ಕಥೆ ಕಲಾವತಿ ಪ್ರಕಾಶ್

ಮನೆಯವರ ವಿರೋಧ ಗಮನಿಸದೇ, ಪ್ರೇಮಿಸಿ ಮದುವೆಯಾದ ಶಾಲಿನಿ ಶ್ಯಾಮ್ ತರಾತುರಿಯಲ್ಲಿ ಸದಾ ಯಾಂತ್ರಿಕ ಜೀವನದಲ್ಲಿ ತಮ್ಮ ಇಡೀ ಜೀವನ ಕಳೆದುಬಿಟ್ಟರು. ಕೊನೆಗಾದರೂ ಅವರು ತಮ್ಮ ಸುಖವನ್ನು ತಾವು ಕಂಡುಕೊಂಡರೇ…..?

“ಶಾಲಿನಿ ನನಗೆ ರಾತ್ರಿ 11 ಗಂಟೆಗೆ ಯುಎಸ್‌ ಮೆನೇಜರ್‌ ಕಾಲ್ ‌ಇದೆ. ಎಷ್ಟು ಗಂಟೆಗೆ ಮುಗಿಯುವುದೋ ಗೊತ್ತಿಲ್ಲ. ಸಂಜೆ ಬೇಗ ಅಡುಗೆ ಮಾಡು. ನಾನು ಮಕ್ಕಳಿಗೆ ಸ್ಕೂಲ್ ‌ಹೋಂವರ್ಕ್‌ ಮಾಡಿಸಿ, ಬೆಳಗ್ಗೆಗೆ ಬೇಕಾದ ಅವರ ಯೂನಿಫಾರ್ಮ್ ಇಸ್ತ್ರೀ ಮಾಡಿ ಇಡ್ತೀನಿ. ಎಲ್ಲರೂ ಒಟ್ಟಿಗೆ ಊಟ ಮಾಡೋಣ,” ಎಂದು ಶ್ಯಾಮ್ ಹೆಂಡತಿಗೆ ಹೇಳಿದ.

“ನನಗೂ ಎಂಟು ಗಂಟೆಗೆ ಮೀಟಿಂಗ್‌ ಇದೆ ಶ್ಯಾಮ್. ಆಫೀಸ್‌ ಕೆಲಸ ಬೇರೆ ಸಿಕ್ಕಾಪಟ್ಟೆ ಇದೆ. ಆಮೇಲೆ ನನಗೆ ಎಷ್ಟು ಸಾಧ್ಯವೋ ಅಷ್ಟು ಮಾಡ್ತೀನಿ. ಕೊನೆಗೆ ಅನ್ನಕ್ಕೆ ನೀನೇ ಇಟ್ಟು, ಮಕ್ಕಳಿಗೆ ಊಟ ಮಾಡಿಸಿ, ನೀನೂ ಮಾಡು. ಸಾಕಾಗಿದೆ ಈ ಮನೆ, ಆಫೀಸ್‌ ಕೆಲಸ, ಜೊತೆಗೆ ತಪ್ಪದ ರಾತ್ರಿ ಮೀಟಿಂಗ್‌ ಗಳು…..” ಎಂದು ಗೊಣಗಿದಳು ಶಾಲಿನಿ.

ಪ್ರೀತಿಸಿ ಮದುವೆಯಾದ ಶ್ಯಾಮ್ ಮತ್ತು ಶಾಲಿನಿ ಇಬ್ಬರಿಗೂ ಎಂಎನ್‌ಸಿಯಲ್ಲಿ ಉದ್ಯೋಗ. ಹೆಸರಿಗೆ ಮಾತ್ರ ವರ್ಕ್‌ ಫ್ರಂ  ಹೋಮ್. ಸಮಯದ ನಿರ್ಬಂಧವೇ ಇಲ್ಲ. ಆದರೂ ದುಡಿಯಲೇಬೇಕು. ದುಬಾರಿ ದುನಿಯಾ, ಆಧುನಿಕ ಜೀವನ ಶೈಲಿಗೆ ಆಡಂಬರದ ಬದುಕಿಗೆ ಖರ್ಚಿಗೆ ಬೇಕಲ್ಲ ಲಕ್ಷ….. ಲಕ್ಷ….ಲಕ್ಷ ದುಡಿಯಬೇಕೆಂದರೆ, ತಮಗೆ ತಾವು ಲಕ್ಷ್ಯ ಕೊಟ್ಟುಕೊಳ್ಳಲು ಎಲ್ಲಿಂದ ಸಾಧ್ಯ? ಬೆಳಗ್ಗೆ ಐದು ಗಂಟೆಗೆ ಎದ್ದು ಅಡುಗೆ, ತಿಂಡಿ, ಮನೆ ಕೆಲಸ, ಮಕ್ಕಳನ್ನು ರೆಡಿ ಮಾಡಿ, ಅವರಿಗೆ ಡಬ್ಬಿ ಕಟ್ಟುವುದು, ಶಾಲೆಗೆ ಬಿಟ್ಟು ಬರುವುದು ಹೀಗೆ ಒಂದೇ ಎರಡೇ…..? ಅಷ್ಟರಲ್ಲಿ ಆಫೀಸ್‌ ಸಮಯ ಆಗುತ್ತೆ ಲಾಗಿನ್‌ ಆಗಿ ಕೆಲಸಕ್ಕೆ ಕೂತರೆ ಇನ್ಯಾವಾಗೋ ತಿಂಡಿ ತಿನ್ನೋದು…. ಮತ್ಯಾವಾಗೋ ಊಟ…. ಅಮ್ಮನ ಮನೆಯಲ್ಲಿದ್ದಾಗ ಜೀವನ ಎಂಥ ಸೊಗಸಾಗಿತ್ತು. ಬೆಳಗ್ಗೆ ಎದ್ದು ಸ್ನಾನ ಮಾಡಿ, ಚಂದದ ಅಲಂಕಾರ ಮಾಡಿಕೊಂಡು, ನೆಮ್ಮದಿಯಾಗಿ ತಿಂಡಿ ತಿಂದು ಆಫೀಸಿಗೆ ಹೋಗಿ ಬರ್ತಿದ್ದೆ, ಸಾಯಂಕಾಲ ಅಮ್ಮ ಕೊಟ್ಟ ಬಿಸಿ ಬಿಸಿ ಕಾಫಿ ಕುಡಿದು ಎಲ್ಲರ ಜೊತೆ ಹರಟೆ ಹೊಡಿತಾ ರಿಲ್ಯಾಕ್ಸ್ ಆಗ್ತಿದ್ದೆ.

ಮದುವೆ ಆದ ನಂತರ ಮನೆ, ಮಕ್ಕಳು ಸಂಸಾರದ ಜವಾಬ್ದಾರಿ ಹೆಚ್ಚಾಗಿದ್ದರಿಂದ, ಸಂಬಳ ಸಾಕಾಗೋದಿಲ್ಲ ಅಂತ ಕಂಪನಿ ಚೇಂಜ್‌ ಮಾಡಿದ್ದಾಯ್ತು. ಆಫೀಸಿಗೆ ಹೋಗಿ ಬರುವ ಅಷ್ಟೂ ಸಮಯ ಉಳಿಸಲು ವರ್ಕ್‌ ಫ್ರಂ ಹೋಮ್ ಆಯ್ಕೆ ಮಾಡಿಕೊಂಡು ಕೆಲಸ ಕೆಲಸ ಅಂತ ನೆಟ್ಟಗೆ ತಲೆ ಬಾಚೋಲ್ಲ, ಒಳ್ಳೆ ಬಟ್ಟೆ ಹಾಕೋಲ್ಲ, ಮನೆಯಲ್ಲೇ ಇದ್ದರೂ ಮಾಡಿದ ಅಡುಗೆ ಬಿಸಿ ಇರುವಾಗಲೇ ಗಂಡ ಹೆಂಡತಿ ಒಟ್ಟಿಗೆ ಕೂತು ಖುಷಿಯಾಗಿ ಊಟ ಮಾಡಲೂ ಆಗೋದಿಲ್ಲ. ಅವನಿಗೆ ಆಫೀಸ್‌ ಕಾಲ್‌, ನನಗೊಮ್ಮೆ ಮೀಟಿಂಗ್‌ ಹೀಗೆ ಒತ್ತಡದಿಂದ ಕೂಡಿದ ಇದು ಒಂದು ಜೀವನವೇ ಅನಿಸಿಬಿಟ್ಟಿತ್ತು ಶಾಲಿನಿ ದಂಪತಿಗೆ. ಹೀಗೇ ಸಂಸಾರ ಸಾಗುತ್ತಿತ್ತು. ಮಕ್ಕಳಿಬ್ಬರೂ ಬೆಳೆದು ದೊಡ್ಡವರಾದರು. ಒಬ್ಬ ಮಗ ಕೆಲಸ ಸಿಕ್ಕಿತೆಂದು ವಿದೇಶಕ್ಕೆ ಹೋದ, ಇನ್ನೊಬ್ಬ ಮಗನೂ ಹೆಚ್ಚಿನ ಓದಿಗೆಂದು ಅವನೂ ಅಮೆರಿಕಾಕ್ಕೆ ಹಾರಿದ್ದ. ಇಷ್ಟು ವರ್ಷಗಳ ಹೊತ್ತಿಗೆ ಇಬ್ಬರಿಗೂ ಪ್ರಮೋಷನ್‌ ಸಿಕ್ಕಿ ಒಳ್ಳೆಯ ಪೊಜಿಷನ್‌ ನಲ್ಲಿ ಇದ್ದರು.

ದಸರಾ ಹಬ್ಬ ಬಂದಿತ್ತು. ಅವರ ಎದುರು ಮನೆಯ ಶಕುಂತಲಾ ನವರಾತ್ರಿ ಪ್ರಯುಕ್ತ ದೇವಿ ಮಹಾತ್ಮೆ ಪಾರಾಯಣ ಮಾಡಿಸಿದ್ದರಿಂದ ಶಾಲಿನಿ ದಂಪತಿಗಳಿಬ್ಬರನ್ನೂ ಕರೆದಿದ್ದರು. ಶಾಲಿನಿ ಬಹಳ ಖುಷಿಯಿಂದ ಅಲಂಕಾರ ಮಾಡಿಕೊಂಡು ರೇಷ್ಮೆ ಸೀರೆ ಉಟ್ಟು, ತಲೆ ತುಂಬ ಮಲ್ಲಿಗೆ ಮುಡಿದು ಕನ್ನಡಿಯಲ್ಲೊಮ್ಮೆ ನೋಡುತ್ತಾ ನಿಂತವಳ ಹಿಂದೆ ಬಂದು ನಿಂತ ಶ್ಯಾಮ್, “ಶಾಲೂ, ಎಷ್ಟು ಚಂದ ಕಾಣ್ತಿದೀಯಾ ನೀನು, ದಿನಾಲೂ ಹೀಗೇ ರೆಡಿಯಾಗಬಾರದೇ…? ಮಹಾಲಕ್ಷ್ಮಿಯ ಹಾಗಿದ್ದೀಯಾ,” ಎಂದು ಬಾಯಿತುಂಬ ಹೊಗಳಿದ.

ಗಂಡನ ಹೊಗಳಿಕೆಯಿಂದ ಅವಳ ಮೊಗದಲ್ಲಿ ಮುಗುಳ್ನಗೆ ಹಾಯ್ದು ಹೋಯಿತು. ಇಬ್ಬರೂ ಶಕುಂತಲಾರ ಮನೆಗೆ ಹೋದರು. ಅಲ್ಲಿ ಅವರ ಮನೆಯವರೆಲ್ಲ ಒಟ್ಟಿಗೆ ಸೇರಿ, ಮನೆ ಮತ್ತು ದೇವರ ಮನೆಯನ್ನೂ ಅಲಂಕರಿಸಿ, ಎಲ್ಲರ ಜೊತೆ ಖುಷಿಯಾಗಿ ಹಬ್ಬ ಮಾಡುವುದನ್ನು ಗಮನಿಸಿ ಇವರಿಬ್ಬರಿಗೂ ಬಹಳ ಸಂತೋಷವಾಯಿತು. ಊಟ ಮಾಡಿ ತಾಂಬೂಲ ತೆಗೆದುಕೊಂಡು ಮನೆಗೆ ಬಂದರು.

ಇಬ್ಬರೂ ಕೂತು ತಾವು ಮದುವೆ ಆದಾಗಿನಿಂದ ಇಲ್ಲಿಯವರೆಗಿನ ತಮ್ಮ ಜೀವನವನ್ನು ನೆನಪಿಸಿಕೊಳ್ಳತೊಡಗಿದರು….

“ಹಿರಿಯರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿ, ಹೊಸ ಸಂಸಾರ ಕಟ್ಟಿಕೊಳ್ಳಲು ಮನೆಗೆ ಬೇಕಾದ ಅಡ್ವಾನ್ಸ್ ಹಣ, ಸಂಸಾರಕ್ಕೆ ಬೇಕಾಗುವ ಪ್ರತಿಯೊಂದು ಸಾಮಾನು ಹೊಂಚಲು ವರ್ಷಗಳೇ ಬೇಕಾಯುತ್ತು. ಆಗ ಸಿಗುತ್ತಿದ್ದ ಕಡಿಮೆ ಸಂಬಳದಲ್ಲಿ ಮನೆ ಬಾಡಿಗೆ, ಓಡಾಟದ ಖರ್ಚು, ದವಸ ಧಾನ್ಯ ಅಂತ ನಿನಗಾಗಿ ನಾನು ಏನೂ ಕೊಡಿಸಲಿಲ್ಲ ಅಲ್ವಾ ಶಾಲೂ….

“ವರ್ಷ ಎನ್ನುವಾಗಲೇ ಮಗು, ಅದರ ಖರ್ಚು ವೆಚ್ಚ, ಮಕ್ಕಳು ಬೆಳೆದಂತೆ ಸಂಸಾರ ದೊಡ್ಡದಾಯ್ತು. ಶಾಲೆಗೆ ಡೊನೇಷನ್ ಹೊಂದಿಸುವುದು ಆಯ್ತು. ನಿನಗಾಗಿ ಏನೂ ನೀನು ಕೇಳಲಿಲ್ಲ. ಶಾಲು ಇನ್ನು ಸಾಕು. ನೀನಿನ್ನೂ ದುಡಿಯುವುದು ಬೇಡ. ಇನ್ನು ಮುಂದೆ ನಾನು ಮಾತ್ರ ದುಡಿಯುತ್ತೇನೆ. ನೀನು ಇನ್ನು ಮೇಲೆ ಕೆಲಸಕ್ಕೆ ಹೋಗುವುದು ಬೇಡ. ನಿನ್ನ ಆಸೆಗಳನ್ನೆಲ್ಲಾ ಈಡೇರಿಸುತ್ತೇನೆ. ಇನ್ನು ಮುಂದಾದರೂ ಹಾಯಾಗಿರು,” ಎಂದು ಶ್ಯಾಮ್ ಹೆಂಡತಿಯನ್ನು ಎದೆಗೊರಗಿಸಿಕೊಂಡ.

ಆ ಘಳಿಗೆ ಶಾಲಿನಿ ಪಾಲಿಗೆ ಎಂಥದ್ದೋ ಸುಖಾನಭವ. ಇಷ್ಟು ವರ್ಷ ಪಟ್ಟ ಕಷ್ಟ ಕರಗಿ ನೀರಾದಂಥ ಭಾವ. ನಿಧಾನವಾಗಿ ತಲೆ ಎತ್ತಿ ಗಂಡನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ, “ನಾನೊಬ್ಬಳೇ ದುಡಿದು ತ್ಯಾಗ ಮಾಡಿಲ್ಲ. ಈ ಸಂಸಾರದ ನೊಗ ಹೊತ್ತು ನನ್ನಷ್ಟೇ ನೀನೂ ಸೋತು ಸೊರಗಿದ್ದೀಯಾ…. ನನಗಾಗಿ, ಈ ಮನೆಗಾಗಿ ನೀನೂ ನಿನಗಾಗಿ ಬೇಕಾದ್ದನ್ನು ಉಣ್ಣಲಿಲ್ಲ, ಚೆಂದದ ಬಟ್ಟೆ ಉಡಲಿಲ್ಲ, ಗೆಳೆಯರ ಜೊತೆ ಕಾಲ ಕಳೆಯಲಿಲ್ಲ. ನಿನಗೇನು ಇಷ್ಟ ಎಂದು ಯಾವತ್ತೂ ಹೇಳಲಿಲ್ಲ.

“ನನಗಾಗಿ, ಮಕ್ಕಳಿಗಾಗಿ ನಿನ್ನ ದುಡಿಮೆ, ನಿನ್ನ ಖುಷಿ, ನಿನ್ನ ಅಮೂಲ್ಯ ಸಮಯ ಎಲ್ಲವನ್ನೂ ತ್ಯಾಗ ಮಾಡಿದ ತ್ಯಾಗಿ ನೀನು. ಇನ್ನು ಮುಂದೆ ನಿನ್ನಾಸೆಗಳೇನು ಎಂದು ಹೇಳು. ಇನ್ನು ಮುಂದಾದರೂ ನಿನಗಿಷ್ಟವಾದ ಹಾಗಿರು. ನೀನೂ ಕೆಲಸ ಬಿಡು. ಈಗಾಗಲೇ ನಾವಿಬ್ಬರೂ ಬಹಳಷ್ಟು ದುಡಿದು ಕೂಡಿಟ್ಟಿದ್ದೇವೆ. ಮಕ್ಕಳಿಬ್ಬರಿಗೂ ದುಡಿಯುವ ವಯಸ್ಸು. ಅವರ ಬಗ್ಗೆ ಚಿಂತೆ ಇಲ್ಲ. ಹಾಗಾಗಿ ನೀನೂ ಕೆಲಸ ಮಾಡುವುದು ಬೇಡ,” ಎಂದು ಗಂಡನನ್ನು ಅನುನಯಿಸಿದಳು.

ಮತ್ತೆ ಅವಳೇ ಮಾತು ಮುಂದುವರಿಸುತ್ತಾ, “ಶ್ಯಾಮ್, ಹಿಂದೆಲ್ಲಾ ಗಂಡ ಹೊರಗಡೆ ದುಡಿದು ತರುತ್ತಿದ್ದ ನಿಜ. ಆದರೆ ಅವನಿಗೆ ಬೇಕಿದ್ದ ರೀತಿಯಲ್ಲಿ ಸ್ವತಂತ್ರವಾಗಿ, ಇಷ್ಟಬಂದ ಹಾಗೆ ಬದುಕುತ್ತಿದ್ದವರೇ ಹೆಚ್ಚು. ಆದರೆ ಹೆಣ್ಣಾದವಳು ಅವಿಭಕ್ತ ಕುಟುಂಬದಲ್ಲಿ ಅತ್ತೆ, ಮಾವ, ಭಾವ, ಮೈದುನ, ನಾದಿನಿಯರ ಸೇವೆ ಮಾಡಬೇಕಿತ್ತು. ಅವಳ ಖರ್ಚಿಗೆ ಹಣ ಬೇಕೆಂದರೆ ಕೈಯೊಡ್ಡಬೇಕಿತ್ತು. ಸ್ವಾಭಿಮಾನಿಯಾದ ಹೆಣ್ಣು ತನ್ನೆಲ್ಲ ಬೇಕು ಬೇಡಗಳನ್ನು ನುಂಗಿ ತನ್ನತನವನ್ನೇ ಮರೆತು ಬದುಕಬೇಕಿತ್ತು.

“ಆದರೆ ನಮ್ಮಿಬ್ಬರಲ್ಲಿ ಹಾಗಿಲ್ಲ. ನಮ್ಮ ಸಂಸಾರದಲ್ಲಿ ಇಬ್ಬರೂ ಸಮನವಾಗಿ ದುಡಿದು, ನಮ್ಮಾಸೆಗಳನ್ನು ಬದಿಗೊತ್ತಿ ಸಮಪಾಲು ಬದುಕಿದ್ದೇವೆ. ನನ್ನ ನಾನು ಮರೆತರೇನು ಸುಖ ಎಂದು ನೀನು ಹೇಳುವಂತೆಯೇ, ನಿನ್ನ ನೀನು ಮರೆತರೇನು ಸೊಗಸು…? ಹಣ ಸಂಪಾದನೆಯ ಹೊಳೆ ಹರಿಸುವ ಆಸೆಯಲ್ಲಿ ಈಜಿ ಇಲ್ಲಿಯವರೆಗೆ ಬಂದಿದ್ದೇವೆ. ಈ ಹಣದ ಸುಳಿಯೊಳಗೆ ಸೆಳೆದೊಯ್ಯುವ ಮುನ್ನ ನೆಮ್ಮದಿಯ ನೆಲೆ ಕಂಡುಕೊಳ್ಳೋಣ,” ಎಂದಳು ಶಾಲಿನಿ.

ಇಬ್ಬರೂ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದರು. ಸಮಾನತೆಯ ಈ ಯುಗದಲ್ಲಿ ಹೆಣ್ಣು ಗಂಡು ಇಬ್ಬರೂ ಸಂಸಾರಕ್ಕಾಗಿ ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಬದುಕುವವರೂ ಬಹಳ ಇದ್ದಾರೆ. ಅವರಲ್ಲಿ ಈ ದಂಪತಿಗಳೂ ಒಬ್ಬರು. ಹಾಗಾಗಿ…. `ನಮ್ಮನ್ನು ನಾವು ಮರೆತರೇನು ಸುಖವಿದೆ…? ನಮ್ಮತನ ತೊರೆದರೇನು ಹಿತವಿದೆ,’ ಎನ್ನುವ ತೀರ್ಮಾನಕ್ಕೆ ಇಬ್ಬರೂ ಬಂದಿದ್ದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ