಯಾಗಳ ಕೃಪೆಯಿಂದಾಗಿ, ತಕ್ಷಣವೇ ಇವರ ಮನೆಯ ಇಂಥ ಹಗರಣ ಇಡೀ ಪ್ರಪಂಚಕ್ಕೇ ತಿಳಿದುಬಿಡುತ್ತದೆ. ಪ್ರತಿ ಪೇಪರ್‌ ನಲ್ಲೂ ಪ್ರತಿದಿನ 2-3 ಪ್ರೇಮ ಪ್ರಕರಣಗಳ ಜಗಳ ಅಥವಾ ಆತ್ಮಹತ್ಯೆಯ ವರದಿ ಇದ್ದೇ ಇರುತ್ತದೆ.

ಮಧ್ಯ ಪ್ರದೇಶ ರಾಜ್ಯದ ದೇವದಾಸ್‌ ಜಿಲ್ಲೆಯ ಕಳೆದ ಮೇ ತಿಂಗಳಲ್ಲಿ ಒಬ್ಬ ಕಾನ್ಸ್ ಟೆಬಲ್ ಪ್ರೇಮಿ ತನ್ನ ಪ್ರೇಯಸಿಯ ಮನೆಗೆ ರಾತ್ರಿ 1 ಗಂಟೆಗೆ ನುಗ್ಗಿ, ಪಿಸ್ತೂಲು ಝಳಪಿಸಿದ. ಹುಡುಗಿ ಅವನೊಂದಿಗೆ ಹೋಗಲು ತಯಾರಿಲ್ಲ, ಕಳಿಸಲು ಮನೆಯವರೂ ತಯಾರಿಲ್ಲ. ಮೊದಲು ಅವರಿಬ್ಬರಲ್ಲೂ ಪ್ರೀತಿ ಪ್ರೇಮ ಇತ್ತಂತೆ, ನಂತರ ಹುಡುಗಿ ಮನಸ್ಸು ಬದಲಾಯಿಸಿದ್ದಳು. ಹಾಗಾಗಿ ಈ ಹುಡುಗ ಗನ್‌ ತೋರಿಸಿ ಹುಡುಗಿ ಮನೆಯವರಿಗೆ ಗುಂಡಿಟ್ಟು ಗಲಭೆ ಮಾಡಿದ.

ಅಷ್ಟು ಸಾಲದೆಂಬಂತೆ ಅವನು ಹುಡುಗಿ ಜೊತೆ ತಾನು ಮೊದಲು ಚೆನ್ನಾಗಿದ್ದಾಗ ತೆಗೆಸಿದ ಫೋಟೋವನ್ನು FB‌ಗೆ ಹಾಕಿ, `ಮೋಸ ಮಾಡಿದವಳಿಗೆ ತಕ್ಕ ಶಿಕ್ಷೆ ಕೊಟ್ಟೆ…..’ ಎಂದು ಬರೆದುಕೊಂಡ. ಇದಾದ ಮೇಲೆ ಆತ ರೈಲಿನಡಿ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡ. ಪ್ರೇಮಕ್ಕೆ ಸಿಲುಕಿದ ಹುಡುಗಿಯರು ಕೊನೆಗೆ ಸಾಯುವುದು ಅಥವಾ ಪ್ರೇಮಿಯ ಸಾವು ನೋಡುವುದು ಮಾಮೂಲೇ ಆಗಿದೆ. ಆದರೆ ಇದೀಗ ಸೋಶಿಯಲ್ ಮೀಡಿಯಾ ಎಂಬ ಹಿಂಸೆ ವಕ್ರಿಸಿಕೊಂಡು ಈ ಘಟನೆ ದೇಶದ ಉದ್ದಗಲಕ್ಕೂ ಎಲ್ಲರಿಗೂ ತಿಳಿಯುವಂತಾಗಿದೆ. ಹಾಗಾಗಿ ಪೇಪರ್‌ ಗಳಲ್ಲಿ ಹೆಸರು ಹೇಳದೆ ಕೇವಲ ಸುದ್ದಿ ಮುದ್ರಿಸುತ್ತಾರೆ. ಆದರೆ ವೈರಲ್ ಆದ ವಿಷಯಗಳಲ್ಲಿ ಏನನ್ನು ಮುಚ್ಚಿಡಲು ಸಾಧ್ಯ? ವಿಡಿಯೋ ಮೂಲಕ ಎಲ್ಲ ಬಟಾಬಯಲಾಗಿರುತ್ತದೆ. ಸಾಲದೆಂಬಂತೆ ಇದು ಗ್ರೂಪು ಗ್ರೂಪುಗಳಿಗೆ ಫಾರ್ವರ್ಡ್ ಆಗಿ, ಎಲ್ಲರಿಗೂ ಎಲ್ಲ ಗೊತ್ತಾಗಿ ಹೋಗುತ್ತದೆ!

ಪ್ರೇಮ ಎಂಬುದು ಇನ್‌ ಸ್ಟೆಂಟ್‌ ಆಗಿ ಶುರುವಾಗುತ್ತದೆ. ಇಲ್ಲಿ ಇಬ್ಬರೂ ಪರಸ್ಪರರ ಬಯೋಡೇಟಾ, ಹಿನ್ನೆಲೆ ಗಮನಿಸುವುದಿಲ್ಲ. ಹೀಗೆ ಕೆಲವು ತಿಂಗಳಾದ ಮೇಲೆ ಪ್ರೇಮ ಪರಾಕಾಷ್ಠೆಗೇರಿ, ವಿರಸ ಶುರುವಾಗುತ್ತದೆ. ಆಗ ಮನೆಮಠ, ಜಾತಿ, ಧರ್ಮ, ಹವ್ಯಾಸಗಳ ಕುರಿತು ತಿಳಿಯುತ್ತದೆ. ಮೊದಲಿನ ಲವ್ವಿ ಡವ್ವಿ ಮಾಯವಾಗಿ ಎಲ್ಲ ವಾದವಿವಾದಗಳೇ ಆಗುತ್ತವೆ.

ಹುಡುಗಿಯರು ತಮ್ಮ ಪ್ರೇಮಿಗಳನ್ನು ಬಹಳ ದಿನಗಳಾದ ನಂತರವೇ ಮನೆಯವರಿಗೆ ಪರಿಚಯಿಸುವುದು. ಅಷ್ಟು ಹೊತ್ತಿಗೆ ಬಹಳ ತಡವಾಗಿರುತ್ತದೆ, ಹುಡುಗಿ ಮುಂದೆ ಯಾವುದೇ ರಾಜಿಗೂ ಬಾಗುವುದಿಲ್ಲ, ಅಂಥ ಸ್ಥಿತಿ ಬಂದಿರುತ್ತದೆ. ಮನೆಯವರು ಮೊದಮೊದಲು ಹುಡುಗಿಗೆ ಒಳ್ಳೆ ಮಾತುಗಳಲ್ಲಿ ತಿಳಿ ಹೇಳಿ, ಹುಡುಗನ ಸಂಬಂಧ ತೊರೆಯುವಂತೆ ಮಾಡಿಸುತ್ತಾರೆ. ಹುಡುಗಿಯರು ತಾವಾಗಿಯೇ ಹುಡುಗನಿಂದ ಬ್ರೇಕ್‌ ಪಡೆದರೆ, ಅದು ಬೇರೆ ವಿಷಯ.

ಲವ್ ಫೇಲ್ಯೂರ್‌ ಆದಾಗ ಸಾಯುವುದು, ಸಾಯಿಸುವುದು ಎರಡೂ ತಪ್ಪೇ! ಈ ಸ್ಥಿತಿಯಲ್ಲಿ ಭಗ್ನಪ್ರೇಮಿ ಆದವನು/ಳು ಇತರರಿಗೆ ಸಾವಿನಿಂದ ನೀಡುವ ಹಿಂಸೆ ಅತಿ ದಾರುಣವಾದುದು. ಮೇಲಿನ ಪ್ರಕರಣದಲ್ಲಿ ಸತ್ತ ಕಾನ್ಸ್ ಟೆಬಲ್ ನಿಂದಾಗಿ ಅವನ ಮನೆಯವರ ಮನಶ್ಶಾಂತಿ ನಾಶವಾಯಿತು, ಅತ್ತ ಹುಡುಗಿ ಮನೆಯವರೂ ಸತ್ತರು, ಅಲ್ಲೂ ಅಲ್ಲೋಲ ಕಲ್ಲೋಲ! ಹುಡುಗಿ ಒಬ್ಬಳೇ ಉಳಿದು ಗೋಳಾಡುತ್ತಿದ್ದಾಳೆ. ಅಸಲಿ ಪ್ರೇಮದಿಂದ ಎಲ್ಲೆಡೆ ಶಾಂತಿ ನೆಲೆಸಬೇಕು, ಇಂಥ ಹಿಂಸಾಕಾಂಡಗಳಲ್ಲ!

ಹೆಚ್ಚಲಿರುವ IVF ಬೇಡಿಕೆ

1978ರ ಕಾಲದಲ್ಲಿ ಹುಟ್ಟುತ್ತಿದ್ದ ಮಕ್ಕಳು, ಸಹಜ ನೈಸರ್ಗಿಕ ವಿಧಾನದಿಂದ, ಮಿಲನದ ಪರಿಣಾಮ ಹುಟ್ಟುತ್ತಿದ್ದವು. ಆದರೆ ಇಂದಿನ ಆಧುನಿಕ ಕಾಲದಲ್ಲಿ ಪ್ರತಿ ದಿನ ಪ್ರತಿ ನಿಮಿಷ ಇಡೀ ದೇಶದಲ್ಲಿ ಎಲ್ಲೋ ಪ್ರಣಾಳ ಶಿಶು ಹುಟ್ಟುತ್ತಲೇ ಇರುತ್ತದೆ. ಇಲ್ಲಿ ಪ್ರಣಾಳದಲ್ಲಿ ಗಂಡಿನ ವೀರ್ಯ ಹೆಣ್ಣಿನ ಅಂಡಾಣು ಜೊತೆ ಬೆರೆತು, ಫಲವತ್ತಾಗುತ್ತದೆ. ಇಂದು ವಿಶ್ವದಲ್ಲಿ ಎಲ್ಲಾ ಕಡೆ ಮಕ್ಕಳು ತಾಯಿಯ ಗರ್ಭದಿಂದ ನೇರವಾಗಲ್ಲದೆ, ಹೀಗೆ ಹೊರಗೆ ಪ್ರತ್ಯಾರೋಪಿತಗೊಂಡು ನಂತರ ತಾಯಿಯ ಗರ್ಭಕ್ಕೆ ರವಾನೆ ಆಗುತ್ತಿವೆ.

ಹೆಣ್ಣುಮಕ್ಕಳು ಹೆಚ್ಚು ಹೆಚ್ಚಾಗಿ ನೌಕರಿಗೆ ಸೇರುತ್ತಿದ್ದಂತೆ, ಅಂಥವರಿಗೆ ಮಗು ಹಡೆಯುವುದು, ನೋಡಿಕೊಳ್ಳುವುದು ಹಿಂಸೆ ಎನಿಸತೊಡಗಿತು. ಹೀಗಾಗಿ 40-42ವರೆಗೂ ಇದನ್ನು ಅವರು ಮುಂದೂಡುತ್ತಾರೆ. ಆ ಸಂದರ್ಭದಲ್ಲಿ ನೈಸರ್ಗಿಕವಾಗಿ ಮಗು ಹಡೆಯಲಾಗದಿದ್ದರೆ, ಅಂಥವರು IVF ಸೆಂಟರ್‌ ಗಳಿಗೆ ಎಡತಾಕುತ್ತಾರೆ.

ತಮ್ಮ ಕೆರಿಯರ್‌ ನ ಪರಾಕಷ್ಠೆ ತಲುಪಿದ ನಂತರ, ತನಗಿಂಥ ಬಲು ಸ್ಪೀಡಾದ, ಟೆಕ್‌ ಸೇವಿ ಕಾಂಪಿಟಿಟರ್‌ ವರ್ಕ್‌ಪೋರ್ಸ್‌ ಬಂದಿದೆ, ಈ ಕೆಲಸಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಸುಖದತ್ತ ಗಮನಹರಿಸಬೇಕು ಎಂಬುದು ಆಗ ಅವರಿಗೆ ಗೊತ್ತಾಗುತ್ತದೆ. ತಮ್ಮದೇ ಕರುಳಿನ ಕುಡಿ ಆಗ ಬಲು ಮುಖ್ಯ ಎನಿಸುತ್ತದೆ.

ಹೀಗಾಗಿಯೇ IVF ಡ್ರಗ್ಸ್ ಮತ್ತು ಟೆಕ್ನಿಕ್ಸ್ ಗೆ ಕ್ರಮೇಣ ಬೇಡಿಕೆ ಹೆಚ್ಚುತ್ತಾ ಹೊರಟಿದೆ. ಹಿಂದಿನಂತೆ ದೇವರಿಗೆ ಮೊರೆಹೋಗದೆ, IVF ಸ್ಪೆಷಲಿಸ್ಟ್ ಗೆ ಮೊರೆಹೋಗುತ್ತಿದ್ದಾರೆ. ಇಂದು ಹುಟ್ಟುತ್ತಿರುವ 125 ಮಕ್ಕಳಲ್ಲಿ ಗ್ಯಾರಂಟಿ 1 ಮಗು IVF ಕೊಡುಗೆ ಆಗಿರುತ್ತದೆ. ಮುಂದೆ ಇದು ಕ್ರಮೇಣ ಹೆಚ್ಚಲಿದೆ.

ಪ್ರಸ್ತುತ IVF ಟೆಕ್ನಿಕ್ಸ್, ಮಾನಸಿಕ ಹಾಗೂ ದೈಹಿಕ ಎರಡೂ ವಿಧದಲ್ಲಿ ಹಿಂಸಕಾರಕ. ಆರ್ಥಿಕವಾಗಿ ಅಂತೂ ಕೇಳೋದೇ ಬೇಡ. ಮುಂದೆ ಬೇಡಿಕೆ ಹೆಚ್ಚಿದಂತೆ ಇದು ತುಸು ಅಗ್ಗ ಆಗಬಹುದು. ಮುಂದೆ ಹುಟ್ಟಲಿರುವ ಮಕ್ಕಳಲ್ಲಿ 5ರಲ್ಲಿ 1 IVF ಕೊಡುಗೆಯಾದರೆ ಆಶ್ಚರ್ಯವಿಲ್ಲ!

ಈಗೆಲ್ಲ ಆಧುನಿಕ ಜೀವನವನ್ನು ಮೊದಲಿನಿಂದಲೇ ಅತಿ ಪ್ಲಾನ್‌ ಮಾಡಲಾಗುತ್ತದೆ. ಮಗುವನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು ಅದು ಮುಂದೆ ಎಂಜಿನಿಯರ್‌, ಡಾಕ್ಟರ್‌ ಆಗುವುದೆಲ್ಲ ಪ್ರೀಪ್ಲಾನ್ಡ್, ನ್ಯಾಚುರಲ್ ಅಲ್ಲ. ಹಾಗೆಯೇ ಮಗು ಪಡೆಯುವುದನ್ನು ಪ್ಲಾನ್‌ ಪ್ರಕಾರ ಮಾಡಿಕೊಂಡರೆ ಆಶ್ಚರ್ಯವೇನು? ವಿಡಂಬನೆ ಎಂದರೆ ಚರ್ಚು, ಮಸೀದಿ, ಮಂದಿರಗಳು ಇದನ್ನು ವಿರೋಧಿಸುತ್ತಿಲ್ಲ. ಪ್ರತಿ ಮಗು ಮುಂದೆ ಹೊಸ ದಾನಿ ಆಗುವನೆಂಬ ನಿರೀಕ್ಷೆ. ಮಗು ಹೇಗೆ ಹುಟ್ಟಿದರೇನು? ಯಾವ ಧರ್ಮ ಅದನ್ನು ಬಿಡುವುದಿಲ್ಲ. ಇದು ಅವರ ಧಾರ್ಮಿಕ ಗ್ರಂಥಗಳ ವಿರುದ್ಧದ ಪ್ರಕ್ರಿಯೆ. ಹಣದ ವಿಚಾರ ಅಂದ್ಮೇಲೆ ಯಾರೇಕೆ ಆಕ್ಷೇಪಿಸುತ್ತಾರೆ?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ