ಬೌದ್ಧ ಗುಹಾಂತರ ದೇವಾಲಯವಾದ ಅಜಂತಾ ಗುಹೆಗಳ ವರ್ಣಮಯ ಚಿತ್ರಗಳು ಹಾಗೂ ಶಿಲ್ಪಕಲೆಯ ಬಗ್ಗೆ ಸವಿವರವಾಗಿ ತಿಳಿಯೋಣವೇ…..?
ಕಾಣದ ಕೈಗಳಿಂದ ನಿರ್ಮಿತವಾದ ಊಹೆಗೂ ನಿಲುಕದ ಬೌದ್ಧ ಗುಹಾಂತರ ದೇವಾಲಯ ಅಜಂತಾ. ಇಲ್ಲಿಯ ವರ್ಣರಂಜಿತ ಭಿತ್ತಿ ಚಿತ್ರಗಳು ಹಾಗೂ ಬುದ್ಧನ ಪ್ರತಿಮೆಗಳು ವಿಸ್ಮಯಕಾರಿ ಕಥೆಗಳನ್ನು ಸಾರುತ್ತಿವೆ.
ನನಗೆ ಮೊದಲಿನಿಂದಲೂ ಪ್ರವಾಸಕ್ಕಾಗಿ ಊರು ಸುತ್ತುವುದು, ಬೇರೆ ಬೇರೆ ಸ್ಥಳಗಳ ಐತಿಹಾಸಿಕ ಕಥೆಗಳನ್ನು ತಿಳಿದುಕೊಳ್ಳುವುದು ಎಂದರೆ ತುಂಬಾ ಕುತೂಹಲ. ನನಗೆ ಬಹಳ ದಿನಗಳಿಂದ ಅಂಜತಾ ಎಲ್ಲೋರ ಗುಹೆಗಳನ್ನು ನೋಡುವ ಬಯಕೆ ಇತ್ತು. ಅದರಂತೆ ನಾನು ಹಾಗೂ ನನ್ನ ಮನೆಯವರು ಆಗಸ್ಟ್ ತಿಂಗಳಲ್ಲಿ ಪ್ಲಾನ್ ಮಾಡಿ ಹೊರಟೇಬಿಟ್ಟೆ.

ಇತಿಹಾಸ
ಅಜಂತಾ ಗುಹೆಗಳು ಭಾರತದ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯ ಲಂಗೋರ ನದಿಯ ಸುತ್ತ ಆವರಿಸಿಕೊಂಡಿದೆ. ಈ ಗುಹಾ ದೇವಾಲಯವನ್ನು ರಾಷ್ಟ್ರಕೂಟರು ಹಾಗೂ ಶಾತವಾಹನರು ನಿರ್ಮಿಸಿದ್ದು ನಮ್ಮ ಹಿಂದೂ ಸಂಸ್ಕೃತಿಯ ಐತಿಹಾಸಿಕ ಮಹತ್ವವನ್ನು ಪ್ರದರ್ಶಿಸುತ್ತದೆ.
ಈ ಗುಹಾಲಯ ಮೊದಲು ದಟ್ಟ ಅರಣ್ಯದಿಂದ ಸಂಪೂರ್ಣ ಮುಚ್ಚಿಹೋಗಿದ್ದು, ಬ್ರಿಟಿಷರ ಅವಧಿಯಲ್ಲಿ ಅಂದರೆ 1819ರಲ್ಲಿ ಬ್ರಿಟಿಷ್ ಅಧಿಕಾರಿ ಜಾನ್ ಸ್ಮಿತ್ ಹುಲಿಯನ್ನು ಬೇಟೆಯಾಡುತ್ತಾ ಈ ಗುಹೆಯನ್ನು ಬಂದು ತಲುಪಿದರು. ತದನಂತರ ಈ ತಾಣ ಜನರನ್ನು ಆಕರ್ಷಿಸುವ ಮೂಲಕ ಜಗತ್ಪ್ರಸಿದ್ಧಿ ಪಡೆಯಿತು. ಬ್ರಿಟಿಷರ ಕಾಲಾನಂತರ ಮೊಘಲರ ಆಳ್ವಿಕೆಯಲ್ಲಿ ಈ ತಾಣ ಹೈದರಾಬಾದ್ ನಿಜಾಮರ ಅಧೀನದಲ್ಲಿತ್ತು.
ಸ್ವಾತಂತ್ರ್ಯದ ನಂತರ ಮಹಾರಾಷ್ಟ್ರ ಸರ್ಕಾರ ಪ್ರವಾಸೋದ್ಯಮ ಮತ್ತು ಸಂಶೋಧನೆಗಳನ್ನು ಹೆಚ್ಚಿಸಲು ಉತ್ತಮ ಮೂಲಸೌಕರ್ಯ ಸೌಲಭ್ಯಗಳನ್ನು ನಿರ್ಮಿಸಿತು. ಇಂದು ಅಜಂತಾ ಗುಹೆಗಳು ಆಧುನಿಕ ಸೌಕರ್ಯಗಳೊಂದಿಗೆ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ವೀಕ್ಷಣೆಗೆ ಸಕಾಲ
ಚಳಿಗಾಲದಲ್ಲಿ ಹವಾಮಾನ ಆಹ್ಲಾದಕರವಾಗಿದ್ದು, ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಹಾಗೆಯೇ ಮಾನ್ ಸೂನ್ ಸಮಯದಲ್ಲಿ ಬೆಟ್ಟ ಗುಡ್ಡ ಹಚ್ಚ ಹಸುರಿನಿಂದ ಕೂಡಿದ್ದು, ಗುಹೆಗಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬೇಸಿಗೆ ಸಮಯದಲ್ಲಿ ಅತಿಯಾದ ತಾಪವಿರುವುದರಿಂದ ನಡೆಯಲು ಕಷ್ಟವಾಗುತ್ತದೆ. ಆದ್ದರಿಂದ ಪ್ರವಾಸಿಗರು ಬೇಸಿಗೆಯಲ್ಲಿ ಭೇಟಿ ಕೊಡುವುದನ್ನು ತಪ್ಪಿಸಬೇಕು. ಬದಲಿಗೆ ಚಳಿಗಾಲ ಹಾಗೂ ಮಾನ್ ಸೂನ್ ಸಮಯ ಅಜಂತಾ ಗುಹೆಗಳನ್ನು ವೀಕ್ಷಿಸಲು ಸೂಕ್ತ ಸಮಯ ಎನ್ನಬಹುದು.

ನಮ್ಮ ಪಯಣ
ಮೊದಲು ನಾವು ಅಜಂತಾ ಗುಹಾಲಯದ ಕಡೆ ಬೆಳಗ್ಗೆ 7 ಗಂಟೆಗೆ ಪಯಣ ಬೆಳೆಸಿದೆ. ದಾರಿಯಲ್ಲಿ ಸಾಯಿ ಹೋಟೆಲ್ ನಲ್ಲಿ ಮಹಾರಾಷ್ಟ್ರದ ಪ್ರಸಿದ್ಧಿ ಪಡೆದ ತಿಂಡಿಗಳಾದ ಸಾಬುದಾನಿ ಖಿಚಡಿ, ಮಿಸ್ ಪಲಾವ್ ತಿಂದು ಮುಂದೆ ಸಾಗಿದೆ. ಅಜಂತಾ ಗುಹಾಲಯದ ಪ್ರವೇಶ ಟಿಕೆಟ್ ಗಳನ್ನು ಮೊದಲೇ ಆನ್ ಲೈನ್ ನಲ್ಲಿ ಬುಕ್ ಮಾಡಿದ್ದೆ. ಪ್ರವೇಶ ದ್ವಾರದಿಂದ ಗುಹೆಯ ತನಕ ಬಸ್ ನಲ್ಲಿ ನಮ್ಮನ್ನು ಕರೆದುಕೊಂಡ ಹೋಗುತ್ತಾರೆ. ಬಸ್ ನಲ್ಲಿ 20 ನಿಮಿಷಗಳ ಕಾಲ ಕ್ರಮಿಸಿದರೆ ಸಿಗುವುದೇ ಅತ್ಯದ್ಭುತವಾದ ಊಹೆಗೂ ನಿಲುಕದ ಅಜಂತಾ ಗುಹಾಲಯ!

ದೇವಾಲಯದ ವಾಸ್ತುಶಿಲ್ಪ ಕಲೆ
ಅಜಂತಾ ಹಿಂದೂಗಳ ಬೌದ್ಧ ಗುಹಾ ಸ್ಮಾರಕವಾಗಿದ್ದು, ವರ್ಣಚಿತ್ರಗಳು ಮತ್ತು ರಾಕ್ ಕಟ್ ಶಿಲ್ಪಗಳನ್ನು ಒಳಗೊಂಡಿವೆ. ಆದರೆ ಇಲ್ಲಿ ಬಂಡೆಗಲ್ಲನ್ನು ಮೇಲಿನಿಂದ ಕೆಳವರೆಗೆ ಕೆತ್ತಿ ನಿರ್ಮಿಸಲಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ವಿಶೇಷವಾಗಿ ಇಲ್ಲಿನ ಶಿಲ್ಪಕಲೆಗಳು ಸನ್ನೆ, ಮುದ್ರೆ, ಭಂಗಿ ಮತ್ತು ರೂಪದ ಮೂಲಕ ಭಾವನೆಗಳನ್ನು ಪ್ರಸ್ತುತಪಡಿಸುತ್ತವೆ.
ಇಲ್ಲಿ ಒಟ್ಟು 30 ಗುಹೆಗಳಿದ್ದು, ಪ್ರವಾಸಿಗರಿಗೆ 26 ಗುಹೆಗಳನ್ನು ಮಾತ್ರ ವೀಕ್ಷಿಸಲು ಅವಕಾಶವಿರುವುದು. ಇಲ್ಲಿಯ ಗುಹೆಗಳಲ್ಲಿನ ಕಲಾಕೃತಿಗಳು ಗೌತಮ ಬುದ್ಧನ ಜೀವನ ಚಕ್ರದ ಕಥೆಯನ್ನು ಸಾರುತ್ತವೆ. ಇಲ್ಲಿ ನಾವು ನೋಡಲೇ ಬೇಕಾದ ಗುಹೆಗಳೆಂದರೆ, ಗುಹೆ ನಂಬರ್ 1, 2, 4, 9, 10, 16, 17, 19, 26.

ಇಲ್ಲಿಯ ಗುಹೆ ನಂಬರ್ 1, 2, 4ರಲ್ಲಿ ಬುದ್ಧನ ವಿಗ್ರಹ ಹಾಗೂ ಅವನ ಅನುಯಾಯಿಗಳಾದ ಪದ್ಮಪಾಣಿ ಹಾಗೂ ವಜ್ರಪಾಣಿಯ ಚಿತ್ರಗಳನ್ನು ನೋಡಬಹುದು. ಗೋಡೆಯ ಮೇಲ್ಭಾಗದಲ್ಲಿ ಸುಂದರವಾದ ಹೂಬಳ್ಳಿಗಳು, ಹಂಸಪಕ್ಷಿ, ಹಸು, ಮಂಗನ ಕುಚೇಷ್ಟೆ, ಆನೆ, ಜಿಂಕೆಗಳ ಪೇಂಟಿಂಗ್ಸ್ ನೋಡಬಹುದು.
ಹಾಗೆಯೇ ದನ ಕಾಯುವ ಮನುಷ್ಯ, ಕುರಿ ಮೇಯಿಸುವ ಹುಡುಗ, ಜನರ ಹರಟೆ ಮಾತುಗಳು, ಆಟ ಆಡುವ ಮಕ್ಕಳು ಹೀಗೆ ಜನಸಾಮಾನ್ಯರ ಜೀವನವನ್ನು ಪ್ರತಿಬಿಂಬಿಸುವ ಕಲೆಯನ್ನು ಚಿತ್ರಿಸಲಾಗಿದೆ. ನಂಬರ್ 9, 10, 16 ಗುಹೆಗಳಲ್ಲಿರುವ ಪ್ರತಿ ಸ್ತಂಭದಲ್ಲೂ ಅತ್ಯದ್ಭುತ ಶಿಲ್ಪಕಲೆಗಳಾದ ಅಮೃತ ಕಳಸ, ಹೂಮಾಲೆ, ಜಿಂಕೆಮರಿಗಳು, ಕುದುರೆ ಹಾಗೂ ಉಬ್ಬುತಗ್ಗು ಚಿತ್ರಗಳನ್ನು ಅತಿ ಸೂಕ್ಷ್ಮವಾಗಿ ಕೆತ್ತಲಾಗಿದೆ. ಇಲ್ಲಿ ನಾವು ಬೌದ್ಧ ಸನ್ಯಾಸಿಗಳ ವಿಶ್ರಾಂತಿ ಕೊಠಡಿಗಳು ಹಾಗೂ ಪ್ರಾರ್ಥನಾ ಮಂದಿರವನ್ನು ನೋಡಬಹುದು. ಇಲ್ಲಿನ ಗೋಡೆಗಳ ಮೇಲೆ ಹೆಂಗಸರು ಹಾಗೂ ಗಂಡಸರು ಪಿಂಗಾಣಿ ಪಾತ್ರೆಯಲ್ಲಿ ಚಹಾ ಹಾಕಿ ತಾವು ಕಪ್ ಮತ್ತು ಸಾಸರ್ ನಲ್ಲಿ ಚಹಾ ಹೀರುತ್ತಿದ್ದಾರೆ, ಮತ್ತೊಂದು ವಿಶೇಷವಾಗಿ ನಾನು ಗಮನಿಸಿದ್ದು ಅವರ ಕಾಲಿನಲ್ಲಿ ಧರಿಸಿರುವ ಸಾಕ್ಸ್ ಗಳು ಅಂದರೆ ಆಗಿನ ಕಾಲದಲ್ಲೂ ಜನರು ಚಳಿಗಾಲದಲ್ಲಿ ಸಾಕ್ಸ್ ಧರಿಸುತ್ತಿದ್ದರು ಎಂಬುದು ವಿಶೇಷತೆ.

ಗುಹೆ ನಂಬರ್ 19ರ ಪ್ರವೇಶ ದ್ವಾರವಂತೂ ಅತಿ ಮನೋಹರವಾಗಿದೆ. ಬುದ್ಧ ಹಾಗೂ ಅವನ ಅನುಯಾಯಿಗಳ ವಿಗ್ರಹವನ್ನು ಅತಿ ಆಕರ್ಷಕವಾಗಿ ಕೆತ್ತಲಾಗಿದ್ದು, ಒಳ ಭಾಗದಲ್ಲಿ ಬುದ್ಧನ ಮೊನಾಸ್ಟ್ರಿ ಸ್ತಂಭಗಳಿವೆ. 26ನೇ ಗುಹೆಯಲ್ಲಿ ಬುದ್ಧನು ಶಯನ ಸ್ಥಿತಿಯಲ್ಲಿದ್ದು, ತನ್ನ ದೇಹವನ್ನು ಬಿಟ್ಟು ದೇವರಲ್ಲಿ ಐಕ್ಯವಾಗುವ ಸಂದೇಶವನ್ನು ಸಾರುತ್ತಿದ್ದಾನೆ.

ಶಯನ ಸ್ಥಿತಿಯಲ್ಲಿರುವ ಬುದ್ಧನ ಕೆಳಭಾಗದಲ್ಲಿ ಅವನ ಅನುಯಾಯಿಗಳು ಆತನ ದೇಹ ತ್ಯಾಗದಿಂದ ದುಃಖಿತರಾದರೆ, ಮೇಲ್ಭಾಗದಲ್ಲಿ ದೇವತೆಗಳು ಸಂತೋಷದಿಂದ ಅವನನ್ನು ಬರಮಾಡಿಕೊಳ್ಳುವ ಕಥೆಯನ್ನು ಅತಿ ಸುಂದರವಾಗಿ ಶಿಲ್ಪಿ ಕೆತ್ತನೆ ಮಾಡಿದ್ದಾನೆ. ಶಿಲ್ಪಿಯ ಈ ಅತ್ಯದ್ಭುತವಾದ ಕಲ್ಪನೆ ನೋಡಿ ನಾನು ಒಂದು ಕ್ಷಣ ದಂಗುಬಡಿದಂತಾಗಿ ಮೌನವಾಗಿ ನಿಂತುಬಿಟ್ಟೆ. ಹಾಗೆಯೇ ಈ ಗುಹೆಯಲ್ಲಿ ಬುದ್ಧನು ಜನರಿಗೆ ಬೋಧನೆ ಮಾಡುತ್ತಿರುವ, ಸನ್ಯಾಸಿಗಳು ಧ್ಯಾನ ಮಾಡುತ್ತಿರುವ, ನಾಟ್ಯ ರಾಣಿಯರು ನರ್ತಿಸುತ್ತಿರುವ, ಹೂ ಗಿಡಗಳ, ಪ್ರಾಣಿ ಪಕ್ಷಿಗಳ ನಯನ ಮನೋಹರವಾದ ಕೆತ್ತನೆಗಳನ್ನು ಕಾಣಬಹುದು.

ಹೀಗೆ ಎಲ್ಲಾ ಗುಹಾಲಯಗಳನ್ನು ನೋಡಿಕೊಂಡು ಒಮ್ಮೆ ಹಿಂದೆ ತಿರುಗಿ ನೋಡಿದರೆ ಇಡೀ ಅಜಂತಾ ಗುಹಾಲಯ ಕುದುರೆಯ ಲಾಳದ (U) ರೀತಿ ಇರುವಂತೆ ಭಾಸವಾಗುತ್ತದೆ. ನಾವು ಸಂಪೂರ್ಣ ಅಜಂತಾ ಗುಹಾಲಯವನ್ನು ನೋಡಿ ಮುಗಿಸುವ ಹೊತ್ತಿಗೆ ಮಧ್ಯಾಹ್ನ 3.30 ಆಗಿತ್ತು. ನಮಗೆ ಗುಹಾಲಯದ ವೀಕ್ಷಣೆಗೆ ಇಷ್ಟೊಂದು ಸಮಯ ಬೇಕಿರುವಾಗ, ಇಂಥ ಅಮೋಘವಾದ ಗುಹಾಲಯಗಳನ್ನು ನಿರ್ಮಿಸಲು ಶಿಲ್ಪಿಗಳಿಗೆ ಎಷ್ಟು ಸಮಯ ಹಿಡಿದಿರಬಹುದು ಎಂದು ನಾನು ಯೋಚಿಸುತ್ತಾ ನಿಂತುಬಿಟ್ಟೆ. ಒಟ್ಟಿನಲ್ಲಿ ಈ ವಿಸ್ಮಯಕಾರಿ ಗುಹಾಲಯವನ್ನು ನಿರ್ಮಿಸಿದ ಶಿಲ್ಪಿಗಳು ಸಾಮಾನ್ಯರಲ್ಲ. ಅವರು ದೇವಾನುದೇವತೆಗಳ ಅನುಗ್ರಹವನ್ನು ಪಡೆದುಕೊಂಡು ದೇವರ ಆಜ್ಞೆಯಂತೆ ಗುಹಾಲಯವನ್ನು ನಿರ್ಮಿಸಿದ ದೇವಶಿಲ್ಪಿಗಳು ಎಂದು ನನಗೆ ಭಾಸವಾದುದು ನಿಜಕ್ಕೂ ಸತ್ಯ. ಆ ದಿನ ರಾತ್ರಿ ಇಡೀ ಬುದ್ಧನ ಪ್ರತಿಮೆಗಳನ್ನು ನನ್ನ ಮನಸ್ಸು ಹಾಗೂ ಕಣ್ಣಿನಲ್ಲಿ ತುಂಬಿಕೊಂಡು ಸಂತೋಷದಿಂದ ನಿದ್ರೆಗೆ ಜಾರಿದೆವು. ಎಲ್ಲೋರದ ಕೈಲಾಸನಾಥ ಗುಹಾಲಯದ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ತಿಳಿಯೋಣವೇ…..?
– ಸಂಜ್ಞಾ ಪಿ. ಭಟ್.





