ಹಬ್ಬಗಳು ಬಂದಾಗ ಗೃಹಿಣಿಯರು ಸದಾ ಬಿಝಿ ಆಗಿ, ಹಬ್ಬದ ತಯಾರಿಯಲ್ಲೇ ಇದ್ದುಬಿಡುತ್ತಾರೆಯೇ ಹೊರತು, ತಮ್ಮನ್ನು ತಾವು ರೆಡಿ ಮಾಡಿಕೊಂಡು ಹಬ್ಬ ಸಂಭ್ರಮಿಸೋಣ ಎಂಬುದರ ಕಡೆ ಗಮನ ಹರಿಸರು. ಇದಕ್ಕಾಗಿ ಸಿನಿಮಾ ನಟಿಯರಂತೆ ಫುಲ್ ಫೈನ್ ಮೇಕಪ್ ನಲ್ಲಿ ಒಂದು ಕಡೆ ಕುಳಿತುಬಿಡುವುದು ಎಂದು ಅರ್ಥವಲ್ಲ, ಚೇತೋಹಾರಿಯಾಗಿ ಲವಲವಿಕೆಯಿಂದ ಓಡಾಡಲು ನಮ್ಮನ್ನು ನಾವು ತಯಾರಿ ಮಾಡಿಕೊಳ್ಳುವುದು ಎಂದರ್ಥ.
ಅದರಲ್ಲೂ ನವರಾತ್ರಿ ಹಬ್ಬ ಎಂದರೆ 2 ವಾರಗಳ ಓಡಾಟದ ಸಂಭ್ರಮ, ಸಡಗರ ಇದ್ದದ್ದೇ. ಗೊಂಬೆಗಳ ಈ ಹಬ್ಬದಲ್ಲಿ, ಅವನ್ನೆಲ್ಲ ಜೋಡಿಸಿಕೊಂಡು ಹಬ್ಬಕ್ಕೆ ರೆಡಿ ಎಂದು ಹೇಳುವುದಕ್ಕೇ 4-5 ದಿನ ಬೇಕಾಗುತ್ತದೆ. ಇದಕ್ಕೆಲ್ಲ ಅದಮ್ಯ ಶಕ್ತಿ ಬೇಕು. ಈ ಫಿಟ್ ನೆಸ್ ಗಾಗಿ ನಮ್ಮನ್ನು ನಾವು ಸಿದ್ಧರಾಗಿ ಇಟ್ಟುಕೊಳ್ಳುವುದು ಅತಿ ಮುಖ್ಯ.
ಈ ಫಿಟ್ ನೆಸ್ ಗಾಗಿ ಸಹಜವಾಗಿ ಎಲ್ಲರೂ ಜಿಮ್ ಕಡೆ ವಾಲುವುದುಂಟು. ಆದರೆ ಎಲ್ಲರಿಗೂ ಈ ಸದವಕಾಶ ಸಿಗುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ಸಮಯ, ಪುರಸತ್ತು, ಅನುಕೂಲ ಎಲ್ಲವೂ ಇರಬೇಕು. ಹಾಗೆ ಆಗದವರು ಬೇರೆ ಬೇರೆ ವ್ಯಾಯಾಮ, ಯೋಗಾಭ್ಯಾಸ, ವಾಕಿಂಗ್, ಜಾಗಿಂಗ್ ಇತ್ಯಾದಿಗಳಿಂದ ಇದನ್ನು ಸಾಧಿಸಬೇಕು. ಆಗ ಮಾತ್ರ ದೇಹ ಎಲ್ಲ ಕೆಲಸಗಳಿಗೂ ಬಾಗುತ್ತದೆ, ಬಳುಕುತ್ತದೆ, ನಾವು ಹೇಳಿದಂತೆ ಕೇಳುತ್ತದೆ.
ಆಟೋಟ ವ್ಯಾಯಾಮ
ನವರಾತ್ರಿ ಹಬ್ಬ 2 ತಿಂಗಳು ಇದೆ ಎನ್ನುವಾಗಲೇ ಈ ಕುರಿತಾಗಿ ಬೇಕಾದ ಬಾಡಿ ಫಿಟ್ ನೆಸ್ ಗೆ ರೆಡಿ ಮಾಡಿಕೊಳ್ಳುವುದು ಅತ್ಯಗತ್ಯ. ಉತ್ತಮ ವ್ಯಾಯಾಮ, ಯೋಗ, ಎಕ್ಸರ್ ಸೈಜ್ ಗಳಿಂದ ನೀವು ಬಳುಕುವ ಬಳ್ಳಿಯ ಮೈಮಾಟ ಪಡೆದು, ಸಂಗಾತಿಯನ್ನೂ ಅದೇ ರೀತಿ ಸ್ಲಿಮ್ ಟ್ರಿಮ್ ಆಗಿರುವಂತೆ ನೋಡಿಕೊಳ್ಳಿ. ಮಕ್ಕಳಿಗೂ ಈ ಕುರಿತು ಮೊದಲಿನಿಂದಲೇ ಸೂಕ್ಷ್ಮ ಕಲಿಸುವುದು ಲೇಸು. ಇದಕ್ಕಾಗಿ ಬೆಳಗ್ಗೆ ಅಥವಾ ಸಂಜೆ, ಅವರವರ ಸಮಯಾನುಕೂಲಕ್ಕೆ ತಕ್ಕಂತೆ ಹೊರಗಿನ ಓಪನ್‌ಏರಿಯಾದಲ್ಲಿ, ಧಾರಾಳ ಆಮ್ಲಜನಕ ಸೇವಿಸುತ್ತಾ ಲಾಂಗ ವಾಕಿಂಗ್, ಬ್ರಿಸ್ಕ್ ವಾಕ್, ಜಾಗಿಂಗ್, ರನ್ನಿಂಗ್, ಸ್ಕಿಪ್ಪಿಂಗ್ ಇತ್ಯಾದಿ ನಿಯಮಿತವಾಗಿ ಪಾಲಿಸುತ್ತಾ ನಿಮ್ಮ ದೇಹ ದಂಡಿಸಿ. ಹೆಚ್ಚಿನ ಅವಕಾಶವಿದ್ದರೆ ಯೋಗ, ಈಜು, ಜುಂಬಾ ಡ್ಯಾನ್ಸ್ ಇತ್ಯಾದಿ ಇನ್ನೂ ಉತ್ತಮ. ಒಟ್ಟಾರೆ ತಿಂದುಂಡು ಟಿವಿ ನೋಡುತ್ತಾ, ಕೈಯಲ್ಲೊಂದು ಮೊಬೈಲ್ ಹಿಡಿದು ಸದಾ ವಿಡಿಯೋ, ರೀಲ್ಸ್, ಯೂಟ್ಯೂಬ್ ಗೆ ಮೊರೆಹೋಗುವ ಬದಲು ದೈಹಿಕವಾಗಿ ಹೀಗೆ ಚಟುವಟಿಕೆ ರೂಢಿಸಿಕೊಳ್ಳಬೇಕು.
ಹೊರಗಿನ ಕೆಲಸಗಳಿಗೆಂದು ಮನೆಯಿಂದ ಗೇಟ್ ಬಳಿ ಬಂದ ತಕ್ಷಣ, ಗಾಡಿ ತೆಗೆಯಲು ಹೋಗಬೇಡಿ. ಹತ್ತಿರದ ಅಂಗಡಿಗಳು, ಫ್ರೆಂಡ್ಸ್ ಮನೆ, ನಡೆಯಲು ಸ್ವಲ್ಪ ದೂರ ಎನಿಸಿದರೂ ಅಡ್ಡಿಯಿಲ್ಲ, ಕಾಲ್ನಡಿಗೆ ಎಂದೂ ಬಿಟ್ಟುಕೊಡಬೇಡಿ. ಅದೇ ರೀತಿ 3, 4ನೇ ಮಹಡಿ ಇದ್ದಾಗಲೂ ದಿನದಲ್ಲಿ ಕನಿಷ್ಠ 2-3 ಸಲ ಹತ್ತಿ ಇಳಿದು ಮಾಡಬೇಕು. ಅದಕ್ಕಿಂತಲೂ ಹೆಚ್ಚಾಗಿ ಓಡಾಡಬೇಕಾದಾಗ ಮಾತ್ರ ಲಿಫ್ಟ್ ಬಳಸಿಕೊಳ್ಳಿ. ಮೊದಲನೆ ಮಹಡಿಯವರು ಮಾತ್ರ ಲಿಫ್ಟ್ ತಂಟೆಗೆ ಹೋಗುವುದೇ ಬೇಡ!
ಸಮತೋಲನ ಆಹಾರ
ಅದೇ ತರಹ ಬಾಯಿ ಚಪಲಕ್ಕಾಗಿ ಸದಾ ಸರ್ವದಾ ಫಾಸ್ಟ್ ಫುಡ್, ಜಂಕ್ ಫುಡ್ ಗಳಿಗೆ ಮೊರೆಹೋಗಬಾರದು. ಸದಾ ಸ್ಪೈಸಿ ಫುಡ್ ನ ಜಿಹ್ವಾ ಚಾಪಲ್ಯ ಖಂಡಿತಾ ಒಳ್ಳೆಯದಲ್ಲ `ಅತಿಯಾದರೆ ಅಮೃತ ವಿಷ’ ಎಂಬಂತೆ ಯಾವುದನ್ನೂ ಅತಿ ಮಾಡಿಕೊಳ್ಳದೆ, ಎಲ್ಲ ಹಿತಮಿತವಾಗಿರುವಂತೆ ನೋಡಿಕೊಳ್ಳಿ.
ಆದಷ್ಟೂ ಹಬೆಯಲ್ಲಿ ಬೆಂದ ಆಹಾರ, ಸಲಾಡ್, ಹಸಿ ತರಕಾರಿ ಸೇವನೆ, ಆಯಾ ಋತುವಿನಲ್ಲಿ ಸಿಗುವ ಹಣ್ಣು ಹಂಪಲು ಸೇವಿಸಿ. ಈ ರೀತಿ ನಿಮ್ಮ ಆಹಾರದಲ್ಲಿ ಆಗಾಗ ಪ್ರೋಟೀನ್ ರಿಚ್ ಆಗಿರುವ ಮೊಳಕೆಕಾಳು (ಸ್ಪ್ರೌಟ್ಸ್) ಇದ್ದೇ ಇರಬೇಕು. ಮೊಳಕೆ ಕಟ್ಟಿದ ಹೆಸರುಕಾಳನ್ನು ಆದಷ್ಟೂ ಹಸಿಯಾಗಿ ಸೇವಿಸಲು ಯತ್ನಿಸಿ.
ರೆಡ್ ಮೀಟ್ ಗಿಂತ ವೈಟ್ ಮೀಟ್ ಉತ್ತಮ. ಮೊಟ್ಟೆ, ಮಾಂಸ, ಮೀನು, ಹೆವಿ ಫುಡ್ಸ್, ಹುರಿದಕರಿದ ಮಸಾಲೆ ಅತಿಯಾದ ಯಾವ ಪದಾರ್ಥಗಳೇ ಆಗಲಿ, ವಾರಕ್ಕೆ 1-2 ಬಾರಿ ಚಂದವೇ ಹೊರತು ನೆನೆಸಿದಾಗೆಲ್ಲ ಅದನ್ನೇ ಮಾಡಿ ಸೇವಿಸುವುದು ಒಳ್ಳೆಯದಲ್ಲ. ಹೀಗೆ ಪೌಷ್ಟಿಕ ಆಹಾರಕ್ಕೆ ಪ್ರಾಶಸ್ತ್ಯ ಕೊಡಿ.
ಇದರ ಜೊತೆಗೆ ಆಗಾಗ ನೀರು ಸೇವಿಸುತ್ತಿರಬೇಕು ಎಂಬುದನ್ನು ನಿರ್ಲಕ್ಷಿಸಬಾರದು. ಆದಷ್ಟೂ ಎಳನೀರು, ಬಾರ್ಲಿ ನೀರು, ಪಾನಕ, ನೀರು ಮಜ್ಜಿಗೆ ಇತ್ಯಾದಿ ದ್ರವಾಹಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಿ. ನಾವು ದ್ರವಾಹಾರವನ್ನು ಹೆಚ್ಚು ಬಳಸಿದಷ್ಟೂ ಚಯಾಪಚಯ ಕ್ರಿಯೆ (ಮೆಟಬಾಲಿಸಂ) ಹಾಗೂ ಜೀರ್ಣಶಕ್ತಿ ಸುಧಾರಿಸುತ್ತದೆ ಎಂಬುದನ್ನು ನೆನಪಿಡಿ.
ಸದಾ ಕಾಲ ಕುಳಿತೇ ಕೆಲಸ ಮಾಡಬೇಕಾದಂಥ ವ್ಯಕ್ತಿಗಳು ಈ ರೀತಿಯ ಹೆಚ್ಚಿನ ದೈಹಿಕ ಚಟುವಟಿಕೆಗೆ ಆದ್ಯತೆ ಕೊಟ್ಟಾಗ ಮಾತ್ರ ಬಾಡಿ ಉತ್ತಮ ಶೇಪ್ ನಲ್ಲಿರುತ್ತದೆ. ಈ ರೀತಿ ಸಮತೋಲನ ಆಹಾರ ಹಾಗೂ ವ್ಯಾಯಾಮದ ಕಡೆ ಗಮನಕೊಟ್ಟು ಹಬ್ಬಗಳಿಗೆ ಮುಂಚೆ ನೀವು ರೆಡಿ ಆಗುವುದನ್ನು ನೋಡಿ.
ಜಿಮ್ ಸೇರುವುದು ಅನಿವಾರ್ಯವೇ?
ಇದಕ್ಕೆ ಬೆಂಗಳೂರಿನ ಮಧು ಹೇಳುತ್ತಾಳೆ, “ಪ್ರತಿಯೊಬ್ಬ ತರುಣಿಯ ಬಾಡಿ ಶೇಪ್ ಭಿನ್ನವಾಗಿಯೇ ಇರುತ್ತದೆ. ಕೆಲವರಿಗೆ ತಮ್ಮ ಬ್ರೆಸ್ಟ್, ಉಳಿದವರಿಗೆ ಥೈಸ್ ಅಥವಾ ಹಿಪ್ಸ್ ಕಡೆ ಪ್ರಾಬ್ಲಂ ಇದೆ ಎನಿಸುತ್ತದೆ. ಇದಕ್ಕೆ ಪರಿಹಾರ ಹುಡುಕಲು ಕೇವಲ ನಿಯಮಿತ ಡಯೆಟ್, ನಿಯಂತ್ರಿತ ಆಹಾರ, ಕಾಟಾಚಾರದ ವ್ಯಾಯಾಮದಿಂದ ಪ್ರಯೋಜನವಿಲ್ಲ. ಹೀಗಾಗಿ ತಮ್ಮ ಬಾಡಿ ರಿಕ್ವೈರ್ಮೆಂಟ್‌ಪ್ರಕಾರ ಹೆಣ್ಣುಮಕ್ಕಳು ಜಿಮ್ ಆರಿಸಿಕೊಳ್ಳಬೇಕು. ಅಲ್ಲಿ ಲೇಡಿ ಇನ್ ಸ್ಟ್ರಕ್ಟರ್ಸ್ ಇದ್ದಾರೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಡಯೆಟಿಶಿಯನ್ ಸಲಹೆಗಳನ್ನೂ ಅನುಸರಿಸಿ. ನಿಮ್ಮ ದೇಹದ ಪ್ರಭಾವಿತ ಭಾಗಗಳ ಸುಧಾರಣೆಗೆ ಇನ್ ಸ್ಟ್ರಕ್ಟರ್ ನೆರವಾದರೆ, ಅದಕ್ಕಾಗಿ ಬೇಕಾದ ಪೌಷ್ಟಿಕ ಆಹಾರದ ಸಲಹೆ ಸೂಚನೆಗಳನ್ನು ಡಯೆಟಿಶಿಯನ್ ನೀಡುತ್ತಾರೆ.”
ರತ್ನಾ ಬಳಿ ಜಿಮ್ ಗೆ ಹೋಗಲು, ವಿಶೇಷ ವ್ಯಾಯಾಮಕ್ಕಾಗಿ ಹೆಚ್ಚಿನ ಸಮಯ ಇರದ ಕಾರಣ, ಮನೆಯಲ್ಲೇ ಟ್ರೆಡ್ ಮಿಲ್ ಅಳವಡಿಸಿಕೊಂಡಿದ್ದಾಳೆ. ಇದರ ನೆರವಿನಿಂದ ಹೆಚ್ಚಿನ ಲಾಭ ಪಡೆಯುತ್ತಿದ್ದಾಳೆ.
ಪರಿಶ್ರಮದ ಲಾಭ
ಹಬ್ಬಗಳಲ್ಲಿ ಈ ರೀತಿ ಸತತ ದೇಹ ದಂಡನೆ ಮಾಡಿ, ನೀವು ಉತ್ತಮ ಶೇಪ್, ಫಿಗರ್ ಪಡೆಯುವುದರಿಂದ, ಹಬ್ಬಗಳಲ್ಲಿ ಅತಿಥಿಗಳನ್ನು ಆಹ್ವಾನಿಸಿದಾಗ, ಎಲ್ಲರ ನಡುವೆ ಆಕರ್ಷಣೆಯ ಕೇಂದ್ರಬಿಂದುವಾಗಿ ನೀವು ಮಿರಿ ಮಿರಿ ಮಿಂಚುವಿರಿ! ಇದಕ್ಕಾಗಿ 2-3 ತಿಂಗಳ ಹಿಂದಿನಿಂದಲೇ ಸತತ ಪರಿಶ್ರಮ ಅತ್ಯಗತ್ಯ ಎಂಬುದಂತೂ ಸುಳ್ಳಲ್ಲ. ಎಲ್ಲರ ಹೊಗಳಿಕೆ ಸಿಕ್ಕಾಗ, ನಿಮ್ಮ ಶ್ರಮ ಸಾರ್ಥಕ!
– ಕೆ. ರೇವತಿ





