ಸಂಗಾತಿಯ ನಂಬಿಕೆದ್ರೋಹದ ಬಗ್ಗೆ ಗೊತ್ತಾದಾಗ ಏನು ಮಾಡಬೇಕು…. ಏನು ಮಾಡಬಾರದು? ಎಂಬ ಬಗ್ಗೆ ತಿಳಿದುಕೊಳ್ಳಿ……

ತನ್ನ ಆಪ್ತ ಗೆಳತಿ ಅಂಜಲಿಯ ಮನೆಗೆ ಗಂಡ ಶೇಖರ್‌ ಆಗಾಗ ಒಬ್ಬನೇ ಹೋಗಿ ಬರುತ್ತಿರುತ್ತಾನೆ ಎಂಬ ಸುದ್ದಿ ಕೇಳಿ ಸುಜಾತಾಳಿಗೆ ಆಘಾತವೇ ಆಗಿಹೋಯಿತು. ಈ ಸುದ್ದಿ ಕೊಟ್ಟದ್ದು ಬೇರಾರೂ ಅಲ್ಲ, ಆಕೆಯ ಮತ್ತೊಬ್ಬ ಗೆಳತಿ ಶೀಲಾ. ಅಂಜಲಿ ವಾಸಿಸುತ್ತಿದ್ದ ಬಿಲ್ಡಿಂಗ್‌ ನಲ್ಲಿಯೇ ಶೀಲಾ ವಾಸಿಸುತ್ತಿದ್ದಳು. ಆಕೆ ಸುಳ್ಳು ಹೇಳಲು ಸಾಧ್ಯವಿರಲಿಲ್ಲ. ಪತಿಯ ಫೋನ್‌ ಚೆಕ್‌ ಮಾಡಿ ನೋಡಿದಾಗ ಸತ್ಯಾಂಶ ತಿಳಿಯಿತು. ಅವರಿಬ್ಬರ ಅಫೇರ್‌ ಜೋರಾಗಿಯೇ ನಡೆದಿತ್ತು.

25 ವರ್ಷಗಳ ವೈವಾಹಿಕ ಜೀವನದ ಅಡಿಗಲ್ಲು ಅಲ್ಲಾಡತೊಡಗಿರುವುದು ಕಂಡು ಬಂದು ಅವಳ ಮನಸ್ಸು ಕಹಿಯಾಯಿತು. ಅವನು ಮನೆಗೆ ಬಂದಾಗ ಇದರ ಬಗ್ಗೆ ಸಾಕಷ್ಟು ಕೂಗಾಡಿದಳು, ಮೊದಮೊದಲು ಅವನು `ಇಲ್ಲ ಇಲ್ಲ…..’ ಅಂತ ಹೇಳಿದ. ಆದರೆ ಆಕೆ ಸೂಕ್ತ ಪುರಾವೆ ಕೊಟ್ಟಾಗ ಆತ ಒಪ್ಪಿಕೊಂಡ. ಜೊತೆಗೆ ಅವಳ ಸಂಬಂಧ ತೊರೆಯಲು ಸಾಧ್ಯವಿಲ್ಲವೆಂದೂ ಹೇಳಿದ.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಸುಜಾತಾ ತನ್ನದೇ ಕಟ್ಟಡದಲ್ಲಿ ವಾಸಿಸುತ್ತಿದ್ದ ಯುವ ದಂಪತಿಗಳಾದ ಜನಾರ್ಧನ್‌-ಕಾವ್ಯಾರ ಸ್ನೇಹ ಮಾಡಿದಳು. ಕ್ರಮೇಣ ಸುಜಾತಾ ಜನಾರ್ಧನ್‌ ನ ಜೊತೆ ಸಲಿಗೆಯಿಂದ ಇರತೊಡಗಿದಳು. ಇದು ಅವರ ಮಕ್ಕಳಿಗೆ ದಿಗಿಲನ್ನುಂಟು ಮಾಡಿತು. ಪರಿಸ್ಥಿತಿ ಹೇಗಾಯ್ತು ಎಂದರೆ ಇಬ್ಬರೂ ಪರೀಕ್ಷೆಯಲ್ಲಿ ಫೇಲಾಗಿ ಖಿನ್ನತೆಗೆ ತುತ್ತಾಗಿ ಆಸ್ಪತ್ರೆಗೆ ಸೇರಿಸುವಂತಾಯಿತು. ಶೇಖರ್‌ ಮತ್ತು ಸುಜಾತಾ ಮಾತ್ರ ಪರಸ್ಪರ ದೋಷಾರೋಪ ಹೊರಿಸುವುದರಲ್ಲಿಯೇ ಉಳಿದುಬಿಟ್ಟರು.

ತನ್ನನ್ನು ತಾನೇ ಬದಲಿಸಿಕೊಂಡಳು

ರೋಹಿತ್‌ ನ ಆಫೀಸ್‌ ನಲ್ಲಿ ಏನು ನಡೆಯುತ್ತಿದೆ ಎಂಬುದು ಅವನ ಹೌಸ್‌ ವೈಫ್‌ ಹೆಂಡತಿ ಪ್ರಿಯಾಗೆ ಗೊತ್ತಾಗುತ್ತಿರಲಿಲ್ಲ. ಆದರೆ ಬ್ಯಾಂಕ್‌ ಅಕೌಂಟ್‌ ಮೇಲೆ ಗಮನ ಹೋದಾಗ ಅವಳಿಗೆ ಎಲ್ಲವೂ ತಿಳಿಯಿತು. ದೊಡ್ಡ ಮೊತ್ತದ ಸಂಬಳ ಇದ್ದೂ ಅವನು ಮನೆ ಖರ್ಚಿಗೆ ಹಣ ಕೊಡಲು ಹಿಂದೇಟು ಹಾಕುತ್ತಿದ್ದ.

ಆನ್‌ ಲೈನ್‌ ನಿಂದ ದುಬಾರಿ ಉಡುಗೊರೆಗಳನ್ನು ತರಿಸಿಕೊಂಡಿದ್ದು ಕೂಡ ಗೊತ್ತಾಯಿತು. ಅವನ್ನು ಯಾರಿಗೆ ಕೊಟ್ಟಿರಬಹುದು ಎಂದು ಆಕೆ ಪತ್ತೆಹಚ್ಚಲು ಶುರು ಮಾಡಿದಳು. ಆಗ ಒಂದು ಕಹಿ ಸತ್ಯ ತಿಳಿಯಿತು. ರೋಹಿತ್‌ ತನ್ನ ಸಹೋದ್ಯೋಗಿ ನೀಲಾ ಜೊತೆಗೆ ಅಫೇರ್‌ ನಡೆಸುತ್ತಿದ್ದ. ಮಕ್ಕಳು, ಕುಟುಂಬದ ಬಗೆಗೆ ಹೇಳಿದರೂ ಅವನು ಕೇಳಲಿಲ್ಲ. ಅವಳು ನನ್ನ ಒಳ್ಳೆಯ ಫ್ರೆಂಡ್ ಎಂದು ಹೇಳುತ್ತಾ, ತನ್ನ ಪತ್ನಿಯನ್ನೇ ನಿರ್ಲಕ್ಷಿಸತೊಡಗಿದ.

ಪ್ರಿಯಾ ಹಳೆಯ ವಿಚಾರದವಳು ಎಂದು ಟೀಕಿಸುತ್ತಿದ್ದ. ಪ್ರಿಯಾ ಗಂಡನಿಗೆ ಅದೆಷ್ಟೇ ತಿಳಿ ಹೇಳಿದರೂ ಅವನು ಬದಲಾಗಲಿಲ್ಲ. ಆಗ ಪ್ರಿಯಾಳೇ ತನ್ನ ಯೋಚನಾ ಶೈಲಿ ಬದಲಿಸಿಕೊಂಡಳು.

ಅವಳೀಗ ಮಕ್ಕಳ ಬಗ್ಗೆ ಮೊದಲಿಗಿಂತ ಹೆಚ್ಚು ಗಮನಕೊಡತೊಡಗಿದಳು. ಗಣಿತದಲ್ಲಿ ಹೆಚ್ಚು ಪ್ರಾವೀಣ್ಯತೆ ಪಡೆದಿದ್ದ ಅವಳು ಕೆಲವು ಮಕ್ಕಳಿಗೆ ಟ್ಯೂಶನ್‌ ಶುರು ಮಾಡಿ ತನ್ನ ಖರ್ಚಿಗೆ ತಾನೇ ದಾರಿ ಮಾಡಿಕೊಂಡಳು. ಕ್ರಮೇಣ ಅವಳ ಜನಪ್ರಿಯತೆ ಹೆಚ್ಚಿತು. ಅವಳು ಪಿಯುಸಿವರೆಗಿನ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಕ್ಲಾಸ್‌ ತೆಗೆದುಕೊಳ್ಳತೊಡಗಿದಳು. ಆಕೆಯಿಂದ ಕ್ಲಾಸ್ ತೆಗೆದುಕೊಂಡ ವಿದ್ಯಾರ್ಥಿಗಳು ಒಳ್ಳೆಯ ಅಂಕ ಪಡೆಯತೊಡಗಿದರು. ಹೀಗಾಗಿ ಪ್ರಿಯಾಳ ಟ್ಯೂಷನ್‌ ಜನಪ್ರಿಯತೆ ಹೆಚ್ಚತೊಡಗಿತು. ಮುಂಜಾನೆ ಸಂಜೆ ಬ್ಯಾಚ್‌ ಗಳು ಪುಲ್ ಆಗತೊಡಗಿದವು.

ಆಕೆಯ ಅಪಾರ್ಟ್‌ ಮೆಂಟ್‌ ನವರು ಆಕೆಯ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸತೊಡಗಿದರು. ರೋಹಿತ್‌ ಕೂಡ ಅವಳ ಕಡೆ ಆಸಕ್ತಿಯಿಂದ ಗಮನಿಸುತ್ತಿದ್ದ. ಪ್ರಿಯಾ ಮಾತ್ರ ನೀಲಾಳ ಬಗ್ಗೆ ಕೇಳುತ್ತಲೇ ಇರಲಿಲ್ಲ. ರೋಹಿತ್‌ ನ ವರ್ತನೆ ನನ್ನ ಯಾವುದೇ ಕೆಲಸ ಕಾರ್ಯಗಳ ಮೇಲೆ ಅಡ್ಡಿಯನ್ನುಂಟು ಮಾಡುವುದಿಲ್ಲ ಎಂದು ಪ್ರಿಯಾ ಧೈರ್ಯದಿಂದ ಹೇಳುತ್ತಾಳೆ.

ಪ್ರಿಯಾಳಿಗೂ ದುಃಖ ಆಗುತ್ತಿತ್ತು. ಅವಳು ಏಕಾಂಗಿಯಾಗಿದ್ದಾಗ ಅತ್ತುಬಿಡುತ್ತಿದ್ದಳು. ಆದರೆ ಅಷ್ಟೇ ಬೇಗನೇ ಅದನ್ನು ಮರೆತುಬಿಡುತ್ತಿದ್ದಳು. ಮಕ್ಕಳಿಗೂ ಅಮ್ಮನ ಬಗ್ಗೆ ಹೆಮ್ಮೆಯಾಗುತ್ತಿತ್ತು. ರೋಹಿತ್‌ ಬದಲಾಗುತ್ತಾನೋ, ಇಲ್ಲವೋ ಎಂದು ಯೋಚಿಸುವುದನ್ನು ಪ್ರಿಯಾ ಬಿಟ್ಟುಬಿಟ್ಟಿದ್ದಳು.

ಭವಿಷ್ಯಕ್ಕೆ ಅಡ್ಡಿಯಾಗದಿರಲಿ

ಕಳೆದ 6 ತಿಂಗಳಿಂದ ದಿವ್ಯಾ ಹಾಗೂ ಸಾಗರ್‌ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಒಂದೇ ಆಫೀಸಿನಲ್ಲಿದ್ದರು. ಆದರೆ ದಿವ್ಯಾಗೆ ಸಾಗರ್‌ ನ ಹಳೆಯ ಪ್ರೇಮ ಪ್ರಸಂಗಗಳು ಗೊತ್ತಾದಾಗಿನಿಂದ ಯೋಚನೆಯಲ್ಲಿ ಮುಳುಗುತ್ತಿದ್ದಳು. ಸಾಗರ್‌ ನ ಫ್ಲರ್ಟಿಂಗ್‌ ಬಗ್ಗೆ ಇತರೆ ಹುಡುಗಿಯರು ಅವಳನ್ನು ಆಗಾಗ ಎಚ್ಚರಿಸುತ್ತಿದ್ದರು.

ದಿವ್ಯಾಗೆ ಸಾಗರ್‌ ನ ತಮಾಷೆಯ ಸ್ವಭಾವ, ಆಕರ್ಷಕ ವ್ಯಕ್ತಿತ್ವ ಇಷ್ಟವಾಗುತ್ತಿತ್ತು. ಅವಳಿಗೆ ಸಾಗರ್‌ ನಂತಹ ಸಂಗಾತಿ ಬೇಕಿತ್ತು. ಆದರೆ ಅವನ ಖಯಾಲಿಯಿಂದ ಭವಿಷ್ಯದಲ್ಲಿ ತನಗೆ ತೊಂದರೆಯಾಗಬಹುದು ಎಂದು ಅನಿಸಿ ಅವನಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದಳು. ಅದರಿಂದ ಅವನಿಗೆ ಇನ್ಮುಂದೆ ನಾವು ಸ್ನೇಹಿತರಾಗಿರೋಣ ಎಂದು ಹೇಳಿಯೂಬಿಟ್ಟಳು. ಅದಕ್ಕೆ ಸಾಗರ್‌ ಕೂಡ ಒಪ್ಪಿದ. ಇದು ದಿವ್ಯಾಳ ದಿಟ್ಟ ಹೆಜ್ಜೆಯಾಗಿತ್ತು.

ಪರಿಸ್ಥಿತಿ ಹದಗೆಡುವ ಮುಂಚೆ

ತನ್ನ ಪತ್ನಿ ಸುಚಿತ್ರಾಗೆ ಜಿಮ್ ನಲ್ಲಿ ಯಾರೋ ಪರಪುರುಷನ ಜೊತೆ ಸ್ನೇಹವಾಗಿದೆ ಎಂದು ಅಮರ್‌ ಗೆ ಗೊತ್ತಾಗಿತ್ತು. ಮಾತು ಮಾತಿನಲ್ಲಿ ಅವನ ಬಗ್ಗೆ ಅವಳು ಬಹಳ ಉತ್ಸಾಹದಿಂದ ಹೇಳಿಕೊಳ್ಳುತ್ತಿದ್ದಳು. ಒಂದು ದಿನ ಜಿಮ್ ಗೆ ರಜೆ ಇದ್ದರೂ ಅವಳು ಮಂಕಾಗಿ ಕುಳಿತುಬಿಡುತ್ತಿದ್ದಳು.

ಅಮರ್‌ ಅವಳ ಬಗ್ಗೆ ಸೂಕ್ಷವಾಗಿ ಗಮನಹರಿಸಿದ. 25 ವರ್ಷದ ವೈವಾಹಿಕ ಜೀವನದಲ್ಲಿ ಪ್ರಥಮ ಬಾರಿಗೆ ಆಕೆ ಪರಪುರುಷನ ಬಗ್ಗೆ ಆಸಕ್ತಳಾಗಿದ್ದಳು. ಅವಳು ಚಾರಿತ್ರ್ಯಹೀನಳಲ್ಲ ಎಂಬುದು ಅವನಿಗೂ ಗೊತ್ತಿತ್ತು. ಅದಕ್ಕೆ ತಾನೇ ಕಾರಣ ಎಂಬುದೂ ಗೊತ್ತಿತ್ತು. ಅನು ಸದಾ ಫೋನ್‌ ಲ್ಯಾಪ್‌ ಟಾಪ್‌ ನಲ್ಲಿ ಮಗ್ನನಾಗಿರುತ್ತಿದ್ದ. ಕಳೆದ ಅನೇಕ  ತಿಂಗಳುಗಳಿಂದ ಅವನು ಅವಳ ಕಡೆ ಗಮನವನ್ನೇ ಕೊಟ್ಟಿರಲಿಲ್ಲ. ಅವಳ ಜೀವನ ನೀರಸವೆಂಬಂತಾಗಿತ್ತು. ಮಕ್ಕಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರು. ಅಮರ್‌ ತಕ್ಷಣವೇ ತನ್ನ ಟ್ರ್ಯಾಕ್‌ ಬದಲಿಸಿದ.

ಸುಚಿತ್ರಾಳಿಗೆ ಗಂಡನ ಸಾಂಗತ್ಯ ದೊರೆಯುತ್ತಿದ್ದಂತೆ ಅವಳು ಜಿಮ್ ನ ಆ ಸ್ನೇಹಿತನ ಸಹವಾಸ ಕಡಿಮೆ ಮಾಡಿದಳು. ಅಮರ್ ಅವಳ ವಾಟ್ಸ್ ಅ್ಯಪ್‌ನ `ಲಾಸ್ಟ್ ಸೀನ್‌’ ಪರಿಶೀಲಿಸಿದಾಗ ಅವಳು ಅನೇಕ ತಾಸುಗಳಿಂದ ಆಫ್‌ ಲೈನ್‌ನಲ್ಲಿರುವುದು ಗೊತ್ತಾಗುತ್ತಿತ್ತು. ತನ್ನ ತಪ್ಪನ್ನು ಸುಧಾರಿಸಿಕೊಂಡು ಅಮರ್‌ ಪರಿಸ್ಥಿತಿ ನಿರ್ವಹಿಸಿದ. ಹೀಗಾಗಿ ಮುರಿದು ಬೀಳಲಿದ್ದ ಒಂದು ಸಂಬಂಧ ಉಳಿಯಿತು.

ಸಂಗಾತಿಯ ನಂಬಿಕೆದ್ರೋಹದ ಪ್ರಶ್ನೆ ಎದ್ದಾಗ ಸಂಸಾರ ರಥ ಅಲ್ಲಾಡುತ್ತಿರುವಂತೆ ಭಾಸವಾಗುತ್ತದೆ. ಇಂತಹ ಸ್ಥಿತಿಯಲ್ಲಿ ದುಃಖ, ಆಘಾತ ಆಗುವುದು ಸಹಜವೇ. ಅದರಿಂದ ಹೊರ ಬರುವುದು ಸುಲಭ ಅಲ್ಲ. ನಮಗೆ ನಾವೇ ರೋದಿಸುವುದರಿಂದ ಇನ್ನೊಬ್ಬರನ್ನು ದೂರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಧೈರ್ಯ ಕಾಯ್ದುಕೊಂಡು ಶಾಂತ ಮನಸ್ಸಿನಿಂದ ಯೋಚಿಸಬೇಕು. ತಾಳ್ಮೆ ಕಳೆದುಕೊಳ್ಳದೆ ಸಮಸ್ಯೆಯನ್ನು ಅವಲೋಕಿಸಿ, ಯೋಚಿಸಿ ಮುಂದೆ ಹೆಜ್ಜೆ ಇಡಿ.

ಕಾವ್ಯಾ ದಿನೇಶ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ