ನಿಮ್ಮ ಲೈಫ್ಸ್ಟೈಲ್ ಅಧಿಕ ಲಗ್ಶುರಿಗಳು ಆನಂದದಿಂದ ಕೂಡಿರಬೇಕೆಂದರೆ, ಹೊಸ ವರ್ಷದಲ್ಲಿ ನಿಮ್ಮ ಕೆರಿಯರ್ಪ್ಲಾನಿಂಗ್ ಮೊದಲಿನಿಂದಲೇ ಚುರುಕಾಗಿರಲಿ…..

24 ವರ್ಷ ತುಂಬುತ್ತಿದ್ದಂತೆ ಉತ್ತಮ ಸ್ಯಾಲರಿ ಪ್ಯಾಕೇಜ್‌ ಹೊಂದಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇದಕ್ಕಾಗಿ ತಲೆ ಮೇಲೆ ಕೈ ಹೊತ್ತು ಯೋಚಿಸುತ್ತಾ ಕುಳಿತರೆ ಯಾವ ಕೆಲಸ ನಡೆಯದು. ಉತ್ತಮ ಪ್ಯಾಕೇಜ್‌, ಪರ್ಕ್ಸ್ ಇತ್ಯಾದಿಗಳಿರಲಿ, ಅತ್ಯಧಿಕ ಪ್ರಯತ್ನ ಪಡದೆ ಯಾವ ಕೆಲಸ ನಡೆಯದು. ಹೀಗಾಗಿ ಮರಳಿ ಯತ್ನ ಮಾಡು, ಎಂಬಂತೆ ಉತ್ತಮ ನೌಕರಿಗಾಗಿ ಸತತ ಹೋರಾಟ ನಡೆಸುತ್ತಲೇ ಇರಬೇಕು. ಆಗ ಮಾತ್ರ ನೀವು ಬಿಗ್‌ ಬ್ರಾಂಡ್ಸ್ ನ ಬಿಗ್‌ ಲೈಫ್‌ ಎಂಜಾಯ್‌ ಮಾಡಲು ಸಾಧ್ಯ.

ಇದರ ಬದಲಾಗಿ ನೀವು ನಿಮ್ಮ ಸೋಮಾರಿತನದ ಕಾರಣ, ಅದೃಷ್ಟ ಇಲ್ಲ, ಸಿಗಲಿಲ್ಲ ಎಂದು ಕೈ ಚೆಲ್ಲಿ ಕುಳಿತರೆ ಕೆಲಸ ಕೆಡುತ್ತದೆ. ಕೈ ಮೀರಿ ಮಾನವ ಪ್ರಯತ್ನ ನಡೆಸಿದ ನಂತರವೇ ದೈವಸಹಾಯ ದೊರಕೀತು ಎಂಬುದು ನೆನಪಿರಲಿ. ನನ್ನ ಫ್ರೆಂಡ್ಸ್ ಗೆಲ್ಲ ಸುಲಭವಾಗಿ ಲಗ್ಶುರಿ ಲೈಫ್‌ ಸಿಕ್ಕಿದೆ, ನನಗೇಕೆ ಇಲ್ಲ ಎಂದು ಫ್ರಸ್ಟ್ರೇಶನ್‌ ಬೆಳೆಸುತ್ತಾ ಕುಳಿತುಕೊಳ್ಳುವುದರಿಂದ ಲಾಭವಿಲ್ಲ. ಏನೂ ಇಲ್ಲ ಎಂಬುದಕ್ಕಿಂತ ಯಾವುದೋ ಒಂದು ಸಣ್ಣ ನೌಕರಿಯಿಂದ ಆರಂಭಿಸಿ, ಹಂತ ಹಂತವಾಗಿ ಮೇಲೇರುತ್ತಾ, ಸಾಗುವುದೇ ವಿವೇಕ. ಹೀಗಾಗಿ ನಂತರದ ಪಶ್ಚಾತ್ತಾಪಕ್ಕಿಂತ ಸಮಯ ಇರುವಾಗಲೇ ಎಚ್ಚೆತ್ತು, ಉತ್ತಮ ಕೆಲಸ ಹುಡುಕಿಕೊಳ್ಳಿ. ನನ್ನ ಓದಿಗೆ, ವಿದ್ಯಾಭ್ಯಾಸಕ್ಕೆ ಇಂಥ ಕೆಲಸವೇ ಎಂದು ಯಾವುದನ್ನೂ ನಿರ್ಲಕ್ಷಿಸದಿರಿ. ನೀವು ನಿಮ್ಮ ಕನಸನ್ನು ನನಸಾಗಿಸಲು ಎಲ್ಲೋ ಒಂದು ಸಣ್ಣದರಿಂದ ಪ್ರಾರಂಭಿಸಲೇಬೇಕು ಎಂಬುದಷ್ಟೇ ಇಲ್ಲಿ ಮುಖ್ಯ. ಹೀಗಾದಾಗ ಮಾತ್ರ ನಿಮ್ಮ ವೈಭಯುತ ಜೀವನದ ಕನಸು ನನಸಾಗಲು ಸಾಧ್ಯ, ಮನ ಬಯಸಿದ್ದನ್ನು ಖರೀದಿಸಲು ಸಾಧ್ಯ!

ನೀವು ಪರಿಶ್ರಮಪಟ್ಟು ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡತೊಡಗಿದರೂ, ಒಂದಲ್ಲ ಒಂದು ದಿನ ಯಶಸ್ಸು ಕಟ್ಟಿಟ್ಟ ಬುತ್ತಿ! ಇದಕ್ಕೆ ಸಾಕ್ಷಿ ಬೆಂಗಳೂರಿನ ಮಧುರಿಮಾ. 36 ವರ್ಷದ ಈಕೆ, ಡೇಟಾ ಅನಲಿಸ್ಟ್ ವೃತ್ತಿಯಲ್ಲಿದ್ದಾರೆ. ಮೊದಲಿನಿಂದ ಹೆಚ್ಚು ಪರಿಶ್ರಮದಿಂದ ಈಕೆ ಇಂದು ತಮ್ಮದೇ 2 ಸ್ವಂತ ಮನೆ ಹೊಂದಿದ್ದಾರೆ, ಮರ್ಸಿಡಿಸ್‌ ಕಾರು ಸಹ ಇದೆ! ಬಾಲ್ಯದಲ್ಲೇ ತಂದೆ ಕ್ಯಾನ್ಸರ್‌ ನಿಂದ ತೀರಿಕೊಂಡಾಗ, ತಾಯಿ ಸಣ್ಣಪುಟ್ಟ ನೌಕರಿಯಿಂದ ಇವರನ್ನು ಓದಿಸಿ ಮುಂದೆ ತಂದರು. ಸರ್ಕಾರಿ ಶಾಲೆಯಲ್ಲಿ ಕಲಿತು ಮುಂದೆ ಬಂದರು. ಹೆಚ್ಚಿನ ಪರಿಶ್ರಮ ಒಂದರಿಂದಲೇ ಮುಂದೆ ಬರಲು ಸಾಧ್ಯ ಎಂಬುದನ್ನು ಕಂಡುಕೊಂಡರು.

ಮಧುರಿಮಾ ಇಡೀ ದಿನದ ಟೈಂಟೇಬಲ್ ಹಾಕಿಕೊಂಡು ಕೆಲಸ ಮಾಡುತ್ತಿದ್ದರು. 10ನೇ ತರಗತಿಯಲ್ಲಿದ್ದಾಗಲೇ ಇವರು ತಮ್ಮ ಕೆರಿಯರ್‌ ನ ಪ್ಲಾನಿಂಗ್‌ ಶುರು ಮಾಡಿದ್ದರು. ತನ್ನ ಭವಿಷ್ಯ ಉಜ್ವಲಾಗಲು ಕೆರಿಯರ್‌ ಕಡೆ ಫೋಕಸ್‌ ಮಾಡಬೇಕೆಂಬುದನ್ನು ಕಂಡುಕೊಂಡರು.

ಪಿ.ಯು.ಸಿ ಮುಗಿಸಿಕೊಂಡ ಮಧುರಿಮಾ ಇಂಟರ್ನ್‌ ಶಿಪ್‌ ಸ್ಟಾರ್ಟ್‌ ಮಾಡಿಕೊಂಡರು. ಆ ಕಾಲೋನಿಯರು ಆಕೆ ಬಗ್ಗೆ ಏನೇನೋ ಮಾತನಾಡತೊಡಗಿದರು. ಆದರೆ ಅದಕ್ಕೆ ಸೊಪ್ಪು ಹಾಕದೆ, ತಮ್ಮ ಕನಸು ನನಸಾಗಿಸುತ್ತ ಗಮನ ನೀಡಿದರು. ತೀರಾ ಸಣ್ಣ ನೌಕರಿಯಿಂದ ಆರಂಭಿಸಿ, ಇಂದು ಉನ್ನತ ಹುದ್ದೆಗೇರಿದ್ದಾರೆ. ಈ ರೀತಿ ಅವರು ತಮ್ಮ ಲೈಫ್‌ ಸ್ಟೈಲ್ ‌ಬದಲಾಯಿಸಿಕೊಂಡರು. ಸತತ ಪರಿಶ್ರಮ ಒಂದೇ ಆಧಾರ

ಎಷ್ಟೋ ಸಲ ಆಕೆ ಹಬ್ಬದ ಸಂದರ್ಭಗಳಲ್ಲೂ ಹಳೆಯ ಸೀರೆಯಲ್ಲೇ ಕಾಲ ಕಳೆದಿದ್ದಿದೆ. ಈಗ ಕಾಲ ಬದಲಾಗಿ ಮನ ಬಯಸಿದ ರೇಷ್ಮೆ ಸೀರೆ ಕೊಳ್ಳುವಂತಾಗಿದ್ದಾರೆ. ತಮ್ಮ ಕನಸನ್ನು ನನಸಾಗಿಸಿಕೊಳ್ಳುವುದಕ್ಕಾಗಿ ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೆಚ್ಚಿನ ಆತ್ಮವಿಶ್ವಾಸದಿಂದ ಹಂತಹಂತವಾಗಿ ಮೇಲೇರಿ ಇಂದು, ತಾವು ಬಯಸಿದ ಜೀವನ ನಡೆಸುತ್ತಾ, ಬಿಗ್‌ ಲೈಫ್‌ ಎಂಜಾಯ್ ಮಾಡುತ್ತಿದ್ದಾರೆ.

ಆಕೆ ಹೇಳುತ್ತಾರೆ, “ನೀವು ಜೀವನದಲ್ಲಿ ಏನಾದರೂ ದೊಡ್ಡ ಸಾಧನೆ ಮಾಡಬೇಕಿದ್ದರೆ, ಸೋಮಾರಿತನ ಬಿಟ್ಟು ಹೆಚ್ಚು ಕಷ್ಟಸಹಿಷ್ಣು ಆಗಬೇಕಾಗುತ್ತದೆ. ಈ ಪರಿಶ್ರಮ, ಗುರಿ ಮುಟ್ಟಲೇಬೇಕೆಂಬ ನಿಮ್ಮ ಹಂಬಲ ಮಾತ್ರವೇ ನಿಮ್ಮ ಜೀವನಶೈಲಿ ಬದಲಿಸಲು ಸಾಧ್ಯ. ಹಣ ಇಲ್ಲದೆ ನಾವು ಅಸಹಾಯಕರಾಗುತ್ತೇವೆ ಎಂಬುದು ಜಗತ್ತಿಗೇ ತಿಳಿದ ವಿಷಯ. ಹೀಗಾಗಿ ಉನ್ನತ ಜೀವನಶೈಲಿ ಬಯಸಿದರೆ ಅದಕ್ಕೆ ಬಾಲ್ಯದಿಂದಲೇ ಕೆರಿಯರ್‌ ನ ಪ್ಲಾನಿಂಗ್‌ ಮಾಡಿ.

“ಅವರಿವರು ಆಡಿಕೊಳ್ಳುವ ಮಾತುಗಳಿಗೆ ಕಿವಿಗೊಡಬೇಡಿ. ನಿಮ್ಮ ಭವಿಷ್ಯದ ಕುರಿತಾಗಿ ಮಾತ್ರ ಸದಾ ಮುಂದಾಲೋಚಿಸಿ. ಯಾರದೇ ಬಣ್ಣದ ಮಾತುಗಳಿಗೆ ಕಿವಿಗೊಡಬೇಡಿ. ಧರ್ಮದ ಕಂದಾಚಾರಿಗಳು ನಿಮ್ಮನ್ನು ಅದರ ಕಪಿಮುಷ್ಟಿಯೊಳಗೆ ಸಿಲುಕಿಸಲು ಯತ್ನಿಸುತ್ತಾರೆ. ಅಂಥವರ ಮಾತುಗಳಿಗೆ ಎಂದೂ ಮರುಳಾಗಬೇಡಿ. ಹೆಣ್ಣನ್ನು ನಾಲ್ಕು ಗೋಡೆಯ ಒಳಗೆ ಬಂಧಿಸಿಡುವುದಷ್ಟೇ ಅವರ ಹುನ್ನಾರ!

“ಹಾಗೇಂತ ಸದಾ ಭವಿಷ್ಯದ ಬಗ್ಗೆ ಭಯಪಡುತ್ತಾ, ಇಂದಿನ ನಿಮ್ಮ ವರ್ತಮಾನವನ್ನು ಸಂಪೂರ್ಣ ನಿರ್ಲಕ್ಷಿಸಬೇಡಿ. ಹೀಗಾಗಿ ಒಂದು ಕಡೆ ಕೆರಿಯರ್‌ ಬ್ಯಾಲೆನ್ಸ್ ಮಾಡುತ್ತಾ, ಲೈಫ್‌ ಎಂಜಾಯ್‌ ಮಾಡುವುದನ್ನು ರೂಢಿಸಿಕೊಳ್ಳಿ.”

ಮಹಿಳೆಯರಿಗೆ ಪ್ರೇರಣೆ

ಇದೇ ತರಹ `ಜಿಲಾಮಿ’ಯ ಕೋಫೌಂಡರ್‌ ಆಗಿರುವ ರಿಚಾ ಕರ್‌ ಸಹ ತಮ್ಮ ಕಠಿಣ ಪರಿಶ್ರಮದಿಂದ ಇಂದು ರೂ.700 ಕೋಟಿಗೂ ಮೀರಿದ ಕಂಪನಿ ಸ್ಥಾಪಿಸಿ, ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಇವರ ಜಿಲಾಮಿ ಆನ್‌ ಲೈನ್‌ ಪ್ಲಾಟ್‌ ಫಾರ್ಮ್ ಮೂಲಕ, ವಿವಿಧ ವಿನ್ಯಾಸಗಳಲ್ಲಿ ಹೆಂಗಸರಿಗೆ ಬೇಕಾದ ಲಾಂಜರಿ ಸಿಗುವಂತಾಗಿದೆ. ರಿಚಾ ಸುತ್ತಮುತ್ತಲ ಜನರ ಮಾತಿಗೆ ಒಂದಿಷ್ಟೂ ಹಿಂಜರಿಯದೆ, ಯಶಸ್ಸಿನ ಹೊಸ ಹೊಸ ಸೋಪಾನಗಳನ್ನು ಏರುತ್ತಾ ಗುರಿ ಸೇರಿದ್ದಾರೆ. ಇವರ ಕಥೆ ಆಧುನಿಕ ಯುವತಿಯರಿಗೆ ಅತ್ಯಂತ ಪ್ರೇರಣಾದಾಯಕ.

ಹೆಣ್ಣುಮಕ್ಕಳು ಲಾಂಜರಿ (ಇನ್ನರ್‌ ವೇರ್‌) ಖರೀದಿಸುವಾಗ ಬಹಳ ಸಂಕೋಚಪಡುತ್ತಾರೆ. ಹುಡುಗಿಯರ ಈ ಸಮಸ್ಯೆಯನ್ನು ಗುರುತಿಸಿದ ರಿಚಾ, ಅದನ್ನು ಯಶಸ್ವಿ ಬಿಸ್‌ ನೆಸ್‌ ಆಗಿಸಿದ್ದಾರೆ. ಇಂದು ಜಿಲಾಮಿ ತನ್ನ ಸರ್ವೀಸ್‌ ನಲ್ಲಿ 5 ಸಾವಿರಕ್ಕೂ ಹೆಚ್ಚಿನ ರೇಂಜ್‌, 50ಕ್ಕೂ ಹೆಚ್ಚಿನ ಬ್ರಾಂಡ್‌, 1 ಸಾವಿರಕ್ಕೂ ಹೆಚ್ಚಿನ ಬಗೆಯ ಸೈಜಿನ ಒಳವಸ್ತ್ರಗಳನ್ನು ಒಳಗೊಂಡಿದೆ. ಇವರ ವೆಬ್‌ ಸೈಟಿಗೆ ಪ್ರತಿ ತಿಂಗಳೂ 2.5 ಮಿಲಿಯನ್‌ ವಿಸಿಟರ್ಸ್‌ ಭೇಟಿ ನೀಡುತ್ತಾರೆ. ಈ ಕಂಪನಿಗಾಗಿ ದೊಡ್ಡ ದೊಡ್ಡ ಫೈನಾನ್ಶಿಯರ್ಸ್‌ ಹಣ ಹೂಡಲು ಮುಂದಾಗಿದ್ದಾರೆ.

ನಮ್ಮ ದೇಶದ, ವಿದೇಶದ ಮಹಿಳೆಯರನ್ನೂ ಒಳಗೊಂಡಂತೆ ಕೋಟ್ಯಂತರ ಮಂದಿ ಹೆಂಗಸರಿಗೆ ಶ್ರೇಷ್ಠ ಗುಣಮಟ್ಟದ ಪ್ರಾಡಕ್ಟ್ಸ್ ಒದಗಿಸುತ್ತಿದ್ದಾರೆ. ತಮ್ಮ ಭರವಸೆ, ಆತ್ಮವಿಶ್ವಾಸದಿಂದ ಈಕೆ ಯಾರೂ ಊಹಿಸದ ಎತ್ತರಕ್ಕೆ ಇಂದು ಬೆಳೆದು ನಿಂತಿದ್ದಾರೆ.

ಪರಿಶ್ರಮದ ಪರಿಣಾಮ ರಿಚಾ ಇಂದು ಯಾವ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ ಎಂದರೆ, ಅದಕ್ಕೆ ಅವರ ಸತತ ಪರಿಶ್ರಮವೇ ಕಾರಣ, ಅದು ಇಂದು ಉತ್ತಮ ಪರಿಣಾಮ ಬೀರುತ್ತಿದೆ. ಇಂದು ಆಕೆ ಮರ್ಸಿಡಿಸ್‌ ಕಾರಿನಲ್ಲಿ ಓಡಾಡುತ್ತಾರೆ ಎಂದರೆ, ಅದರ ಹಿಂದೆ ಅವರು ಹಗಲೂರಾತ್ರಿ ಪಟ್ಟ ಕಷ್ಟಗಳು ಬೆಟ್ಟದಷ್ಟಿವೆ.

ಇದೇ ತರಹ ಶುಗರ್‌ ಕಾಸ್ಮೆಟಿಕ್ಸ್ ನ ಕೋಫೌಂಡರ್‌ ಆಗಿರುವ ವಿನಿತಾ ಸಿಂಗ್‌ ಸಹ ಅಷ್ಟೇ ಕಷ್ಟಪಟ್ಟು ಮುಂದೆ ಬಂದರು. ತಮ್ಮ 1 ಕೋಟಿ ವೇತನದ ಕಾರ್ಪೋರೇಟ್‌ ನೌಕರಿ ತ್ಯಜಿಸಿದ ಈಕೆ, ತಮ್ಮ ಬಿಸ್‌ ನೆಸ್‌ ಸ್ಥಾಪಿಸಲು ಮುಂದಾದರು. ಈ ಕಾರಣದಿಂದ ಇಂದು ಇವರು ಹಲವು ಕೋಟಿಗಳ ಕಂಪನಿಯ ಒಡತಿ ಆಗಿದ್ದಾರೆ.

ಈ ಕುರಿತು ವಿನೀತಾ ವಿವರಿಸುತ್ತಾರೆ, “ನೀವು ಏನಾದರೂ ವರ್ಲ್ಡ್ ಕ್ಲಾಸ್‌ ನಂಥದ್ದನ್ನು ಸಾಧಿಸ ಬಯಸಿದರೆ, ನೀವು ಸತತ ನಿಮ್ಮ ಕೆಲಸದ ಕಡೆ ನಿಗಾವಹಿಸಿ, ನಿಮ್ಮ ಬಿಸ್‌ ನೆಸ್‌ ಮುಂದೆ ತರಬೇಕಾಗುತ್ತದೆ. ಏನೇ ಪರಿಣಾಮ ಬಂದರೂ ಅದನ್ನು ಧೈರ್ಯವಾಗಿ ಎದುರಿಸಬೇಕು.”

ಇವರ ಬಿಸ್‌ ನೆಸ್‌ ಕುರಿತಾಗಿ ತಿಳಿಯೋಣವೇ? ವಿನೀತಾ 2015ರಲ್ಲಿ ಶುಗರ್‌ ಕಾಸ್ಮೆಟಿಕ್ಸ್ ಕಂಪನಿ ಆರಂಭಿಸಿದರು. ಇಂದು ಈ ಕಾಸ್ಮೆಟಿಕ್ಸ್ ಕಂಪನಿ 130ಕ್ಕೂ ಹೆಚ್ಚಿನ ನಗರಗಳಲ್ಲಿ 2500ಕ್ಕೂ ಹೆಚ್ಚಿನ ಔಟ್‌ ಲೆಟ್ಸ್ ಹೊಂದಿವೆ. ಇವರ ಕಂಪನಿಯ ವ್ಯಾಲ್ಯುಯೇಶನ್‌ ರೂ.750 ಕೋಟಿಗೂ ಮೀರಿದ್ದು! 2019-20ರಲ್ಲಿ ಇವರ ಕಂಪನಿಯ ರೆವೆನ್ಯು ರೂ.105 ಕೋಟಿ ಇತ್ತು. ವಿನೀತಾರ ಕಂಪನಿಯ ಆದಾಯ ಒಂದು ದಿನಕ್ಕೆ ರೂ.2 ಕೋಟಿ ಮೀರಿಸುತ್ತದೆ!

ಇಂದು ವಿನೀತಾ ಈ ಮಟ್ಟಕ್ಕೆ ಎಸ್ಟಾಬ್ಲಿಷ್‌ ಆಗಿದ್ದಾರೆಂದರೆ, ಇದಕ್ಕೆ ಕಾರಣ ಇವರ ಸತತ ಪರಿಶ್ರಮ, ಗೆಲ್ಲಲೇಬೇಕೆಂಬ ಛಲ. ಇವರ ದೃಢ ನಿಶ್ಚಯದ ಮುಂದೆ ಯಾವುದೂ ನಿಲ್ಲಲಿಲ್ಲ. ಪೈಪೋಟಿಯಲ್ಲಿ ಇವರನ್ನು ಜಗ್ಗಿಸಲು ಯಾರಿಂದಲೂ ಆಗಲಿಲ್ಲ. ಈ ಕಾರಣದಿಂದಲೇ ಇಂದು ಯಶಸ್ಸು ಇವರನ್ನು ಶಿಖರಕ್ಕೆ ಕೊಂಡೊಯ್ದಿದೆ. ಇವರ ಪರಿಶ್ರಮದ ಕಾರಣ ಶುಗರ್‌ ಕಾಸ್ಮೆಟಿಕ್ಸ್, ಇಂದು ಪ್ರತಿಯೊಬ್ಬ ಹೆಣ್ಣಿನ ಮೆಚ್ಚಿನ ಕಾಸ್ಮೆಟಿಕ್‌ ಪ್ರಾಡಕ್ಟ್ಸ್ ಆಗಿದೆ.

Lead-Big-aim-big-income-big-life

ಎಂದೂ ಸೋಲೊಪ್ಪಲಿಲ್ಲ

ಹಿಂದೆ ಒಂದು ಕಾಲದಲ್ಲಿ ವಿನೀತಾ ಕೇವಲ ತಿಂಗಳಿಗೆ 5 ಸಾವಿರದ ಸಂಬಳಕ್ಕೆ ದುಡಿದದ್ದೂ ಇದೆ. ಆದರೆ  ಈಕೆ ತನ್ನದೇ ಆದ ಬಿಸ್‌ ನೆಸ್‌ ಇರಲಿ ಎಂಬ ಕನಸನ್ನು ಬಿಟ್ಟುಕೊಡಲಿಲ್ಲ, ಎಂದೂ ಸೋಲನ್ನು ಒಪ್ಪಿಕೊಳ್ಳಲಿಲ್ಲ. ಹೀಗೆ ಹಂತ ಹಂತವಾಗಿ ಮೇಲೇರಿ ಯಶಸ್ಸಿನ ಶಿಖರ ತಲುಪಿದರು.

ಇತ್ತೀಚೆಗೆ ಬ್ಯೂಟಿ ಇಂಡಸ್ಟ್ರಿ ಹಾಗೂ ಸ್ಟಾಕ್‌ ಮಾರ್ಕೆಟ್‌ ನಲ್ಲಿ ಒಂದು ಹೊಸ ಹೆಸರು ಹರಡಿ ಹೋಗಿದೆ. ಆ ಹೆಸರು ಬೇರಾವುದೂ ಅಲ್ಲ… ನೈಕಾ! ಈ ಕಂಪನಿಯ ಸಂಸ್ಥಾಪಕಿ ಒಬ್ಬ ಮಹಿಳೆ ಆಗಿದ್ದು, ನಮ್ಮ ದೇಶದ ಕೆಲವೇ ಕೋಟ್ಯಂತರ ಗಳಿಸುವ ಹೆಂಗಸರಲ್ಲಿ ಒಬ್ಬರೆನಿಸುತ್ತಾರೆ. ಇವರೇ ಫಾಲ್ಗುಣಿ ನಾಯರ್‌. ತನಗೆ ಪಿತ್ರಾರ್ಜಿತವಾಗಿ ಬಂದ ಯಾವ ಕಂಪನಿಯನ್ನೂ ಮುಂದುವರಿಸಿದವರಲ್ಲ ಈಕೆ. ಇವರು ತಮ್ಮದೇ ಆದ ಸ್ವಂತ ಕಂಪನಿ ಸ್ಥಾಪಿಸಿ ಅದನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಅದು ಇಂದು ಆಕಾಶದಷ್ಟು ಎತ್ತರಕ್ಕೆ ಬೆಳೆದು ನಿಂತಿದೆ. ಈಕೆ ಬಯಸಿದ್ದರೆ, ಕೋಟಕ್‌ ಮಹಿಂದ್ರಾ ಇನ್‌ ವೆಸ್ಟ್ ಮೆಂಟ್‌ ಬ್ಯಾಂಕಿನ ತಮ್ಮ ಮಹಾ ಪ್ರಬಂಧಕ ನಿರ್ದೇಶಕಿಯ ಉನ್ನತ ಹುದ್ದೆಯಲ್ಲೇ ಇರಬಹುದಿತ್ತು. ಆದರೆ ಅವರು ಅದನ್ನು ತ್ಯಜಿಸಿ ಬಿಸ್‌ ನೆಸ್‌ ಫೀಲ್ಡಿಗೆ ದುಮುಕಿದರು.

ಇಲ್ಲಿಂದ ಫಾಲ್ಗುಣಿ ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿದರು. ಈಕೆ 2012ರಲ್ಲಿ ಈ ಹೊಸ ಕಂಪನಿ ನೈಕಾ ಆರಂಭಿಸಿದರು. ಇದು ಬ್ಯೂಟಿ ಪರ್ಸನಲ್ ಕೇರ್‌ ಗೆ ಸಂಬಂಧಿಸಿದ ಉತ್ಪನ್ನ ತಯಾರಿಸುವ ಕಂಪನಿ. ಈಗ ಇದರ 35+ ಸ್ಟೋರ್ ಗಳು ದೇಶಾದ್ಯಂತ ಹರಡಿವೆ. ಇವರ ನೈಕಾ ಫ್ಯಾಷನ್ಸ್ ನಲ್ಲಿ ಅಪೆರ್ಸ್‌, ಆ್ಯಕ್ಸೇಸರೀಸ್‌, ಫ್ಯಾಷನ್‌ ಪ್ರಾಡಕ್ಟ್ಸ್ ಎಲ್ಲವೂ ಇವೆ. ಇಷ್ಟು ಮಾತ್ರವಲ್ಲದೆ 4 ಸಾವಿರಕ್ಕೂ ಹೆಚ್ಚಿನ ಬ್ಯೂಟಿ, ಪರ್ಸನಲ್ ಕೇರ್‌, ಫ್ಯಾಷನ್‌ ಬ್ರಾಂಡ್ಸ್ ಶಾಮೀಲಾಗಿವೆ.

ಯಶಸ್ಸಿನ ಕಥೆ ನೈಕಾದಲ್ಲಿ ಫಾಲ್ಗುಣಿ 1600ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಒದಗಿಸಿಕೊಟ್ಟಿದ್ದಾರೆ. ಪ್ರಸ್ತುತ ಇವರ ನೆಟ್ ವರ್ತ್‌ 6.5 ಮಿಲಿಯನ್‌ ಡಾಲರ್‌ ಗೂ ಹೆಚ್ಚು. ಈ ಕಾರಣದಿಂದಾಗಿ ಈಕೆ ಭಾರತದ ಪ್ರಪ್ರಥಮ ಸೆಲ್ಫೇ ಮೇಡ್‌ ಮಿಲಿಯನೇರ್‌ ಲೇಡಿ ಎನಿಸುತ್ತಾರೆ. ಇವರ ಕಂಪನಿ ನೈಕಾ, ಅಮೆರಿಕಾದ ಸ್ಟಾಕ್‌ ಎಕ್ಸ್ ಚೇಂಜ್‌ ನಲ್ಲಿ ಎಂಟ್ರಿ ಪಡೆದಂಥ ಭಾರತದ ಪ್ರಪ್ರಥಮ ಮಹಿಳಾ ನೇತೃತ್ವದ ಕಂಪನಿ ಎನಿಸಿದೆ!

`12ವೀ ಫೇಲ್‌’ ಚಿತ್ರದ ಮೂಲ ಕಥೆ ಪ್ಹಿ ಮನೋಜ್‌ಕುಮಾರ್‌ಶರ್ಮಾರ ಕುರಿತಾದುದು. ಈ ಚಿತ್ರದಲ್ಲಿ ಒಬ್ಬ ಹುಡುಗ ಹೇಗೆ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಜೀವನದಲ್ಲಿ ಒಂದೊಂದೇ ಹಂತ ಮೇಲೇರುತ್ತಾ ತನ್ನ ಗುರಿ ಮುಟ್ಟುತ್ತಾನೆ ಎಂದು ತೋರಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಆತನ ಈ ಜರ್ನಿ ಖಂಡಿತಾ ಈಝಿ ಆಗಿರಲಿಲ್ಲ. ತನ್ನ ಗುರಿ ಮುಟ್ಟಲು ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಏನೆಲ್ಲ ಸಂಘರ್ಷ ಎದುರಿಸಬೇಕೆಂದು ಈ ಚಿತ್ರದಲ್ಲಿ ಎಳೆಎಳೆಯಾಗಿ ಬಿಡಿಸಿ ತೋರಿಸಲಾಗಿದೆ.

ಇದರ ತಾತ್ಪರ್ಯ ಇಷ್ಟೆ, ನೀವು ನಿಮ್ಮ ಜೀವನದಲ್ಲಿ ಯಶಸನ್ನು ಕಾಣಬಯಸಿದರೆ, ನಿಮ್ಮ ಸೋಮಾರಿತನ ಬಿಟ್ಟುಬಿಡಿ. ಅದೃಷ್ಟ ನಂಬಿ ಅದು ಕೈಗೆಟುಕಲಿಲ್ಲ ಎಂಬ ನಿರಾಶಾವಾದ ಬಿಟ್ಟುಬಿಡಿ. ಇದೆಲ್ಲ ಬಿಟ್ಟು ಪರಿಶ್ರಮ ಒಂದೇ ಗೆಲುವಿನ ಸೋಪಾನಕ್ಕೆ ನಾಂದಿ ಎಂದು ತಿಳಿಯಿರಿ. ನಿಮಗೆ ಲಗ್ಶುರಿ ಲೈಫ್‌ ಬೇಕಿದ್ದರೆ, ಈಗಿನಿಂದಲೇ ಅದಕ್ಕೆ ಸೂಕ್ತ ಪ್ಲಾನಿಂಗ್‌ ಮಾಡಿ. ಸಿನಿಮಾ ನೋಡಿ ಬಂದು ಅದರಲ್ಲಿದ್ದಂಥ ಕಾರು, ಬಂಗಲೆ, ಶ್ರೀಮಂತಿಕೆ ನಿಮ್ಮದಾಗಬೇಕು ಎಂದು ಬಯಸಿದರೆ ಸಾಲದು, ಅದನ್ನು ನನಸಾಗಿಸಿಕೊಳ್ಳಲು ಎಲ್ಲಿಂದಲೋ ಒಂದು ಪ್ರಾರಂಭ ಮಾಡಲೇಬೇಕು.

ಸ್ವಾವಲಂಬಿಗಳಾಗಲು ಯತ್ನಿಸಿ

ನಿಮ್ಮ ಪ್ರೌಢಶಾಲಾ ದಿನಗಳಿಂದಲೇ ನೀವು ನಿಮ್ಮ ಕೆರಿಯರ್‌ ನ ಪ್ಲಾನಿಂಗ್‌ ಮಾಡಿರದಿದ್ದರೆ, ಮುಂದೆ ನೀವು ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ. ಇದೇ ತರಹ ಲೀಲಾ ಈಗ ಬಹಳ ಕಷ್ಟ ಪಡುತ್ತಿದ್ದಾಳೆ. ಲೀಲಾ 38ರ ಅಪ್ಪಟ ಗೃಹಿಣಿ. ಗಂಡ, ಮನೆ, ಮಕ್ಕಳು, ಹಿರಿಯರ ಜವಾಬ್ದಾರಿ, ಸಣ್ಣ ಪುಟ್ಟ ಶಾಪಿಂಗ್‌, ಪ್ರವಾಸ….. ಇವಿಷ್ಟೇ ಇವಳ ಪ್ರಪಂಚ. ಹಾಗೆಂದ ಮಾತ್ರಕ್ಕೆ ಗೃಹಿಣಿ ಆಗಿ ಉಳಿಯುವುದು ತಪ್ಪೇನಲ್ಲ. ಆದರೆ ಯಾವುದೇ ಖರ್ಚಿಗೆ ಹಣ ಬೇಕಾದಾಗಲೂ ಅವಳು ಗಂಡನನ್ನೇ ಕೇಳಬೇಕಾಗುತ್ತದೆ. ತಿಂಗಳ ಕೊನೆಯಲ್ಲಿ ಕೈ ಕಟ್ಟಿದಾಗ, ಆತ ಇವಳ ಮೇಲೆ ಸಿಡುಕಿದ್ದಿದೆ.

“ನೀನೂ ಸಂಪಾದನೆ ಮಾಡಿ ನೋಡು…. ಆಗ ಅದರ ಕಷ್ಟ ನಿನಗೆ ಗೊತ್ತಾಗುತ್ತದೆ!” ಎಂದು ಆತ ಹೇಳುವುದಿದೆ.

ಆದರೆ ಲೀಲಾಳ ನೆರೆಮನೆಯ ಅಮೃತಾ ತನ್ನದೇ ಸ್ವಂತ ಬೊಟಿಕ್‌ ನಡೆಸುತ್ತಿದ್ದಾಳೆ. ಅದರಿಂದಾಗಿ ಅವಳು ಪ್ರತಿ ತಿಂಗಳೂ ಸುಲಭವಾಗಿ 30-35 ಸಾವಿರ ರೂ. ಸಂಪಾದಿಸುತ್ತಾಳೆ. ಈ ರೀತಿ ಮನೆಯ ಸಂಪಾದನೆಗೆ ಅವಳು ನೆರವಾಗುತ್ತಾಳೆ. ಲೀಲಾ ಬಾಡಿಗೆ ಮನೆಯಲ್ಲಿದ್ದರೆ, ಬೊಟಿಕ್‌ ನ ಆದಾಯದಿಂದಾಗಿ ಅಮೃತಾ ಸ್ವಂತ ಮನೆ ಹೊಂದಿದ್ದಾಳೆ. ಅವಳ ಪತಿ ಸಹ 40-45 ಸಾವಿರ ಸಂಪಾದಿಸುತ್ತಾನೆ. ಹೀಗೆ ಅವರು ತಮ್ಮ ಸಂಸಾರದ ಪ್ಲಾನಿಂಗ್‌ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಅವಳಿಗೆ ಒಬ್ಬಳೆ ಮಗಳು. ಲೀಲಾಗೆ ಇಬ್ಬರು ಹೆಣ್ಣುಮಕ್ಕಳು. ಎಣಿಸಿದ ಕಜ್ಜಾಯದ ಆದಾಯದಲ್ಲೇ ಅವಳು ಜೀವನ ನಡೆಸಬೇಕಿದೆ. ಹೀಗಾಗಿ ಲೀಲಾಗಿಂತ ಅಮೃತಾಳ ಲೈಫ್‌ ಸ್ಟೈಲ್ ‌ಉನ್ನತ ಮಟ್ಟದ್ದಾಗಿ, ಅವಳ ಕನಸುಗಳು ನಿಧಾನವಾಗಿ ನನಸಾಗ ತೊಡಗಿವೆ. ಲೀಲಾಳಿಗಿಂತ ಅಮೃತಾಳ ಆತ್ಮವಿಶ್ವಾಸ ಹೆಚ್ಚೇ ಎನ್ನಬಹುದು. ಇದೇ ತರಹ ನೀವು ಸಹ ಆತ್ಮವಿಶ್ವಾಸ ಹೆಚ್ಚಿಸಿಕೊಂಡು,  ಉನ್ನತ ಜೀವನಶೈಲಿ ರೂಢಿಸಿಕೊಳ್ಳ ಬಯಸಿದರೆ, ಸಣ್ಣ ಪ್ರಾಯದಿಂದಲೇ ನಿಮ್ಮ ಕೆರಿಯರ್‌ ಕುರಿತಾದ ಪ್ಲಾನಿಂಗ್‌ ಮಾಡಿ. ನಿಮಗೂ ಸಹ ದುಬಾರಿ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿ, ಹೈಫೈ ಆಗಿ ಜೀವನ ನಡೆಸಬೇಕು ಎಂದಿದ್ದರೆ, ನಿಮ್ಮ ಕೆರಿಯರ್ ನತ್ತ ಸಂಪೂರ್ಣ ಗಮನಹರಿಸಿ. ಹೈಸ್ಕೂಲ್ ಹಂತದಿಂದಲೇ ನನ್ನ ಭವಿಷ್ಯತ್ತು ಹೀಗೇ ಇರಬೇಕು ಎಂದು ದೃಢವಾಗಿ ನಿರ್ಧರಿಸಿ, ಅದಕ್ಕೆ ಬೇಕಾದ ತಯಾರಿ ನಡೆಸಿ. ಟ್ರೆಂಡ್‌ ನಲ್ಲಿ ಜನಪ್ರಿಯ ಆಗಿರುವ ಕೆರಯರ್‌ ನ್ನೇ ಆರಿಸಿ. ಇದರ ಟೈಂ ಪೀರಿಯಡ್ ಹೆಚ್ಚಿರಬೇಕು. ಜೊತೆಗೆ ಹೆಚ್ಚಿನ ಕ್ರಿಯಾಶೀಲ ಚಟುವಟಿಕೆಗಳನ್ನು ನಿಮ್ಮದಾಗಿಸಿಕೊಂಡು, ನಿಮ್ಮ ಓದಿಗೆ ಪೂರಕವಾದ ಎಕ್ಸ್ ಟ್ರಾ ಕೋರ್ಸ್‌ ಸಹ ಕಲಿಯಿರಿ. ಕೇವಲ ಡಿಗ್ರಿ ಒಂದೇ ಇಂದಿನ ಆಧುನಿಕ ಕಾಲಕ್ಕೆ ಏನೇನೂ ಸಾಲದು. ಇಂದಿನ ಪೈಪೋಟಿ ಯುಗದಲ್ಲಿ, ನೀವು ಸಂದರ್ಶನಕ್ಕೆ ಹೋದಾಗ, ನಿಮ್ಮ ಆಯ್ಕೆಗೆ ಇದು ಖಂಡಿತಾ ಸಹಕಾರಿ ಆಗಲಿದೆ, ಆಲ್ ದಿ ಬೆಸ್ಟ್! ಈ ವರ್ಷಕ್ಕೆ ಇದೇ ನಿಮ್ಮ ಹೊಸ ಸಂಕಲ್ಪ ಆಗಿರಲಿ…. ಹ್ಯಾಪಿ ನ್ಯೂ ಇಯರ್‌!

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ