ಹಳೆಯ ಎಲ್ಲಾ ಕಹಿ ನೆನಪುಗಳನ್ನು ಮರೆತು, ಈ ಸಲದ ದೀಪಾವಳಿ ಸದಾ ಸ್ಮರಣೀಯ ಆಗಿರುವಂತೆ ಮಾಡಿ. ನಿಮ್ಮ ಸಂಬಂಧಗಳಲ್ಲಿ ವಿಶ್ವಾಸ ಹೆಚ್ಚಿಸಲು ಪ್ರೀತಿ ವಾತ್ಸಲ್ಯಗಳ ದೀಪ ಬೆಳಗಿಸಬಾರದೇಕೆ......?
``ಬೆಳಕನು ಚೆಲ್ಲಲು ಬಂದೇ ಬಂದಿತು ದೀಪಾವಳಿ.... ಆನಂದ ನೀಡುವ ಹಬ್ಬ.... ಸಂತೋಷ ತುಂಬುವ ಹಬ್ಬ....' ಸುಶ್ರಾವ್ಯ ಕಂಠದಲ್ಲಿ ಎಲ್ಲರಿಗೂ ಇಷ್ಟವಾಗುವಂತೆ ನವ ವಧು ಅಮೃತಾ ದೀಪಾವಳಿ ಹಬ್ಬದ ಹಾಡನ್ನು ಹಾಡುತ್ತಿದ್ದಂತೆ ಅತ್ತೆ ಮನೆಯವರೆಲ್ಲ ಸಂತಸದಿಂದ ತಲೆದೂಗಿದರು. ಕ್ಷಣ ಮಾತ್ರದಲ್ಲಿ ಎಲ್ಲರ ಕಣ್ತಪ್ಪಿಸಿ, ಹೇಗೋ ಮಾಡಿ, ಅವಳ ಪತಿ ವಿಕ್ರಂ ಅವಳನ್ನು ತನ್ನ ಎದೆಗಾನಿಸಿಕೊಂಡು ಮುದ್ದಿಸಿದ. ಅವಳು ನಾಚಿ ನೀರಾದಳು.
``ನಿನ್ನ ಕಂಠ, ಹಾಡಿನ ಧಾಟಿ.... ವೆರಿ ಬ್ಯೂಟಿಫುಲ್!''
``ಇಂಥ ಒಳ್ಳೆ ಮನೆ ಸೇರಿ, ಅತ್ತೆ ಮನೆಯಲ್ಲಿ ಎಲ್ಲರ ಪ್ರೀತಿ ವಾತ್ಸಲ್ಯ ಪಡೆದಿರುವಾಗ, ಕುಟುಂಬದವರಿಗೆಲ್ಲ ಇಷ್ಟವಾಗುವ ಇಂಥ ಹಾಡು ಸಹಜವಾಗಿಯೇ ಹರಿದು ಬರುತ್ತದಲ್ಲವೇ?'' ಇನಿದನಿಯಲ್ಲಿ ಅವಳು ಹೇಳಿದಾಗ ಅವನು ಪರವಶನಾಗಿ ಮತ್ತೆ ಅವಳನ್ನು ಸೆಳೆದುಕೊಂಡನು.
``ಮದುವೆಗೆ ಮುಂಚೆ ಮುಂದಿನ ವೈವಾಹಿಕ ಜೀವನ ಹೇಗೋ ಏನೋ ಎಂದು ಬಹಳ ಹೆದರಿದ್ದೆ. ಅತ್ತೆಮನೆಯಲ್ಲಿ ನಾನು ಹೊಂದಿಕೊಳ್ಳಬಲ್ಲೆನೇ? ಅಲ್ಲಿ ಎಲ್ಲರೂ ನನ್ನನ್ನು ಆದರಿಸುತ್ತಾರೆಯೇ? ಈ ಎಲ್ಲಾ ನನ್ನ ಸಂದೇಹಗಳೂ ಗಾಳಿಗೆ ತೂರಿದವು. ನಿಮ್ಮ ಪ್ರೇಮ, ಎಲ್ಲರ ಪ್ರೀತಿ ವಾತ್ಸಲ್ಯ ನನ್ನನ್ನು ಕಟ್ಟಿಹಾಕಿದೆ.....''
``ನಿನ್ನನ್ನು ಪಡೆದ ನಾನೂ ಅಷ್ಟೇ ಸುಖಿ ಅಮೃತಾ.... ಇವತ್ತು ನಮಗೆ ಮೊದಲ ದೀಪಾವಳಿ. ಇಲ್ಲಿ ಹಣತೆ ಹಚ್ಚಿದ ಮೇಲೆ ನಾಡಿದ್ದು ಬಲಿಪಾಡ್ಯಮಿಯಂದು ನಿನ್ನ ತವರಿಗೆ ಹೋಗೋಣ..... ನಮ್ಮ ಮೊದಲ ದೀಪಾವಳಿಯನ್ನು ಅವರು ಬಹಳ ಎದುರು ನೋಡುತ್ತಿರುತ್ತಾರೆ ಅನಿಸುತ್ತೆ.....'' ವಿಕ್ರಂ ಹೇಳಿದಾಗ ಅಮೃತಾ ತಲೆದೂಗಿದಳು.
ಈ ತರಹ ಈ ನೂತನ ವಧೂವರರ ಮೊದಲ ದೀಪಾವಳಿ ಎರಡೂ ಮನೆಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. ಇದು ಅವರ ಮರೆಯದ ದೀಪಾವಳಿ ಆಯಿತು. ನೀವು ಸಹ ನಿಮ್ಮ ಮನೆಯಲ್ಲಿ ಪ್ರತಿ ವರ್ಷದ ದೀಪಾವಳಿಯನ್ನು ಹೀಗೆ ಸ್ಮರಣೀಯ ಆಗಿಸಬಹುದು. ಇದಕ್ಕಾಗಿ ಸಂಗಾತಿಗಳು ಪರಸ್ಪರ ಚೆನ್ನಾಗಿ ಅರಿತುಕೊಂಡು, ಒಬ್ಬರಿಗೊಬ್ಬರು ಸದಾ ಜೊತೆಯಾಗಿ ಸಪೋರ್ಟ್ ಮಾಡುತ್ತಾ, ಸಮಯ ಸಂದರ್ಭಗಳಲ್ಲಿ ಹೆಗಲಿಗೆ ಹಿಗಲು ನೀಡಿ ಜೀವನ ಮುನ್ನಡೆಸಬೇಕು. ನೀವು ಪರಸ್ಪರರ ವ್ಯವಹಾರಗಳನ್ನು ಗೌರವಾದರಗಳಿಂದ ಮನಃಪೂರ್ವಕವಾಗಿ ಪ್ರಶಂಸಿಸಿದಾಗ ಮಾತ್ರ, ಇಂಥ ಹಬ್ಬಗಳಿಗೆ ಒಂದು ಅರ್ಥ ಬಂದೀತು. ಇಲ್ಲದಿದ್ದರೆ ಎಲ್ಲ ಯಾಂತ್ರಿಕವಾಗಿ ಹೋಗುತ್ತದೆ.
ಪರಸ್ಪರರಿಗೆ ಗೌರವಾದರ
ಯಾವ ವಯಸ್ಸಿನ ದಂಪತಿಗಳೇ ಇರಲಿ, ಪರಸ್ಪರರಲ್ಲಿ ವಿಶ್ವಾಸ, ಪ್ರೀತಿ ಪ್ರೇಮ, ಗೌರವಾದರ, ಕೇರಿಂಗ್ ನೇಚರ್ ಇದ್ದರೆ ಎಂಥ ಕಷ್ಟ ಬಂದರೂ ಗೆಲ್ಲಬಹುದಾಗಿದೆ. ಆಗ ಮಾತ್ರವೇ ನಿಜ ಅರ್ಥದಲ್ಲಿ ದಾಂಪತ್ಯ ಅತಿ ಸುಂದರ ಹಾಗೂ ಸಶಕ್ತ ಎನಿಸಲು ಸಾಧ್ಯ. ನೀವು ನಿಮ್ಮ ಸಂಗಾತಿಗೆ ಮನಃಪೂರ್ವಕವಾಗಿ ಗೌರವಾದರ ಕೊಟ್ಟಾಗ ಮಾತ್ರ ನೀವು ಅದನ್ನು ಹಿಂಪಡೆಯಲು ಸಾಧ್ಯ.
ಆದರೆ.... ಈ ಎಲ್ಲಾ ಅಂಶಗಳೂ ಕೇವಲ ಒನ್ ವೇ ಟ್ರಾಫಿಕ್ ಆಗಿಹೋದರೆ, ಆಗ ಸಂಬಂಧ ಬಲು ಟೊಳ್ಳು ಎನಿಸುತ್ತದೆ, ಕಾಟಾಚಾರಕ್ಕೆ ನಿಭಾಯಿಸುತ್ತಿರುವಂತೆ ತೋರುತ್ತದೆ. ಅದು ಪತಿ ಪತ್ನಿ, ಪ್ರೇಮಿಗಳು, ಒಡಹುಟ್ಟಿದವರು, ಬೀಗರು, ರಕ್ತಸಂಬಂಧವಲ್ಲದ ಇತರ ನಿಕಟವರ್ತಿಗಳು.... ಯಾರೇ ಆಗಲಿ, ಎಲ್ಲರಿಗೂ ಇದು ಅನ್ವಯಿಸುತ್ತದೆ. `ನಿನಗಾಗಿ ನಾವಿದ್ದೇವೆ,' ಎಂಬ ಭಾವ ಮೂಡಿಸಿದಾಗ ಮಾತ್ರ ಯಾವುದೇ ನಂಟಿನಲ್ಲಿ ಪ್ರೀತಿ ವಾತ್ಸಲ್ಯದ ಅಂಟು ಉಳಿಯಲು ಸಾಧ್ಯ. ಅದರಲ್ಲೂ ದಾಂಪತ್ಯದಲ್ಲಿ ಇದು ಹೆಚ್ಚಿನ ಆಳವಾದ ಪ್ರೀತಿ ಪ್ರೇಮ, ಅನುರಾಗ, ವಿಶ್ವಾಸ, ನಂಬಿಕೆಗಳ ಬೆಸುಗೆಗೆ ನಾಂದಿ ಹಾಡುತ್ತದೆ.