ಹಳೆಯ ಎಲ್ಲಾ ಕಹಿ ನೆನಪುಗಳನ್ನು ಮರೆತು, ಈ ಸಲದ ದೀಪಾವಳಿ ಸದಾ ಸ್ಮರಣೀಯ ಆಗಿರುವಂತೆ ಮಾಡಿ. ನಿಮ್ಮ ಸಂಬಂಧಗಳಲ್ಲಿ ವಿಶ್ವಾಸ ಹೆಚ್ಚಿಸಲು ಪ್ರೀತಿ ವಾತ್ಸಲ್ಯಗಳ ದೀಪ ಬೆಳಗಿಸಬಾರದೇಕೆ……?
“ಬೆಳಕನು ಚೆಲ್ಲಲು ಬಂದೇ ಬಂದಿತು ದೀಪಾವಳಿ…. ಆನಂದ ನೀಡುವ ಹಬ್ಬ…. ಸಂತೋಷ ತುಂಬುವ ಹಬ್ಬ….’ ಸುಶ್ರಾವ್ಯ ಕಂಠದಲ್ಲಿ ಎಲ್ಲರಿಗೂ ಇಷ್ಟವಾಗುವಂತೆ ನವ ವಧು ಅಮೃತಾ ದೀಪಾವಳಿ ಹಬ್ಬದ ಹಾಡನ್ನು ಹಾಡುತ್ತಿದ್ದಂತೆ ಅತ್ತೆ ಮನೆಯವರೆಲ್ಲ ಸಂತಸದಿಂದ ತಲೆದೂಗಿದರು. ಕ್ಷಣ ಮಾತ್ರದಲ್ಲಿ ಎಲ್ಲರ ಕಣ್ತಪ್ಪಿಸಿ, ಹೇಗೋ ಮಾಡಿ, ಅವಳ ಪತಿ ವಿಕ್ರಂ ಅವಳನ್ನು ತನ್ನ ಎದೆಗಾನಿಸಿಕೊಂಡು ಮುದ್ದಿಸಿದ. ಅವಳು ನಾಚಿ ನೀರಾದಳು.
“ನಿನ್ನ ಕಂಠ, ಹಾಡಿನ ಧಾಟಿ…. ವೆರಿ ಬ್ಯೂಟಿಫುಲ್!”
“ಇಂಥ ಒಳ್ಳೆ ಮನೆ ಸೇರಿ, ಅತ್ತೆ ಮನೆಯಲ್ಲಿ ಎಲ್ಲರ ಪ್ರೀತಿ ವಾತ್ಸಲ್ಯ ಪಡೆದಿರುವಾಗ, ಕುಟುಂಬದವರಿಗೆಲ್ಲ ಇಷ್ಟವಾಗುವ ಇಂಥ ಹಾಡು ಸಹಜವಾಗಿಯೇ ಹರಿದು ಬರುತ್ತದಲ್ಲವೇ?” ಇನಿದನಿಯಲ್ಲಿ ಅವಳು ಹೇಳಿದಾಗ ಅವನು ಪರವಶನಾಗಿ ಮತ್ತೆ ಅವಳನ್ನು ಸೆಳೆದುಕೊಂಡನು.
“ಮದುವೆಗೆ ಮುಂಚೆ ಮುಂದಿನ ವೈವಾಹಿಕ ಜೀವನ ಹೇಗೋ ಏನೋ ಎಂದು ಬಹಳ ಹೆದರಿದ್ದೆ. ಅತ್ತೆಮನೆಯಲ್ಲಿ ನಾನು ಹೊಂದಿಕೊಳ್ಳಬಲ್ಲೆನೇ? ಅಲ್ಲಿ ಎಲ್ಲರೂ ನನ್ನನ್ನು ಆದರಿಸುತ್ತಾರೆಯೇ? ಈ ಎಲ್ಲಾ ನನ್ನ ಸಂದೇಹಗಳೂ ಗಾಳಿಗೆ ತೂರಿದವು. ನಿಮ್ಮ ಪ್ರೇಮ, ಎಲ್ಲರ ಪ್ರೀತಿ ವಾತ್ಸಲ್ಯ ನನ್ನನ್ನು ಕಟ್ಟಿಹಾಕಿದೆ…..”
“ನಿನ್ನನ್ನು ಪಡೆದ ನಾನೂ ಅಷ್ಟೇ ಸುಖಿ ಅಮೃತಾ…. ಇವತ್ತು ನಮಗೆ ಮೊದಲ ದೀಪಾವಳಿ. ಇಲ್ಲಿ ಹಣತೆ ಹಚ್ಚಿದ ಮೇಲೆ ನಾಡಿದ್ದು ಬಲಿಪಾಡ್ಯಮಿಯಂದು ನಿನ್ನ ತವರಿಗೆ ಹೋಗೋಣ….. ನಮ್ಮ ಮೊದಲ ದೀಪಾವಳಿಯನ್ನು ಅವರು ಬಹಳ ಎದುರು ನೋಡುತ್ತಿರುತ್ತಾರೆ ಅನಿಸುತ್ತೆ…..” ವಿಕ್ರಂ ಹೇಳಿದಾಗ ಅಮೃತಾ ತಲೆದೂಗಿದಳು.
ಈ ತರಹ ಈ ನೂತನ ವಧೂವರರ ಮೊದಲ ದೀಪಾವಳಿ ಎರಡೂ ಮನೆಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. ಇದು ಅವರ ಮರೆಯದ ದೀಪಾವಳಿ ಆಯಿತು. ನೀವು ಸಹ ನಿಮ್ಮ ಮನೆಯಲ್ಲಿ ಪ್ರತಿ ವರ್ಷದ ದೀಪಾವಳಿಯನ್ನು ಹೀಗೆ ಸ್ಮರಣೀಯ ಆಗಿಸಬಹುದು. ಇದಕ್ಕಾಗಿ ಸಂಗಾತಿಗಳು ಪರಸ್ಪರ ಚೆನ್ನಾಗಿ ಅರಿತುಕೊಂಡು, ಒಬ್ಬರಿಗೊಬ್ಬರು ಸದಾ ಜೊತೆಯಾಗಿ ಸಪೋರ್ಟ್ ಮಾಡುತ್ತಾ, ಸಮಯ ಸಂದರ್ಭಗಳಲ್ಲಿ ಹೆಗಲಿಗೆ ಹಿಗಲು ನೀಡಿ ಜೀವನ ಮುನ್ನಡೆಸಬೇಕು. ನೀವು ಪರಸ್ಪರರ ವ್ಯವಹಾರಗಳನ್ನು ಗೌರವಾದರಗಳಿಂದ ಮನಃಪೂರ್ವಕವಾಗಿ ಪ್ರಶಂಸಿಸಿದಾಗ ಮಾತ್ರ, ಇಂಥ ಹಬ್ಬಗಳಿಗೆ ಒಂದು ಅರ್ಥ ಬಂದೀತು. ಇಲ್ಲದಿದ್ದರೆ ಎಲ್ಲ ಯಾಂತ್ರಿಕವಾಗಿ ಹೋಗುತ್ತದೆ.
ಪರಸ್ಪರರಿಗೆ ಗೌರವಾದರ
ಯಾವ ವಯಸ್ಸಿನ ದಂಪತಿಗಳೇ ಇರಲಿ, ಪರಸ್ಪರರಲ್ಲಿ ವಿಶ್ವಾಸ, ಪ್ರೀತಿ ಪ್ರೇಮ, ಗೌರವಾದರ, ಕೇರಿಂಗ್ ನೇಚರ್ ಇದ್ದರೆ ಎಂಥ ಕಷ್ಟ ಬಂದರೂ ಗೆಲ್ಲಬಹುದಾಗಿದೆ. ಆಗ ಮಾತ್ರವೇ ನಿಜ ಅರ್ಥದಲ್ಲಿ ದಾಂಪತ್ಯ ಅತಿ ಸುಂದರ ಹಾಗೂ ಸಶಕ್ತ ಎನಿಸಲು ಸಾಧ್ಯ. ನೀವು ನಿಮ್ಮ ಸಂಗಾತಿಗೆ ಮನಃಪೂರ್ವಕವಾಗಿ ಗೌರವಾದರ ಕೊಟ್ಟಾಗ ಮಾತ್ರ ನೀವು ಅದನ್ನು ಹಿಂಪಡೆಯಲು ಸಾಧ್ಯ.
ಆದರೆ…. ಈ ಎಲ್ಲಾ ಅಂಶಗಳೂ ಕೇವಲ ಒನ್ ವೇ ಟ್ರಾಫಿಕ್ ಆಗಿಹೋದರೆ, ಆಗ ಸಂಬಂಧ ಬಲು ಟೊಳ್ಳು ಎನಿಸುತ್ತದೆ, ಕಾಟಾಚಾರಕ್ಕೆ ನಿಭಾಯಿಸುತ್ತಿರುವಂತೆ ತೋರುತ್ತದೆ. ಅದು ಪತಿ ಪತ್ನಿ, ಪ್ರೇಮಿಗಳು, ಒಡಹುಟ್ಟಿದವರು, ಬೀಗರು, ರಕ್ತಸಂಬಂಧವಲ್ಲದ ಇತರ ನಿಕಟವರ್ತಿಗಳು…. ಯಾರೇ ಆಗಲಿ, ಎಲ್ಲರಿಗೂ ಇದು ಅನ್ವಯಿಸುತ್ತದೆ. `ನಿನಗಾಗಿ ನಾವಿದ್ದೇವೆ,’ ಎಂಬ ಭಾವ ಮೂಡಿಸಿದಾಗ ಮಾತ್ರ ಯಾವುದೇ ನಂಟಿನಲ್ಲಿ ಪ್ರೀತಿ ವಾತ್ಸಲ್ಯದ ಅಂಟು ಉಳಿಯಲು ಸಾಧ್ಯ. ಅದರಲ್ಲೂ ದಾಂಪತ್ಯದಲ್ಲಿ ಇದು ಹೆಚ್ಚಿನ ಆಳವಾದ ಪ್ರೀತಿ ಪ್ರೇಮ, ಅನುರಾಗ, ವಿಶ್ವಾಸ, ನಂಬಿಕೆಗಳ ಬೆಸುಗೆಗೆ ನಾಂದಿ ಹಾಡುತ್ತದೆ.
ಹಬ್ಬಗಳು ಇರುವುದೇ ಹೆಚ್ಚಿನ ಸಂತೋಷ ಮೂಡಿಸಲು ಹಾಗೂ ಹತ್ತಿರದ ಸಂಬಂಧಗಳನ್ನು ಇನ್ನಷ್ಟು ನಿಕಟ ತರಲು. ಅದರಲ್ಲೂ ದೀಪಾವಳಿಯಂತೂ ಎಲ್ಲೆಲ್ಲೂ ಬೆಳಕನ್ನು ಚೆಲ್ಲಿ, ಕತ್ತಲನ್ನು ದೂರ ಮಾಡಿ, ಎಲ್ಲರ ಮನ ಮನೆಗಳಲ್ಲಿ ಜ್ಯೋತಿಯ ಕೀರ್ತಿ ತುಂಬುವಂಥದ್ದು. ಈ ಸಂದಂರ್ಭದಲ್ಲಿ ನೀವು ನಿಮ್ಮ ಸಂಗಾತಿಯ ಹಾಗೂ ನಿಕಟವರ್ತಿಗಳ ಮನ ಗೆದ್ದು, ನಿಮ್ಮ ಸಂಬಂಧ ಎಂಥ ಅಮೂಲ್ಯ ಎಂದು ತೋರಿಸಿಕೊಳ್ಳಿ.
ಸಂಗಾತಿಯನ್ನು ಸಪೋರ್ಟ್ ಮಾಡಿ
ನೀವು ನಿಮ್ಮ ಸಂಗಾತಿ ಮಾಡಿದಂಥ ಯಾವುದೇ ಸಣ್ಣ ಕೆಲಸಕಾರ್ಯ, ವ್ಯವಹಾರ, ಅವರ ಪ್ರಯಾಸಗಳನ್ನು ತೆರೆದ ಮನದಿಂದ ಸಪೋರ್ಟ್ ಮಾಡಿದ್ದೇ ಆದರೆ, ಇದರಿಂದ ನಿಮ್ಮಿಬ್ಬರ ಸಂಬಂಧ ಮತ್ತಷ್ಟು ಪರಿಪಕ್ವವಾಗುತ್ತದೆ. ಆಗ ಪರಸ್ಪರರಿಗೆ, ತಾವು ಸಂಗಾತಿಯ ಖುಷಿಗಾಗಿ ಏನು ಮಾಡಲಿಕ್ಕೂ ರೆಡಿ ಎಂಬ ಭಾವ ಮೂಡಿ, ನಿಮ್ಮ ಪ್ರಯತ್ನಗಳಿಗೆ ಅವರಿಂದ ಅಷ್ಟೇ ಪ್ರಾಮುಖ್ಯತೆ ಸಿಗುತ್ತದೆ ಎನಿಸಿ ಜೀವಕ್ಕೆ ಹಾಯೆನಿಸುತ್ತದೆ. ಇದು ನಿಮ್ಮಿಬ್ಬರ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ಇದರ ಬದಲು ನೀವು ಸಂಗಾತಿಯನ್ನು ನಿರ್ಲಕ್ಷಿಸಿದರೆ, ಅವರ ಪ್ರತಿ ಕೆಲಸದಲ್ಲೂ ಮೀನಮೇಷ ಎಣಿಸುತ್ತಾ ಹೀಗಲ್ಲ…. ಹಾಗೇ ಎನ್ನುತ್ತಾ ಆಕ್ಷೇಪಿಸುತ್ತಿದ್ದರೆ, ಅಗತ್ಯವಾಗಿ ಅವರ ಮನದಲ್ಲೂ ಅಂಥದೇ ಭಾವಗಳು ಪುಟಿದೇಳ ತೊಡಗುತ್ತವೆ. ಇಬ್ಬರ ಸಂಬಂಧದಲ್ಲಿನ ಮಾಧುರ್ಯ ಕ್ರಮೇಣ ಹಾಳಾಗುತ್ತದೆ.
ಸಾಮಾನ್ಯವಾಗಿ 30+ ಹೆಂಗಸರು ಸದಾ ಹೇಳುವುದೆಂದರೆ, ಸಂಗಾತಿ ತನ್ನಲ್ಲಿ ಹಿಂದಿನ ಪ್ರೀತಿ ಪ್ರೇಮ ತೋರುತ್ತಿಲ್ಲ ಅಂತ. ನಿಮಗೂ ಇಂಥದ್ದೇ ಅನುಭವ ಆಗಿದ್ದರೆ ಇದರ ಕಾರಣವೇನೆಂದು ಬುಡದವರೆಗೂ ಶೋಧಿಸಿರಿ. ಕೊನೆಯ ಸಲ ನೀವು ಯಾವಾಗ ಅವರ ಬೆಂಬಲ ನೀಡಿ, ಅವರ ಕೆಲಸಗಳನ್ನು ಪ್ರಶಂಸಿಸಿದ್ದೀರಿ ಎಂದು ನೆನಪಿಸಿಕೊಳ್ಳಿ. ನೀವು ಯಾರ ಕುರಿತಾಗಿ ಪ್ರಶಂಸೆ ಮಾಡುತ್ತೀರೋ, ಅವರು ಮಾಡಿದ ಕೆಲಸಗಳನ್ನು ಮೆಚ್ಚಿಕೊಳ್ಳುತ್ತೀರೋ, ಆ ವ್ಯಕ್ತಿ ಹೆಚ್ಚು ಸಂತೋಷ ಪಡುತ್ತಾರೆ ಎಂಬುದು ಖಂಡಿತಾ ನಿಮ್ಮ ಗಮನಕ್ಕೆ ಬಂದಿರುತ್ತದೆ. ಹಾಗಿರುವಾಗ ಮನೆಯಲ್ಲೇ ನಿಮ್ಮ ಜೊತೆಗಿರುವ ನಿಮ್ಮ ಸಂಗಾತಿಯತ್ತ ಇಂಥ ಭಾವನೆಯನ್ನು ಧಾರಾಳವಾಗಿ ಹಂಚಿಕೊಳ್ಳಬಾರದೇಕೆ? ಮುಖ್ಯವಾಗಿ ಇಂಥ ಹಬ್ಬಗಳ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪ್ರೇಮ ವ್ಯಕ್ತಪಡಿಸಲು ಜಿಪುಣತನ ಬೇಡ, ಅದು ಹೆಚ್ಚು ಹೆಚ್ಚಾಗಿ ಉಕ್ಕಿ ಹರಿಯಲಿ.
ಕೆರಿಯರ್ ಇರಲಿ, ಮನೆ ಅಥವಾ ಹೊರಗಿನ ಯಾವುದೇ ಕ್ಷೇತ್ರವಿರಲಿ, ನಿಮ್ಮ ಸಂಗಾತಿ ಉತ್ತಮ ಕೆಲಸ ಮಾಡಿದಾಗೆಲ್ಲ, ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿ. ಹೊಸ ಡ್ರೆಸ್, ಹೊಸ ಹೇರ್ ಸ್ಟೈಲ್ ನಲ್ಲಿ ಆಕರ್ಷಕವಾಗಿ ಕಾಣಿಸುತ್ತಿದ್ದರೆ ಮನಸಾರೆ ಹೊಗಳಲು ಹಿಂಜರಿಯದಿರಿ. ಅವರು ನಿಮಗಾಗಿ ಏನಾದರೂ ವಿಶೇಷ ಸಹಾಯ ಮಾಡಿದಾಗ, ಪ್ರೀತಿಯಿಂದ ಥ್ಯಾಂಕ್ಸ್ ಹೇಳಲು ಮರೆಯದಿರಿ. ಇಂಥ ಹಬ್ಬಗಳು ದಂಪತಿಗಳ ರೊಮಾನ್ಸ್ ಹೆಚ್ಚಿಸಲೆಂದೇ ಇವೆ, ಇದರ ಲಾಭ ಪಡೆಯಿರಿ.
ಸಂಗಾತಿ ಏನೇ ಸಣ್ಣಪುಟ್ಟ ಸಹಾಯ ಮಾಡಿರಲಿ, ಅದು ಮನೆಗೆಲಸ, ಗೃಹಾಲಂಕಾರ, ಮನೆ ಮಂದಿಗಾಗಿ ಶಾಪಿಂಗ್….. ಇತ್ಯಾದಿ ಏನೇ ಇರಲಿ, ಅವರ ಪ್ರಯಾಸಗಳಿಗೆ ಸಪೋರ್ಟ್ ಮಾಡಿ, ಅಭಿನಂದಿಸಿ. ಇದರಿಂದ ನಿಮ್ಮಿಬ್ಬರ ಮಧ್ಯೆ ಆಕಸ್ಮಿಕವಾಗಿ ಮೂಡಿರಬಹುದಾದ ಸಣ್ಣಪುಟ್ಟ ಅಭಿಪ್ರಾಯ ಭೇದಗಳು ದೂರಾಗಿ ಹೋಗುತ್ತವೆ, ಬಾಂಧವ್ಯ ಗಟ್ಟಿಯಾಗುತ್ತದೆ.
ಸಂಭ್ರಮಾಚರಣೆಗಳ ವಿಡಿಯೋ
33 ವರ್ಷದ ಬೆಂಗಳೂರಿನ ನೀತಾ ಹೇಳುತ್ತಾರೆ, “ಈ ಸಲದ ದೀಪಾವಳಿಗೆ ನಮ್ಮ ಮದುವೆ ಆಗಿ 10 ವರ್ಷ ತುಂಬುತ್ತದೆ. ನನ್ನ ಪತಿ ಅನಿಕೇತ್ ಹಬ್ಬದ ದಿನ ನನಗಾಗಿ ಒಂದು ಪ್ರೀತಿಯ ಗಿಫ್ಟ್ ಕೊಟ್ಟರು. ನಮ್ಮಿಬ್ಬರ ಬರ್ತ್ ಡೇ ಪಾರ್ಟಿ, ವೆಡ್ಡಿಂಗ್ ಆ್ಯನಿವರ್ಸರಿಯ ಪಾರ್ಟಿಗಳ ಪ್ರತಿಯೊಂದು ದೃಶ್ಯ ವಿಡಿಯೋ ಮಾಡಿಸಿದ್ದರು. ಅದನ್ನು ಕೊಲ್ಯಾಜ್ ಮಾಡಿಸಿ ಪರ್ಫೆಕ್ಟ್ ಆಗಿಸಿದ್ದರು. ಅದನ್ನು ನೋಡಿ ನಿಜಕ್ಕೂ ನಾನು ಬೆರಗಾಗಿಹೋದೆ! ಎಷ್ಟೊಂದು ಮಧುರ ಅನುಭೂತಿಗಳ ಸಂಗಮವದು! ದೀಪಾಳಿಯ ಹಬ್ಬದ ಹಿನ್ನೆಲೆಯಲ್ಲಿ ನಮ್ಮಿಬ್ಬರ ಮಧುರ ಮೈತ್ರಿಯ ನೆನಪಿನ ಕಾಣಿಕೆ ನೀಡಬೇಕೆಂಬ ಅವರ ಐಡಿಯಾ ನನಗೆ ಬಹಳ ಹೊಸದಾಗಿ ಕಾಣಿಸಿತು, ತುಂಬಾ ಇಷ್ಟವಾಯ್ತು! ಇದರಿಂದಾಗಿ ಅವರ ಬಗ್ಗೆ ನನ್ನ ಮನದಲ್ಲಿದ್ದ ಪ್ರೀತಿ, ಗೌರವಾದರಗಳು ಇಮ್ಮಡಿಸಿದವು. ಸಂಬಂಧಗಳ ಸರಿಯಾದ ಮೌಲ್ಯವರಿತ ಸಂಗಾತಿ ನನಗೆ ಸಿಕ್ಕಿದ್ದು ನನ್ನ ಪುಣ್ಯ.”
ನೀವು ಸಹ ಇದೇ ರೀತಿ ನಿಮ್ಮ ಬ್ಯೂಟಿಫುಲ್ ಲವ್ ಸ್ಟೋರಿ ಅಥವಾ ಇಲ್ಲಿಯವರೆಗಿನ ನಿಮ್ಮಿಬ್ಬರ ಬಾಳಪಯಣದ ಇಂಥ ಮೈಲಿಗಲ್ಲಿನ ಸಮಾರಂಭಗಳ ವಿಡಿಯೋ ಮಾಡಿಸಲು ಮರೆಯಬೇಡಿ. ಇದಕ್ಕಾಗಿ ನೀವು ಫೋಟೋ ವಿಡಿಯೋ ಮಾಡಿ, ಹಿನ್ನೆಲೆಗಾಗಿ ನಿಮ್ಮಿಬ್ಬರ ಅಚ್ಚುಮೆಚ್ಚಿನ ಚಿತ್ರಗೀತೆಗಳನ್ನು ಆಯ್ದುಕೊಳ್ಳಿ. ಇದಕ್ಕಾಗಿ ಹೆಚ್ಚಿನ ಸ್ಪೆಷಲ್ ಎಫೆಕ್ಟ್ಸ್ ಬಳಸಿಕೊಂಡರೆ, ಇನ್ನೂ ಸೊಗಸು. ಇದಕ್ಕಾಗಿ ನಿಮ್ಮ ಆಪ್ತ ಫ್ರೆಂಡ್ಸ್ ನೆರವು ಪಡೆಯಿರಿ. ಇದರಿಂದ ನಿಮ್ಮ ಸಂಗಾತಿ ಸಂತಸ ಪಡುವುದನ್ನು ನೋಡಿ ನಲಿಯಿರಿ.
ಪರ್ಸನಲೈಸ್ಡ್ ಗಿಫ್ಟ್
ಈ ಸಲದ ದೀಪಾವಳಿಗೆ ನೀವು ನಿಮ್ಮ ಸಂಗಾತಿಗೆ ಖಂಡಿತಾ ಕೆಲವೊಂದು ಪರ್ಸನಲೈಸ್ಡ್ ಗಿಫ್ಟ್ ಕೊಡಿ. ಅದು ಸಿಂಪಲ್ ಕಾಫಿ ಮಗ್, ಕುಶನ್, ಫೋಟೋ ಲ್ಯಾಂಪ್, ಹೆಸರುಳ್ಳ ಪೆಂಡೆಂಟ್, ಟ್ರಾವೆಲ್ ವಾಲೆಟ್ ನಿಂದ ಹಿಡಿದು ಡೈರಿ, ಮೊಬೈಲ್ ಕೇಸ್, ಡೈಮಂಡ್ ನೆಕ್ಲೇಸ್…. ಏನಾದರೂ ಆಗಿರಬಹುದು. ಅದರ ಮೇಲೆ ನಿಮ್ಮಿಬ್ಬರ ಮೆಚ್ಚಿನ ಕೆಲವು ಪ್ರೀತಿ ಮಾತುಗಳು (ನಿಮ್ಮಿಬ್ಬರಿಗೆ ಮಾತ್ರ ಗೊತ್ತಾಗುವಂಥದ್ದು) ಇರಲಿ. ಇದನ್ನು ಸಂಗಾತಿ ಖಂಡಿತಾ ತಮ್ಮ ಜೀವನವಿಡೀ ರಕ್ಷಿಸಿಡುತ್ತಾರೆ.
ಹ್ಯಾಂಡ್ ಮೇಡ್ ಕಾರ್ಡ್ಸ್
ನೀವು ನಿಮ್ಮ ಸಂಗಾತಿಗಾಗಿ ಹ್ಯಾಂಡ್ ಮೇಡ್ ಗ್ರೀಟಿಂಗ್ ಕಾರ್ಡ್ಸ್ ಸಹ ರೆಡಿ ಮಾಡಿ ಗಿಫ್ಟ್ ಕೊಡಬಹುದು. ಇದು ಅವರ ಕುರಿತಾಗಿ ನಿಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸುವುದಲ್ಲದೆ, ನಿಮ್ಮ ಕ್ರಿಯೇಟಿವಿಟಿ ಅವರನ್ನು ದಂಗುಬಡಿಸುತ್ತದೆ. ನಿಮ್ಮಿಬ್ಬರಿಗೂ ಇಷ್ಟವಾಗುವಂಥ ಅಚ್ಚುಕಟ್ಟಾದ ಡಿಸೈನ್ ಬಿಡಿಸಿ, ಅದರಲ್ಲಿ ಪ್ರೀತಿ ಪ್ರೇಮದ ಆಳವಾದ ನುಡಿಗಳನ್ನು ಬರೆದಿಡಿ. ಇತ್ತೀಚೆಗೆ ಇಂಟರ್ ನೆಟ್ ನಲ್ಲಿ ಬಹಳಷ್ಟು ಹ್ಯಾಂಡ್ ಮೇಡ್‌ಗಿಫ್ಟ್ ಐಡಿಯಾಸ್ ಲಭ್ಯವಿವೆ. ಇದನ್ನು ಫಾಲೋ ಮಾಡಲು ಅತಿ ಪ್ರತಿಭೆಯ ಅಗತ್ಯವೇನೂ ಇಲ್ಲ. ಆದರೆ ಈ ಕಾರ್ಡ್ಸ್ ನಿಮ್ಮಿಬ್ಬರನ್ನೂ ಮತ್ತಷ್ಟು ಹತ್ತಿರ ತರಲಿವೆ!
ಸದಾ ಜೊತೆ ಜೊತೆಯಲಿ
ದೀಪಾವಳಿ ಸಂದರ್ಭದಲ್ಲಿ ನೀವು ನಿಮ್ಮ ಸಂಗಾತಿಯನ್ನು ಸ್ಪೆಷಲ್ ಫೀಲ್ ಗೆ ಒಳಪಡಿಸ ಬಯಸಿದರೆ, ಇದಕ್ಕಾಗಿ ಅವರಿಗೆ ನಿಮ್ಮ ಸಂಪೂರ್ಣ ಟೈಂ ನೀಡಿ! ಇದಕ್ಕಿಂತ ಮಿಗಿಲಾದ ಗಿಫ್ಟೇ ಇಲ್ಲ! ಇಬ್ಬರೂ ಈ ಸಂದರ್ಭದಲ್ಲಿ ಸಿಕ್ಕಿದ ರಜೆಯನ್ನು ಒಟ್ಟೊಟ್ಟಿಗೆ ಹಾಯಾಗಿ ಬಳಸಿಕೊಳ್ಳಿ….. ಎಲ್ಲಾ ಓದುಗರಿಗೂ ಗೃಹಶೋಭಾ ವತಿಯಿಂದ ದೀಪಾವಳಿಯ ಹಾರ್ದಿಕ ಶುಭಾಶಯಗಳು!
– ಪ್ರತಿನಿಧಿ
ಸಂಗಾತಿಗಾಗಿ ಕೆಲವು ಪಂಕ್ತಿಗಳು
ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಎಲ್ಲೆಲ್ಲೂ ಬೆಳಕಿನ ಕಾಂತಿ ಹರಡಿರುವಾಗ, ನಿಮ್ಮ ಹೃದಯ ಸಂಗಾತಿಗಾಗಿ ರೊಮ್ಯಾಂಟಿಕ್ ಆಗಿ ಮಿಡಿಯ ತೊಡಗಿದಾಗ, ತಡ ಮಾಡದೆ ನಿಮ್ಮ ಮನದಾಳದ ಮಾತುಗಳನ್ನು ಹೀಗೆ ಶಬ್ದಗಳಲ್ಲಿ ಬರೆದಿಡಿ. ಸಂಗಾತಿಯಿಂದ ನಿಮ್ಮ ಬದುಕು ಹೇಗೆ ಬಂಗಾರವಾಯಿತು ಎಂದು ವರ್ಣಿಸುವ ಮಾತುಗಳನ್ನು ಅಗತ್ಯ ಸೇರಿಸಿ.
“ನನ್ನ ಜೀವನದಲ್ಲಿ ನೀವು ಬರದಿದ್ದರೆ, ಈ ಕಾಂತಿಗೆ ಅರ್ಥವೇ ಇಲ್ಲ? ನೀವು ಬಂದೆ…. ನನ್ನ ಮನದೇ ನಿಂದೆ!’
`ನಿನ್ನಿಂದಲೇ ನನ್ನ ಬದುಕಿಗೊಂದು ಅರ್ಥ ಬಂದಿದೆ. ನೀನೇ ನನ್ನ ಪ್ರೀತಿ ಪ್ರೇಮದ ಪ್ರತೀಕ! ಈ ನನ್ನ ಕಂಗಳ ಭಾವನೆ ನಿನಗೆ ತಿಳಿದಿರಬೇಕಲ್ಲವೇ ಡಿಯರ್?’
`ನನಗಾಗಿ ನೀವು ಮಾಡಿದ ತ್ಯಾಗ ಅಷ್ಟಿಷ್ಟಲ್ಲ….. ಇನ್ನು ಮುಂದೆ ನನ್ನ ಉಸಿರಿನ ಒಂದೊಂದು ಶ್ವಾಸ ನಿನಗಾಗಿಯೇ!’
`ನನ್ನ ಕಂಗಳ ಕಂಬನಿಯನ್ನು ನೀನು ಮಂದಹಾಸವಾಗಿ ಬದಲಿಸಿದೆ. ನನ್ನ ಬಾಳೆಂಬ ಅಮಾವಾಸ್ಯೆಯಲ್ಲಿ ನೀನು ಬೆಳಕಾಗಿ ಮೂಡಿರುವೆ!’
ಇಂಥದೇ ನೂರಾರು ಬಗೆಯ ಮಾತುಗಳನ್ನು ಇಬ್ಬರೂ ಪರಸ್ಪರ ಸಂಗಾತಿಗಾಗಿ ಸಮರ್ಪಿಸಿ. ನಿಮ್ಮ ಸಂಗಾತಿಗಾಗಿ ಕೇವಲ ಕಾರ್ಡ್ ನಲ್ಲಿ ಈ ಮಾತು ಬರೆಯುವುದಲ್ಲದೆ, ನಿಮ್ಮ ಮನದಾಳದ ಪ್ರೀತಿ ಪ್ರೇಮವನ್ನು ದೊಡ್ಡ ಪತ್ರವಾಗಿಯೂ ಬರೆದು ಕೊಡಬಹುದು. ಸಂಗಾತಿ ನಿಮ್ಮ ಬದುಕಲ್ಲಿ ಎಷ್ಟು ಮುಖ್ಯ ಎಂದು ವಿವರಿಸಲು ಮರೆಯದಿರಿ. ನಿಮ್ಮಿಬ್ಬರ ಈ ಪ್ರೀತಿ ಪ್ರೇಮ ಇಡೀ ಭವಿಷ್ಯದ ಬೆಳಕಾಗಲಿದೆ ಎಂಬ ಅನುಭೂತಿಯನ್ನು ಇಬ್ಬರೂ ಆಸ್ವಾದಿಸಿ!
ಹೊಗಳಿಕೆಯ ಇಂಥ ಕೆಲವೇ ನುಡಿಮುತ್ತುಗಳು ಎಂಥ ಚಮತ್ಕಾರ ಮಾಡಬಲ್ಲವು ಎಂದರೆ, ಇದರ ಮುಂದೆ ಅತಿ ದುಬಾರಿ ಗಿಫ್ಟ್ ಖಂಡಿತಾ ಕೆಲಸಕ್ಕೆ ಬಾರದು. ನಿಮ್ಮ ಪತ್ರದ ಜೊತೆ ಗುಲಾಬಿ ದಳ, ಸಂಗಾತಿ ಬಯಸುವಂಥ ಚಾಕಲೇಟ್ ಸಹ ಇರಲಿ!