ರಂಗೋಲಿ ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲದೆ, ಎಲ್ಲ ಕಾಲದಲ್ಲಿಯೂ ಮನೆ ಮುಂದಿನ ಚಿತ್ತಾರವಾಗಿ ಗಮನಸೆಳೆಯುತ್ತದೆ. ಕುರಿತು ಹೆಚ್ಚಿನ ವಿವರಗಳನ್ನು ತಿಳಿಯೋಣವೇ…..?

ರಂಗೋಲಿ ಶುಭ ಸೂಚಕವಾಗಿದ್ದು, ಪ್ರತಿದಿನ ಬೆಳಗ್ಗೆ ಮನೆಯ ಮುಂದೆ ನೀರು ಹಾಕಿ ಸುಂದರವಾದ ರಂಗೋಲಿ ಹಾಕಿ ಮುಂದಿನ ಕೆಲಸಕ್ಕೆ ಅಣಿ ಮಾಡುವುದು ಗೃಹಿಣಿಯ ಕೆಲಸ.

ರಂಗೋಲಿ ಮನೆಯ ಮುಂದೆ, ತುಳಸಿ ಕಟ್ಟೆಯ ಮುಂದೆ, ಅಂಗಳದಲ್ಲಿ, ದೇವರ ಕೋಣೆಯಲ್ಲಿ ಹಾಕುವುದು ಸಾಂಪ್ರದಾಯಕವಾಗಿ ಬೆಳೆದು ಬಂದಿದೆ. ರಂಗೋಲಿ ನೋಡಲು ಸುಂದರವಾಗಿ ಕಾಣುವುದಲ್ಲದೆ, ಮನಸ್ಸಿಗೆ ಆನಂದ ಉಂಟು ಮಾಡುತ್ತದೆ. ರಂಗೋಲಿಯನ್ನಿಟ್ಟು ಅದಕ್ಕೆ ವಿವಿಧ ಬಣ್ಣಗಳನ್ನು ತುಂಬಿದರೆ ಅದರ ಸೊಗಸು ಇನ್ನೂ ಹೆಚ್ಚುತ್ತದೆ. ನಮ್ಮ ಪ್ರಾಚೀನ ಕಲೆಗಳಲ್ಲಿ ರಂಗೋಲಿಯೂ ಒಂದು. 64 ಕಲೆಗಳಲ್ಲಿ ಒಂದಾದ ರಂಗವಲ್ಲಿ ಎಂದರೆ ಹತ್ತು ಹಲವಾರು ಬಣ್ಣಗಳಿಂದ ರಚಿಸಿದ ಬಳ್ಳಿ ಎಂದರ್ಥ ಹಾಗೂ ವರ್ಣಗಳ ವೃಂದ ಎಂದರ್ಥ. ಹಾಗೆಯೇ ರಂಗ+ವಲ್ಲಿ ಎಂಬ ಪದಗಳು ರೂಪಿಗೆ ಬಂದಿರಬೇಕು.

IMG_20240820_184958565

ಕಾಲದಲ್ಲೇ ರಂಗೋಲಿ ಇತ್ತು

ಭಾರತೀಯ ಪರಂಪರೆಯಲ್ಲಿ ರಂಗೋಲಿಗೆ ವಿಶಿಷ್ಟ ಸ್ಥಾನವಿದೆ. ಮಾನವ ಕುಲದ ಮೊದಲ ನಾಗರಿಕತೆ ಆರಂಭವಾದ ಸಿಂಧು, ಮೆಸಪಟೋಮಿಯಾ ಕಾಲದಲ್ಲೇ ರಂಗೋಲಿ ಬಳಕೆಯಲ್ಲಿತ್ತು. ಮಂತ್ರ, ತಂತ್ರ, ವಿದ್ಯೆಗಳಲ್ಲಿ ಬಳಕೆಗೆ ಬಂದ ರಂಗೋಲಿ ಕ್ರಮೇಣ ಮನೆ ಬಾಗಿಲ ಸಿಂಗಾರಕ್ಕೆ ಬಳಸಲಾಯಿತು. ರಂಗೋಲಿ ಧಾರ್ಮಿಕ ಕಣ್ಣಲ್ಲಿ ದುಷ್ಟಶಕ್ತಿ ತಡೆಯುವ, ದೇವರನ್ನು ಸ್ವಾಗತಿಸುವ ಭಕ್ತಿ ಪರಂಪರೆಯಾಗಿಯೂ ಕಂಡಿದೆ. ಹಬ್ಬ ಹರಿದಿನಗಳಲ್ಲಿ ಎಲ್ಲರ ಮನೆಯಲ್ಲಿ, ಅಂಗಳದಲ್ಲಿ ಸ್ಥಾನ ಪಡೆದಿದೆ. ಹಳ್ಳಿಗಳಲ್ಲಿ ಮಹಿಳೆಯರು ರಂಗೋಲಿ ಎಳೆಯುವ ಮೂಲಕವೇ ಅವರಿಗೆ ಆ ದಿನದ ಆರಂಭ.

IMG_20150120_181300696_HDR-(1)

ಮನೆಯ ಅಂದ ಹೆಚ್ಚಳ

ಕವಿಗಳು ರಂಗೋಲಿಯನ್ನು ಕಾವ್ಯಮಯವಾಗಿಯೂ ವರ್ಣಿಸಿದ್ದಾರೆ. `ಮನೆಯ ನೋಡು ಮನೆಯ ಅಂದ ನೋಡು, ರಂಗವಲ್ಲಿ ನೋಡು, ರಂಗವಲ್ಲಿಯ ಪರಿಮಳ ನೋಡು’ ಎಂಬ ಈ ಗೀತೆಯಂತೆ ಮನೆಯ ಅಂದ ಹೆಚ್ಚಿಸುವುದು ಬಾಗಿಲಲ್ಲಿ ನಗುವ ಬಣ್ಣ ಬಣ್ಣದ ರಂಗೋಲಿ ಮಾತ್ರ. ರಂಗೋಲಿ ನೋಡುವವರ ಮನಕ್ಕೆ ತಂಪು, ಕಣ್ಣಿಗೆ ಇಂಪು. ಅದನ್ನು ರಚಿಸುವಾಗ ನಮ್ಮಲ್ಲಿ ಹುದುಗಿರುವ ಕಲೆ ಜಾಗೃತವಾಗುತ್ತದೆ. ಸಾತ್ವಿಕ ಭಾವನೆ ಹೊರಹೊಮ್ಮುತ್ತದೆ. ಹಾಡುತ್ತಾ, ಭಕ್ತಿಯಲ್ಲಿ ಮೈ ಮರೆತ ರಂಗೋಲಿ ಬಿಡಿಸುವಾಗ ನಮ್ಮ ಮನಸ್ಸು ಪರಮಾತ್ಮನಲ್ಲಿ ಲೀನವಾಗುತ್ತದೆ. ಹಿಂದೆ ಮಹಾಸಾದ್ವಿ ಮಹಿಳೆಯರು `ರಂಗ ಒಲಿ, ಪಾಂಡುರಂಗ ಒಲಿ,’ ಎಂದು ಹಾಡುತ್ತಾ ಬ್ರಾಹ್ಮಿ ಮುಹೂರ್ತದಲ್ಲಿ ರಂಗೋಲಿ ಬಿಡಿಸುತ್ತಾ ಪರಮಾತ್ಮನ ನಾಮ ಸ್ಮರಣೆ ಮಾಡುತ್ತಿದ್ದರು.

IMG_20220807_162217

ಹಬ್ಬಗಳಲ್ಲಿ ರಂಗೋಲಿಯ ಮಹತ್ವ

ಹಬ್ಬ ಹರಿದಿನಗಳಲ್ಲಿ ರಂಗೋಲಿಗೆ ಹೆಚ್ಚಿನ ಪ್ರಾಮುಖ್ಯತೆ. ಅಂದು ಮಹಿಳೆಯರು ರಂಗೋಲಿಯನ್ನು ವೈವಿಧ್ಯಮಯವಾಗಿ ಬಿಡಿಸುತ್ತಿದ್ದರು. ಅಷ್ಟದಳ ಪದ್ಮ, ಸ್ವಸ್ತಿಕ, ಕಮಲ, ಕಳಸ ಇನ್ನೂ ಮುಂತಾಗಿ ರಂಗೋಲಿಗಳನ್ನು ಬಿಡಿಸುತ್ತಿದ್ದರು. ಅದಕ್ಕೆ ವಿವಿಧ ಬಣ್ಣಗಳಿಂದ ಹಾಗೂ ವಿವಿಧ ಹೂಗಳಿಂದ ಅಲಂಕರಿಸುತ್ತಿದ್ದರು. ಭಕ್ತಿಯಿಂದ ಬಿಡಿಸುವಾಗ ಪರಮಾತ್ಮನೆ ಅದರಲ್ಲಿ ಲೀನವಾದಂತೆ ಭಾಸವಾಗುತ್ತಿತ್ತು. ಹಾಗೆ ರಂಗೋಲಿ ಬಿಡುವಾಗ ಒಂದು ದೃಷ್ಟಿಕೋನ ಇರುವುದರಿಂದ ಏಕಾಗ್ರತೆ ಉಂಟಾಗುತ್ತದೆ. ಮನಸ್ಸಿಗೆ, ಕಣ್ಣಿಗೆ ಹಿತವನ್ನುಂಟು ಮಾಡುತ್ತದೆ.

IMG_20230322_201436

ಪ್ರಾದೇಶಿಕ ವೈವಿಧ್ಯತೆ

ಭಾರತದ ಎಲ್ಲಾ ಭಾಗಗಳಲ್ಲಿಯೂ ರಂಗೋಲಿ ಹಾಕುವುದು ರೂಢಿಯಲ್ಲಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಅವುಗಳ ಹೆಸರು ಬೇರೆ ಬೇರೆಯಾಗಿವೆ. ಉತ್ತರ ಪ್ರದೇಶದಲ್ಲಿ ಇದಕ್ಕೆ `ಸಾಂಝಿಲ,’ ರಾಜಸ್ಥಾನದಲ್ಲಿ `ಮಂಡನಾ,’ ಬಂಗಾಳದಲ್ಲಿ `ಅಲ್ಪನಾ,’ ಕೇರಳ, ತಮಿಳುನಾಡಿನಲ್ಲಿ `ಕೋಲಮ್,’ ಬಿಹಾರದಲ್ಲಿ `ಅರಿಪಾನ್‌,’  ಗುಜರಾತ್‌ ನಲ್ಲಿ `ಸಾಥಿಯಾ,’ ಆಂಧ್ರಪ್ರದೇಶದಲ್ಲಿ `ಮುಗ್ಗುಲು,’ ಕರ್ನಾಟಕದಲ್ಲಿ `ರಂಗವಲ್ಲಿ ಅಥವಾ ಹಸೆ’ ಎಂಬುದಾಗಿ ಕರೆಯುತ್ತಾರೆ.

IMG_20201130_224811

ರಂಗೋಲಿಯ ವೈವಿಧ್ಯತೆ

ರಂಗೋಲಿಯನ್ನು ಅಕ್ಕಿ ಹಿಟ್ಟು, ಬೆಣಚು ಕಲ್ಲಿನಪುಡಿ, ಸೀಮೆಸುಣ್ಣಗಳನ್ನು ಬೆರೆಸಿ ಬಳಸುತ್ತಾರೆ. ಹಾಗೆ ರಂಗೋಲಿಯನ್ನು ಚುಕ್ಕಿಯಿಂದ, ರೇಖೆಗಳಿಂದ, ಧಾನ್ಯ, ಉಪ್ಪು, ಹೂ ಒಣಗಿಸಿದ ಪುಡಿ ಮಾಡಿದ ಎಲೆ, ಮರದ ಹೊಟ್ಟು ಇವುಗಳಿಂದ ಆಕರ್ಷಕ ರಂಗೋಲಿ ಬಿಡಿಸುತ್ತಾರೆ. ಪ್ರಕೃತಿಯಲ್ಲಿರುವ ತಾರೆ, ನವಿಲು, ಗಿಳಿ, ಹಂಸ, ಎಲೆ, ಬಳ್ಳಿ, ಹಣ್ಣು ಎಲ್ಲಾ ತರಹದ ಬಣ್ಣ ಬಣ್ಣದ ರಂಗೋಲಿ ಹಾಕಿ ಆನಂದಿಸಬಹುದು. ದೇವರ ಮನೆ, ತುಳಸಿ ಗಿಡದ ಮುಂದೆ, ಅಡುಗೆ ಒಲೆಯ ಹತ್ತಿರ, ಹೊಲ, ಗದ್ದೆಗಳಲ್ಲಿ, ಅಲ್ಲದೆ ಊಟದ ಎಲೆಯ ಸುತ್ತ ರಂಗೋಲಿ ಬಿಡಿಸುತ್ತಾರೆ. ರಂಗೋಲಿಗೆ ಅಕ್ಕಿಹಿಟ್ಟು ತುಂಬಾ ಶ್ರೇಷ್ಠ. ರಂಗೋಲಿಯನ್ನು ಹೆಚ್ಚಾಗಿ ಬಿಳಿ ಬಣ್ಣದ ಪುಡಿಯಿಂದಲೇ ಬರೆಯುವರು. ಬಿಳಿ ಬಣ್ಣ ತ್ಯಾಗವನ್ನು ಸೂಚಿಸುತ್ತದೆ ಹಾಗೂ ಅದು ನಿರ್ಮಲ, ಶುಭ್ರತೆ ಎರಡೂ ಸಹ ಆಗಿದೆ.

Photo0016-(2)-(1)

ರಂಗೋಲಿ ಇಲ್ಲದ ಮನೆ

ರಂಗೋಲಿ ಇಲ್ಲದ ಮನೆ ಮನೆಯೇ ಅಲ್ಲ. ಮುಳ್ಳು ಇಲ್ಲದ ಗಡಿಯಾರ ಹೇಗೂ ಹಾಗೆ ರಂಗೋಲಿ ಇಲ್ಲದ ಪೂಜೆ ಪೂಜೆಯೇ ಅಲ್ಲ. ರಂಗೋಲಿ ಇಡುವುದು ಸಂಪ್ರದಾಯವಲ್ಲದೆ, ಮನೆಗೆ ಒಂದು ಸೊಗಸು. ಅಲ್ಲದೆ ಮನೆಗೆ ಶೋಭೆ ಹೆಚ್ಚುತ್ತದೆ. ಮನೆಯ ಹೊಸ್ತಿಲಲ್ಲಿ ಎರಡು ರೇಖೆ ಹಾಕಿದರೆ, ಮನೆಯ ಯಜಮಾನ ಕೆಲಸಕ್ಕೆ ಹೊರಡುವಾಗ ಈ ರೇಖೆ ದಾಟಿಕೊಂಡು ಹೋದರೆ ಕೆಲಸದಲ್ಲಿ ಶುಭವಾಗುವುದೆಂದು ಹಿರಿಯರು ಹೇಳುತ್ತಿದ್ದರು. ರಂಗೋಲಿ ಒಂದು ಮಂಡಲ ಇದ್ದ ಹಾಗೆ. ಚುಕ್ಕಿ ಇಟ್ಟು ಗೆರೆ ಎಳೆ ಎಳೆದು ಸೇರಿಸಿದಾಗ (ಒಂದುಗೂಡಿಸಿದಾಗ) ಒಂದು ಸುಂದರ ರಂಗೋಲಿ ಆಗುತ್ತದೆ. ಹೆಣ್ಣು ಈ ರೀತಿ ರಂಗೋಲಿ ಹಾಕಿದರೆ ತನ್ನ ಕುಟುಂಬದವರನ್ನು ಒಂದುಗೂಡಿಸುತ್ತಾಳೆ ಎಂಬ ನಂಬಿಕೆ ಇದೆ.

ರಂಗೋಲಿ ಕಡಿಮೆಯಾಯಿತು

ಇತ್ತೀಚೆಗೆ ಮನೆಯಲ್ಲಿ ರಂಗೋಲಿ ಬಿಡುವುದು ಕಡಿಮೆಯಾಗಿದೆ. ಪೇಂಟ್‌ ರಂಗೋಲಿ, ಪ್ಲಾಸ್ಟಿಕ್‌, ಕುಂದನ್‌ ರಂಗೋಲಿಗಳನ್ನು ಇಡುತ್ತಾರೆ. ಕೆಲಸಕ್ಕೆ ಹೋಗುವ ಮಹಿಳೆಯರು ಕೆಲಸದ ಒತ್ತಡವಿರುವುದರಿಂದ ರಂಗೋಲಿ ಹಾಕುವ ಗೋಜಿಗೆ ಹೋಗುವುದಿಲ್ಲ. ಹಬ್ಬ ಹರಿದಿನಗಳಲ್ಲಿ ಕಟ್ಟೆಯಲ್ಲಿ ಬಿಡಿಸಿ ಸಿದ್ಧವಿರುವ ಪ್ಲಾಸ್ಟಿಕ್‌ ರಂಗೋಲಿಗಳನ್ನು ಇಟ್ಟು ಬಿಡುತ್ತಾರೆ. ಆದರೆ ಇದರಿಂದ ಮಹಿಳೆಯ ಸೃಜನಾತ್ಮಕ ಶಕ್ತಿಗೆ ಕುಂದು ಬರುವುದರ ಜೊತೆಗೆ ಈ ಕಲೆ ಅಳಿಯಲು ದಾರಿಯಾಗುತ್ತದೆ. ಮನಸ್ಸಿಗೆ ಮುದ ನೀಡುವ ಬಣ್ಣ ಬಣ್ಣಗಳಿಂದ ತುಂಬಿದ ರಂಗೋಲಿ ನಮ್ಮ ನಿಮ್ಮ ಮನೆ ಅಂಗಳ ಅಲಂಕರಿಸುವುದು ಈ ಒತ್ತಡದ ದಿನಗಳಲ್ಲಿ ದೂರವಾದ ಮಾತು.

ಚಿತ್ರ ವಿಚಿತ್ರ ರಂಗೋಲಿ ಬಿಡಿಸದೆ ಶಾಸ್ತ್ರಾನುಸಾರ ರಂಗೋಲಿ ಬಿಡಿಸಿ. ರಂಗೋಲಿ ಮೂಲಕ ನಾವು ದೇವರನ್ನು ಭಕ್ತಿಯಿಂದ ಆವಾಹನೆ ಮಾಡಿದಂತಾಗುತ್ತದೆ.

ಇಂದಿನ ಮಹಿಳೆ ಆಸಕ್ತಿಯಿಂದ ಒಬ್ಬರಿಗೊಬ್ಬರು ಹೇಳಿಕೊಡುವುದರ ಮುಖಾಂತರ ಪ್ರಾಚೀನ ಕಲೆ ರಂಗೋಲಿ ಅಳಿಯದೆ ಮುಂದಿನ ಪೀಳಿಗೆಯವರಿಗೆ ಇರಲಿ ಎಂಬುದೇ ಆಶಯ.

ರಾಜೇಶ್ವರಿ ವಿಶ್ವನಾಥ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ