ಹಿರಿಯಣ್ಣ ತಮ್ಮ ಮಲ ಸಹೋದರ ಎಂದು ತಿಳಿದ ನಂತರ ವಾಸು ಮತ್ತು ಪ್ರಿಯಾರ ನಡವಳಿಕೆಯಲ್ಲಿ ವಿಚಿತ್ರ ಬದಲಾವಣೆಗಳಾದವು. ಮುಂದೆ ಇವರ ಬಾಂಧವ್ಯ ಮಧುರವಾಗಿ ಮಾರ್ಪಟ್ಟಿತೇ….?
“ಅಮ್ಮಾ…. ನಾನು ಸತೀಶ್….”
“ಹ್ಞೂಂ….. ಗೊತ್ತಾಯ್ತು ಹೇಳು….”
“ಎಲ್ಲಾ ಚೆನ್ನಾಗಿದ್ದೀರಾ……? ಪ್ರಿಯಾಳ ಮದುವೆ ಫಿಕ್ಸ್ ಆಯ್ತಂತೆ…. ಹುಡುಗ ಯಾವ ಊರು? ನಿಶ್ಚಿತಾರ್ಥ ಯಾವಾಗ? ನೀನು ಏನ್ಮಾಡ್ತಿದ್ದೀಯಾ….?”
ಹೀಗೆ ಒಂದರ ಹಿಂದೆ ಮತ್ತೊಂದು ಪ್ರಶ್ನೆ ಕೇಳುತ್ತಿದ್ದ. ಅಮ್ಮನ ಫೋನಿನ ಸ್ಪೀಕರ್ ಆನ್ ಆಗಿದ್ದರಿಂದ ಅಲ್ಲಿಯೇ ತಿಂಡಿ ತಿನ್ನುತ್ತಿದ್ದ ವಾಸು, ಕುಳಿತಲ್ಲಿಂದಲೇ ಏರು ಸ್ವರದಲ್ಲಿ, “ಮತ್ತೆ ಏನಂತಮ್ಮಾ ಅವನ ಗೋಳು…. ಬೆಣ್ಣೆ ಹಂಗೆ ಮಾತಾಡಿ ನಿನ್ನ ಹತ್ರ ದುಡ್ಡು ಕಿತ್ಕೊಂಡಿದ್ದು ಸಾಕಾಗ್ಲಿಲ್ವಂತಾ…..? ಇನ್ನೂ ಏನಂತೆ? ನಮ್ಮನ್ನ ನೆಮ್ಮದಿಯಿಂದ ಬದುಕೋಕೆ ಬಿಡು ಅಂತ ಹೇಳು,” ಎಂದು ತನ್ನ ಅಮ್ಮನಿಗೆ ಹೇಳಿದ.
ಅವನು ಆಡಿದ ಮಾತುಗಳ ಆ ಬದಿಯಲ್ಲಿದ್ದ ಸತೀಶನಿಗೆ ಸ್ಪಷ್ಟವಾಗಿ ಕೇಳುತ್ತಿತ್ತು.
ಈ ಸತೀಶ್, ಭಾಗ್ಯಮ್ಮನ ದಿವಂಗತ ಪತಿಯ ಮೊದಲನೆ ಹೆಂಡತಿಯ ಮಗ. ಸತೀಶನಿಗೆ ಇನ್ನೂ ಮೂರು ವರ್ಷ ಕೂಡ ತುಂಬಿರಲಿಲ್ಲ. ಅವನ ತಾಯಿ ಯಾವುದೋ ಕಾಯಿಲೆಗೆ ತುತ್ತಾಗಿ ಇಹಲೋಕ ತ್ಯಜಿಸಿ, ಪುಟ್ಟ ಸತೀಶನನ್ನು ಪತಿ ಶೇಷಗಿರಿಯ ಮಡಿಲಿಗೆ ಹಾಕಿ ಹೋಗಿದ್ದಳು. ಶೇಷಗಿರಿಗೆ ಅದೇ ತಾನೇ ಕಛೇರಿಯಲ್ಲಿ ಮುಂಬಡ್ತಿ ದೊರೆತಿದ್ದರಿಂದ ಹೆಚ್ಚುವರಿ ಜವಾಬ್ದಾರಿ ಜೊತೆಗೆ ವಿಪರೀತ ಕೆಲಸ ಮಾಡಬೇಕಿತ್ತು. ಇಂತಹ ಸಂದರ್ಭದಲ್ಲಿ ಪುಟ್ಟ ಸತೀಶನನ್ನು ಸರಿಯಾಗಿ ನೋಡಿಕೊಳ್ಳಲು ಆಗದಿರುವುದನ್ನು ಗಮನಿಸಿದ ಅವನ ಹತ್ತಿರದ ಬಂಧು ಬಾಂಧರೆಲ್ಲ ಸೇರಿ ಶೇಷಗಿರಿಯನ್ನು ಒಪ್ಪಿಸಿ ತಮ್ಮ ಪರಿಚಯಸ್ಥ ಕುಟುಂಬದ ಕನ್ಯೆ ಭಾಗ್ಯಮ್ಮನೊಂದಿಗೆ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡಿಸಿದ್ದರು.
ಭಾಗ್ಯಮ್ಮ ಶೇಷಗಿರಿ ಮನೆಗೆ ಕಾಲಿಟ್ಟಾಗ ಸತೀಶ್ ತೊದಲು ನುಡಿಯು ಮೂರು ವರ್ಷದ ಕೂಸಾಗಿದ್ದ. ಮೊದ ಮೊದಲು ಸತೀಶ್ ಭಾಗ್ಯಮ್ಮನನ್ನು ಹೊಂದಿಕೊಳ್ಳಲು ಕೊಂಚ ಹಿಂಜರಿದನಾದರೂ ಭಾಗ್ಯಮ್ಮ ಅವನಿಗೆ ತೋರುತ್ತಿದ್ದ ಅದಮ್ಯ ಪ್ರೀತಿ, ವಿಶ್ವಾಸ, ವಾತ್ಸಲ್ಯದ ಪರಿಣಾಮದಿಂದ ಕೆಲವೇ ದಿನಗಳಲ್ಲಿ ದಿನದ ಮೂರು ಹೊತ್ತು ಆಕೆ. ಹಿಂದೆ “ಅಮ್ಮಾ….. ಅಮ್ಮಾ….” ಎಂದು ಸುತ್ತಲಾರಂಭಿಸಿದ.
ಭಾಗ್ಯಮ್ಮ ಕೂಡ ಮನೆಯಲ್ಲಿ ಎಂತಹದೇ ಸಂದರ್ಭ ಬಂದರೂ ಆ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಸತೀಶ್ ಪ್ರಾಥಮಿಕ ಶಾಲೆಯ ಮೂರನೇ ತರಗತಿಯಲ್ಲಿದ್ದಾಗ ಭಾಗ್ಯಮ್ಮನಿಗೆ ಒಂದು ಗಂಡು ಮಗು, ಅದಾದ ಎರಡು ವರ್ಷಗಳ ನಂತರ ಒಂದು ಹೆಣ್ಣು ಮಗು ಜನಿಸಿತ್ತು. ಗಂಡು ಮಗುವಿಗೆ ವಾಸುದೇವ್, ಹೆಣ್ಣು ಮಗುವಿಗೆ ಪ್ರಿಯಾ ಎಂದು ಹೆಸರಿಟ್ಟರು.
ಇಷ್ಟು ದಿನ ತಾನೊಬ್ಬನೇ ಎಂದು ಬೇಸರದಿಂದ ಇದ್ದ ಸತೀಶನಿಗೆ ತನ್ನ ಜೊತೆಗೆ ಆಡಲು ಒಬ್ಬ ತಮ್ಮ ಹಾಗೂ ತಂಗಿ ಸಿಕ್ಕರೆಂದು ತುಂಬಾ ಸಂತೋಷಪಟ್ಟಿದ್ದ. ಬಾಲದಿಂದಲೂ ಭೋಳೇ ಸ್ವಭಾವದ ಸತೀಶ್, ತಮ್ಮ ತಂಗಿಯರೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ, ಆಟವಾಡುತ್ತಾ ಅವರೊಂದಿಗೆ ಸಂತೋಷವಾಗಿದ್ದ.
ಸತೀಶ್ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ವಾಸು ಮತ್ತು ಪ್ರಿಯಾ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದರು. ಶಾಲೆಯಿಂದ ಮನೆಗೆ ಬಂದ ನಂತರ ಆಟ, ಊಟ, ಓದು ಎಲ್ಲವನ್ನೂ ಒಟ್ಟಿಗೆ ಮಾಡುತ್ತಿದ್ದರು.
ಹೀಗಿರುವಾಗ ಒಂದು ದಿನ ಶೇಷಗಿರಿ, ಕಛೇರಿ ಕೆಲಸದ ನಿಮಿತ್ತ ಪರ ಊರಿಗೆ ಹೋಗಿ ವಾಪಸ್ ಬರಲು ರೈಲು ಏರುವಾಗ ಅಕಸ್ಮಾತ್ತಾಗಿ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು. ಸುದ್ದಿ ತಿಳಿದ ಭಾಗ್ಯಮ್ಮನಿಗೆ ಜಂಘಾಬಲವೇ ಉಡುಗಿ ಹೋಗಿತ್ತು. ಹಾಗೂ ಹೀಗೂ ಸಾವರಿಸಿಕೊಂಡು ತಮ್ಮ ಬಂಧುಗಳ ಸಹಾಯದಿಂದ ಆ ಊರಿಗೆ ಹೋಗಿ ಪತಿಯ ಮೃತದೇಹವನ್ನು ತಮ್ಮ ಊರಿಗೆ ತಂದು ಎಲ್ಲರ ಸಹಕಾರದಿಂದ ಕಾರ್ಯ ಪೂರೈಸಿದ್ದರು. ಅನಿರೀಕ್ಷಿತ ಘಟನೆಯಿಂದ ಸೋತುಹೋದ ಭಾಗ್ಯಮ್ಮ ಎರಡು ಮೂರು ತಿಂಗಳು ಬೇಸರದಲ್ಲಿದ್ದರು ನಿಧಾನವಾಗಿ ಮತ್ತೆ ಸಂಸಾರದ ನೊಗ ಹೊತ್ತುಕೊಂಡಿದ್ದರು.
ಯಾವಾಗ ಸತೀಶ್ ಕಾಲೇಜು ಸೇರಿದನೋ ಆಗ ಹೈಸ್ಕೂಲಿನಲ್ಲಿ ಓದುತ್ತಿದ್ದ ವಾಸು ಮತ್ತು ಪ್ರಿಯಾರಿಗೆ ಅವನು ತಮ್ಮ ಒಡಹುಟ್ಟಿದ ಅಣ್ಣನಲ್ಲ, ಬಲ ಅಣ್ಣ ಎಂದು ಗೊತ್ತಾಯಿತು. ನಂತರ ಇಬ್ಬರ ವರ್ತನೆಯಲ್ಲಿ ವಿಚಿತ್ರ ಬದಲಾವಣೆ ಆಗತೊಡಗಿತು. ದೊಡ್ಡವನಾದ ಸತೀಶ್ ಗೆ ಈ ವಿಚಾರ ಸೂಕ್ಷ್ಮವಾಗಿ ಅರ್ಥವಾದರೂ ಕೂಡ ಅವನು ತನ್ನ ತಾಯಿಗೆ ಒಂದು ಮಾತೂ ಹೇಳದೇ ಎಲ್ಲವನ್ನೂ ಮೌನದಿಂದ ಸಹಿಸಿಕೊಂಡಿದ್ದ.
ಅದೊಂದು ರಜಾ ದಿನ, ವಾಸು ಮತ್ತು ಪ್ರಿಯಾ ಇಬ್ಬರೂ ಯಾವುದೋ ಸಣ್ಣ ವಿಚಾರಕ್ಕೆ ಅನಾವಶ್ಯಕವಾಗಿ ಸತೀಶ್ ನೊಂದಿಗೆ ಜಗಳಕ್ಕೆ ಇಳಿದಿದ್ದರು. ಆಗ ವಾಸುವಿನ ಬಾಯಿಯಿಂದ ಕೆಲವು ಅವಶ್ಯವಿಲ್ಲದ ಪದಗಳು ಹೊರಬಿದ್ದವು. ಇದನ್ನು ಗಮನಿಸಿದ ಭಾಗ್ಯಮ್ಮನ ಸಹನೆಯ ಕಟ್ಟೆ ಒಡೆದು ಎಲ್ಲಿಲ್ಲದ ಕೋಪ ಉಕ್ಕಿ ಬಂದಿತ್ತು. ಪರಿಸ್ಥಿತಿ ಕೈ ಮೀರಿದಾಗ ಆಕೆ ಟೇಬಲ್ ಮೇಲಿದ್ದ ಮರದ ಸ್ಕೇಲ್ ತೆಗೆದುಕೊಂಡು ಅದು ಮುರಿದು ಹೋಗುವ ತನಕ ವಾಸುವಿಗೆ ಒಂದೇ ಸಮನೆ ಬಾರಿಸಿದರು.
“ಇಂದೇ ಕೊನೆ, ಇನ್ನೊಂದು ಸಾರಿ ನಿನ್ನ ಬಾಯಿಂದ ಇಂತಹ ಮಾತು ಬಂದರೆ ನಾನೇನು ಮಾಡುವೆನೋ ನನಗೇ ಗೊತ್ತಿಲ್ಲ !” ಎಂದು ಎಚ್ಚರಿಕೆ ನೀಡಿದ್ದರು.
ಆಗ ವಾಸು ತುಟಿ ಪಿಟಕ್ ಎನ್ನದೇ ಬಾಲ ಮುದುರಿಕೊಂಡು ಕುಳಿತಿದ್ದ. ಈ ದೃಶ್ಯ ಕಂಡು ಪ್ರಿಯಾ, ಇನ್ನೆಲ್ಲಿ ತನಗೂ ಅದೇ ಶಿಕ್ಷೆ ಆದೀತೋ ಎಂದು ಅರಿತ ಅವಳು ಮೆಲ್ಲನೆ ತನ್ನ ರೂಮಿಗೆ ಹೋಗಿ ಕಣ್ಣೀರತೊಡಗಿದಳು. ಈ ಘಟನೆಯ ನಂತರ ವಾಸು ಮತ್ತು ಪ್ರಿಯಾ ಇಬ್ಬರೂ ಸತೀಶನೊಂದಿಗೆ ಚೆನ್ನಾಗಿರುವಂತೆ ನಟಿಸುತ್ತಿದ್ದರು. ಆದರೆ ಒಳಗೊಳಗೇ ಸತೀಶ್ ನ ಬಗ್ಗೆ ತಿರಸ್ಕಾರದ ಭಾವ ಭೂತಾಕಾರವಾಗಿ ಬೆಳೆಯತೊಡಗಿತು. ಆದರೆ ಅಮ್ಮನ ಹೆದರಿಕೆಯಿಂದಾಗಿ ಈರ್ವರೂ ಬಾಯಿಗೆ ಬೀಗ ಹಾಕಿಕೊಂಡಿದ್ದರು.
ನಿಲ್ಲದ ಕಾಲ ಉರುಳತೊಡಗಿತು. ಸತೀಶ್ ತನ್ನ ಕಾಲೇಜು ಶಿಕ್ಷಣ ಪೂರೈಸಿ ಒಂದು ವರ್ಷದ ಅವಧಿಯಲ್ಲೇ ಒಳ್ಳೆಯ ಕೆಲಸಕ್ಕೆ ಸೇರಿ, ತನ್ನ ತಾಯಿ ಹಾಗೂ ತಮ್ಮ ತಂಗಿಯರನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳುತ್ತಿದ್ದ. ಆ ವೇಳೆಗೆ ವಾಸು ಸಹ ಪದವಿ ಪೂರೈಸಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದ. ಪ್ರಿಯಾ ಪದವಿ ಎರಡನೇ ವರ್ಷದಲ್ಲಿ ಓದುತ್ತಿದ್ದಳು.
ತನ್ನ ತಮ್ಮ ಕೆಲಸಕ್ಕಾಗಿ ಅಲ್ಲಿ ಇಲ್ಲಿ ತಿರುಗಾಡಿ ಕಷ್ಟಪಡುತ್ತಿರುವುದನ್ನು ಕಂಡ ಸತೀಶ್, ತನ್ನ ಪರಿಚಯದವರ ಮೂಲಕ ಅವನಿಗೊಂದು ಒಳ್ಳೆ ಕೆಲಸ ಕೊಡಿಸುವಲ್ಲಿ ಯಶಸ್ವಿಯಾಗಿದ್ದ. ಇಷ್ಟಾದರೂ ವಾಸು, ಸತೀಶ್ ನನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಅಸಮರ್ಥನಾಗಿದ್ದ. ಮತ್ತೆ ಎರಡು ವರ್ಷಗಳು ಉರುಳಿದವು.
ಭಾಗ್ಯಮ್ಮ ತಮ್ಮ ಸಂಬಂಧಿಕರ ಪೈಕಿ ಸುಸಂಸ್ಕೃತವಾಗಿ ನೋಡಲು ಸುಂದರವಾಗಿದ್ದ ಅಶ್ವಿನಿಯನ್ನು ಸತೀಶನಿಗೆ ಮದುವೆ ಮಾಡಿಸಿದರು. ಸತೀಶನ ಮದುವೆಯಾಗಿ ಇನ್ನೂ ಆರು ತಿಂಗಳು ಕಳೆದಿರಲಿಲ್ಲ, ಅವನಿಗೆ ಪ್ರಮೋಷನ್ ಕೊಟ್ಟು ಬೇರೆ ಊರಿಗೆ ವರ್ಗ ಮಾಡಿದ್ದರು. ಹೀಗಾಗಿ ಅವನು ಪತ್ನಿಯೊಂದಿಗೆ ಆ ಊರಿಗೆ ಹೊರಟ ಸಂದರ್ಭದಲ್ಲಿ ವಾಸು ಮತ್ತು ಪ್ರಿಯಾರಿಗೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿದ್ದ.
ಮೇಲ್ನೋಟಕ್ಕೆ ವಾಸು ಮತ್ತು ಪ್ರಿಯಾ, `ಆಯ್ತು’ ಎಂದರೂ ಸಧ್ಯ ನಮ್ಮನ್ನು ಬಿಟ್ಟು ಹೋದನಲ್ಲ ಎಂದು ಮನಸ್ಸಿನಲ್ಲಿ ಸಂತೋಷಪಟ್ಟರು. ಆದರೆ ಭಾಗ್ಯಮ್ಮ ಮಾತ್ರ ತೇವಗಣ್ಣಿನಿಂದ ಮನಃಪೂರ್ವಕವಾಗಿ ಆಶೀರ್ದಿಸಿ ಬೀಳ್ಕೊಟ್ಟರು.
ಸತೀಶ್ ಆ ಊರಿಗೆ ಹೋಗಿ ಮೂರು ವರ್ಷಗಳ ನಂತರ ಒಂದು ಸುಸಜ್ಜಿತ ಮನೆ ಖರೀದಿಸಲು ಕೈ ಹಾಕಿದ್ದ. ತನ್ನಲ್ಲಿದ್ದ ಉಳಿತಾಯದ ಹಣ, ಸ್ನೇಹಿತರ ಬಳಿ ಕೈಸಾಲ ಮಾಡಿದರೂ ಇನ್ನೂ ಐದು ಲಕ್ಷ ರೂಪಾಯಿ ಕೊರತೆ ಇತ್ತು. ಅದಕ್ಕಾಗಿ ಅವನು ಭಾಗ್ಯಮ್ಮ ಬಳಿ ಬಂದು, “ಅಮ್ಮಾ ನನಗೆ ಇಷ್ಟರಲ್ಲಿ ಒಂದು ಅರಿಯರ್ಸ್ ಬರಬೇಕಿದೆ. ಅದು ಬಂದ ತಕ್ಷಣ ವಾಪಸ್ ಕೊಡುತ್ತೇನೆ,” ಎಂದು ತಾಯಿಯ ಸಹಾಯ ಕೇಳಿದ.
ಭಾಗ್ಯಮ್ಮ ನಿಷ್ಕಲ್ಮಶ ಮನಸ್ಸಿನಿಂದ ಎರಡೇ ದಿನದಲ್ಲಿ ಅವನು ಕೇಳಿದಷ್ಟು ಹಣ ಕಳುಹಿಸಿದ್ದರು. ಈ ವಿಷಯ ವಾಸುವಿಗೆ ಗೊತ್ತಾದ ತಕ್ಷಣ, ಅವನು ಅಮ್ಮನ ಬಳಿ ಬಂದು, “ಅಮ್ಮಾ…… ನಾವೇನು ನಿನ್ನ ಮಕ್ಕಳಲ್ವಾ….? ಅವನು ಕೇಳಿ ಕೇಳಿದಾಗ ಹೀಗೆ ಕೊಡ್ತಾ ಇರು. ಒಂದು ದಿನ ನಮ್ಮನ್ನೆಲ್ಲಾ ಬೀದಿಗೆ ನಿಲ್ಲಿಸ್ತಾನೆ ನೋಡ್ತಾ ಇರು…..,” ಎಂದು ಕೂಗಾಡಿ ದೊಡ್ಡ ರಂಪ ಮಾಡಿದ.
“ಯಾಕೆ ನಿನಗೆ ಅವನನ್ನು ಕಂಡರೆ ಅಷ್ಟು ಕೋಪಾ, ದ್ವೇಷಾ….? ಅವನೂ ನಮ್ಮ ಮನೆ ಮಗ ಅಲ್ವಾ…..? ನೀನು ಡಿಗ್ರಿ ಪಡೆದು ಕೆಲಸಕ್ಕೆ ಅಲೀತಿರಬೇಕಾದ್ರೆ ಅವನು ತಾನೇ ಕಷ್ಟಪಟ್ಟು ನಿನಗೆ ಅನ್ನಕ್ಕೊಂದು ದಾರಿ ಮಾಡಿಕೊಟ್ಟ. ಅದನ್ನು ಇಷ್ಟು ಬೇಗ ಮರೆತುಬಿಟ್ಯಾ…? ಮಾತಾಡುವಾಗ ವಿವೇಚನೆಯಿಂದ ಮಾತಾಡು. ನೀನೇನು ಈಗ ಚಿಕ್ಕಹುಡುಗನಲ್ಲಾ….” ಎಂದು ಅವರು ರೇಗಾಡಿ ನಂತರ ಸಾಕಷ್ಟು ಬುದ್ಧಿ ಹೇಳಿದರು. ವಾಸು ಮನದಲ್ಲಿ, `ನಾನು ಇನ್ನು ಹೀಗೆ ಮುಂದುವರಿದರೆ ವಿಷಯ ಎಲ್ಲಿಂದ ಎಲ್ಲಿಗೋ ಹೋಗಿ ಅಮ್ಮನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು,’ ಎಂದುಕೊಂಡು ಸುಮ್ಮನಾಗಿದ್ದ.

ಆದರೆ ಅಮ್ಮನ ಪ್ರತಿಯೊಂದು ಮಾತನ್ನು ಮನನ ಮಾಡಿಕೊಂಡ ನಂತರ ಅವನ ಮನದ ಮೂಲೆಯಲ್ಲಿ, `ಸತೀಶನ ವಿಚಾರದಲ್ಲಿ ತಾನು ಈ ತನಕ ತಪ್ಪು ತಿಳಿದಿದ್ದೇನೆ,’ ಎಂಬ ಅಳುಕು ಕಾಡಲಾರಂಭಿಸಿತು. ಆದರೆ ಅದನ್ನು ಬಹಿರಂಗವಾಗಿ ತೋರ್ಪಡಿಸಿಕೊಳ್ಳಲಿಲ್ಲ. ಅದಾದ ಒಂದೆರಡು ತಿಂಗಳು ಕಳೆದ ನಂತರ ಪ್ರಿಯಾಳನ್ನು ಒಪ್ಪಿ, ಸೊಸೆಯನ್ನಾಗಿ ಮಾಡಿಕೊಳ್ಳಲು ಭಾಗ್ಯಮ್ಮನ ಕಡೆಯ ಸಂಬಂಧಿಕರು ಇಚ್ಛಿಸಿದರು. ಒಂದು ವಾರದ ನಂತರ ನಿಶ್ಚಿತಾರ್ಥ ಇಟ್ಟುಕೊಳ್ಳೋಣ ಎಂದರು.
ಮಗಳ ಮದುವೆ ನಿಶ್ಚಯವಾದ ದಿನವೇ ಸತೀಶನಿಗೆ ಫೋನ್ ಮಾಡಿದ, ಭಾಗ್ಯಮ್ಮ ಎಲ್ಲ ವಿಷಯವನ್ನೂ ವಿವರವಾಗಿ ತಿಳಿಸಿ ಮಗ ಸೊಸೆ ನಾಲ್ಕು ದಿನ ಮುಂಚೆ ಮನೆಗೆ ಬರುವಂತೆ ಆಹ್ವಾನಿಸಿದರು.
ಸತೀಶ್ ಎಲ್ಲ ವಿಷಯ ಕೇಳಿ ತಿಳಿದುಕೊಂಡು ಖುಷಿ ಪಟ್ಟು, ತಾನು ಪತ್ನಿಯೊಂದಿಗೆ ಖಂಡಿತಾ ಬರುವುದಾಗಿ ತಾಯಿಗೆ ತಿಳಿಸಿದ. ಹೇಳಿದಂತೆ ಪ್ರಿಯಾಳ ನಿಶ್ಚಿತಾರ್ಥಕ್ಕೆ ನಾಲ್ಕು ದಿನ ಇದೆ ಎನ್ನುವಾಗಲೇ ಪತ್ನಿಗೆ ಜೊತೆಗೆ ಬಂದಿಳಿದ.
ಅಂದು ರಾತ್ರಿ ಊಟ ಮುಗಿಸಿದ ನಂತರ, ಮನೆ ಮಂದಿಯೆಲ್ಲಾ ಒಟ್ಟಾಗಿ ಕುಳಿತಿದ್ದಾಗ, ಸತೀಶ್ ಎದ್ದು ರೂಮಿಗೆ ಹೋಗಿ ಕೈಯಲ್ಲಿ ಒಂದು ಕವರ್ ಹಿಡಿದು ಹೊರಗೆ ಬಂದ.
“ಇದೇನೋ…..?” ಎಂದು ತಾಯಿ ಪ್ರಶ್ನಿಸಿದರು.
ಸತೀಶ್ ಲಕೋಟೆಯನ್ನು ತಾಯಿಯ ಕೈಗಿಡುತ್ತಾ, “ಓಪನ್ ಮಾಡಿ ನೋಡಮ್ಮಾ…….” ಎಂದ.
ಭಾಗ್ಯಮ್ಮ ಅದನ್ನು ಓಪನ್ ಮಾಡಿ ನೋಡಿದಾಗ, ಅದರಲ್ಲಿ ಐದು ಲಕ್ಷ ರೂಪಾಯಿಯ ಒಂದು ಡಿ.ಡಿ. ಜೊತೆಗೆ 10 ಲಕ್ಷ ರೂಪಾಯಿಯ ಮತ್ತೊಂದು ಡಿ.ಡಿ. ತಮ್ಮ ಹೆಸರಿನಲ್ಲಿ ಇರುವುದನ್ನು ನೋಡಿ, “ಇದೇನು ಸತೀಶ್….” ಎಂದು ಕೇಳಿದರು.
“ಅಮ್ಮಾ…. ನಾನು ನಿನಗೆ ಅಂದು ಹೇಳಿದ್ದು ನೆನಪಿದೆಯಾ…. ನನಗೆ ಒಂದು ಹಳೇ ಅರಿಯರ್ಸ್ ಬರಬೇಕು. ಅದು ಬಂದ ತಕ್ಷಣ ನಿನ್ನ ಬಳಿ ಪಡೆದ ಐದು ಲಕ್ಷ ರೂ. ವಾಪಸ್ ಕೊಡ್ತೀನಿ ಅಂದಿದ್ನಲ್ಲಾ…. ಅದು ಕಳೆದ ವಾರ ಸಿಕ್ತು…..” ಎನ್ನುತ್ತಿದ್ದವನನ್ನು ಅರ್ಧದಲ್ಲೇ ತಡೆದ ಭಾಗ್ಯಮ್ಮ, “ಅದ್ಸರಿ…. ಇದೇನು ಹತ್ತು ಲಕ್ಷದ ಡಿ.ಡಿ…” ಎಂದು ಕೇಳಿದರು.
“ಇದು ನನ್ನ ಮುದ್ದು ತಂಗಿಯ ಮದುವೆಗಾಗಿ ನನ್ನ ಪುಟ್ಟ ಕಾಣಿಕೆ,” ಎಂದ.
ಅವನ ಮಾತು ಕೇಳಿದ ವಾಸು ಮತ್ತು ಪ್ರಿಯಾ `ಛೇ…. ಇಷ್ಟು ಒಳ್ಳೆಯ ಮನಸ್ಸುಳ್ಳ ಅಣ್ಣನನ್ನು ನಾವು ಅರ್ಥ ಮಾಡಿಕೊಳ್ಳುವಲ್ಲಿ ಅಮಸರ್ಥರಾದೆವಲ್ಲ….’ ಎಂದು ಸ್ವಯಂ ಹಳವಿಸಿಕೊಳ್ಳತೊಡಗಿದರು. ಮರು ಘಳಿಗೆಯಲ್ಲಿ ಇಬ್ಬರೂ ಎದ್ದು ಬಂದು ಸತೀಶನ ಬಳಿ ನಿಂತು, “ಅಣ್ಣಾ….. ನಾವಿಬ್ಬರೂ ನಿನ್ನ ದೊಡ್ಡ ಮನಸ್ಸು ಅರಿತುಕೊಳ್ಳಲು ಅಸಮರ್ಥರಾಗಿದ್ದೆ. ನಮಗೆ ನೀನು ಏನೂಂತ ಅರಿವಾಗಿದೆ. ದಯವಿಟ್ಟು ನಿನ್ನ ಮನಸ್ಸು ನೋಯಿಸಿದ್ದೀವಿ ಕ್ಷಮಿಸು,” ಎಂದು ಕೇಳಿಕೊಂಡರು.
ಸತೀಶ್ ಎದ್ದು, “ನಾನು ನಿಮ್ಮ ದೊಡ್ಡ ಅಣ್ಣ ಕಣೋ…. ಮನೆಯವರೊಂದಿಗೆ ಹೀಗೆಲ್ಲ ಮಾತನಾಡಬಾರದು,” ಎಂದು ಇಬ್ಬರನ್ನೂ ಪ್ರೀತಿಯಿಂದ ಆಲಂಗಿಸಿಕೊಂಡ.
ಭಾಗ್ಯಮ್ಮನ ಕಣ್ಣಲ್ಲಿ ಆನಂದಬಾಷ್ಪ ಬಿಟ್ಟೂ ಬಿಡದೆ ಸುರಿಯಲಾರಂಭಿಸಿತು.





