ಇಂದಿನ ಮಹಿಳೆಯರು ಕೆರಿಯರ್ ಹಾಗೂ ಭವಿಷ್ಯದ ಕುರಿತು ಒಂದು ಅಜ್ಞಾತ ಭಯಕ್ಕೆ ಗುರಿಯಾಗಿರುತ್ತಾರೆ, ಎಂಬುದು ನಿಜ. ಆದರೆ ಹಾಗೆಂದ ಮಾತ್ರಕ್ಕೆ ನಿಜ ಜೀವನದ ಈ ಸವಾಲುಗಳಿಗೆ ಏಕೆ ಹೆದರಬೇಕು? ಈ ನಿಟ್ಟಿನಲ್ಲಿ ನಿಮ್ಮ ಕನಸನ್ನು ನನಸಾಗಿಸಲು ಏನೆಲ್ಲ ಮಾಡಬಹುದು….?
ನಮ್ಮ ದೇಶದ ಶೇ.50ಕ್ಕಿಂತಲೂ ಹೆಚ್ಚಿನ ತಾಯಂದಿರಾದ ಉದ್ಯೋಗಸ್ಥ ವನಿತೆಯರು, ಕೇವಲ 30ರ ಹರೆಯದಲ್ಲೇ ತಮ್ಮ ಮಕ್ಕಳ ಆರೈಕೆಗಾಗಿ, ನೌಕರಿ ಬಿಡಬೇಕಾಗುತ್ತದೆ. ಅಶೋಕ ಯೂನಿವರ್ಸಿಟಿಯ `ಜ್ಯಾನ್ ಪ್ಯಾಕ್ಟ್ ಸೆಂಟರ್ ಫಾರ್ ವಿಮೆನ್ಸ್ ಲೀಡರ್ ಶಿಪ್’ ತಾನು `ಪ್ರಿಡಿಕೆಮ್ಯಾಂಟ್ ಆಫ್ ರಿಟರ್ನಿಂಗ್ ಮದರ್ಸ್’ ಎಂಬ ಹೆಸರಲ್ಲಿ ಒಂದು ವರದಿ ಸಲ್ಲಿಸಿದೆ. ಇದು ಉದ್ಯೋಗಸ್ಥ ತಾಯಂದಿರು ಎದುರಿಸಬೇಕಾದ ಸವಾಲುಗಳ ಕುರಿತಾಗಿ ನಡೆಸಲಾದ ಒಂದು ಆಮೂಲಾಗ್ರ ಸಂಶೋಧನೆ. ಈ ವರದಿಯ ಪ್ರಕಾರ, ತಾಯಿ ಆದ ನಂತರ, ಕೇವಲ 27% ಹೆಂಗಸರು ಮಾತ್ರವೇ ತಮ್ಮ ಕೆರಿಯರ್ ನ್ನು ಮುಂದುವರಿಸಲು ಸಾಧ್ಯ, ಮುಂದೆ ವರ್ಕ್ ಪೇರ್ಸ್ ನ ಭಾಗ ಆಗಿರುತ್ತಾರೆ. ಅಂದ್ರೆ ತಾಯಿ ಆದ ತಕ್ಷಣ ಬಹುತೇಕ 73% ಹೆಂಗಸರು ತಮ್ಮ ಕೆಲಸ ಬಿಟ್ಟು ಬಿಡುತ್ತಾರೆ.
ಪ್ರೊಫೆಶನಲ್ ಸೋಶ್ ಸೈಟ್ ಲಿಂಕ್ ಡೈನ್ ಸಹ ಇತ್ತೀಚೆಗೆ ಇಂಥದ್ದೇ ಒಂದು ವರದಿ ತಯಾರಿಸಿತು. ಇದರ ಪ್ರಕಾರ ನಮ್ಮ ದೇಶದಲ್ಲಿ 10ಕ್ಕೆ 7 ಮಹಿಳೆಯರು, ತಾಯಂದಿರಾದ ತಕ್ಷಣ ತಮ್ಮ ಕೆಲಸ ಬಿಡಲು ಬಯಸುತ್ತಾರೆ. ಇದಕ್ಕೆ ಮುಖ್ಯ ಕಾರಣ ವರ್ಕ್ ಪ್ಲೇಸ್ ನಲ್ಲಿ ಪಕ್ಷಪಾತ, ಸಂಬಳದಲ್ಲಿ ಕಡಿತ, ಕೆಲಸದಲ್ಲಿ ಫ್ಲೆಕ್ಸಿಬಿಲಿಟಿಯ ಕೊರತೆ.
ಈ ವರದಿಗಾಗಿ ಸುಮಾರು 2,266 ಹೆಂಗಸರನ್ನು ಸಂದರ್ಶಿಸಲಾಯಿತು. ಇದರಲ್ಲಿ ಹೆಂಗಸರ ಕೆಲಸ ಹಾಗೂ ಅದಕ್ಕೆ ಸಂಬಂಧಿಸಿದ ಸವಾಲುಗಳ ಕುರಿತಾಗಿ ವಿಮರ್ಶಿಸಲಾಯಿತು. ಈ ಸಂಶೋಧನೆಯಿಂದ ಖಚಿತವಾದುದೆಂದರೆ, ಕೊರೋನಾ ಮಹಾಮಾರಿ ಬಂದು ಹೆಂಗಸರ ಕೆಲಸದ ಮೇಲೆ ಬಲು ಕೆಟ್ಟ ಪರಿಣಾಮ ಬೀರಿದೆ. ಕೊರೋನಾ ನಂತರ ಈಗ ನಮ್ಮ ದೇಶದಲ್ಲಿ 10 ರಲ್ಲಿ 7 ಮಂದಿ, ಅಂದ್ರೆ ಸುಮಾರು 83% ಹೆಂಗಸರು ಆಫೀಸ್ ನಲ್ಲಿ ಹೆಚ್ಚು ಫ್ಲೆಕ್ಸಿಬಲ್ ವಿಧಾನಗಳಿಂದ ಕೆಲಸ ಮಾಡಬಯಸುತ್ತಾರೆ.

ಹೆಂಗಸರೇಕೆ ನೌಕರಿ ಮಾಡಲಾರರು?
ಫ್ಲೆಕ್ಸಿಬಿಲಿಟಿಯ ಕೊರತೆ ಕಾರಣ ಹೆಂಗಸರು ನೌಕರಿ ಬಿಡುತ್ತಿದ್ದಾರೆ. ಒಂದು ಸಮೀಕ್ಷೆ ಪ್ರಕಾರ, ಸುಮಾರು 70% ಹೆಂಗಸರು, ಕೊರೋನಾ ಕಾಲದಲ್ಲಿ ತಾಯಿಯಾಗುವ ಸಂದರ್ಭ ನೋಡಿಕೊಂಡು, ಕೆಲಸ ಬಿಡುತ್ತಾರೆ ಅಥವಾ ಬಿಡುವ ವಿಚಾರ ಮಾಡುತ್ತಾರೆ. ಕೆಲಸ ಮಾಡಲು ಎಲ್ಲಿ ಫ್ಲೆಕ್ಸಿಬಲ್ ಅವರ್ಸ್ ಇಲ್ಲವೋ ಅಂಥ ಕಡೆ ನೌಕರಿಯೇ ಬೇಡ ಎಂದು ಸಾರಾಸಗಟಾಗಿ ತಿರಸ್ಕರಿಸುತ್ತಾರೆ.
ಸಮೀಕ್ಷೆ ಪ್ರಕಾರ, 5 ರಲ್ಲಿ 3 ಹೆಂಗಸರು, ವರ್ಕ್ ಪ್ಲೇಸ್ ನಲ್ಲಿ ಫ್ಲೆಕ್ಸಿಬಿಲಿಟಿ ಇರುವುದರಿಂದ ತಮ್ಮ ತಮ್ಮ ಪರ್ಸನಲ್ ಲೈಫ್ ಹಾಗೂ ನೌಕರಿ ಮಧ್ಯೆ ಬ್ಯಾಲೆನ್ಸ್ ಇರಿಸಿಕೊಳ್ಳಲು ಸುಲಭ ಎಂದು ಭಾವಿಸುತ್ತಾರೆ. ಇದರಿಂದ ಹೆಂಗಸರಿಗೆ ತಮ್ಮ ಕೆರಿಯರ್ ನಲ್ಲಿ ಮುಂದುವರಿಯಲು ಉತ್ತಮ ಅವಕಾಶ ದೊರಕುತ್ತದೆ. ಇದು ಅವರ ಉತ್ತಮ ಮಾನಸಿಕ ಆರೋಗ್ಯಕ್ಕೂ ಅಷ್ಟೇ ಮುಖ್ಯ. ಇವೆಲ್ಲ ಕಾರಣಗಳಿಂದ ಅವರು ಮುಂದೆ ಉತ್ತಮವಾಗಿ ಕೆಲಸ ನಿರ್ವಹಿಸಬಲ್ಲರು. ಈ ಅವಕಾಶಗಳು ಸಿಗದಿದ್ದರೆ, ತಮ್ಮ ಕೌಟುಂಬಿಕ ಜವಾಬ್ದಾರಿಗಳ ಕಾರಣ, ಅವರಿಗೆ ಕೆಲಸ ಬಿಡುವುದು ಅನಿವಾರ್ಯ ಆಗುತ್ತದೆ.

ಸವಾಲು ತುಂಬಿದ ಜೀವನ
ಒಬ್ಬ ಹೆಣ್ಣಿಗೆ ತನ್ನ ಜೀವನದಲ್ಲಿ ಹುಟ್ಟಿನಿಂದ ವೃದ್ಧಾಪ್ಯದವರೆಗೂ ಎಷ್ಟೋ ಬಗೆಬಗೆಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಉದ್ಯೋಗಸ್ಥ ತಾಯಂದಿರಿಗೆ ಈ ಸವಾಲುಗಳು ಹೆಚ್ಚು ಕಠಿಣಕರ ಆಗಿರುತ್ತವೆ. ಅವರಿಗೆ ಮನೆಯಲ್ಲಿ ಮಕ್ಕಳು, ಮುದುಕರ ಆರೈಕೆಯೊಂದಿಗೆ ಪತಿ ಹಾಗೂ ಮನೆಯ ಮತ್ತಿತರ ಸದಸ್ಯರೊಂದಿಗೂ ಹೊಂದಾಣಿಕೆ ಮೇಂಟೇನ್ ಮಾಡಲೇಬೇಕಾಗುತ್ತದೆ. ಮನೆಯ ಇಷ್ಟೆಲ್ಲ ಕೆಲಸಗಳ ಹೊರೆ ಮಧ್ಯೆ ಆಫೀಸಿಗೆ ಬಂದು ದುಡಿಯ ಬೇಕಾಗುತ್ತದೆ.

ವರ್ಕ್ ಪ್ಲೇಸ್ ನಲ್ಲಿ ಸವಾಲುಗಳು
ಈ 21ನೇ ಶತಮಾನದಲ್ಲಿ ಹೆಂಗಸರು ತಂತಮ್ಮ ಕಾರ್ಯಕ್ಷೇತ್ರಗಳಲ್ಲಿ ಎಲ್ಲಾ ವಿಧದಲ್ಲೂ ದುಡಿಯುತ್ತಾ, ಹಣ್ಣುಗಾಯಿ ನೀರುಗಾಯಿ ಆಗಿದ್ದಾರೆ. ಅದು ಫೈನಾನ್ಸ್, ಏರ್‌ಫೋರ್ಸ್ ಅಥವಾ ಯಾವುದೇ ಕ್ಷೇತ್ರವಿರಲಿ, ಹೆಣ್ಣು ಅಲ್ಲಿ ಸೈ ಎನಿಸಿದ್ದಾಳೆ. ಗಂಡಸರ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಾ, ಯಶಸ್ವಿ ಎನಿಸಿದ್ದಾರೆ. ಅಂದ ಮಾತ್ರಕ್ಕೆ ಹೆಂಗಸರಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ತೊಂದರೆಗಳಿಲ್ಲ ಅಂತಲ್ಲ, ಅದನ್ನೆಲ್ಲ ಸಲೀಸಾಗಿ ಎದುರಿಸುತ್ತಾ, ಗಂಡಸರಿಗೆ ಸರಿಸಮನಾಗಿ ಎಲ್ಲಾ ಸಂದರ್ಭಗಳನ್ನೂ ಎದುರಿಸುತ್ತಿದ್ದಾರೆ.

ಮನೆಕೆಲಸ ಬ್ಯಾಲೆನ್ಸ್ ಮಾಡುವುದು
ಒಂದು ಪ್ರಸಿದ್ಧ ನಾಣ್ಣುಡಿ ಪ್ರಕಾರ, ಹೆಣ್ಣು ಮನಸ್ಸು ಮಾಡಿದರೆ ಎಂಥ ಮುರಿಯುತ್ತಿರುವ ಮನೆಯನ್ನೂ ಉಳಿಸಬಲ್ಲಳು, ಹಾಗೆಯೇ ಚೆನ್ನಾಗಿರುವ ಮನೆಯನ್ನೂ ಮುರಿಯಬಲ್ಲಳು! ಇದರಿಂದ ಹೆಣ್ಣಿನ ಶಕ್ತಿ ಎಷ್ಟು ಉನ್ನತ ಎಂಬುದರ ಅರಿವಾಗುತ್ತದೆ. ಇದೇನೋ ಮನೆ, ಕುಟುಂಬಗಳ ಸಂರಕ್ಷಣೆಯ ವಿಚಾರವಾಯಿತು. ಇದರಿಂದ ಸ್ಪಷ್ಟವಾಗುವ ಇನ್ನೊಂದು ಅಂಶವೆಂದರೆ, ಯಾವುದೇ ಹೆಣ್ಣಿನ ಯಶಸ್ಸು, ಅವಳು ತನ್ನ ಕುಟುಂಬವನ್ನು ಉತ್ತಮವಾಗಿ ಸಂಭಾಳಿಸುವುದರಲ್ಲಿ ಅಡಗಿದೆ ಎಂಬುದು.

ಬೆಳೆದು ಬಂದ ಬಗೆಯಲ್ಲೂ ಸವಾಲು : ಒಬ್ಬ ಹೆಣ್ಣು ಮೊದಲು ತನ್ನ ತಾಯ್ತನಕ್ಕೆ ಆದ್ಯತೆ ನೀಡುತ್ತಾಳೆ. ತನ್ನ ಮಕ್ಕಳು ತನಗಿಂತಲೂ ಸದಾ ಮುಂದಿರಬೇಕು ಎಂದು ಬಯಸುತ್ತಾಳೆ. ಇದಕ್ಕಾಗಿ ಅವಳು ಎಂಥ ಸವಾಲನ್ನಾದರೂ ಎದುರಿಸಲು ಸಿದ್ಧಳಾಗುತ್ತಾಳೆ. ಇಷ್ಟೆಲ್ಲ ಆದರೂ ಅವಳು ಬೆಳೆದು ಬಂದ ಬಗೆಯ ಕುರಿತೂ ಸವಾಲು ಏಳುತ್ತದೆ. ಅವಳೆಲ್ಲಾದರೂ ತುಸು ಬಾಗಿದ್ದೇ ಆದರೆ, ಅವಳನ್ನು ಎಲ್ಲಾ ವಿಧದಲ್ಲೂ ತಪ್ಪಿತಸ್ಥೆ ಎಂದೇ ಬಿಂಬಿಸಲಾಗುತ್ತದೆ. ಹೆಣ್ಣನ್ನು ಮಾತ್ರವೇ ಈ ರೀತಿ ಅನಂತ ಪ್ರಶ್ನೆಗಳಿಂದ ಸತಾಯಿಸಲಾಗುತ್ತದೆ. ಕಾಲ ಎಷ್ಟೇ ಬದಲಾಗಿರಲಿ, ನಮ್ಮದು ಪುರುಷಪ್ರಧಾನ ಸಮಾಜ ಎಂಬುದನ್ನು ಮರೆಯಬಾರದು. ಏನೇ ಆದರೂ ಹೆಣ್ಣು ಗಂಡಿಗಿಂತ ಕಡಿಮೆ ಮಟ್ಟ ಎಂದೇ ತೋರಿಸಲಾಗುತ್ತದೆ, ಜೊತೆಗೆ ಅವಳ ಮೇಲೆ 2 ಪಟ್ಟು ಹೆಚ್ಚಿನ ಜವಾಬ್ದಾರಿಗಳನ್ನು ಹೊರಿಸಲಾಗುತ್ತದೆ.
ಇಲ್ಲಿನ ಪ್ರಶ್ನೆ ಅಂದರೆ, ಕುಟುಂಬ ಅಂದ್ರೆ ಕೇವಲ ಹೆಣ್ಣಿನ ಜವಾಬ್ದಾರಿ ಮಾತ್ರವೇನು? ಮಗು ಗಂಡನದಲ್ಲದೇ ಕೇವಲ ಹೆಂಡತಿಯ ಜವಾಬ್ದಾರಿ ಮಾತ್ರವೇನು? ಮನೆಗೆಲಸ ಮಾಡಿಕೊಡುವುದರಲ್ಲಿ ಗಂಡಸು ಸಹಾಯ ಮಾಡಬಾರದೇನು? ಈ ಎಲ್ಲಾ ಪ್ರಶ್ನೆಗಳಿಗೆ ಸಮಾಜಕ್ಕೆ ಗೊತ್ತಿರುವ ಒಂದೇ ಉತ್ತರ ಎಂದರೆ, ಮಕ್ಕಳು ಹೆಚ್ಚು ಹೊತ್ತು ತಾಯಿಯ ಬಳಿಯೆ ಕಳೆಯ ಬಯಸುತ್ತಾರೆ! ತಾಯಿ ಮಾತ್ರವೇ ಮಗುವಿಗೆ ಮೊದಲ ಗುರುವಾಗಿ ಒಳ್ಳೆಯದು, ಕೆಟ್ಟದ್ದರ ವ್ಯತ್ಯಾಸ ತಿಳಿಸಬಲ್ಲಳು…. ಇತ್ಯಾದಿ.
ಆದರೆ ಇಂದಿನ ಪರಿಸ್ಥಿತಿಯಲ್ಲಿ ಈ ಸಂದರ್ಭ ಬದಲಾಗಿದೆ. ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಶಾಲೆ, ಟ್ಯೂಷನ್, ಆಟಗಳಲ್ಲೇ ಕಳೆದುಬಿಡುತ್ತಾರೆ. ಇತ್ತ ತಾಯಂದಿರೂ ಉದ್ಯೋಗಸ್ಥೆ ಆಗಿರುವುದರಿಂದ, ಹಿಂದಿನಷ್ಟು ಹೆಚ್ಚು ಸಮಯವನ್ನು ಮಕ್ಕಳಿಗೆ ಕೊಡಲಾರರು. ಅವಳ ಇಡೀ ದಿನ ಹೆಚ್ಚೂ ಕಡಿಮೆ ಆಫೀಸಿನಲ್ಲೇ ಕಳೆದು ಹೋಗುತ್ತದೆ. ಹೀಗಿರುವಾಗ ಮಕ್ಕಳಿಗೆ ತಾಯಿಯೇ ಹೆಚ್ಚಿನ ಸಮಯ ನೀಡಬೇಕು ಎಂದು ಹೇಳುವುದು ಎಷ್ಟು ಸರಿ…..?
ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಮನೆ ಹೂಡು, ಮಕ್ಕಳು ಮಾಡು ಎಂಬುದರಲ್ಲಿ ಗಂಡುಹೆಣ್ಣು ಇಬ್ಬರಿಗೂ ಸಮಪಾಲು ಇರುತ್ತದೆ. ಹೀಗಾಗಿ ಮಕ್ಕಳನ್ನು ಬೆಳೆಸುವ ಹೊಣೆ ಸಹ ಇಬ್ಬರಿಗೂ ಸಮನಾಗಿರಬೇಕು, ಕೇವಲ ತಾಯಿಯದು ಮಾತ್ರವಲ್ಲ. ಹೀಗಾಗಿ ಇನ್ನು ಮುಂದೆ ಯಾವಾಗ ಮಕ್ಕಳನ್ನು ಬೆಳೆಸುವ ಮಾತು ಬರುತ್ತದೋ, ಕೇವಲ ಹೆಣ್ಣನ್ನು ಮಾತ್ರ ದೂರಿ ಪ್ರಯೋಜನವಿಲ್ಲ, ಗಂಡು ಸಹ ಅಷ್ಟೇ ಹೊಣೆಗಾರನಾಗುತ್ತಾನೆ. ಸಮಾನತೆಗಾಗಿ ಗಂಡಸರ ಪಾತ್ರವನ್ನು ತೂಗಬೇಕಾಗುತ್ತದೆ, ಆಗ ಮಾತ್ರ ಹೆಂಗಸರನ್ನು ಕಾಡುವ ಸವಾಲುಗಳು ಎಷ್ಟೋ ಕಡಿಮೆ ಆಗಬಹುದು.

ಹೆಣ್ಣಿನೊಂದಿಗೆ ಹಿಂಸೆ
ಒಂದು ಕಡೆ ಅನುಕೂಲವಿದ್ದ ಹೆಂಗಸರು ಯಶಸ್ಸಿನ ಹೊಸ ಹೊಸ ಆಯಾಮಗಳನ್ನು ಏರುತ್ತಾ ಹೋದರೆ, ಇನ್ನೊಂದು ಕಡೆ ಹೆಂಗಸರು ಅತ್ಯಂತ ಹಿಂಸೆಗೆ ಗುರಿಯಾಗಿ ನಾನಾ ಕಷ್ಟ ಕೋಟಲೆಗಳಿಗೆ ಗುರಿಯಾಗುತ್ತಾರೆ. ಇಂದಿಗೂ ಹೆಣ್ಣನ್ನು ಹೊಡೆದು ಬಡಿದು ಮಾಡುವುದು ಮಾಮೂಲೇ ಅಂತಾಗಿದೆ, ಹೆಣ್ಣಿನ ಅಪಹರಣ, ಮಾನಹಾನಿ, ಅತ್ಯಾಚಾರದ ಹಗರಣಗಳಿಗೆ ಲೆಕ್ಕವೇ ಇಲ್ಲ! ಇನ್ನೂ ಘೋರವೆಂದರೆ ಆಸ್ತಿ, ಒಡವೆ, ವರದಕ್ಷಿಣೆಯ ದುರಾಸೆಗೆ ಉತ್ತರ ಭಾರತದಲ್ಲಿ ಸಜೀವ ವಧು ದಹನ, ಇಂದಿಗೂ ಜ್ವಲಂತವಾಗಿ ಉಳಿದುಕೊಂಡಿದೆ.
ಅಂತಾರಾಷ್ಟ್ರಿಯ ಮಟ್ಟದಲ್ಲಿ ತೂಗಿ ನೋಡಿದಾಗ, ಇಂದಿಗೂ ಭಾರತ ಹೆಣ್ಣಿನ ಪಾಲಿಗೆ ಸುರಕ್ಷತೆ ಒದಗಿಸುವಲ್ಲಿ ಹಿಂದುಳಿದಿದೆ. ಪ್ರತಿದಿನ ಹೆಣ್ಣಿನ ವಿರುದ್ಧ ಹಿಂಸೆಯ ಸಮಾಚಾರ ಇದ್ದೇ ಇರುತ್ತದೆ. ಕೆಳ ಮಧ್ಯಮ, ಬಡ ಕುಟುಂಬಗಳಲ್ಲಿ ಇಂದಿಗೂ ಮನೆಯಲ್ಲೇ ಹೆಣ್ಣನ್ನು ದೈಹಿಕವಾಗಿ ಹಿಂಸಿಸುವುದು ಸಾಮಾನ್ಯ ವಿಷಯವಾಗಿದೆ. ಇಂಥ ಡೊಮೆಸ್ಟಿಕ್ ವೈಲೆನ್ಸ್ ವಿರುದ್ಧ 2005ರಲ್ಲಿ ಕಾನೂನು ರೂಪುಗೊಂಡಿದ್ದರೂ, ದೇಶವಿಡೀ ಗಮನಿಸಿದರೆ, ಮೂವರಲ್ಲಿ ಒಬ್ಬ ಹೆಣ್ಣು ಇಂಥ ಹಿಂಸೆಗೆ ಬಲಿಯಾಗುತ್ತಿರುತ್ತಾಳೆ.
2022ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಇಂಥ ಗೃಹ ಹಿಂಸೆಯ 7,000 ದಷ್ಟು ಪ್ರಕರಣ ದಾಖಲಿಸಿತು. ತನ್ನ ಮನೆಯ ಹಿರಿಯರ ವ್ಯವಹಾರ ಗಮನಿಸುತ್ತಾ ಬೆಳೆಯುವ ಹುಡುಗ, ಮುಂದೆ ತನ್ನ ತಂಗಿ, ಪತ್ನಿಯರ ಮೇಲೆ ಕೈ ಮಾಡುವುದನ್ನು ತನ್ನ ಹಕ್ಕೆಂದೇ ಭಾವಿಸುತ್ತಾನೆ. ಹೆಣ್ಣು ಎಂದಿದ್ದರೂ ತನಗಿಂತ ಕೀಳು ಎಂಬ ಕುವಿಚಾರ ಅವನ ಮನದಲ್ಲಿ ಮನೆ ಮಾಡುತ್ತದೆ.
ಯಾವ ಹೆಣ್ಣಿನ ಜೊತೆ ದಿನಾ ಇಂಥ ಘೋರ ಹಿಂಸೆ ನಡೆಯುತ್ತದೆ, ಅವರನ್ನು ಹಿಂಸಿಸುವವರು ಯಾರು ಎಂದು ನಾವೆಂದೂ ಯೋಚಿಸಲೂ ಹೋಗುವುದಿಲ್ಲ. ಹಿಂಸೆಯ ಮೂಲ ಕಾರಣವಾದರೂ ಏನು? ಈ ಹಿಂಸೆಯನ್ನು ನಿಲ್ಲಿಸುವುದು ಹೇಗೆ? ನಮ್ಮಲ್ಲಿ ಯಾರೂ ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೋಗುವುದೇ ಇಲ್ಲ. ಇದಕ್ಕೆ ವಿರುದ್ಧವಾಗಿ ನಾವು, ಯಾವುದೇ ಹೆಣ್ಣಿನ ಕುರಿತಾಗಿ ಹಿಂಸೆಯ ವಿಷಯ ಕೇಳಿಬಂದಾಗ, ಅದರ ವಿರುದ್ಧ ಧ್ವನಿ ಎತ್ತುವ ಬದಲು, ನಮ್ಮ ಮನೆಯ ಹೆಣ್ಣುಮಕ್ಕಳ ಕುರಿತಾಗಿ ಬಗೆಬಗೆಯ ಪ್ರತಿಬಂಧಗಳನ್ನು ಹೇರುತ್ತೇವೆ.
ನೌಕರಿಗೆ ಸಂಬಂಧಿಸಿದ ಸವಾಲುಗಳು
ಯೋಗ್ಯತೆ ಇದ್ದರೂ ನೌಕರಿಯಿಂದ ದೂರ : ಭಾರತೀಯ ಅರ್ಥ ವ್ಯವಸ್ಥೆ ಬಲು ವೇಗವಾಗಿ ಹೆಚ್ಚುತ್ತಿದೆ, ಆದರೆ ದೇಶದ ಕಾರ್ಯಬಲದಲ್ಲಿ ಹೆಂಗಸರ ಸಂಖ್ಯೆ, ಎಷ್ಟಿರಬೇಕೋ ಖಂಡಿತಾ ಅಷ್ಟಿಲ್ಲ. ಹೆಂಗಸರು ನೌಕರಿ ಮಾಡಬಯಸುತ್ತಾರೆ, ಆದರೆ ಅವರ ಎದುರು ಒಂದೆರಡಲ್ಲ, ಸಾವಿರಾರು ಸಾಲುಗಳಿವೆ. ಈ ಕಾರಣದಿಂದ ಎಷ್ಟೋ ಸಲ ಅವರ ಯೋಗ್ಯತೆಯ ಸದ್ಬಳಕೆ ಆಗುವುದೇ ಇಲ್ಲ.`ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ’ಯ ಹೊಸ ಹೊಸ ಅಂಕಿಸಂಖ್ಯೆಗಳ ಪ್ರಕಾರ, ಎಷ್ಟೋ ಪ್ರೊಫೆಶನ್ ಗಳಲ್ಲಿ ಮಹಿಳೆಯರ ಪಾಲುದಾರಿಕೆ ಕೇವಲ ನಾಮ ಮಾತ್ರವಾಗಿದೆ. ಈ ಕಾರಣದಿಂದಾಗಿಯೇ ಯೋಗ್ಯತೆ ಇದ್ದರೂ ಕೇವಲ 9% ಹೆಂಗಸರ ಬಳಿ ನೌಕರಿ ಇದೆಯೇ ಹೊರತು, ಹೆಚ್ಚಿಗೆ ಅಲ್ಲ. ಯೋಗ್ಯತೆ ಇದ್ದರೂ ಸಹ ಕೆಲಸದ ಬೇಟೆಯಲ್ಲೇ ಇರುವಂತಾಗಿದೆ.
ಪ್ರೆಗ್ನೆನ್ಸಿ ಮಕ್ಕಳ ಜನನ, ಮಕ್ಕಳ ಆರೈಕೆ, ವೃದ್ಧರ ಆರೈಕೆ, ಕೌಟುಂಬಿಕ ಸಮರ್ಥನೆಯ ಕೊರತೆ, ಆಫೀಸ್ ವಾತಾವರಣ…. ಇತ್ಯಾದಿ ಅನೇಕ ವಿಷಯಗಳು, ಹೆಂಗಸರು ಇಂಥ ಕಾರ್ಯಕ್ಷೇತ್ರಗಳಲ್ಲಿ ಕೆಲಸ ಮಾಡದಂತೆ ಮಾಡಿದೆ ಹಾಗೂ ಹಿರಿಯ ಹುದ್ದೆಗಳನ್ನು ನಿಭಾಯಿಸಲು ಬಿಡುತ್ತಿಲ್ಲ.
ಪ್ರೆಗ್ನೆನ್ಸಿ : ಗರ್ಭಾವಸ್ಥೆ ಒಬ್ಬ ಹೆಣ್ಣಿನ ಜೀವನದಲ್ಲಿ ಅತಿ ಮಹತ್ವಪೂರ್ಣ ಭಾಗವಾಗಿದೆ. ಬೇಕಿಲ್ಲದಿದ್ದರೂ ಈ ಸ್ಥಿತಿಯಿಂದಾಗಿ ಅವಳು ತನ್ನ ಕೆರಿಯರ್ ನ್ನು ನಿರ್ಲಕ್ಷಿಸ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವಳು ಎಲ್ಲಾ ತರಹದ ಕೆಲಸಗಳನ್ನೂ ನಿಭಾಯಿಸಲು ಸಾಧ್ಯವಿಲ್ಲ. ಆಗ ಅವಳು ಎಷ್ಟೆಷ್ಟೋ ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ, ಜೊತೆಗೆ ಅನೇಕ ಬಗೆಯ ದೈಹಿಕ ಹಿಂಸೆಗಳನ್ನೂ ಅನುಭವಿಸಬೇಕು. ಆಕೆ ಈ ರೀತಿ ಡೆಲಿವರಿ ಲೀವ್ ನಲ್ಲಿ ಹೋದಾಗ, ಅವಳಿಲ್ಲದೆ ಆಫೀಸಿನಲ್ಲಿ ಅನೇಕ ಬದಲಾವಣೆಗಳು ತಂತಾನೇ ಆಗಿ ಹೋಗಿರುತ್ತವೆ.
ಈ ಕಾರಣಗಳಿಂದಾಗಿ ಅವಳ ಬಡತಿಯ ಅವಕಾಶ ಸೀಮಿತ ಆಗುತ್ತದೆ, ಆಗ ಸಹಜವಾಗಿ ಅವಳ ಪುರುಷ ಜೂನಿಯರ್ ಮುಂದೆ ಸರಿದು ಹೋಗುತ್ತಾನೆ. ಈಕೆಯ ಮಗು ಹಲವು ತಿಂಗಳಿನದ್ದಾಗಿದ್ದರೆ, ಆ ಸಮಯದಲ್ಲಿ ಮಗುವನ್ನು ನೋಡಿಕೊಳ್ಳುವುದರ ಜೊತೆ, ಆಫೀಸನ್ನೂ ಸಂಭಾಳಿಸುವುದು, ನಿಜಕ್ಕೂ ಕಷ್ಟ ಸಾಧ್ಯವೇ ಸರಿ. ಮಗುವಿನ ಚಿಂತೆ ಅವಳನ್ನು ನೆಮ್ಮದಿಯಾಗಿ ಕೆಲಸ ಮಾಡಲು ಬಿಡಲಾರದು.
ಪ್ರೆಗ್ನೆನ್ಸಿ ನಂತರದ ತೊಂದರೆಗಳು
ಒಂದು ಸಮೀಕ್ಷೆ ಪ್ರಕಾರ, 2% ಹೆಂಗಸರು ಮಗುವಿನ ಜನನದ 2 ವರ್ಷಗಳ ನಂತರ ಗಂಭೀರ ಬೆನ್ನು ನೋವುಗಳಿಂದ ನರಳುತ್ತಿರುತ್ತಾರೆ. ಅದೇ ತರಹ 38% ಹೆಂಗಸರು ಪ್ರೆಗ್ನೆನ್ಸಿಯ 10-12 ವರ್ಷಗಳ ನಂತರ ಯೂರಿನ್ ಲೀಕೇಜ್ ಸಮಸ್ಯೆಯಿಂದ ಹೊರ ಬಂದಿರುವುದಿಲ್ಲ. ಇಷ್ಟು ಮಾತ್ರವಲ್ಲ, ತಾಯಿಯಾದ ನಂತರ ಸಾಮಾನ್ಯವಾಗಿ ಹೆಂಗಸರು ಬಾಡಿ ಶೇಮಿಂಗ್ ನಿಂದ ತಪ್ಪಿಸಿಕೊಳ್ಳಲಾರರು. ಮಗು ಹುಟ್ಟಿದ ನಂತರ, ಸಾಮಾನ್ಯವಾಗಿ ಹೆಂಗಸರು ದೇಹ ತೂಕ ನಿಯಂತ್ರಿಸಲು ಬಹಳಷ್ಟು ಶ್ರಮಿಸಬೇಕಾಗುತ್ತದೆ. ಈ ಕಾರಣದಿಂದ ಅವರು ಸ್ಥೂಲತೆ ಗಳಿಸುತ್ತಾರೆ. ಹೀಗಾಗಿ ಅಧಿಕ ಆರೋಗ್ಯ ಸಮಸ್ಯೆ ಎದುರಿಸಬೇಕಾದ ಈ ಹೆಂಗಸರು, ಯಶಸ್ವಿಯಾಗಿ ಆಫೀಸ್ ಕೆಲಸ ನಿರ್ವಹಿಸಲಾಗದು. ಅದರಲ್ಲೂ ಮಾಡೆಲಿಂಗ್, ನಟನೆಯಂಥ ವೃತ್ತಿಗಳಿಗೆ ಬ್ಯೂಟಿ, ಫಿಗರ್ ಮೇಂಟೆನೆನ್ಸ್ ನಿಜಕ್ಕೂ ಅತಿ ದೊಡ್ಡ ಸವಾಲಾಗುತ್ತದೆ.
ಸಮಾನ ವೇತನ
ಸಾಮಾನ್ಯವಾಗಿ ಗಂಡಸರಿಗೆ ಹೋಲಿಸಿದಾಗ, ಹೆಂಗಸರಿಗೆ ಕಡಿಮೆ ಸಂಬಳ ದೊರಕುತ್ತದೆ. ಒಬ್ಬ ಹೆಣ್ಣಿಗೆ ಕೆಲಸದ ರೀತಿಯ ಕಡೆಗೂ ಗಮನ ಹರಿಸಬೇಕಾಗುತ್ತದೆ. ಮಗು ಚಿಕ್ಕದಾಗಿದ್ದರೆ, ತನಗೆ ಸುಲಭವಾಗಿ ನಿಭಾಯಿಸಲು ಆಗುವಂಥ ಕೆಲಸವನ್ನು ಮಾತ್ರ ಆಕೆ ಹುಡುಕಬೇಕಾಗುತ್ತದೆ. ಸಂಜೆ ಆಗುತ್ತಿದ್ದಂತೆ ಅವಳು ಮನೆ ಕಡೆ ಧಾವಿಸಲೇಬೇಕು. ಈ ಕಾರಣಗಳಿಂದಲೂ ಎಷ್ಟೋ ಸಲ ಅವಳು ಸಂಬಳದ ಕುರಿತಾಗಿ ಕಾಂಪ್ರಮೈಸ್ ಆಗಲೇಬೇಕಾಗುತ್ತದೆ.
ಲೈಂಗಿಕ ಶೋಷಣೆ
ಕಾರ್ಯ ಸ್ಥಳದಲ್ಲಿ ಲೈಂಗಿಕ ಶೋಷಣೆ ಈಗಲೂ ಭಯಂಕರ ಸಮಸ್ಯೆ ಆಗಿಯೇ ಉಳಿದಿದೆ. ಯಾವ ಹೆಣ್ಣಿನ ಜೊತೆ ಹೀಗೆ ನಡೆಯುತ್ತದೋ, ತಕ್ಷಣ ಅವಳು ಈ ಮಾಹಿತಿಯನ್ನು ಮ್ಯಾನೇಜ್ ಮೆಂಟ್ ಗೆ ಮುಟ್ಟಿಸಬೇಕು. ಆಗ ಆಡಳಿತ ಮಂಡಳಿ ಇದರ ತಪಾಸಣೆ ಮಾಡಿಸುತ್ತದೆ. ಆದರೆ ಎಷ್ಟೋ ಕಡೆ ಈ ಮಂದಿ ಇಂಥ ವಿಷಯವನ್ನು ಅಲ್ಲೇ ಹೊಸಕಿ ಬಿಡುತ್ತಾರೆ. ಆಗ ಎಷ್ಟೋ ಹೆಂಗಸರು ಅನಿವಾರ್ಯ ತಮ್ಮ ನೌಕರಿ ತ್ಯಜಿಸಬೇಕಾಗುತ್ತದೆ.
ಶ್ರಮಬಲದಲ್ಲಿ ಹಿಂದುಳಿಯುವ ಹೆಂಗಸರು
ವಿಶ್ವ ಬ್ಯಾಂಕಿನ ತಾಜಾ ಅಂಕಿ ಅಂಶಗಳ ಪ್ರಕಾರ, ಹೆಂಗಸರು 2021ರಲ್ಲಿ ಭಾರತದ ಕಾರ್ಯಬಲದ 23%ಗೂ ಕಡಿಮೆ ಇದ್ದರು. 2005ರಲ್ಲಿ ಸುಮಾರು 27% ಪಾಲುಗಾರಿಕೆ ಇತ್ತು. ಬಾಂಗ್ಲಾ ದೇಶಕ್ಕೆ ಹೋಲಿಸಿದಾಗ ಅಲ್ಲಿ 32% ಹಾಗೂ ಶ್ರೀಲಂಕಾದಲ್ಲಿ 35% ಇತ್ತು!
ಉನ್ನತ ಶಿಕ್ಷಣ, ಉತ್ತಮ ಆರೋಗ್ಯ, ಮಹಿಳಾ ಹಿತ ಕೋರುವ ಕಾನೂನುಗಳ ಹೊರತಾಗಿಯೂ ಮೂರನೇ ಒಂದು ಭಾಗದಷ್ಟು ಕಡಿಮೆ ಭಾರತೀಯ ಹೆಂಗಸರು ಕೆಲಸಕ್ಕೆ ಹೋಗುತ್ತಾರೆ. ಈ ಕೊರತೆಗೆ ಎಷ್ಟೆಷ್ಟೋ ಕಾರಣಗಳಿವೆ. ಮದುವೆ, ಮಕ್ಕಳ ಆರೈಕೆ, ಮಕ್ಕಳ ಸುರಕ್ಷತೆಯ ಚಿಂತೆ, ಆಫೀಸಿಗೆ ಬಂದು ಹೋಗುವ ಓಡಾಟದ ವಿಚಾರ…. ಇತ್ಯಾದಿ.
ಉದಾ : 32ರ ದೀಪಾಳ ಬಳಿ 2 ಮಾಸ್ಟರ್ಸ್ ಡಿಗ್ರಿ ಇವೆ. ಅವಳು ನೌಕರಿಯಲ್ಲಿದ್ದಳು. ನಂತರ ಎಲ್ಲರಂತೆ ಅವಳೂ ಮಾಡಿದಳು. ಮದುವೆ, ಮಕ್ಕಳಾದ ನಂತರ ಆಕೆ ತನ್ನ ಕೆರಿಯರ್ ನ್ನು ಮರೆತೇ ಹೋದಳು. ಎಲ್ಲಕ್ಕೂ ಮುಖ್ಯ ಕಾರಣ, ಆಫೀಸಿನ ಸಂಸ್ಕೃತಿ. ಅವಳ ಸಹೋದ್ಯೋಗಿಗಳು ಸಂಜೆ ಎಂಟಾದರೂ ಆಫೀಸಿನಲ್ಲೇ ಸಂತೋಷವಾಗಿ ಉಳಿಯುತ್ತಿದ್ದರು, ಆದರೆ ಆಕೆಗೆ ಹಾಗೆ ಮಾಡಲು ಆಗುತ್ತಿರಲಿಲ್ಲ.
ದೀಪಾ ಹೇಳುತ್ತಾಳೆ, “ನನಗೆ ಸಂಜೆ 6-8 ಅಂದ್ರೆ ಬಲು ಅಮೂಲ್ಯ ಸಮಯ. ಈ ಸಮಯದಲ್ಲಿ ನಾನು ನನ್ನ ಕುಟುಂಬದವರೊಡನೆ ಕಳೆಯಲೇ ಬೇಕಾಗುತ್ತದೆ. ಈ ಕಾರಣದಿಂದಾಗಿ ಸಂಜೆ 6 ಗಂಟೆಗೆ ಆಫೀಸು ಬಿಡುತ್ತಿದ್ದೆ. ಆ ಕಾರಣದಿಂದ ಮ್ಯಾನೇಜ್ ಮೆಂಟ್ ಗೆ ನಾನು ಇಷ್ಟ ಆಗುತ್ತಿರಲಿಲ್ಲ.”
ಮೆಕೆನ್ಝಿ ಕನ್ಸಲ್ಟಿಂಗ್ ಫರ್ಮ್ ನ 2018ರ ರಿಪೋರ್ಟ್ ಪ್ರಕಾರ, ಮ್ಯಾನೇಜ್ ಮೆಂಟ್ ಮಟ್ಟದಲ್ಲಿ ಇಂಥ ಎಷ್ಟೋ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ, ಅದು ಇಂಥ ಅನೇಕ ಸಮಸ್ಯೆಗಳನ್ನು ಸುಧಾರಿಸಬಹುದಾಗಿದೆ. ಉದಾ : ಲಿಂಗಭೇದ ತೋರದೆ ತರಬೇತಿ ನೀಡುವಿಕೆ, ಸಾಮಾಜಿಕ ಸುರಕ್ಷತೆ, ಮಕ್ಕಳ ಆರೈಕೆಗಾಗಿ ಫ್ಲೆಕ್ಸಿಬಲ್ ಟೈಮಿಂಗ್ಸ್ ಹಾಗೂ ಕಾರ್ಯಸ್ಥಳ ತಲುಪಲು, ಸುರಕ್ಷಿತ ಸುಲಭ ವಾಹನ ವ್ಯವಸ್ಥೆ ಇತ್ಯಾದಿ ಅಗತ್ಯ. ಈ ಸೌಲಭ್ಯಗಳು ಉದ್ಯೋಗಸ್ಥ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಬಲ್ಲದು ಹಾಗೂ ದೇಶದ 2025ರವರೆಗೆ ಕೋಟ್ಯಂತರ ಡಾಲರ್ ಜೋಡಿಸಬಹುದು.
ಕೋವಿಡ್ ನ ಪರಿಣಾಮ
ಅಝೀಂ ಪ್ರೇಂಜಿ ವಿಶ್ವವಿದ್ಯಾನಿಲಯದ `ಸೆಂಟರ್ ಫಾರ್ ಸಸ್ಟೇನೆಬಲ್ ಎಂಪ್ಲಾಯ್ಮೆಂಟ್’ನ ಒಂದು ವರದಿಯ ಪ್ರಕಾರ, ಕೋವಿಡ್ ನಂತರ ಗಂಡಸರಿಗೆ ಹೋಲಿಸಿದಾಗ, ಹೆಂಗಸರು ನೌಕರಿ ಕಳೆದುಕೊಳ್ಳುವ ಸಾಧ್ಯತೆಗಳೇ ಅಧಿಕ ಹಾಗೂ ಕಾರ್ಯಬಲಕ್ಕೆ ವಾಪಸ್ಸಾಗುವ ಸಾಧ್ಯತೆಗಳೂ ಕಡಿಮೆ ಇದ್ದವು.
ಮಕ್ಕಳ ಗಮನಿಸದ ಗಿಲ್ಟ್
ಇಂದಿನ ಅತಿ ತುಟ್ಟಿ ಜೀವನದಲ್ಲಿ, ಪ್ರತಿದಿನ ಹೊಸ ಹೊಸ ಸವಾಲುಗಳನ್ನು ಎದುರಿಸಲು ಗಂಡಸರ ಜೊತೆ ಹೆಂಗಸರೂ ಸಮಾನವಾಗಿ ದುಡಿದು ಗಳಿಸಬೇಕಿದೆ. ಆದರೆ ಈ ನೌಕರಿಯ ಜಂಜಾಟದಲ್ಲಿ ಹೆಂಗಸರು ತಮ್ಮ ಮಕ್ಕಳತ್ತ ಹೆಚ್ಚಿನ ನಿಗಾ ವಹಿಸಲು ಆಗುವುದಿಲ್ಲ, ಆ ಕಾರಣ ಮಕ್ಕಳು ಒಂಟಿತನ ಅನುಭವಿಸುತ್ತಾರೆ, ಮಂಕಾಗುತ್ತಾರೆ.
ಒಂದು ಮಗುವಿಗೆ ಸದಾ ತಾಯಿ ತಂದೆ ತನ್ನ ಜೊತೆಗಿದ್ದು ಅವರ ಪ್ರೀತಿ ವಾತ್ಸಲ್ಯ ಪಡೆಯುತ್ತಿರಬೇಕು ಅನಿಸುತ್ತದೆ. ಅಗತ್ಯ ಸಮಯದಲ್ಲಿ ಹೆತ್ತವರ ಸಾಂಗತ್ಯ ದೊರಕದ ಕಾರಣ, ಮಕ್ಕಳಲ್ಲಿ ಹಲವಾರು ಬಗೆಯ ಕುಂದುಕೊರತೆ ಕಾಡಲಾರಂಭಿಸುತ್ತದೆ. ಇದರಿಂದ ಆ ಮಕ್ಕಳು ಬೇಗ ಕೋಪಗೊಳ್ಳುತ್ತಾರೆ, ಸದಾ ಸಿಡಿಸಿಡಿ ಎನ್ನುತ್ತಾರೆ, ಹಠಮಾರಿ ಆಗುತ್ತಾರೆ. ಈ ಎಲ್ಲದಕ್ಕೂ ತಾನು ಮನೆಯಲ್ಲಿ ಇಲ್ಲದಿರುವುದೇ ಕಾರಣ ಎಂದು ತಾಯಿ ಸದಾ ಕೊರಗುತ್ತಾಳೆ. ಹೀಗಾಗಿ ಅವಳು ಅತ್ತ ಪೂರ್ತಿ ಮನಸ್ಸಿನಿಂದ ಆಫೀಸ್ ಕೆಲಸ ಮಾಡಲಾಗದು ಅಥವಾ ಮನೆ ಕಡೆ ಹೆಚ್ಚಿನ ನಿಗಾ ವಹಿಸಲಾಗದು.
ಹೊಸ ತಾಯಂದಿರ ಸವಾಲು
ತಾಯಿ ಆಗುವುದು ಎಂಬುದು ಯಾವ ಹೆಣ್ಣಿಗೇ ಆಗಲಿ, ದೊಡ್ಡ ಹೆಮ್ಮೆಯ ಸಂಗತಿ. ತಾಯಿ ಆದ ತಕ್ಷಣ ಅವಳ ಪಾಲಿಗೆ ಒಂದು ದೊಡ್ಡ ಜವಾಬ್ದಾರಿ ಹೆಗಲೇರುತ್ತದೆ. ಇಂಥ ಹೊಸ ತಾಯಂದಿರು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅನುಭವದ ಕೊರತೆ, ಮನಸ್ಸಿನ ಆತಂಕ, ಸಮಸ್ಯೆಗಳ ಸರಮಾಲೆ, ಸೂಕ್ತ ಸಪೋರ್ಟ್ ಸಿಗದ ಕಾರಣ ಅವಳ ಈ ಸವಾಲುಗಳು ಮತ್ತಷ್ಟು ಗಂಭೀರ ಆಗಬಹುದು.
ಸುಸ್ತು ನಿದ್ದೆಯ ಕೊರತೆ
ಪ್ರತಿ ಸಲ ಇಂಥ ತಾಯಿ ತನ್ನ ನಿದ್ದೆಯನ್ನು ತ್ಯಜಿಸ ಬೇಕಾಗುತ್ತದೆ. ಮಗುವಿನ ಎಚ್ಚರ ನಿದ್ದೆಯ ರೊಟೀನ್‌ಗೆ ಅಡ್ಜಸ್ಟ್ ಆಗುತ್ತಾ, ತಾಯಿ ಸಹ ಅಷ್ಟಿಷ್ಟು ನಿದ್ದೆ ಮಾಡಬೇಕಾಗುತ್ತದೆ. ಇದರಿಂದ ಅವಳ ನಿದ್ದೆ ಕೆಡುತ್ತದೆ, ಸುಸ್ತು ಸಂಕಟ ಹೆಚ್ಚುತ್ತದೆ. ಇದೇ ಸಮಯಕ್ಕೆ ಹಗಲಲ್ಲಿ ನಿದ್ರಿಸಲಾಗದ ಹೆಂಗಸರು, ಮನೆಯ ಕೆಲಸಗಳನ್ನೂ ನಿಭಾಯಿಸಿ, ಆಫೀಸಿನತ್ತ ದೌಡಾಯಿಸಿದಾಗ, ಅವಳಿಗೆ ನಿದ್ದೆಯ ಕೊರತೆ ದೊಡ್ಡ ಸಮಸ್ಯೆ ಆಗುತ್ತದೆ. ಇದರಿಂದ ಅವಳ ಆರೋಗ್ಯ ಹದಗೆಡುತ್ತದೆ.
ಮನ ಕೊರೆಯುವ ಪಶ್ಚಾತ್ತಾಪ
ಹೊಸ ತಾಯಂದಿರಿಗೆ ಸತತ ತನ್ನ ಅಕ್ಕಪಕ್ಕದ ಜನರಿಂದ ಪುಕ್ಕಟೆ ಸಲಹೆ, ಟಿಪ್ಸ್, ದೂರುಗಳು ಬರುತ್ತಲೇ ಇರುತ್ತವೆ. ಇದರಿಂದ ಆಕೆಗೆ ತಾನು ಒಳ್ಳೆಯ ತಾಯಿ ಆಗಲೇಬೇಕೆಂಬ ಹೆಚ್ಚಿನ ಒತ್ತಡ ಬೀಳುತ್ತಾ ಇರುತ್ತದೆ. ಇದರಿಂದ ಅವಳ ಮನದಲ್ಲಿ ಗಿಲ್ಟ್, ಕೀಳರಿಮೆ ಬೆಳೆಯುತ್ತದೆ. ಇದು ತಾಯಿ ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದಲ್ಲ.
ಯಶಸ್ವಿ ತಾಯಿ ಎನಿಸುವುದು ಸುಲಭದ ಮಾತಲ್ಲ, ಒಬ್ಬ ಉದ್ಯೋಗಸ್ಥ ತಾಯಿಗೆ ತನ್ನ ಬ್ಯೂಟಿಫುಲ್ ಫಿಗರ್, ಆಕರ್ಷಣೆ, ಆರೋಗ್ಯ ಎಲ್ಲದರ ಕಡೆ ಸಂಪೂರ್ಣ ಗಮನ ಇರಬೇಕು, ಆಗಲೇ ಅವಳ ಕೆರಿಯರ್ ಉದ್ಧಾರವಾದೀತು. ತಾಯಿಯಾದವಳು ತನ್ನ ಜೀವವನ್ನೇ ಒತ್ತೆಯಿಟ್ಟು ಮಗುವಿಗೆ ಜನ್ಮ ನೀಡುತ್ತಾಳೆ, ಹೀಗಾಗಿಯೇ ನಮ್ಮ ಸಂಸ್ಕೃತಿಯಲ್ಲಿ `ಮಾತೃ ದೇವೋ ಭವ!’ ಎಲ್ಲಕ್ಕಿಂತ ಮಿಗಿಲಾದುದು! ನಂತರದ ಸ್ಥಾನ ತಂದೆಗೆ ಹೋಗುತ್ತದೆ.
ಇಷ್ಟು ಸಾಲದೆಂಬಂತೆ ತಾಯಿ ಹೆಚ್ಚುತ್ತಿರುವ ತನ್ನ ದೇಹ ತೂಕ, ಸೊಂಟದ ಸುತ್ತಲೂ ಸ್ಟ್ರೆಚ್ ಮಾರ್ಕ್ಸ್, ಕೂದಲು ಉದುರುವಿಕೆ, ಸಿಸೇರಿಯನ್ ಆದರೆ ಅನುಭವಿಸುವ ಯಮಯಾತನೆ…. ಮುಂತಾದ ಎಲ್ಲವನ್ನೂ ದಾಟಿಕೊಂಡೇ ಮುನ್ನಡೆಯಬೇಕು. ಈ ಎಲ್ಲದರಿಂದ ಅವಳನ್ನು ಅಪಾರ ಮಾನಸಿಕ ಒತ್ತಡ, ದುಃಖ, ಬೇಸರ, ನಿರಾಶೆಗಳು ಮಡುಗಟ್ಟುತ್ತವೆ. ಬಿಗಡಾಯಿಸುತ್ತಿರುವ ತನ್ನ ದೇಹದ ಅಂಕುಡೊಂಕು ನೋಡಿ ಬೇಸತ್ತ ಅವಳಿಗೆ, ಕ್ರಮೇಣ ತನ್ನ ದೇಹ ಕಂಡರಾಗದು ಎಂಬ ಸ್ಥಿತಿ ತಲುಪುತ್ತಾಳೆ. ಇದರಲ್ಲಿ ಹಳೆಯ ಮಾನಸಿಕ ಸಂಕಟ ಬೆರೆತುಕೊಂಡುಬಿಟ್ಟರೆ, ಅವಳಿಗೆ `ಸನ್ನಿ’ ಹಿಡಿಯುವುದರಲ್ಲಿ ಆಶ್ಚರ್ಯವಿಲ್ಲ. ಇದರಿಂದ ಹೊರಬರಲು ಅವಳು ಹರಸಾಹಸ ಪಡಬೇಕಾಗುತ್ತದೆ.
ಕೆರಿಯರ್ಸೋಶಿಯಲ್ ಲೈಫ್
ಮಗುವಿನ ಆರೈಕೆ ಹಾಗೂ ಅಸ್ತವ್ಯಸ್ತ ದಿನಚರ್ಯೆಗಳ ಮಧ್ಯೆ, ಹೆಂಗಸರು ಬಹುತೇಕವಾಗಿ ಈ ದಿನಗಳಲ್ಲಿ ಮನೆಯಲ್ಲೇ ಉಳಿಯ ಬಯಸುತ್ತಾರೆ. ಹೀಗಾಗಿ ತನ್ನ ಈ ಅವಸ್ಥೆಯಲ್ಲಿ ಅವಳು ಫ್ರೆಂಡ್ಸ್, ನೆಂಟರಿಷ್ಟರು, ಸಹೋದ್ಯೋಗಿಗಳ ಜೊತೆ ಹೆಚ್ಚಿನ ಒಡನಾಟ ಹೊಂದಲು ಬಯಸುವುದಿಲ್ಲ. ಎಲ್ಲರಿಂದ ದೂರಾಗಿ ತಾನು ಒಬ್ಬಂಟಿ ಆಗಿಹೋಗುತ್ತಾಳೆ. ಅವಳ ಸಾಮಾಜಿಕ ಒಡನಾಟಕ್ಕೆ ಫುಲ್ ಸ್ಟಾಪ್ ಬೀಳುತ್ತದೆ, ಹೀಗೆ ಮುಂದೆ ಜೀವನವಿಡೀ ತಾನೆಲ್ಲಿ ಒಂಟಿ ಆಗಿಹೋಗುತ್ತೇನೋ ಎಂಬ ಭಯ ಕಾಡುತ್ತಿರುತ್ತದೆ.
ಮಾನಸಿಕ ಸಮಸ್ಯೆಗಳು
ಪೋಸ್ಟ್ ಪಾರ್ಟಂ ಡಿಪ್ರೆಶನ್ (ಸನ್ನಿ) ಇಂಥದೇ ಒಂದು ಭೀಕರ ಸ್ಥಿತಿಯಾಗಿದ್ದು, ಹಲವಾರು ಬಾಣಂತಿಯರು ಈ ಸ್ಥಿತಿ ಎದುರಿಸಬೇಕಾಗಿ ಬರುತ್ತದೆ. ಬಾಲಿವುಡ್ ನಟಿ ಸಮೀರಾ ರೆಡ್ಡಿ, (`ಶರಪಂಜರ’ ಚಿತ್ರದಲ್ಲಿ ಕಾವೇರಿ ಪಾತ್ರದಲ್ಲಿದ್ದ ಕಲ್ಪನಾ) ತಾನು ಈ ಸ್ಥಿತಿಯನ್ನು ಹೋರಾಡಿ ಗೆದ್ದು ಬಂದೆ ಎಂದು ಒಪ್ಪುತ್ತಾಳೆ. ಇದೇ ತರಹ ಇತರ ಅನೇಕ ಸೆಲೆಬ್ಸ್ ಈ ಕುರಿತಾಗಿ ಮುಕ್ತವಾಗಿ ಮಾತನಾಡಿದ್ದಾರೆ.
ಮಗು ಆದ ನಂತರ ಪತಿ-ಪತ್ನಿಯರ ಮಧ್ಯೆ ದಾಂಪತ್ಯದಲ್ಲಿ ಅಂತರ ಮೂಡುವುದು ಸಹಜ. ಯಾವ ದಂಪತಿಗೆ ಇರಲಿ, ಪೋಷಕರಾಗುವ ಸ್ಥಿತಿ ನಿಜಕ್ಕೂ ಕನಸು ನನಸಾದಂತೆಯೇ ಸರಿ! ಪುಟ್ಟ ಕಂದನ ಕಿಲಕಿಲ ನಗು ಮನೆಯನ್ನು ನಂದಗೋಕುಲ ಮಾಡಿದರೆ, ಈ ಹೆತ್ತವರ ಪ್ರಪಂಚವೇ ಬದಲಾಗಿ ಹೋಗುತ್ತದೆ. ಹೀಗಾಗಿ ದಾಂಪತ್ಯ ಸಂಬಂಧದಲ್ಲಿ ಅಂತರ ತೋರಿಸಬೇಕಾದುದು ಅನಿವಾರ್ಯ, ಇಲ್ಲದಿದ್ದರೆ ಮುಂದಿನ 9 ತಿಂಗಳೊಳಗೆ ಇದೇ ತರಹ ಮತ್ತೊಮ್ಮೆ ಬಾಣಂತಿ ಆಗಬೇಕಾದೀತು, ನಮ್ಮ ದೇಶವಿಡೀ ಇಂಥ ಲಕ್ಷಲಕ್ಷ ಉದಾ. ಸಿಗುತ್ತದೆ.
ಇದೀಗ ಆ ಹೆಣ್ಣಿನ ಸಂಪೂರ್ಣ ಗಮನ, ಸಮಯ ಎಲ್ಲ ಆ ಪುಟ್ಟ ಬೊಮ್ಮಟೆಗೇ ಮೀಸಲು! ಜೊತೆಗೆ ದೈಹಿಕ ನೋವು, ಸುಸ್ತು, ಪ್ರಸವದ ನಂತರ ಸಮಸ್ಯೆಗಳ ಬಾಧೆ ಇದ್ದೇ ಇರುತ್ತದೆ. ಹೀಗಾಗಿಯೇ ಅವಳು ಪತಿಯನ್ನು ಆದಷ್ಟು ದೂರ ಇರುವಂತೆಯೇ ನೋಡಿಕೊಳ್ಳುತ್ತಾಳೆ. ಇದರಿಂದಾಗಿ ಪತಿಪತ್ನಿಯರ ನಡುವಿನ ರೊಮಾನ್ಸ್ ಎಷ್ಟೋ ಕಡಿಮೆ ಆಗುತ್ತದೆ. ಹೀಗೆ ಪತಿಯ ಸಾಂಗತ್ಯ (ದೈಹಿಕವಾಗಿ) ತುಸು ದೂರ ಆಗುವುದರಿಂದ, ಅವಳಿಗೆ ಇನ್ನೊಂದು ಬಗೆಯ ಮಾನಸಿಕ ನೋವು ಕಾಡಲಾರಂಭಿಸುತ್ತದೆ. ಇಂಥ ಸಂದರ್ಭದಲ್ಲಿ ಗಂಡ ಮನಸ್ಸು ಮಾಡಿ, ಹೆಂಡತಿಗೆ 100% ಮಾನಸಿಕ ಸಹಯೋಗ ನೀಡಬೇಕಾದುದು ಅವನ ಪತಿ ಧರ್ಮವೂ ಹೌದು.
ಈ ಎಲ್ಲಾ ಸ್ಥಿತಿಗತಿಗಳ ಸೂಕ್ಷ್ಮ ಪರಿಚಯ ನೀಡಲೆಂಬಂತೆ ಕರೀನಾ ತನ್ನ ಎರಡನೇ ಪ್ರಸವದ ನಂತರ, ಬಸುರು ಬಾಣಂತನದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ `ಕರೀನಾಳ ಪ್ರೆಗ್ನೆನ್ಸಿ ಬೈಬಲ್’ ಎಂಬ ಮಹತ್ವ ಪೂರ್ಣ ಪುಸ್ತಕ ಬರೆದು, ಪ್ರಕಟಿಸಿದ್ದಾಳೆ. ಇದರಲ್ಲಿ ಇವಳ ದೊಡ್ಡ ಮಗ ತೈಮೂರ್ ಹುಟ್ಟಿದ ನಂತರ, ಪತಿಪತ್ನಿ ಸಂಬಂಧ ಹೇಗಿತ್ತು, ಪತಿ ಸೈಫ್ ಅಲಿ ಹೇಗೆ ಸಹಕಾರ ನೀಡುತ್ತಿದ್ದ, ಮುಂದೆ ಆ ಸುಖೀ ಕುಟುಂಬ ಹೇಗೆ ಎರಡನೇ ಮಗು ಪಡೆಯುವಲ್ಲಿ ಯಶಸ್ವಿಯಾಯಿತು ಎಂಬುದರ ಸಂಪೂರ್ಣ ಚಿತ್ರಣವಿದೆ. ಎರಡು ಮಕ್ಕಳ ನಂತರ ಪತಿಪತ್ನಿಯರ ಸಂಬಂಧ ಮತ್ತಷ್ಟು ಗಾಢವಾಗಿದೆ.
ಮಗುವಿನ ಆರೈಕೆಯಂಥ ಮಹತ್ವ
ಪೂರ್ಣ ಕೆಲಸದಲ್ಲಿ, ಪತಿ ತನ್ನ ಪತ್ನಿಗೆ ಮನದಾಳದ ಸಹಕಾರ, ಸಹಯೋಗ ನೀಡಿದರೆ, ಆಕೆ ತನಗಾಗಿ, ತನ್ನ ಪತಿಗಾಗಿ ಒಂದಿಷ್ಟು ಪ್ರತ್ಯೇಕ ಸಮಯ ಮೀಸಲಿಡಲು ಸಾಧ್ಯ. ಇಷ್ಟು ಮಾತ್ರವಲ್ಲ, ಈ ರೀತಿ ಇಬ್ಬರೂ ಒಟ್ಟಿಗೆ ಹೆಚ್ಚು ಸಮಯ ಭಾವಪೂರ್ಣವಾಗಿ ಕಳೆಯಬಹುದು, ಬಾಂಧವ್ಯ ಗಟ್ಟಿಯಾಗುತ್ತದೆ.
ಸವಾಲುಗಳನ್ನು ಎದುರಿಸುವುದು ಹೇಗೆ?
ಹೆಣ್ಣು ಆದಷ್ಟೂ ಟೆಕ್ ಸೇವಿ ಆಗಬೇಕು : ಹಳೆಯ ಕಾಲದ ಅಸಹಾಯಕ ಸ್ಥಿತಿ ಅಲ್ಲ ಇಂದಿನ ಹೆಣ್ಣಿನದು, ಅವಳು ಅಬಲೆಯಾಗಿ ಕಣ್ಣೀರಿಡುತ್ತಾ ಉಳಿದಿಲ್ಲ. ಇಂದು ಅವಳು ಸಬಲೆಯಾಗಿ ಕಾನ್ಛಿಡೆಂಟ್ ಹೋಮ್ ಮೇಕರ್ ಎನಿಸುತ್ತಾಳೆ, ಸಬಲೆಯಾಗಿ ಮುನ್ನಗ್ಗಬಲ್ಲಳು. ಮನೆ ಮಾತ್ರವಲ್ಲದೆ, ಆಫೀಸ್ ನಲ್ಲೂ ಎಲ್ಲವನ್ನೂ ತೂಗಿಸುವ ಯಶಸ್ವಿ ಬಾಸ್ ಆಗಿದ್ದಾಳೆ. ಆಧುನಿಕ ಭಾರತೀಯ ಹೆಣ್ಣು ಈ ರೀತಿ ಬದಲಾಗಲು ಒಂದು ಮುಖ್ಯ ಕಾರಣವೆಂದರೆ, ತನ್ನ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು, ಅವಳು ತನ್ನನ್ನು ತಾನೇ ಬಲು ಚೆನ್ನಾಗಿ ತಯಾರಿ ಮಾಡಿಕೊಂಡಿದ್ದಾಳೆ. ಗೃಹೋಪಕರಣಗಳ ಸೌಲಭ್ಯ, ಹೆಂಗಸರ ಮನೆಗೆಲಸಗಳನ್ನು ಎಷ್ಟೋ ಹಗುರಗೊಳಿಸಿದೆ. ಹಿಂದೆಲ್ಲ ಮನೆಯ ಕಸಮುಸುರೆ, ಅಡುಗೆಗೇ ಅತಿ ಹೆಚ್ಚಿನ ಕಾಲಾವಕಾಶ ಬೇಕಾಗುತ್ತಿತ್ತು. ಆದರೆ ಈಗ ಅವಳ ಈ ಶ್ರಮದ ಕೆಲಸ ಎಷ್ಟೋ ಗಂಟೆಗಳ ಕಾಲ ಕಡಿಮೆ ಆಗಿದೆ ಎನ್ನಬಹುದು.
ಕಂಪ್ಯೂಟರ್‌ಇಂಟರ್ ನೆಟ್ ಅವಳ ಜೀವನವನ್ನು ಇನ್ನಷ್ಟು ಸರಳಮಯ ಆಗಿಸಿದೆ. ಮನೆಯಲ್ಲಿ ಕುಳಿತೇ ಅವಳು ಕರೆಂಟ್ ಬಿಲ್, ವಾಟರ್ ಬಿಲ್, ಬ್ಯಾಂಕ್ ಟ್ರಾನ್ಸ್ ಫರ್, ಮನಿ ಎಕ್ಸ್ ಚೇಂಜ್, ರೈಲ್ವೆ ಏರ್ ಟಿಕೆಟ್ ಬುಕಿಂಗ್, ಹೋಟೆಲ್ ಲಾಡ್ಜಿಂಗ್….. ಇತ್ಯಾದಿ ಎಲ್ಲನ್ನೂ ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಿ ಮುಗಿಸಬಹುದು. ಏನೇ ಆಗಲಿ, ಹೆಣ್ಣಿಗೆ ಸವಾಲುಗಳು ತಪ್ಪಿದ್ದಲ್ಲ ಎಂಬುದು ನಿಜ.
ಸವಾಲುಗಳಿಂದ ಹೆದರದಿರಿ
ಈ ವಿಶ್ವದಲ್ಲಿ ಯಶಸ್ವಿ ಎನಿಸಲು, ಪ್ರತಿ ಸಲ ಮಾನವ ಒಂದು ಕಠಿಣ ಮಾರ್ಗವನ್ನು ಹಾದು ಹೋಗಬೇಕಾಗುತ್ತದೆ, ಅದು ಹೆಣ್ಣು, ಗಂಡು ಯಾರೇ ಆದರೂ ತಪ್ಪಿದ್ದಲ್ಲ. ಹೆಣ್ಣಿನ ಜೀವನದಲ್ಲಿ ಇಂಥ ಕಠಿಣಕರ ಸವಾಲು ಹೆಚ್ಚು ಎಂಬುದು ಬೇರೆ ವಿಷಯ. ಹೀಗಾಗಿ ಯಾವ ಹೆಣ್ಣೇ ಆಗಲಿ, ಅವಳು ತನ್ನ ಅಭಿರುಚಿ ಅರಿತು, ಅದರಂತೆ ತನ್ನ ಭವಿಷ್ಯದ ಹೆಜ್ಜೆಗಳನ್ನು ಇಡಬೇಕು. ಹಾಗೆಯೇ ತನ್ನ ಕುಟುಂಬದ ಮಂದಿಗೂ, ಮುಂದೆ ತಾನು ಏನು ಮಾಡಲಿರುವೆ, ಏಕೆ ಎಂಬುದನ್ನು ತಿಳಿಹೇಳಬೇಕು. ನಂತರ ಆ ಪ್ರಕಾರ ತನ್ನ ಗುರಿ ನೆರವೇರಿಸಲು ಹೋರಾಡಬೇಕು.
ಒಂದು ಸಲ ಹೆಣ್ಣು ಹೀಗೆ ತನ್ನ ಯಶಸ್ವೀ ಪ್ರಯಾಣ ಶುರು ಮಾಡಿದಳೋ ಅವಳು ಮತ್ತೆ ಹಿಂದುರಿಗಿ ನೋಡಬೇಕಾದ ಅಗತ್ಯವೇ ಬರುವುದಿಲ್ಲ. ಅವಳ ಎದುರಿಗೆ ಎಂಥ ಸಮಸ್ಯೆಗಳು ಎದುರಾದರೂ ಅದನ್ನು ಆತ್ಮವಿಶ್ವಾಸದಿಂದ ಎದುರಿಸಬಲ್ಲಳು. ಅದೇ ರೀತಿ ನೀವು ಉದ್ಯೋಗಸ್ಥ ತಾಯಿಯಾಗಿದ್ದರೆ, ಆಫೀಸ್‌ವಾತಾವರಣದಲ್ಲಿನ ಸವಾಲುಗಳನ್ನೂ ಸಮಾಧಾನಕರವಾಗಿ ಎದುರಿಸಬಹುದು. ಈ ಸವಾಲುಗಳನ್ನು ಹೇಗೆ ಎದುರಿಸುತ್ತೀರಿ ಎಂಬುದು ನಿಮ್ಮನ್ನೇ ಅವಲಂಬಿಸಿದೆ. ಅದನ್ನು ನೀವು ಅತಿ ಗಂಭೀರ ಸಮಸ್ಯೆಯಾಗಿ ಸ್ವೀಕರಿಸುತ್ತೀರೋ ಅಥವಾ ಎದುರು ಅಲೆಗೆ ವಿರುದ್ಧ ಈಜಿ ಗೆಲ್ಲಬಲ್ಲೇ ಎಂದು ಆತ್ಮವಿಶ್ವಾಸ ತೋರಿಸುತ್ತೀರೋ, ಅದು ನಿಮ್ಮ ಮನಃಸ್ಥಿತಿಯನ್ನು ಅವಲಂಬಿಸಿದೆ.
ಹೆಣ್ಣು ಹೆಣ್ಣಿಗೆ ಸಹಕರಿಸಬೇಕು!
`ಹೆಣ್ಣೇ ಹೆಣ್ಣಿಗೆ ಶತ್ರು’ ಎಂಬುದು ಅನಾದಿ ಕಾಲದಿಂದಲೂ ಜಾರಿಯಲ್ಲಿರುವ ನಾಣ್ಣುಡಿ, ಅದಕ್ಕೆ ತಕ್ಕಂತೆ ಹೆಂಗಸರು ನಡೆದುಕೊಳ್ಳುವುದೂ ಗೊತ್ತಿರುವ ಸಮಾಚಾರವೇ! ಆದರೆ ಹೆಣ್ಣು ತಾಯಿಯಾದ ಮೇಲೆ, ಮನೆಯಲ್ಲೇ ಆಗಲಿ ಆಫೀಸ್ ನಲ್ಲೇ ಆಗಲಿ, ಇನ್ನೊಬ್ಬ ತಾಯಿ (ಅಂದ್ರೆ ಮತ್ತೊಬ್ಬ ಹೆಣ್ಣು) ಅದನ್ನು ಅರಿತು ಸಹಕಾರ ನೀಡಬೇಕು ಎಂದು ಸಮಾಜ ಶಾಸ್ತ್ರಜ್ಞರು ಉಲ್ಲೇಖಿಸುತ್ತಾರೆ. ಹೆಣ್ಣಿನ ಕಷ್ಟವನ್ನು ಹೆಣ್ಣು ಮಾತ್ರ ಅರಿಯಬಲ್ಲಳು ಎಂದಿರುವಾಗ ಇಂಥ ಸಹಕಾರ ಯಾಕಾಗಬಾರದು? ಹೆಣ್ಣು ಶಕ್ತಿ ಸ್ವರೂಪಿಣಿ ಎನ್ನುವುದಾದರೆ, ಮತ್ತೊಬ್ಬ ಶಕ್ತಿವಂತ ಹೆಣ್ಣು ಆ ದುರ್ಬಲ ಹೆಣ್ಣಿಗೆ ಯಾಕೆ ಸಹಕರಿಸಬಾರದು? ಅವಳಿಗೆ ಬಂದಂಥ ಸವಾಲುಗಳನ್ನು ತನ್ನದೇ ಎಂಬಂತೆ ಅರಿತು ಏಕೆ ಸಹಕಾರ ನೀಡಿ, ಪರಿಹರಿಸಬಾರದು?
ಈ ರೀತಿ ಶಕ್ತಿವಂತ ಹೆಣ್ಣಿನಿಂದ ಪ್ರೇರಿತಳಾಗಿ ಅಬಲೆಯೂ ಸಬಲೆಯಾಗಿ ಸಿಡಿದೆದ್ದು ನಿಲ್ಲಬಲ್ಲಳು. ಎಂಥ ಸವಾಲು ಬಂದರೂ ಆತ್ಮವಿಶ್ವಾಸದಿಂದ ಎದುರಿಸಬಲ್ಲಳು. ಆಫೀಸಿನ ಹೆಂಗಸರೆಲ್ಲ ಒಗ್ಗಟ್ಟಾಗಿ ಹೋರಾಟಕ್ಕೆ ನಿಂತರೆ ಯಾವ ದುರುಳ ಮೇಲಧಿಕಾರಿ ಅಥವಾ ಇತರ ಕೆಟ್ಟ ಗಂಡಸರೂ ಅವರನ್ನು ಕಾಡಲಾರರು. ಈ ಸಂಘಟನೆ ಸಹಜವಾಗಿ ನಡೆಯಬೇಕಷ್ಟೆ. ಹಾಗಾದಾಗ ಮಾತ್ರ ಹೆಣ್ಣಿನ ಎಲ್ಲಾ ಕಷ್ಟಗಳೂ ಪರಿಹಾರ ಕಾಣಲು ಸಾಧ್ಯ.
– ಜಿ. ಪಂಕಜಾ
ನೀವಾಗಿ ನಿಮ್ಮ ಐಡೆಂಟಿಟಿ ರೂಪಿಸಿಕೊಳ್ಳಿ
ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಆಶ್ಮೀನ್ ಮುಂಜಾಲ್, ಭಾರತದ ಬ್ಯೂಟಿ ಇಂಡಸ್ಟ್ರಿಯಲ್ಲಿ ಖ್ಯಾತ ಹೆಸರು. ಆದರೆ 25 ವರ್ಷಗಳ ಹಿಂದೆ, ಈಕೆ ಸಹ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಹೆಣ್ಣಾಗಿ ಪಿಯುಸಿ ಕಲಿತಿದ್ದ ಸಾಧಾರಣ ಗೃಹಿಣಿ ಆಗಿದ್ದರು. ಮನೆ ಮಟ್ಟಿಗೆ ತನ್ನ ಸಂಸಾರ, ಗಂಡ, ಮಕ್ಕಳು ಎಂದು ತಮ್ಮದೇ ಲೋಕದಲ್ಲಿದ್ದರು. ತನಗಾಗಿ ಖರ್ಚು ಮಾಡಲು ಈಕೆಯ ಬಳಿ ಹಣವೇ ಇರುತ್ತಿರಲಿಲ್ಲ. ಜಾಯಿಂಟ್ ಫ್ಯಾಮಿಲಿಯಲ್ಲಿದ್ದ ಈಕೆಗೆ, ಈಕೆಯ ಪತಿಗೂ ಬಿಸ್ ನೆಸ್ ನಡೆಸುತ್ತಿದ್ದ ಅತ್ತೆಮಾವ ಪಾಕೆಟ್ ಮನಿ ಕೊಟ್ಟರೆ, ಮಾತ್ರ, ಖರ್ಚಿಗೆ ಉಳಿಯುತ್ತಿತ್ತು. ಮದುವೆ ಆದ ಕೆಲವು ವರ್ಷಗಳ ನಂತರ ಈಕೆ ತಮ್ಮ ಸ್ವಪ್ರಯತ್ನದಿಂದ ತಮ್ಮದೇ ಆದ ಐಡೆಂಟಿಟಿ ರೂಪಿಸಿಕೊಂಡರು.
“ನಾನು ಮದುವೆ ನಂತರ ಬಹಳ ಶ್ರಮವಹಿಸಿ ಕರೆಸ್ಪಾಂಡೆನ್ಸ್ ನಲ್ಲಿ ಹಚ್ಚಿನ ವಿದ್ಯಾಭ್ಯಾಸ ಮುಗಿಸಿಕೊಂಡೆ. ಆಗ ನಾನು ಒಬ್ಬ ಏರ್ ಹೋಸ್ಟೆಸ್ ಆಗಬಯಸಿದ್ದೆ. ಆದರೆ ಗಂಡ, ಮನೆ, ಮಕ್ಕಳ ಜವಾಬ್ದಾರಿಯಲ್ಲಿ ಇದಕ್ಕಾಗಿ ಪ್ರತ್ಯೇಕ ತರಬೇತಿಗೆ ನಾನೆಲ್ಲಿಗೆ ಹೋಗಲಿ? ಡಿಗ್ರಿ ಪಡೆಯುವಷ್ಟರಲ್ಲಿ ನನ್ನ ಮಗಳಿಗೆ 1 ವರ್ಷ ತುಂಬಿತ್ತು. ನಮ್ಮದು ಅತಿ ಕಟ್ಟುನಿಟ್ಟಾದ ಸಂಪ್ರದಾಯಸ್ಥ ಕುಟುಂಬ. ಕೌಟುಂಬಿಕ ವಾತಾವರಣ ಚೆನ್ನಾಗಿದ್ದರೂ 108 ಪ್ರತಿಬಂಧಗಳು ಇದ್ದವು. ನನ್ನ ಮಗಳ ಮೊದಲ ಬರ್ತ್ ಡೇಗೆಂದು ಒಂದು ಚೆಂದದ ಡ್ರೆಸ್ ಖರೀದಿಸಲು ಬಯಸಿದೆ. ನನಗೆ ಸಿಗುತ್ತಿದ್ದ ಪಾಕೆಟ್ ಮನಿ ಕೂಡಿ ಹಾಕಿಕೊಂಡಿದ್ದರೂ, ಅದರಲ್ಲಿ ಆ ಡ್ರೆಸ್ ಕೊಳ್ಳಲು ಆಗಲೇ ಇಲ್ಲ. ಯಾರ ಬಳಿಯೂ ಇದಕ್ಕಾಗಿ ನಾನು ಕೈ ಚಾಚಲಿಲ್ಲ. ಮಗಳಿಗಾಗಿ ಒಂದು ಸಾಧಾರಣ ಡ್ರೆಸ್ ಖರೀದಿಸಿ, ಮುಂದಿನ ವರ್ಷದ ಹೊತ್ತಿಗೆ ನಾನೇ ನನ್ನ ದುಡಿಮೆಯಿಂದ ಇಂಥ ದುಬಾರಿ ಡ್ರೆಸ್ ಖರೀದಿಸುವಂತೆ ಆಗಬೇಕೆಂದು ದೃಢ ನಿಶ್ಚಯ ಮಾಡಿಕೊಂಡೆ.
“ಇದನ್ನು ಸವಾಲಾಗಿ ಸ್ವೀಕರಿಸಿದ ನಾನು ಮನೆಯಲ್ಲೇ ಒಂದು ಸಣ್ಣ ರೂಮಲ್ಲಿ ಪಾರ್ಲರ್ ಆರಂಭಿಸಿದೆ. ಇದರಿಂದ ಮನೆಗೆಲಸ, ಮಗಳ ಆರೈಕೆಗೆ ಅಡ್ಡಿ ಆಗಬಾರದಿತ್ತು. ಯಾರೂ ಆಗ ನನಗೆ ಸಪೋರ್ಟ್ ಮಾಡಲೇ ಇಲ್ಲ. ಮನೆಯ ಸೊಸೆ ಇನ್ನೊಬ್ಬರ ತಲೆಗೂದಲು ಕತ್ತರಿಸುವ ಕೆಲಸ ಮಾಡಬೇಕೇ? ಎಂದು ಆಡಿಕೊಂಡರು. ಮುಂದೆ ನನ್ನ ಬಿಸ್ ನೆಸ್ ನನ್ನ ಕೈ ಬಿಡಲಿಲ್ಲ. ಈ ರೀತಿ ನನ್ನ ಬ್ಯೂಟಿ ಪಾರ್ಲರ್ ದಿನೇದಿನೇ ಅಭಿವೃದ್ಧಿಗೊಂಡು, ಅದನ್ನು ದೊಡ್ಡ ರೀತಿಯಲ್ಲಿ ನಾನು ನಗರದಲ್ಲಿ ಸ್ಥಾಪಿಸುವಂತಾಯಿತು. ಇಂದು ನಾನು ಹಲವಾರು ಪಾರ್ಲರ್ ಹಾಗೂ ಬ್ಯೂಟಿ ಅಕಾಡೆಮಿ ನಡೆಸುತ್ತಿದ್ದೇನೆ!
“ಅಸಲಿ ವಿಚಾರ ಎಂದರೆ ಹೆಣ್ಣು ಎಲ್ಲವನ್ನೂ ಸಹಿಸಿ ಸುಮ್ಮನಾಗುತ್ತಾಳೆ. ಮಗುವನ್ನು ಹೆತ್ತು ಸಾಕಿ ಸಲಹಿ, ಸಂಬಂಧ ಉಳಿಸಿಕೊಳ್ಳುವ ಎಲ್ಲಾ ಕಷ್ಟಗಳನ್ನೂ ಸಹಿಸುತ್ತಾಳೆ. ಆದರೆ ಅವಳು ಒಮ್ಮೆ ದೃಢವಾಗಿ ಸಿಡಿದು ಎದ್ದು ನಿಂತರೆ, ಅವಳು ಯಾವ ಸವಾಲನ್ನು ಬೇಕಾದರೂ ಎದುರಿಸಬಲ್ಲಳು. ಅನಾದಿ ಕಾಲದ, ಸೀತಾದ್ರೌಪದಿಯರ ಕಾಲದಿಂದಲೂ ಹೆಣ್ಣು ಸವಾಲುಗಳನ್ನು ಎದುರಿಸುತ್ತಲೇ ಬಂದಿದ್ದಾಳೆ. ಇಷ್ಟೆಲ್ಲ ಆಧುನಿಕಳಾಗಿ ಹೆಣ್ಣು ಕಾಲಕ್ಕೆ ತಕ್ಕಂತೆ ತನ್ನ ಸವಾಲನ್ನು ಎದುರಿಸದಿದ್ದರೆ ಹೇಗೆ? ಆತ್ಮವಿಶ್ವಾಸ ಬೇಕು!” ಎಂದು ವಿವರಿಸುತ್ತಾರೆ.





