ಪ್ರತಿ ಹೆಣ್ಣೂ ತನ್ನ ಕೇಶ ಸೌಂದರ್ಯಕ್ಕಾಗಿ ಸದಾ ಕೂದಲಿನ ಬಗ್ಗೆ ಎಚ್ಚರಿಕೆ ವಹಿಸುತ್ತಾಳೆ. ಇದಕ್ಕಾಗಿ ಅನೇಕ ಉಪಾಯಗಳನ್ನು ಅನುಸರಿಸುತ್ತಾಳೆ. ಎಷ್ಟೋ ಸಲ, ಸೂಕ್ತ ಮಾಹಿತಿಯ ಅಭಾವದ ಕಾರಣ, ತನ್ನ ಕೂದಲಿಗೆ ಬೇಕಿಲ್ಲದ ಕಾಸ್ಮೆಟಿಕ್ಸ್ ಬಳಸಿ, ಅದನ್ನು ಇನ್ನಷ್ಟು ಹಾಳು ಮಾಡಿಕೊಳ್ಳುತ್ತಾಳೆ. ಇದರಿಂದ ಅವಳ ತಲೆಗೆ ಡ್ಯಾಂಡ್ರಫ್‌ ಅಂದ್ರೆ ತಲೆ ಹೊಟ್ಟು ತುಂಬಿಕೊಳ್ಳುತ್ತದೆ. ಇದರಿಂದ ನಿಮ್ಮ ಕೂದಲು ಡ್ರೈ ನಿರ್ಜೀವವಾಗಿ ಅಂದಗೆಡುತ್ತದೆ.

ಇತ್ತೀಚೆಗೆ ಮಾರುಕಟ್ಟೆಯಲ್ಲಿ ತಲೆಹೊಟ್ಟು ಕಡಿಮೆ ಮಾಡುತ್ತೇವೆ ಎನ್ನುವ ನೂರಾರು ಉತ್ಪನ್ನಗಳು ಬಂದಿವೆ. ಆದರೆ ಇವುಗಳಲ್ಲಿನ ಕೆಮಿಕಲ್ಸ್ ಕೂದಲಿಗೆ ಹಾನಿಕಾರಕ ಎಂಬುದನ್ನು ಮರೆಯಬೇಡಿ. ಹೀಗಾಗಿ ನಿಮ್ಮ ಡ್ಯಾಂಡ್ರಫ್‌ ಸಮಸ್ಯೆಯ ನಿವಾರಣೆಗೆಂದೇ ಖ್ಯಾತ ಕೇಶ ತಜ್ಞರು ಇಲ್ಲಿ ನ್ಯಾಚುರಲ್ ಹರ್ಬಲ್ ಬೇಸ್ಡ್ ಹೇರ್‌ ಮಾಸ್ಕ್ ಗಳ ಬಗ್ಗೆ ಸಲಹೆ ನೀಡಿದ್ದಾರೆ, ಇವನ್ನು ನಿಯಮಿತವಾಗಿ ಪಾಲಿಸಿ:

ಮೊಸರು + ಜೇನು + ನಿಂಬೆಯ ಮಾಸ್ಕ್ : ನಿಂಬೆಹಣ್ಣಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿರುವ ಸಿಟ್ರಿಕ್‌ ಆಮ್ಲವಿದ್ದು, ಕೂದಲಿನ Ph ಬ್ಯಾಲೆನ್ಸ್ ಮಾಡಲು ಸಹಕಾರಿ. ಮೊಸರು ಕೂದಲಿನ ಡ್ಯಾಮೇಜ್‌ ಸುಧಾರಿಸಿ, ಕಂಡೀಶನಿಂಗ್‌ ಮಾಡಿದರೆ, ಜೇನು ತಲೆಹೊಟ್ಟಿನ ನಿವಾರಣೆಗೆ ಪೂರಕ.

ಸಾಮಗ್ರಿ : ಅರ್ಧ ಕಪ್‌ ಮೊಸರು, 2 ಚಮಚ ನಿಂಬೆ ರಸ, 1 ದೊಡ್ಡ ಚಮಚ ಜೇನುತುಪ್ಪ.

ವಿಧಾನ :  ಎಲ್ಲವನ್ನೂ ಒಂದು ಬಟ್ಟಲಿಗೆ ಹಾಕಿ ಬೆರೆಸಿಕೊಂಡು, ಚೆನ್ನಾಗಿ ಗೊಟಾಯಿಸಿ. ಇದನ್ನು ತುಸು ಒದ್ದೆ ಮಾಡಿಕೊಂಡು, ಬುಡ ಭಾಗದಿಂದ ಶುರು ಮಾಡಿ ಕೂದಲ ತುದಿವರೆಗೂ ಈ ಮಿಶ್ರಣ ಹಚ್ಚಿರಿ. 30-40 ನಿಮಿಷಗಳ ನಂತರ, ಹರ್ಬಲ್ ಶ್ಯಾಂಪೂ ಬಳಸಿ, ತಲೆಗೂದಲು ತೊಳೆಯಿರಿ. ಹೀಗೆ ವಾರಕ್ಕೆ 2-3 ಸಲ ಮಾಡಿ, ತಲೆ ಹೊಟ್ಟು ನಿವಾರಣೆ ಗ್ಯಾರಂಟಿ!

ಬಾಳೆಹಣ್ಣು + ಜೇನು + ನಿಂಬೆ + ಆಲಿಲ್ ಆಯಿಲ್ ‌: ಬಾಳೆಹಣ್ಣು ಕೂದಲನ್ನು ಮೃದುಗೊಳಿಸಿ, ತಲೆಹೊಟ್ಟು ಇಲ್ಲದಂತೆ ಬ್ಯಾಲೆನ್ಸ್ ಮಾಡುವಲ್ಲಿ ಪೂರಕವಾದರೆ, ಆಲಿಲ್ ‌ಆಯಿಲ್ ‌(ಹಿಪ್ಪೆ ಎಣ್ಣೆ) ಕೂದಲನ್ನು ಕೋಮಲವಾಗಿಸಿ, ಸಶಕ್ತಗೊಳಿಸಬಲ್ಲದು. ನಿಂಬೆ ರಸ ಕೂದಲಿನ Ph ಬ್ಯಾಲೆನ್ಸ್ ಮಾಡಿದರೆ, ಜೇನು ತಲೆಹೊಟ್ಟು ನಿವಾರಣೆಗೆ ಬಲು ಮುಂದು!

ಸಾಮಗ್ರಿ : 2 ಮಾಗಿದ ಬಾಳೆಹಣ್ಣು, 1-1 ದೊಡ್ಡ ಚಮಚ ಜೇನು, ನಿಂಬೆರಸ ಹಾಗೂ ಆಲಿವ್ ಆಯಿಲ್‌.

ವಿಧಾನ : ಮೊದಲು ಒಂದು ಬಟ್ಟಲಿಗೆ ಬಾಳೆಹಣ್ಣನ್ನು ಕಿವುಚಿ ಹಾಕಿಕೊಳ್ಳಿ. ನಂತರ ಇದಕ್ಕೆ ಆಲಿವ್ ಆಯಿಲ್‌, ಜೇನು, ನಿಂಬೆರಸ ಬೆರೆಸಿಕೊಳ್ಳಿ. ಇದನ್ನು ಚೆನ್ನಾಗಿ ಕದಡಿಕೊಂಡು ಮಿಶ್ರಣ ಸಿದ್ಧಪಡಿಸಿ. ಮೇಲೆ ಹೇಳಿದ ಪ್ರಯೋಗದಂತೆಯೇ ಇದನ್ನು ಕೂದಲಿಗೆ ಹಚ್ಚಿ 45 ನಿಮಿಷ ಹಾಗೇ ಬಿಡಿ. ನಂತರ ಮೈಲ್ಡ್ ಹರ್ಬಲ್ ಶ್ಯಾಂಪೂ ಬಳಸಿ, ಬಿಸಿ ನೀರಲ್ಲಿ ತಲೆ ತೊಳೆಯಿರಿ.

ಮೊಟ್ಟೆ + ಮೊಸರು : ಇವೆರಡೂ ನಮ್ಮ ತಲೆಯ ನೆತ್ತಿಗೆ ಉತ್ತಮ ಪೋಷಣೆ ಒದಗಿಸುತ್ತದೆ. ಕೂದಲನ್ನು ಸಶಕ್ತಗೊಳಿಸಿ, ಡ್ಯಾಂಡ್ರಫ್‌ ಸಮಸ್ಯೆ ನೀಗಿಸುತ್ತದೆ.

ಸಾಮಗ್ರಿ : 1 ಮೊಟ್ಟೆ, 2 ದೊಡ್ಡ ಚಮಚ ಆಲಿವ್ ‌ಎಣ್ಣೆ, 1 ಕಪ್‌ ಮೊಸರು, 1 ದೊಡ್ಡ ಚಮಚ ನಿಂಬೆ ರಸ.

ವಿಧಾನ : ಒಂದು ಬಟ್ಟಲಿಗೆ ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಬೀಟ್‌ ಮಾಡಿ. ಇದಕ್ಕೆ ಉಳಿದೆಲ್ಲವನ್ನೂ ಬೆರೆಸಿಕೊಂಡು ಚೆನ್ನಾಗಿ ಗೊಟಾಯಿಸಿ. ಮೇಲಿನ ಪ್ರಯೋಗದಂತೆಯೇ ಇದನ್ನು ತಲೆಗೂದಲಿಗೆ ಹಚ್ಚಿ, 30 ನಿಮಿಷ ಹಾಗೇ ಬಿಡಿ. ನಂತರ ಹರ್ಬಲ್ ಶ್ಯಾಂಪೂ, ಬಿಸಿ ನೀರು ಬಳಸಿ ತಲೆ ತೊಳೆಯಿರಿ. ನೀರು ಉಗುರು ಬೆಚ್ಚಗಿರಬೇಕು, ತುಂಬಾ ಬಿಸಿ ಬೇಡ. ಇಲ್ಲದಿದ್ದರೆ ಅದು ಮೊಟ್ಟೆಯೊಂದಿಗೆ ಬೆರೆತು ಬೇರೇನಾದರೂ ಅವಾಂತರ ಆದೀತು.

ಕೊಬ್ಬರಿ ಎಣ್ಣೆ : ತಲೆಗೂದಲಿಗೆ ಕೊಬ್ಬರಿ ಎಣ್ಣೆ ಅಮೃತ ಸಮಾನ ಎಂದರೆ ಉತ್ಪ್ರೇಕ್ಷೆಯಲ್ಲ. ಇದು ಡ್ಯಾಂಡ್ರಫ್‌ ನಿವಾರಣೆಯಲ್ಲೂ ಎತ್ತಿದ ಕೈ!

ಸಾಮಗ್ರಿ : 3 ದೊಡ್ಡ ಚಮಚ ಕೊಬ್ಬರಿ ಎಣ್ಣೆ, ತುಸು ಆಲಿವ್ ಆಯಿಲ್.

ವಿಧಾನ : ಕೊಬ್ಬರಿ ಎಣ್ಣೆಯನ್ನು ತುಸು ಬಿಸಿ ಮಾಡಿ, ಇದಕ್ಕೆ ಆಲಿವ್ ‌ಎಣ್ಣೆ ಬೆರೆಸಿ ಕದಡಿಕೊಳ್ಳಿ. ಇದನ್ನು ಹಿಂದಿನಂತೆಯೇ ತಲೆಗೂದಲಿಗೆ ಹಚ್ಚಿ, ನೀಟಾಗಿ 10 ನಿಮಿಷ ಮಸಾಜ್‌ ಮಾಡಿ. 40 ನಿಮಿಷ ಹಾಗೇ ಬಿಡಿ. ನಂತರ  ಹರ್ಬಲ್ ಶ್ಯಾಂಪೂ, ತುಸು ಬೆಚ್ಚಗಿನ ನೀರು ಬಳಸಿ ತಲೆ ತೊಳೆಯಿರಿ. ವಾರದಲ್ಲಿ 2-3 ಸಲ ಹೀಗೆ ಮಾಡಿ, ಡ್ಯಾಂಡ್ರಫ್‌ದೂರವಾಗುತ್ತದೆ.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ