ಎಣ್ಣೆಗೆಂಪಿನ ಅಪ್ಪಟ ಚೆಲುವೆ, ಕಲಾವಲ್ಲಭೆ ಶ್ವೇತಾರ ಸಿನಿಮಾರಂಗದ ಸಾಧನೆಯ ರೋಚಕ ಹೆಜ್ಜೆಗಳ ಕುರಿತು ವಿವರವಾಗಿ ತಿಳಿಯೋಣವೇ…..?
ಕಲೆ ಯಾರ ಸ್ವತ್ತಲ್ಲ. ಬೆಲೆ ಕೊಟ್ಟು ಕಲೆ ಕೊಳ್ಳಲು ಸಾಧ್ಯವೇ ಇಲ್ಲ. ಕಲೆ ಒಲಿಯಬೇಕಾದರೆ ಶ್ರದ್ಧೆ ಬೇಕು, ಭಕ್ತಿ ಇರಬೇಕು. ವಿದ್ಯಾದೇವತೆ ಒಲಿಯದ ಅದೆಷ್ಟೋ ಮಂದಿಗೆ ಕಲಾ ದೇವತೆ ಒಲಿಯುತ್ತಾಳೆ. ಕಲಾ ದೇವತೆ ಒಲಿಯದ ಹಲವರಿಗೆ ವಿದ್ಯಾ ದೇವತೆ ಅನುಗ್ರಹ ಆಗ್ತಾಳೆ. ಕಲೆಗಾಗಿ ಜೀವನವನ್ನೇ ಮೀಸಲಿಡುವ ಕಲಾವಿದರನ್ನು ಕಲಾದೇವತೆಯ ಮಕ್ಕಳೆಂದು ಕರೆಯಲಾಗುತ್ತದೆ. ಇಂತಹ ಅತ್ಯಂತ ಶ್ರೇಷ್ಠ ಕಲಾಯಾಗಿರು ಬಣ್ಣದ ಬದುಕಲ್ಲೇ ನವೋಲ್ಲಾಸ ಕಾಣುತ್ತಿರುವ ಕಲಾವಿದೆ ಶ್ವೇತಾ ಶ್ರೀನಿವಾಸ್.
ದುಡ್ಡು ಮಾಡ್ತೀನಿ ಅಂತ ಹೊರಟರೆ ಕೇವಲ ದುಡ್ಡು ಮಾಡ್ತಾರೆ, ಹೆಸರು ಮಾಡ್ತೀನಿ ಅಂತ ಹೊರಟರೆ ಕೇವಲ ಹೆಸರು ಮಾಡ್ತಾರೆ. ಆದರೆ ಮನಸ್ಸು ಕೊಟ್ಟು, ಕೆಲಸ ಮಾಡ್ತೀನಿ ಅಂತ ಹೊರಟರೆ ಆಗ ದುಡ್ಡು, ಹೆಸರು ಎಲ್ಲವೂ ಹುಡುಕಿಕೊಂಡು ಬರುತ್ತದೆ. ಹಾಗೆಯೇ ರಂಗಭೂಮಿ ಕಲಾವಿದೆ ಮತ್ತು ನಟಿಯೂ ಆಗಿರುವ ಶ್ವೇತಾ ಶ್ರೀನಿವಾಸ್ ಯಾವತ್ತೂ ಕೂಡ ದುಡ್ಡಿನ ಹಿಂದೆ ಬಿದ್ದವರಲ್ಲ, ಹೆಸರಿನ ಬೆನ್ನಟ್ಟಿದವರಲ್ಲ. ಇವರಿಗೆ ಗೊತ್ತಿರುವುದು ಒಂದೇ, ಕಲಾ ಕೃಷಿ! ಈ ಎಣ್ಣೆಗೆಂಪಿನ ಅಪ್ಪಟ ಚೆಲುವೆ ಎಲ್ಲಾ ಪಾತ್ರಕ್ಕೂ ಸೈ.
ಮೂಲತಃ ಬೆಂಗಳೂರಿನವರೇ ಆಗಿರುವ ಶ್ವೇತಾಗೆ ನಟನೆಯೇ ಉಸಿರು. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಸಕ್ರಿಯರಾಗಿ ರಾಜ್ಯವಷ್ಟೇ ಅಲ್ಲ, ರಾಷ್ಟ್ರಮಟ್ಟದ ಒಬ್ಬ ಶ್ರೇಷ್ಠ ಕಲಾವಿದೆಯಾಗಿ ಬೆಳೆದಿದ್ದಾರೆ. ನೀನಾಸಂನಲ್ಲಿ ಪದವಿ ಪಡೆದ ಬಳಿಕ ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದ್ದಾರೆ. ಈವರೆಗೆ 60ಕ್ಕೂ ಹೆಚ್ಚು ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪ್ರತಿ ನಾಟಕದಲ್ಲೂ ಆ ಪಾತ್ರಕ್ಕೆ ಪರಕಾಯ ಪ್ರವ್ಶ ಮಾಡಿರುತ್ತಾರೆ. ಇವರ ನಟನೆಗೆ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಾರೆ. ಹೀಗಿ ಕಲಾಸಕ್ತರು ಮೆಚ್ಚಿಕೊಂಡಿರು ಶ್ವೇತಾ ನೀವಂದುಕೊಂಡಂತೆ ದಿಢೀರ್ ಎಂದು ಬೆಳೆದವರಲ್ಲ, ಇವರ ಸಾಧನೆಯ ಹಿಂದೆ ಶ್ರಮವಿದೆ, ಬೆವರೂ ಇದೆ.

ಬಾಲ್ಯದಲ್ಲೇ ನಟನೆಯ ಬೆಸುಗೆ
ಶ್ವೇತಾ ಆಗಿನ್ನೂ 7ನೇ ತರಗತಿ ವಿದ್ಯಾರ್ಥಿನಿ. ತನ್ನದೇ ಶಾಲೆಯಲ್ಲಿ ಓದುತ್ತಿದ್ದ ತಂಗಿ ಮಾಡುತ್ತಿದ್ದ ನಾಟಕವೊಂದನ್ನು ನೋಡಿ ವಾಪಸ್ಸಾಗುತ್ತಿದ್ದರು. ಆಗ ಅಲ್ಲೇ ಎದುರಾದ ರಂಗಕಹಳೆಯ ಸಿ. ಲಕ್ಷ್ಮಣ್, `ನಿನಗೂ ನಟನೆ ಮಾಡಬೇಕೆಂಬ ಇಷ್ಟ ಇದೆಯಾ….? ಚಪ್ಪಾಳೆ ಗಿಟ್ಟಿಸುವ ಆಸೆ ಇದೆಯಾ….’ ಎಂದು ಕೇಳಿ, ನಾಳೆಯಿಂದ ಆರ್.ವಿ. ಕಾಲೇಜಿನಲ್ಲಿ ತರಬೇತಿಗೆ ಬರುವಂತೆ ಹೇಳಿದ್ದರು.
ನಟನೆ ಇಷ್ಟವಿಲ್ಲದಿದ್ದರೂ ಕುತೂಹಲಕ್ಕಾಗಿ ಮಾರನೇ ದಿನವೇ ತರಬೇತಿ ಶಿಬಿರಕ್ಕೆ ಹೊರಟರು. ಹೀಗೆ ಲಕ್ಷ್ಮಣ್ ರ ನಟನಾ ಗರಡಿಯಲ್ಲಿ 5 ವರ್ಷ ಪಳಗಿದ ಶ್ವೇತಾ, ಕಾಲೇಜು ಸೇರಿದ ಬಳಿಕ ಸಿಜಿಕೆರವರ ಥಿಯೇಟರ್ ವರ್ಕ್ ಶಾಪ್ ಸೇರಿಕೊಂಡರು. ತಿಂಗಳ ಬಳಿಕ ಹಂಪಿ ನಾಟಕೋತ್ಸವ ಸೇರಿದಂತೆ ಹಲವು ಕಡೆ ಸಿಟಿಕೆರವರ ನಾಟಕಗಳನ್ನು ಪ್ರದರ್ಶಿಸಿದರು.
ನಂತರ ಧರ್ಮೇಂದ್ರ ಅರಸು ಮತ್ತು ಇಕ್ಬಾಲ್ ಅಹಮದ್ ಸಲಹೆ ಮೇರೆಗೆ ನೀನಾಸಂಗೆ ಹೋದರೂ, ನಟಿ ಆಗುತ್ತೇನೆಂಬ ಭರವಸೆ ಖುದ್ದು ಶ್ವೇತಾಗೇ ಇರಲಿಲ್ಲ. ಏಕೆಂದರೆ ನೀನಾಸಂ ಹಿನ್ನೆಲೆ ಶ್ವೇತಾಗೆ ತಿಳಿದಿರಲಿಲ್ಲ. ಹೀಗಿರುವಾಗ ಒಂದು ವರ್ಷ ಸ್ಕೂಲಿಂಗ್, ಮತ್ತೊಂದು ವರ್ಷ ತಿರುಗಾಟ ಮಾಡಿದ ಮೇಲೆ ಥಿಯೇಟರ್ ಅಂದ್ರೆ ನಿಜವಾಗ್ಲೂ ಏನು ಅನ್ನೋದು ಅರಿವಿಗೆ ಬಂತು.
ಇದರ ಜೊತೆಗೆ ಒಂದಿಷ್ಟು ಸೀರಿಯಲ್ ಮಾಡಿದ್ರೆ ದುಡ್ಡು ಬರುತ್ತೆ ಎಂಬುದೂ ಕೂಡ ತಿಳಿಯಿತು. ಏಕೆಂದರೆ ರಂಗಭೂಮಿ ಆಗಿನ್ನೂ ಕಮರ್ಷಿಯಲ್ ಆಗಿರಲಿಲ್ಲ. ನಿರ್ದೇಶಕರಾದ ಟಿ.ಎನ್. ಸೀತಾರಾಂ, ರವಿಕಿರಣ್ ಸೇರಿದಂತೆ ಎಲ್ಲಾ ಪ್ರೊಡಕ್ಷನ್ ಕಛೇರಿಗಳಿಗೆ ಹೋಗಿ ಪ್ರಿಂಟ್ ಹಾಕಿದ ಫೋಟೋಗಳನ್ನು (ಅದರ ಹಿಂದೆ ಹೆಸರು, ನಂಬರ್, ಅಡ್ರೆಸ್ ಬರೆಯಲಾಗುತ್ತಿತ್ತು) ಕೊಟ್ಟು ಬರುತ್ತಿದ್ದರು. ಹೀಗೆ ಸೀರಿಯಲ್ ಶೋಧದಲ್ಲಿ ಕಲಾಗಂಗೋತ್ರಿ ಮಂಜುರವರ `ಕಾಲದ ಕಡಲು’ ಧಾರಾವಾಹಿಗೆ ಮೊದಲ ಅವಕಾಶ ದೊರೆಯಿತು.
ಬಳಿಕ ಸುಕನ್ಯಾ, ಮಿಂಚು, ಮಳೆಬಿಲ್ಲು, ಅಗ್ನಿಶಿಖೆ, ಮುಂಬೆಳಗು ಹೀಗೆ ಧಾರಾವಾಹಿ ಜೀವನ ಮುಂದುವರಿದಿತ್ತು. ಕಿರುತೆರೆಯಲ್ಲಿ ಸಿಹಿಕಹಿ ಚಂದ್ರುರವರು ಪಾರ್ವತಿ ಪರಮೇಶ್ವರದಲ್ಲಿ ಅವಕಾಶ ಕೊಟ್ಟರೆ, ನಿರ್ದೇಶಕರಾದ ಪೃಥ್ವಿರಾಜ್ ಕುಲಕರ್ಣಿ ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದ್ದಾರೆ.

ಕಿರುತೆರೆಯ ಜೊತೆಗೆ ಹಿರಿತೆರೆಯಿಂದಲೂ ಆಫರ್ ಗಳು ಶುರುವಾದವು. ಶ್ವೇತಾ ಶ್ರೀನಿವಾಸ್ ರ ಜೀವನದಲ್ಲಿ ಒಂದು ಮರೆಯಲಾಗದ ದಿನವಿದೆ. `ಪಂಚರಂಗಿ’ ಮೂಲಕ ಮೊದಲ ಬಾರಿಗೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆಗ ಚೆಂದದ ಬಟ್ಟೆ ಇಲ್ಲದ ಕಾರಣ ಪ್ರೀಮಿಯರ್ ಶೋಗೆ ಹೋಗದೆ ರೀಲೀಸ್ ಆದ ದಿನ ತನ್ನ ಪ್ರೈಮರಿ ಸ್ಕೂಲ್ ಸ್ನೇಹಿತರ ಜೊತೆ ತ್ರಿವೇಣಿ ಥಿಯೇಟರ್ ಗೆ ಹೋಗಿದ್ದರಂತೆ. ತಾನಿದ್ದ ದೃಶ್ಯ ಬರುತ್ತಿದ್ದಂತೆ ಒಂಥರಾ ಮುಜುಗರವಾಗಿತ್ತಂತೆ.
ಆದರೆ, ಪ್ರೇಕ್ಷಕರಿಂದ ಸಿಕ್ಕ ಶಿಳ್ಳೆ, ಚಪ್ಪಾಳೆ ನೋಡಿ ನಾನಾ ಅದು ಎನಿಸಿತಂತೆ. ಅಲ್ಲಿಂದ ಶುರುವಾದ ಜರ್ನಿ ಶಾರ್ಟ್ ಫಿಲ್ಮ್ ಗಳು, ಜಯತೀರ್ಥರ ಟೋನಿ, ದೊಡ್ಮನೆ ಹುಡುಗ, ದನ ಕಾಯೋನು, ಗಂಗಾ, ಬೆಂಕಿಪಟ್ಣ, ಕೃಷ್ಣಲೀಲಾ, ನೀರು ತಂದರು, ನಾತಿಚರಾಮಿ ಚಿತ್ರಗಳವರೆಗೂ ಮುಂದುವರಿದಿತ್ತು. ಇಷ್ಟೂ ಚಿತ್ರಗಳಲ್ಲಿ ಶ್ವೇತಾ ಶ್ರೀನಿವಾಸ್, ಮನೋಜ್ಞವಾಗಿ ನಟಿಸಿ ಜನಮನ್ನಣೆ ಗಳಿಸಿದ್ದಾರೆ.
ಇವರ ಮತ್ತೊಂದು ವಿಶೇಷತೆ ಅಂದ್ರೆ ಶ್ವೇತಾ ಒಡಿಸ್ಸಿ ಶಾಸ್ತ್ರೀಯ ನೃತ್ಯಗಾರ್ತಿ ಹಾಗೂ ಯಕ್ಷಗಾನ ಕಲಾವಿದೆ ಕೂಡಾ ಹೌದು. ಇವರು ಗುರು ರಂಗಕಹಳೆಯ ಸಿ. ಲಕ್ಷ್ಮಣ್ ಸೇರಿದಂತೆ ಕೆ.ವಿ. ಅಕ್ಷರಾ, ಜಿ. ವೇಣು, ಯೋಗರಾಜ್ ಭಟ್ ಸೇರಿದಂತೆ ಚಿತ್ರರಂಗದ ದಿಗ್ಗಜರ ಜೊತೆ ಕೆಲಸ ಮಾಡಿದ ಖುಷಿ ಇವರಿಗಿದೆ.
ಹೀಗೆ ಕಲಾಕ್ಷೇತ್ರದ ಕೃಷಿಯ ಫಲವಾಗಿ ಶ್ವೇತಾರಿಗೆ ದೆಹಲಿಯಲ್ಲಿ ಪ್ರದರ್ಶಿಸಲಾದ ಚಿತ್ರಪಟ ನಾಟಕಕ್ಕೆ ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ವಸ್ತ್ರ ವಿನ್ಯಾಸಕಿ, ಮೆಟಾ ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ರಂಗಭೂಮಿ ಉಡುಪಿಗಾಗಿ ಪ್ರದರ್ಶಿಸಿದ `ಮುಕ್ಕಂ ಪೋಸ್ಟ್ ಬೊಂಬಿಲ್ ವಾಡಿ’ ನಾಟಕಕ್ಕಾಗಿ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ `ಚಿತ್ರಪಟ’ಕ್ಕೆ ಬೆಸ್ಟ್ ನಟಿ, ಕಾಸ್ಟ್ಯೂಮ್ ಡಿಸೈನರ್ ಅವಾರ್ಡ್ ಕೂಡ ಸಿಕ್ಕಿದೆ.
ಜೊತೆಗೆ ಝೀ ಕನ್ನಡದ ಬೆಸ್ಟ್ ಜೋಡಿ ಎಂಬ ಅವಾರ್ಡ್ ಕೂಡ ದೊರಕಿದೆ. ಇಷ್ಟೆಲ್ಲಾ ಸಾಧನೆ ನಡುವೆಯೂ ವಿದ್ಯಾಭ್ಯಾಸ ಮುಂದುವರಿಸಿ ಫ್ಯಾಷನ್ ಡಿಸೈನಿಂಗ್ ಕಲಿತಿದ್ದಾರೆ.`ರಂಗರಥ’ದ ಸಾರಥಿ ಅಗಾಧ ಕನಸು ಹೊತ್ತು, ಸಾಧನಿಯ ಗುರಿ ಬೆನ್ನಟ್ಟಿರುವ ಶ್ವೇತಾರಿಗೆ ಆಪ್ತರಾದ ಆಸಿಫ್ ಕ್ಷತ್ರಿಯ ಸಹಕಾರದಿಂದ ನಾಟಕ ತಂಡ ಕಟ್ಟು ಆಲೋಚನೆ ಬಂತು. ಅದರಂತೆ `ರಂಗರಥ’ದ ಮೂಲಕ ನಾಟಕ, ಚಲನಚಿತ್ರ, ನಟನೆ, ಯೋಗ, ನೃತ್ಯ ಮತ್ತು ಸಮರ ಕಲೆಯ ತರಬೇತಿ ನೀಡುತ್ತಿದ್ದಾರೆ. ಇದೀಗ ಇದು ಜನಪ್ರಿಯವಾಗಿದ್ದು ಪ್ರತಿಭಾವಂತ ನಟರು ಹಾಗೂ ಅನುಭವಿ ತಂತ್ರಜ್ಞರನ್ನು ಒಳಗೊಂಡಿದೆ. ಇದು ನಾಟಕವಷ್ಟೇ ಅಲ್ಲ, ಭಾರತೀಯ ಶಾಸ್ತ್ರೀಯ ನೃತ್ಯ, ಯಕ್ಷಗಾನದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಸಂಸ್ಕೃತಿ, ಪರಂಪರೆ, ಸಾಮಾಜಿಕ ಮತ್ತು ಪರಿಸರ ಜಾಗೃತಿ ಮೂಡಿಸು ಯೋಜನೆಗಳನ್ನು ವಿನ್ಯಾಸಗೊಳಿಸಿದೆ.

ಸ್ವಾರಸ್ಯಕರ ಇತಿಹಾಸ ಮತ್ತು ವಿವಿಧ ಸಾಹಿತ್ಯ ಕೃತಿಗಳಿಂದ ಹೆಕ್ಕಿ ತೆಗೆದ ಜನಪ್ರಿಯ ಕಥೆಗಳನ್ನು ಸಂಶೋಧನೆ ಮತ್ತು ತರ್ಕದ ಆಧಾರದ ಮೇಲೆ ಪುನಃ ಬರೆಯುವುದೇ ರಂಗರಥದ ಬಲ. ಇದೆಲ್ಲದರ ಜೊತೆಗೆ ಮಕ್ಕಳು ಮತ್ತು ಯುವಜನತೆಗೆ ಭಾಷಣ, ವಿಜ್ಞಾನ, ಗೆಸ್ಚರ್ ಎಂಜನಿಯರಿಂಗ್ ಮತ್ತು ಮನಸ್ಸಿನ ಚಲನೆ ಸೇರಿದಂತೆ ವಿವಿಧ ರಂಗಭೂಮಿ ಅಂಶಗಳ ತರಬೇತಿ ನೀಡುತ್ತಿದೆ.
ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಬೆಳಕಿನ ವಿನ್ಯಾಸ, ರಂಗ ನಿರ್ವಹಣೆ, ನಾಟಕ ನಿರ್ಮಾಣ, ವಿನ್ಯಾಸ ಮತ್ತು ನಿರ್ವಹಣೆ, ಹಣಕಾಸು ನಿರ್ವಹಣೆ, ಚಲನಚಿತ್ರ ನಿರ್ದೇಶನ, ಛಾಯಾಗ್ರಹಣ, ಚಿತ್ರಕಥೆ, ಕಥೆ ಮತ್ತು ಸಂಭಾಷಣೆ ಬರವಣಿಗೆಯನ್ನೂ ಕಲಿಸಿಕೊಡುತ್ತಿದೆ. ಹೀಗೆ ಹಣದ ಹಿಂದೆ ಬೀಳದೇ ಕಲಾಸೇವೆಗೈಯುತ್ತಿರುವ ಶ್ವೇತಾ ಶ್ರೀನಿವಾಸ್‌ರಂಗರಥವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು ರಂಗಭೂಮಿ ಶ್ರೀಮಂತಿಕೆ ಉಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಸುನೀತಾ
ನಿರಂತರ ಪ್ರಯಾಸ
ಮೊದಲೆಲ್ಲಾ ನಾಟಕಕ್ಕೆ ಬಳಸುವ ಬಟ್ಟೆಗಳನ್ನು ತೆಗೆದುಕೊಂಡು ಹೋಗುವಾಗ, ಗೋಣಿಚೀಲ ಹಾಸಿ, ಅದರ ಮೇಲೆ ಬಿಳಿ ಪಂಚೆ ಹಾಸಿ, ಅದರ ಮೇಲೆ ಎಲ್ಲರ ಕಾಸ್ಟ್ಯೂಮ್ಸ್ ನ್ನು ಒಂದರ ಮೇಲೊಂದರಂತೆ ಹಾಸಿ, ಅದನ್ನು ರೋಲ್ ಮಾಡಿಕೊಂಡು, ಹಗ್ಗದಲ್ಲಿ ಕಟ್ಟಿ ತಲೆಯ ಮೇಲೆ ಹೊರಿಸುತ್ತಿದ್ದರು. ದೆಹಲಿ, ಬಾಂಬೆ ಎಲ್ಲಾ ಕಡೆಯೂ ಗೋಣಿಚೀಲದಲ್ಲೇ ಎತ್ತಿಕೊಂಡು ಹೋಗುತ್ತಿದ್ದೆ. ಟ್ರೈನ್ ನಲ್ಲಿ ಇದನ್ನು ಹಾಕಿಕೊಂಡು ಹೋಗಲು ಬಹಳ ಸುಲಭವಾಗುತ್ತಿತ್ತು.
ಪರಿಶ್ರಮ ತರುವ ಸಂತೃಪ್ತಿ
ನಾನು ಮಕ್ಕಳ ರಂಗಭೂಮಿಯಲ್ಲಿದ್ದಾಗ ಸಿ. ಲಕ್ಷ್ಮಣ್ ಪ್ರತಿಯೊಂದು ಶೋಗೆ ರೂ.50 ಕೊಡುತ್ತಿದ್ದರು. ಅದನ್ನು ಕೂಡಿಟ್ಟು ಸ್ಕೂಲ್ ಫೀಸ್ ಕಟ್ಟುತ್ತಿದ್ದೆ, ಪುಸ್ತಕ ಕೊಳ್ಳುತ್ತಿದ್ದೆ. ಸಿನಿಮಾದಿಂದ ಬರುತ್ತಿದ್ದ ಪೇಮೆಂಟ್ ನಲ್ಲಿ ಅರ್ಧದಷ್ಟು ಪುಸ್ತಕಗಳಿಗೆ, ಕೋರ್ಸ್ ಗಳಿಗೆ ಹೋಗುತ್ತಿತ್ತು. ಕೆಲವೊಮ್ಮೆ ಆರ್ಗನೈಸರ್ ಕೊಡುವ ಹಣ ನಮಗೆ ಯಾವುದಕ್ಕೂ ಸಾಕಾಗುವುದಿಲ್ಲ. ಆದರೆ, ಶೋ ಮುಗಿದು ಹೊರಗೆ ಬಂದಾಗ ಜನರ ರೆಸ್ಪಾನ್ಸ್, ಚಪ್ಪಾಳೆ ಕಿವಿಗೆ ಬಿದ್ದಾಗ, ಒಂದು ಪಾಸಿಟಿವ್ ಎನರ್ಜಿ, ಇನ್ನಷ್ಟು ಚೆನ್ನಾಗಿ ನಟಿಸಬೇಕೆಂಬ ಉತ್ಸಾಹ ಹಾಗೂ ನಾವು ಮಾಡಿದ ಕೆಲಸಕ್ಕೆ ತೃಪ್ತಿ ಸಿಕ್ಕಿದೆ ಎಂಬ ಖುಷಿ ಆಗುತ್ತೆ. ನನಗೆ ನಟನೆಯೇ ಜೀವನ, ನಟನೆಯೇ ಬದುಕು!





