ಸಾಮಾನ್ಯವಾಗಿ ಶಾಲೆಯ ಶಿಕ್ಷಕಿ ಎಂದರೆ ಬೆತ್ತ ಹಿಡಿದು ಸಿಡುಕುವವರು ಎಂದು ವಿದ್ಯಾರ್ಥಿಗಳು ಭಯಪಡುತ್ತಾರೆ. ಆದರೆ ಸೌಮ್ಯಾ ಪ್ರಸಾದ್ ರಂಥ ಶಿಕ್ಷಕಿ, ಮಕ್ಕಳ ಮನವೊಲಿಸಿ, ಅವರಿಗೆ ವಿದ್ಯೆ ಕಲಿಸಿ, ಅಚ್ಚುಮೆಚ್ಚಿನ ಶಿಕ್ಷಕಿ ಎನಿಸಿದ್ದು ಹೇಗೆ……?
ಹೆಸರಿನಂತೆಯೇ ಸೌಮ್ಯವಾದ ಮುಖ, ಸದಾ ಮುಗುಳ್ನಗುತ್ತಿದ್ದಾರೇನೋ ಎನ್ನುವ ಭಾವ ತುಂಬಿದ ಕಣ್ಣುಗಳು, ಮೃದುವಾದ ಮಾತು, ನೋಡಿದ ತಕ್ಷಣ ಗಮನ ಸೆಳೆಯುವ ಆಕರ್ಷಕ ಮಹಿಳೆ. ಶಿಕ್ಷಕಿ ಆಗುವುದಕ್ಕೆಂದೇ ಹೇಳಿ ಮಾಡಿಸಿದಂತಹ ವ್ಯಕ್ತಿತ್ವ ಹೊಂದಿರುವುದು ಹಿರಿಯೂರಿನ ವಾಸವಿ ಶಾಲೆಯ ಶಿಕ್ಷಕಿ ಸೌಮ್ಯಾ ಪ್ರಸಾದ್.
ಕುಟುಂಬದ ಪ್ರೋತ್ಸಾಹ
ಇವರ ಹುಟ್ಟೂರು ಹಿರಿಯೂರು. ಜನ್ಮ ತಳೆದದ್ದು ಸಣ್ಣ ಊರಿನಲ್ಲಾದರೂ ಅವರಿಗೆ ಓದಲು ತಾಯಿ ತಂದೆಯರ ಪ್ರೋತ್ಸಾಹವಿತ್ತು. ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದರು. ಆದರೂ ಪಿಯುಸಿ ಮುಗಿಸಿದರು ಅಷ್ಟೇ. ಹೆಣ್ಣುಮಕ್ಕಳಿಗೆ ಮದುವೆ ಮಾಡುವುದು ಮುಖ್ಯವಾಗಿದ್ದ ಕಾಲವದು. ಹಾಗಾಗಿ ಇವರು ಮದುವೆಗೆ ಮೊದಲು ಡಿಗ್ರಿ ಪಡೆಯಲಾಗಲಿಲ್ಲ, ಮದುವೆಯಾಯಿತು. ಆದರೆ ಮದುವೆಯ ನಂತರ ಗಂಡನ ಮನೆಯಿಂದ ಪ್ರೋತ್ಸಾಹ ದೊರೆಯಿತು. ಶಿಕ್ಷಣವನ್ನು ಮುಂದುವರಿಸಲು ಸಹಕಾರ ನೀಡಿದರು.
ಸೌಮ್ಯಾ ಬಹಳ ಸಂತಸದಿಂದ ಡಿಗ್ರಿ ಮುಗಿಸಿದರು. ನಂತರ ಬಿ.ಎಡ್ ಮಾಡಿದರು. ಎಲ್ಲಕ್ಕೂ ಅವರಿಗೆ ಮನೆಯವರ ಪ್ರೋತ್ಸಾಹವಿತ್ತು. ಸೌಮ್ಯಾರಿಗೆ ಬರಿಯ ಓದಷ್ಟೇ ಅಲ್ಲ, ಹೊಸ ಹೊಸ ವಿಷಯಗಳನ್ನು ಕಲಿಯುವುದರಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಅಂತೆಯೇ ಎಲ್ಲಕ್ಕೂ ಪತಿಯ ಮನೆಯವರ ಉತ್ತೇಜನ ಇತ್ತು. ಆದ್ದರಿಂದ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸುಲಭವಾಯಿತು. ಇವರ ಪತಿಯ ಮನೆಯಲ್ಲಿ ಅತ್ತೆ, ಮಾವ, ಅವರ ಅಣ್ಣ ಎಲ್ಲರೂ ಶಿಕ್ಷಕರೇ! ಇವರ ಪತಿ ಕೂಡಾ ಎಂ.ಎ ಮಾಡಿದ್ದಾರೆ.
ಹಾಗಾಗಿ ಇವರ ಮನೆಯಲ್ಲಿ ಒಂದು ಚಿಕ್ಕ ಗ್ರಂಥಾಲಯವೇ ಇದೆ. ಜೊತೆಗೆ ಬೇರೆಯವರಿಗೂ ಸಹಾಯಹಸ್ತ ನೀಡುವುದರಲ್ಲಿ ಇವರಿಗೆ ಅಸಕ್ತಿ. ಇಂತಹ ವಾತಾವರಣ ಇದ್ದದ್ದೂ ಕೂಡಾ ಸೌಮ್ಯಾ ಒಬ್ಬ ಸಮರ್ಥ ಶಿಕ್ಷಕಿಯಾಗಲು ಸಹಾಯವಾಯಿತು ಎನ್ನಬಹುದು.

ಮೆಚ್ಚುಗೆ ಪ್ರಶಸ್ತಿಗಳು
ಸೌಮ್ಯಾ ಬಿ.ಎಡ್ ಮುಗಿಸಿದ ತಕ್ಷಣ ಮಾಂಟೆಸರಿ ಮೆಮೋರಿಯಲ್ ಸ್ಕೂಲಿನಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಉತ್ತಮ ಶಿಕ್ಷಕಿ ಎಂದು ಗುರುತಿಸಲ್ಪಟ್ಟು ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ಪಡೆದರು.
ಸೌಮ್ಯಾರಿಗೆ ವಂಡರ್ ಡೈಮಂಡ್ಸ್ ಸಂಸ್ಥೆ ಉತ್ತಮ ಶಿಕ್ಷಕಿ ಎನ್ನುವ ಪ್ರಶಸ್ತಿ ನೀಡಿದೆ.
ಸೌಮ್ಯಾ ಕೆಲಸ ಮಾಡುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯಿನಿ, ಸೌಮ್ಯಾ ಪಾಠ ಮಾಡುವುದರಲ್ಲಿನ ಇವರ ತಲ್ಲೀನತೆ, ವಿಧಾನ ಕಂಡು ಮೆಚ್ಚುಗೆ ಸೂಚಿಸಿದ್ದರಂತೆ. ಈಗಲೂ ಸೌಮ್ಯಾರನ್ನು ಕಂಡರೆ ಅವರಿಗೆ ಮೆಚ್ಚಿಗೆಯಂತೆ. ಅಂತಹ ಒಳ್ಳೆಯ ನುರಿತ ಶಿಕ್ಷಕಿಯ ಮೆಚ್ಚುಗೆ ನಿಜಕ್ಕೂ ಬಹಳ ಅಮೂಲ್ಯ ಎನ್ನುತ್ತಾರೆ.
ಬಿ.ಎಡ್ ಓದುವಾಗ ಎಲ್ಲಾ ವಿಷಯಗಳಲ್ಲೂ ಹೆಚ್ಚಿನ ಅಂಕಿಗಳನ್ನು ಪಡೆದ ಹೆಗ್ಗಳಿಕೆ. ಒಂದು ಕಾಲದಲ್ಲಿ ಗಣಿತ ಎನ್ನುವುದು ಕಬ್ಬಿಣದ ಕಡಿಯಾಗಿದ್ದ ಇವರಿಗೆ ಅದರಲ್ಲಿ ಆಸಕ್ತಿ ಮೂಡುವಂತೆ ಮಾಡಿದ ಅಲ್ಲಿನ ಶಿಕ್ಷಕರನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಇವರು ಒಳ್ಳೆಯ ಶಿಕ್ಷಕಿಯೂ ಹೌದು, ಅಂತೆಯೇ ಚುರುಕು ವಿದ್ಯಾರ್ಥಿನಿಯೂ ಹೌದು.

ತುಂಟ ಮಕ್ಕಳನ್ನು ಪಳಗಿಸುವುದು
ಸೌಮ್ಯಾ ಮೊದಲು ಕೆಲಸಕ್ಕೆ ಸೇರಿದಾಗ ಅವರಿಗಾದ ಅನುಭವ ಅಪಾರ. ಅಲ್ಲಿ ಮಕ್ಕಳನ್ನು ಯಾವ ರೀತಿ ಅರ್ಥ ಮಾಡಿಕೊಳ್ಳುವುದು, ಜೊತೆಗೆ ಅವರಿಗೆ ಪಾಠ ಅರ್ಥ ಮಾಡಿಸುವುದು ಹೇಗೆ ಎನ್ನುವುದನ್ನು ಕಲಿತೆ ಎನ್ನುತ್ತಾರೆ. ಅವರು ಕೆಲಸ ಮಾಡಿದ ಎಲ್ಲಾ ಶಾಲೆಗಳಲ್ಲೂ ಮೆಚ್ಚುಗೆಯನ್ನು ಪಡೆದಿದ್ದಾರೆ. ಸುಮ್ಮನೆ ಪಾಠ ಮಾಡುವುದು ಪ್ರಯೋಜನವಿಲ್ಲ. ಆದರೆ ಮಕ್ಕಳಿಗೆ ಎಷ್ಟು ಅರ್ಥವಾಗುತ್ತದೆ ಎಂಬುದರ ಬಗ್ಗೆ ಅವರಿಗೆ ಬಹಳ ಕಾಳಜಿ ಇದೆ. ಆದ್ದರಿಂದ ಇವರು ಮಕ್ಕಳ ಮೆಚ್ಚಿನ ಟೀಚರ್. ಎಂತಹ ತುಂಟ ಮಕ್ಕಳನ್ನಾದರೂ ಪಳಗಿಸುವ ಮತ್ತು ಅವರನ್ನು ಆಕರ್ಷಿಸುವ ಕಲೆ ಇವರಿಗಿದೆ. ಈ ಎಲ್ಲವೂ ತಮ್ಮ ಅನುಭವದಿಂದಲೇ ಎನ್ನುವುದು ಇವರ ಮಾತು.
`ನಾನು ಮಕ್ಕಳಿಂದಲೂ ಸಾಕಷ್ಟು ಕಲಿತೆ. ನಾವು ಪಾಠ ಮಾಡುವಾಗ ಸುಮ್ಮನೆ ಮಾತನಾಡುವುದು ಮುಖ್ಯವಲ್ಲ,’ ಎನ್ನುವ ಇವರಿಗೆ ಸಂವಹನದ ಮೂಲಕ ಪಾಠ ಮಾಡುವುದು, ಸಾಧಿಸಿರುವ ಕಲೆಯೂ ಹೌದು. ಆದ್ದರಿಂದಲೇ ಇವರ ಪಾಠ ಎಂದರೆ ಮಕ್ಕಳಿಗೆ ಬಹಳ ಖುಷಿ! `ಜೀವನ ನಡೆಸುವುದಕ್ಕೆ ಸಂಬಳ ಬಹಳ ಮುಖ್ಯವಾದರೂ ಅದಕ್ಕೆ ನಾನು ಪ್ರಾಮುಖ್ಯತೆ ನೀಡಿಲ್ಲ, ಅದು ಮಕ್ಕಳಿಗೆ ಪಾಠ ಮಾಡುವುದರಲ್ಲಿ ಪರಿಣಾಮ ಬೀರುವುದಿಲ್ಲ. ಅವರೊಡನೆ ನನಗೆ ಒಳ್ಳೆಯ ಸಾಂಗತ್ಯ ಮುಖ್ಯ,’ ಎನ್ನುತ್ತಾರೆ.
ಆಶಾ ಸಂಸ್ಥೆಯಿಂದ ಕಲಿತದ್ದು ಅಪಾರ
ಸೌಮ್ಯಾರಿಗೆ ಪೋನಿಕ್ಸ್ ಬಹಳ ಇಷ್ಟವಂತೆ. ಆದರೆ ಓದುವಾಗ ಅದನ್ನು ತಿಳಿದುಕೊಳ್ಳಲು ಇವರಿಗೆ ಅವಕಾಶ ಸಿಗಲಿಲ್ಲ. ಆದರೆ ಇವರು ಮಕ್ಕಳಿಗೆ ಪಾಠ ಕಲಿಸುವಾಗ ಫೋನಿಕ್ಸ್ ಬಗ್ಗೆ ಹೆಚ್ಚಿಗೆ ತಿಳಿದುಕೊಡರಂತೆ. ಈಗ ಆಶಾ ಇನ್ಛಿನೈಟ್ ಸಂಸ್ಥೆಯವರು ನಮ್ಮ ಶಿಕ್ಷಕಿಯರಿಗೆ ಫೋನಿಕ್ಸ್ ವಿಧಾನದಲ್ಲಿ ಇಂಗ್ಲಿಷ್ ಕಲಿಸುತ್ತಿದ್ದಾರೆ. ಅವರ ಮೂಲಕ ನಾನೂ ಸಹ ಬಹಳ ಚೆನ್ನಾಗಿ ಕಲಿತೆ. ಆ ಸಂಸ್ಥೆಯ ಸುರೇಖಾ ಮೇಡಂ ಕಲಿಸುವ ರೀತಿ ನಿಜಕ್ಕೂ ಬಹಳ ಚೆನ್ನಾಗಿದೆ. ಅವರಿಂದ ನಾವು ಕಲಿತದ್ದು ಬಹಳ ಇದೆ. ಬರೀಯ ಕಲಿಕೆ ಒಂದೇ ಅಲ್ಲ, ಅವರು ಮಕ್ಕಳನ್ನು ಅರ್ಥ ಮಾಡಿಕೊಂಡ ಬಗೆ, ಖಂಡಿತ ಬಹಳ ಮುಖ್ಯ.
ಜೀವನದಲ್ಲಿ ಯಾರೂ ಪರ್ಫೆಕ್ಟ್ ಅಲ್ಲ, ಜೀವನ ಪೂರ್ತಿ ಕಲಿಯುವುದು ಸಾಕಷ್ಟಿರುತ್ತದೆ. ಪ್ರತಿಯೊಬ್ಬರಿಂದಲೂ ಕಲಿಯುವುದು ಬಹಳ ಇರುತ್ತದೆ. ಆ ದೃಷ್ಟಿಯಿಂದ ಒಳ್ಳೆಯದು ಏನಿದ್ದರೂ, ಎಲ್ಲಿದ್ದರೂ, ಯಾರಲ್ಲಿದ್ದರೂ, ಅದನ್ನು ಕಲಿಯುವ ಆ ವಿಧಾನಗಳನ್ನು ಅಳವಡಿಸಿಕೊಳ್ಳುವ ವಿನಯ ಸೌಮ್ಯಾ ಅವರದು.
ಎಲ್ಲವನ್ನೂ ಕಲಿಯುವ ಆಸೆ
`ಮಾನವ ಸಮಾಜ ಜೀವಿ. ಅಂತೆಯೇ ಜನರ ಜೊತೆಗಿನ ಸಾಂಗತ್ಯ ನನಗೆ ಇಷ್ಟ. ಸಂಗೀತ, ಚಿತ್ರಕಲೆ, ರಂಗೋಲಿ ಎಲ್ಲವನ್ನೂ ಕಲಿಯಲು ನನಗೆ ಆಸೆ. ನನ್ನ ಉದ್ಯೋಗದ ಜೊತೆ ಅದಕ್ಕೂ ಗಮನ ನೀಡುತ್ತೇನೆ,’ ಎನ್ನುತ್ತಾರೆ ಸೌಮ್ಯಾ. ಇವರಿಗೆ ಪ್ರವಾಸ ಬಹಳ ಪ್ರಿಯವಾದ ಹವ್ಯಾಸ. ಮನೆಯ ಜವಾಬ್ದಾರಿ, ಶಿಕ್ಷಕಿಯಾಗಿ ಉದ್ಯೋಗ ನಿರ್ವಹಣೆ ಈ ಎಲ್ಲದರ ಜೊತೆ ಹೊಸ ಹೊಸ ವಿಷಯಗಳನ್ನು ಕಲಿಯುವುದರಲ್ಲಿ ಅಸಕ್ತಿಯುಳ್ಳ ಯುವತಿ ಇವರು. ಕಲಿಕೆಯಲ್ಲಿ ಇವರಿಗೆ ಇನ್ನೂ ಆಸಕ್ತಿ ಇರುವುದರಿಂದಲೋ ಏನೋ ವಿದ್ಯಾರ್ಥಿಗಳನ್ನು ಅರ್ಥ ಮಾಡಿಕೊಳ್ಳುವುದು ಇವರಿಗೆ ಸಲಭವಾಗಿರಬಹುದು. ಆದ್ದರಿಂದಲೇ ಅವರ ಮೆಚ್ಚಿನ ಟೀಚರ್ ಆಗಿರುವುದೂ ಸಾಧ್ಯವಾಗಿದೆ.
– ಮಂಜುಳಾ ರಾಜ್





