ಅಂಗವೈಕಲ್ಯ ಮಾನವನ ಅಭಿವೃದ್ಧಿಗೆ ಅಡ್ಡಗೋಡೆಯಲ್ಲ ಎಂದು ಆದರ್ಶ ಶಿಕ್ಷಕಿ ಹರ್ಷಿಯಾ ಬಾನು, ಯಾವ ರೀತಿ ಇಂದಿನ ಆಧುನಿಕ ತರುಣಿಯರಿಗೆ ಮಾರ್ಗದರ್ಶಿಯಾಗಿದ್ದಾರೆ ಎಂದು ತಿಳಿಯೋಣವೇ……?
84 ಜೀವರಾಶಿಗಳಲ್ಲಿ ಈ ಮಾನವ ಜನ್ಮ ಶ್ರೇಷ್ಠವಾದದ್ದು. ಈ ಜನ್ಮದಲ್ಲಿ ಹುಟ್ಟಿ ಬಂದ ಮೇಲೆ ಏನಾದರೂ ಒಂದು ಸಾಧನೆ ಮಾಡಬೇಕು ಎನ್ನುವುದು ಎಲ್ಲರ ತುಡಿತ, ಆದರೆ ನಾವುಗಳು ಏನಾದರೂ ಒಂದು ಜೊಳ್ಳು ಕಾರಣ ಕೊಟ್ಟುಕೊಳ್ಳುತ್ತಾ, ಆ ದಾರಿಯಿಂದ ಹಿಂದೆ ಸರಿಯುತ್ತೇವೆ. ಆದರೆ ನಮ್ಮ ಸಮಾಜದಲ್ಲಿ ಒಂದಷ್ಟು ಸಾಧಕರು ಇದ್ದಾರೆ. ಅವರಿಗೆ ತಮ್ಮಲ್ಲಿದ್ದ ಊನವನ್ನು ಲೆಕ್ಕಿಸದೆ ಈ ಸಮಾಜಕ್ಕೆ ತನ್ನಿಂದಾದ ಏನಾದರೂ ಒಂದು ಕೊಡುಗೆ ನೀಡಬೇಕು ಎನ್ನುವ ಮಹತ್ವಾಕಾಂಕ್ಷೆ.
ಅಂಥವರ ಸಾಲಿನಲ್ಲಿ ನಮ್ಮ ಅರಸೀಕೆರೆಯ ಹರ್ಷಿಯಾ ಬಾನು ಒಬ್ಬರಿದ್ದಾರೆ ಎಂದು ಹೇಳಲು ಹೆಮ್ಮೆ ಎನಿಸುವುದು. ಅರಸೀಕೆರೆಯ ಮೂಲದವರಾದ ಇವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ತಂದೆ ಕರೀಂಸಾಬ್ ಆರೋಗ್ಯ ಇಲಾಖೆಯ ಡಿ ದರ್ಜೆಯ ನೌಕರರಾಗಿದ್ದರು. ತಾಯಿ ರೆಹಾನ್ ಬಾನು ಗೃಹಿಣಿ. ಇವರಿಬ್ಬರ ಮುದ್ದಿನ ಮಗಳೇ ಹರ್ಷಿಯಾ ಬಾನು.
ಮಗಳ ಆಗಮನ ಎಷ್ಟು ಖುಷಿ ತಂದಿತೋ, ಸ್ವಲ್ಪ ದಿನಗಳ ನಂತರ ಅಷ್ಟೇ ಆತಂಕಕ್ಕೆ ಎಡೆ ಮಾಡಿತು. ಮಗಳಲ್ಲಿನ ನ್ಯೂನತೆ ತಾಯಿ ತಂದೆಗೆ ತಿಳಿಯಲು ತುಂಬಾ ಸಮಯ ಹಿಡಿಯಲಿಲ್ಲ. ವೈದ್ಯರಿಗೆ ತೋರಿಸಿದಾಗ ನೇತ್ರ ತಜ್ಞರಲ್ಲಿ ತೋರಿಸಲು ಸಲಹೆ ನೀಡಿದರು.
ಅದರ ಪ್ರಕಾರ, ಹರ್ಷಿಯಾಳನ್ನು ಕಣ್ಣಿನ ವೈದ್ಯರಿಗೆ ತೋರಿಸಿದಾಗ ಒಂದು ಆಘಾತಕಾರಿ ವಿಷಯ ತಿಳಿಯಲ್ಪಟ್ಟಿತು. `ಕನ್ಜಂಟೈಟ್‌ಬ್ಲೈಂಡ್ ನೆಸ್ ವಿಥ್ ಪಾರ್ಷಿಯ್ ಸೈಟ್.’ ಅಂದರೆ ನೂರರಲ್ಲಿ ಐದು ಪರ್ಸೆಂಟ್ ಅಷ್ಟೇ ಕಣ್ಣು ಕಾಣಿಸುವುದು, ಭಾಗಶಃ ಅಂಧತ್ವ.
ಹುಟ್ಟಿನಿಂದಲೇ ಇದ್ದಿರುವುದರಿಂದ ಇದಕ್ಕೆ ಯಾವ ಚಿಕಿತ್ಸೆ ಇಲ್ಲವಾದರೂ, ತಾಯಿ ತಂದೆಯರಲ್ಲಿ ಒಂದು ಆಸೆ. ದೊಡ್ಡ ನಗರಗಳ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರೆ ಮಗಳು ಗುಣಮುಖಳಾಗಬಹುದೆಂದು ಬೆಂಗಳೂರು, ಮಣಿಪಾಲ್, ಪುಣೆಯಂತಹ ಮಹಾನಗರಗಳಿಗೆಲ್ಲ ತೋರಿಸಿದರು. ಎಲ್ಲ ವೈದ್ಯರೂ ಹೇಳಿದ್ದು ಒಂದೇ ಮಾತು. ಮಗಳ ಭವಿಷ್ಯತ್ತಿನ ಚಿಂತೆಯೊಂದಿಗೆ ಮರಳಿದ ದಂಪತಿಗಳು ಚಿಂತೆಯಲ್ಲಿ ಮುಳುಗಿದರು.
ಪ್ರಾಥಮಿಕ ಕಲಿಕೆ
ಕೊನೆಗೆ ತಾವೇ ಧೈರ್ಯ ತೆಗೆದುಕೊಂಡು, ಸಾಮಾನ್ಯ ಮಗುವಿನಂತೆ ಹರ್ಷಿಯಾಳನ್ನು ಬೆಳೆಸುವುದು ಎಂದು ನಿರ್ಧರಿಸಿ ಮುನ್ನಡೆದರು. ಮಗಳು ಬೆಳೆಯುತ್ತಾ ಒಂದೊಂದೇ ಬೆಳವಣಿಗೆಯ ಮೈಲುಗಲ್ಲು ದಾಟುತ್ತಾ ಶಾಲೆಗೆ ಹೋಗುವ ವಯಸ್ಸಿಗೆ ಬಂದಾಗ, ಎಲ್ಲರೂ ಅಂಧರ ಶಾಲೆಗೆ ಸೇರಿಸಲು ಹೇಳಿದಾಗ, ತಂದೆಯ ಮನ ಒಪ್ಪಲಿಲ್ಲ.
ಸಾಮಾನ್ಯ ಶಾಲೆಗೆ ಸೇರಿಸಿದರು. ಆದರೆ ಪುಸ್ತಕವನ್ನು ಕಣ್ಣಿಗೆ ತುಂಬಾ ಹತ್ತಿರ ಹಿಡಿದು ಓದಬೇಕಿತ್ತು. ಇದರಿಂದ ಕಣ್ಣಿಗೆ ನೋವಾಗುತ್ತಿತ್ತು. ಕಪ್ಪು ಹಲಗೆ ಮೇಲೆ ಬರೆದ ಅಕ್ಷರಗಳಂತೂ ಕಾಣುತ್ತಿರಲಿಲ್ಲ. ಆದರೆ ವಿದ್ಯೆ ಕಲಿಯಬೇಕೆಂಬ ಆ ಮಗುವಿನ ಅದಮ್ಯ ಆಸೆಗೆ ಶಿಕ್ಷಕರು ಹಾಗೂ ಸಹ ವಿದ್ಯಾರ್ಥಿಗಳು ಸಹಾಯಕರಾದರು. ಅವರು ಓದಿದ್ದನ್ನು ಕೇಳಿ ಮನದಟ್ಟು ಮಾಡಿಕೊಳ್ಳುತ್ತಿದ್ದಳು.
ತಾನು ವೈದ್ಯೆ ಆಗಬೇಕೆಂಬ ಅದಮ್ಯ ಆಸೆಯಿಂದ ಓದುತ್ತಿದ್ದ ಹರ್ಷಿಯಾಳಿಗೆ ಸತತ ಅಧ್ಯಯನ ಹಾಗೂ ಪ್ರಯೋಗಾಲಯದಲ್ಲಿ ತೊಂದರೆ ಆಗಬಹುದು ಎಂದು ತನ್ನ ಆಸೆಯನ್ನು ಕೈಬಿಟ್ಟಳು. ಆದರೆ ತನ್ನ ತಂದೆ ಕೆಲಸ ಮಾಡುವ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಚೀಟಿ ಬರೆಯುವ ಕೆಲಸ ಮಾಡಿದಳು. ಸತತ ಅಧ್ಯಯನ ನಡೆದೇ ಇತ್ತು. ಇದರ ಫಲವಾಗಿ ಎಂ.ಎ, ಬಿಎಡ್‌ಮುಗಿಸಿದರು.
ಹಲವು ಸಂಸ್ಥೆಗಳಲ್ಲಿ ಸೇವೆ
ಸುಮ್ಮನೆ ಕೂರದೆ ಕೆಲವು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದರು. ನಂತರ ದಿನಗಳಲ್ಲಿ ಪ್ರಥಮ ಪ್ರಯತ್ನದಲ್ಲೇ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಆದರ್ಶ ವಿದ್ಯಾಲಯ ಶಾಲೆಗೆ ಕನ್ನಡ ಶಿಕ್ಷಕಿಯಾಗಿ ನೇಮಕರಾದರು. ಮರುದಿನ ಬೋಧಿಸುವ ಪಾಠವನ್ನು ಮೊದಲ ದಿನವೇ ಮನೆಯಲ್ಲಿ ತಯಾರಿ ಮಾಡಿಕೊಂಡು ಬೋಧಿಸುತ್ತಾರೆ.
ತಮ್ಮ ವಿವಿಧ ಕಲಿಕಾ ವಿಧಾನದಿಂದ ಹರ್ಷಿಯಾ ಬಾನು ಮಕ್ಕಳ ನೆಚ್ಚಿನ ಶಿಕ್ಷಕಿಯಾದಳು. ಇವರು ಹವ್ಯಾಸಿ ಬರಹಗಾರರೂ ಹೌದು. ಹಲವಾರು ಲೇಖನ, ಕವನ, ಸಣ್ಣ ಕಥೆಗಳನ್ನು ಬರೆದಿದ್ದಾರೆ. ಒಂದಷ್ಟು ಪತ್ರಿಕೆಗಳಲ್ಲಿಯೂ ಅವು ಪ್ರಕಟಗೊಂಡಿವೆ. ಸಂಗೀತ, ಕೀಬೋರ್ಡ್ ಕಲಿತಿದ್ದಾರೆ.
ಮೊದಲು ಪ್ರತಿದಿನ ಅರಸೀಕೆರೆಯಿಂದ ಮೂರು ಬಸ್ ಬದಲಿಸಿ 200 ಕಿ.ಮೀ. ಪ್ರಯಾಣಿಸಿ ಶಾಲೆ ತಲುಪುತ್ತಿದ್ದರು. ಈಗ ಅಂತರ ಸ್ವಲ್ಪ ಕಡಿಮೆಯಾಗಿ 70ಕ್ಕೆ ಬಂದಿದೆ.
ಉತ್ಸಾಹದ ಚಿಲುಮೆ
ಇವರು ಉತ್ಸಾಹದ ಚಿಲುಮೆ. ಇವರ ಉತ್ಸಾಹಕ್ಕೆ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಪ್ರೋತ್ಸಾಹ ನೀಡಿದ್ದಾರೆ. ಆದರ್ಶ ಶಿಕ್ಷಕಿ ಪ್ರಶಸ್ತಿ, ಕನ್ನಡರತ್ನ ಪ್ರಶಸ್ತಿ, ರಾಷ್ಟ್ರೀಯ ಅವಂತಿಕಾ ಸಂಸ್ಥೆ ನೀಡುವ ಡಾಕ್ಟರ್ ಅಬ್ದುಲ್ ಕಲಾಂ ಪ್ರಶಸ್ತಿ, ಹೈಬ್ರಿಡ್ ನ್ಯೂಸ್ ಕನ್ನಡ ಮಾಣಿಕ್ಯ ಪ್ರಶಸ್ತಿ…. ಇತ್ಯಾದಿಗಳಲ್ಲದೇ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಕನ್ನಡದ ಅಪ್ಪಟ ಪ್ರತಿಭೆ
ಕನ್ನಡದ ಅಪ್ಪಟ ಪ್ರತಿಭೆ, ಕನ್ನಡ ಭಾಷೆಯ ಅಭಿಮಾನಿಯಾದ ಹರ್ಷಿಯಾ ಬಾನು ತಮ್ಮ ಶಾಲೆಯಲ್ಲಿ ಒಂದು ಯೋಜನೆ ಮಾಡಿದ್ದಾರೆ. ತಾನು 20,000 ರೂ. ಪುಸ್ತಕ ಖರೀದಿಸಿ ಮಕ್ಕಳಿಗೆ ಕೊಟ್ಟು ಅದನ್ನು ಓದಿಸಿ ಬರೆಯಿಸಿ ಮಕ್ಕಳನ್ನು ಕನ್ನಡ ಭಾಷೆ ನುಡಿ ಸಂಸ್ಕೃತಿಯತ್ತ ಒಯ್ದು ನಾಡು ನುಡಿಯನ್ನು ಶ್ರೀಮಂತವನ್ನಾಗಿ ಮಾಡುವ ಯತ್ನದಲ್ಲಿ ತೊಡಗಿದ್ದಾರೆ.
ಯಾವುದೇ ಸಮಸ್ಯೆ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂದು ಬಾನು ತೋರಿಸಿ ಕೊಟ್ಟಿದ್ದಾರೆ. ನಮ್ಮ ನಡುವೆ ಇರುವ ಆದರ್ಶ, ಸರಳ ವ್ಯಕ್ತಿತ್ವದ, ಮಕ್ಕಳ ಪ್ರೀತಿಯ ಶಿಕ್ಷಕಿ ಹರ್ಷಿಯ ಬಾನು ಇಂದಿನ ಆಧುನಿಕ ತರುಣಿಯರಿಗೆ ಸ್ಛೂರ್ತಿಯ ಸೆಲೆಯಾಗಿದ್ದಾರೆ.
– ಡಾ. ದೀಪಾ ಹಿರೇಮಠ





