ರಾಜ್ಯದಲ್ಲಿ ಎಲ್‌ಪಿಜಿ ಕೊರತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡುತ್ತಿದ್ದ ಎಲ್‌ಪಿಜಿ ಹಂಚಿಕೆಯನ್ನು ಶೇ.68ಕ್ಕೆ ಹೆಚ್ಚಿಸಿದ್ದು, ಅಗತ್ಯ ಹಾಗೂ ಆದ್ಯತೆಗೆ ಅನುಗುಣವಾಗಿ ವಿತರಣೆ ಆರಂಭಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.

ಭಾನುವಾರದಿಂದ ಪ್ರತಿದಿನ 29,463 ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳನ್ನು ಪೂರೈಸಲಾಗುತ್ತಿದ್ದು, ಹೋಟೆಲ್ ಮತ್ತು ಉಪಹಾರ ಗೃಹಗಳಿಗೆ ದಿನಕ್ಕೆ 17,500 ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಅವರ ಸಾಮಾನ್ಯ ಬೇಡಿಕೆಯ 60 ಶೇಕಡದಷ್ಟು ಪೂರೈಕೆ ಸಾಧ್ಯವಾಗಿದೆ ಎಂದಿದ್ದಾರೆ.

ಆದ್ಯತೆ ಮೇರೆಗೆ ತರಣೆಯ ಭಾಗವಾಗಿ ಶಿಕ್ಷಣ ಸಂಸ್ಥೆಗಳು ಮತ್ತು ವಸತಿಗೃಹಗಳಿಗೆ 4,200 ಸಿಲಿಂಡರ್‌ಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಿಗೆ 1,200 ಸಿಲಿಂಡರ್‌ಗಳು, ಬೀಜ ಸಂಸ್ಕರಣಾ ಘಟಕಗಳು ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳಿಗೆ 6,000 ಸಿಲಿಂಡರ್‌ಗಳನ್ನು ಪೂರೈಸಲಾಗುತ್ತಿದೆ. ಅಗತ್ಯವಿರುವವರಿಗೆ 563 ಸಿಲಿಂಡರ್‌ಗಳನ್ನು ವಿಶೇಷವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪರಿಸ್ಥಿತಿ ಸುಧಾರಿಸುವವರೆಗೆ ಎಲ್‌ಪಿಜಿ ಬಳಕೆಯನ್ನು ಮಿತವಾಗಿ ಬಳಸುವಂತೆ ಮನವಿ ಮಾಡಿರುವ ಅವರು, ಸಾಧ್ಯವಾದಲ್ಲಿ ವಿದ್ಯುತ್ ಸ್ಟೌವ್ ಹಾಗೂ ಮರದ ಇಂಧನ ಬಳಕೆ ಮಾಡುವಂತೆ ಸಲಹೆ ನೀಡಿದರು.

ಆಟೋ ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದ ಅವರು, ರಾಜ್ಯದಾದ್ಯಂತ 72 ಕೇಂದ್ರಗಳಲ್ಲಿ, ಮುಖ್ಯವಾಗಿ ಬೆಂಗಳೂರಿನಲ್ಲಿ 31 ಕೇಂದ್ರಗಳಲ್ಲಿ ಆಟೋ ಎಲ್‌ಪಿಜಿ ಲಭ್ಯವಿದೆ. ಪ್ರತಿ ಲೀಟರ್‌ಗೆ 77.74 ರೂ. ದರದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಆಟೋ ಎಲ್‌ಪಿಜಿ ಪೂರೈಕೆ ಹೆಚ್ಚಳ ಕಂಡಿದ್ದು, ದಿನಕ್ಕೆ ಸರಾಸರಿ 64.9 ಟನ್ ವಿತರಣೆಯಾಗುತ್ತಿದೆ. ಮಧ್ಯಪ್ರಾಚ್ಯ ಸಂಘರ್ಷಕ್ಕೂ ಮುನ್ನ ಇದು 57.6 ಟನ್ ಮಾತ್ರವಾಗಿತ್ತು ಎಂದು ಸಚಿವರು ಮಾಹಿತಿ ನೀಡಿದರು.

ಅಕ್ರಮ ಸಂಗ್ರಹಣೆ ಮತ್ತು ಕಾಳಸಂತೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದುವರೆಗೆ 27 ಎಫ್‌ಐಆರ್‌ಗಳು ಮತ್ತು 1,169 ಪ್ರಕರಣಗಳು ದಾಖಲಾಗಿವೆ. ಒಟ್ಟು 1,603 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಗ್ಯಾಸ್ ಸಿಲಿಂಡರ್‌ಗಳನ್ನು ಹೆಚ್ಚುವರಿ ದರಕ್ಕೆ ಮಾರಾಟ ಮಾಡುವ ವಿತರಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಸಚಿವರು, ಇಂತಹವರ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ