ದಿನೇ ದಿನೇ ಹೆಚ್ಚುತ್ತಿರುವ ಉರಿ ಬಿಸಿಲಿನಿಂದಾಗಿ, ಕೈ ಬೆವರಿ ಆಗಾಗ ತಲೆ ಸವರಿಕೊಳ್ಳುವಂತಾದಾಗ, ಅದರ ಪರಿಣಾಮ ಕೂದಲಿನ ಮೇಲೆ ಖಂಡಿತಾ ಆಗುತ್ತದೆ. ರೇಷ್ಮೆಯಂತೆ ಅಂದವಾಗಿದ್ದ ಕೂದಲು, ಹ್ಯುಮಿಡಿಟಿ ತುಂಬಿರುವ ಉಷ್ಣ ಗಾಳಿಯಿಂದಾಗಿ ಅತಿ ಒರಟಾಗುತ್ತದೆ. ಉತ್ತಮ ಶ್ಯಾಂಪೂ ಬಳಸಿದರೂ ಒಂದೇ ದಿನಕ್ಕೆ ಮತ್ತೆ ಅಂಟಂಟಾಗುತ್ತದೆ. ಬೇಸಿಗೆ ಆರಂಭದ 2-3 ವಾರಗಳಲ್ಲಿ, ವಾರಕ್ಕೆ ಕನಿಷ್ಠ 3 ಸಲವಾದರೂ ಶ್ಯಾಂಪೂ ಬಳಸಲೇಬೇಕಾಗುತ್ತದೆ. ಕೆಮಿಕಲ್ಸ್ ಅತಿಯಾದ ಶ್ಯಾಂಪೂ ಬಳಕೆ ಕೂದಲನ್ನು ದುರ್ಬಲಗೊಳಿಸುತ್ತದೆ, ಅದು ಬೇಗ ಶುಷ್ಕವಾಗುತ್ತದೆ.
ನೀವು ಶ್ಯಾಂಪೂವನ್ನು ಹೇಗೆ ವಾರಕ್ಕೆ ಎಷ್ಟು ಸಲ ಬಳಸಬೇಕು ಎಂಬುದರ ಮಾಹಿತಿ ತಿಳಿದಿರಬೇಕು. ಆಗ ಮಾತ್ರ ಬೇಸಿಗೆಯ ಉರಿಬಿಸಿಲು ಅಥವಾ ಹ್ಯುಮಿಡಿಟಿಯ ವಾತಾವರಣ ಇದ್ದರೂ, ನಿಮ್ಮ ಕೂದಲು ಆರೋಗ್ಯಕರವಾಗಿ ಇರಬಲ್ಲದು.
ಮಾಲಿನ್ಯ ತರುವ ತೊಂದರೆ
ಇತ್ತೀಚಿನ ಓಡು ಯುಗದ ಜೀವನ ಶೈಲಿಯಿಂದಾಗಿ ಕೂದಲು ಉದುರುವುದು, ತುಂಡಾಗುವುದು, ಡ್ರೈನೆಸ್, ಸಿಕ್ಕು, ಡ್ಯಾಂಡ್ರಫ್, ಸೀಳು ತುದಿಯ ಕೂದಲು ಇತ್ಯಾದಿ ಮಾಮೂಲಿ ಆಗಿಹೋಗಿದೆ. ಬೇಸಿಗೆಯಲ್ಲಿ ಸ್ಕಾಲ್ಪ್ (ನೆತ್ತಿ) ಹೆಚ್ಚು ಜಿಡ್ಡಿನಂಶ ಬಿಟ್ಟುಕೊಳ್ಳುತ್ತದೆ.
ಜೊತೆಗೆ ಬೆವರು, ಪರಿಸರ ಮಾಲಿನ್ಯ, ಸ್ಕಾಲ್ಪ್ ಮೇಲಿನ ಕೊಳೆ ಇತ್ಯಾದಿ ಸೇರಿ ಕೂದಲು ಬಲು ಬೇಗ ಅಂಟಂಟಾಗುತ್ತದೆ, ಗಲೀಜಾಗಿ ಕಾಣುತ್ತದೆ. ಬೆವರಿನ ಕ್ಷಾರದಿಂದಾಗಿ ಕೂದಲಿನ ಆರೋಗ್ಯ ಹಾಳಾಗುತ್ತದೆ. ಇದರಿಂದಾಗಿ ಕೂದಲಿನ ಬುಡಭಾಗ ದುರ್ಬಲ ಆಗುತ್ತದೆ. ಹಾಗಾಗಿ ಕೂದಲು ಬೇಗ ಬೇಗ ಉದುರುತ್ತದೆ.
ಜೊತೆಗೆ ಬೇಸಿಗೆಯಲ್ಲಿ ಅಂಟಂಟು ಕೂದಲಿನ ದುರ್ವಾಸನೆ ಇತರರು ಬೇಸರ ಪಡುವಂತೆ ಆಗುತ್ತದೆ. ಅಸಲಿಗೆ ಸ್ಕಾಲ್ಪ್ ನಿಂದ ಮೂಡುವ ಬೆವರು, ಧಗೆ, ಶಾಖದಿಂದ ಬ್ಯಾಕ್ಟೀರಿಯಾ, ಫಂಗಸ್ ಹೆಚ್ಚುತ್ತವೆ. ಇದರಿಂದ ಕೂದಲು ವಿಚಿತ್ರ ದುರ್ಗಂಧ ಬೀರುತ್ತದೆ. ಕೂದಲಿನ ಉತ್ತಮ ಆರೈಕೆಯಿಂದ ಮಾತ್ರ ಈ ಸಮಸ್ಯೆ ದೂರಾಗಬಲ್ಲದು.
ಶ್ಯಾಂಪೂ ಬಳಕೆ ಹೀಗಿರಲಿ
ನೀವು ಶ್ಯಾಂಪೂ ಬಳಸುತ್ತೀರಿ ನಿಜ, ಆದರೆ ಅದು ಸ್ಕಾಲ್ಪ್ ನಿಂದ ಜಿಡ್ಡನ್ನು ತೆಗೆಯುವುದೇ ಇಲ್ಲ. ಆದ್ದರಿಂದ ಶ್ಯಾಂಪೂ ಬಳಸುವಾಗ ಅಸರ ಬೇಡ. ತಲೆಗೆ ಶ್ಯಾಂಪೂ ತಿಕ್ಕುವಾಗ, ವೃತ್ತಾಕಾರವಾಗಿ ಹಿಂದೆ ಮುಂದೆ ಕೈ ಆಡಿಸುವುದರಿಂದ ಕೂದಲು ಸಿಕ್ಕು ಸಿಕ್ಕಾಗುತ್ತದೆ, ದುರ್ಬಲ ಆಗುತ್ತದೆ. ಉದುರಿ, ತುಂಡರಿಸಲೂಬಹುದು. ಆದ್ದರಿಂದ ಶ್ಯಾಂಪೂ ಬಳಸುವಾಗ, ಎರಡೂ ಕೈಗಳಿಂದ ಸೈಡ್ ಟು ಸೈಡ್ ಮೋಶನ್ ಅನುಸರಿಸಿ.
ಇದರಿಂದ ಕೂದಲಿನ ಎಳೆಗೆ ಯಾವುದೇ ಹಾನಿ ಇಲ್ಲ. ಜೊತೆಗೆ ಸ್ಕಾಲ್ಪ್ ನ್ನು ಕೈ ಬೆರಳಿನಿಂದ ಮೆಲ್ಲಗೆ ಒತ್ತಬೇಕು, ಹೆಚ್ಚಿನ ಒತ್ತಡ ಬೇಡ. ತಲೆಗೆ ಶ್ಯಾಂಪೂ ಹಚ್ಚಿಕೊಳ್ಳುವ ಮುನ್ನ, ಅದನ್ನು ಚೆನ್ನಾಗಿ ಒದ್ದೆ ಮಾಡಿಕೊಳ್ಳಿ. ತಲೆಗೆ ನೇರ ಶ್ಯಾಂಪೂ ಹಾಕಿಕೊಳ್ಳುವ ಬದಲು, ಪುಟ್ಟ ಬಟ್ಟಲಿಗೆ ಹಾಕಿ, ತುಸು ನೀರು ಬೆರೆಸಿ, ಆ ಮಿಶ್ರಣವನ್ನು ತಲೆಗೂದಲಿಗೆ ಉಪಯೋಗಿಸಿ. ಇದರಿಂದ ಆ ಮಿಶ್ರಣ ಸುಲಭವಾಗಿ ಕೂದಲಿಗೆ ಉತ್ತಮ ಪರಿಣಾಮ ನೀಡುತ್ತದೆ, ಅದು ಕೂದಲಿಗೆ ಯಾವ ಹಾನಿಯನ್ನೂ ಮಾಡವುದು.
ಹೇರ್ ಟೈಪ್ ಗೆ ತಕ್ಕಂತೆ ಶ್ಯಾಂಪೂ ಡ್ರೈ ಸ್ಕಾಲ್ಪ್ ಹಾಗೂ ಕೂದಲಿಗಾಗಿ ನೀವು ಸದಾ ಸಲ್ಫೇಟ್ ಫ್ರೀ ಶ್ಯಾಂಪೂ ಮಾತ್ರ ಬಳಸಬೇಕು. ಅಸಲಿಗೆ ಸಲ್ಫೇಟ್ ನಿಂದ ಸ್ಕಾಲ್ಪ್ ಡ್ರೈ ಆಗುತ್ತದೆ. ಇದರ ಬದಲು ಸ್ಕಾಲ್ಪ್ ನ್ನು ಶುಚಿಗೊಳಿಸಲು ನೀವು, ಮೈಲ್ಡ್ ಯಾ ಹರ್ಬಲ್ ಶ್ಯಾಂಪೂ ಬಳಸಿಕೊಳ್ಳಿ. ಬೇಸಿಗೆಯಲ್ಲಿ ಹೇರ್ ಸ್ಟೈಲಿಂಗ್ ಪ್ರಾಡಕ್ಟ್ಸ್ ನ ಬಳಕೆ ಬೇಡ. ಡೆಡ್ ಸೆಲ್ಸ್, ಡ್ಯಾಂಡ್ರಫ್ ನಿಂದ ಮುಕ್ತಿ ಪಡೆಯಲು ಸದಾ ಕ್ಲಾರಿಫೈಯಿಂಗ್ ಶ್ಯಾಂಪೂ ಮಾತ್ರ ಬಳಸಿಕೊಳ್ಳಿ. ಸ್ಕಾಲ್ಪ್ ಬಹಳ ಹೆಚ್ಚು ಜಿಡ್ಡು ಬಿಡುತ್ತಿದ್ದರೆ, ಆಗ ಮಾತ್ರ ಸಲ್ಫೇಟ್ ಶ್ಯಾಂಪೂ ಬಳಸಬೇಕು.
ಕೂದಲಿಗೆ ತಣ್ಣೀರೇ ಸರಿ
ಕೂದಲನ್ನು ತೊಳೆಯಲು ತಣ್ಣೀರಿಗಿಂತ ಉತ್ತಮ ಬೇರೊಂದಿಲ್ಲ, ಅತಿ ಬಿಸಿಯಾದ, ಕುದಿವ ನೀರನ್ನು ಎಂದೂ ಬಳಸಬೇಡಿ. ಇದು ಹೇರ್ ಕ್ಯುಟಿಕಲ್ಸ್ ನ್ನು ಕ್ಲೋಸ್ ಮಾಡಿ, ಕೂದಲಿಗೆ ಶೈನಿ ಟೆಕ್ಸ್ ಚರ್ ನೀಡುತ್ತದೆ. ಇದು ಸ್ಕಾಲ್ಪ್ ನ್ನು ಡ್ರೈಗೊಳಿಸದೆ, ನ್ಯಾಚುರಲ್ ಆಯಿಲ್ ನ್ನು ಕಾಪಾಡುತ್ತದೆ. ಜೊತೆಗೆ ಕೂದಲನ್ನು ಸಶಕ್ತಗೊಳಿಸಿ, ಅದು ಮುರಿಯದಂತೆ ತಡೆಯುತ್ತದೆ.
ಕಂಡೀಶನರ್ ಬಳಕೆ
ಸ್ಕಾಲ್ಪ್ ಗೆ ಕಂಡೀಶನರ್ ಬಳಸುವುದರಿಂದ, ಕೂದಲು ಹೆಚ್ಚು ಜಿಡ್ಡು ಜಿಡ್ಡಾಗುತ್ತದೆ. ಹೀಗಾಗಿ ನೀವು ಕಂಡೀಶನರ್ ನ್ನು ಕೂದಲಿಗೆ ಹಚ್ಚಿ, ಉದ್ದಕ್ಕೂ ಎಳೆಯುತ್ತಾ ಬಳಸಿಕೊಳ್ಳಿ. ಇದನ್ನು ನೆತ್ತಿಗೆ ತಟ್ಟಿ ಉಜ್ಜದಿರಿ ಕಂಡೀಶನರ್ ಬಳಸಿದ ನಂತರ ಕೂದಲನ್ನು ಅಗತ್ಯವಾಗಿ ತಣ್ಣೀರಿನಿಂದ ತೊಳೆಯಿರಿ.
ಆ್ಯಪಲ್ ಸೈಡರ್ ವಿನಿಗರ್
ನೆತ್ತಿಯಿಂದ ಜಿಡ್ಡು ಜಿನುಗುವುದನ್ನು ನಿಯಂತ್ರಿಸಲು, ಸ್ಯಾಲಿಸಿಲಿಕ್ ಯಾ ಗ್ಲೈಕಾಲಿಕ್ ಆ್ಯಸಿಡ್ ಯುಕ್ತ ಶ್ಯಾಂಪೂ ಬಳಸಬೇಕು. ಅದರಲ್ಲೂ ಆ್ಯಪಲ್ ಸೈಡರ್ ವಿನಿಗರ್ ಕೂದಲಿನ Ph ಲೆವೆಲ್ ನ್ನು ಬ್ಯಾಲೆನ್ಸ್ ಮಾಡುವುದರ ಜೊತೆಗೆ ಯಾವುದೇ ಬಿಲ್ಡ್ ಅಪ್ ನ್ನು ಆಳವಾಗಿ ಶುಚಿಗೊಳಿಸುವ ಉತ್ತಮ ಕೆಲಸ ಮಾಡುತ್ತದೆ.
ಶ್ಯಾಂಪೂನಿಂದ ಕೂದಲನ್ನು ತೊಳೆದ ನಂತರ, ತುಸು ನೀರಿಗೆ 1 ಟೇಬಲ್ ಸ್ಪೂನಿನಷ್ಟು ಆ್ಯಪಲ್ ಸೈಡರ್ ವಿನಿಗರ್ ಬೆರೆಸಿಕೊಂಡು, ಅದರಿಂದ ಕೂದಲನ್ನು ಮತ್ತೆ ತೊಳೆಯಿರಿ. ಇದರಿಂದ ಕೂದಲಿನಲ್ಲಿನ ಬೆವರು ವಾಸನೆಯಿಂದ ಉತ್ತಮ ಮುಕ್ತಿ ದೊರಕುತ್ತದೆ.
ಹೀಟ್ ಸೆಲಿಂಗ್ ಟೂಲ್ಸ್
ಬೇಸಿಗೆಯಲ್ಲಿ ಹೀಟ್ ಸ್ಟೈಲಿಂಗ್ ಟೂಲ್ಸ್ ನ್ನು ಸಾಧ್ಯವಾದಷ್ಟೂ ಬಳಸಲೇಬೇಡಿ. ಇದು ನಿಮ್ಮ ಕೂದಲಿನ ಆರೋಗ್ಯಕ್ಕೆ ಅಗತ್ಯ ಕೂಡ. ಬೇಸಿಗೆಯಲ್ಲಿ ಮತ್ತೆ ಮತ್ತೆ ಸ್ಟೈಲಿಂಗ್ ಟೂಲ್ಸ್ ಬಳಸುವುದರಿಂದ ಕೂದಲು ದುರ್ಬಲ ಆಗುತ್ತದೆ, ಆಗ ಅದು ಬೇಗ ಸೀಳು ತುದಿ ಹೊಂದುತ್ತದೆ. ಇದರಿಂದ ಕೂದಲಿನ ಬೆಳವಣಿಗೆ ಕುಂಠಿತವಾಗುತ್ತದೆ. ಡ್ರೈಯರ್ ನ ಅಧಿಕ ಬಳಕೆ ಕೂದಲನ್ನು ನಿರ್ಜೀವಗೊಳಿಸುತ್ತದೆ. ಹೇರ್ ಡ್ರೈಯರ್ ಬಳಸುವ ಬದಲು ಕೂದಲನ್ನು ನೈಸರ್ಗಿಕವಾಗಿಯೇ ಒಣಗಲು ಬಿಡಿ. ಇದರಿಂದ ಕೂದಲು ಬೇಗ ಆಯ್ಲಿ ಆಗುವುದೂ ಇಲ್ಲ.
ಬೇಸಿಗೆಗೆ ಹೇರ್ ಮಾಸ್ಕ್
ಬೇಸಿಗೆಯಲ್ಲಿ ಕೂದಲಿಗೆ ಡೀಪ್ ಕಂಡೀಶನಿಂಗ್ ಜೊತೆಯಲ್ಲೇ ಉತ್ತಮ ಮಾಯಿಶ್ಚರೈಸಿಂಗ್ ನ ಅಗತ್ಯ ಇದೆ. ಕೂದಲಿನ ಆರೋಗ್ಯ ಸರಿಪಡಿಸಲು ಹೇರ್ ಮಾಸ್ಕ್ ಬಲು ಸಹಕಾರಿ. 15 ದಿನಗಳಿಗೊಮ್ಮೆ ಹೇರ್ ಮಾಸ್ಕ್ ಬಳಸಲು ಮರೆಯದಿರಿ. ಕೂದಲು ಯಾವ ಪ್ರಕಾರದ್ದಾದರೂ ಸರಿ, ಹೇರ್ ಮಾಸ್ಕ್ ಗಾಗಿ ಒಂದು ಬಟ್ಟಲಿಗೆ 1 ಚಮಚ ಹಿಪ್ಪೆ ಎಣ್ಣೆ (ಆಲಿಲ್ ಆಯಿಲ್), ಅದಕ್ಕೆ ಕಳಿತ ಅರ್ಧ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಹಾಕಿ, 4-5 ಚಮಚ ಮೊಸರು ಬೆರೆಸಿಕೊಳ್ಳಿ. ಇದರ ಮಿಶ್ರಣವನ್ನು ಕುದಲಿಗೆ ಹಚ್ಚಿ, ಅರ್ಧ ಗಂಟೆ ಕಾಲ ಹಾಗೇ ಬಿಡಿ, ನಂತರ ತಣ್ಣೀರಿನಿಂದ ತೊಳೆದರೆ ಉತ್ತಮ ಪರಿಣಾಮ ಕಾಣುತ್ತದೆ.
– ಆರ್. ಸೋನಿಯಾ
ರಿವರ್ಸ್ ವಾಶಿಂಗ್ ಯಾ ಪ್ರೀಕಂಡೀಶನಿಂಗ್ ಟೆಕ್ನಿಕ್ಸ್
ಹಿಂದಿನ ಕಾಲದ ಅಜ್ಜಿಯರು, ತಲೆಗೆ ಚೆನ್ನಾಗಿ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ, 1 ಗಂಟೆ ಕಾಲ ಬಿಟ್ಟು ನಂತರ ತಲೆ ಸ್ನಾನ ಮಾಡಿ ಎಂದು ಹೇಳುತ್ತಿದ್ದರು. ಆಧುನಿಕರು ಇದನ್ನು ನಿರ್ಲಕ್ಷಿಸಿದ್ದೇ ಹೆಚ್ಚು. ಈಗ ಇದೇ ಟೆಕ್ನಿಕ್ ಮತ್ತೆ ಮರಳಿ ಬಂದಿದೆ. ಇದುವೇ ಪ್ರೀಕಂಡೀಶನಿಂಗ್ ಯಾ ರಿವರ್ಸ್ ವಾಶಿಂಗ್. ಇದರರ್ಥ ಶ್ಯಾಂಪೂಗೆ ಮುಂಚೆ ಕಂಡೀಶನಿಂಗ್ ಮಾಡಿ ಅಂತ. ಇಂದಿನ ಸೌಂದರ್ಯ ತಜ್ಞೆಯರ ಪ್ರಕಾರ, ನಂತರ ಕಂಡೀಶನಿಂಗ್ ಮಾಡುವ ಬದಲು ಮೊದಲೇ ಪ್ರೀಕಂಡೀಶನಿಂಗ್ ಮಾಡುವುದೇ ಸರಿ. ಏಕೆಂದರೆ ಅದರಿಂದ ಕೂದಲು ಹೆಚ್ಚು ಸಾಫ್ಟ್. ಶೈನಿ, ನಾನ್ ಗ್ರೀಸಿ ಆಗಿ ಉಳಿಯುತ್ತದೆ.
ಇದಕ್ಕಾಗಿ ನೀವು ಯಾವುದೇ ಎಣ್ಣೆ ಅಥವಾ ಕಂಡೀಶನರ್ ಬಳಸಿಕೊಳ್ಳಿ. ಅಸಲಿಗೆ ಸಲ್ಫೇಟ್ ನಿಂದ ಸ್ಕಾಲ್ಪ್ ಡ್ರೈ ಆಗುತ್ತದೆ. ಹೀಗಾಗಿ ಅದರ ಕಾಟ ನಿವಾರಿಸಲು ತಲೆಸ್ನಾನಕ್ಕೆ ಮೊದಲೇ, ಕೂದಲಿಗೆ ಹಾಗೂ ಅದರ ಬುಡಕ್ಕೆ ಚೆನ್ನಾಗಿ ಕೊಬ್ಬರಿ ಎಣ್ಣೆ, ಹಿಪ್ಪೆ ಎಣ್ಣೆ, ಮೊಸರು ಇತ್ಯಾದಿ ಹಚ್ಚಿ ನೆನೆಯಬೇಕು. ಶ್ಯಾಂಪೂ ಬಳಸುವ 1 ತಾಸಿಗೆ ಮೊದಲು ಹೀಗೆ ಹಚ್ಚಿಕೊಂಡರೆ ಸಾಕು. ಸ್ಕಾಲ್ಪ್ ಗಿಂತ ಹೆಚ್ಚಾಗಿ ಅದನ್ನು ತಲೆಗೂದಲಿಗೆ ಉದ್ದಕ್ಕೇ ಹಚ್ಚಬೇಕು.
ಎಕ್ಸ್ ಪರ್ಟ್ಸ್ ಹೇಳುವುದೆಂದರೆ, ಕೂದಲನ್ನು ರಕ್ಷಿಸಲು ಸ್ಕಾಲ್ಪ್ ಸೀಬಂ ರಿಲೀಸ್ ಮಾಡುತ್ತದೆ. ಅದರ ಮೇಲೆ ಕೆಮಿಕಲ್ಸ್ ನ ಶ್ಯಾಂಪೂ ಒತ್ತಿ ಉಜ್ಜುವುದರಿಂದ, ಸೀಬಂ ಮುರಿಯುತ್ತದೆ, ಇದರಿಂದ ಸ್ಕಾಲ್ಪ್ ಡೀ ಹೈಡ್ರೇಟ್ ಆಗುತ್ತದೆ. ಹೀಗಾಗಿ ಸ್ಕಾಲ್ಪ್ ನ Ph ಲೆವೆಲ್ ನ್ನು ಸರಿಯಾಗಿರಿಸಿಕೊಳ್ಳಲು, ಕಂಡೀಶನಿಂಗ್ ಮಾಡುವುದೇ ಸರಿ.