ಇಂದಿನ ಆಧುನಿಕ ಕಾಲಕ್ಕೆ ಹೆಂಗಸರ ಪ್ರಮುಖ ಟೈಂ ಪಾಸ್ಆಗಿರುವ ಕಿಟಿ ಪಾರ್ಟಿ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಪೇಚಾಟ ಶುರುವಾಗುತ್ತದೆ. ಇದರ ಮಹಿಮೆಯನ್ನು ಒಂದಿಷ್ಟು ವಿವರವಾಗಿ ತಿಳಿಯೋಣವೇ…….?

ರೇಣುಕಮ್ಮ ಒಲೆ ಮೇಲೆ ಹಾಲು ಕಾಯಿಸಿ, ಮಧ್ಯಾಹ್ನದ ಸಾಂಬಾರಿಗೆ ಎಲ್ಲಾ ಹೆಚ್ಚಿಟ್ಟು. ಮಸಾಲೆ ರುಬ್ಬಿಟ್ಟು, ತರಾತುರಿಯಲ್ಲಿ ಪತಿಗೆ ಎರಡು ಚಪಾತಿಯನ್ನು ತಿನ್ನಿಸುವ ಬದಲು ಮೂರು ಚಪಾತಿ ತಿನ್ನಿಸಿ, ಅವರಿಗೆ ಹೊಟ್ಟೆ ಉಬ್ಬರ ಆಗಿ ರೋಡಂಚಿನಲ್ಲಿ ಅಡ್ಡಾಡುವಂತೆ ಮಾಡುತ್ತಿದ್ದರು. ಒಟ್ಟಾರೆ ರೇಣುಕಮ್ಮನವರಿಗೆ ಕಿಟಿ ಪಾರ್ಟಿ ದಿನ ನೆಲದ ಮೇಲೆ ಕಾಲು ನಿಲ್ಲೋವಲ್ದು ನೋಡಿ….. ಅಸರವಸರ, ಸಡಗರ, ಕೆಲವೊಮ್ಮೆ ಆಪತ್ತು, ವಿಪತ್ತು!

ಅಂತೂ ರಂಗರಾಯರು, “ನಿಧಾನ ಕಣೆ ರೇಣು…. ಬಿದ್ದು ಕಾಲುಗೀಲು ಮುರ್ಕೊಂಡೀಯಾ…. ಆಮೇಲೆ ನೀನಿಲ್ದೆ ಕಿಟಿ ಪಾರ್ಟೀಲಿ ಕಂಡವರ ಸುದ್ದಿ ಮಾತಾಡೋರು ಯಾರೂ ಇಲ್ದಂಗೆ ಆದೀತು,” ಎಂದರು.

“ನಿಮ್ಮ ಕಾಲು ಎಳೆಯುವ ಬುದ್ಧಿ ಇದ್ದಿದ್ದೇ ಬಿಡಿ…..” ಎಂದು ಗದರುತ್ತಲೇ ರೆಡಿ ಆಗಲು ಹೋದವರು ರೇಣುಕಮ್ಮ.

`ಕಿಟಿ ಪಾರ್ಟಿ’ ಈಗ ಮದುವೆಯಾದ ಹೆಂಗಸರಿಗೆ ಮತ್ತು ಸ್ವಲ್ಪ ವಯಸ್ಸಾದ ಆಂಟಿಯರಿಗೆ ತಿಂಗಳಿಗೊಮ್ಮೆ ಒಟ್ಟಾಗಿ ಸೇರುವುದು, ತರಹೇವಾರಿ ಅಡುಗೆಗಳನ್ನು ಮಾಡಿ ವಿವಿಧ ಆಟೋಟಗಳನ್ನು ಆಡಿ, ಹಾಡು, ಕುಣಿತ, ಮಾತು, ಹರಟೆ, ಹಾಸ್ಯ…..!! ಇತ್ಯಾದಿಗಳಿಂದ ಮನರಂಜನೆ ಪಡೆಯುವುದು ಆಧುನಿಕ ಹವ್ಯಾಸವಾಗಿದೆ. ತರಹಾರಿ ಫೋಟೋ ಶೂಟು, ಯಾವೆಲ್ಲ ಡ್ರೆಸ್‌ ಗಳನ್ನು ಮನೆಯವರ ಮುಂದೆ ಹಾಕಲು ಸಾಧ್ಯವಿಲ್ಲವೇ ಅಂತಹ ಬಟ್ಟೆ ಧರಿಸಿ, ವಿವಿಧ ದಿರಿಸಿನಲ್ಲಿ ಗೋಡೆಗೊರಗುತ್ತಾ, ಅವಕಾಶ ನೋಡುತ್ತಾ, ತಿರುಗದ ಹೂನ್ನು ತನ್ನೆಡೆಗೆ ತಿರುಗುವ ಎಂದು ಹಿಂಸಿಸುತ್ತಾ…. ಫೋಟೋ ಕ್ಲಿಕ್ಕಿಸಿ…. ಮನೆಗೆ ಬಂದ ಮೇಲೆ ಗಂಡ ಮಕ್ಕಳ ಕಥೆ ಏನಾಯ್ತೋ ಗೊತ್ತಿಲ್ಲ…. ಕ್ಲಿಕ್ಕಿಸಿದ ಫೋಟೋಗಳನ್ನು ವಾಟ್ಸ್ ಆ್ಯಪ್‌ ಸ್ಟೇಟಸ್‌ ಗೆ ಹಾಕಿ, FB‌ಗೆ ಪೋಸ್ಟ್ ಮಾಡಿ, ಮತ್ತೆ ಕೆಲಸ ಮುಗಿದ ತಕ್ಷಣ ಚಿಕ್ಕಂದಿನಲ್ಲಿ ತಾತಾ ಚಾಕಲೇಟ್‌ ತಂದಿದ್ದೀನಿ ಬಾ ಎಂದಾಗ ಓಡೋಡಿ ಹೋಗುವಂತೆ ಫೋನಿನತ್ತ ಧಾವಿಸಿ ಓಡಿಹೋಗುವುದು. ಸ್ಟೇಟಸ್‌ ಗೆ ರಿಪ್ಲೈ ಏನು ಬಂದಿರಬಹುದು ಎಂದು ಗಮನಿಸುವುದು.

“ಯೂ ಆರ್‌ ಲುಕಿಂಗ್‌ ಸೋ ಯಂಗ್‌,” ಎಂದು ತನ್ನ ಹಳೆಯ ಗೆಳತಿ ಹೇಳಿದಾಗ ಸುನಂದಮ್ಮನವರು ಹಾಗೆ ಕನ್ನಡಿಯಲ್ಲಿ ತೆಳುಗೂದಲಿನ ಒಳಗಿದ್ದ ಬಿಳಿಗೂದಲನ್ನು ಒಳಕ್ಕೆ ಸರಿಸುತ್ತಾ, “ಓಹ್‌… ಥ್ಯಾಂಕ್ಯು ಕಣೇ ಮೊಮ್ಮಕ್ಕಳು ಆದ್ಮೇಲು ಏನು ಯಂಗ್ ಬಿಡು….” ಎಂದು ಸುಮ್ಮನೆ ಮೇಲ್ ಮಾತಿಗೆ ಹೇಳಿದರೂ ಒಳಗೆ ಆನಂದ ಪರಮಾನಂದ…..!

“ಪ್ರತಿ ತಿಂಗಳು ಕಿಟಿ ಪಾರ್ಟಿಯಲ್ಲೂ ಒಂದೇ ತರಹದ ಡ್ರೆಸ್‌ ಕೋಡ್‌ ಹಾಕಿರ್ತೀರಲ್ಲ. ಸೂಪರ್‌ ಕಣ್ರೀ….,” ಎಂದು ಧಾರವಾಡದ ತನ್ನ ಗೆಳತಿ ಅನುಸೂಯಮ್ಮ ಹೇಳಿದಾಗ…. ಪ್ರತಿ ತಿಂಗಳು ಡ್ರೆಸ್‌ ತೆಗೆದುಕೊಳ್ಳುವಾಗ ಗಂಡನ ಬೈಗುಳ, ಸಹಸ್ರನಾಮ ನೆನಪಾದರೂ ಬಾಯಿ ತಡವರಿಸಿದರು.

“ಓಹ್‌ ಹೌದಾ….. ನಮ್ಮವರೇ ಸೆಲೆಕ್ಟ್ ಮಾಡಿದ್ದು ಕಣೆ,” ಅಂತ ಒಣಪ್ರತಿಷ್ಠೆಯ ಮಾತು ನೋಡ್ಬೇಕು ಕಣ್ರೀ…. ಅಬ್ಬಬ್ಬಾ ಅದೇನು ಬಿಂಕ, ಅದೇನು ಬಿನ್ನಾಣ! ನೋಡೋಕೆ ಎರಡು ಕಣ್ಣು ಸಾಲದು ಕಣ್ರೀ….ಹೀಗೆ ಕಿಟಿ ಪಾರ್ಟಿಯ ಮಾರನೇ ದಿನವಿಡೀ ಮನೆಗೆಲಸ ಮಾಡದೆ, ವಾಷಿಂಗ್‌ ಮೆಷಿನ್‌ ನಲ್ಲಿ ಬಟ್ಟೆ ಒಂದು ಗಂಟೆ ಆದ್ರೂ ತೆಗೆಯದೇ, ಗಂಟೆ 1-2 ಆದ್ರೂ ಅನ್ನಕ್ಕೆ ಇಡದೆ, ನಿನ್ನೆ ಹಾಕಿದ ಕಣ್ಣಿನ ಕಾಡಿಗೆಯನ್ನೇ ಅಳಿಸದೆ ಸ್ಟೇಟಸ್‌ ರಿಪ್ಲೈ ಮಾಡೋದ್ರಲ್ಲಿ ಸಮಯ ಕಳೋದ್ರಲ್ಲಿ ಅದೆಂಥಾ ಮಜಾನೋ ಕಣ್ರೀ…. ಆದ್ರೂ ಅವರ ಉಲ್ಲಾಸ ಮತ್ತು ತಾಳ್ಮೆಗೆ ನನ್ನ ಸಲಾಂ ಕಣ್ರೀ…… ನಮ್ಮ ಕಿಟೀಲಿ ಇರುಷ್ಟು ರಿಚ್‌ ನೆಸ್‌, ಗ್ರಾಂಡ್‌ ಅವರ ಕಿಟೀಲಿ ಇಲ್ಲ ಕಣ್ರೀ….. ಅವರೆಲ್ಲಾ ಡ್ರೆಸ್‌ ಕೋಡ್‌ ಮಾಡ್ಕೊಂಡಿಲ್ಲ. ಯಾವುದೋ ಒಂದು ಸಿಕ್ಕಿಸಿಕೊಂಡು ಬಂದಿರ್ತಾರೆ…. ಮತ್ತೆ ಅವರೆಲ್ಲಾ ಬರೀ ಕಿತ್ತಾಡ್ತಿರ್ತಾರೆ. ನಮ್ಮ ಕಿಟೀಲಿ ತುಂಬಾ ಅಂಡರ್‌ ಸ್ಟಾಂಡಿಂಗ್‌ ಇದೇ ಕಣ್ರೀ…. ಹೀಗೆ ಬೇರೆಯವರ ಕಿಟಿಯವರನ್ನು ಅಲ್ಲಗಳೋದ್ರಲ್ಲಿ ಏನು ಮಜಾನೋ ನಮ್ಮ ಆಂಟಿಯವರಿಗೆ. ನಮ್ ಕಿಟೀ…. ನಮ್ ಕಿಟೀ ಅಂತಾ ಹೇಳೋದು ನೋಡಿದ್ರೆ ಇವ್ರಿಗೇನೋ ನೂರಾರು ಜನ್ಮದ ನಂಟು ಅನ್ಕೋಬೇಕು. ಅಷ್ಟೊಂದು ಪ್ರೇಮ…. ಪ್ರೀತಿ…..!!

ಗಂಡಂದಿರು ಇವರುಗಳಿಗೆ ತಿಂಗಳು ತಿಂಗಳು ಬಟ್ಟೆ ಕೊಡಿಸಿ, ಖರ್ಚಿಗೆ ದುಡ್ಡು ಕೊಟ್ಟು ಕಾರಲ್ಲಿ ತಗೊಂಡು ಹೋಗಿ ರೆಸ್ಟೋರೆಂಟ್ ಗಳಿಗೋ ಅಥವಾ ಮನೆಗಳಿಗೋ ತಲುಪಿಸಿ ಬಂದು ಉಸ್ಸಪ್ಪಾ ಎಂದು ಕೂರೋದು, ಅವರ ತಿಂಗಳ ಕಾಯಕ. ಆದ್ರೂ ಪ್ರೀತಿಸೋ ಮೆಚ್ಚಿನ ಮಡದಿಯರಿಗಾಗಿ ಇಷ್ಟು ಮಾಡದಿದ್ರೆ ಹೇಗೆ ಹೇಳಿ…..?

ಗಂಡಸರೇನು ದಿನಾ ಮನೇಲಿ ಇರ್ತಾರಾ….? ಅಯ್ಯೋ ನೀವು ಏನನ್ಕೊಂಡ್ರಿ… ಜೆಂಟ್ಸ್ ಪಾರ್ಲರ್‌ ತರಹ ಈಗ `ಜೆಂಟ್ಸ್ ಕಿಟಿ’ ಕೂಡ ಇದೆ. ಅವರಿಗೂ ಫೋಟೋ ಕ್ಲಿಕ್ಕಿಸಿಕೊಳ್ಳುವ ಐಲು ಬಂದಿದೆ. ಹೆಂಗಳೆಯರಿಗೆ ಸವಾಲು ಎಂಬಂತೆ ನೀವಾ ನಾವಾ ಎಂದು ವಿವಿಧ ಭಂಗಿಗಳಲ್ಲಿ ಫೋಟೋ ಶೂಟು, ನಗು, ಹರಟೆ, ಮೋಜು, ಮಸ್ತಿ ಎಲ್ಲ ಇದೆ.

ಕಿಟಿ ಮುಗಿದು ಮನೆಗೆ ಬಂದ ಮೇಲೆ ಎದುರಿಗೆ ಅಲ್ಲಿ ಗೆದ್ದ ಗೆಳತಿಯರಿಗೆಲ್ಲಾ ಕಂಗ್ರಾಟ್ಸ್ ಹೇಳಿ, ಮನೆಗೆ ಬಂದ ಮೇಲೆ ಹೊಟ್ಟೆಗೆ ಬೆಂಕಿ ಹತ್ತಿದಂತಾಗಿ ರೀ….ರೀ…. ಇನ್ನೆಲ್ಲೋ ಆ ರೇವತಿ ಸಿಕ್ಕಿದ್ರೆ ಮಾತಾಡಿಸ್ಬೇಡಿ…. ಕಿಟೀಲಿ ನಾನೇ ದೊಡ್ಡ ರಾಣಿ ಅನ್ನೋ ತರ ಆಡ್ತಾಳೆ. ಗೆದ್ದಾಗ ಅವಳ ಮುಖದಲ್ಲಿ ಎಂಥ ಜಂಭ ಇತ್ತು ಗೊತ್ತಾ ನಿಮಗೆ. ಇರಲಿ,  ಮಾಡ್ತೀನಿ ಇರಿ ಅವಳಿಗೆ.

ಇನ್ನೊಂದ್ಸಲ ಪ್ರೈಸ್‌ ನನಗೇ ಬರಬೇಕು ಎಂದು ಧುಮುಗುಡುತ್ತಾ ಅಡುಗೆಮನೆಗೆ ಹೋದ ಮೀನಾಕ್ಷಿಯನ್ನು ನೋಡಿ ರಮೇಶ ತನ್ನ ಮಗನಿಗೆ, ನೋಡು ಮಗನೇ, ನಿನ್ನ ಅಮ್ಮ  `ರೇವತಿ ನನ್ನ ಕ್ಲೋಸ್‌ ಫ್ರೆಂಡ್‌. ಅವಳಿಗೆ ನನಗೆ ಮ್ಯಾಚಿಂಗ್‌ ವೇಲ್ ‌ತರಲು ಹೇಳಿದ್ದೀನಿ ಎಂದಿದ್ದಳು ಇತ್ತು ಅವಳು ಗೆದ್ದ ತಕ್ಷಣ ವರಸೇನೆ ಬದಲಾಯ್ತೋ…. ಈ ಹೆಂಗಸರ ಮನಸ್ಸು ಗಳಿಗೆಗೊಮ್ಮೆ ಬದಲಾಗುತ್ತೆ,’ ಎನ್ನುತ್ತಾ ಮಡದಿ ಹೇಳಿದ್ದೆಲ್ಲವನ್ನೂ ಮೊಬೈಲ್ ‌ನೋಡುತ್ತಲೇ ಕೇಳಿಸಿಕೊಂಡು ಒಳಗೊಳಗೆ ನಸುನಕ್ಕು ನಾಳೆ ಬೆಳಗ್ಗೆ ಇನ್ನೇನು ಮಾಡ್ತಾಳೋ ಎಂದು ಅಲ್ಲಿಂದ ಎದ್ದು ಹೋದ.

ಕಿಟಿಯಲ್ಲಿ ತೆಗೆದ ಫೋಟೋಗಳನ್ನು ನೋಡಿ ಯಾರಾದ್ರೂ ಸ್ಟೇಟಸ್‌ ಗೆ ರಿಪ್ಲೈ ಹಾಕಿಲ್ಲ ಅನ್ಕೊಳ್ಳಿ, ಅವರ ಕಥೆ ಮುಗೀತು. ನೋಡ್ರಿ ಅವಳು ಕಿಟಿ ಪಾರ್ಟಿಗೆ ಹೋಗಲ್ವಲ್ಲ ಅದಕ್ಕೆ ಹೊಟ್ಟೆಕಿಚ್ಚು. ಅದ್ಕೆ ನನ್ನ ಸ್ಟೇಟಸ್‌ ನೋಡಿದ್ರೂ ರಿಪ್ಲೈ ಮಾಡಿಲ್ಲ ಎಂದು ಪತಿದೇವನಿಗೆ ದೂರು ಒಂದು ಕಡೆ. ಸ್ಟೇಟಸ್‌ ಹಾಕಿದ್ಮೇಲೇ ಅವರು ರಿಪ್ಲೈ ಕೊಡ್ಲಿಲ್ಲ ಅಂದ್ರೆ ಅವರಿಗೆ ಬೈಗುಳಗಳ ಸುರಿಮಳೆ. ದೂರು ಕೇಳುವ ಸೌಭಾಗ್ಯ ಪತಿದೇವರದ್ದು.

ಹೀಗೆ `ಕಿಟಿ ಪಾರ್ಟಿ’ಯಲ್ಲಿ ಹೆಂಗಸರ ದರ್ಬಾರ್‌. ಗಂಡಸರ ಪೀಕಾಟ, ಸ್ಟೇಟಸ್‌, ಕಿರಿಕ್‌, ಜಲಕ್‌, ತಳಕ್‌ ಸೂಪರ್ರೋ… ಸೂಪರ್‌. ನಮ್ಮ ಹೆಣ್ಣುಮಕ್ಕಳಿಗೆ ತಿಂಗಳಿಗೊಂದು ಔಟಿಂಗ್‌ ಮಸ್ತ್ ಫನ್‌…. ಎಂಜಾಯ್‌.

ಹಿಂದಿನ ದಿನಗಳಲ್ಲಿ ತಿಂಗಳಿಗಲ್ಲ, ವರ್ಷಕ್ಕೊಮ್ಮೆ ಹೊರಗೆ ಹೋದ್ರೆ ಹೆಚ್ಚು. ದಿನವಿಡೀ ಮಕ್ಕಳು, ಮರಿ, ಅತ್ತೆ, ಮಾವ, ಗದ್ದೇಲಿ ನಾಟಿ, ಭತ್ತ ಕುಟ್ಟುವವರು, ಕೊಟ್ಟಿಗೆ ಜನಕ್ಕೆ ಅಡುಗೆ ಬೇಯಿಸುವುದು, ಹಬ್ಬ, ಹರಿದಿನ, ಬಾಣಂತರ, ಹಸಿ ಸೌದೆಯಲ್ಲಿ ಒಲೆ ಊದಿ, ಸೊಪ್ಪು, ಸೆದೆ ಹೊಂದಿಸಿಕೊಂಡು ಅಡುಗೆ ಬೇಯಿಸುವುದರಲ್ಲಿ ತಮ್ಮ ಇಡೀ ಜೀವನ ವಾಸಿಸುತ್ತಾ ಇದ್ರು. ಅದರಲ್ಲಿ ಸಾರ್ಥಕತೆ ಕಂಡುಕೊಳ್ಳುತ್ತಾ ಇದ್ರು. ಆದ್ರೆ ಇಂದು ಹಾಗಲ್ಲ. ಇಂದಿನ ಆಧುನಿಕ ಮಹಿಳೆಯರು ಸಂಘ ಸಂಸ್ಥೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾ, ಗೃಹಿಣಿಯರು ಹೀಗೂ ಎಂಗೇಜ್‌ ಆಗಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅಂದಿನ ಕಾಲ ಮುಗೀತು. ಈಗಿನ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಎಲ್ಲರಿಗೂ ಅನಿವಾರ್ಯ ಹೌದು.

ಕಾಲ, ಸಂದರ್ಭ, ಪರಿಸ್ಥಿತಿ ಎಲ್ಲ ಬದಲಾಗಿದೆ. ಜೊತೆಗೆ ಆಚಾರ, ವಿಚಾರ, ಸಂಪ್ರದಾಯದ ಜೊತೆಗೆ ನಮ್ಮ ಹೆಣ್ಮಕ್ಳು ಇದೊಂದು ದಿನವನ್ನು ತಮ್ಮ ಸ್ನೇಹಿತೆಯರೊಂದಿಗೆ ಎಂಜಾಯ್‌ ಮಾಡ್ತಾರೆ. ಹ್ಯಾಫನ್‌, ಎಂಜಾಯ್‌, ಕಿಟಿ ಕ್ವೀನ್ಸ್…. ಅಲ್ಲ್ಲಾ…. ಕಿಟಿಯ ಕಿರಿಕ್‌ ರಾಣಿಯರೇ ಮಜಾ ಮಾಡಿ…..

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ