ಸರ್ಕಾರಿ ಕಚೇರಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೊ ವೈರಲ್ ಆದ ಕಠಿಣ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರನ್ನು ತಕ್ಷಣವೇ ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಸೋಮವಾರ ಮಧ್ಯಾಹ್ನದ ಹೊತ್ತಿಗೆ 10 ದಿನಗಳ ಕಡ್ಡಾಯ ರಜೆ ಮೇಲೆ ತೆರಳಿದ್ದ ರಾಮಚಂದ್ರ ರಾವ್ ಅವರನ್ನು ರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ವಿಚಾರಣೆ ಇನ್ನೂ ಬಾಕಿಯಿರುವ ಕಾರಣ ಅಮಾನತುಗೊಳಿಸಿರುವುದಾಗಿ ಸರ್ಕಾರದ ಆದೇಶದಲ್ಲಿ ತಿಳಿಸಿದೆ.
ಅಮಾನತು ಅವಧಿಯಲ್ಲಿ ರಾಮಚಂದ್ರ ರಾವ್, 1969 ರ ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ನಿಯಮ -4 ರ ಪ್ರಕಾರ ಜೀವನಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ. ಆದೇಶವು ಅವರ ಚಲನವಲನದ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ. ಅಮಾನತು ಅವಧಿಯಲ್ಲಿ, ಅಧಿಕಾರಿಯು ರಾಜ್ಯ ಸರ್ಕಾರದ ಲಿಖಿತ ಅನುಮತಿಯಿಲ್ಲದೆ ಯಾವುದೇ ಸಂದರ್ಭಗಳಲ್ಲಿ ಪ್ರಧಾನ ಕಚೇರಿಯನ್ನು ತೊರೆಯುವಂತಿಲ್ಲ.
ಹಿನ್ನೆಲೆಯೇನು? : ಕಚೇರಿಯಲ್ಲಿ ಕುಳಿತು ಪೊಲೀಸ್ ಸಮವಸ್ತ್ರದಲ್ಲೇ ರಾಮಚಂದ್ರರಾವ್ ಮಹಿಳೆಯನ್ನು ಅಪ್ಪಿಕೊಂಡು ಮುದ್ದಾಡುತ್ತಿರುವ ಹಸಿಬಿಸಿ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಚೇರ್ ಮೇಲೆ ಕುಳಿತು ಮಹಿಳೆಯನ್ನು ಅಪ್ಪಿಕೊಂಡು IPS ಅಧಿಕಾರಿ ರಾಮಚಂದ್ರ ರಾವ್ ಸರಸ ನಡೆಸಿರುವುದು ವಿಡಿಯೊದಲ್ಲಿ ಕಂಡುಬರುತ್ತದೆ. ಇದು ಅವರ ಪುತ್ರಿ ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುವ ಮೊದಲು ನಡೆದಿರುವ ಘಟನೆ ಎಂದು ಹೇಳಲಾಗುತ್ತಿದೆ.
ರನ್ಯಾ ರಾವ್ ಪ್ರಕರಣ: ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದ ಪ್ರಕರಣ ಸಂಬಂಧ ನಟಿ ರನ್ಯಾ ರಾವ್ ಬಂಧನ ಬೆನ್ನಲ್ಲೇ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಹೆಸರೂ ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ನಟಿ ರನ್ಯಾ ರಾವ್‌ಗೆ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ನೀಡಿದ ಬಗ್ಗೆ ತನಿಖೆಗೆ ಕರ್ನಾಟಕ ಗೃಹ ಇಲಾಖೆ ಆದೇಶಿಸಿತ್ತು. ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಮಚಂದ್ರ ರಾವ್ ಕೂಡ ಶಾಮಿಲಾಗಿರಬಹುದು, ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಿಸುವಾಗ ಶಿಷ್ಟಾಚಾರ ದುರ್ಬಳಕೆ ಆಗಿರುವುದರಲ್ಲಿ ಅವರ ಕೈವಾಡ ಇರಬಹುದು ಎಂದು ತನಿಖೆಗೆ ಆದೇಶ ನೀಡಲಾಗಿತ್ತು.





