ಮೂರು ದಿನಗಳ ಹಿಂದೆ ಪತ್ರಿಕೆಗಳಲ್ಲಿ ನನ್ನ ಮನ ಮುಟ್ಟಿದ, ಹೃದಯ ಕಲಕಿದ ಸುದ್ದಿ ಓದಿ ಈ ಮಹಾನ್ ವ್ಯಕ್ತಿಯನ್ನು ಭೇಟಿಯಾಗಲೇಬೇಕೆಂದು ತೀರ್ಮಾನಿಸಿದೆ.
ಇಂದು ಮೈಸೂರಿಗೆ ಹೋಗಿ ಶ್ರೀಮತಿ #ಜ್ಯೋತಿ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದೆ. ನಿಜಕ್ಕೂ ಇವರ ಜೀವನವನ್ನೇ ಅಲುಗಾಡಿಸಿದ ಘಟನೆ ನಡೆದ ನಂತರ ಇವರು ತೋರಿಸಿದ ನಡವಳಿಕೆ ಅನನ್ಯ.
ಶ್ರೀಮತಿ #ಜ್ಯೋತಿ ಹೆಚ್ ಡಿ ಕೋಟೆ ತಾಲೂಕಿನ #ಸರಗೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ವಿಷಯದ ಶಿಕ್ಷಕಿ. ಪುಟ್ಟ ಕುಟುಂಬ.
ಕಳೆದ ಶನಿವಾರ, 28.3.26, ಎಸ್ ಎಸ್ ಎಲ್ ಸಿ, ಗಣಿತ ಪತ್ರಿಕೆಯ ಪರೀಕ್ಷೆ ನಡೆಯಿತು.
ಆದರೆ ಅದಕ್ಕೆ ಕೇವಲ ಮೂರು ದಿವಸಗಳ ಹಿಂದೆ ಶ್ರೀಮತಿ ಜ್ಯೋತಿಯವರು ಜೀವನದ ಅತ್ಯಂತ ಸವಾಲನ್ನು ಎದುರಿಸಿದರು. ಪ್ರಶಾಂತವಾಗಿದ್ದ ಈ ಪುಟ್ಟ ಕುಟುಂಬವನ್ನೇ ಪೂರ್ಣ ಅಲುಗಾಡಿಸಿ ಬಿಟ್ಟಿತು.
ಬುಧವಾರ, 25.3.26 ರಂದು ಬೆಳಗ್ಗೆ ಸುಮಾರು 9:30 ಗಂಟೆಗೆ, ಅವರ ಪತಿ ಶ್ರೀ ಕಿರಣ್ ಕುಮಾರ್ ಅವರು ಇದ್ದಕ್ಕಿದ್ದಂತೆ ಮನೆಯಲ್ಲಿ ಉರುಳಿಬಿದ್ದರು. ಅತ್ಯಂತ ಆರೋಗ್ಯವಂತ ರಾಗಿದ್ದ ಶ್ರೀ ಕಿರಣ್ ಕುಮಾರ್ ಅವರ ವಯಸ್ಸು ಕೇವಲ 46.

ಅವರು ಬಿದ್ದ ತಕ್ಷಣ ಪಕ್ಕದ ಮನೆಯವರ ನೆರವಿನಿಂದ ಒಂದು ಆಂಬುಲೆನ್ಸ್ ತರಿಸಿ ಕೇವಲ 20 ನಿಮಿಷಗಳಲ್ಲಿ ಒಂದು ಒಳ್ಳೆಯ ಆಸ್ಪತ್ರೆಗೆ ಶ್ರೀಮತಿ ಜ್ಯೋತಿಯವರು ತನ್ನ ಪತಿಯನ್ನು ಕರೆದೊಯ್ದರು .
ಅಲ್ಲಿ ಪರೀಕ್ಷೆ ಮಾಡಿದ ವೈದ್ಯರು ಕೈ ಚೆಲ್ಲಿದರು. ಅವರು ಏನು ಹೇಳುತ್ತಿದ್ದಾರೆ ಎಂಬುದೇ ಶ್ರೀಮತಿ ಜ್ಯೋತಿ ಅವರಿಗೆ ಅರ್ಥವಾಗುತ್ತಿರಲಿಲ್ಲ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲೇ ಎಂದು ಕೇಳಿದಾಗ ವೈದ್ಯರಿಗೆ ಇವರ ಮನಸ್ಥಿತಿ ಅರ್ಥವಾಗಿ ಶ್ರೀಮತಿ ಜ್ಯೋತಿ ಅವರನ್ನು ಒಂದೆಡೆ ಕುಳ್ಳರಿಸಿದರು.
ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ಜ್ಯೋತಿಯವರ ಸಂಬಂಧಿಕರಿಗೆ ವಿಚಾರ ತಿಳಿಸಿ ಇದು ಕೈ ಮೀರಿ ಹೋಗಿರುವ ಪ್ರಸಂಗ. ಏನೇ ಮಾಡಿದರೂ ಉಳಿಸಲು ಸಾಧ್ಯವಿಲ್ಲ ಎಂಬ ಕಠೋರ ಆದರೆ ವಾಸ್ತವ ಸತ್ಯವನ್ನು ವೈದ್ಯರು ಪ್ರಕಟಿಸಿದರು. Massive Heart Attack ನಿಂದ ಶ್ರೀ ಕಿರಣ್ ಕುಮಾರ್ ಅವರು ಕುಟುಂಬವನ್ನು ಬಿಟ್ಟು ಅಗಲಿದರು.
ಅಂದೇ ಸಂಜೆ ಸುಮಾರು ಐದೂವರೆ ಗಂಟೆಗೆ ಶ್ರೀ ಕಿರಣ್ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ಕ್ರಿಯೆಯೂ ಮುಗಿದು ಹೋಯಿತು.
ಮಾರನೆಯ ದಿನ ಅವರ ಅಸ್ತಿ ವಿಸರ್ಜನೆ ಆದ ನಂತರ, ಶ್ರೀಮತಿ ಜ್ಯೋತಿಯವರಿಗೆ ಸರಗೂರಿನ ತನ್ನ ಶಾಲೆಯ ಎಸ್ ಎಸ್ ಎಲ್ ಸಿ ಮಕ್ಕಳ ಬಗ್ಗೆ ಆತಂಕ ಉಂಟಾಯಿತು.
ಇದಕ್ಕೆ ಮುನ್ನವೇ ಅವರು ತಮ್ಮ ತರಗತಿಯ 54 ಮಕ್ಕಳನ್ನು ಅವರವರ ಕ್ಷಮತೆಗೆ ಅನುಗುಣವಾಗಿ ಮೂರು ತಂಡಗಳನ್ನಾಗಿ ವಿಂಗಡಿಸಿ ಅವರಿಗೆ ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಅವರನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಪ್ಲಾನ್ ಹಾಕಿಕೊಂಡಿದ್ದರು.
ತಮ್ಮ ಹತ್ತಿರದ ಬಂಧುಗಳೊಂದಿಗೆ ಶ್ರೀಮತಿ ಜ್ಯೋತಿಯವರು "ನಾನಂತೂ ನನ್ನ ಪತಿಯನ್ನು ಕಳೆದುಕೊಂಡುಬಿಟ್ಟೆ . ಆದರೆ ಈ ಮಕ್ಕಳ ಭವಿಷ್ಯವೂ ನನಗೆ ಮುಖ್ಯ 54 ಮಕ್ಕಳಲ್ಲಿ 10 ಮಕ್ಕಳು ಫೇಲಾದರೂ ಸಹ ಅವರ ಮುಂದಿನ ಜೀವನ ಏನಾಗಬಹುದು ಗೊತ್ತಾಗುವುದಿಲ್ಲ. ಅದಕ್ಕೆ ನಾನು ಈಗ ಹೋಗಿ ಅವರಿಗೆ ತಯಾರು ಮಾಡುತ್ತೇನೆ" ಎಂದು ತನ್ನ ನಿರ್ಧಾರ ಪ್ರಕಟಿಸಿ ಮನೆಯವರನ್ನು ಒಪ್ಪಿಸಿ ಹೆಗ್ಗಡದೇವನಕೋಟೆಯ ಬಳಿ ಇರುವ ಸರಗೂರಿಗೆ 12.30 ಗಂಟೆ ಸುಮಾರಿಗೆ ಹೋಗಿ ಸಂಜೆ 4:30 ವರೆಗೂ ಆ ಮಕ್ಕಳಿಗೆ ಪರೀಕ್ಷೆಗೆ ಬೇಕಾದ ಭೂಮಿಕೆ ಯನ್ನು ಸಿದ್ಧಗೊಳಿಸಿದರು. ಅಂದು ಆಕೆಯ ಮನಸ್ಥಿತಿ ಹೇಗಿದ್ದಿರಬಹುದು? ಊಹೆ ಮಾಡಲೂ ಸಾಧ್ಯವಿಲ್ಲ.





