– ರಾಘವೇಂದ್ರ ಅಡಿಗ ಎಚ್ಚೆನ್.
ನೈಜ ಘಟನೆ ಆಧಾರಿತ ‘ಭೀಮ ತೀರದಲ್ಲಿ’ ಸಿನಿಮಾ 2012ರಲ್ಲಿ ಬಿಡುಗಡೆ ಆಗಿತ್ತು. ದುನಿಯಾ ವಿಜಯ್ ಅವರು ಈ ಸಿನಿಮಾದಲ್ಲಿ ಮುಖ್ಯಪಾತ್ರ ಮಾಡಿದ್ದರು. ಈಗ 14 ವರ್ಷಗಳ ಬಳಿಕ ಈ ಚಿತ್ರವನ್ನು ಮತ್ತೆ ರಿಲೀಸ್ ಮಾಡಲು ತಯಾರಿ ನಡೆದಿದೆ. ಆ ಬಗ್ಗೆ ನಿರ್ಮಾಪಕ ಅಣಜಿ ನಾಗರಾಜ್ ಮತ್ತು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಮಾತಾಡಿದ್ದಾರೆ. ‘ಈ ರೀತಿಯ ಸಿನಿಮಾವನ್ನು ನಮಗೆ ಈಗ ಮಾಡೋಕೆ ಆಗಲ್ಲ. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಮರು ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ನಿರ್ದೇಶಕರು ಓಂ ಪ್ರಕಾಶ್ ರಾವ್ ತುಂಬಾ ಅಡ್ವಾನ್ಸ್ ಆಗಿ ಇಂಥ ಸಿನಿಮಾ ಮಾಡಿದ್ದರು. ನಮ್ಮ ಸಿನಿಮಾ ನೋಡಿ ಬೇರೆಯವರು ಸ್ಫೂರ್ತಿ ಪಡೆದಿದ್ದಾರೆ ಎನಿಸುತ್ತದೆ. ಇದು ರಿಯಲಿಸ್ಟಿಕ್ ಕಥೆ ಇರುವ ಸಿನಿಮಾ. ನಮ್ಮ ಇಡೀ ತಂಡ ಬಹಳ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದೆವು’ ಎಂದು ನಿರ್ಮಾಪಕ ಅಣಜಿ ನಾಗರಾಜ್ ಅವರು ಹೇಳಿದ್ದಾರೆ.
ರವಿ ಬೆಳಗೆರೆ ಅವರ ಪುಸ್ತಜದ ಕಥೆಗೂ ಇದಕ್ಕೂ ಸಂಬಂಧ ಇಲ್ಲ..

ಜನಪ್ರಿಯ ಲೇಖಕ, ಪತ್ರಕರ್ತರಾಗಿದ್ದ ರವಿ ಬೆಳಗರೆ ಬರೆದ ‘ಭೀಮಾ ತೀರದಲ್ಲಿ’ ಕಥೆಯನ್ನು ಆಧರಿಸಿ ಮಾಡಿರುವ ಚಿತ್ರ ಇದಲ್ಲ ಎಂದು ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ನಿರ್ದೇಶಕರು ತಮ್ಮ ಹಾಗೂ ರವಿಬೆಳಗರೆ ನಡುವಿನ ವೈಮನಸ್ಸಿನ ಬಗ್ಗೆ ಮಾತಾಡಿ “ಅವರು ಇವತ್ತು ನಮ್ಮ ಜೊತೆಯಲ್ಲಿ ಇಲ್ಲ. ಅವರು ಗುರುಗಳು ನನಗೆ. ಅವರೊಂದಿಗೆ ನಾನು ತುಂಬಾನೇ ಒಡನಾಟವನ್ನು ಇಟ್ಟುಕೊಂಡಿದ್ದೇನೆ. ಅವರ ಭಾಷೆಗೆ ನಾನು ತುಂಬಾನೇ ದೊಡ್ಡ ಅಭಿಮಾನಿ. ಅವರಿಗೂ ಗೊತ್ತಿತ್ತು. ನಾನು ಅವರು ಸಣ್ಣ-ಪುಟ್ಟ ಜಗಳಗಳನ್ನು ಆಡಿದ್ದೀವಿ. ನಾನೇ ಹುಚ್ಚ ಅಂದುಕೊಂಡಿದ್ದೆ ಕಣೋ.. ನಿನ್ನ ನೋಡಿದ ಮೇಲೆ ಇನ್ನೊಬ್ಬ ಹುಚ್ಚ ಇದ್ದಾನೆ ಅಂತ ಗೊತ್ತಾಗಿದ್ದು. ಜೊತೆಯಲ್ಲಿ ಮುತ್ತಪ್ಪ ರೈ ಸರ್ ಮನೆಗೆ ಊಟಕ್ಕೆ ಹೋಗುತ್ತಿದ್ವಿ. ಬಹಳಷ್ಟು ಬಾರಿ 3 ಗಂಟೆವರೆಗೂ ಅವರ ಜೊತೆಗೆ ಇದ್ದು, ಮನೆವರೆಗೂ ಬಿಟ್ಟು ಹೋಗುತ್ತಿದ್ದೆ. ನಮ್ಮ ತಂದೆಯನ್ನೂ ಯಾವ ಜಾಗದಲ್ಲಿ ನೋಡುವುದಕ್ಕೆ ಇಷ್ಟ ಪಡುತ್ತೇನೆ ವಿನ: ಕೆಲಸ ಅಂತ ಬಂದಾಗ ಹತ್ತಿರ ತೆಗೆದುಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ಕೆಲಸಕ್ಕೆ ಗೌರವ ಕೊಡುತ್ತೇನೆ. ಅದರಲ್ಲಿ ಸಣ್ಣ ಪುಟ್ಟ ಮಾತಾಗಿರಬಹುದು. ಅವರ ಬರವಣಿಗೆಗೆ ಒಬ್ಬ ಅಭಿಮಾನಿ ಅಂತ ಹೇಳುವುದಕ್ಕೆ ತುಂಬಾನೇ ಸಂತೋಷ ಆಗುತ್ತೆ. ಅದೊಂದು ಸಣ್ಣ ಘಟನೆ.. ಹೀಗೆ ಬಂದು ತೇಲಿಕೊಂಡು ಹೋಯ್ತು ಅಷ್ಟೇ.” ಎಂದಿದ್ದಾರೆ.
ಜೂನ್ ಜುಲೈಯಲ್ಲಿ ದರ್ಶನ್ ಜೈಲಿಂದ ಬಿಡುಗಡೆ
‘ಜೂನ್, ಜುಲೈ ಒಳಗೆ ದರ್ಶನ್ ಅವರು ಜೈಲಿನಿಂದ ಹೊರಗೆ ಬರುತ್ತಾರೆ. 3-4 ತಿಂಗಳಲ್ಲಿ ಅವರು ಬರುವುದು ಪಕ್ಕಾ. ಆ ನಂಬಿಕೆ ನನಗೆ ಇದೆ. ಈ ರೀತಿ ನಾನು ಮೊದಲು ತುಂಬಾ ಸಿನಿಮಾಗಳಿಗೆ ಹೇಳಿದ್ದೆ. ಈ ಸಿನಿಮಾ ಓಡಲ್ಲ ಬಿಟ್ಟುಬಿಡಿ ಅಂತ ಹೇಳಿದ್ದೆ. ಅದು ಹಾಗೆಯೇ ಆಗಿದೆ. ದೊಡ್ಡ ಲೆವಲ್ನಲ್ಲಿ ಹಿಟ್ ಆಗತ್ತೆ ಅಂತ ಕೂಡ ಹೇಳಿದ್ದೆ’ ಎಂದು ಓಂ ಪ್ರಕಾಶ್ ರಾವ್ ಅವರು ಹೇಳಿದ್ದಾರೆ. ಅಲ್ಲದೆ ಈಗೇನಾದರೂ “ಭೀಮಾ ತೀರದಲ್ಲಿ” ಚಿತ್ರ ಮಾಡುತ್ತಿದ್ದರೆ ದರ್ಶನ್ ಅವರನ್ನು ಹಾಕಿಕೊಂಡು ಮಾಡುತ್ತಿದ್ದೆ ಎಂದು ಅವರು ಹೇಳಿದರು. “ದರ್ಶನ್ ಅವರ ಕೈಯಲ್ಲಿ ಮಾಡಿಸುತ್ತಿದ್ದೆ. ದರ್ಶನ್ ಅವರೊಂದಿಗೆ ಖಂಡಿತಾ ಸಿನಿಮಾ ಮಾಡುತ್ತಿದ್ದೆ” ಎಂದು ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಓಂ ಪ್ರಕಾಶ್ ರಾವ್ ಹೇಳಿದ್ದಾರೆ. ಓಂ ಪ್ರಕಾಶ್ ರಾವ್ ನಿರ್ದೇಶನದ ‘ಭೀಮಾತೀರದಲ್ಲಿ’ ಸಿನಿಮಾ ರೀ ರಿಲೀಸ್ ಆಗುತ್ತಿದೆ. ಮಾರ್ಚ್ 6ರಂದು ಚಿತ್ರ ತೆರೆಗೆ ಬರುತ್ತಿದೆ.





