ಪ್ರಕಾರ: ಚತುಶ್ರಯ ಮಂದಾನಿಲ ಲಯ ಚೌಪದಿ
ಉಸಿರನು ನೀಡುವ ಮರಗಳು ಶಿಶಿರದಿ
ಬಸವಳಿಯುತ ಬೋಳಾಗಿರಲು
ಹಸಿವೆಯ ನೀಗುವ ಹಸಿರೆಲೆಯೆಲ್ಲವು
ಕಸದೊಲು ನೆಲದೊಳಗುದುರಿರಲು ॥೧॥
IMG-20260319-WA0110
ಮರಣದ ಭಯದಲಿ ವೃಕ್ಷಗಳೆಲ್ಲವು
ತರಣಿಯ ಬಳಿಯಲಿ ಕೇಳಿದವು
ಧರಣಿಯ ಮೇಗಡೆ ಬಿಸಿಲನೆ ಕಾಣೆವು
ಕರುಣೆಯ ತೋರುತ ಕಾಪಾಡು ॥೨॥
IMG-20260319-WA0108
ಮರಗಳ ಮಾತನು ಕೇಳುತ ದಿನಪನು
ಭರವಸೆ ನೀಡುತಲರುಹಿದನು
ಬರುವೆನು ಬೇಗ ವಸಂತನ ಜೊತೆಯಲಿ
ತರುವೆನು ಸಂತಸವನು ನಾನು ॥೩॥
IMG-20260319-WA0060
ಹುಡುಕುತ ಹೊರಟನು ಸರಿಯುತಲನುದಿನ
ಬಡಗಣದಿಕ್ಕಿಗೆ ಭಾಸ್ಕರನು
ಸಡಗರದಿಂದ ವಸಂತನ ಸಂಗಡ
ಪೊಡವಿಯಲೀದಿನ ಬಂದಿಹನು ॥೪॥
IMG-20260319-WA0023
ತೊಡುತಲಿ ಹಸಿರಿನ ಕೆಂಪಿನ ಚಿಗುರೆಲೆ
ಪಡೆಯುತ ಜೀವನ ಹೊಸತಾಗಿ
ಗಿಡಮರಬಳ್ಳಿಗಳೆಲ್ಲವು ಮುದದಲಿ
ಪೊಡಮೊಟ್ಟವು ರವಿಯನು ಬಾಗಿ ॥೫॥
IMG-20260319-WA0107
ಧರೆಯಲಿ ಕಾಣುವ ಪ್ರಕೃತಿಯ ಕೌತುಕ
ಗುರುತಿಸಿ ನಮ್ಮಯ ಪೂರ್ವಜರು
ವರುಷದ ಮೊದಲನೆ ಪರ್ವದ ಪದವಿಯ
ಬಿರುದು ಯುಗಾದಿಗೆ ನೀಡಿಹರು ॥೬॥
                       -ಮೃತ್ಯುಂಜಯ ತೇಜಸ್ವಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ