ಸೋಮಾರಿ ಸೊಸೆಗೆ ಹೇಗಾದರೂ ಬುದ್ಧಿ ಕಲಿಸಲೇಬೇಕು ಅಂತ ಅತ್ತೆ ನಿರ್ಧರಿಸಿದರು.

ಅತ್ತೆ : ಮಗ, ನಾಳೆ ಬೆಳಗ್ಗೆ ನಾನೇ ಕಸ ಗುಡಿಸಿ, ಪಾತ್ರೆ ತೊಳೆಯಲು ಶುರು ಮಾಡುವೆ. ಆಗ ನೀನು ಬಂದು, `ವಯಸ್ಸಾದ ನೀನು ಯಾಕಮ್ಮ ಇದೆಲ್ಲ ಮಾಡಬೇಕು? ನಾನೇ ಮಾಡ್ತೀನಿ ಬಿಡು,’ ಅನ್ನು. ಆಗ ಈ ಸೋಮಾರಿ ಸೊಸೆಗೆ ನಾಚಿಕೆ ಆಗಿ, ತಾನಾಗಿ ಕೆಲಸ ಕಲಿಯುತ್ತಾಳೆ!

ಮಗ : ಹಾಗೇ ಆಗಲಮ್ಮ. ಮಾರನೇ ದಿನ ಅತ್ತೆ ಕಸಗುಡಿಸಿ, ಪಾತ್ರೆ ತೊಳೆಯಲು ಶುರು ಮಾಡಿದ ತಕ್ಷಣ ಮಗರಾಯ ಅವರನ್ನು ತಡೆಯುತ್ತಾ, “ವಯಸ್ಸಾದ ನೀನು ಯಾಕಮ್ಮ ಇದೆಲ್ಲ ಮಾಡಬೇಕು? ನಾನೇ ಮಾಡ್ತೀನಿ ಬಿಡು!”

ಸೊಸೆಮುದ್ದು : ಅಯ್ಯೋ…. ಪಾಪ, ಅವರನ್ನು ಯಾಕೆ ಹಾಗೆ ತಡೆಯುತ್ತೀರಿ? ಹೋಗಲಿ ಬಿಡಿ, ಇವತ್ತು ಅವರೇ ಮಾಡಲಿ, ನಾಳೆ ನೀವು ಮಾಡಿ, ಹೀಗೆ ದಿನ ಬಿಟ್ಟು ದಿನ ನೀವಿಬ್ಬರೂ ಮಾಡಿ!

 

ಪತ್ನಿ : ಅಲ್ಲ… ನಿಮ್ಮ ಶರ್ಟ್‌ ನಲ್ಲಿ ಒಂದಾದರೂ ನೀಳ ತಲೆಗೂದಲು ಸಿಗೋದೇ ಇಲ್ಲ ಅಂತೀನಿ!

ಪತಿ : ಸರಿ….. ಅದಕ್ಕೆ ಏನೀಗ?

ಪತ್ನಿ : ಏನೂ ಅಲ್ಲ….. ಯಾರವಳು ನಿಮ್ಮ ಬಾಲ್ಡಿ ಗರ್ಲ್ ಫ್ರೆಂಡ್‌ ಅಂತ ನಾನೇನು ಈಗ ಕೇಳಿದ್ನಾ…..?

 

ವರ : ನಾನು ನಿಮ್ಮ ಮಗಳನ್ನು ಮದುವೆ ಆಗಲೇ!

ಕನ್ಯಾಪಿತೃ : ಅದು ಸರಿ, ನೀನು ನನ್ನ ಹೆಂಡತಿಯನ್ನು ಭೇಟಿ ಆಗಿದ್ದೀಯಾ?

ವರ : ಇಲ್ಲ…. ಇಲ್ಲ… ನನಗೆ ನಿಮ್ಮ ಮಗಳು ಮಾತ್ರ ಒಪ್ಪಿಗೆ!

ವರನ ಕಡೆಯುವರು : ಅದು ಸರಿ, ನಿಮ್ಮ ಮಗಳು ಏನೆಲ್ಲ ಮಾಡುತ್ತಾಳೆ?

ವಧುವಿನ ಕಡೆಯವರು : ಅವಳನ್ನು ಎಷ್ಟು ಅಂತ ಹೊಗಳೋದು? ಯಾರಾದರೂ ಬಾಳೆಹಣ್ಣು ಸುಲಿದು ಕೊಟ್ಟರೆ ತಿನ್ನುತ್ತಾಳೆ. ಸೆಲ್ಛಿ ತೆಗೆದುಕೊಳ್ಳುವಾಗ 5-6 ವಿಧದಲ್ಲಿ ಸೊಟ್ಟ ಮುಖ ಮಾಡುತ್ತಾಳೆ. ಹಾಸಿಗೆ ಹಾಸಿ ಕೊಟ್ಟರೆ ಅಚ್ಚುಕಟ್ಟಾಗಿ ಗೊರಕೆ ಹೊಡೆಯುತ್ತಾಳೆ!

 

ಗುಂಡನ ಮದುವೆಯಾಗಿ 2 ವರ್ಷ ಆಗಿತ್ತು. ವಿವಾಹ ವ್ಯವಸ್ಥೆ ಬಗ್ಗೆ ಒಂದು ಲೇಖನ ಸಿದ್ಧಪಡಿಸಲೆದು ಮರಿ ವರದಿಗಾರ ಇವನನ್ನು ಪ್ರಶ್ನಿಸಿದ, “ಮದುವೆಗೆ ಮುಂಚೆ ನೀವು ಏನು ಮಾಡುತ್ತಿದ್ರಿ?”

ಗುಂಡನ ಕಂಗಳಲ್ಲಿ ಕಂಬನಿ ತುಳುಕುವುದೊಂದು ಬಾಕಿ. ಗದ್ಗದ ಕಂಠದಿಂದ, “ನನ್ನ ಮನಸ್ಸು ಬಯಸಿದ್ದನ್ನು ಮಾಡುತ್ತಿದ್ದೆ!” ಎಂದು ಹೇಳಿದ.

 

ಮದುವೆಯ ಆರತಕ್ಷತೆ ವೈಭವದಿಂದ ನಡೆದಿತ್ತು. ವೇದಿಕೆ ಮೇಲಿದ್ದ ವಧೂವರರಿಗೆ ಶುಭ ಕೋರಿ, ಉಡುಗೊರೆ ನೀಡಲು ಜನ ಸಾಲಾಗಿ ಬರುತ್ತಿದ್ದರು.

ವರನ ಗೆಳೆಯರ ಗುಂಪು ಬಂದಾಗ, ವಧು ಪಕ್ಕ ಅವಳ ತಂಗಿ ಸಹ ನಿಂತಿದ್ದಳು. ವರ ಅವಳನ್ನು ಗೆಳೆಯರಿಗೆ ಪರಿಚಯಿಸುತ್ತಾ, “ಇವಳು ನನ್ನ ನಾದಿನಿ, ನಾನು ಇವಳ ಅಕ್ಕನ ಗಂಡನಾದ್ದರಿಂದ ಅರ್ಧ ಭಾಗ ಹೆಂಡತಿ ಆದ ಹಾಗೇ….” ಎಂದಾಗ ಎಲ್ಲರೂ ಜೋರಾಗಿ ನಕ್ಕು ನಲಿದಾಡಿದರು.

ಮತ್ತೊಂದು ಗುಂಪು ವಧುವಿನ ಗೆಳತಿಯರದಾಗಿತ್ತು. ಈ ಬಾರಿ ವರನ ಪಕ್ಕ ಅವನ ಅವನ ತಮ್ಮ ನಿಂತಿದ್ದ. ವಧು ಅವನನ್ನು ಗೆಳತಿಯರಿಗೆ ಪರಿಚಯಿಸುತ್ತಾ, “ಇವರು ನನ್ನ ಮೈದುನ, ದುಬೈನಲ್ಲಿ ಕೆಲಸದಲ್ಲಿದ್ದಾರೆ. ಲಕ್ಷಾಂತರ ಸಂಪಾದಿಸುತ್ತಾರೆ… ನಾನು ಇವರ ಅಣ್ಣನ ಹೆಂಡತಿ ಆದ್ದರಿಂದ, ಇವರು ನನಗೆ ಅರ್ಧ ಭಾಗ ಪತಿ ಪರಮೇಶ್ವರ ಆದ ಹಾಗೇನೇ….!” ಎಂದಾಗ ವರ ಕಕ್ಕಾಬಿಕ್ಕಿಯಾಗಿ ಕಣ್ಕಣ್ಣು ಬಿಟ್ಟ.

 

ಇತ್ತೀಚಿನ ಒಂದು ಸಮೀಕ್ಷೆ ಪ್ರಕಾರ, ನಮ್ಮ ದೇಶದಲ್ಲಿ ವಿಚ್ಛೇದನದ ಪ್ರಕರಣಗಳು ಎಷ್ಟೋ ಕಡಿಮೆ ಆಗಿಹೋಗಿದೆಯಂತೆ….. ಕಾರಣ? ಪತಿ ಪತ್ನಿ ಇಬ್ಬರೂ ಸದಾ ವಾಟ್ಸ್ ಆ್ಯಪ್‌, FB‌, ಇನ್‌ ಸ್ಟಾಗಳಲ್ಲಿ ಬಿಝಿಯೋ ಬಿಝಿ… ಜಗಳ ಆಡಲು ಪುರಸತ್ತೇ ಇಲ್ಲವಂತೆ! ಅಂದ್ರೆ…? ನಮ್ಮ ಪ್ರಧಾನಿಯರ ಕನಸಿನಂತೆ `ಒಳ್ಳೆಯ ದಿನಗಳು’ ಬಂದೇ ಬಿಟ್ಟಿವೆ!

 

ಮದುವೆಯಾದ ಮೊದಲ ರಾತ್ರಿ ಪತಿ ಪತ್ನಿ ತಮ್ಮ ಪ್ರಸ್ತದ ಕೋಣೆಯಲ್ಲಿ ಬಿಝಿಯೋ ಬಿಝಿ!

ಪತ್ನಿ : ನಾವೀಗ ಒಂದು ಗೇಮ್ ಆಡೋಣ.

ಪತಿ : ಎಂಥ ಗೇಮ್!

ಪತ್ನಿ : ನಾನೀಗ ಒಂದು ಬಣ್ಣದ ಹೆಸರು ಹೇಳಿದರೆ ನೀವು ಎಡಗೋಡೆ ಮುಟ್ಟಬೇಕು. ಬದಲಿಗೆ ಹಣ್ಣಿನ ಹೆಸರು ಹೇಳಿದರೆ ಬಲಗೋಡೆ ಮುಟ್ಟಬೇಕು, ಗೊತ್ತಾಯ್ತಾ…..?

ಪತಿ : ಇದರಲ್ಲಿ ನಾನು ಗೆದ್ದರೆ?

ಪತ್ನಿ : ಯಾರು ಸೋಲುತ್ತಾರೋ ಅವರು ಗೆದ್ದರ ಮಾತನ್ನು ಜೀವನಪೂರ್ತಿ ಕೇಳಬೇಕು. ಸದಾ ಅವರಿಗೆ ತಗ್ಗಿಬಗ್ಗಿ ನಡೆಯಬೇಕು!

ಪತಿ : ಓ ಅಷ್ಟೇನಾ…. ನಾನು ಇದರಲ್ಲಿ ಸುಲಭವಾಗಿ ಗೆಲ್ಲುತ್ತೇನೆ ಬಿಡು. ಎಲ್ಲಿ ಬೇಗ ಬೇಗ ಹೇಳು!

ಪತ್ನಿ : ಹಾಗಿದ್ದರೆ ಸರಿ. ರೆಡಿ, ಸ್ಟಡಿ ಗೋ…. ಆರೆಂಜ್‌!

ಪತಿ : ಅ…ಯ್ಯ….ಯ್ಯೋ…..!

 

ವಿಮಲಮ್ಮ : ಯಾಕಮ್ಮ ಮಹಾರಾಣಿ, ಮೇಲಿನ ರಾಯರ ಕೋಣೆ ಕ್ಲೀನ್‌ ಮಾಡಿ ಬರಲು ಇಷ್ಟು ತಡ ಆಯಿತೇ?

ಕೆಲಸದವಳು : ಹ್ಞೂಂನಮ್ಮ….. ನೆಲ ಒರೆಸುತ್ತಿದ್ದೆನಾ, ಕಾಲು ಜಾರಿ ಬಿದ್ದೇಬಿಟ್ಟೆ.

ವಿಮಲಮ್ಮ : ಅದಕ್ಕೇ… ಎದ್ದು ಬರಲು ಇಷ್ಟು ತಡವಾಗಬೇಕೇ….?

ಕೆಲಸದವಳು : ನನ್ನನ್ನು ಬೇಗ ಏಳಲು ರಾಯರು ಬಿಟ್ಟರೆ ತಾನೇ…..?

 

ಗುಂಡ ಸೈನ್ಯಕ್ಕೆ ಸೇರಿದ. ಒಮ್ಮೆ ಶತ್ರು ದೇಶಕ್ಕೆ ಬೇಹುಗಾರಿಕೆಗೆ ಹೋದವನು ಅವರ ಕೈಯಲ್ಲಿ ಸಿಕ್ಕಿಬಿದ್ದ. ತಮ್ಮ ರಹಸ್ಯಗಳನ್ನು ತಿಳಿದುಬಿಟ್ಟಿದ್ದಾನೆ ಎಂದು ಅರಿತ ಶತ್ರು ಸೇನೆ ಅವನನ್ನು ಶಿಕ್ಷಿಸಲು ಮುಂದಾದರು.

ಶತ್ರು : ಇವನನ್ನು ಕಂಬಕ್ಕೆ ಕಟ್ಟಿ ಹಾಕಿ 100 ಕೊರಡೆ ಏಟು ಹೊಡೆಸಿ!

ಗುಂಡ : ದಯವಿಟ್ಟು ಬೇಡಿ…. ನನ್ನನ್ನು ಬಿಟ್ಟುಬಿಡಿ. ಹೇಗೋ ಹೋಗಿ ಬದುಕಿಕೊಳ್ಳುತ್ತೇನೆ.

ಶತ್ರು : ಹಾಗಾದರೆ… ಇವನ ಶಿಕ್ಷೆಯ ಮೇಲ್ವಿಚಾರಣೆಗೆ ಇವನ ಅತ್ತೆಯನ್ನು ಕರೆಸಿಬಿಡಿ!

ಗುಂಡ : ಬೇಡಿ…. ಬೇಡಿ! ಕೊರಡೆ ಶಿಕ್ಷೆಯೇ ಇರಲಿ, ಅದೇ ಬೆಟರ್‌!

 

ಜಯಮ್ಮ : ಇದೇನ್ರಿ… ನಮ್ಮ ಯಜಮಾನರು ಸಿಟಿಗೆ ಹೋಗಿ ಇಷ್ಟು ಹೊತ್ತಾದ್ರೂ ಬರಲಿಲ್ಲ? ಅಲ್ಲಿ ಯಾವಳ ಮೋಹ ಜಾಲದಲ್ಲಿ ಸಿಕ್ಕಿ ಹಾಕಿಕೊಂಡ್ರೋ ಏನೋ…?

ವಿಜಯಮ್ಮ : ನೀವು ಯಾಕೆ ಸದಾ ಉಲ್ಟಾ ಯೋಚಿಸ್ತೀರಿ? ಅದರ ಬದಲು ಬರುವಾಗ ದಾರಿಯಲ್ಲಿ ಯಾವ ಲಾರಿಗೋ, ಬಸ್ಸಿಗೋ ಸಿಕ್ಕಿಕೊಂಡ್ರೋ ಏನೋ…. ಅಂತ ಯೋಚಿಸಬಾರದೆ…?

 

ಒಬ್ಬ ಆಂಗ್ಲ ಅಧಿಕಾರಿ ತನ್ನ ತಾಯಿಯ ಸಮಾಧಿಗೆ ಹೂಗುಚ್ಛ ಇರಿಸಿ ಮೌನವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ. ಆಗ ಪಕ್ಕದ ಸಮಾಧಿ ಬಳಿ ಗುಂಡ ತನ್ನ ಎದೆ ಎದೆ ಬಡಿದುಕೊಂಡು ತೀವ್ರವಾಗಿ ಗೋಳಾಡುತ್ತಿದ್ದ, “ನೀನು ಏಕೆ ಹೀಗೆ ಈ ಭೂಮಿ ಬಿಟ್ಟು ಹೋದೆ? ನೀನು ಹೀಗೆ ಸಾಯಬಾರದಿತ್ತು. ನೀನು ತೀರಿಕೊಂಡಿದ್ದರಿಂದ ಇಂದು ನನ್ನ ಜೀವನ ಎಷ್ಟು ಕಷ್ಟಕೋಟಲೆಗಳಿಗೆ ಸಿಲುಕಿದೆ ನೋಡು… ಗೊತ್ತಿದ್ದೂ ನೀನು ಹೀಗೆ ಮಾಡಬಹುದೇ? ಅಯ್ಯೋ! ನೀನು ಸಾಯಬಾರದಿತ್ತು…!”

ಆಗ ಆಂಗ್ಲ ಅಧಿಕಾರಿ ಗುಂಡನ ಬಳಿ ಬಂದು, ಅವನನ್ನು ಸಂತೈಸುತ್ತಾ ಹೇಳಿದರು, “ನೋಡಪ್ಪ, ಎದೆಗುಂದ ಬೇಡ…. ಧೈರ್ಯ ಕಳೆದುಕೊಳ್ಳಬೇಡ… ಒಂದಲ್ಲ ಒಂದು ದಿನ ಎಲ್ಲರೂ ಈ ಸ್ಮಶಾನಕ್ಕೆ ಬರಬೇಕಾದ್ದೆ…. ಇದು ಪ್ರಪಂಚದ ನಿಯಮ ತಾನೇ? ಸ್ವಲ್ಪ ಸಮಾಧಾನ ತಂದುಕೊ…..”

ಆ ಸಾಂತ್ವನದ ನುಡಿ ಕೇಳಿ ಗುಂಡ ಸ್ವಲ್ಪ ಸುಧಾರಿಸಿಕೊಂಡು ತನ್ನ ಅಳು ನಿಲ್ಲಿಸಿದ.

ಆಂಗ್ಲ ಅಧಿಕಾರಿ ಮುಂದುವರಿಸಿದ, “ಅದಿರಲಿ, ಈ ಸಮಾಧಿ ಯಾರದು? ಯಾರೋ ನಿನಗೆ ತುಂಬಾ ಬೇಕಾದವರೇ ಇರಬೇಕು ಅನಿಸುತ್ತಿದೆ…..”

ಗುಂಡ ಗದ್ಗದ ಕಂಠದಿಂದ ಹೇಳಿದ, “ಇದು ನನ್ನ ಹೆಂಡತಿಯ ಮೊದಲ ಗಂಡನ ಸಮಾಧಿ!”

 

ಒಂದು ಹುಚ್ಚಾಸ್ಪತ್ರೆಯ ಒಳರೋಗಿಗಳಾಗಿದ್ದ ಕೆಲವು ಹೆಂಗಸರು ಹುಚ್ಚುಚ್ಚಾಗಿ ಕುಣಿಯುತ್ತಿದ್ದರು. ಅವರಲ್ಲಿ ಒಬ್ಬಾಕೆ ಮಾತ್ರ ಸೈಲೆಂಟ್‌ ಆಗಿ ಒಂದು ಬದಿಯಲ್ಲಿ ಕುಳಿತುಬಿಟ್ಟಿದ್ದಳು. ಬಹುಶಃ ಆಕೆ ಗುಣಮುಖಳಾಗಿರಬೇಕೆಂದು, ಅಲ್ಲಿಗೆ ಬಂದಿದ್ದ ಒಬ್ಬ ವಿಸಿಟರ್ ಪ್ರಶ್ನಿಸಿದರು, “ಏನಮ್ಮ, ನೀನೇಕೆ ಅವರ ಜೊತೆ ಡ್ಯಾನ್ಸ್ ಮಾಡುತ್ತಿಲ್ಲ…?”

ಆಗ ಆಕೆ, “ಏ ಗುಗ್ಗು, ಅಷ್ಟು ಗೊತ್ತಾಗೋಲ್ವೇ? ನಾನು ಮದುವೆ ಹೆಣ್ಣು. ವರನ ದಿಬ್ಬಣಕ್ಕಾಗಿ ಕಾಯುತ್ತಿದ್ದೇನೆ. ಇವರೆಲ್ಲ ನನ್ನ ಗೆಳತಿಯರು, ಹೀಗಾಗಿ `ಬಾರೆ ಬಾರೆ…. ಕಲ್ಯಾಣ ಮಂಟಪಕೆ ಬಾ….’ ಅಂತ ಡ್ಯಾನ್ಸ್ ಮಾಡ್ತಾ ಇದ್ದಾರೆ!” ಎನ್ನುವುದೇ?

 

ಪತಿಪತ್ನಿಯರಲ್ಲಿ ಯದ್ವಾತದ್ವಾ ಜಗಳ ನಡೆಯುತ್ತಿತ್ತು.

ಪತ್ನಿ : ಛೇ…ಛೇ! ನಾನು ನಮ್ಮಮ್ಮನ ಮಾತು ಕೇಳಿದ್ದಿದ್ದರೆ ಚೆನ್ನಾಗಿರುತ್ತಿತ್ತು! ನಿನ್ನನ್ನು ಕಟ್ಟಿಕೊಂಡು ಇವತ್ತು ಈ ಕರ್ಮ ಎದುರಿಸಬೇಕಾಗಿರಲಿಲ್ಲ!

ಪತಿ : ಅಂದರೆ…? ನಿಮ್ಮಮ್ಮ ನನ್ನನ್ನು ಮದುವೆ ಆಗಬೇಡ ಅಂತ ಹೇಳಿದ್ದರೆ…?

ಪತ್ನಿ : ಹೌದು, ನೂರಲ್ಲ…. ಸಾವಿರ ಸಲ `ಇಂಥ ಸುಂದರಾಂಗ ಜಾಣನನ್ನು ಮದುವೆ ಆಗಬೇಡ!’ ಅಂತ ಬಡ್ಕೊಂಡಿದ್ದರು.

ಪತಿ : ಅಯ್ಯೋ…. ಎಂಥ ಕೆಲಸ ಆಗ್ಹೋಯ್ತು! ಆ ಪುಣ್ಯಾತ್ಗಿತ್ತಿ ನನ್ನನ್ನು ಈ ನರಕದಿಂದ ಪಾರು ಮಾಡಲು ಅಷ್ಟು ಒಳ್ಳೆಯ ಸಲಹೆ ಕೊಟ್ಟಿದ್ದರೆ? ಅನ್ಯಾಯವಾಗಿ ಅವರನ್ನು ಪಾಪಿಷ್ಟ ಹೆಂಗಸು ಅಂತ ಇಷ್ಟು ದಿನ ಬೈದುಕೊಳ್ತಿದ್ದೆ…. ತಪ್ಪಾಯ್ತು, ತಪ್ಪಾಯ್ತು….!

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ