ದಿನೇಶ್ ಆಶಾ ದಂಪತಿಗೆ ಬಹು ಕಾಲದಿಂದ ಮಕ್ಕಳಿರಲಿಲ್ಲ. ದಿನೇಶನ ತಮ್ಮ ಅಭಿಷೇಕನನ್ನೇ ಆಶಾ ಮಗನಂತೆ ಆದರಿಸುತ್ತಿದ್ದಳು. ಮುಂದೆ ಅಭಿಷೇಕ್ ಅಂಬಿಕಾಳನ್ನು ಮದುವೆಯಾದಾಗ, ಓರಗಿತ್ತಿಯರು ಹೊಂದಿಕೊಂಡು ಚೆನ್ನಾಗಿದ್ದರು. ಮುಂದೆ ಇಬ್ಬರಿಗೂ ಒಟ್ಟಿಗೆ ಹೆರಿಗೆಯಾದಾಗ ಆಶಾ ತನ್ನ ಮಗುವನ್ನು ಕಳೆದುಕೊಂಡಳು. ನಂತರ ಅವಳು ಅಭಿಷೇಕನ ಮಗುವಿಗೆ ಮಮತಾಮಯಿ ತಾಯಿಯಾದದ್ದು ಹೇಗೆ….?
ಅಭಿಷೇಕನ ಓದು ನಗರ ಪ್ರದೇಶದಲ್ಲಿ ಮುಂದುವರಿದಿತ್ತು. ದೇವಸ್ಥಾನಕ್ಕೆ ಹೋದಾಗ ಅಂಬಿಕಾ ಕೂಡಾ ತನ್ನ ಗೆಳತಿಯರೊಂದಿಗೆ ಅಲ್ಲಿಗೆ ಬಂದಿದ್ದಳು. ತುಂಬಾ ಆತಂಕದಲ್ಲಿ ಇದ್ದಳು.
ಗೆಳತಿಯರ ಮೂಲಕ ಅಭಿಷೇಕ್ ಕೂಡಾ ಅದೇ ಊರಿನ ಪಕ್ಕದ ಗ್ರಾಮದವನು ಅಂತ ತಿಳಿಯಿತು. ತನ್ನ ತಂದೆಗೆ ಔಷಧಿ ಕಳುಹಿಸಬೇಕಿತ್ತು. ಬಸ್ ನಲ್ಲಿ ಕಳಿಸೋಣಾ ಎಂದರೆ ಆ ಹಳ್ಳಿಗೆ ಬಸ್ ಸಂಪರ್ಕವಿರಲಿಲ್ಲ. ಅಭಿಷೇಕನನ್ನು ಭೇಟಿಯಾದ ಅಂಬಿಕಾ, “ರೀ ಅಭಿಷೇಕ್ ನಿಮ್ಮಿಂದ ಒಂದು ಸಹಾಯವಾಗಬೇಕಿತ್ತು,” ಎಂದು ಕೇಳಿಕೊಂಡಳು.
“ಅದೇನು ಹೇಳಿ ಅಂಬಿಕಾ,” ಎಂದ.
“ನನ್ನ ತಂದೆಗೆ ಔಷಧಿಯನ್ನು ಕೊಡಬೇಕು. ಆದರೆ ನನಗೆ ಮಹತ್ವದ ಪರೀಕ್ಷೆ ಇರುವುದರಿಂದ ಊರಿಗೆ ಹೋಗಿ ನನ್ನ ತಂದೆಗೆ ಔಷಧಿಯನ್ನು ತಲುಪಿಸಲು ಆಗುತ್ತಿಲ್ಲ,” ಎಂದಳು.
“ನನ್ನ ಪರೀಕ್ಷೆ ಮುಗಿದಿದೆ. ನಾನು ನಾಳೆ ಊರಿಗೆ ಹೋಗುವುದಿದೆ,” ಎಂದು ಅಭಿಷೇಕ್ ಹೇಳಿದಾಗ ಅಂಬಿಕಾಳ ಮುಖದಲ್ಲಿ ಇದ್ದ ಆತಂಕ ದೂರವಾಗಿ ತುಂಬಾ ಖುಷಿಯಾಯಿತು.
ಅಂಬಿಕಾ ಅಭಿಷೇಕ್ ಗೆ ಥ್ಯಾಂಕ್ಸ್ ಹೇಳುವಷ್ಟರಲ್ಲಿ ಪಾನಿಪೂರಿ ಅಂಗಡಿ ಬಂದಿತು. ಬೈಕ್ ನಿಲ್ಲಿಸು ಅಂತ ಅಭಿಷೇಕ್ ಗೆ ಅಂಬಿಕಾ ಹೇಳಿದಳು.
ತಮ್ಮಿಬ್ಬರ ಮೊದಲ ಪರಿಚಯದ ಬಗ್ಗೆ ನೆನಪನ್ನು ಮೆಲುಕು ಹಾಕಿದರು.
ತಕ್ಷಣವೇ ಅಭಿಷೇಕ್ ಗೆ ಕರೆಬಂದಿತು.
“ಅಮ್ಮಾ ಹೇಳು….. ಅಣ್ಣ ಹೇಗಿದ್ದಾರೆ. ಹೊತ್ತಿಗೆ ಸರಿಯಾಗಿ ಮಾತ್ರೆ ತೆಗೆದುಕೊಳ್ಳಲು ಹೇಳಿ ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಪರೀಕ್ಷೆ ಮುಗಿಸಿಕೊಂಡು ಮುಂದಿನ ತಿಂಗಳು ಊರಿಗೆ ಬರುತ್ತೇನೆ. ಸರಿ ಅಮ್ಮಾ….” ಎಂದು ಕರೆ ಸ್ಥಗಿತಗೊಳಿಸಿದ.
“ಅರೇ ಅಭಿಷೇಕ್….. ನೀನು ಬೆಳೆದಿರುವುದು ನಿನ್ನ ಅಣ್ಣ ದಿನೇಶ್, ಅತ್ತಿಗೆ ಆಶಾ ಆಶ್ರಯದಲ್ಲಿ ಅಲ್ವಾ…..?”
“ಹೌದು…..”
“ಹಾಗಾದ್ರೆ ಫೋನ್ ಕರೆ ಬಂದಾಗ ಅತ್ತಿಗೆ ಎನ್ನುವ ಬದಲು ಅಮ್ಮಾ…. ಎಂದು ಹೇಳಿದಿಯಲ್ಲ ಅದಕ್ಕೆ ಕೇಳಿದೆ.”
“ನನ್ನ ಪಾಲಿಗೆ ನನ್ನ ಅಣ್ಣ ಅತ್ತಿಗೆ ನನಗೆ ತಾಯಿ ತಂದೆ ಇದ್ದಂತೆ. ಆದ್ದರಿಂದ ನನ್ನ ಅತ್ತಿಗೆಯನ್ನು ನಾನು ಅಮ್ಮ ಎಂದು ಕರೆಯುವುದು.”
“ಇನ್ನೊಂದು ಮಾತು, ತಪ್ಪಾಗಿ ತಿಳಿಯಬೇಡ. ಅವರಿಗೆ ಮಕ್ಕಳಿಲ್ಲವಂತೆ…. ಹೌದಾ ಅಭಿಷೇಕ್……?”
“ಹೌದು…. ಅಂಬಿಕಾ ನನ್ನ ಅಣ್ಣನಿಗೆ ಮಕ್ಕಳಾಗಿಲ್ಲ. ಹೌದು ಏನಿವತ್ತು ನನ್ನ ಮನೆಯ ವಿಷಯ ತುಂಬಾ ಕೇಳುತ್ತಿರುವೆ. ನಿನಗೆ ನನ್ನ ಮನೆಯ ಪರಿಸ್ಥಿತಿಯ ಬಗ್ಗೆ ನಿನಗೆ ಕಾಳಜಿ ಇದೆ ತಾನೇ?” ಕೇಳಿದ.
“ಅಭಿಷೇಕ್, ಇನ್ನೂ ಸಮಯ ವ್ಯರ್ಥ ಮಾಡಿ ಪ್ರಯೋಜನವಿಲ್ಲ. ನಮ್ಮ ಪ್ರೀತಿಯ ಬಗ್ಗೆ ನಿಮ್ಮ ಮನೆಯಲ್ಲಿ ಹೇಳಿರುವೆಯಾ…..?” ಅಂಬಿಕಾ ನಾಚುತ್ತಾ ಕೇಳಿದಳು. ಹೀಗೆ ಅವರ ಮಾತು ಸಾಗಿತ್ತು.
ಅತ್ತ ಊರಿನಲ್ಲಿ…… “ರೀ….ರೀ…..”
“ಹೇಳು ಆಶಾ…..”
“ನನ್ನ ಮೈದುನ ಅಭಿಷೇಕ್ ಮುಂದಿನ ವಾರ ಬರುತ್ತೇನೆ ಎಂದು ಹೇಳಿದ್ದಾನೆ ರೀ…..”
“ಹೌದಾ, ಹಾಗಾದ್ರೆ ಅವನಿಗೆ ಏನೇನು ಇಷ್ಟದ ತಿಂಡಿಗಳೋ ಅದನ್ನೆಲ್ಲಾ ನಾಳೆಯಿಂದಲೇ ಮಾಡಿಬಿಡು ಆಶಾ,” ಎಂದ.
ಏನೂ ಮಾತನಾಡದೆ ಮೌನವಾಗಿ ನಿಂತ ಆಶಾಳ ಕಡೆ ನೋಡಿದಾಗ ಅವಳು ಭಾವುಕಳಾಗಿ ಅಳುತ್ತಿದ್ದಳು.
“ಆಶಾ….. ನಾನು ಏನಾದರೂ ತಪ್ಪಾಗಿ ಮಾತನಾಡಿದೆನಾ…..?” ಎಂದು ಗಾಬರಿಯಿಂದ ಕೇಳಿದ.
“ಇಲ್ಲಾ ರೀ…..”
“ಮತ್ಯಾಕೆ ಈ ಕಣ್ಣೀರು….?”
“ಮಕ್ಕಳ ಹಂಬಲವಿರುವ ನನಗೆ ಆ ದೇವರು ಇಷ್ಟು ವರ್ಷವಾದರೂ ಮಡಿಲು ತುಂಬದೆ ಅನ್ಯಾಯ ಮಾಡುತ್ತಿದ್ದಾನೆ ರೀ…..”
“ಸಮಾಧಾನ ಮಾಡ್ಕೊ ಆಶಾ……” ಎಂದ.
“ನಾನು ಬಂಜೆ ಎಂದು ವಠಾರದಲ್ಲಿ ಒಬ್ಬರೂ ನನ್ನನ್ನು ತೊಟ್ಟಿಲು ಪೂಜೆಗೆ ಕರೆಯುವುದಿಲ್ಲ. ನನಗೆ ಮಕ್ಕಳಿಲ್ಲಾಂತ ಬೇರೆಯವರ ಮಕ್ಕಳನ್ನು ಎತ್ತಿ ಮುದ್ದಾಡುವ ಹಾಗಿಲ್ಲ,” ಎಂದು ಅಳುತ್ತಾ ಆಶಾ ದಿನೇಶನ ಎದೆಯ ಮೇಲೆ ಒರಗಿದಳು.
ಮನಸ್ಸಿನ ನೋವಿನಿಂದ ದುಃಖಿಸುತ್ತಿದ್ದ ಮಡದಿಯನ್ನು ದಿನೇಶ ಪುಟ್ಟ ಮಗುವನ್ನು ಸಂತೈಸುವಂತೆ ಸಂತೈಸಿದ.
“ರೀ…. ಅಭಿಷೇಕ್ ಗೆ ನಾನು ಹೇಳಿದ ಹುಡುಗಿಯನ್ನು ಮದುವೆ ಮಾಡಿಸಬೇಕು.”
“ಆಶಾ…. ನಿನ್ನ ಈ ತಕರಾರು ಒಂದು ರೀತಿಲಿ ಸರಿ. ಅಭಿಷೇಕ್ ಬರಲಿ ಅವನ ಮನದಿಚ್ಛೆಯನ್ನು ಕೇಳಿಕೊಂಡು ಮುಂದುವರಿದರೆ ಒಳ್ಳೆದಲ್ವಾ….” ಎಂದ.

ಅಷ್ಟರಲ್ಲಿ ಊರಿನ ವಯೋವೃದ್ಧನೊಬ್ಬ “ಬುದ್ಧೀ….. ಬುದ್ಧೀ….” ಎನ್ನುತ್ತಾ ಮನೆಗೆ ಬಂದ.
“ಬಾರಯ್ಯ ಹನುಮಂತಾ….. ಬಾ ಕುಳಿತುಕೊ….” ಎಂದು ಹೇಳಿದ ದಿನೇಶ್, “ಆಶಾ, ಹನುಮಂತೂಗೆ ಕುಡಿಯಲು ನೀರು ಕೊಡು.” ಎಂದ.
ಆಶಾ ಹನುಮಂತುಗೆ ನೀರು ತಂದುಕೊಟ್ಟಳು. ನೀರು ಕುಡಿದು ಸುಧಾರಿಸಿಕೊಂಡ ಆತ, “ಬುದ್ಧೀ….. ನೀವೇ ನನ್ನ ಕಾಪಾಡಬೇಕು,” ಎಂದು ಅಳಲು ಶುರು ಮಾಡಿದ.
“ಏನಾಯಿತು ಹನುಮಂತು….”
“ಬುದ್ಧೀ…. ಆ ಬಡ್ಡಿ ಬಸವ್ವನ ಹತ್ತಿರ, ನನ್ನ ಹೆಂಡತಿ ಹೆರಿಗೆಗಾಗಿ ಐದು ಸಾವಿರ ಸಾಲ ತಗೊಂಡಿದ್ದೆ. ಆದರೆ ನನ್ನ ಹೆಂಡತಿ ಹೆರಿಗೆ ಸಮಯದಲ್ಲಿ ಮತ್ತಷ್ಟು ಹಣ ಬೇಕಾಯ್ತು. ಅದನ್ನು ಕೇಳಲು ಹೋದರೆ ಐದು ಸಾವಿರ ಸಾಲಕ್ಕೆ ಐದು ಸಾವಿರ ಬಡ್ಡಿ ಸೇರಿಸಿ ಹತ್ತು ಸಾವಿರ ಮಾಡಿದ್ದಾಳೆ. ಆ ಕಡೆ ಹಣ ಹೊಂದಿಸಲಾಗದೆ, ನನ್ನ ಹೆಂಡತಿ ತೀರಿಹೋದಳು ಬುದ್ಧೀ….” ಎನ್ನುತ್ತಾ ಅಳಲು ತೋಡಿಕೊಂಡ.
“ಹನುಮಂತು…. ಕಷ್ಟದ ಸಮಯ ಬಂದಾಗ ನನ್ನ ಹತ್ರ ಬಾ ಅಂತ ನಿನಗೆ ಹತ್ತಾರು ಬಾರಿ ಹೇಳಿರುವೆ. ಆದರೆ ನೀನು ಮತ್ತೆ ಮತ್ತೆ ಅಲ್ಲಿಗೇ ಹೋಗಿರುವೆಯಲ್ಲಾ….” ಎಂದು ತುಸು ಕೋಪದಿಂದ ಹೇಳಿದ.
“ತಪ್ಪಾಯಿತು ಬುದ್ಧೀ….. ಆದರೆ ಇನ್ನೊಂದು ಸಂಗತಿ ಬುದ್ಧೀ…. ಆ ಬಡ್ಡಿ ಬಸವ್ವ ತಾನು ಕೊಟ್ಟ ಸಾಲನ್ನು ಈಗಲೇ ವಾಪಸ್ ಕೇಳುತ್ತಿದ್ದಾಳೆ.”
“ಛೇ…ಛೇ…. ಆ ಬಡ್ಡಿ ಬಸವ್ವ ಎಂಥ ಹೀನ ಮನಸ್ಸಿನವಳು. ತಗೋ ಹತ್ತು ಸಾವಿರ. ಇದನ್ನು ಅವಳಿಗೆ ಕೊಟ್ಟು ಸಾಲ ಚುಕ್ತಾ ಮಾಡು,” ಎಂದ ದಿನೇಶ, “ಹನುಮಂತು, ಸಮಾಜದ ಒಳಿತಿಗೆ ಬಡವರಿಗೆ ಆಗಬೇಕಾದ ಸಹಾಯ ಸಹಾನುಭೂತಿಗೆ ಸಿಗದೆ ಬಡಜನರು ಇಂತಹ ಚಕ್ರವ್ಯೂಹಕ್ಕೆ ಸಿಲುಕಿ ಬಳಲುತ್ತಿದ್ದಾರೆ,” ಎಂದ.
ಬೆಳಗ್ಗೆ ಉಪಾಹಾರದ ಸಮಯಕ್ಕೆ ಅಭಿಷೇಕ್ ಕರೆ ಮಾಡಿ ತಾನು ನಾಳೆ ಊರಿಗೆ ಬರುವುದಾಗಿ ಹೇಳಿದ.
ಅಂಬಿಕಾ ಸಹ ಊರಿಗೆ ಬಂದಳು. ಅವಳನ್ನು ನೋಡಿದ್ದೇ, “ಅಯ್ಯೋ…. ಅಂಬಿಕಾ ಎಷ್ಟು ಸೊರಗಿ ಹೋಗಿರುವೆ. ನಿನಗೆ ಚೆನ್ನಾಗಿ ಅಡುಗೆ ಮಾಡಿ ಹಾಕುವೆ. ಆದರೆ ನೀನು ಮೊದಲಿನಂತೆ ಇಲ್ಲ ತುಂಬಾ ಬದಲಾಗಿರುವೆ,” ಎಂದು ಅಳಲು ತೋಡಿಕೊಂಡಳು ಬಡ್ಡಿ ಬಸವ್ವ.
“ನೋಡಿ ಅಪ್ಪಾ…. ಅಮ್ಮಾ ನನ್ನನ್ನ ಗೋಳು ಹಾಕಿಕೊಳ್ಳುತ್ತಿದ್ದಾರೆ. ನೀವಾದರೂ ಹೇಳಬಾರದೇನು…..” ಅಪ್ಪನ ಬಳಿ ದೂರಿದಳು.
“ಅಂಬಿಕಾಳ ಬಗ್ಗೆ ನನಗೆ ನಂಬಿಕೆ ಇದೆ. ಅವಳು ತಪ್ಪು ಹೆಜ್ಜೆ ಇಡುವುದಿಲ್ಲ,” ಎಂದು ಮಗಳ ಪರವಾಗಿ ಹೇಳಿದ.
`ಅಯ್ಯೋ ದೇವರೇ…. ನಾನು ಅಭಿಷೇಕ್ ನನ್ನು ಇಷ್ಟ ಪಡುತ್ತಿರುವುದು ನನ್ನ ತಂದೆಗೆ ಅನುಮಾನ ಬಂದಿದೆಯೇ….?’ ಅಂಬಿಕಾಳಿಗೆ ಗಾಬರಿಯಾಯಿತು.
“ನೀನು ನೆಮ್ಮದಿಯಾಗಿ ದೇವಸ್ಥಾನಕ್ಕೆ ಹೋಗಿ ಬಾ,” ಎಂದು ಅಂಬಿಕಾಳ ತಂದೆ ಹೇಳಿದರು.
ಸರಿ ಎಂದು ಅಂಬಿಕಾ ಬಸವೇಶ್ವರ ದೇವಸ್ಥಾನಕ್ಕೆ ಹೋದಳು. ಹೋಗುವಾಗ ತನ್ನ ಮೊಬೈಲ್ ನ್ನು ಮನೆಯಲ್ಲಿ ಮರೆತು ಬಿಟ್ಟು ಹೋದಳು.
ಅದೇ ಸಮಯಕ್ಕೆ ಅಭಿಷೇಕ್ ತಾನೂ ದೇವಸ್ಥಾನಕ್ಕೆ ಬರುತ್ತೇನೆ ಎಂದು ತಿಳಿಸಲು ಅಂಬಿಕಾಳಿಗೆ ಕರೆ ಮಾಡಿ, “ಅಂಬಿಕಾ, ನಿನ್ನನ್ನ ನೋಡಿ ನಾಲ್ಕು ದಿನಗಳಾಯ್ತು. ಮನದಲ್ಲಿ ಮೌನ ಮಡುಗಟ್ಟಿದೆ. ಮನದ ಆಶೆ ಬಯಕೆಗಳೆಲ್ಲಾ ನನ್ನನ್ನು ಎಡಬಿಡದೆ ಕಾಡುತಿವೆ. ನನ್ನ ಮನದ ಅರಸಿಯೇ ಎಲ್ಲಿರುವೆ…..?” ಎಂದು ಕಾವ್ಯಮಯವಾಗಿ ಹೇಳಿದ.
ಕರೆ ಸ್ವೀಕರಿಸಿದ ಅಂಬಿಕಾಳ ತಾಯಿ ಬಡ್ಡಿ ಬಸವ್ವ, “ನಾನು ನನ್ನ ಹಳ್ಳಿಯಲ್ಲಿರುವೆ ನೀನು ಎಲ್ಲಿರುವೆ?” ಎಂದು ಕೇಳಿದಳು.
“ನಾನು ನನ್ನ ಹಳ್ಳಿಯಲ್ಲಿ ಇದ್ದೇನೆ. ನಿಮ್ಮ ಊರ ಬಸವೇಶ್ವರ ದೇವಸ್ಥಾನಕ್ಕೆ ಬರುವೆ,” ಎಂದು ಹೇಳಿದ.
ಅಂಬಿಕಾ ಅಭಿಷೇಕ್ ಇಬ್ಬರೂ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮುಗಿಸಿ, ದೇವಸ್ಥಾನದ ಪಕ್ಕದ ಕಲ್ಯಾಣ ಮಂಟಪದ ಬಳಿ ಕೈ ಕೈ ಹಿಡಿದುಕೊಂಡು ಕುಳಿತು ಮಾತನಾಡುತ್ತಿರುವುದನ್ನು ಕಂಡು ಅಲ್ಲಿಗೆ ಬಂದಿದ್ದ ಬಡ್ಡಿ ಬಸವ್ವ ಮತ್ತು ನಾಗರಾಜುಗೆ ಅನುಮಾನ ಆಯಿತು.
ಅಲ್ಲಿದ್ದ ಹಳ್ಳಿ ಜನ, “ನಿಮ್ಮ ಮಗಳು ನಿಮಗೆ ಗಂಡು ಹುಡುಕುವ ಕೆಲಸವನ್ನು ಕೊಡಲಿಲ್ಲ ಬಿಡಿ,” ಎಂದು ವ್ಯಂಗ್ಯವಾಡಿದರು.
ಬಾಯಿ ಬಡುಕಿ ಬಡ್ಡಿ ಬಸವ್ವ, “ಅಯ್ಯೋ…. ನನ್ನ ಮರ್ಯಾದೆಯನ್ನು ತೆಗೆಯಲು ನೀನು ಹುಟ್ಟಿರುವೆಯಾ…?” ಎಂದು ಅಭಿಷೇಕ್ ಅಂಬಿಕಾ ಕುಳಿತಲ್ಲಿಗೆ ಬಂದಳು.
“ಓಹೋ…. ನೀನು ಪಕ್ಕದ ಹಳ್ಳಿಯ ಸಾಹುಕಾರ ದಿನೇಶನ ತಮ್ಮ ತಾನೇ…..?” ಎಂದು ಕೇಳಿದ ನಾಗರಾಜ್.
“ಹೌದು ಮಾವನವರೇ….” ಎಂದಾಗ ನಾಗರಾಜ್ ನಾಚಿ ನೀರಾದ.
ಆದರೆ ಬಡ್ಡಿ ಬಸವ್ವ, “ನೆನಪಿರಲಿ ಇವನ ಅಣ್ಣನಿಂದಲೇ ನನ್ನ ಬಡ್ಡಿ ವ್ಯವಹಾರಕ್ಕೆ ತೊಂದರೆಯಾಗಿದೆ. ಅದೂ ಅಲ್ಲದೇ, ದಿನೇಶನ ಹೆಂಡತಿ ಆಶಾ ಮಕ್ಕಳಿಲ್ಲದ ಬಂಜೆ,” ಎಂದು ಹೀಗಳೆದಳು.
“ಬಡ್ಡಿ ಬಸವ್ವನವರೆ, ಬಾಯಿಗೆ ಬಂದ ಹಾಗೆ ಮಾತನಾಡಬೇಡಿ. ನನ್ನ ಅತ್ತಿಗೆಯನ್ನು ಬಂಜೆ ಎಂದು ಕರೆಯುವ ನಿಮ್ಮ ಸಂಬಂಧವೇ ಬೇಡ,” ಎಂದು ಕೋಪದಿಂದ ಹೇಳಿದ ಅಭಿಷೇಕ್.
“ಅಯ್ಯೋ ಅಭಿಷೇಕ್, ನೀವು ನನ್ನ ತಾಯಿಯ ಮಾತಿಗೆ ಬೆಲೆ ಕೊಡಬೇಡಿ. ನಾನು ಮದುವೆಯಾದರೆ ನಿಮ್ಮನ್ನೇ,” ಎನ್ನುತ್ತಾ ಕೂಡಿದ್ದ ಜನರ ಮಧ್ಯೆ ಅಭಿಷೇಕನನ್ನು ತಬ್ಬಿಕೊಂಡಳು ಅಂಬಿಕಾ.
“ಅಯ್ಯೋ… ನನ್ನ ಮಾನ ಮರ್ಯಾದೆ ಹೋಯಿತು!” ಎಂದಳು ಬಡ್ಡಿ ಬಸವ್ವ.
ಅದಕ್ಕೆ ನಾಗರಾಜ್, “ಅಭಿಷೇಕ್ ತಬ್ಬಿಕೊಂಡಿರುವುದು ನಿನ್ನ ಮಗಳನ್ನು ನಿನ್ನಲ್ಲ…. ಅಂಬಿಕಾ ಸರಿಯಾದ ಜೋಡಿಯನ್ನೇ ಆರಿಸಿದ್ದಾಳೆ. ಅವಳನ್ನು ಅಭಿಷೇಕ್ ಗೆ ಮದುವೆ ಮಾಡಿಸೋಣ,” ಎಂದ.
“ರೀ….ಈ ಸಂಬಂಧವೇ ಬೇಡ,” ಎಂದು ಅಲ್ಲಿಂದ ಅಂಬಿಕಾಳನ್ನು ಕರೆದುಕೊಂಡು ಹೋದರು.
ಅಭಿಷೇಕ್ ಮನೆಗೆ ಹಿಂತಿರುಗಿದ. ಆಶಾ ದಿನೇಶ್ ಅವನಿಗಾಗಿಯೇ ಕಾಯುತ್ತಿದ್ದರು. ಒಳಗೆ ಬರುತ್ತಿದ್ದವನನ್ನು ತಡೆದ ದಿನೇಶ್, “ಅಭಿಷೇಕ್ ನಿಲ್ಲು…. ಇಡೀ ಹಳ್ಳಿಗೆ ನ್ಯಾಯ ಪಂಚಾಯ್ತಿ ಮಾಡುವ ವಂಶ ನಮ್ಮದು. ಅಂತಹ ವಂಶದಲ್ಲಿ ಹುಟ್ಟಿದ ನೀನು ಪಕ್ಕದ ಹಳ್ಳಿಯ ಬಡ್ಡಿ ಬಸವ್ವನ ಮಗಳು ಅಂಬಿಕಾಳನ್ನು ದೇವಸ್ಥಾನದ ಬಳಿ ಊರ ಜನರ ಎದುರಿಗೆ ತಬ್ಬಿಕೊಳ್ಳುವುದು ತಪ್ಪು ಅಲ್ವಾ….” ಎಂದು ಕೋಪದಿಂದ ಕೇಳಿದ.
“ಅಣ್ಣಾ, ನಾನು ಅಂಬಿಕಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನು ನಾನು ನಿಮಗೆ ಹೇಳುವ ಮೊದಲೇ ನಿಮಗೆ ತಿಳಿದಿದೆ,” ಎಂದ ಅಭಿಷೇಕ್.
“ಇರಲಿ ಬಿಡಿ…. ನನ್ನ ಮೈದುನ ಸರಿಯಾದ ಜೋಡಿಯನ್ನೇ ಆಯ್ಕೆ ಮಾಡಿದ್ದಾನೆ,” ಎಂದಳು ಆಶಾ.
“ನನಗೆ ಸಮಸ್ಯೆ ಅದಲ್ಲ…. ಆ ಅಂಬಿಕಾಳ ತಂದೆ ಒಳ್ಳೆಯವರೇ, ಆದರೆ ಅವಳ ತಾಯಿ ಬಡ್ಡಿ ಬಸವ್ವ…..” ಎಂದಾಗ ಆಶಾ ಕೂಡಾ ಮಂಕಾದಳು.
“ನೀನು ಬಂಜೆ….. ಬಂಜೆ….. ಎಂದು ಕೂಗಿದ ಹೇಳಿದ ಆ ಬಡ್ಡಿ ಬಸವ್ವನ ಮಾತುಗಳು ನನ್ನ ಕರ್ಣಪಟಲದಲ್ಲಿ ಡಂಗುರ ಸಾರಿದ ಹಾಗಿವೆ. ಆದರೆ ನನ್ನ ಮೈದುನನ ಸಲುವಾಗಿ ಅವರಿಗೆ ಮನವಿ ಮಾಡಿಯಾದರೂ ಈ ಮದುವೆಗೆ ಒಪ್ಪಿಸೋಣಾ ರೀ…..” ಎಂದಳು ಆಶಾ.

“ಅಯ್ಯೋ, ಅವರ ಕೈ ಕಾಲು ಹಿಡಿದು ಮನವಿ ಮಾಡುವ ಸ್ಥಿತಿ ನಿಮಗೆ ಬರುವುದಾದರೆ ನನಗೆ ಅಂಬಿಕಾ ಬೇಡವೇ ಬೇಡ. ಅವಳೇ ಮೆಚ್ಚಿ ನನ್ನನ್ನು ಮದುವೆ ಆಗುವುದಾದರೆ ಮಾತ್ರ ನಾನು ಅವಳನ್ನು ಒಪ್ಪಿಕೊಳ್ಳುವೆ,” ಎಂದ ಅಭಿಷೇಕ್.
ಅದಾದ ನಂತರ ಬಡ್ಡಿ ಬಸವ್ವ-ನಾಗರಾಜ್ ದಂಪತಿ ಅಭಿಷೇಕನ ಅಣ್ಣ-ಅತ್ತಿಗೆಯನ್ನು ಭೇಟಿಯಾಗಲು ಬಂದರು. ಬಡ್ಡಿ ಬಸವ್ವನಿಗೆ ತನ್ನ ಮಗಳಿಗೆ ಅಭಿಷೇಕ್ ನಂತಹ ವರ ಸಿಗುವುದು ಕಷ್ಟ ಎಂದು ತಿಳಿಯಿತು. ಎರಡೂ ಕುಟುಂಬದವರ ಸಮ್ಮತದಿಂದ ಅಂಬಿಕಾ-ಅಭಿಷೇಕ್ ರ ವಿವಾಹ ಅದ್ಧೂರಿಯಾಗಿ ನೆರವೇರಿತು.
ದಿನೇಶ ಆಶಾರ ಮನೆಗೆ ಅಭಿಷೇಕನ ಹೆಂಡತಿಯಾಗಿ ಅಂಬಿಕಾ ಕಾಲಿಟ್ಟಳು. ಅದಾದ ಐದಾರು ತಿಂಗಳಲ್ಲಿ ಅಂಬಿಕಾ ಗರ್ಭಿಣಿಯಾದಳು. ಅದೇ ಸಮಯದಲ್ಲಿ ಆಶಾ ಕೂಡ ಗರ್ಭಿಣಿಯಾದಳು. ಮನೆಯಲ್ಲಿ ಸಂತೋಷದ ವಾತಾರಣ ತುಂಬಿ ತುಳುಕಿತು. ಇಬ್ಬರಿಗೂ ಒಟ್ಟಿಗೇ ಹೆರಿಗೆ ಆಯಿತು. ಇಬ್ಬರಿಗೂ ಗಂಡು ಮಗುವಾಯಿತು. ಆದರೆ ಆಸ್ಪತ್ರೆಯಿಂದ ಮನೆಗೆ ಬರುವಾಗ ಒಂದೇ ಮಗು ಉಳಿಯಿತು. ಅದು ಅಂಬಿಕಾ-ಅಭಿಷೇಕರದು. ಆಶಾಳ ಮಗು ಬದುಕುಳಿಯಲಿಲ್ಲ.
“ಆಶಾ-ದಿನೇಶ್ ಗೆ ಮಕ್ಕಳ ಭಾಗ್ಯವಿಲ್ಲ. ಅದೂ ಅಲ್ಲದೆ ಆಶಾಳ ಕೈಯಿಂದ ಏನೂ ತಿನ್ನಬೇಡ,” ಎಂದು ಬಡ್ಡಿ ಬಸವ್ವ ಚುಚ್ಚಿ ಮಾತನಾಡಿದಳು.
“ಆಶಾ, ನಮಗೆ ಮಕ್ಕಳ ಭಾಗ್ಯವಿಲ್ಲ ಅಂತ ಕಾಣಿಸುತ್ತೆ. ನೀನು ಸಮಾಧಾನ ಮಾಡ್ಕೋ,” ಎಂದು ದಿನೇಶ್ ಹೆಂಡತಿಯನ್ನು ಸಮಾಧಾನಿಸಿದ.
ಆದರೂ ಮಧ್ಯರಾತ್ರಿಯಲ್ಲಿ ಆಶಾ, ಅಂಬಿಕಾ-ಅಭಿಷೇಕರ ಕೋಣೆಗೆ ಹೋಗಿ ಮಗುವನ್ನು ನೋಡಿ ವಾಪಸ್ ಬರುವಾಗ ಅಭಿಷೇಕ್ ನೋಡಿದ. ಅತ್ತಿಗೆಯ ಬಗ್ಗೆ ಅವನಿಗೆ ಮರುಕವಾಯಿತು. ಅವರ ನಡವಳಿಕೆ ಬದಲಾಗಿದೆ ಎನಿಸಿತು. ಮಗುವನ್ನು ಕಳೆದುಕೊಂಡ ನೋವಿನಲ್ಲಿ ಹೀಗೆಲ್ಲ ಆಡುತ್ತಿದ್ದಾರೆ ಎಂದುಕೊಂಡ.
ಅಂಬಿಕಾಳೊಂದಿಗೆ ಮಗುವನ್ನು ಎತ್ತಿಕೊಂಡು ಅಣ್ಣ-ಅತ್ತಿಗೆಯ ಬಳಿ ಬಂದು, “ಅತ್ತಿಗೆ, ಇದು ನನ್ನ ಮಗು. ಆದರೆ ನಿಮ್ಮ ಮಗುವಿನಂತೆಯೇ ಅಂದುಕೊಂಡು ಸಮಾಧಾನ ಮಾಡಿಕೊಳ್ಳಿ,”ಎಂದು ಮಗುವನ್ನು ಆಶಾಳ ಕೈಯಲ್ಲಿ ಇಟ್ಟಾಗ ಆಶಾಳಿಗೆ ಮಾತೃ ಹೃದಯ ತುಂಬಿ ಬಂದಿತು.
“ಅಯ್ಯೋ ನನ್ನ ಕಂದಾ…” ಎಂದು ಮಗುವನ್ನು ಮುದ್ದಿಸಿ, ಆಶಾ ತಕ್ಷಣ ಮಗುನ್ನು ಅಂಬಿಕಾಳ ಕೈಗೆ ಕೊಟ್ಟಳು.
ಬಡ್ಡಿ ಬಸವ್ವ ಮೊಮ್ಮಗನನ್ನು ನೋಡಲು ಬಂದಾಗ, “ಮಗುವನ್ನು ಆಶಾಳ ಕೈಗೆ ಕೊಡಬೇಡ,” ಎಂದಳು.
“ಯಾಕಮ್ಮಾ ಹಾಗೇ ಹೇಳ್ತೀಯಾ…..?”
“ಯಾಕಂದ್ರೆ ಅವಳು ಬಂಜೆ. ಅವಳು ನಿನ್ನ ಮಗುವನ್ನು ಎತ್ತಿಕೊಂಡು ಮುದ್ದಾಡಲಿ, ಆದರೆ ಎದೆ ಹಾಲು ಕುಡಿಯಲು ಬಿಡಬೇಡಾ….”
“ಯಾಕಮ್ಮಾ….?”
“ಆ ಬಂಜೆಯ ಎದೆ ಹಾಲು ವಿಷವಿದ್ದಂತೆ,” ಎಂದು ಎಚ್ಚರಿಕೆ ನೀಡಿದಳು.
ಒಂದು ದಿನ ಮಗುವಿಗೆ ಬಟ್ಟೆ ಬದಲಿಸಲೆಂದು ಹೊರಗೆ ಒಣಗಿ ಹಾಕಿದ್ದ ಬಟ್ಟೆ ತರಲು ಅಂಬಿಕಾ ಹೊರಗೆ ಹೋಗಿದ್ದಳು. ಆಗ ಮಗು ಅಳಲು ಪ್ರಾರಂಭಿಸಿತು. ಮಗು ಹಸಿವಿನಿಂದ ಅಳು ನಿಲ್ಲಿಸಲಿಲ್ಲ. ಆಶಾಗೆ ತಡೆಯಲು ಆಗಲಿಲ್ಲ. ತನ್ನ ಎದೆ ಹಾಲನ್ನು ಮಗುವಿಗೆ ಕುಡಿಸಿಯೇ ಬಿಟ್ಟಳು.
ಅಂಬಿಕಾ ಒಳ ಬಂದು ನೋಡಿದಾಗ, ಆಶಾ ಮಗುವಿಗೆ ಹಾಲು ಕುಡಿಸುತ್ತಿರುವುದನ್ನು ನೋಡಿ, “ಅಯ್ಯೋ ಅಕ್ಕಾ…. ನನ್ನ ಮಗುವಿಗೆ ನಿಮ್ಮ ಎದೆ ಹಾಲು ಕುಡಿಸುವುದು ಬೇಡ ಅಂತ ಹೇಳಿದ್ದೆ ತಾನೇ…. ಕೊಡಿ ನನ್ನ ಮಗುವನ್ನು,” ಎಂದು ಆಶಾಳ ಕೈಯಿಂದ ಮಗುವನ್ನು ಕಸಿದುಕೊಂಡಳು. ಅದೇ ಸಮಯಕ್ಕೆ ಅಭಿಷೇಕ್ ಕೂಡ ಒಳ ಬಂದ.
“ಅಭಿಷೇಕ್, ನಿಮ್ಮ ಅತ್ತಿಗೆಗೆ ನಾವು ಏನು ಅನ್ಯಾಯ ಮಾಡಿದ್ದೇವೆ…..? ನನ್ನ ಮಗುವಿಗೆ ಎದೆ ಹಾಲು ಕೊಟ್ಟಿದ್ದಾರೆ ನೋಡಿ,” ಎಂದು ದೂರಿದಳು.
“ಓಹೋ…. ಅದಕ್ಕಾಗಿಯೇ ನೀವು ನಿನ್ನೆ ಮಧ್ಯ ರಾತ್ರಿ ನಮ್ಮ ಕೋಣೆಗೆ ಯಾಕೆ ಬಂದಿದ್ದು ಅಂತ ನನಗೆ ಈಗ ಗೊತ್ತಾಯಿತು. ನನಗೆ ಇದರ ಬಗ್ಗೆ ಅನುಮಾನವಿತ್ತು. ಆ ಕೆಲಸವನ್ನು ಅವರು ಇವತ್ತು ಸಾಧಿಸಿದ್ದಾರೆ. ಅಂಬಿಕಾ, ನಡಿ ನಾವು ಈ ಮನೆ ಬಿಟ್ಟು ಹೊರಡೋಣಾ,” ಎಂದ ಅಭಿಷೇಕ್.
ಅಷ್ಟರಲ್ಲಿ ಅಲ್ಲಿಗೆ ಬಂದ ದಿನೇಶ್, “ಅಭಿಷೇಕ್, ನೀನು ಮನೆಬಿಟ್ಟು ಹೋಗುವಂತದ್ದು ಏನಾಯಿತು…?” ಎಂದು ಕೇಳಿದ.
“ಅಣ್ಣಾ…… ಅತ್ತಿಗೆ ನನ್ನ ಮಗುವಿಗೆ ತಮ್ಮ ಎದೆಹಾಲು ಕುಡಿಸಬೇಡ ಎಂದರೂ ಕುಡಿಸಿದ್ದಾರೆ,” ಎಂದು ದೂರಿದ.
“ಹೌದಾ….? ಆಶಾ, ನಿನಗೆ ಸಾವಿರ ಸಲ ಹೇಳಿದ್ದೀನಿ. ಅದು ಅವರ ಮಗು. ನಿನ್ನ ಎದೆ ಹಾಲು ಆ ಮಗುವಿಗೆ ವಿಷವಂತೆ. ಯಾಕೆ ನೀನು ಹೀಗೆ ಮಾಡಿದೆ ಹೇಳು….” ಎಂದು ಆಶಾಳನ್ನು ಮನಬಂದಂತೆ ಥಳಿಸಿದ.
“ಅಯ್ಯೋ ದೇವರೇ, ನನಗೆ ಯಾಕೆ ಈ ಅನ್ಯಾಯ ಮಾಡಿದೆ,” ಎಂದು ಆಶಾ ಬಿಕ್ಕಿ ಬಿಕ್ಕಿ ಅತ್ತಳು.
ದಿನೇಶ್ ಕೋಪದಿಂದ, “ಆಶಾ ನಿನ್ನ ಮಾತು ನಿಜ. ದೇವರು ನಮಗೆ ಆ ಭಾಗ್ಯ ಕೊಟ್ಟಿಲ್ಲ. ನಾವೇ ಈ ಮನೆಯನ್ನು ಬಿಟ್ಟು ಹೋಗೋಣ,” ಎಂದ.
“ಬೇಡ ಅಣ್ಣಾ, ನೀವು ಮನೆ ಬಿಟ್ಟು ಹೋದರೆ ನಮ್ಮ ಮೇಲೆ ಕೆಟ್ಟ ಆಪವಾದವೆ ಬರುತ್ತದೆ,” ಎಂದ ಅಭಿಷೇಕ್.
ಅದೇ ಸಮಯಕ್ಕೆ ಬಡ್ಡಿ ಬಸವ್ವ ಮನೆಗೆ ಬಂದಳು. ಅಂಬಿಕಾ, ತಾಯಿಯ ಬಳಿ, “ಅಮ್ಮಾ, ನಾನು ಎಷ್ಟು ಹೇಳಿದರೂ ಕೇಳದೆ ಆಶಕ್ಕಾ ಮಗುವಿಗೆ ತಮ್ಮ ಎದೆ ಹಾಲು ಕುಡಿಸಿದ್ದಾರೆ,” ಎಂದು ದೂರಿದಳು.
“ಅಯ್ಯೋ… ಹಾಗಾದ್ರೆ ಈ ಮಗುವಿನ ಕಥೆ ಅಷ್ಟೇ ಕಣೇ ಅಂಬಿಕಾ, ನಡಿ ನಮ್ಮ ಮನೆಗೆ ಹೋಗೋಣ. ನಿನ್ನ ಮಗುವನ್ನು ನಾನು ಸಾಕುತ್ತೇನೆ,” ಎಂದು ಎದೆ ಬಡಿದುಕೊಂಡು ರಂಪಾಟ ಮಾಡಿದಳು.
“ಬಡ್ಡಿ ಬಸವ್ವನವರೇ, ಅಂಬಿಕಾ-ಅಭಿಷೇಕ್ ಈ ಮನೆಯಲ್ಲಿ ಇರಲಿ. ನಾವೇ ಈ ಮನೆ ಬಿಟ್ಟು ಹೊರಗೆ ಹೋಗುತ್ತೇವೆ,” ಎಂದು ಕೈ ಮುಗಿದು ಹೇಳಿದ ದಿನೇಶ್ -ಆಶಾ ಉಟ್ಟ ಬಟ್ಟೆಯಲ್ಲಿಯೇ ಮನೆಯಿಂದ ಹೊರನಡೆದರು.
ಬಡ್ಡಿ ಬಸಮ್ಮ ಒಂದು ಚೊಂಬು ಹಾಲು ಕಾಯಿಸಿ, ಅದಕ್ಕೆ ಸಕ್ಕರೆ ಹಾಕಿ, ಹಾಲು ಕುಡಿದು ಈ ಸಂಭ್ರಮ ಅನುಭವಿಸಿದಳು. ಆದರೆ ರಾತ್ರಿ ಮಗು ಅಳುವನ್ನು ನಿಲ್ಲಿಸಲೇ ಇಲ್ಲ. ಮಗುವಿನ ಅಳು ನಿಲ್ಲಿಸಲು ಹರಸಾಹಸ ಮಾಡಿದರು.
ಈ ಕಡೆ ದಿನೇಶ್-ಆಶಾ ಪಾಳುಬಿದ್ದ ದೇವಸ್ಥಾನಕ್ಕೆ ಬಂದರು. ಗುಡುಗು ಮಿಂಚಿನೊಂದಿಗೆ ವಿಪರೀತ ಮಳೆ. ಹಸಿ ಬಾಣಂತಿಯಾದ ಆಶಾ ಮಳೆಯ ಅಬ್ಬರಕ್ಕೆ ನಡುಗ ತೊಡಗಿದಳು. ದಿನೇಶ್-ಆಶಾಳ ಎರಡೂ ಕೈಯನ್ನು ತನ್ನ ತಲೆಗೆ ಹಿಡಿದುಕೊಂಡು, “ಆಶಾ, ನನ್ನನ್ನು ಕ್ಷಮಿಸು. ನಿನಗೆ ಮನಬಂದಂತೆ ಥಳಿಸಿದೆ,” ಎಂದ.
“ನೀವು ಥಳಿಸಿದಾಗ ಅದು ದೇಹಕ್ಕೆ ನೋವಾಯಿತು, ಅದು ಗುಣವಾಗುತ್ತದೆ. ಆದರೆ ಕರುಳಬಳ್ಳಿಗೆ….” ಎಂದವಳನ್ನು, “ಶ್…..ಶ್…. ಇಲ್ಲಿ ಭಿಕ್ಷುಕರು, ಅನಾಥರು ಬಂದು ಮಲಗಿದ್ದಾರೆ. ನಾವು ಹೀಗೆ ಅಂತ ಗೊತ್ತಾದರೆ ನಮ್ಮನ್ನು ಹೊರಗೆ ಹಾಕುತ್ತಾರೆ,” ಎಂದು ಅವಳನ್ನು ಸುಮ್ಮನಿರುಂತೆ ಹೇಳಿದ. ಇತ್ತ ಬಡ್ಡಿ ಬಸಮ್ಮ ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡಿದರೂ ಮಗು ಅಳುವುದನ್ನು ನಿಲ್ಲಿಸಲೇ ಇಲ್ಲ. ದೃಷ್ಟಿ ನಿವಾಳಿಸಿದರೂ ಮಗು ಅಳುವುದನ್ನು ಮಾತ್ರ ನಿಲ್ಲಿಸಲೇ ಇಲ್ಲ. ಆಗ ಡಾ. ಮಧುಸೂದನ್‌ರನ್ನು ಫೋನ್ ನಲ್ಲಿ ಸಂಪರ್ಕಿಸಲಾಯಿತು. ಹೊರಗಡೆ ವಿಪರೀತ ಮಳೆ ಬರುತ್ತಿತ್ತು. ಡಾಕ್ಟರ್ ಹೇಗೋ ಮಾಡಿ ದಿನೇಶ್ ಮನೆಗೆ ಬಂದರು.
ಮಗುವನ್ನು ಪರೀಕ್ಷಿಸಿ, “ಆಶಾ ಎಲ್ಲಿ….?” ಎಂದು ಕೇಳಿದರು.
“ಅಲ್ಲಾ ಡಾಕ್ಟರ್, ಮಗುವನ್ನು ಹೆತ್ತ ತಾಯಿ ಅಂಬಿಕಾ ಇಲ್ಲಿ ಇರುವಾಗ, ನೀವು ನಮ್ಮ ಅತ್ತಿಗೆಯನ್ನು ಕೇಳುತ್ತಿರುವುದು ಯಾಕೋ ನನಗೆ ಬಾಲಿಶ ಎನಿಸುತ್ತಿದೆ,” ಎಂದು ಅಭಿಷೇಕ್.
“ಆಸ್ಪತ್ರೆಯಲ್ಲಿ ಆಶಾ ಅಂಬಿಕಾರಿಗೆ ಹೆರಿಗೆ ಆದಾಗ ಅಲ್ಲಿ ಇದ್ದುದು ನಾನು ಹಾಗೂ ನರ್ಸ್. ಅಲ್ಲಿ ಏನು ನಡೆಯಿತು ಎಂದು ನಮಗೆ ಮಾತ್ರ ಗೊತ್ತು,” ಎಂದರು ಮಾರ್ಮಿಕವಾಗಿ.
ಅಭಿಷೇಕ್-ಅಂಬಿಕಾ ಮುಖಮುಖ ನೋಡಿಕೊಂಡರು.
“ಹಾಗಾದ್ರೆ ನನ್ನ ಮಗು ಅಳುವುದಕ್ಕೆ ಕಾರಣ…..?” ಎಂದು ಕೇಳಿದಳು ಅಂಬಿಕಾ.
“ಹೌದು ಅಂಬಿಕಾ, ನಿನ್ನ ಮಡಿಲಲ್ಲಿ ಇರುವ ಮಗು ಆಶಾ ಹೆತ್ತ ಮಗು, ನಿನ್ನ ಮಗು ಹೆರಿಗೆ ನಂತರ ಸತ್ತುಹೋಯಿತು. ಆಗ ದಿನೇಶ್ ಗೆ ನಾನೇ ಮನವಿ ಮಾಡಿ ನಿನ್ನ ಪಕ್ಕ ಆ ಮಗುನ್ನು ಮಲಗಿಸಿದೆ. ಹಾಗೇನಾದ್ರೂ ನಾನು ಮಾಡದೇ ಹೋಗಿದ್ದರೆ, ನಿನ್ನ ಪ್ರಾಣಕ್ಕೆ ಅಪಾಯವಿತ್ತು. ಅದಕ್ಕೆ ತನ್ನ ಕರುಳ ಬಳ್ಳಿಯನ್ನೇ ಕೊಟ್ಟು ಹೋದ ಆಶಾ ಮಮತಾಮಯಿ ಕಣಮ್ಮ. ಅವರನ್ನು ಬೇಗ ಹುಡುಕಿ,” ಎಂದು ಹೇಳಿದರು ಡಾಕ್ಟರ್ ಮಧುಸೂದನ್.
ಕೂಡಲೇ ಅಭಿಷೇಕ್ ತನ್ನ ಸ್ನೇಹಿತರ ಸಹಾಯದಿಂದ ಎಲ್ಲಾ ಕಡೆ ಅವರನ್ನು ಹುಡುಕಿಸಿದ. ಕಡೆಗೆ ಪಾಳು ಬಿದ್ದ ದೇವಸ್ಥಾನಕ್ಕೆ ಹೋದಾಗ, ಅಲ್ಲಿ ಆಶಾ-ದಿನೇಶ್ ನೋವಿನಿಂದ ಅಳುತ್ತಿದ್ದರು. ಅಭಿಷೇಕ್ ಅಣ್ಣ-ಅತ್ತಿಗೆಯ ಬಳಿ ಕ್ಷಮೆ ಕೇಳಿ ತಕ್ಷಣವೇ ಮನೆಗೆ ಕರೆದುಕೊಂಡು ಬಂದರು. ಮಗುವನ್ನು ಆಶಾಳಿಗೆ ಕೊಟ್ಟ ಮೇಲೆ, ಮಗು ಅಳು ನಿಲ್ಲಿಸಿತು. ಈಗ ಮಗುವಿಗೆ ಇಬ್ಬರೂ ತಾಯಂದಿರು. ಯಶೋದೆ ದೇವಕಿಯರಂತೆ ಅವರಿಬ್ಬರೂ ಮಗು ಕೃಷ್ಣನನ್ನು ಸುಖದಿಂದ ಸಾಕಿದರು.





