ಭಾರತದ ಅತಿ ದೊಡ್ಡ ಸಮೂಹ ಸಂಸ್ಥೆ ಹಾಗೂ ಶ್ರೀಮಂತ ಕುಟುಂಬಗಳಲ್ಲಿ ಒಂದೆನಿಸಿರುವ ಬಿರ್ಲಾ ಗ್ರೂಪ್ ಇದೀಗ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದೆ.
ಸಿನಿಮಾ ನಿರ್ಮಾಣ ಕಷ್ಟದ ಉದ್ಯಮ. ಸಿನಿಮಾಗಳ ಸರಾಸರಿ ಬಜೆಟ್ 500 ಕೋಟಿ ದಾಟಿದೆ. ಇಂದು ಕೆಲವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ವ್ಯವಸ್ಥಿತ ಉದ್ಯಮವಾಗಿ ಸಿನಿಮಾ ನಿರ್ಮಾಣವನ್ನು ನಡೆಸುತ್ತಿವೆ. ಈಗಾಗಲೇ ಅಂಥಹ ಹಲವು ಸಂಸ್ಥೆಗಳು ಭಾರತದಲ್ಲಿ ಸಕ್ರಿಯವಾಗಿದ್ದು, ಇದೀಗ ಭಾರತದ ಅತಿ ದೊಡ್ಡ ಸಮೂಹ ಸಂಸ್ಥೆ ಮತ್ತು ಶ್ರೀಮಂತ ಕುಟುಂಬಗಳಲ್ಲಿ ಒಂದೆನಿಸಿಕೊಂಡಿರುವ ಬಿರ್ಲಾ ಕುಟುಂಬವೂ ಸಹ ಸಿನಿಮಾ ನಿರ್ಮಾಣಕ್ಕೆ ಮುಂದೆ ಬಂದಿದೆ.
ಅಂಬಾನಿ, ಟಾಟಾ, ಜಿಂದಾಲ್, ಅದಾನಿ ಗ್ರೂಪ್ಗಳಂತೆಯೇ ಬಿರ್ಲಾ ಗ್ರೂಪ್ ಭಾರತದ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ಸಮೂಹ ಸಂಸ್ಥೆ. ಫ್ಯಾಷನ್, ಕನ್ಸ್ಟ್ರಕ್ಷನ್, ಐಟಿ, ಫಾರ್ಮಸಿ, ಆಯಿಲ್ ಇನ್ನೂ ಹತ್ತು ಹಲವು ಕ್ಷೇತ್ರಗಳಲ್ಲಿ ಉದ್ಯಮಗಳನ್ನು ಹೊಂದಿರುವ ಆದಿತ್ಯ ಬಿರ್ಲಾ ಸಂಸ್ಥೆ ಇದೀಗ ಮನೊರಂಜನಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಈ ಮೊದಲು ಮತ್ತೊಂದು ಸಂಸ್ಥೆಯ ಅಡಿಯಲ್ಲಿ ಸಣ್ಣ-ಪುಟ್ಟ ಎಂಟರ್ಟೈನ್ಮೆಂಟ್ ಪ್ರಾಜೆಕ್ಟ್ಗಳನ್ನು ಮಾಡಿದ್ದ ಬಿರ್ಲಾ ಸಂಸ್ಥೆ, ಇದೀಗ ತನ್ನ ಹೆಸರಿನೊಂದಿಗೆ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದೆ.
ಆದಿತ್ಯ ಬಿರ್ಲಾ ಗ್ರೂಪ್ನ ಹಾಲಿ ಚೇರ್ಮ್ಯಾನ್ ಕುಮಾರ ಮಂಗಲಮ್ ಬಿರ್ಲಾ ಅವರ ಪುತ್ರಿ, ಉದ್ಯಮಿ ಅನನ್ಯಾ ಬಿರ್ಲಾ ಅವರು ಬಿರ್ಲಾ ಸ್ಟುಡಿಯೋಸ್ ಪ್ರಾರಂಭಿಸಿದ್ದು, ಸಿನಿಮಾ ನಿರ್ಮಾಣ, ವಿತರಣೆಗೆ ಇಳಿದಿದ್ದಾರೆ. ಅನನ್ಯಾ ಬಿರ್ಲಾ ಅವರು ಈ ಹಿಂದೆ ಬಿರ್ಲಾದ ಫ್ಯಾಷನ್ ಸೇರಿದಂತೆ ಇನ್ನೂ ಕೆಲವು ಉದ್ಯಮಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದೀಗ ಬಿರ್ಲಾ ಸ್ಟುಡಿಯೋಸ್ನ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ.
ಸ್ಟುಡಿಯೋ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ‘ಬಿರ್ಲಾ ಸ್ಟುಡಿಯೋಸ್ ಒಂದು ಉನ್ನತ ಪರಿಕಲ್ಪನೆಯ, ಕಮರ್ಶಿಯಲ್ ಸಿನಿಮಾಗಳನ್ನು ನಿರ್ಮಿಸುವತ್ತ ಗಮನಹರಿಸುವ ಚಲನಚಿತ್ರ ಸ್ಟುಡಿಯೋ ಆಗಿದೆ. ಕರಕುಶಲತೆ ಮತ್ತು ದೀರ್ಘಕಾಲದ ಪ್ರಸ್ತುತತೆಗೆ ಆದ್ಯತೆ ನೀಡುವ, ಬಹು ಸಮಯ ನೆನಪಿಡಬಹುದಾದ ಕಥೆಗಳು ಸ್ಟುಡಿಯೋದ ಆಯ್ಕೆ ಆಗಿರಲಿದೆ. ಬಿರ್ಲಾ ಸ್ಟುಡಿಯೋಸ್ ಗಟ್ಟಿ ಕತೆಗಳನ್ನು ಹೊಂದಿರುವ ವಾಣಿಜ್ಯ ಚಲನಚಿತ್ರಗಳನ್ನು ನಿರ್ಮಿಸಲು ಯೋಜಿಸಿದೆ. ಅತ್ಯುತ್ತಮ ಪ್ರತಿಭೆ, ಉದಯೋನ್ಮುಖ ಪ್ರತಿಭಾವಂತರು ಮತ್ತು ದಿಟ್ಟ ವಿಚಾರಗಳಿಗೆ ಬೆಂಬಲ ನೀಡುತ್ತದೆ” ಎಂದು ತಿಳಿಸಿದೆ.





