ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗುವುದು ಮಾಮೂಲಿ ವಿಷಯ. ರೋಗ ಬಂದಾಗ ಪ್ರತಿಯೊಬ್ಬರೂ ಧಾವಿಸಿ ವೈದ್ಯರ ಬಳಿ ತಪಾಸಣೆಗೆ ಹೋಗುತ್ತಾರೆ. ರೋಗಿಗಳಾಗಿ ನಾವು ಅಲ್ಲಿಗೆ ಹೋದ ಮೇಲೆ, ನಮ್ಮ ಅಸಹಾಯಕತೆಯನ್ನೇ ಆಸ್ತ್ರವಾಗಿಸಿಕೊಳ್ಳಬಾರದು. ಡಾಕ್ಟರ್ ಮುಂದೆ ಬೇಜವಾಬ್ದಾರಿಯುತರಾಗಿ ನಡೆದುಕೊಳ್ಳಬಾರದು. ಅಲ್ಲಿನ ನಿಯಮಕ್ಕೆ ಅನುಸಾರವಾಗಿ ವರ್ತಿಸಬೇಕು.
ಎಂದೂ ಸ್ನಾನ ಇಲ್ಲದೆ, ಹೇಗೋ ಗಲೀಜು ಗಲೀಜಾಗಿ ವೈದ್ಯರ ಬಳಿ ಹೋಗಲೇಬಾರದು. ಹೀಗೆ ಮಾಡುವುದರಿಂದ ನಿಮ್ಮ ದೇಹದ ದುರ್ಗಂಧದಿಂದಾಗಿ ನಿಮ್ಮ ಬಗ್ಗೆ ನಕಾರಾತ್ಮಕ ಭಾವನೆ ಮೂಡುತ್ತದೆ. ಸ್ನಾನ ಮಾಡಲಾಗದಿದ್ದರೆ, ಒದ್ದೆ ಬಟ್ಟೆಯಿಂದ ದೇಹಕ್ಕೆ ಸ್ಪಂಜ್ ಬಾತ್ ನೀಡಿ, ಒಂದಿಷ್ಟು ಡೀಯೋಡರೆಂಟ್ ಸಿಂಪಡಿಸಿಕೊಂಡು ಡಾಕ್ಟರ್ ಬಳಿ ಹೋಗಿ.
ಜೊತೆಗೆ ಬಾಯಿಂದ ದುರ್ವಾಸನೆ ಬರಬಾರದು ಎಂಬುದೂ ಅಷ್ಟೇ ಮುಖ್ಯ. ವೈದ್ಯರ ಮುಂದೆ ನಿಮ್ಮ ಸಮಸ್ಯೆಗಳನ್ನು ಖುಲ್ಲಂ ಖುಲ್ಲ ಚರ್ಚಿಸಬೇಕಿರುವುದರಿಂದ, ಬಾಯಿ ಬಿಟ್ಟರೆ, ಬಣ್ಣಗೇಡು ಎಂಬಂತೆ ಆಗಬಾರದು. ಈ ಕುರಿತಾಗಿಯೂ ಎಚ್ಚರವಹಿಸಿ, ವೈದ್ಯರ ಭೇಟಿಗೆ ಮುನ್ನ ಹಲ್ಲುಜ್ಜಿದ ನಂತರ, ಮೌತ್ ವಾಶ್ ನಿಂದ ಚೆನ್ನಾಗಿ ಬಾಯಿ ಮುಕ್ಕಳಿಸಿ ಹೋಗಿ, ಹಾಗೇ ನೀಟಾಗಿ ನಾಲಿಗೆಯನ್ನು ತಿಕ್ಕಿರಬೇಕು. ಅತಿ ಸುಸ್ತಿನಿಂದ ಇದೆಲ್ಲ ರೋಗಿ ಸ್ವತಃ ತಾನೇ ಮಾಡಿಕೊಳ್ಳಲು ಆಗದಿದ್ದರೆ, ಇತರರ ಸಹಾಯ ಪಡೆಯಲೇಬೇಕು.
ನೀವೇ ಡಾಕ್ಟರ್ ಆಗಿಬಿಡಬೇಡಿ!
ನಿಮ್ಮ ಸ್ವಭಾವ ತುಸು ಡಿಫರೆಂಟ್ ಎಂದೇ ಇಟ್ಟುಕೊಳ್ಳಿ, ಏನೋ ಕಾರಣಕ್ಕೆ ಡಾಕ್ಟರ್ ಹೇಳಿದ ಸಲಹೆ ನಿಮಗೆ ಸರಿಹೋಗಲಿಲ್ಲ ಅಂತಿಟ್ಟುಕೊಳ್ಳಿ, ಆಗ ಕ್ಲಿನಿಕ್ ನಲ್ಲಿ ಜೋರು ಜೋರಾಗಿ ಈ ಬಗ್ಗೆ ಚರ್ಚಿಸಲು ಹೋಗಬೇಡಿ! ಅನಿವಾರ್ಯ ಎನಿಸಿದಾಗ, ಮತ್ತೊಬ್ಬ ವೈದ್ಯರನ್ನು ಕಂಡು, ಆ ಬಗ್ಗೆ ಸೆಕೆಂಡ್ ಒಪೀನಿಯನ್ ಪಡೆಯುವುದರಲ್ಲಿ ತಪ್ಪಿಲ್ಲ.
ನೀವು ಹಳೆಯ ರೋಗಿಯೇ ಇರಬಹುದು, ಹಾಗೆಂದ ಮಾತ್ರಕ್ಕೆ ರೋಗಗಳ ಕುರಿತು ನಿಷ್ಣಾತರಾದ ವೈದ್ಯರ ಮುಂದೆ, ನೀವೇ ಮತ್ತೊಬ್ಬ ಡಾಕ್ಟರ್ ಆಗಿ ಹಾಗೇ…. ಹೀಗೇ…. ಎಂದು ವಾದಿಸಲು ಹೋಗಬೇಡಿ. ಎಷ್ಟೋ ಮಂದಿ ಬಾಯಿ ಜೋರು ಮಾಡಿ, ಇಂಜೆಕ್ಷನ್ ಕೊಡಿ ಡಾಕ್ಟರ್, ಬೇಗ ವಾಸಿ ಆಗಲಿ, 3 ದಿನ ಬಿಟ್ಟು ಊರಿಗೆ ಹೋಗಬೇಕು, ಎಂದೆಲ್ಲ ದಬಾಯಿಸುವುದೂ ಇದೆ. ಎಷ್ಟೋ ಸೀನಿಯರ್ ರೋಗಿಗಳು ವೈದ್ಯರಿಗೇ ಸಲಹೆ ನೀಡುವ ಮಟ್ಟಕ್ಕೆ ವಾದ ಮಾಡುತ್ತಾರೆ.
ರಾಮಣ್ಣ ತಾವು FB, ಇನ್ ಸ್ಟಾ, ವಾಟ್ಸ್ ಆ್ಯಪ್ ಮೆಸೇಜ್ ಗಳಲ್ಲಿ ಗಮನಿಸಿದ ಔಷಧಿಗಳ ಬಗ್ಗೆ ಒತ್ತಾಯ ಮಾಡುತ್ತಾ, ಅದನ್ನೇಕೆ ತೆಗೆದುಕೊಳ್ಳಬಾರದು, ನೀವು ಹೇಳಿದ್ದೇ ಏಕೆ ಬೇಕು ಅಂತೆಲ್ಲ ವಾದಿಸುತ್ತಾರೆ. ಸೋಶಿಯಲ್ ಮೀಡಿಯಾದ ಎಷ್ಟು ಮಂದಿ ಅದನ್ನೇ ಬಳಸುತ್ತಾರೆ ಎಂಬ ಲೆಕ್ಕಾ ನೀಡಲಿಕ್ಕೂ ಅವರು ಹಿಂಜರಿಯುವುದಿಲ್ಲ.
ರಾಮಣ್ಣನ ಈ ಮಾತಿಗೆ, ಅವರ ವಯಸ್ಸು ಗಮನಿಸಿ ಡಾಕ್ಟರ್ ನಕ್ಕು ಸುಮ್ಮನಾಗಬಹುದು, ಬೇರೇನೋ ಸಮಜಾಯಿಷಿ ನೀಡಬಹುದು. ಆದರೆ ರಾಮಣ್ಣ ಮಾಡಿದ ಅವಾಂತರಕ್ಕೆ ವೈದ್ಯರ ಸಿಬ್ಬಂದಿ ಪೂರ್ತಿ ಅವರ ಮೇಲೆ ಕೋಪಗೊಳ್ಳಬಹುದು, ಏನೋ ತಿಳಿಯದವರು ಎಂದು ನಗಾಡಬಹುದು. ಆದ್ದರಿಂದ ಇಂಥ ಗೊಡವೆ ಬೇಡ, ಡಾಕ್ಟರ್ ಸಲಹೆ ಪಡೆಯಿರಿ, ಅವರಿಗೇ ಸಲಹೆ ನೀಡಬೇಡಿ!
ರಹಸ್ಯ ಕಾಪಾಡಲು ಒತ್ತಡ ಬೇಡ
ನಿಮಗೆ ಸಾಮಾನ್ಯ ಜ್ವರವಿದ್ದು ಕಾಲೋನಿಯ ಡಿಸ್ಪೆನ್ಸರಿ ಡಾಕ್ಟರ್ ಬಳಿ ಚಿಕಿತ್ಸೆಗೆ ಹೋದರೆ, ಅಲ್ಲಿ ಅವರ ಬಳಿ, ತಮಗೆ ನೀಡಿದ ಈ ಚಿಕಿತ್ಸೆಯನ್ನು ರಹಸ್ಯವಾಗಿ ಮುಚ್ಚಿರಿಸುವಂತೆ ಕೇಳಿಕೊಳ್ಳುವವರೂ ಇದ್ದಾರೆ. ಲೀಲಾ ಮಾಡುವುದೂ ಹಾಗೇ! ತಮ್ಮ ಬಿಪಿ ಪರೀಕ್ಷಿಸಿ ಕೊಳ್ಳಲು ಡಾಕ್ಟರ್ ಬಳಿ ಹೋದ ಲೀಲಾ, `ನಾನು ನನ್ನ ಹಲವಾರು ಪರ್ಸನಲ್ ವಿಷಯ ನಿಮಗೆ ಅನಿವಾರ್ಯವಾಗಿ ಹೇಳಬೇಕಾಯ್ತು. ಆದರೆ ನಮ್ಮ ಕಾಲೋನಿಯ ಯಾರೇ ಬಂದರೂ, ಅವರು ನಿಮಗೆ ಎಷ್ಟೇ ಕ್ಲೋಸ್ ಆಗಿದ್ದರೂ, ನನ್ನ ಬಿಪಿ, ಶುಗರ್ ಬಗ್ಗೆ ಎಂದೂ ಹೇಳಬೇಡಿ. ನಾಳೆ ಕಿಟಿ ಪಾರ್ಟಿಯಲ್ಲಿ ಅವರೆಲ್ಲ ಏನೇನು ಆಡಿಕೊಳ್ತಾರೋ ಏನೋ…..!’
ಇದರಿಂದ ಆ ಡಾಕ್ಟರ್ ಗೆ ಬಹಳ ಇರಿಸುಮುರಿಸಾಯಿತು. ಸಾಮಾನ್ಯವಾಗಿ ಯಾವ ವೈದ್ಯರೂ ಒಬ್ಬ ರೋಗಿಯ ಬಗ್ಗೆ ಇನ್ನೊಬ್ಬರ ಬಳಿ ಚರ್ಚಿಸುವುದಿಲ್ಲ. ಹಾಗಿರುವಾಗಲೂ ಲೀಲಾ ತರಹದ ಮಂದಿ ಇಂಥ ಸಲಹೆ ಕೊಡದೆ ಇರಲಾರರು.
ಇಂಥ ಮಂದಿ ಸ್ವಂತಃ ಡಾಕ್ಟರಿಗೆ ತಲೆನೋವು ಬರುವಂತೆ ಮಾಡಿಬಿಡುತ್ತಾರೆ. ತನ್ನ ಯಾವುದೇ ರೋಗದ ಚಿಕಿತ್ಸೆಗೆ ಹೋದಾಗಲೂ ರೋಗಿ, ತನ್ನ ರೋಗಗಳ ಪೂರ್ವೋತಿಹಾಸ ತಿಳಿಸಲೇಬೇಕು, ಲೀಲಾ ತರಹ ಜೋರು ಮಾಡಲು ಹೋಗಬಾರದು.
ತಜ್ಞರ ಬಳಿಯೇ ಚಿಕಿತ್ಸೆ
ಮಗನಿಗೆ ಮೈಸೂರಿನಿಂದ ಬೆಂಗಳೂರಿಗೆ ವರ್ಗ ಆಯ್ತು ಅಂತ ಲೀಲಾ ಬೆಂಗಳೂರಿನ ವೈದ್ಯರ ಬಳಿ ತಮ್ಮ ಶುಗರ್, ಬಿಪಿ ಚಿಕಿತ್ಸೆ ಮುಂದುರಿಸುವಾಗ, ಮೈಸೂರಿನ ಭಾರಿ ಒಳ್ಳೆಯ ಡಾಕ್ಟರ್ ಬಳಿ ತೋರಿಸಿದೆ, ಅವರ ಕೈಗುಣ ಯಾರಿಗೂ ಬರಲ್ಲ, ಅಂತಿಲ್ಲ ನೇರವಾಗಿ ಇವರ ಮುಂದೆಯೇ ಹೇಳುತ್ತಿದ್ದರು. ಡಾಕ್ಟರ್ ಗೆ ಕಸಿವಿಸಿ ಆಗದೆ ಇರುತ್ತದೆಯೇ?
ಇವರು ಬಂದಾಗೆಲ್ಲ ಡಾಕ್ಟರ್ ಸಿಬ್ಬಂದಿ, `ಲೀಲಮ್ಮ, ಮೈಸೂರಿನ ತರಹ ಇಲ್ಲಿ ಉತ್ತಮ ಚಿಕಿತ್ಸೆ ದೊರಕುತ್ತಿದೆ ತಾನೇ?’ ಎಂದು ವ್ಯಂಗ್ಯವಾಡಿದರೆ, ಇವರು ಅರ್ಥವಾಗದೆ ಹ್ಞೂಂ ಅನ್ನುತ್ತಿದ್ದರು. ಜೊತೆಗೆ ಬಂದ ಮನೆಯವರು ಕಸಿವಿಸಿಯಿಂದ ತಲೆ ತಗ್ಗಿಸುತ್ತಿದ್ದರು.
ಇಂಥ ತಪ್ಪುಗಳನ್ನು ಮಾಡದಿರಿ
ಮತ್ತೆ ಕೆಲವು ರೋಗಿಗಳು ಯಾವ ಕಾರಣಕ್ಕೋ ಏನೋ, ಸರಿಯಾಗಿ ಮನಸ್ಸು ಬಿಚ್ಚಿ ವೈದ್ಯರ ಮುಂದೆ ಏನೂ ಹೇಳಿಕೊಳ್ಳುವುದಿಲ್ಲ. ನಿನ್ನೆ ಮೊನ್ನೆ ಏನು ತಿಂದಿದ್ದಿರಿ? ನಿಮ್ಮ ದಿನ ಹೇಗೆ ಕಳೆಯಿತು? ಏನು ಕೆಲಸ ಮಾಡುತ್ತೀರಿ? ಸರಿಯಾಗಿ ನಿದ್ದೆ ಬಂತಾ ಇಲ್ಲವಾ? ಇತ್ಯಾದಿ ಸಾಧಾರಣ ಪ್ರಶ್ನೆಗಳಿಗೂ ಕೆಲವರು ಅತಿ ಎಂಬಂತೆ ಮೌನ ವಹಿಸುತ್ತಾರೆ. ಕೇವಲ ತಲೆ ಆಡಿಸುವುದು ಅಥವಾ ಅತಿ ಮೆಲ್ಲಗೆ ಮಾತನಾಡಿ ಡಾಕ್ಟರ್ ಗೇ ಇರಿಸುಮುರಿಸು ಮಾಡುತ್ತಾರೆ. ಆದ್ದರಿಂದ ಇಂಥ ತಪ್ಪು ಮಾಡದೆ, ವೈದ್ಯರ ಬಳಿ ಮುಕ್ತವಾಗಿ ಮನ ಬಿಚ್ಚಿ ಮಾತನಾಡಿ. ನೀವು ಹೇಳಿಕೊಂಡರೆ ತಾನೇ ಅವರಿಗೆ ಸ್ಪಷ್ಟವಾಗಿ ತಿಳಿಯಬೇಕು! – ಪ್ರತಿಭಾ.





