ಆರ್ಯಾಂಬಾ ನೃತ್ಯ ಶಾಲೆಯ ರೂವಾರಿ, ನೃತ್ಯಗಾರ್ತಿ, ನಾಟ್ಯ ಸರಸ್ವತಿ ಶೈಲಜಾ ಪರಾಗ್ತಮ್ಮ ಅಮೋಘ ಭರತನಾಟ್ಯ ನೃತ್ಯ ಪ್ರದರ್ಶನಗಳಿಂದ ದೇಶ, ವಿದೇಶಗಳಲ್ಲಿ ಅಪಾರ ಖ್ಯಾತಿ ಗಳಿಸಿದ್ದಾರೆ. ಇವರ ಸಾಧನೆಯ ಕುರಿತು ವಿವರವಾಗಿ ತಿಳಿಯೋಣವೇ…..?

ಆರ್ಯಾಂಬಾ ನೃತ್ಯ ಶಾಲೆಯ ಒಳಗೆ ಕಾಲಿರಿಸಿದರೆ ನಿಮ್ಮನ್ನು ಸ್ವಾಗತಿಸುವುದು ಅರಳು ಕಂಗಳ ನಗುಮುಖದ ನೃತ್ಯಪಟು ಶೈಲಜಾ ಪರಾಗ್‌ ಜೋಬನ್‌ ಪುತ್ರ. ತಮ್ಮಲ್ಲಿಗೆ ಬಂದವರನ್ನು ಬಹಳ ಆದರದಿಂದ ಗೌರವಿಸಿ, ಸ್ನೇಹದಿಂದ ಮಾತನಾಡಿಸಿ ಕ್ಷಣಗಳಲ್ಲಿಯೇ ಅವರ ಸಂಕೋಚವನ್ನು ದೂರ ಮಾಡುತ್ತಾರೆ. ಸದಾ ಏನನ್ನಾದರೂ ಹೊಸದನ್ನು ಪ್ರಸ್ತುತ ಪಡಿಸಬೇಕು, ನೃತ್ಯದಲ್ಲಿ ನಾವೀನ್ಯತೆ ಇರಬೇಕು ಎನ್ನುವ ತನಕ, ತುಡಿತ, ಕಾತರ ಶೈಲಜಾರಿಗಿದೆ.

ಅಕ್ಷಯ ನಗರದಲ್ಲಿ ಇವರು ತಮ್ಮ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ. ನಗುಮುಖದ ಚೆಲುಲೆ, ನೃತ್ಯಗಾರ್ತಿ ಶೈಲಜಾ ಅಪ್ಪಟ ಕನ್ನಡತಿ. ಮುದ್ದು ಮುಖದ ಒಡತಿ, ನಾಟ್ಯ ಸರಸ್ವತಿ, ಹಮ್ಮು ಬಿಮ್ಮು ತೋರದ ಶಿಸ್ತಿನ, ಸರಳ ಸ್ವಭಾವದ ಶೈಲಾ ಸಾತ್ವಿಕ ಗುಣದವರು ಎಂದರೆ ಸರಿಯಾದೀತು.

ಪ್ರಾಥಮಿಕ ಬೆಳವಣಿಗೆ

ಇವರು ಹುಟ್ಟಿದ್ದು ರಾಯಚೂರಿನಲ್ಲಿ. ತಂದೆ ಶ್ರೀನಿವಾಸ್‌, ತಾಯಿ ನಿರ್ಮಲಾ. ಮಕ್ಕಳನ್ನು ಬಹಳ ಶಿಸ್ತಿನಿಂದ ಬೆಳೆಸಿದರು. ಸದಾ ಮಕ್ಕಳನ್ನು ಉತ್ತೇಜಿಸುವ ಸ್ವಭಾವದ ತಂದೆ, ಬೆನ್ನು ತಟ್ಟಿ ಪ್ರೋತ್ಸಾಹಿಸುವ ತಾಯಿ. ಇವರ ಪಾಲನೆ ಪೋಷಣೆಯಲ್ಲಿ ಶೈಲಾ ಕಲಿತದ್ದು ಬಹಳವೇ ಎನ್ನಬೇಕು.

ಅವರ ಐದು ಜನ ಮಕ್ಕಳಲ್ಲಿ ಶೈಲಾ ಎರಡನೆಯವರು. ಇವರ ತಂದೆ ಯುನೈಟೆಡ್‌ ಇನ್ಶೂರೆನ್ಸ್ ನ ಸೆಂಟ್ರಲ್ ಗವರ್ನಮೆಂಟ್ ಉದ್ಯೋಗಿ. ಆಫೀಸರ್‌ ಆಗಿ ಬಡ್ತಿ ಪಡೆದು ಶಿವಮೊಗ್ಗಕ್ಕೆ ವರ್ಗವಾದ್ದರಿಂದ ತಮ್ಮ ಪರಿವಾರದೊಂದಿಗೆ ಅಲ್ಲಿ ಬಂದರು. ಅಲ್ಲಿ ಶೈಲಜಾರಿಗೆ ಎಲ್ಲವೂ ಹೊಸತು. ಮಾತು ಬೇರೆ ರೀತಿಯಾಗಿತ್ತು.

ನೃತ್ಯಾಭ್ಯಾಸದ ಆರಂಭ

ಹಾಗಾಗಿ ಸದಾ ಮನೆಯಲ್ಲಿ ಇದ್ದು ಯಾರ ಜೊತೆಗೂ ಸೇರದೆ, ಬೇರೆಯಾಗಿಯೇ ಯಾವುದೇ ಚಟುವಟಿಕೆ ಇಲ್ಲದೇ ಇದ್ದ ಮಗಳನ್ನು ನೋಡಿ ಅವರ ತಾಯಿ ಅವಳನ್ನು ನೃತ್ಯ ಶಾಲೆಗೆ ಸೇರಿಸಿದರೆ ಹೇಗೆ? ಎಂದು ಯೋಚಿಸಿ, ತಡ ಮಾಡದೇ ತಮ್ಮ ಮಗಳಿಗಾಗಿ ನೃತ್ಯ ಗುರುವನ್ನು ಹುಡುಕಿಯೇಬಿಟ್ಟರು. ಶೈಲಜಾಗೆ ಮನಸ್ಸಿಲ್ಲದಿದ್ದರೂ ನೃತ್ಯ ಶಾಲೆಗೆ ಪಾದಾರ್ಪಣೆ ಮಾಡಲೇಬೇಕಾಯಿತು.

ತಾಯಿಯ ಮಾರ್ಗದರ್ಶನ

ಮೊದ ಮೊದಲು ಬೇಸರಿಸಿಕೊಂಡ ಮಗಳಿಗೆ ನೀನಿದನ್ನು ಕಲಿಯಲೇಬೇಕು, ನೀನೊಬ್ಬ ನೃತ್ಯಗಾರ್ತಿ ಆಗುವುದನ್ನು ನಾನು ನೋಡಬೇಕು, ಎಂದು ಪ್ರೋತ್ಸಾಹಿಸಿದ ತಾಯಿಯಿಂದಾಗಿ ಶೈಲಜಾ ನೃತ್ಯ ಕಲಿತು ಪರಿಣಿತೆಯಾದರು ಎಂದರೆ ಸರಿಯಾದೀತು.

ರಾಯಚೂರಿನ ಒರಟು ಭಾಷೆ, ಅಲ್ಲಿನ ಸಂಸ್ಕೃತಿ, ಸ್ವಭಾವಕ್ಕೆ ಹೊಂದಿಕೊಂಡು ಬೆಳೆದಿದ್ದ ಶೈಲಾ, ಕ್ರಮೇಣ ಶಿವಮೊಗ್ಗದಲ್ಲಿ ಅಲ್ಲಿನ ವಾತಾವರಣ, ಪರಿಸರಕ್ಕೆ ಹೊಂದಿಕೊಂಡಿದ್ದರು.

ನೃತ್ಯಾಭ್ಯಾಸದ ಕಲಿಕೆ

ಆಗಿನ ಖ್ಯಾತ ನೃತ್ಯ ಕಲಾವಿದೆಯಾಗಿದ್ದ ಉಷಾ ದಾತಾರ್‌ ಅವರ ಸಹೋದರಿ ಗೀತಾ ದಾತಾರ್‌ ಬಳಿ ನೃತ್ಯ ಕಲಿಯಲು ಆರಂಭಿಸಿದ್ದರು. ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ಒಬ್ಬರೇ ಗುರುಗಳ ಬಳಿಯಲ್ಲಿ ನೃತ್ಯಾಭ್ಯಾಸ ಮಾಡಿದ್ದರು. ಜೂನಿಯರ್ ಪರೀಕ್ಷೆಯನ್ನು 1997ರಲ್ಲಿ ಹಾಗೂ ಸೀನಿಯರ್‌ ಪರೀಕ್ಷೆಯನ್ನು 2001ರಲ್ಲಿ ಮುಗಿಸಿದ್ದರು. 2005ರಲ್ಲಿ ವಿದ್ವತ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನೂ ಮುಂದುವರಿಸಿದರು.

ಭರತನಾಟ್ಯದ ಅಧ್ಯಯನ

ನಂತರ ಫೈನಲ್ ಆರ್ಟ್ಸ್ ನಲ್ಲಿ ಭರತನಾಟ್ಯವನ್ನು ಮೇಜರ್‌ ಸಬ್ಜೆಕ್ಟ್ ಆಗಿ ತೆಗೆದುಕೊಂಡು ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಮುಂದೆ ಮುಂಬೈನಲ್ಲಿನ ಗಂಧರ್ವ ಮಹಾವಿದ್ಯಾಲಯದಲ್ಲಿ ನಡೆಸಲಾಗುವ ವಿಶಾರದ ಪದವಿಯನ್ನು ಪಡೆದಿದ್ದಾರೆ.

ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಹಳ ಜನಪ್ರಿಯತೆ ಪಡೆದರು. ಅವರ ಪತಿ ಪರಾಗ್‌ ಜೋಬನ್‌ ಪುತ್ರ. ಇವರದು ಪ್ರೇಮ ವಿವಾಹ. ವಿವಾಹದ ನಂತರ ಬೆಂಗಳೂರಿಗೆ ಬಂದು ನೆಲೆಸಿ, ಈಗ ಬೆಂಗಳೂರಿನ ನಿವಾಸಿಯಾಗಿದ್ದಾರೆ. ವೈವಾಹಿಕ ಜೀವನ

ಅವರ ಪತಿ ಮೂಲತಃ ಗುಜರಾತಿನವರು ಸ್ವತಃ ಒಬ್ಬ ಉದ್ಯಮಿಯಾಗಿದ್ದರೂ ತಮ್ಮ ಪತ್ನಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ, ಶೈಲಜಾರ ಎಲ್ಲಾ ಕೆಲಸದಲ್ಲಿಯೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು, ಇವರ ನೃತ್ಯ ಕಾರ್ಯಕ್ರಮಗಳಲ್ಲಿ ಜೊತೆಯಾಗಿರುವುದು ಅವರಿಗೆ ಬಹಳ ಹೆಮ್ಮೆಯ ಸಂಗತಿಯಾಗಿದೆ.

ತಮ್ಮ ಜೀವನದಲ್ಲಿ ಗುಜರಾತ್‌ ಮತ್ತು ಕರ್ನಾಟಕ ಎರಡರ ಸಂಸ್ಕೃತಿ, ಸಂಪ್ರದಾಯಗಳನ್ನೂ ಅಳವಡಿಸಿಕೊಂಡು ಜೀವನವನ್ನು ಬಹಳ ಅನ್ಯೋನ್ಯತೆಯಿಂದ ಕಳೆಯುತ್ತಿರುವ ಶೈಲಜಾ, ಪ್ರಸ್ತುತ ಅರಕೆರೆಯಲ್ಲಿ ಇರುವ `ಮಿತ್ರ ಅಕಾಡೆಮಿ’ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ಸೇಲೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿ ಪಾರಿತೋಷಕಗಳು

ತಮ್ಮ ನೃತ್ಯ ಪ್ರದರ್ಶನದಿಂದಾಗಿ ಬಹಳಷ್ಟು ಪಾರಿತೋಷಕಗಳನ್ನು ಪಡೆದಿರುವುದು ಹೆಮ್ಮೆಯ ಸಂಗತಿ. ತಮ್ಮ ಶಾಲೆಯ ಮಕ್ಕಳನ್ನು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಯಾರು ಮಾಡಿ ನೃತ್ಯ ಪ್ರದರ್ಶನ ನೀಡುತ್ತಾ ಬಹಳ ಜನಪ್ರಿಯತೆಯನ್ನು ಪಡೆದಿದ್ದಾರೆ. ಹಂಪಿ ಉತ್ಸವ, ಲಖಂಡಿ ಉತ್ಸವ, ಕರಾಳಿ ಉತ್ಸವ ಹಾಗೂ ಕರ್ನಾಟಕ ಸರ್ಕಾರ ನಡೆಸುವ ಜಾನಪದ ಜಾತ್ರೆಯಲ್ಲಿಯೂ ತಮ್ಮ ತಂಡದೊಂದಿಗೆ ಭಾಗವಹಿಸಿದ ಹೆಗ್ಗಳಿಕೆ ಇವರಿಗಿದೆ.

ವಿವಿಧ ನೃತ್ಯ ಪ್ರದರ್ಶನಗಳು

ಬಹಳಷ್ಟು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳಲ್ಲಿಯೂ ತಮ್ಮ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ನೀಡಿ ಬಹಳಷ್ಟು ಬಹುಮಾನಗಳನ್ನೂ ಪಡೆದಿರುತ್ತಾರೆ. ಇವರು ನೀಡಿರುವ ನೃತ್ಯ ಪ್ರದರ್ಶನಗಳಲ್ಲಿ ಮಹಿಷಾಸುರ ಮರ್ದಿನಿ, ಭ್ರೂಣ ಹತ್ಯೆ ಹಾಗೂ ಪ್ರಕೃತಿಗೆ ಸಂಬಂಧಪಟ್ಟ ಕಾರ್ಯಕ್ರಮಗಳೇ ಹೆಚ್ಚು. ಅನೇಕ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿನೀತ ಸ್ವಭಾವದ ಶೈಲಜಾ ಮತ್ತಷ್ಟು ಪ್ರಖ್ಯಾತರಾಗಲಿ ಎನ್ನುವುದೇ ಎಲ್ಲರ ಆಶಯ!

ಸುಜಲಾ ಘೋರ್ಪಡೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ