ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ನಡೆಯದ ರೋಮಾಂಚನವಿಲ್ಲ. ಈ ಸಲದ 2024 ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನಡೆದ ಅಂಥ ವಿಶೇಷ ವಿಸ್ಮಯಕಾರಿ ಘಟನೆಗಳೇನು ಎಂಬುದನ್ನು ಗಮನಿಸೋಣವೇ……?
ಕ್ರೀಡೆ ಎನ್ನುವುದು ಎಲ್ಲರನ್ನೂ ಒಟ್ಟುಗೂಡಿಸುತ್ತದೆ ಎಂಬುದರ ಪ್ರತೀಕವಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಪ್ರಪಂಚದ 200ಕ್ಕೂ ಹೆಚ್ಚಿನ ರಾಷ್ಟ್ರಗಳು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಪ್ರಾಬಲ್ಯವನ್ನು ಮೆರೆಯುತ್ತವೆ. ಇಂತಹ ಕ್ರೀಡಾಕೂಟಗಳಲ್ಲಿ ನೂರಾರು ದಾಖಲೆಗಳು ನಿರ್ಮಾಣವಾಗುವುದರ ಜೊತೆಗೆ ಅನೇಕ ಅಚ್ಚರಿಯ ಸಂಗತಿಗಳೂ ನಡೆಯುವ ಮೂಲಕ ಕ್ರೀಡಾಕೂಟವನ್ನು ವಿಶೇಷ ಮಾಡುತ್ತವೆ. ಅಂತಹಗಳಲ್ಲಿ ವಿಶೇಷ ಮತ್ತು ಅಷ್ಟೇ ಕುತೂಹಲಕಾರಿ ಎನಿಸುವಂತಹ ವಿಸ್ಮಯಕಾರಿ ಫಲಿತಾಂಶಗಳನ್ನು ಮೆಲುಕು ಹಾಕೋಣ ಬನ್ನಿ.
2024ರ ಒಲಿಂಪಿಕ್ಸ್ ಜುಲೈ 26 ಶುಕ್ರವಾರ ಆರಂಭವಾಗಿ ಆಗಸ್ಟ್ 11ರ ಭಾನುವಾರದವರೆಗೂ ಇದ್ದಕಾರಣ, ಎಲ್ಲಾ ಕ್ರೀಡಾಪಟುಗಳು ಸಾಕಷ್ಟು ಮುಂಚಿತವಾಗಿಯೇ ತಮ್ಮ ತಮ್ಮ ಕ್ರೀಡೆಗಳು ನಡೆಯುವ ಸ್ಥಳಕ್ಕೆ ಆಗಮಿಸಿದ್ದರು. ಭದ್ರತೆಯ ಕಾರಣದಿಂದಾಗಿ ಈ ಎಲ್ಲಾ ಕ್ರೀಡಾಳುಗಳು ಅನುಮತಿ ಇಲ್ಲದೇ, ಆ ಕ್ರೀಡಾಗ್ರಾಮದಿಂದ ಹೊರಗೆ/ಒಳಗೆ ಬರುವಂತಿಲ್ಲ.
ಐಫೆಲ್ ಟವರ್ ಪ್ರಕರಣ ಆದರೂ, ಒಲಿಂಪಿಕ್ಸ್ ಆರಂಭವಾದ ಮೊದಲನೇ ದಿನವೇ, ಜುಲೈ 26ರಂದು ಪ್ರಣಯ ನಗರಿ ಪ್ಯಾರಿಸ್ ನ ಐಫೆಲ್ ಟವರ್ ನೋಡುವ ಸಲುವಾಗಿ ಕ್ರೀಡಾಧಿಕಾರಿಗಳ ಅನುಮತಿಯಿಲ್ಲದೆ ಬ್ರೆಜಿಲ್ ನ ಈಜುಗಾರ್ತಿ ಆನಾ ಕೆರೊಲಿನಾ ವಿಯೆರಾ ಮತ್ತು ಆಕೆಯ ಗೆಳೆಯ ಮತ್ತೊಬ್ಬ ಬ್ರೆಜಿಲ್ ಈಜುಗಾರರಾಗಿರುವ ಗೇಬ್ರಿಯೆಲ್ ಸ್ಯಾಂಟೋಸ್ ಇಬ್ಬರೂ ಹೋಗಿದ್ದರು.
ಅಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದನ್ನು ಗಮನಿಸಿದ ಅಧಿಕಾರಿಗಳು ಆಕೆಯನ್ನು ವಿಚಾರಿಸಲು ಮುಂದಾದಾಗ, ಆಕೆ ತೋರಿದ ಉದ್ಧಟತನದಿಂದಾಗಿ ಉಟ್ಟ ಬಟ್ಟೆಯಲ್ಲೇ ಒಲಿಂಪಿಕ್ಸ್ ಗೇಮ್ಸ್ ವಿಲೇಜ್ ನಿಂದ ಹೊರಹಾಕಲಾಯಿತು.
ತಕ್ಷಣವೇ ಬ್ರೆಜಿಲ್ ಗೆ ಕಳುಹಿಸಿದರೆ, ಆಕೆಯ ಗೆಳೆಯನಿಗೆ ಎಚ್ಚರಿಕೆಯನ್ನು ನೀಡಿದ್ದು ಕ್ರೀಡಾಕೂಟಕ್ಕೆ ಒಂದು ರೀತಿಯ ಕಪ್ಪು ಚುಕ್ಕೆಯಂತಾಯಿತು.

ವಿನೇಶ್ ಪೋಗಟ್ ಳ ಸಾಹಸ
ಇನ್ನು ಭಾರತದ ಪರ 50 ಕೆ.ಜಿ. ಕುಸ್ತಿ ಪಂದ್ಯಾವಳಿಯಲ್ಲಿ ಪ್ರಪ್ರಥಮ ಬಾರಿಗೆ ಫೈನಲ್ಸ್ ತಲುಪಿ, ಇನ್ನೇನು ಚಿನ್ನ/ಬೆಳ್ಳಿ ಪದಕದೊಂದಿಗೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲು ತುದಿಗಾಲಲ್ಲಿ ನಿಂತಿದ್ದ ವಿನೇಶ್ ಪೋಗಟ್ ಫೈನಲ್ಸ್ ಪಂದ್ಯಾವಳಿಯ ದಿನ ದೇಹದ ತೂಕ ಹೆಚ್ಚಿಗೆ ಇದ್ದ ಕಾರಣ, ಹರಸಾಹಸ ಮಾಡಿ ಇಳಿಸಲು ಪ್ರಯತ್ನಪಟ್ಟರು. ಅದು ವಿಫಲವಾಗಿ ಕೇವಲ 100 ಗ್ರಾಂ ಹೆಚ್ಚಿನ ತೂಕದಿಂದಾಗಿ ಪಂದ್ಯಾಳಿಯಿಂದಲೇ ಅನರ್ಹಗೊಂಡು 140 ಕೋಟಿ ಭಾರತೀಯರ ದುಃಖಕ್ಕೆ ಕಾರಣಳಾದಳು. ಈ ಕುರಿತಂತೆ ಈಕೆ ಒಲಿಂಪಿಕ್ಸ್ ಕ್ರೀಡಾ ಮಂಡಳಿಗೆ ಮನವಿ ಸಲ್ಲಿಸಿದಳಾದರೂ, ಅದು ತಿರಸ್ಕೃತಗೊಂಡಿತು. ಹೀಗಾಗಿ ಭಾರತಕ್ಕೆ ಬಹುತೇಕ ಕೈಗೆ ಬಂದಿದ್ದ ಮತ್ತೊಂದು ಬೆಳ್ಳಿ ಪದಕ ಸಿಗದೇ ಹೋಯಿತು.

ಅಮನ್ ಸೆಹ್ರಾತ್ ನ ಸಾಧನೆ
ವಿನೇಶ್ ಪೋಗಟ್ ಪ್ರಸಂಗದಿಂದ ಎಚ್ಚೆತ್ತುಕೊಂಡ ಭಾರತದ ಕೇವಲ 21 ವರ್ಷದ ಕುಸ್ತಿ ಆಟಗಾರ ಅಮನ್ ಸೆಹ್ರಾತ್ ಕಂಚಿನ ಪದಕಕ್ಕಾಗಿ ನಡೆಯುವ ಸ್ಪರ್ಧೆಗೂ ಮುಂಚೆ ಅವರ ದೇಹದ ತೂಕ ಸುಮಾರು 4.6 ಕೆ.ಜಿ. ಹೆಚ್ಚಾಗಿದ್ದು, ಅನರ್ಹಗೊಳ್ಳುವ ಭೀತಿಯಿಂದಾಗಿ ಇಡೀ ರಾತ್ರಿ ಶ್ರಮವಹಿಸಿ ಕೇವಲ 10 ಗಂಟೆಗಳ ಕಾಲದಲ್ಲಿ ಮೊದಲ ಒಂದೂವರೆ ಗಂಟೆಗಳ ಕಾಲ ಮ್ಯಾಟ್ ಸೆಷನ್ ನೊಂದಿಗೆ ಪ್ರಾರಂಭಿಸಿ, ಅಲ್ಲಿ ಅಮನ್ ನಿಂತಿರುವ ಕುಸ್ತಿಯಲ್ಲಿ ತೊಡಗಿಸಿಕೊಂಡು ಚೆನ್ನಾಗಿ ಬೆವರುವ ಮೂಲಕ ಸ್ವಲ್ಪ ತೂಕವನ್ನು ಕಳೆದುಕೊಂಡರು.
ನಂತರ ಒಂದು ಗಂಟೆಯ ಬಿಸಿ ನೀರಿನ ಸ್ನಾನ ಮಾಡಿ, ಆದಾದ ನಂತರ ಟ್ರೆಡ್ ಮಿಲ್ ನಲ್ಲಿ ತಡೆರಹಿತವಾಗಿ ಒಂದು ಗಂಟೆ ಓಡಿದ ಕಾರಣ, ದೇಹದಿಂದ ತೀವ್ರವಾದ ಬೆವರುವಿಕೆಯಿಂದ ಸಾಕಷ್ಟು ತೂಕ ಕಡಿಮೆ ಮಾಡಿಕೊಂಡರು. ಸ್ವಲ್ಪ ವಿರಾಮದ ನಂತರ, ಅಮನ್ 5 ನಿಮಿಷಗಳ ಸೋನಾ ಸ್ನಾನದ ಐದು ಅವಧಿಗಳನ್ನು ಪೂರೈಸಿದರು. ಈ ರೀತಿಯ ಸತತ ಪ್ರಯತ್ನಗಳ ಹೊರತಾಗಿಯೂ, ಅಮನ್ ಇನ್ನೂ 900 ಗ್ರಾಂ ಮಿತಿಯನ್ನು ಮೀರಿದ್ದರು.
ನಂತರ ತರಬೇತುದಾರರು ಅವರನ್ನು ಲಘು ಜಾಗಿಂಗ್ ಮತ್ತು ಹೆಚ್ಚುವರಿ ಓಟಗಳಿಗೆ ಒಳಪಡಿಸಿ ಅಂತಿಮವಾಗಿ ಮುಂಜಾನೆ 4.30ರ ಹೊತ್ತಿಗೆ, 56.9 ಕೆ.ಜಿ.ಗೆ ತಲುಪಿ, 57 ಕೆ.ಜಿ. ಮಿತಿಯ ಅಡಿಯಲ್ಲಿ ಕೇವಲ 100 ಗ್ರಾಂ ಕಡಿಮೆ ಇದ್ದು, ಅಂತಿಮವಾಗಿ ಪೋರ್ಟೊರಿಕೋದ ಡೇರಿಯನ್ ಕ್ರೂಜ್ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕ ಪಡೆದು, ಪದಕ ಪಡೆದ ಭಾರತದ ಅತ್ಯಂತ ಕಿರಿಯ ಒಲಿಂಪಿಕ್ ಕ್ರೀಡಾಪಟು ಎಂಬ ಹೆಗ್ಗಳಿಗೆ ಪಾತ್ರರಾದರು.

ಸೋಲು ಗೆಲುವಿನ ಜಂಜಾಟ
ಹೆಚ್ಚಿನ ತೂಕದಿಂದಾಗಿ ವಿನೇಶ್ ಪದಕವನ್ನು ಕಳೆದುಕೊಂಡರೆ, ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದ ಅಮೆರಿಕಾದ ಜೋರ್ಡನ್ ಚಿಲ್ಲೀಸ್ ರ ಪದಕವನ್ನು ತಾಂತ್ರಿಕ ಕಾರಣಗಳಿಂದಾಗಿ ಹಿಂಪಡೆದು ಅದನ್ನು ರೊಮೇನಿಯಾ ದೇಶದ ಸ್ಪರ್ಧಿಗೆ ನೀಡಿರುವ ಅಚ್ಚರಿಯ ಸಂಗತಿಯೊಂದು ನಡೆದಿದೆ.
ಕಂಚಿನ ಪದಕಕ್ಕಾಗಿ ಅಮೆರಿಕ ಮತ್ತು ರೊಮೇನಿಯಾ ನಡುವಿನ ಪಂದ್ಯದ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರೊಮೇನಿಯಾ ತೀರ್ಪಿನ ಆಕ್ಷೇಪಣೆ ಮಾಡಿದರು. ಮಧ್ಯ ಪ್ರವೇಶಿಸಿದ ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ ಫೆಡರೇಶನ್ ಸ್ಕೋರ್ ಪರಿಷ್ಕರಣೆ ಮಾಡಿದಾಗ, ಇದರ ಕುರಿತಾಗಿ ರೊಮೇನಿಯಾ ಮೇಲ್ಮನವಿ ಸಲ್ಲಿಸಿತ್ತು. ಈ ಕುರಿತಂತೆ ಅಮೆರಿಕಾ ತಂಡ ಒಂದು ನಿಮಿಷದೊಳಗಾಗಿ ತನ್ನ ಮೇಲ್ಮನವಿ/ಪ್ರತಿಭಟನೆ ಮಾಡಲು ಅವಕಾಶವಿತ್ತು. ಆದರೆ ಅಮೆರಿಕಾ ಒಂದು ನಿಮಿಷ 4 ಸೆಕೆಂಡ್ ಸಮಯದಲ್ಲಿ ಫಲಿತಾಂಶದ ಕುರಿತಂತೆ ಮೇಲ್ಮನವಿ ಸಲ್ಲಿಸಿತ್ತು. ಇದೇ ಹೆಚ್ಚುವರಿ 4 ಸೆಕೆಂಡ್ ಅಂಶವನ್ನು ಮುಂದಿಟ್ಟುಕೊಂಡು ಕಂಚಿನ ಪದಕ ತಮಗೇ ಸಿಗಬೇಕು ಎಂದು ರೊಮೇನಿಯಾ ಕೋರ್ಟ್ ಮೆಟ್ಟಿಲೇರಿತು.

ವಾದ ಪ್ರತಿವಾದಗಳು
ಈ ಕುರಿತಾಗಿ ವಾದಪ್ರತಿವಾದ ಆಲಿಸಿದ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ, ಈ ತಾಂತ್ರಿಕ ಕಾರಣದಿಂದಾಗಿ ರೊಮೇನಿಯನ್ ತಂಡದ ಪರವಾಗಿ ನಿಂತು ಚೆಲೀಸ್ ಳಿಂದ ಕಂಚಿನ ಪದಕ ಹಿಂಪಡೆದು ಅದನ್ನು ರೊಮೇನಿಯಾ ತಂಡಕ್ಕೆ ನೀಡಿರುವುದು ಭಾರತೀಯ ಅಭಿಮಾನಿಗಳ ಪಾಲಿಗೆ ವಿನೇಶ್ ಪರವಾಗಿ ಇನ್ನೂ ಪದಕ ನಿರೀಕ್ಷೆಯನ್ನು ಜೀವಂತಾಗಿಸಿದೆ.
ಆಗಸ್ಟ್ 1 ರಂದು ಅಲ್ಜೀರಿಯಾ ಮತ್ತು ಇಟಲಿಯ ಮಹಿಳಾ ಬಾಕ್ಸಿಂಗ್ ಪಂದ್ಯದಲ್ಲಿ ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೆಲಿಫ್ ಇಟಲಿಯ ಬಾಕ್ಸರ್ ಏಂಜೆಲಾ ಕ್ಯಾರಿನಿಳನ್ನು ಕೇವಲ 4-6 ಸೆಕೆಂಡುಗಳ ಹೋರಾಟದಲ್ಲಿ ಮಣಿಸುವ ಮೂಲಕ ಪಂದ್ಯವನ್ನು ಗೆದ್ದಾಗ, ಆಕೆಯ ಹೊಡೆತಗಳು ಸಾಮಾನ್ಯ ಹೆಂಗಸಿನ ಹೊಡೆದಂತೆ ಇರದೆ ಬಲವಾದ ಗಂಡಸು ಹೊಡೆತದಂತಿದೆ ಎಂದು ಆಕ್ಷೇಪಿಸಿದ್ದಳು. ಮಾತ್ರವಲ್ಲ, ಪಂದ್ಯ ಮುಗಿದ ನಂತರ ಕಣ್ಣೀರು ಸುರಿಸುತ್ತಲೇ ಆಕೆಯ ಕೈ ಕುಲುಕಲು ನಿರಾಕರಿಸಿ ಇದು ಅನ್ಯಾಯ ಎಂದು ಕೂಗುತ್ತಲೇ ಹೊರನಡೆದಳು.
ಗಂಡೋ….. ಹೆಣ್ಣೋ……?
ಪಂದ್ಯ ಮುಗಿದ ನಂತರ ತಿಳಿದು ಬಂದ ಅಂಶವೆಂದರೆ, ಅಲ್ಜೀರಿಯಾದ ಬಾಕ್ಸರ್ ಹೆಚ್ಚಾಗಿ ಪುರುಷ ವರ್ಣತಂತುಗಳನ್ನು ಹೊಂದಿರುವ ಸಂಗತಿ ಬೆಳಕಿಗೆ ಬಂದಿತು. 2023ರ ಇಂಟರ್ ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಶನ್ ಅರ್ಹತಾ ಪರೀಕ್ಷೆಯ ಪ್ರಕಾರ ಇದೇ ಬಾಕ್ಸರ್ ನ್ನು ವಿಶ್ವ ಚಾಂಪಿಯನ್ ಶಿಪ್ ನಿಂದ ಅನರ್ಹಗೊಳಿಸಲಾಗಿತ್ತು. ಆದರೂ ಆಕೆ ಕ್ರೋಮೋಸೋಮ್ ಗಳನ್ನು ಹೊಂದಿದ್ದರೂ, ಆಕೆ ಎಂದಿಗೂ ತಾನು ಮಂಗಳಮುಖಿ ಎಂದು ಗುರುತಿಸಿಕೊಳ್ಳದೇ ಇರುವುದು ತಿಳಿದುಬಂತು.
ಅಲ್ಲದೆ, ಆಕೆ ಯಾವುದೇ ರೀತಿಯ ಪುರುಷನ ದೈಹಿಕ ಗುಣಲಕ್ಷಣಗಳನ್ನು ಹೊಂದಿರದೆ, ಸ್ತ್ರೀ ಲೈಂಗಿಕ ಗುಣಲಕ್ಷಣಗಳನ್ನು ಹೊಂದಿದ್ದಾಳೆ ಎಂಬ ಕಾರಣದಿಂದಾಗಿ ಆಕೆಯನ್ನು ಮಹಿಳೆಯೆಂದೇ ಪರಿಗಣಿಸಲಾಗಿದೆ ಎಂದು ಕ್ರೀಡಾಧಿಕಾರಿಗಳು ತಿಳಿಸಿ ವಿಷಯವನ್ನು ತಿಳಿಗೊಳಿಸಿದ್ದರು.

ಕುಸ್ತಿಪಟುಗಳ ಪೈಪೋಟಿ
ಇದೇ ಕಾರಣದಿಂದಾಗಿಯೇ 2023ರ ವಿಶ್ವ ಚಾಂಪಿಯನ್ ಶಿಪ್ ನಿಂದ ಅನರ್ಹಗೊಂಡ ತೈವಾನ್ ಬಾಕ್ಸರ್ ಲಿನ್ ಯುಟಿಂಗ್ ಸಹ ಈ 2024ರ ಒಲಿಂಪಿಕ್ಸ್ ನಲ್ಲಿ ಮಹಿಳಾ ವಿಭಾಗದಲ್ಲಿ ಸ್ಪರ್ಧೆ ಮಾಡಿರುವುದು ಗಮನಾರ್ಹವಾಗಿದೆ.
ಒಲಿಂಪಿಕ್ಸ್ನಲ್ಲಿ ಒಂದು ಬಾರಿ ಆಡುವುದೇ ಮಹಾಭಾಗ್ಯ ಎಂದೆಣಿಸುವ ಸಂದರ್ಭದಲ್ಲಿ ಕ್ಯೂಬಾದ ಪ್ರಸಿದ್ಧ ಕುಸ್ತಿಪಟು ಮಿಜೈನ್ ಲೋಪೆಜ್ ಸತತವಾಗಿ 6 ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ, ಗ್ರೀಕ್ ರೋಮನ್ ಕುಸ್ತಿಯಲ್ಲಿ ಸತತವಾಗಿ 5 ಚಿನ್ನದ ಪದಕಗಳನ್ನು ಗೆದ್ದ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಲೋಪೆಜ್ ರ ಅಮೋಘ ಸಾಧನೆ
41ರ ಹರೆಯದ ಲೋಪೆಜ್ ಗೆ ಒಲಿಂಪಿಕ್ಸ್ ಹಾದಿಯೇನೂ ಸುಗಮವಾಗಿರಲಿಲ್ಲ. ಪ್ರಥಮ ಚುಂಬನಂ ದಂತ ಭಗ್ನಂ ಎನ್ನುವಂತೆ 2004ರ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲು ವಿಫಲವಾದ ನಂತರ ಛಲ ಬಿಡದ ತ್ರಿವಿಕ್ರಮನಂತೆ ಅಭ್ಯಾಸ ನಡೆಸಿ, 2008ರ ಬೀಜಿಂಗ್ ಮತ್ತು 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಪುರುಷರ ಗ್ರೀಕ್ ರೋಮನ್ 120 ಕೆಜಿ ವಿಭಾಗದಲ್ಲಿ ಸತತವಾಗಿ ಚಿನ್ನದ ಪದಕವನ್ನು ಗೆದ್ದರು.
2016ರ ರಿಯೋ ಗೇಮ್ಸ್ ನಲ್ಲಿ ತಮ್ಮ ದೇಹದ ತೂಕ 10 ಕೆ.ಜಿ ಹೆಚ್ಚಿದ್ದ ಪರಿಣಾಮ, ಲೋಪೆಜ್ 130 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದರೆ, 2020ರ ಟೋಕಿಯೋ ಕ್ರೀಡಾಕೂಟದಲ್ಲಿ ಒಂದೇ ಒಂದು ಅಂಕವನ್ನು ಕಳೆದುಕೊಳ್ಳದೆ ಮತ್ತೊಮ್ಮೆ ಚಿನ್ನನ್ನು ಗೆಲ್ಲುವ ಮೂಲಕ ಸತತ ನಾಲ್ಕು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದ ಮೊದಲ ಪುರುಷ ಕುಸ್ತಿಪಟು ಎಂಬ ಕೀರ್ತಿಗೆ ಭಾಜನರಾದರು.
2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮತ್ತೆ 130 ಕೆಜಿ ಗ್ರೀಕ್ ರೋಮನ್ ಕುಸ್ತಿಯಲ್ಲಿ ಲೋಪೆಜ್ ತನ್ನ ಐದನೇ ಚಿನ್ನದ ಪದಕವನ್ನು ಗೆಲ್ಲುವ ಮೂಲಕ, ಯಾವುದೇ ಕ್ರೀಡೆಯಲ್ಲಿ ಒಂದೇ ವೈಯಕ್ತಿಕ ಸ್ಪರ್ಧೆಯಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದ ಮೊದಲ ಒಲಿಂಪಿಕ್ ಆಟಗಾರ ಎನಿಸಿಕೊಂಡರು.
ಈ ವಿಜಯದ ನಂತರ ನಮ್ರತಾ ಪೂರ್ವಕವಾಗಿ ತಮ್ಮ ಕುಸ್ತಿ ಬೂಟುಗಳನ್ನು ಕಾಲಿನಿಂದ ತೆಗೆದು ಅದಕ್ಕೆ ನಮಸ್ಕರಿಸುವ ಮೂಲಕ ಕುಸ್ತಿ ಪಂದ್ಯಾಳಿಗೆ ಭಾವನಾತ್ಮಕವಾಗಿ ವಿದಾಯ ಹೇಳಿದ್ದು ಎಲ್ಲರ ಮನಸ್ಸನ್ನು ಸೂರೆಗೊಂಡಿತು. ಒಲಿಂಪಿಕ್ಸ್ ನಲ್ಲಿ ಇತಿಹಾಸವನ್ನು ಸೃಷ್ಟಿಸುವುದರ ಜೊತೆಗೆ, ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿರುವ ಹೆಗ್ಗಳಿಕೆಯೂ ಅವರದ್ದಾಗಿದೆ.
ಸಾಮಾನ್ಯವಾಗಿ ವೈದ್ಯರ ಮಗ, ವೈದ್ಯರಾಗೋದು, ಎಂಜಿನಿಯರ್ ಮಗ ಎಂಜಿನಿಯರ್ ಆಗುವುದರ ಮೂಲಕ ತಂದೆಯ ವೃತ್ತಿ ಜೀವನವನ್ನೇ ಮುಂದುವರಿಸುವುದು ಸಹಜ ಪ್ರಕ್ರಿಯೇ. ಆದರೆ ಇಂದು ಕ್ರೀಡೆಯ ಸಾಧಕನ ಮಗ ಮತ್ತೊಂದು ಕ್ರೀಡೆಯಲ್ಲಿ ಪ್ರಾವೀಣ್ಯತೆಯನ್ನು ಪಡೆದು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಗೆಲ್ಲುವುದು ಅತ್ಯಂತ ವಿರಳವಾಗಿದ್ದು, ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಅಚ್ಚರಿ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರೊಬ್ಬರ ಮಗ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ವಿಭಿನ್ನವಾದ ಸಾಧನೆಯನ್ನು ಗೈದಿದ್ದಾನೆ.
ಪದಕಗಳಿಗಾಗಿ ಹಣಾಹಣಿ
2024ರ ಪ್ಯಾರಿಸ್ ಒಲಿಂಪಿಕ್ಸ್ ನ ಅಮೆರಿಕಾದ ರಾಯಲ್ ಬೆಂಜಮಿನ್ ಪುರುಷರ 400 ಮೀ. ಹರ್ಡ್ಸ್ ರೇಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಲ್ಲದೇ, 4400 ಮೀ. ರಿಲೇ ಸ್ಪರ್ಧೆಯಲ್ಲಿಯೂ ಸಹ ತಂಡದ ಪರವಾಗಿ ಅಮೆರಿಕಾ ತಂಡಕ್ಕೆ ಚಿನ್ನದ ಪದಕವನ್ನು ಗೆಲ್ಲುವುದರ ಭಾಗವಾಗಿದ್ದಾರೆ. ಹೀಗೆ ಎರಡು ಚಿನ್ನದ ಪದಕ ಗೆದ್ದಿರುವ ರಾಯಲ್ ಬೆಂಜಮಿನ್ ರ ವೆಸ್ಟ್ ಇಂಡೀಸ್ ತಂಡದ ಪರವಾಗಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದ ವಿನ್ ಸ್ಟನ್ ಬೆಂಜಮಿನ್ ರ ಮಗ ಎಂಬುದು ವಿಶೇಷ.
ವೆಸ್ಟ್ ಇಂಡೀಸ್ ಪರ 1986 ರಿಂದ 1995ರ ನಡುವೆ 21 ಟೆಸ್ಟ್ ಮತ್ತು 85 ಏಕದಿನ ಪಂದ್ಯಗಳನ್ನಾಡುವ ಮೂಲಕ 161 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಮಾಜಿ ವೇಗದ ಬೌಲರ್ ವಿನ್ ಸ್ಟನ್ ಬೆಂಜಮಿನ್ ರ ಮಗ ರಾಯಲ್ ಬೆಂಜಮಿನ್. ತಮ್ಮ ನಿವೃತ್ತಿಯ ನಂತರ ಅಮೆರಿಕಾದಲ್ಲಿ ವಿನ್ ಸ್ಟನ್ ಬೆಂಜಮಿನ್ ನೆಲೆಸಿದ್ದರಿಂದ ಅಲ್ಲಿಯೇ ಜನಿಸಿದ ರಾಯಲ್ ಬೆಂಜಮಿನ್ ಅಮೆರಿಕಾ ಪೌರತ್ವ ಪಡೆದು ತಂದೆಯಂತೆ ಕ್ರಿಕೆಟ್ ಆಟಕ್ಕೆ ಮಾರು ಹೋಗದೇ, ಅಥ್ಲೆಟಿಕ್ಸ್ ಕಡೆ ಒಲವನ್ನು ತೋರಿಸಿ ಕಠಿಣ ಅಭ್ಯಾಸ ಮಾಡಿದರು.
ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವಿಕೆ
2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪುರುಷರ 400 ಮೀ. ಹರ್ಡ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ತಮ್ಮ ಒಲಿಂಪಿಕ್ಸ್ ಅಭಿಯಾನವನ್ನು ಆರಂಭಿಸಿದರು. ಆದರೆ ಈ ಬಾರಿ ಸರ್ವಸನ್ನದ್ಧರಾಗಿ ಮತ್ತಷ್ಟು ಕಠಿಣ ಪರಿಶ್ರಮ ವಹಿಸಿದ ರಾಯಲ್ ಬೆಂಜಮಿನ್ ಎರಡೆರಡು ಚಿನ್ನದ ಪದಕವನ್ನು ತನ್ನ ಕೊರಳಿಗೆ ಏರಿಸಿಕೊಂಡು ತಂದೆಯನ್ನು ಮೀರಿಸಿದ ಮಗ ಎಂಬ ಕೀರ್ತಿಗೆ ಪಾತ್ರರಾಗಿದ್ದಲ್ಲದೇ, ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಕ್ರಿಕೆಟಿಗನ ಮಗ ಎನಿಸಿಕೊಂಡಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆಲ್ಲುವುದು ಬಿಡಿ, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗಹಿಸುವುದೇ ಬಹಳ ಹೆಮ್ಮೆಯ ಸಂಗತಿ. ಈ ಕ್ರೀಡಾಕೂಟದಲ್ಲಿ ಭಾಗಹಿಸಲೆಂದೇ ಕ್ರೀಡಾಪಟುಗಳು ಹತ್ತಾರು ವರ್ಷಗಳ ಕಾಲ ತಪಸ್ಸಿನಂತೆ ಸಾಧನೆಗಳನ್ನು ಮಾಡಿ, ಅಲ್ಲಿ ಆಡಲು ಅರ್ಹತೆ ಗಳಿಸುತ್ತಿದ್ದಂತೆಯೇ ಇಡೀ ಜಗತ್ತನ್ನೇ ಜಯಿಸಿದಂತೆ ಸಂಭ್ರಮಿಸುತ್ತಾರೆ.
ಹೀಗೆ ಪದಕಗಳನ್ನು ಗೆದ್ದು ಸೋಲು, ಸೋತರೂ ಅದೃಷ್ಟದಿಂದ ಗೆಲ್ಲು ಮತ್ತು ಸ್ಪರ್ಧೆಯಿಂದ ಅನರ್ಹಗೊಂಡರೂ ಸಹ ಹೂವಿನ ಜೊತೆಗೆ ನಾರೂ ಸಹ ದೇವರಿಗೆ ಅರ್ಪಿತವಾಗುವಂತೆ ಏಕಾಏಕಿ ರಾತ್ರಿಯಿಂದ ಬೆಳಗಾಗುವಷ್ಟರಲ್ಲಿ ವಿಶ್ವವಿಖ್ಯಾತರಾಗುವುದು ಬಲು ವಿಶೇಷ ಅಲ್ಲವೇ….?
– ಶ್ರೀಕಂಠ ಬಾಳಗಂಚಿ





