ಆಧುನಿಕತೆಯ ಈ ಬದಲಾವಣೆಯ ಸಂದರ್ಭದಲ್ಲಿ, ಶಾಲಾ ವೇಳೆಯ ಬದಲಾವಣೆ ಅತ್ಯಗತ್ಯ ಎಂದು ಎಲ್ಲಾ ಪೋಷಕರು ಚಿಂತಿಸತೊಡಗಿದ್ದಾರೆ. ಇದು ಎಷ್ಟು ಅಗತ್ಯ ಎಂದು ನಿಮಗೆ ಗೊತ್ತೇ….?
ನಗರ ಜೀವನದ ಆಧುನಿಕ ತಾಯಿ ತಂದೆಯರಿಬ್ಬರೂ ಉದ್ಯೋಗಸ್ಥರು. ಹೀಗಾಗಿ ತಮ್ಮ ಆಫೀಸ್ ವೇಳೆ ಜೊತೆ ಮಕ್ಕಳ ಶಾಲಾ ವೇಳೆಯನ್ನು ಒಟ್ಟೊಟ್ಟಿಗೆ ನಿಭಾಯಿಸುವುದು ಹೇಗೆ ಎಂದು ಚಿಂತೆಗೆ ಒಳಗಾಗುತ್ತಾರೆ. ಮಕ್ಕಳು ತೀರಾ LKG, UKG ಕ್ಲಾಸಿನಲ್ಲಿರುವಾಗ ಈ ತೊಂದರೆ ತಪ್ಪಿದ್ದಲ್ಲ. ಈ ಕಾರಣದಿಂದಾಗಿ ಎಷ್ಟೋ ಸಲ ಮಕ್ಕಳು ತಡವಾಗಿ ಶಾಲೆ ತಲುಪುತ್ತಾರೆ. ಸಮಸ್ಯೆ ಅತಿ ದಟ್ಟವಾದಾಗ, ತಾಯಿ ಅನಿವಾರ್ಯವಾಗಿ ಕೆಲಸ ಬಿಟ್ಟು ಮಕ್ಕಳ ಕಡೆ ನಿಗಾ ವಹಿಸಬೇಕಾಗುತ್ತದೆ. ಖಾಸಗಿ ನೌಕರಿಯಲ್ಲಿರುವ ಹೆಣ್ಣುಮಕ್ಕಳು, ಮದುವೆ ನಂತರ, ಅವರು ಕೆಲಸ ಬಿಡಲೇಬೇಕು ಎಂಬ ಒತ್ತದ ಹೆಚ್ಚಿರುತ್ತದೆ. ಈ ಕಾರಣದಿಂದಾಗಿ ಮನಸ್ಸಿಲ್ಲದಿದ್ದರೂ ಆಕೆ ಉದ್ಯೋಗ ತೊರೆದು ಅಪ್ಪಟ ಗೃಹಿಣಿಯಾಗಿ ಮನೆಯಲ್ಲೇ ಉಳಿಯ ಬೇಕಾಗುತ್ತದೆ. ಇದರಿಂದ ಆ ಹೆಣ್ಣಿನ ಕೆರಿಯರ್ ಕೆಡುವುದಲ್ಲದೆ, ಅವಳ ಪ್ರತಿಭೆ ಕಮರಿಹೋಗಿ, ಅವಳ ವಿದ್ಯಾಭ್ಯಾಸದ ಲಾಭ ಇಡೀ ದೇಶ, ಸಮಾಜಕ್ಕೆ ದಕ್ಕದೆ ಹೋಗುತ್ತದೆ.
ಇಂದಿನ ಕಾಲದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ (ಹಿಂದಿನಂತಲ್ಲದೆ) ಧಾರಾಳ ಹಣ ಖರ್ಚು ಮಾಡಲಾಗುತ್ತದೆ. ಇಷ್ಟೆಲ್ಲ ಆದಮೇಲೆ ಅವರು ಕೇವಲ ಗೃಹಿಣಿಯರಾಗಿ ಉಳಿದುಬಿಡುವುದು ಎಷ್ಟು ಸರಿ? ಮಹಿಳಾ ಸಶಕ್ತೀಕರಣದ ಅತಿ ಮುಖ್ಯ ಬೇಡಿಕೆ ಎಂದರೆ, ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸಕ್ಕೆ ಹೋಗಬೇಕು ಎಂಬುದು. ಇದಕ್ಕಾಗಿ ದೇಶ, ಸಮಾಜ ಸಹ ಇಂಥ ಒಂದು ಆತ್ಮೀಯ ವಾತಾವರಣ ನಿರ್ಮಿಸಬೇಕಾಗಿದೆ, ಅದರಿಂದಾಗಿ ಹೆಣ್ಣು ತನ್ನ ಮನೆ, ಮನೆತನ, ಗಂಡ, ಮಕ್ಕಳು, ಕೆರಿಯರ್ಎಲ್ಲವನ್ನೂ ಒಟ್ಟೊಟ್ಟಿಗೆ ನಿಭಾಯಿಸುವಂತಾಗಬೇಕು. ಶಾಲೆಯ ವೇಳಾಪಟ್ಟಿಯಲ್ಲಿ ತುಸು ಬದಲಾವಣೆ ಈ ನಿಟ್ಟಿನಲ್ಲಿ ಒಂದು ದೊಡ್ಡ ಕ್ರಾಂತಿಕಾರಿ ಹೆಜ್ಜೆಯಾಗಿದೆ.
ಆಫೀಸ್ ಶಾಲೆಯ ವೇಳೆ
ಶಾಲಾ ಸಮಯ ಹಾಗೂ ಆಫೀಸ್ ವರ್ಕಿಂಗ್ ಅವರ್ಸ್ ನಲ್ಲಿ ಸಮಾನತೆ ಇದ್ದರೆ, ಹೆಂಗಸರಿಗೆ ಕೆಲಸದ ಜೊತೆ ಜೊತೆಯಲ್ಲೇ ಮಗುವನ್ನು ಶಾಲೆಯಲ್ಲಿ ಬಿಟ್ಟು ತಮ್ಮ ಕೆಲಸದ ಕಡೆ ಗಮನಹರಿಸಲು ಸುಲಭವಾಗುತ್ತದೆ. ಶಾಲೆಯ ಟೈಮಿಂಗ್ ಬೆಳಗ್ಗೆ 10-30ಕ್ಕೆ ಆರಂಭವಾಗಿ ಸಂಜೆ 5ರವರೆಗೆ ಇದ್ದರೆ, ಆ ತಾಯಿಗೆ ಎಷ್ಟೋ ನೆಮ್ಮದಿ ಸಿಗುತ್ತದೆ. ಇದೇ ಸಮಯ ಆಫೀಸ್ ನದೂ ಆಗಿರುತ್ತದೆ. ಇದರಿಂದಾಗಿ ಹೆಂಗಸರು ಸುಲಭವಾಗಿ ತಮ್ಮ ಮಕ್ಕಳನ್ನು ರೆಡಿ ಮಾಡಿಸಿ, ಶಾಲೆಯಲ್ಲಿ ಬಿಟ್ಟು, ಸಂಜೆ ಆಫೀಸ್ ಮುಗಿಸಿಕೊಂಡು, ಮಗುವನ್ನು ಕರೆದುಕೊಂಡು ಮನೆಗೆ ಹೊರಡಲು ಅನುಕೂಲವಾಗುತ್ತದೆ.
ಇದರಿಂದಾಗಿ ಉದ್ಯೋಗಸ್ಥ ವನಿತೆಗೆ, ಮನೆಯಲ್ಲಿ ತಾನಿಲ್ಲದ ವೇಳೆಯಲ್ಲಿ ಮಗುವನ್ನು ನೋಡಿಕೊಳ್ಳುವವರಾರು ಎಂಬ ದೊಡ್ಡ ಚಿಂತೆ ಇರುವುದಿಲ್ಲ.
ಆದರೆ ಇಂದಿನ ದಿನಗಳಲ್ಲಿ ಮಕ್ಕಳ ಶಾಲೆ ಬೆಳಗ್ಗೆ 7.30ಕ್ಕೆ ಶುರುವಾಗಿ, 2 ಗಂಟೆ ಹೊತ್ತಿಗೆ ಮುಗಿದೇ ಹೋಗುತ್ತದೆ. ಮಗು ಏನೋ ಮನೆಗೆ ಬರುತ್ತದೆ, ಆದರೆ ಮಗುವನ್ನು ನೋಡಿಕೊಳ್ಳುವವರು ಮಾತ್ರ ಯಾರೂ ಇರುವುದಿಲ್ಲ. ಆಗ ತಾಯಿ ತಂದೆಯರಿಗೆ ಮಗು ಮನೆಯಲ್ಲಿ ಏನು ಮಾಡುತ್ತಿದೆಯೋ ಏನೋ…. ಹೊತ್ತು ಹೊತ್ತಿಗೆ ಊಟ, ತಿಂಡಿ ಆಯಿತೋ ಇಲ್ಲವೋ, ಶಾಲೆಯ ಹೋಂವರ್ಕ್ ಮಾಡದೆ ಆಡುತ್ತಾ ಇದ್ದುಬಿಟ್ಟರೆ ಏನು ಗತಿ, ಟೆಸ್ಟ್, ಪರೀಕ್ಷೆಗೆ ತಯಾರಿ ಆಗುವುದು ಯಾವಾಗ….? ಹೀಗೆ ಚಿಂತೆಯ ಪಟ್ಟಿ ಬೆಳೆಯುತ್ತದೆ.
ಮನೆಯಲ್ಲಿ ಅಜ್ಜಿ ತಾತಾ ಇದ್ದರೆ ಆ ಮಾತೇ ಬೇರೆ, ವಿಧಿ ಇಲ್ಲದೆ ಇದ್ದಾಗ ಆಳುಕಾಳುಗಳ ಮೊರೆ ಹೋಗಬೇಕಾದೀತು.
ಮಕ್ಕಳ ಸುರಕ್ಷತೆ
ಕೆಲವು ಪೋಷಕರು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಕ್ರೆಚ್ ನಲ್ಲಿ ಬಿಡುತ್ತಾರೆ. ಅಪರೂಪಕ್ಕೆ ಕೆಲವು ಶಾಲೆಗಳಲ್ಲಿ, ಶಾಲಾ ಸಮಯದ ನಂತರ, ಮಗು ಅಲ್ಲೇ ಉಳಿಯಬಹುದು, ಪೋಷಕರು ಆಫೀಸ್ ನಂತರ ನೇರವಾಗಿ ಅಲ್ಲಿಗೆ ಬಂದು ಮಗುವನ್ನು ಕರೆದುಕೊಂಡು ಹೋಗುವ ಸೌಲಭ್ಯ ಇರುತ್ತದೆ. ಈ ಎಲ್ಲಾ ವ್ಯವಸ್ಥೆಗಳೂ ಶಾಶ್ವತ ಅಲ್ಲ, ಅಚ್ಚಕಟ್ಟಾಗಿರುತ್ತದೆ ಎಂದು ಹೇಳಲಿಕ್ಕೂ ಬರುವುದಿಲ್ಲ. ಆಳುಕಾಳುಗಳನ್ನು ನಂಬಿ ಮಕ್ಕಳನ್ನು ಮನೆಯಲ್ಲೇ ಬಿಟ್ಟಿರುವುದು ಮತ್ತೊಂದು ಚಿಂತೆಯ ವಿಷಯ. ಇದಕ್ಕಾಗಿ ಅವರಿಗೆ ಪ್ರತ್ಯೇಕವಾಗಿ ಹಣ ಕೊಡಬೇಕಾಗುತ್ತದೆ. ಎಲ್ಲಾ ಜಾಗಗಳಲ್ಲೂ ಕ್ರೆಚ್ ವ್ಯವಸ್ಥೆ ಚೆನ್ನಾಗಿಯೇ ಇರುತ್ತದೆ ಎಂದು ಹೇಳಲಾಗದು. ಎಲ್ಲಾ ಕಡೆ ಇದು ಇರೋದೂ ಇಲ್ಲ. ಶಾಲಾ ವೇಳೆಯ ನಂತರ ಮಕ್ಕಳು ಅಲ್ಲೇ ಉಳಿಯುವ ವ್ಯವಸ್ಥೆಯೂ `ವೆರಿ ಗುಡ್’ ಎಂದು ಹೇಳಲಾಗದು.
ಈ ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ ಎಂದರೆ, ಮಕ್ಕಳ ಶಾಲಾ ವೇಳೆ ಬದಲಾದರೆ ಚೆನ್ನ! ಶಾಲೆ ಆಫೀಸ್ ಸಮಯ ಹೆಚ್ಚೂ ಕಡಿಮೆ ಒಂದೇ ಆಗಿರಬೇಕು. ಇದರಿಂದಾಗಿ ಆಫೀಸಿಗೆ ಹೊರಡುವಾಗ ಪೋಷಕರು ಮಕ್ಕಳನ್ನು ಶಾಲೆಯಲ್ಲಿ ಬಿಟ್ಟು, ಸಂಜೆ ಆಫೀಸ್ ಮುಗಿಸಿಕೊಂಡು ಬರುವಾಗ ಅವರನ್ನು ಸುಲಭವಾಗಿ ಕರೆದುಕೊಂಡು ಮನೆ ಸೇರಬಹುದಾಗಿದೆ.
ಇದರಿಂದ 2 ಲಾಭಗಳಿವೆ
ಮಗು ಸುರಕ್ಷಿತವಾಗಿ ಮನೆ ತಲುಪುವುದರಿಂದ, ಅದನ್ನು ಯಾರಾದರೂ ನೋಡಿಕೊಳ್ಳಬೇಕೆಂಬ ಟೆನ್ಶನ್ ಇರುವುದಿಲ್ಲ. ಮಗು ಏನು ಮಾಡುತ್ತಿದೆಯೋ, ಬಿದ್ದುಗಿದ್ದು ಗಾಯ ಆಗಿಲ್ಲ ತಾನೇ…. ಇಂಥ ಟೆನ್ಶನ್ ಇಲ್ಲದೆ ತಾಯಿ ತಂದೆ ಅಚ್ಚುಕಟ್ಟಾಗಿ ತಮ್ಮ ಕೆಲಸದ ಕಡೆ ಗಮನ ಹರಿಸಬಹುದು.
ಮಕ್ಕಳ ಶಾಲಾ ವೇಳೆ ಬದಲಾಯಿಸುವುದರಿಂದ ದೊಡ್ಡ ಕಷ್ಟವೇನೂ ಎದುರಾಗದು. ಶಾಲೆ ತನ್ನ ವೇಳೆಗೆ ತಕ್ಕಂತೆ ತೆರೆಯಲ್ಪಡುತ್ತದೆ. ವ್ಯತ್ಯಾಸ ಇಷ್ಟೆ, ಅದೂ ತೀರಾ ಬೆಳಗಿನ 7.30ರ ಹೊತ್ತಿಗೆ ತೆರೆಯುವುದಿಲ್ಲ. ಮಕ್ಕಳು ಹೆತ್ತವರ ಬಳಿ ಮಾತ್ರ ಹೆಚ್ಚು ಸುರಕ್ಷಿತರಾಗಿರುತ್ತಾರೆ, ಹೀಗಿರುವಾಗ ತಾಯಿ ತಂದೆಯರೇ ಮನೆಯಲ್ಲಿ ಇಲ್ಲದಿದ್ದಾಗ, ಆ ಸಮಯದಲ್ಲಿ ಮಕ್ಕಳು ಮನೆಯಲ್ಲಿದ್ದು ಏನು ಮಾಡುವುದು? ಇದರ ಬದಲು ಪೋಷಕರೇ ಬಂದು ಮಗುವನ್ನು ಸಕಾಲಕ್ಕೆ 10.30ರ ಹೊತ್ತಿಗೆ ಶಾಲೆ ತಲುಪಿಸಿ, ಸಂಜೆ ಕರೆದುಕೊಂಡು ಹೋಗುವುದರಿಂದ, ಯಾವುದೇ ಅನಾನುಕೂಲವಿಲ್ಲ.
– ಶೈಲಜಾ ಮೂರ್ತಿ





