ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀ ಗಣಪತಿ ಅರ್ಬನ್ಕೋಆಪರೇಟಿವ್ ಬ್ಯಾಂಕಿಗೆ ಶತಮಾನದ ಇತಿಹಾಸವಿದೆ. ಇಂಥ ಬ್ಯಾಂಕಿನ ವ್ಯವಹಾರಗಳನ್ನು ದಕ್ಷ ಸಿಇಓ ಆಗಿ ನಿರ್ವಹಿಸುತ್ತಿರುವ ಲಲಿತಾಂಬಿಕೆಯರ ಸಾಧನೆಗಳ ಬಗ್ಗೆ ತಿಳಿಯೋಣವೇ…..?

ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀ ಗಣಪತಿ ಅರ್ಬನ್‌ ಕೋಆಪರೇಟಿವ್ ‌ಬ್ಯಾಂಕಿಗೆ ಶತಮಾನದ ಇತಿಹಾಸವಿದೆ. ಈ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು ದಾಖಲಾಗಿದೆ. ಅಂದಹಾಗೆ 1915ರಲ್ಲಿ ಈ ಬ್ಯಾಂಕ್‌ ಆರಂಭಗೊಂಡಿತು. ಈಗ 2024ಕ್ಕೆ ಭರ್ತಿ 109 ವರ್ಷಗಳು! ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಹಕಾರಿ ಬ್ಯಾಂಕ್‌ ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಶತಮಾನದ ಬ್ಯಾಂಕ್‌ ಎಂದು ನವದೆಹಲಿಯಲ್ಲೂ ರಾಷ್ಟ್ರೀಯ ಸಹಕಾರ ಫೆಡರೇಷನ್‌ ನಿಂದ ಗೌರವ ಪುರಸ್ಕಾರ ಸಂದಿದೆ.

19sp2

ಇಂಥ ದೀರ್ಘಕಾಲದ ಇತಿಹಾಸವುಳ್ಳ ಪಟ್ಟಣ ಸಹಕಾರಿ ಬ್ಯಾಂಕ್‌ ಒಬ್ಬ ಮಹಿಳೆಯ ಸಾರಥ್ಯದಲ್ಲಿ (ಸಿಇಓ) ನಡೆಯುತ್ತಿದೆ ಎಂದರೆ ಯಾರೂ ಮೂಗಿನ ಮೇಲೆ ಬೆರಳಿಡಬೇಕು. ನಿಮಗೆ ನಿಜ ತಿಳಿಯಬೇಕಾದರೆ ಸಾಗರದ ಚಾಮರಾಜಪೇಟೆಯಲ್ಲಿರುವ ಶ್ರೀ ಗಣಪತಿ ಅರ್ಬನ್‌ ಬ್ಯಾಂಕಿಗೆ ಕಾಲಿಟ್ಟರೆ ಅವರು ಎದುರಾಗುತ್ತಾರೆ. ತಮ್ಮದೇ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಗಿ (ಸಿಇಓ) ಕೊಠಡಿಯಲ್ಲಿ ಕಾರ್ಯ ತತ್ಪರರಾಗಿರುತ್ತಾರೆ. ಅವರೇ ಬಿ. ಲಲಿತಾಂಬಿಕೆ. ಮಹಿಳೆ ಎಲ್ಲ ಕ್ಷೇತ್ರಕ್ಕೂ ಕಾಲಿಟ್ಟಿದ್ದಾಳೆ. ಮಹಿಳಾ ಸಬಲೀಕರಣದ ಸುದ್ದಿ ಸದ್ದು ಮಾಡುತ್ತಿರುವಾಗಲೇ ಅವರು ಇಂಥ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ.

19sp3

ಈಕೆ ಸಾಗರದಲ್ಲಿ ನಾರಾಯಣಪ್ಪ ಮತ್ತು ಲಕ್ಷಮ್ಮ ದಂಪತಿ ಪುತ್ರಿಯಾಗಿ ಜನಿಸಿದರು. ಸಾಗರದ ಎಲ್.ಬಿ. ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದುಕೊಂಡರು. ಮುಂದೆ 1993ರಲ್ಲಿ ಗಣಪತಿ ಬ್ಯಾಂಕಿನಲ್ಲಿ ಕ್ಲರ್ಕ್‌ ಹುದ್ದೆಗೆ ಸೇರಿದರು. ಕಳೆದ 30 ವರ್ಷಗಳಿಂದ ಶ್ರೀ ಗಣಪತಿ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಂತರ 2007 ರಿಂದ ಸಹಾಯಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಗಿ ಪದೋನ್ನತಿ ಹೊಂದಿದರು. ನಂತರ ತಮ್ಮ ಕಾರ್ಯಕ್ಷಮತೆಯಂದ 2018 ರಿಂದ ಮುಖ್ಯ ಸಿಇಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಲಲಿತಾಂಬಿಕೆ ಬಿ.ಕಾಂ. ಪದವೀಧರರಾಗಿದ್ದು, ಸೀನಿಯರ್‌ ಡಿಪ್ಲೊಮಾ ಇನ್‌ ಕೋಆಪರೇಟಿವ್ ‌ಮ್ಯಾನೇಜ್‌ ಮೆಂಟ್‌ ಹಾಗೂ ಕೋಆಪರೇಟಿವ್ ‌ಡಿಪ್ಲೊಮಾಗಳಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ರಾಂಕ್ ಪಡೆದು `ಬಂಗಾರದ ಪದಕ’ವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

31sp1

ಇವರನ್ನು ಶಿವಮೊಗ್ಗ ಜಿಲ್ಲಾ ಯೂನಿಯನ್‌ ನಿಂದ 2021-22 ರಲ್ಲಿ `ಉತ್ತಮ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ’ ಎಂದು ಸನ್ಮಾನಿಸಿ ಗೌರವಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌, ಶಿವಮೊಗ್ಗ ಹಾಗೂ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್‌ ಇದರಿಂದ ಶ್ರೀ ಗಣಪತಿ ಅರ್ಬನ್‌ ಕೋಆಪರೇಟಿವ್ ‌ಬ್ಯಾಂಕ್‌ ಲಿ.ಸ ಸಾಗರ `ಶಿವಮೊಗ್ಗ ಜಿಲ್ಲಿಯ ಉತ್ತಮ ಸಹಕಾರ ಬ್ಯಾಂಕ್‌’ ಎಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ.

2023ರಲ್ಲಿ ಈಕೆಗೆ ರಾಜ್ಯ ಮಟ್ಟದ ಸಹಕಾರಿ ಸಪ್ತಾಹದಲ್ಲಿ ಶಿವಮೊಗ್ಗ ಜಿಲ್ಲೆಯ `ಉತ್ತಮ ಮಹಿಳಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ’ ಎಂಬ ಗೌರವವನ್ನು ನೀಡಿ ಸನ್ಮಾನಿಸಲಾಗಿದೆ. 100 ವರ್ಷ ಪೂರೈಸಿದ ಗಣಪತಿ ಬ್ಯಾಂಕ್‌ ನ್ನು 23.06.2022 ರಂದು ನವದೆಹಲಿಯಲ್ಲಿ ನಡೆದ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದಿಂದ ಸನ್ಮಾನಿಸಿ ಗೌರವಿಸಲಾಗಿದೆ.

ಗಣಪತಿ ಅರ್ಬನ್‌ ಸಹಕಾರಿ ಬ್ಯಾಂಕು 1915 ರಲ್ಲಿ ಆರಂಭಗೊಂಡಿತು. ಪ್ರಸ್ತುತ ಶಿವಮೊಗ್ಗ ಮತ್ತು ಹೊಸಗನರಗಳಲ್ಲಿ ಶಾಖೆಗಳನ್ನು ಹೊಂದಿದೆ. ಈ ಸಾಲಿನಲ್ಲಿ ಬ್ಯಾಂಕ್‌ 2.88 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ವಾರ್ಷಿಕ ಅಂದಾಜು 275 ಕೋಟಿ ರೂ. ವಹಿವಾಟು ನಡೆಸುತ್ತಾ 9000 ಷೇರುದಾರರನ್ನು ಹೊಂದಿದ್ದು, 35,000 ಗ್ರಾಹಕರನ್ನು ಹೊಂದಿದೆ. ಬ್ಯಾಂಕ್‌ 210 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. 150 ಕೋಟಿ ರೂ. ವಿವಿಧ ರೀತಿಯ ಸಾಲ ನೀಡಿದ ಹೆಗ್ಗಳಿಕೆ ಈ ಬ್ಯಾಂಕಿನದು.

ಐವತ್ತಕ್ಕೂ ಹೆಚ್ಚು ಉದ್ಯೋಗಿಗಳು ಈ ಬ್ಯಾಂಕಿನಿಂದ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈಕೆ ಸಿಇಓ ಆದ ನಂತರ ಬ್ಯಾಂಕ್ ಇನ್ನಷ್ಟು ಪ್ರಗತಿ ಸಾಧಿಸಿದೆ. ಬ್ಯಾಂಕಿನ ಆಡಳಿತ ಮಂಡಳಿ, ಸಿಬ್ಬಂದಿಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ ಎನ್ನುವ ಇವರು ಬ್ಯಾಂಕಿನ ಮೇಲೆ ನಂಬಿಕೆ ಇಟ್ಟು ಗ್ರಾಹಕರು ಬಂದು ವ್ಯವಹರಿಸುತ್ತಿದ್ದಾರೆ. ಬ್ಯಾಂಕ್‌ ಸತತ ಲಾಭದಾಯಕವಾಗಿ ನಡೆಯುತ್ತಿದೆ ಎಂಬುದಕ್ಕೆ ಈ ಬ್ಯಾಂಕಿನ ಸಾಧನೆಯೇ ಸಾಕ್ಷಿ.

ಅಂದಹಾಗೆ ಶ್ರೀ ಗಣಪತಿ ಅರ್ಬನ್‌ ಸಹಕಾರಿ ಬ್ಯಾಂಕ್‌ ಅನೇಕ ಸಾಮಾಜಿಕ ಕಾರ್ಯದಲ್ಲೂ ಹಿಂದೆ ಬಿದ್ದಿಲ್ಲ. ಪ್ರತಿ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಪಟ್ಟಣದಲ್ಲಿನ ರೋಟರಿ ರಕ್ತನಿಧಿ ಕೇಂದ್ರಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದೆ. ಕೋವಿಡ್‌ ಸಮಯದಲ್ಲಿ ನೆರವು ನೀಡಿದೆ. ವಿವಿಧ ಶಾಲೆಗಳಿಗೆ ಅಗತ್ಯ ಪೀಠೋಪಕರಣಗಳನ್ನು ನೀಡಿದೆ. ನೀರು ಶುದ್ಧೀಕರಣ ಯಂತ್ರ ನೀಡಲಾಗಿದೆ. ಸದಸ್ಯರಿಗೆ ಅನಾರೋಗ್ಯದ ಸಂದರ್ಭದಲ್ಲಿ ಸಹಾಯಹಸ್ತ ನೀಡುತ್ತ ಬಂದಿದೆ. ಸಾಗರದ ಸರ್ಕಾರಿ ಆಸ್ಪತ್ರೆಗೆ 5 ಆಕ್ಸಿಜನ್‌ ಕಾನ್‌ಸನ್‌ ಟ್ರೇಟರ್‌ ಗಳನ್ನು ನೀಡಿದೆ. ಹೀಗೆ ಬ್ಯಾಂಕ್‌ ಕೇವಲ ಆರ್ಥಿಕ ವ್ಯವಹಾರ ಮಾಡದೆ, ಜನಮುಖಿಯಾಗಿ ಹಲವು ಸೇವೆ ಸಲ್ಲಿಸುತ್ತಿದೆ.

ಈ ಬ್ಯಾಂಕ್‌ ಮನೆ ನಿರ್ಮಾಣ ಸಾಲ, ಸ್ಥಿರಾಸ್ತಿ ಆಧಾರ ಸಾಲ, ದ್ವಿಚಕ್ರ ವಾಹನ ಸಾಲ, ವಾಹನ ಸಾಲ, ಬಂಗಾರದ ಆಭರಣ ಸಾಲ, ವ್ಯವಹಾರ ಮತ್ತು ಸಂಬಳ ಸಾಲ, ಮಾರ್ಟ್‌ ಗೇಜ್‌ ಕ್ರಾಶ್‌ ಕ್ರೆಡಿಟ್‌ ಸಾಲ ನೀಡುತ್ತಿದೆ. ವಿವಿಧ ಬಡ್ಡಿ ದರದಲ್ಲಿ ಠೇವಣಿ ಇರಿಸಿಕೊಳ್ಳುತ್ತಿದೆ.ಲಲಿತಾಂಬಿಕೆ ಮನೆಯಷ್ಟೇ ಬ್ಯಾಂಕನ್ನೂ ಪ್ರೀತಿಸುತ್ತಾರೆ. ಮನೆಯ ಬಹುತೇಕ ವ್ಯವಹಾರಗಳನ್ನು ಇವರ ಪತಿ ಐ.ವಿ.ಹೆಗಡೆ ನಿರ್ವಹಿಸುತ್ತಾರೆ. ಅಡುಗೆಯ ಜವಾಬ್ದಾರಿಯನ್ನೂ ಹೆಚ್ಚಾಗಿ ಅವರೇ ನಿರ್ವಹಿಸುತ್ತಾರೆ. ಹೆಗಡೆಯವರು ಉತ್ತಮ ಪಾಕತಜ್ಞರೂ ಹೌದು. ಇವರ ಎಲ್ಲಾ ಕೆಲಸಗಳಿಗೂ ಪತಿಯ ಸಹಕಾರವಿದೆ.

ಇಷ್ಟೊಂದು ಹೆಗ್ಗಳಿಕೆ ಇರುವ ಬ್ಯಾಂಕಿನ ಸಾರಥ್ಯವನ್ನು ಒಬ್ಬ ಧೀಮಂತ ಮಹಿಳೆ ಮುನ್ನಡೆಸುತ್ತಿರುವುದು ನಿಜಕ್ಕೂ ಹೆಮ್ಮೆ ಅಲ್ಲವೇ?

ಗಣಪತಿ ಶಿರಳಗಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ