ಹಬ್ಬದ ಹರಿದಿನಗಳಲ್ಲಿ ದೇವರ ಪೂಜೆಯಷ್ಟೇ ಊಟಕ್ಕೂ ಮಹತ್ವವಿದ್ದೇ ಇರುತ್ತದೆ. ಹಬ್ಬದ ಊಟ ಎಂದರೆ ಸಿಹಿ ಭಕ್ಷಗಳೇ ಪ್ರಾಧ್ಯಾನ್ಯವಾದದರು ಎಲೆ ಕೊನೆಗೇ ಪಾಯಸ ಬಡಿಸಲೇ ಬೇಕೆಂಬ ಶಾಸ್ತ್ರ ಮತ್ತು ನಮ್ಮ ಊಟ ಆರಂಭವಾಗುವುದೇ ಪಾಯಸದಿಂದ. ಇಂದೆಲ್ಲಾ ಬಾಣಸಿಗರು ಬಗೆ ಬಗೆಯ ಪಾಯಸಗಳನ್ನು ಮಾಡುತ್ತಾರಾದರೂ, ಹಿಂದಿನ ಕಾಲದಲ್ಲಿ ಶ್ಯಾವಿಗೆ ಪಾಯಸ ಇಲ್ಲವೇ ಗಸಗಸೆ ಪಾಯಸಕ್ಕೇ ಹೆಚ್ಚಿನ ಪ್ರಾಶಸ್ತ್ರ್ಯ. ಅಂತಹ ಗಸಗಸೆ ಪಾಯಸದ್ದೇ ಕುರಿತಾದ ಮೋಜಿನ ಸಂಗತಿ ಇದೋ ನಿಮಗಾಗಿ.

ಚಿಕ್ಕ ವಯಸ್ಸಿನಿಂದಲೂ ನಾನು ಗಸಗಸೆ ಪಾಯಸ ಪ್ರಿಯ. ಬಹುಶಃ ಈ ಆಭ್ಯಾಸ ನಮ್ಮ ತಾತನಿಂದ ಬಂದಿರಬಹುದೆಂದೇ ನನ್ನ ಅನಿಸಿಕೆ. ನಮ್ಮ ತಾತಾ ಖ್ಯಾತ ವಾಗ್ಗೇಯಕರರು, ಗಮಕಿಗಳು ಮತ್ತು ಹರಿಕಥಾ ವಿದ್ವಾಂಸರಾಗಿದ್ದರು. ರಾಮೋತ್ಸವ, ಗಣೇಶೋತ್ಸವ, ಇಲ್ಲವೇ ದಸರಾ ಸಮಯದಲ್ಲಿ ಒಂದರ ಹಿಂದೆ ಒಂದು ನಿರಂರವಾದ ಕಾರ್ಯಕ್ರಮಗಳಿದ್ದು, ಹಳ್ಳಿ ಹಳ್ಳಿಗಳಲ್ಲಿ ಈಗಿನಂತೆ ಸೌಂಡ್ ಸಿಸ್ಟಮ್ ಇಲ್ಲದಿದ್ದ ಕಾರಣದಲ್ಲಿ ಎಲ್ಲರಿಗೂ ಕೇಳಬೇಕು ಎಂದು ಗಟ್ಟಿ ಧನಿಯಲ್ಲಿ ಹಾಡುತ್ತಿದ್ದ ಕಾರಣ ಅಗಾಗ ಗಂಟಲು ಕಟ್ಟಿಬಿಡುತ್ತಿತ್ತು. ಹಾಗೆ ಗಂಟಲು ಕಟ್ಟಿದಾಗಲೆಲ್ಲಾ ಅದಕ್ಕೆ ರಾಮಬಾಣವಾಗಿ ಮೆಣಸಿನಸಾರು ಉಪಯೋಗಿಸುತ್ತಿದ್ದು ಮತ್ತು ಮುಂದೆ ಗಂಟಲು ಕಟ್ಟಬಾರದು ಎಂಬ ಎಚ್ಚರಿಕೆಯ ಸಲುವಾಗಿ ಗಸಗಸೆ ಪಾಯಸ ಮಾಡುತ್ತಿದ್ದರು.

ತೆಂಗಿನ ಕಾಯಿ ತುರಿ, ಹುರಿದ ಗಸಗಸೆ, ಬೆಲ್ಲ ಮತ್ತು ಏಲಕ್ಕಿಯ ಜೊತೆ, ಹದವಾಗಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಿದ ಬಿಸಿ ಬಿಸಿಯಾದ ಗಸಗಸೆ ಪಾಯಸ ಕುಡಿಯುತ್ತಿದ್ದರೆ, ಉತ್ತಮ ಪೋಷಕಾಂಷದ ಜೊತೆ ದೇಹಕ್ಕೆ ತಂಪನ್ನು ಕೊಡುವು ನೀಡುವದರ ಜೊತೆ, ಬಾಯಿ ಹುಣ್ಣು ಮತ್ತು ನಿದ್ರಾಹೀನತೆಯನ್ನೂ ತಡೆಯುತ್ತದೆ. ಹಾಗಾಗಿ ನಮ್ಮ ಮನೆಯಲ್ಲಿ ನೆನಸಿಕೊಂಡಾಗಲೆಲ್ಲಾ ಗಸಗಸೆ ಪಾಯಸವನ್ನೇ ಹೆಚ್ಚಾಗಿ ಮಾಡುತ್ತಿದ್ದರಿಂದ ನಾನೂ ಸಹಾ ಗಸಗಸೆ ಪಾಯಸ ಪ್ರಿಯನಾಗಿದ್ದರಲ್ಲಿ ಅತಿಶಯೋಕ್ತಿಯೇನಾಗಿರಲಿಲ್ಲ.
ಮದುವೆಯಾದ ನವ ದಂಪತಿಗಳನ್ನು ಸ್ನೇಹಿತರ ಮತ್ತು ಸಂಬಂಧೀಕರ ಮನೆಗಳಲ್ಲಿ ಊಟಕ್ಕೆ ಕರೆಯುವುದು ನಮ್ಮಲ್ಲಿ ಬಂದಿರುವ ಸಂಪ್ರದಾಯ. ಹಾಗೆಯೇ ತೊಂಭತ್ತರ ದಶಕದಲ್ಲಿ ನನ್ನ ಮದುವೆಯಾದ ಸುಮಾರು ಆರು ತಿಂಗಳುಗಳ ಕಾಲ ವಾರಾಂತ್ಯವೆಲ್ಲಾ ಈ ರೀತಿಯ ಊಟಕ್ಕೇ ಮೀಸಲಾಗಿತ್ತು. ಅಪ್ಪಾ ಮತ್ತು ಅಮ್ಮ ಇಬ್ಬರ ಕಡೆಯೂ ದೊಡ್ಡದಾದ ಕುಟುಂಬವರ್ಗ. ಮೇಲಾಗಿ ಎರಡೂ ಕಡೆಯೂ ಅವರಿಬ್ಬರೂ ಹಿರಿಯವರಾಗಿದ್ದ ಕಾರಣ, ಗಂಡು ಮಕ್ಕಳ ಮೊದಲನೇ ಮದುವೆ ನನ್ನದೇ ಆದ ಕಾರಣ ಎಲ್ಲರೂ ದಂಪತಿಗಳ ಜೊತೆ ಅಪ್ಪಾ ಅಮ್ಮನನ್ನೂ ಕರೆದು ಅತಿಥಿ ಸತ್ಕಾರ ಮಾಡುತ್ತಿದ್ದರು. ಅದೇ ರೀತಿ ಇಂದಿರಾನಗರದಲ್ಲಿದ್ದ ನಮ್ಮ ಚಿಕ್ಕಮ್ಮನ ಮನೆಯಲ್ಲಿ ಅದೊಂದು ಶನಿವಾರ ಸಂಜೆ ನಮ್ಮನ್ನು ಊಟಕ್ಕೆ ಕರೆದಿದ್ದರು. ಮಧ್ಯಾಹ್ನವೇ ನಮ್ಮ ತಂದೆ ಮತ್ತು ತಾಯಿ ಇಬ್ಬರೂ ನಮ್ಮ ಚಿಕ್ಕಮ್ಮನ ಮನೆಗೆ ಹೋಗಿದ್ದು, ನಾನು ಸಂಜೆ ನಮ್ಮಾಕಿಯನ್ನು ಆಕೆಯ ಕಛೇರಿಯಿಂದ ಕರೆದುಕೊಂಡು ಚಿಕ್ಕಮ್ಮನ ಮನೆಗೆ ಹೋದಾಗ ಗಂಟೆ ಆರು ಅಥವಾ ಆರುವರೆಯಗಿತ್ತು. ಹೋದ ತಕ್ಷಣ ಕೈಕಾಲು ಮುಖ ತೊಳೆದುಕೊಳ್ಳುವಷ್ಟರಲ್ಲಿಯೇ ಬಿಸಿ ಬಿಸಿ ಜಾಮೂನು ಮತ್ತು ಬೊಂಡದ ಸಮಾರಾಧನೆ ಸಿದ್ಧವಾಗಿತ್ತು.
ಅದು ಈಗಿನಂತೆಯೇ ಡಿಸೆಂಬರ್ ಮಾಸವಾಗಿದ್ದ ಕಾರಣ ಚಳಿಯೊಂದಿಗೆ ಬಿಸಿ ಬಿಸಿ ಬೊಂಡ ಮನಸ್ಸಿಗೆ ಹಿಡಿಸಿದ ಕಾರಣ ನಾಲ್ಕಾರು ಬೊಂಡಗಳು ಹೆಚ್ಚಾಗಿಯೇ ತಿಂದು ಹಾಗೇ ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆವು. ನನ್ನ ನಾಲ್ಕು ಚಿಕ್ಕಮ್ಮಂದಿರಲ್ಲಿ ಈ ಚಿಕ್ಕಮ್ಮನೆಂದರೆ ನನಗೆ ತುಸು ಹೆಚ್ಚಿನ ಪ್ರೀತಿ. ಮದುವೆಗೆ ಮುಂಚೆ ನಮ್ಮ ಮನೆಯಲ್ಲಿಯೇ ಕೆಲವು ವರ್ಷಗಳ ಕಾಲ ಇದ್ದ ಕಾರಣ ನನಗೆ ಅವರು ಚಿಕ್ಕಮ್ಮನಿಗಿಂತ ಅಕ್ಕ ಇಲ್ಲವೇ ಉತ್ತಮವಾದ ಗೆಳತಿಯಂತಿದ್ದರು. ಮದುವೆಗೆ ಮುಂಚೆ ಮತ್ತು ಮದುವೆಯಾದ ಎಷ್ಟೋ ವರ್ಷಗಳ ಕಾಲ ನನ್ನ ಬಟ್ಟೆ ಬರೆಗಳನ್ನು ತೆಗೆದುಕೊಳ್ಳಲ್ಲು ನಾನು ವಿದ್ಯಾರಣ್ಯಪುರದಿಂದ ಇಂದಿರಾನಗರಕ್ಕೆ ಬಂದು ಚಿಕ್ಕಮ್ಮನನ್ನೇ ಆಶ್ರಯಿಸುತ್ತಿದ್ದೆ ಎಂದರೆ ನಮ್ಮಿಬ್ಬರ ಅವಿನಾಭಾವ ಸಂಬಂಧ ಎಷ್ಟಿತ್ತು ಎಂದು ತಿಳಿಯುತ್ತದೆ. ಇನ್ನೂ ನಮ್ಮ ಚಿಕ್ಕಪ್ಪನವರೂ ಸಹಾ ಅದೇ ರೀತಿ ಗೆಳಯನಂತೇ ಇರುತ್ತಿದ್ದ ಕಾರಣ ಎಷ್ಟೋ ದಿವಸ ಕಾಲೇಜಿನಿಂದ ಸೀದಾ ಚಿಕ್ಕಮ್ಮನ ಮನೆಗೆ ಹೋಗಿ ಮಾರನೇ ದಿನ ಚಿಕ್ಕಪ್ಪನ ಶರ್ಟ್ ಇಲ್ಲವೇ ಟಿ-ಶರ್ಟ್ಗಳನ್ನು ಕಾಲೇಜಿಗೆ ಹಾಕಿಕೊಂಡು ಹೋಗುವಷ್ಟು ಆತ್ಮೀಯ ಸಂಬಂಧ ನಮ್ಮಿಬ್ಬರಲ್ಲಿತ್ತು.





