ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ನಗರದ ವಿಕ್ಟೋರಿಯಾ ಮತ್ತು ವಾಣಿವಿಲಾಸ್ ಸಾರ್ವಜನಿಕ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರೊಂದಿಗೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಆಸ್ಪತ್ರೆಯ ಒಳರೋಗಿಗಳು, ಹೊರರೋಗಿಗಳು ಮತ್ತು ಅವರ ಸಹಾಯಕರೊಂದಿಗೆ ಮಾತಾಡಿದರು. ಇದೇ ವೇಳೆ ರೋಗಿಗಳ ಜೊತೆ ವೈದ್ಯರು ಸಹಾನುಭೂತಿಯಿಂದ ವರ್ತಿಸಬೇಕು ಎಂದು ಸೂಚಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಸಿಎಂ, ತಮ್ಮೊಂದಿಗೆ ಮಾತಾಡಿದ ರೋಗಿಗಳು ಮತ್ತು ಅವರ ಸಹಾಯಕರು ಆಸ್ಪತ್ರೆಗಳಲ್ಲಿ ಸಿಗುತ್ತಿರುವ ಸೇವೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಅಂತ ಹೇಳಿದರು ಎಂದರು.

ಯಾರೂ ವೈದ್ಯರ ಬಗ್ಗೆ ಆರೋಪ ಮಾಡಿಲ್ಲ. ವೈದ್ಯರು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಊಟ ಚೆನ್ನಾಗಿ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ಸಿಎಂ ತಿಳಿಸಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಇದಕ್ಕೆ ಲಕ್ಷಾಂತರ ರೂ. ವೆಚ್ಚ ಆಗುತ್ತದೆ. ಹೀಗಾಗಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಲು ಬೇಡಿಕೆ ಇದೆ. ಈ ಬಗ್ಗೆ ಪ್ರಸ್ತಾವನೆ ಇದೆ. ಸರ್ಕಾರ ಅದನ್ನು ಪರಿಗಣಿಸುತ್ತದೆ ಎಂದು ಹೇಳಿದರು.

ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕುತ್ತಿದೆಯೇ? ಚಿಕಿತ್ಸೆ ಪಡೆಯುವಲ್ಲಿ ಏನಾದರೂ ಅಡೆತಡೆಗಳಿವೆಯೇ? ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ‌ ಸ್ಪಂದನೆ ಹೇಗಿದೆ? ಎಂಬುದನ್ನು ಸ್ವತಃ ರೋಗಿಗಳಿಂದಲೇ ಮಾಹಿತಿ ಪಡೆದೆ.

ಸರ್ಕಾರಿ‌ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಬಹುತೇಕರು ಬಡವರು. ಖಾಸಗಿ ಆಸ್ಪತ್ರೆಯ ವೆಚ್ಚ ಭರಿಸಲಾಗದ ಕಾರಣಕ್ಕಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ಯಾವೊಬ್ಬ ರೋಗಿಯು ಗುಣಮಟ್ಟದ ಚಿಕಿತ್ಸೆಯಿಂದ ವಂಚಿತನಾಗಬಾರದೆಂದು ಸರ್ಕಾರಿ‌ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ ಹಾಗೂ ಸಲಕರಣೆಗಳನ್ನು ಒದಗಿಸಲಾಗಿದೆ. ಆದ್ದರಿಂದ ಸರ್ಕಾರಿ‌ ಆಸ್ಪತ್ರೆಗಳು ಕೂಡ ಖಾಸಗಿ ಆಸ್ಪತ್ರೆಗಳಂತೆ ಉತ್ತಮ ಸೇವೆ, ಉತ್ಕೃಷ್ಟ ಸೌಲಭ್ಯ ಒದಗಿಸಲೇಬೇಕು. ಈ ವಿಷಯದಲ್ಲಿ ಯಾವ ರಾಜಿಯೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ