ಸಾಂಪ್ರದಾಯಿಕ ಆಭರಣಗಳು ಕೇವಲ ಅಲಂಕಾರದ ವಸ್ತುಗಳಲ್ಲ, ಅವು ಪರಂಪರೆಯ ಭಾಗವಾಗಿವೆ. ಇವು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಲ್ಪಡುತ್ತವೆ.

ಹಿಂದಿನ ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಒಬ್ಬರ ಕೈಯಿಂದ ಮತ್ತೊಬ್ಬರಿಗೆ ರವಾನೆಯಾಗುವ ಸಂಗತಿಯೇ ಸಂಪ್ರದಾಯ. ಹಾಗೆಯೇ ಈ ಆಭರಣಗಳು ನಮ್ಮ ಪರಂಪರೆಯ ಪ್ರಮುಖ ಭಾಗವಾಗಿರುತ್ತದೆ. ಅದಕ್ಕಾಗಿಯೇ ತನ್ನ ಜೀವನದ ಅತಿ ದೊಡ್ಡ ದಿನಗಳಲ್ಲಿ ಒಂದಾದ ಮದುವೆಯೆಂದು ಇವುಗಳಲ್ಲಿ ಯಾವುದಾದರೂ ಒಂದನ್ನು ಧರಿಸುವುದು ವಧುವೆಗೆ ತನ್ನ ಮೂಲ ಬೇರುಗಳೊಂದಿಗೆ ಸಂಪರ್ಕ ಹೊಂದಲು ಸಹಾಯ ಮಾಡುತ್ತದೆ.

ಮಿಸ್ಟರ್‌ ಇಂಡಿಯಾ ಎಂದೇ ಖ್ಯಾತರಾಗಿರುವ ನಟ ಅನಿಲ್ ‌ಕಪೂರ್‌ ಪುತ್ರಿ ರಿಯಾ ಕಪೂರ್‌ ತಮ್ಮ ಮದುವೆಯಲ್ಲಿ ದುಬಾರಿ ಮತ್ತು ಟ್ರೆಂಡಿ ಆಭರಣಗಳ ಬದಲಿಗೆ ಅವರ ತಾಯಿಯ ಆಭರಣಗಳನ್ನು ಧರಿಸಿದ್ದರು. ಈ ಮೂಲಕ ಅವರು ತಮ್ಮ ತಾಯಿಯನ್ನು ಗೌರವಿಸುವುದು ಮಾತ್ರವಲ್ಲದೆ, ಅವರ ಸಾಂಪ್ರದಾಯಿಕ ಮೌಲ್ಯಗಳ ಗೌರವವನ್ನು ಹೆಚ್ಚಿಸಿದ್ದರು.

ಅದೇ ರೀತಿ, ಪಟೌಡಿ ಕುಟುಂಬದ ಕಿರಿಯ ಮಗಳು ಸೋಹಾ ಅಲಿಖಾನ್‌, ಕುನಾಲ್ ‌ಖೇಮುರನ್ನು ವಿವಾಹವಾದಾಗ, ತಮ್ಮ ತಾಯಿ ಶರ್ಮಿಳಾ ಟ್ಯಾಗೋರ್‌ ರ ರತ್ನಖಚಿತ ಸವ್ಯಸಾಚಿ ಲೆಹಂಗಾ ಮತ್ತು ರಾಣಿಹಾರ ಹಾಕಿಕೊಂಡಿದ್ದರು. ಅದರಲ್ಲಿ ಪಚ್ಚೆ ಕಲ್ಲಿನ ನವರತ್ನ ಹುದುಗಿಸಲಾಗಿದ್ದ ಚಿನ್ನ ಮತ್ತು ದಂತದ ಆಭರಣಗಳನ್ನೂ ಧರಿಸಿದ್ದರು.

ಸಾಮಾನ್ಯ ಜನರಲ್ಲೂ ಪ್ರಚಲಿತ

ಸೆಲೆಬ್ರಿಟಿಗಳಿಂದ ಆರಂಭವಾದ ಈ ಟ್ರೆಂಡ್‌ ಈಗ ಸಾಮಾನ್ಯ ಜನರಲ್ಲೂ ಜನಪ್ರಿಯವಾಗಿದೆ. ನಗರಗಳಲ್ಲಿ ವಾಸಿಸುವ ಹುಡುಗಿಯರು ಸಹ ವಿಂಟೇಜ್‌ ಆಭರಣಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಇದೇ ಕಥೆ ನಮಿತಾ ಮುಖರ್ಜಿಯದ್ದು. ಅವಳಿಗೆ 30 ವರ್ಷ ವಯಸ್ಸು. ಅವಳು ಉತ್ತರ ಪ್ರದೇಶ  ಮೂಲದವಳು. ತನ್ನ ದೀರ್ಘಕಾಲದ ಗೆಳೆಯ ವಿನಯ್‌ ಮೆಹ್ತಾನನ್ನು ಮದುವೆಯಾಗಿದ್ದಾಳೆ.

“ಒಬ್ಬ ಹುಡುಗಿ ಮದುವೆಯಾಗುವಾಗ, ಅವಳು ತುಂಬಾ ಭಾವುಕಳಾಗಿರುತ್ತಾಳೆ. ಮದುವೆಯ ಸಮಯದಲ್ಲಿ ಅವಳು ಹೇಗಾದರೂ ತನ್ನ ಕುಟುಂಬ ಮತ್ತು ನಂಬಿಕೆಗಳೊಂದಿಗೆ ಸಂಪರ್ಕ ಹೊಂದಿರಬೇಕು ಎಂದು ಯೋಚಿಸುತ್ತಾಳೆ. ಹಾಗಾಗಿ, ತನ್ನ ಕುಟುಂಬದ ಪೂರ್ವಜರ ಆಭರಣಗಳನ್ನು ಧರಿಸಲು ಅವಳು ಹಿಂಜರಿಯುವುದಿಲ್ಲ. ಬದಲಿಗೆ ಅವುಗಳನ್ನು ಧರಿಸಿ, ಅವರೊಂದಿಗೆ ತಾನು ಸದಾ ಬೆಸೆದುಕೊಂಡಿರಲು ಬಯಸುತ್ತಾಳೆ,” ಎನ್ನುತ್ತಾಳೆ ನಮಿತಾ ಮುಖರ್ಜಿ.

“ನಾನು ನನ್ನ ಮದುವೆಗೆ ವಧುವಿನ ಬಣ್ಣ ಎಂದು ಕರೆಯುವ ಕೆಂಪು ಬಣ್ಣವನ್ನು ಆರಿಸಿಕೊಂಡಿದ್ದೆ. ಯಾವ ಆಭರಣಗಳನ್ನು ಧರಿಸಬೇಕು ಎಂದು ನಿರ್ಧರಿಸಲು ನನಗೆ ಸಾಧ್ಯವಾಗಲಿಲ್ಲ. ಆಗ ನಾನು ಸೆಲೆಬ್ರಿಟಿಗಳ ಮದುವೆಗಳ ಬಗ್ಗೆ ಓದಿದಾಗ, ಸಾಂಪ್ರದಾಯಿಕ ಆಭರಣಗಳನ್ನು ಧರಿಸುವುದು ಟ್ರೆಂಡ್‌ ಆಗಿದೆ ಎಂಬುದು ನನಗೆ ತಿಳಿದುಬಂತು. ನನಗೂ ಇದೇ ಟ್ರೆಂಡ್‌ ಫಾಲೋ ಮಾಡಬೇಕು ಎನಿಸಿತು.

“ಹಾಗಾಗಿ ನಾನು ಮಾಡಿದ್ದು ಇದನ್ನೇ. ನನ್ನ ಮದುವೆಯಲ್ಲಿ ನನ್ನ ಅಜ್ಜಿ ತಮ್ಮ ಮದುವೆಯಲ್ಲಿ ಹಾಕಿಕೊಂಡಿದ್ದ ಹಣೆಪಟ್ಟಿಯನ್ನು ನಾನು ಧರಿಸಿದ್ದೆ. ಹೌದು, ನಾನು ಫ್ಯಾಷನ್‌ ಬಗ್ಗೆ ಮಾತನಾಡುವುದಾದರೆ, ನಾವು ಹುಡುಗಿಯರು ಈ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಅದಕ್ಕೆ ಅಜ್ಜಿಯ ಹಣೆಪಟ್ಟಿಗೆ ಎರಡೆರಡು ಚೈನ್‌ ಸೇರಿಸಿಕೊಂಡು ಹೊಸದಾಗಿ ಹಣೆಪಟ್ಟಿ ಮಾಡಿಸಿಕೊಂಡಿದ್ದೆ. ನಾನು ಸಹ ನನ್ನ ಕುಟುಂಬದ ಪೂರ್ವಜರ ಆಭರಣಗಳು ಮತ್ತು ಅವರ ಭಾವನೆಗಳಿಗೆ ಅನುಗುಣವಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ಮಾತ್ರವಲ್ಲ, ಹೊಸ ಫ್ಯಾಷನ್‌ ಟ್ರೆಂಡ್‌ ನೊಂದಿಗೂ ನನ್ನನ್ನು ನವೀಕರಿಸಿಕೊಂಡಿದ್ದೇನೆ.”

ಅದೇ ರೀತಿ, ಗುರುಗ್ರಾಮ್ ನಲ್ಲಿ ಕನ್ಸಲ್ಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿರುವ 28 ವರ್ಷದ ಮೋನಿಕಾ ರವೀಶ್‌ ಹೇಳುತ್ತಾರೆ, “ನನ್ನ ರಿಸೆಪ್ಷನ್‌ ಗಾಗಿ ಗುಲಾಬಿ ಮಿಶ್ರಿತ ಚಿನ್ನದ ಬಣ್ಣದ ಲೆಹಂಗಾವನ್ನು ನಾನು ಖರೀದಿಸಿದ್ದೆ. ಅದನ್ನು ನನ್ನ ತಾಯಿಯ ಚಿನ್ನದ ಕುಂದಣದ ಆಭರಣದೊಂದಿಗೆ ಧರಿಸುತ್ತೇನೆ. ರಿಸೆಪ್ಷನ್‌ ನಲ್ಲಿ ಕುಂದಣದ ಕಿವಿಯೋಲೆ, ನೆಕ್‌ ಪೀಸ್‌ ಮತ್ತು ಹಣೆಪಟ್ಟಿಯನ್ನು ಹಾಗೂ ಮದುವೆಗೆ ಸಾಂಪ್ರದಾಯಿಕ ಹೈದರಾಬಾದಿ ನಿಜಾಮಿ ಆಭರಣಗಳನ್ನು ಆಯ್ಕೆ ಮಾಡಿದ್ದು, ಶುದ್ಧ ಚಿನ್ನದಿಂದ ಮಾಡಿದ ಮೀನಾಕಾರಿ ಕಸೂತಿ ಕೆಲಸ ನಮ್ಮ ಕುಟುಂಬದಲ್ಲಿ ತಲೆಮಾರುಗಳಿಂದ ಬಂದಿದೆ. ನನ್ನ ಜೀವನದ ವಿಶೇಷ ದಿನಕ್ಕಾಗಿ ನಾನು ಇವುಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಇವನ್ನು ಧರಿಸಲು ನಾನು ಬಹಳ ಭಾವುಕಳಾಗಿದ್ದೇನೆ ಮತ್ತು ಖಂಡಿತವಾಗಿಯೂ ಸುಂದರವಾಗಿ ಕಾಣುತ್ತೇನೆ.”

IB127031-127031202058473-SM357932

ಮದುವೆಯ ಪ್ರಮುಖ ಭಾಗ

ವಾಸ್ತವವಾಗಿ, ನಮ್ಮ ಭಾರತೀಯ ವಿವಾಹದಲ್ಲಿ ಆಭರಣಗಳು ಪ್ರಮುಖ ಭಾಗವಾಗಿವೆ. ಇವು ಕೇವಲ ಸೌಂದರ್ಯಕ್ಕಾಗಿ ಮಾತ್ರವಲ್ಲ, ಕುಟುಂಬದ ಸಂಪ್ರದಾಯ ಮತ್ತು ಪರಂಪರೆಗಳ ಭಾಗವನ್ನು ಹೊಂದಿರುವ ಅಮೂಲ್ಯವಾದ ಚರಾಸ್ತಿಗಳಾಗಿವೆ. ಸಾಂಪ್ರದಾಯಿಕ ಆಭರಣಗಳು ಹಿಂದಿನ ಪೀಳಿಗೆಯ ಪರಂಪರೆಯನ್ನು ಗಟ್ಟಿಯಾಗಿ ಬೆಸೆಯುವ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತವೆ.

ಮದುಮಗಳು ಸಾಂಪ್ರದಾಯಿಕ ಆಭರಣಗಳನ್ನು ಹೇಗೆ ಆಯ್ಕೆ ಮಾಡುತ್ತಾಳೆ? ಎಂಬ ಬಗ್ಗೆ ಅಭರಣ ವ್ಯಾಪಾರಿಗಳು ಹೇಳುವುದೇನೆಂದರೆ, ಸುಮಾರು ಶೇ.90ರಷ್ಟು ವಧೂವರರು ಸಾಂಪ್ರದಾಯಿಕ ಆಭರಣಗಳನ್ನು ಆಯ್ಕೆ ಮಾಡುತ್ತಾರೆ. ಇದು ಚೋಕರ್‌ ಮತ್ತು ಉದ್ದನೆಯ ಹಾರಗಳ ಆಭರಣಗಳಿಂದ ಹಿಡಿದು, ಪೋಲ್ಕಾ ಮತ್ತು ಕುಂದಣದಲ್ಲಿ ಬೈತಲೆ ಬೊಟ್ಟು, ಹಣೆಪಟ್ಟಿ, ಬ್ರೇಸ್‌ ಲೆಟ್‌ ಇತ್ಯಾದಿ ಸೇರಿವೆ. 2007ರಲ್ಲಿ ಅನುಷ್ಕಾ ವಿರಾಟ್‌ ರ ಮದುವೆ, ನಂತರ ಸೆಲೆಬ್ರಿಟಿ ವಿವಾಹಗಳು ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿವೆ ಎನ್ನುತ್ತಾರೆ. ನಗರದ ಖ್ಯಾತ ಜ್ಯೂವೆಲರಿ ಮಾಲೀಕರ ಪ್ರಕಾರ, “ಕಳೆದ ಒಂದು ವರ್ಷದಲ್ಲಿ ಎಲ್ಲಾ ಸೆಲೆಬ್ರಿಟಿಗಳ ಮದುವೆಗಳ ನಂತರ, ಸಾಂಪ್ರದಾಯಿಕ ಆಭರಣಗಳ ಮಾರಾಟದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಮದುವೆಯಾಗಲಿರುವ ವಧುಗಳು ಇಂಥ ಒಡವೆಗಳನ್ನೇ ಧರಿಸಲು ಆಯ್ಕೆ ಮಾಡುತ್ತಿದ್ದಾರೆ. ಅವರ ಮದುವೆಗಾಗಿ ಕುಟುಂಬದ ಸಂಪ್ರದಾಯವನ್ನು ಜೀವಂತವಾಗಿಡಲು, ಹೊಸ ಸೊಸೆಗೆ ಉಡುಗೊರೆಯಾಗಿ ನೀಡಲು ತಮ್ಮ ಹಳೆಯ ಆಭರಣಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ನಮ್ಮ ಬಳಿ ಬರುತ್ತಿದ್ದಾರೆ.

“ಮದುಮಗಳು ಪೋಲಸ್ಕಿ ಮತ್ತು ಕುಂದಣದಲ್ಲಿ ಸಾಂಪ್ರದಾಯಿಕ ಆಭರಣಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಮೂಲ ಮಾದರಿ ಮತ್ತು ವಿನ್ಯಾಸವನ್ನು ಉಳಿಸಿಕೊಂಡು ಹೊಸ ರೂಪವನ್ನು ನೀಡುವುದು ಈಗಿನ ಟ್ರೆಂಡ್‌ ಆಗಿದೆ. ಮದುವೆಗಳ ಸೀಸನ್ ನಲ್ಲಿ ಪಾರಂಪರಿಕ ಆಭರಣಗಳಿಗೆ ಬೇಡಿಕೆ ಇದೆ. ಭಾರ ಮತ್ತು ಅಗಲವಾದ ಮಂಗಳಸೂತ್ರದಂತೆ, ನಯವಾದ ಮಂಗಳಸೂತ್ರ ಟ್ರೆಂಡ್‌ ನಲ್ಲಿದೆ.

ವಿನ್ಯಾಸದ ಸ್ವಂತಿಕೆ

ಇಂದಿನ ವಧು ತಮ್ಮ ಪೂರ್ವಜರ ಹಳೆಯ ಸಾಂಪ್ರದಾಯಿಕ ಆಭರಣಗಳ ವಿನ್ಯಾಸದ ಸ್ವಂತಿಕೆ ಕಳೆಯದ ರೀತಿಯಲ್ಲಿ ಮಾರ್ಪಡಿಸುತ್ತಿದ್ದಾರೆ. ಈ ಆಭರಣಗಳಿಗೆ ಹೊಸ ರೂಪ ನೀಡುವ ಜೊತೆಗೆ ನವರತ್ನ, ಮುತ್ತು, ಬಣ್ಣದ ಸ್ಟೋನ್‌ ಗಳನ್ನು ಸೇರಿಸುವ ಮೂಲಕ  ಹಣೆಪಟ್ಟಿ, ಬೈತಲೆ ಬೊಟ್ಟು ಮತ್ತು ಮೂಗುತಿಗೆ ಹೊಂದಿಕೆಯಾಗುವ ಪಾರಂಪರಿಕ ಆಭರಣವನ್ನು ಮರುಸೃಷ್ಟಿಸಲು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ.

ನಮ್ಮ ಸಾಂಪ್ರದಾಯಿಕ ಆಭರಣಗಳಲ್ಲಿ ಮೂಗುತಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಾಗಾಗಿ ನನ್ನ ಮದುವೆಯಲ್ಲಿ ನನ್ನ ಅಜ್ಜಿಯ ಪೂರ್ವಜರ ಮೂಗುತಿಯನ್ನು ನಾನು ಧರಿಸಿದ್ದೆ. ಅವರು ನನ್ನ ಅಜ್ಜಿಗೆ ಈ ಮೂಗುತಿ ನೀಡಿದ್ದರು. ಅದನ್ನು ನಮ್ಮ ಅಜ್ಜಿ ನನ್ನ ತಾಯಿಗೆ, ನನ್ನ ತಾಯಿ ಅದನ್ನು ನನಗೆ ನೀಡಿದ್ದಾರೆ. ನಾವು ಸಾಂಪ್ರದಾಯಿಕ ಆಭರಣವನ್ನು ಧರಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ, ಜೊತೆಗೆ ಆಭರಣಗಳನ್ನು ಧರಿಸುವ ಮೂಲಕ ಕಳೆದುಕೊಂಡವರನ್ನು ನಮ್ಮ ಸ್ಮರಣೆಗೆ ತಂದುಕೊಳ್ಳಬಹುದು, ಎಂಬುದು ಇಂದಿನ ಬಹುತೇಕ ನವ ವಧುಗಳ ಅಭಿಪ್ರಾಯವಾಗಿದೆ.

ಶೀಘ್ರದಲ್ಲೇ ವಧುವಾಗಲಿರುವ ಹುಡುಗಿಯರು ದುಬಾರಿ ವ್ಯಾಪಾರ ಮತ್ತು ಲೇಟೆಸ್ಟ್ ವಿನ್ಯಾಸದ ಆಭರಣಗಳನ್ನು ಬಿಟ್ಟು, ತಮ್ಮ ಪೂರ್ವಜರ ಅಥವಾ ಸಾಂಪ್ರದಾಯಿಕ ಆಭರಣಗಳನ್ನು ತಮ್ಮ ಮದುವೆಯಲ್ಲಿ ಏಕೆ ಧರಿಸುತ್ತಾರೆ? ಎಂಬುದಕ್ಕೆ ಇಂದಿನ ನವ ವಧುವಿನ ಅಭಿಪ್ರಾಯವೆಂದರೆ, ಪ್ರತಿ ಮನೆಯಲ್ಲೂ ಅಂತಹ ಆಭರಣಗಳು ಖಂಡಿತವಾಗಿಯೂ ಇರುತ್ತವೆ. ಪೀಳಿಗೆಯಿಂದ ಪೀಳಿಗೆಗೆ ಈ ಆಭರಣಗಳನ್ನು ಅವರ ಮಕ್ಕಳಿಗೆ ಹಸ್ತಾಂತರಿಸಲಾಗುತ್ತದೆ. ಇದರಿಂದ ಅವರು ಅವುಗಳನ್ನು ಪಿತ್ರಾರ್ಜಿತವಾಗಿ ನೀಡಬಹುದು.

“ನನ್ನ ತಾಯಿಯ ಬಳಿಯೂ ಡಾಬು, ಬುಲಾಕ್‌, ತೋಳುಬಂದಿ ಮುಂತಾದ ಸಾಂಪ್ರದಾಯಿಕ ಆಭರಣಗಳಿವೆ. ಅವುಗಳನ್ನು ಆಕೆ ಸುರಕ್ಷಿತವಾಗಿ ಇಟ್ಟಿದ್ದಾರೆ. ಇವುಗಳಲ್ಲಿ ತೋಳುಬಂದಿಯನ್ನು ನನ್ನ ಅಕ್ಕನ ಮದುವೆಯಲ್ಲಿ ಕೊಟ್ಟಿದ್ದಾರೆ. ನನಗಾಗಿ ಡಾಬನ್ನು ಇಟ್ಟಿದ್ದಾರೆ. ಬುಲಾಕನ್ನು ತನ್ನ ಭಾವಿ ಸೊಸೆಗೆ ನೀಡುವುದಾಗಿ ತನ್ನ ಬಳಿ ಇಟ್ಟುಕೊಂಡಿದ್ದಾರೆ. ಇವೆಲ್ಲ ನಮ್ಮ ಅಜ್ಜಿಯಿಂದ ಪಡೆದ ಸಾಂಪ್ರದಾಯಿಕ ಆಭರಣಗಳಾಗಿದ್ದು, ಅವನ್ನು ಈಗ ನಾವು ಪಡೆಯುತ್ತಿದ್ದೇವೆ,” ಎಂದು ಇತ್ತೀಚೆಗೆ ಮದುವೆಯಾದ ಮೈಸೂರಿನ ಮಲ್ಲಿಕಾ ಹೇಳುತ್ತಾರೆ.

SM300113

ಸಾಂಪ್ರದಾಯಿಕ ಆಭರಣ

ವಾಸ್ತವವಾಗಿ, ಈ ಆಭರಣಗಳು ಕೇವಲ ಅಲಂಕಾರಿಕ ವಸ್ತುಗಳಲ್ಲ. ಇವು ಮಹಿಳೆಯರನ್ನು ಪಾಲಿಸುವ ಹಾಗೂ ರಕ್ಷಿಸುವ ಪರಂಪರೆಯ ಭಾಗವಾಗಿವೆ. ಇದರಿಂದಾಗಿ ಅವರು ತಮ್ಮ ಮಕ್ಕಳಿಗೆ ಪೀಳಿಗೆಯಿಂದ ಪೀಳಿಗೆಗೆ ಇವನ್ನು ಹಸ್ತಾಂತರಿಸಬಹುದು ಮತ್ತು ತಮ್ಮ ಪರಂಪರೆಯ ಭಾಗವನ್ನು ತಮ್ಮ ಮೊಮ್ಮಕ್ಕಳೊಂದಿಗೆ ಹಂಚಿಕೊಳ್ಳಬಹುದು.

ವಧು ತನ್ನ ಮದುವೆಯಲ್ಲಿ ತನ್ನ ಕುಟುಂಬದ ಅಥವಾ ತನ್ನ ಭವಿಷ್ಯದ ಕುಟುಂಬದ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದರೆ, ಅವಳು ಎರಡೂ ಕುಟುಂಬಗಳ ಸಂಪ್ರದಾಯವನ್ನು ಎಲ್ಲ ಸಂದರ್ಭಗಳಲ್ಲೂ ಒಟ್ಟಿಗೆ ನಡೆಸಿಕೊಂಡು ಹೋಗುವಲ್ಲಿ ಮುಂದಾಗುತ್ತಾಳೆ. ತನ್ನ ಪೂರ್ವಜರ ಬಗ್ಗೆಯೂ ತಿಳಿದುಕೊಳ್ಳುತ್ತಾಳೆ. ಇದಲ್ಲದೆ, ಸಾಂಪ್ರದಾಯಿಕ ಆಭರಣಗಳಲ್ಲಿ ಕುಟುಂಬಗಳ ನಡುವೆ ಸಮನ್ವಯವನ್ನು ಸ್ಥಾಪಿಸುವ ಬಂಧವಿರುತ್ತದೆ.

ನಿಮ್ಮ ಕುಟುಂಬದ ಪರಂಪರೆಯಾಗಿ ನೀವು ಕೆಲವು ಆಭರಣಗಳನ್ನು ಹೊಂದಿದ್ದರೆ, ನಿಮ್ಮ ವಿಶೇಷ ದಿನದಂದು ಅವನ್ನು ಧರಿಸುವ ಮೂಲಕ ನೀವು ಅವರ ಭಾವನೆಗಳನ್ನು ಪುನರುಜ್ಜೀವನಗೊಳಿಸಬಹುದು. ಅದರಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ಮೂಲಕ, ನೀವು ಟ್ರೆಂಡ್‌ ನಲ್ಲೂ ಉಳಿಯಬಹುದು. ಇದರಿಂದ ನಿಮಗೆ ಎಲ್ಲೆಡೆಯೂ ಶ್ಲಾಘನೆ ದೊರೆಯುವುದಂತೂ ಖಚಿತ.

ವೈ.ವಿ. ಪ್ರಿಯಾಂಕಾ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ