ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದ ಕಾರು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಬಳಿ ಬುಧವಾರ ಬೆಳಗ್ಗೆ ಅಪಘಾತಕ್ಕೀಡಾಗಿದ್ದು, ಬೆಂಗಳೂರಿನ ಒಂದೇ ಕುಟುಂಬದ ಐದು ಮಂದಿ ಮೃತಪಟ್ಟಿದ್ದಾರೆ.
ಚಿತ್ತೂರು ಜಿಲ್ಲೆಯ ಪಲಮನೇರು ಬಳಿ ಈ ದುರ್ಘಟನೆ ನಡೆದಿದ್ದು, ಕಾರು, ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ.
ಮೃತರನ್ನು ಬೆಂಗಳೂರಿನ ರಾಜಾಜಿ ನಗರ ನಿವಾಸಿಗಳಾದ ಮೋಹನ್‌ದಾಸ್ (71), ಅವರ ಪತ್ನಿ ಕುಸುಮಾ (61), ಮಗಳು ಪೂಜಾ (33) ಹಾಗೂ ಕುಟುಂಬದ ಸದಸ್ಯರಾದ ನಾಗರಾಜ್ (61), ಜಯಂತಿ (59) ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಅತಿ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದ ಚಾಲಕ, ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ವಾಹನದಲ್ಲಿ ಸಿಲುಕಿದ್ದ ಶವಗಳನ್ನು ಹೊರತೆಗೆಯಲು ಹರಸಾಹಸಪಟ್ಟರು.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಅತಿವೇಗ ಹಾಗೂ ಚಾಲಕ ನಿದ್ರೆಗೆ ಜಾರಿದ್ದರಿಂದ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೋಹನ್‌ದಾಸ್ ಉದ್ಯಮಿಯಾಗಿದ್ದರು. ನಾಗರಾಜ್ ನಿವೃತ್ತ ಸರಕಾರಿ ನೌಕರ ಎಂದು ತಿಳಿದುಬಂದಿದೆ. ಮೃತರು ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಪ್ರಯಾಣ ಆರಂಭಿಸಿದ್ದರು. ಮಾರ್ಗಮಧ್ಯೆ ಮುಳಬಾಗಲಿನ ಹೋಟೆಲ್ನಲ್ಲಿ ತಿಂಡಿ ತಿಂದು ಪ್ರಯಾಣ ಮುಂದುವರಿಸಿದ್ದರು.
ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಲಾರಿಯ ಕೆಳಗೆ ಸಿಲುಕಿತ್ತು. ಜೆಸಿಬಿ ಸಹಾಯದಿಂದ ಕಾರನ್ನು ಹೊರಗೆ ತೆಗೆಯಲಾಯಿತು. ಮರಣೋತ್ತರ ಪರೀಕ್ಷೆ ನಂತರ ಸಂಬಂಧಿಕರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.





