ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 5 ರಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ರೋಚಕ ಐಪಿಎಲ್ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ. ಪಂದ್ಯದ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಬರುವ ಸಾವಿರಾರು ಅಭಿಮಾನಿಗಳ ಸುಗಮ ಪ್ರಯಾಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ಸಂಚಾರದ ಅವಧಿಯನ್ನು ಮಧ್ಯರಾತ್ರಿಯವರೆಗೆ ವಿಸ್ತರಿಸಿದೆ.

ಸಾಮಾನ್ಯವಾಗಿ ರಾತ್ರಿ 11 ಗಂಟೆಗೆ ಮುಕ್ತಾಯವಾಗುವ ಮೆಟ್ರೋ ಸೇವೆ, ಪಂದ್ಯದ ದಿನದಂದು ಮಧ್ಯರಾತ್ರಿ 2 ಗಂಟೆಯವರೆಗೆ ಲಭ್ಯವಿರಲಿದೆ. ಪಂದ್ಯ ಮುಗಿದ ನಂತರ ಅಭಿಮಾನಿಗಳು ಮನೆಗೆ ಮರಳಲು ಯಾವುದೇ ತೊಂದರೆಯಾಗದಂತೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ವಿಶೇಷವಾಗಿ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ನಾಲ್ಕೂ ದಿಕ್ಕುಗಳಿಗೆ (ಹಸಿರು ಮತ್ತು ನೇರಳೆ ಮಾರ್ಗ) ರಾತ್ರಿ 1:30ಕ್ಕೆ ಕೊನೆಯ ರೈಲು ಹೊರಡಲಿದೆ ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.ಆರ್.ವಿ. ರಸ್ತೆ: ರಾತ್ರಿ 2:00 ಗಂಟೆಗೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್): ರಾತ್ರಿ 1:30 ಗಂಟೆಗೆ (ನಾಲ್ಕೂ ದಿಕ್ಕುಗಳಿಗೆ), ಚೆಲ್ಲಘಟ್ಟ: ರಾತ್ರಿ 12:45 ಗಂಟೆಗೆ, ರೇಷ್ಮೆ ಸಂಸ್ಥೆ ಹಾಗೂ ಮಾದಾವರ: ರಾತ್ರಿ 12:45 ಗಂಟೆಗೆ, ವೈಟ್‌ಫೀಲ್ಡ್ (ಕಾಡುಗೋಡಿ): ರಾತ್ರಿ 12:30 ಗಂಟೆಗೆ ಹಾಗೂ ಬೊಮ್ಮಸಂದ್ರ: ರಾತ್ರಿ 12:30 ಗಂಟೆಗೆ ಕೊನೆಯ ರೈಲುಗಳು ಹೊರಡಲಿವೆ.

ಪಂದ್ಯದ ದಿನದಂದು ಟಿಕೆಟ್ ಕೌಂಟರ್‌ಗಳಲ್ಲಿ ಉಂಟಾಗುವ ಭಾರಿ ಜನದಟ್ಟಣೆ ತಪ್ಪಿಸಲು ಬಿಎಂಆರ್‌ಸಿಎಲ್ ವಿಶೇಷ ಸೂಚನೆ ನೀಡಿದೆ. ಅಭಿಮಾನಿಗಳು ವಾಟ್ಸಾಪ್ ಅಥವಾ ನಮ್ಮ ಮೆಟ್ರೋ ಆ್ಯಪ್ ಮೂಲಕ ಡಿಜಿಟಲ್ ಕ್ಯೂಆರ್ ಕೋಡ್ (QR Code) ಟಿಕೆಟ್‌ಗಳನ್ನು ಮುಂಚಿತವಾಗಿಯೇ ಖರೀದಿಸಲು ಕೋರಲಾಗಿದೆ. ಪಂದ್ಯದ ದಿನದಂದು ಮುಂಚಿತವಾಗಿಯೇ ಟಿಕೆಟ್ ಪಡೆದರೆ ದೀರ್ಘ ಸರದಿಯಲ್ಲಿ ನಿಲ್ಲುವ ಅವಶ್ಯಕತೆಯಿರುವುದಿಲ್ಲ ಎಂದು ತಿಳಿಸಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಈ ಪಂದ್ಯವು ಟೂರ್ನಿಯ ಅತ್ಯಂತ ಕುತೂಹಲಕಾರಿ ಪಂದ್ಯಗಳಲ್ಲಿ ಒಂದಾಗಿರುವುದರಿಂದ ಮೆಟ್ರೋ ನಿಗಮವು ಭದ್ರತೆಯನ್ನು ಕೂಡ ಹೆಚ್ಚಿಸಿದೆ. ಅಭಿಮಾನಿಗಳು ಮೆಟ್ರೋ ಸೇವೆಯನ್ನು ಬಳಸಿಕೊಳ್ಳುವ ಮೂಲಕ ಸಂಚಾರ ದಟ್ಟಣೆ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ