ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿವೆತ್ತ ತಾಯಂದಿರು ತಮ್ಮ ಮಗುವಿನ ಸಲುವಾಗಿ ಏನೆಲ್ಲ ಸಂಘರ್ಷ ಎದುರಿಸಿದರು, ಹೇಗೆ ಯಶಸ್ಸು ಗಳಿಸಿದರೆಂದು ವಿವರವಾಗಿ ತಿಳಿಯೋಣವೇ…..?

ಈ ವಿಶ್ವದಲ್ಲಿ ಮಗುವನ್ನು ಅತಿಯಾಗಿ ಪ್ರೀತಿಸುವವಳು ತಾಯಿ ಅಲ್ಲದೆ ಮತ್ತಾರು? ತಾಯಿ ತನ್ನ ಮಗುವಿಗಾಗಿ ಅತಿ ಹೆಚ್ಚು ಪ್ರೀತಿ ವಾತ್ಸಲ್ಯಗಳ ಧಾರೆ ಎರೆದು ಮಮತಾಮಯಿ ಆಗುತ್ತಾಳೆ. ತನ್ನ ಅಗತ್ಯಗಳನ್ನು ಬದಿಗೊತ್ತಿ ಮಗುವಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ. ಮಗುವಿನ ಬೆಳವಣಿಗೆ ಪೂರಕವಾಗಿರಲಿ ಎಂದು, ಅದಕ್ಕಾಗಿ ಎಂಥ ಕಷ್ಟ ಸಹಿಸಲಿಕ್ಕೂ ಮುಂದಾಗುತ್ತಾಳೆ. ಅದರ ಉತ್ತಮ ಭವಿಷ್ಯಕ್ಕಾಗಿ ಹಗಲಿರುಳೂ ದುಡಿಯುತ್ತಾಳೆ. ಮಗುವಿನ ನೋವನ್ನು ತನ್ನ ನೋವೆಂದು ಭಾವಿಸಿ ತಲ್ಲಣಿಸುತ್ತಾಳೆ. ಅದರ ಸಣ್ಣಪುಟ್ಟ ಆಸೆಗಳನ್ನು ಈಡೇರಿಸಲು ತತ್ಪರಳಾಗಿರುತ್ತಾಳೆ. ಮಗುವಿಗಾಗಿ ಎಂಥ ಕಷ್ಟ ಬಂದರೂ ಹಲ್ಲುಕಚ್ಚಿ ಸಹಿಸುತ್ತಾಳೆ, ಆದರೆ ಈ ತಾಯಿಯ ಇಂಥ ತ್ಯಾಗ ಮನೋಭಾವ ಯಾರ ಗಮನಕ್ಕೂ ಬರುವುದೇ ಇಲ್ಲ.

ತಾಯಿಯ ಹೊಣೆ ಸುಲಭದ್ದಲ್ಲ

ಮಗು ಹುಟ್ಟುವಾಗಿನಿಂದ ಹಿಡಿದು, ಅದರ ಬೆಳವಣಿಗೆಯ ಒಂದೊಂದೇ ಹಂತದಲ್ಲೂ ತಾಯಿ ಪಡುವ ಪಾಡು, ಪಾಲನೆ ಪೋಷಣೆ, ನಿದ್ದೆಗೆಟ್ಟು ಮಾಡುವ ಲಾಲನೆ, ಮನೆಯ ಪ್ರತಿಯೊಂದು ಬೇಕು ಬೇಡ ಗಮನಿಸುತ್ತಾ ಮನೆಯ ನಿರ್ವಹಣೆ, ಪತಿಯ ಕೆಲಸ, ಅತ್ತೆ ಮಾವಂದಿರಿಗೆ ಸಹಕಾರ ಇತ್ಯಾದಿಗಳಲ್ಲಿ ಅವಳು ಹೈರಾಣಾಗುತ್ತಾಳೆ. ಈ ಎಲ್ಲ ಕೆಲಸ ಕಾರ್ಯಗಳ ಹಿಂದೆ ಒಂದು ಧೀಶಕ್ತಿ ಇದೆ ಎಂದರೆ ಅದು ತಾಯಿಯಿಂದ ಮಾತ್ರ ನಿರ್ವಹಿಸಲು ಸಾಧ್ಯ! ಮಗುವಿಗೆ 12 ವರ್ಷ ತುಂಬುವವರೆಗೂ ನೋಡಿಕೊಳ್ಳಬೇಕಾದ ಕರ್ತವ್ಯ ಅಂದ್ರೆ, ಅದು ಯಾ ಫುಲ್ ಟೈಂ ಜಾಬಿಗೂ ಕಡಿಮೆ ಇಲ್ಲ ಬಿಡಿ. ಇನ್ನಿತರ ಕೆಲಸಗಳೂ ಸೇರಿದಾಗ, ಜೊತೆಗೆ ಪಾರ್ಟ್‌ ಟೈಂ ಕೆಲಸವನ್ನೂ ಸುಧಾರಿಸಿದಂತೆಯೇ ಸರಿ.

ಮಗು ಹುಟ್ಟುತ್ತಿದ್ದ ಹಾಗೆ ತಾಯಿ ತನ್ನನ್ನು ತಾನು ಮರೆಯುತ್ತಾಳೆ. ಹಗಲೂ ರಾತ್ರಿ ಅವಳಿಗೆ ಮಗುವಿನದೇ ಚಿಂತೆ, ಅದೇ ಅವಳ ಪ್ರಪಂಚವಾಗುತ್ತದೆ. 1 ವರ್ಷ ಕಳೆಯುವಷ್ಟರಲ್ಲಿ ಉದ್ಯೋಗಸ್ಥ ವನಿತೆ, ಮನೆಯಲ್ಲಿ ಮಗುವನ್ನು ಬಿಟ್ಟು, ಕೆಲಸಕ್ಕೆ ಧಾವಿಸುತ್ತಾ ಎರಡನ್ನೂ ಸಂಭಾಳಿಸುವುದಿದೆಯಲ್ಲ, ಅದು ಯಾವ ಹರಸಾಹಸಕ್ಕೂ ಕಡಿಮೆ ಏನಲ್ಲ. ಹೀಗಾಗಿ ಎಷ್ಟೋ ಹೆಂಗಸರು ತಮ್ಮ ಕೆರಿಯರ್‌ ಗಿಂತ ಮಗುವಿಗೇ ಹೆಚ್ಚಿನ ಪ್ರಾಥಮಿಕತೆ ಕೊಟ್ಟು, ಕೆಲಸ ಬಿಡುವುದನ್ನೂ ಲೆಕ್ಕಿಸುವುದಿಲ್ಲ.

24 X 7 ಮಗುವಿನತ್ತ ಗಮನ

ತಾಯಿಯಾಗಿರುವುದರ ಜವಾಬ್ದಾರಿಯೇ ಅಂಥದ್ದು. ಸತತ ಮಗುವಿನತ್ತ ತನ್ನ ಗಮನ ಕೇಂದ್ರೀಕೃತ ಆಗಿರಲೇಬೇಕು. ಇಂದಿನ ಆಧುನಿಕ ತಾಯಂದಿರು ಕೆಲಸಕ್ಕೆಂದು ಹೋದರೂ, 1 ವಾರದಲ್ಲಿ ಕನಿಷ್ಠ 9-8 ಗಂಟೆಗಳ ಕಾಲ ಮಗುವಿನತ್ತ ಗಮನ ಹರಿಸಲೇಬೇಕು ಎನ್ನುತ್ತದೆ ಆಧುನಿಕ ವರದಿಗಳು. ಇದಕ್ಕಾಗಿ ಅಮೆರಿಕಾದಲ್ಲಿ 2000 ತಾಯಂದಿರನ್ನು ಮಾತನಾಡಿಸಿ ಸರ್ವೆ ನಡೆಸಿದರು. ಇವರುಗಳ ಮಕ್ಕಳ ವಯಸ್ಸು 5-12 ವರ್ಷಗಳು. ಇದರಿಂದ ತಿಳಿದು ಬಂದ ವಿಷಯ, ಒಂದು ಸಾಮಾನ್ಯ ದಿನದ್ದಲ್ಲ ಒಬ್ಬ ತಾಯಿಯ ಸರಾಸರಿ ದುಡಿಯುವ ಸಮಯ ಬೆಳಗ್ಗೆ 6ರಿಂದಲೇ ಶುರುವಾಗುತ್ತದೆ. ಇದು ರಾತ್ರಿ 9ರ ಹೊತ್ತಿಗೆ ಹೆಚ್ಚುಕಡಿಮೆ ಮುಗಿಯುತ್ತದೆ.

ಇಷ್ಟು ಸಮಯವನ್ನು ವರ್ಕಿಂಗ್‌ ಶಿಫ್ಟ್ ನಲ್ಲಿ ಪರಿವರ್ತಿಸಿ ನೋಡಿದರೆ, ವಾರದ ಏಳೂ ದಿನಗಳೂ 14 ಘಂಟೆಗಳ ಶಿಫ್ಟ್ ಗೆ ಸರಿಸಮವಾಗಿದೆ. ಇದು ಯಾವುದೇ ನಾರ್ಮಲ್ ಫುಲ್ ಟೈಂ ಜಾಬ್‌ ಗಿಂತ ಎಷ್ಟೋ ಅಧಿಕ ಘಂಟೆಗಳ ಕೆಲಸವಾಗಿದೆ. ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಬೆಳಗ್ಗೆ 5 ಘಂಟೆಯಿಂದ ಶುರು ಮಾಡಿ ರಾತ್ರಿ 11ಕ್ಕೆ ಕೆಲಸ ಮುಗಿಯುತ್ತದೆ. ಒಟ್ಟಾರೆ ಇದನ್ನು 24 x 7  ಫುಲ್ ಟೈಂ ಜಾಬ್‌ ಎಂದರೆ ಉತ್ಪ್ರೇಕ್ಷೆಯಲ್ಲ. ರಾತ್ರಿ ಹೊತ್ತು ಮಗು ಎದ್ದು ಅಳುತ್ತಾ ಕುಳಿತರೆ ಅವಳೇ ತಾನೇ ಸುಧಾರಿಸಬೇಕು…..?

ಈ ಸರ್ವೆಯಿಂದ ತಿಳಿದು ಬಂದದ್ದು ಎಂದರೆ, ಸರಾಸರಿ 1 ದಿನಕ್ಕೆ ಒಬ್ಬ ತಾಯಿ ತನಗಾಗಿ ಕೇವಲ 1 ಘಂಟೆ ಮೀಸಲಿರಿಸಿಕೊಂಡರೆ ಅದೇ ಹೆಚ್ಚು! ಜೊತೆಗೆ 40% ತಾಯಂದಿರು ಹೇಳುವುದೆಂದರೆ, ತಮ್ಮ ಜೀವನದಲ್ಲಿ ಅವರ ಕೆಲಸಗಳೆಂದೆಂದೂ ಮುಗಿಯುವುದೇ ಇಲ್ಲ ಅಂತ.

ಇದಕ್ಕೆ ಮೊದಲು 2013ರಲ್ಲಿ ನಡೆದ ಒಂದು ಅಧ್ಯಯನದಿಂದ ತಿಳಿದ ವಿಚಾರ, ಸರಾಸರಿ ಒಬ್ಬ ತಾಯಿಯ ಪ್ರತಿ ದಿನದ ಟುಡೂ ವರ್ಕ್‌ ನಲ್ಲಿ 26 ಬಗೆಯ ಕೆಲಸಗಳು ಇದ್ದೇ ಇರುತ್ತವೆ. ಇದರಲ್ಲಿ ಬೆಳಗಿನ ಕಾಫಿ, ತಿಂಡಿ, ಮಧ್ಯಾಹ್ನದ ಅಡುಗೆಯಿಂದ ರಾತ್ರಿಯ ಡಿನ್ನರ್‌ ವರೆಗೆ (ಇನ್ನಿತರ ಹೊರಗಿನ ಕೆಲಸಗಳನ್ನೂ ಒಳಗೊಂಡು) ಎಲ್ಲವೂ ಅವಳ ತಲೆ ತಿನ್ನುತ್ತಿರುತ್ತದೆ.

ಇನ್ನೆಲ್ಲಿಯ ರೊಮ್ಯಾಂಟಿಕ್ಸಂಬಂಧ?

ಮದುವೆಗೆ ಮುಂಚೆ ಇಬ್ಬರಲ್ಲೂ ಪ್ರೇಮದ ಆವೇಶ ಮುಗಿಲು ಮುಟ್ಟುವ ಎತ್ತರಕ್ಕೆ ತುಂಬಿರುತ್ತದೆ. ಮದುವೆಯಾದ ಮೊದಲ 1-2 ವರ್ಷ, ಸ್ವರ್ಗವೇ ಧರೆಗಿಳಿದು ಬಂದಂತೆ! ಆದರೆ ಕ್ರಮೇಣ ಇದು ಬದಲಾಗುತ್ತಾ ಹೋಗುತ್ತದೆ. ಮುಂದಿನ 3ನೇ, 4ನೇ ವರ್ಷದ ಹೊತ್ತಿಗೆ ಪ್ರೇಮದ ಜ್ವರ ಪೂರ್ತಿ ಇಳಿದು ಹೋಗಿರುತ್ತದೆ. ಇದು ಮಿತಿ ಮೀರಿದಾಗ ಡಿವೋರ್ಸ್‌ ಹಂತಕ್ಕೂ ತಲುಪಬಹುದು. ವರದಿಗಾರರು ಈ ಕುರಿತು ಅಸಂಖ್ಯಾತ ದಂಪತಿಗಳನ್ನು ಮಾತನಾಡಿಸಿ, ಮಗು ಆಗುವುದರಿಂದ, ಮದುವೆಯ ಮೇಲೆ ಪರಿಣಾಮ ಏನಾಗುತ್ತದೆ ಎಂದು ವಿಚಾರಿಸಿದ್ದಾರೆ. ಕಹಿ ಸತ್ಯವೆಂದರೆ, ಬಹುತೇಕ ದಂಪತಿಗಳ ನಡುವೆ, ಮಗು ಬಂದ ನಂತರ, ಸಂಬಂಧ ಕೆಡುತ್ತಾ ಹೋಗುತ್ತದೆ.

ಮಕ್ಕಳಿರುವ ಇಲ್ಲದವರ ಜೋಡಿಗಳನ್ನು ಹೋಲಿಸಿದಾಗ, ಮಕ್ಕಳಿಲ್ಲದವರಿಗಿಂತ ಇವರು ಜೋಡಿಗಳ ನಡುವಿನ ಸಂಬಂಧ 2 ಪಟ್ಟು ಹೆಚ್ಚು ಹದಗೆಡುತ್ತದೆ. ಇಂಥ ಸ್ಥಿತಿಯಲ್ಲಿ ಪ್ರೆಗ್ನೆನ್ಸಿ ಅನ್‌ ಪ್ಲಾನ್ಡ್ ಆಗಿದ್ದರೆ, ಅಂಥ ದಂಪತಿ ತಮ್ಮ ಸಂಬಂಧದ ಕುರಿತಾಗಿ, ಅತಿ ಹೆಚ್ಚು ನಕಾರಾತ್ಮಕ ಪ್ರಭಾವ ಕಾಣುವಂತಾಗಿದೆ.

ವೈವಾಹಿಕ ಸಂತೃಪ್ತಿಯಲ್ಲಿನ ಈ ಕೊರತೆ, ಸಾಮಾನ್ಯ ಜೀವನದ ಖುಷಿಗಿಂತ ಹೆಚ್ಚಿನ ಕೊರತೆ ಕಾಣುತ್ತದೆ. ಬಹಳಷ್ಟು ಯುವ ಜೋಡಿ, ತಮಗೆ ಮಕ್ಕಳಾಗುವುದರಿಂದ ಇನ್ನೂ ಆಪ್ತರಾಗುತ್ತೇವೆ ಎಂದು ಭಾವಿಸುತ್ತಾರೆ, ಆದರೆ ಆಗುವುದೆಲ್ಲ ತದ್ವಿರುದ್ಧ! ಹೀಗಾಗಿ ಲಿವ್ ‌ಇನ್‌ ರಿಲೇಶನ್‌ ಶಿಪ್‌ ಕ್ರಮೇಣ ವಿಶ್ವವಿಡೀ ಮಾನ್ಯತೆ ಗಳಿಸುತ್ತಿದೆ.

DSC_0608

ಪ್ರೇಮಿಗಳು ತಾಯಿ ತಂದೆ ಆದಾಗ

ಪ್ರೇಮಿಗಳಾಗಿ ಪ್ರೇಮಾಲಾಪನೆಯಲ್ಲಿ ಮಜವಾಗಿ ಮೊದಲ 2 ವರ್ಷ ಕಳೆದ ದಂಪತಿಗಳು, ಮಗು ಆದ ತಕ್ಷಣ ಜೋಡಿಯ ಮಾತುಕಥೆಯೇ ದಾರಿ ತಪ್ಪುತ್ತದೆ. ಪರಸ್ಪರ ಅಂತರ ಹೆಚ್ಚಿಸಿಕೊಳ್ಳುತ್ತಾ, ವ್ಯಾವಹಾರಿಕತೆಯನ್ನಷ್ಟೇ ಉಳಿಸಿಕೊಳ್ಳುತ್ತಾರೆ. ಈಗ ಅವರವರ ಜೀವನದ ಪ್ರಾಥಮಿಕತೆಗಳು ಬದಲಾಗಿವೆ. ಅನಿವಾರ್ಯವಾಗಿ ಮಗುವಿನ ಲಾಲನೆ ಪಾಲನೆಯತ್ತ ಇಬ್ಬರೂ ಗಮನ ವಹಿಸಬೇಕಿದೆ.

ಮಗುವಿಗೆ ಊಟತಿಂಡಿ ಮಾಡಿಸುವ, ಸ್ನಾನ, ಅದರ ಬಟ್ಟೆಬರೆ, ರೋಗರುಜಿನಕ್ಕೆ ಮದ್ದು, ಅತ್ತಾಗ ಸುಧಾರಿಸುವುದು ಇತ್ಯಾದಿಗಳಲ್ಲಿ ಪರಸ್ಪರ ಇವರು ತಮಗಾಗಿ ಟೈಂ ಕೊಟ್ಟುಕೊಳ್ಳುವುದು ಮಾಯವಾಗುತ್ತದೆ. ರೊಮ್ಯಾಂಟಿಕ್‌ ಮಾತುಗಳು ದೂರವಾಗಿ, ಮಗುವಿನ ಡೈಪರ್‌ ಬದಲಾಯಿಸು, ಬಟ್ಟೆ ಬೇರೆ ಹಾಕು, ಅದನ್ನು ಎತ್ತಿಕೊಂಡು ಸಮಾಧಾನಪಡಿಸು…. ಇದೇ ಆಗಿಹೋಗುತ್ತದೆ. ಪತಿಯ ಜೊತಿ ಯಾವ ಫ್ರೆಂಡ್ಸ್ ಜೊತೆ ಸುತ್ತಾಟ, ಡೇಟಿಂಗ್‌, ಲೇಟ್‌ ನೈಟ್ಸ್, ಲಾಂಗ ಶವರ್ಸ್‌ ಇತ್ಯಾದಿಗಳನ್ನೆಲ್ಲ ತಾಯಿ ಬೇಕೋ ಬೇಡವೇ, ತ್ಯಾಗ ಮಾಡಲೇಬೇಕು.

ಅಂಕಿಸಂಖ್ಯೆಗಳ ಲೆಕ್ಕಾಚಾರ

ಈ ಕುರಿತಾಗಿ ವಿಶ್ಲೇಷಿಸಿದಾಗ, 18ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನುಳ್ಳ 70% ತಾಯಂದಿರು ಉದ್ಯೋಗಸ್ಥರಾಗಿರುತ್ತಾರೆ. 44% ಉದ್ಯೋಗಸ್ಥ ತಾಯಂದಿರು ಪಾರ್ಟ್‌ ಟೈಂ ಜಾಬ್‌ ಮಾಡುತ್ತಿರುತ್ತಾರೆ. ಇತರ 56% ತಾಯಂದಿರು ಫುಲ್ ಟೈಂ ಜಾಬ್ ಮಾಡುತ್ತಾರೆ. 2021ರಲ್ಲಿ 39% ಉದ್ಯೋಗಸ್ಥ ತಾಯಂದಿರು, ತಮ್ಮ ಕುಟುಂಬದ ಗಳಿಸುವ ಏಕೈಕ ವ್ಯಕ್ತಿ ಆಗಿದ್ದರು.

40% ಉದ್ಯೋಗಸ್ಥ ತಾಯಂದಿರಿಗೆ ಅನಿಸುವುದೆಂದರೆ, ತಾಯಿ ತಂದೆ ಆಗುವ ಜವಾಬ್ದಾರಿಗಳ ಕಾರಣ, ಅವರುಗಳು ಕೆರಿಯರ್ ಅವಕಾಶ ಬಿಟ್ಟುಕೊಟ್ಟರು. 2017ರಲ್ಲಿ ಮಕ್ಕಳುಳ್ಳ ಎಲ್ಲಾ ವಿವಾಹಿತ ದಂಪತಿಗಳ ಕುಟುಂಬದಲ್ಲಿ, 63% ದುಪ್ಪಟ್ಟು ಸಂಪಾದಿಸುವ ಜೋಡಿಗಳಾಗಿದ್ದರು. 78% ಉದ್ಯೋಗಸ್ಥ ತಾಯಂದಿರ ಪ್ರಕಾರ, ಕೇವಲ ತಾವು ತಾಯಿ ತಂದೆ ಎಂಬುದು ಮಾತ್ರವಲ್ಲ, ನೌಕರಿಯಿಂದ ತಮಗೊಂದು ಪ್ರತ್ಯೇಕ ಐಡೆಂಟಿಟಿ ಇದೆ ಎನ್ನುತ್ತಾರೆ.

ಮನೆಯಿಂದಲೇ WFH ನಡೆಸುವ ತಾಯಂದಿರು, ತಮ್ಮ ಮಕ್ಕಳನ್ನು ನೋಡಿಕೊಳ್ಳುವುದಕ್ಕಾಗಿಯೇ ಹೆಚ್ಚುವರಿ 1 ಗಂಟೆ ಮೀಸಲಿಡುತ್ತಾರೆ, ಇವರಿಗೆ ಹೋಲಿಸಿದಾಗ ಆಫೀಸುಗಳಲ್ಲಿ ದುಡಿಯುವ 54% ತಾಯಂದಿರು, ತಮ್ಮ ಜೀವನವನ್ನು ಎರಡೂ ಕಡೆ ಬ್ಯಾಲೆನ್ಸ್ ಮಾಡಿಕೊಳ್ಳಲು ಮಹತ್ವಪೂರ್ಣ ಚಾಲೆಂಜ್‌ ಎದುರಿಸುತ್ತಿರುತ್ತಾರೆ. 36% ಉದ್ಯೋಗಸ್ಥ ತಾಯಂದಿರ ರಿಪೋರ್ಟ್ ಗಮನಿಸಿದರೆ, ಮಗು ಆದ ನಂತರ ಅವರ ಕೆರಿಯರ್‌ ನ ಪ್ರಗತಿ ಎಷ್ಟೋ ನಕಾರಾತ್ಮಕ ಆಗಿದೆ.

ಈ ಅಂಕಿಸಂಖ್ಯೆಗಳು, ಉದ್ಯೋಗಸ್ಥ ತಾಯಂದಿರು ವರ್ಕ್‌ ಪ್ಲೇಸ್‌ ಗಳಲ್ಲಿ ಎದುರಿಸುವ ಎಷ್ಟೋ ಸವಾಲುಗಳ ಕುರಿತಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಪ್ರಗತಿಯ ನಂತರ, ಉದ್ಯೋಗಸ್ಥ ತಾಯಂದಿರಿಗೆ ಸಮಾನ ಅವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಈಗಲೂ ಒಂದು ಲಾಂಗ್‌ ವೇ ಬಾಕಿ ಇದೆ ಎನ್ನಬಹುದು.

ತಾಯಿ ಆದವಳು ಉದ್ಯೋಗಸ್ಥೆ ಅಥವಾ ಗೃಹಿಣಿಯೇ ಆಗಿರಲಿ, ಎದುರಿಸಬೇಕಾದ ತೊಂದರೆಗಳು ಮಾತ್ರ ಬೇಕಾದಷ್ಟಿರುತ್ತವೆ. ಆದರೆ ಇವನ್ನೆಲ್ಲ ಖುಷಿ ಖುಷಿಯಾಗಿ ಎದುರಿಸಬೇಕಷ್ಟೆ. ಹೇಗೂ ಮಾತೃತ್ವದ ಪಟ್ಟ ಗಿಟ್ಟಿಸಿದ್ದಾಯ್ತು, ಈಗ ಇದರ ಹೊಣೆ ಹೊತ್ತು ಕರ್ತವ್ಯಗಳನ್ನು ವಸ್ತುನಿಷ್ಠವಾಗಿ ಎದುರಿಸಬೇಕಿದೆ.

ತಾಯ್ತನ ಎಂಬ ಪ್ರಮೋಶನ್

ಮದುವೆಯಾದ ನಂತರ ನವ ವಧುವಾಗಿ 1-2 ವರ್ಷ ಉಳಿಯಬಹುದು, ನಂತರವಾದರೂ ತಾಯ್ತನದ ಪ್ರಮೋಶನ್ ಒಪ್ಪಿಕೊಳ್ಳಬೇಕಷ್ಟೆ. ಇದರಿಂದ ನಿಮ್ಮ ಜೀವನದ ಮತ್ತೊಂದು ಘಟ್ಟಕ್ಕೆ ಬಡತಿ ಸಿಕ್ಕಂತಾಯ್ತು. ನಿಮ್ಮ ತನುಮನದ ಪ್ರತಿರೂಪ ಈಗ ನಿಮ್ಮ ಬಳಿಯೇ ಇದೆ, ಅದನ್ನು ತಿದ್ದಿತೀಡಿ ನಿಮಗೆ ಬೇಕಾದಂತೆ ಬೆಳೆಸಬಹುದಾಗಿದೆ. ಆ ಮಗು ನಿಮ್ಮದೇ ಪ್ರತಿಬಿಂಬ, ಅದರ ಸಾಧನೆ, ಯಶಸ್ಸು ನಿಮ್ಮ ಕೈಯಲ್ಲಿದೆ ಎಂಬ ಭಾವನೆಯೇ ನಿಮಗೆ ಅನಂತ ಜವಾಬ್ದಾರಿಗಳನ್ನು ತುಂಬಿಸುತ್ತದೆ. ತಾಯಿಯಾದ ನಂತರ ಹೆಣ್ಣು ತನ್ನ ಮಗುವಿಗಾಗಿ ಎಂಥ ತ್ಯಾಗಕ್ಕಾದರೂ ಸಿದ್ಧಳಾಗುತ್ತಾಳೆ. ಹೀಗಾಗಿ ಅವಳು ತನ್ನನ್ನು ತಾನು ಅತಿ ಶಿಸ್ತಿನ ಜೀವನಕ್ರಮಕ್ಕೆ ಒಳಪಡಿಸಿಕೊಳ್ಳುತ್ತಾಳೆ.

ಮಗುವಿಗಾಗಿ ಅವಳು ಜೀವನದಲ್ಲಿ ಎಲ್ಲ ಅತಿ ಉತ್ತಮವಾದುದೇ ಒದಗಿಬರಲಿ ಎಂದು ಅಹರ್ನಿಶಿ ಅದಕ್ಕಾಗಿ ಹೋರಾಡುತ್ತಾಳೆ. ಈ ಕಾರಣದಿಂದಾಗಿ ಯುವ ತಾಯಿ ತಂದೆ ಹಿಂದಿನ ಹುಡುಗಾಟಿಕೆ ಎಲ್ಲಾ ಮರೆತು ಹೆಚ್ಚು ಹೆಚ್ಚು ಹೊಣೆಗಾರರಾಗುತ್ತಾರೆ.

Apeksha-Niranjan-(2)(1)

ತಾಯಿಯ ಉನ್ನತ ವ್ಯಕ್ತಿತ್ವ

ಒಬ್ಬ ಹೆಣ್ಣು  ತಾಯಿ ಆದಾಗ, ಅವಳು ತನ್ನಲ್ಲಿ ತಾನು ಒಬ್ಬ ಪರಿಪಕ್ವ ಮಹಿಳೆಯನ್ನು ಗುರುತಿಸಿಕೊಳ್ಳುತ್ತಾಳೆ. ಇದು ಪ್ರತಿ ತಾಯಿಯ ಒಂದು ದೊಡ್ಡ ಸಾಧನೆ. ಮಾತೃತ್ವ ನಿಮ್ಮ ಜೀವನದಲ್ಲಿ ಒದಗಿ ಬಂದಿರುವ ಒಂದು ದೊಡ್ಡ ಉಡುಗೊರೆ. ಇದನ್ನು ಬಲು ಸಕಾರಾತ್ಮಕವಾಗಿ ಸ್ವೀಕರಿಸಿ. ಸಂತಾನವಿಲ್ಲ ಎಂದು ಕೊರಗುತ್ತಿದ್ದ ಮನಸ್ಸು ಈಗ ಶಾಂತವಾಗದೆ, ಅದನ್ನು ಯಶಸ್ವಿಯಾಗಿ ನಿರ್ವಹಿಸಬೇಕಾಗಿದೆ.

ಈ ತಾಯ್ತನದ ಜವಾಬ್ದಾರಿಗಾಗಿ ನೀವು ನಿಮ್ಮ ಕೆರಿಯರ್‌ ನ್ನು ತುಸು ಕಾಲ ಹೋಲ್ಡ್ ನಲ್ಲಿ ಇಡಬೇಕಾಗಿ ಬರಬಹುದು. ತಾಯ್ತನದ ಜವಾಬ್ದಾರಿಯೊಂದಿಗೆ ಕೆರಿಯರ್‌ ಬೆಳೆಸಿಕೊಳ್ಳಬಹುದಾದಂಥ ಹೊಸ ಕೆಲಸ ಹುಡುಕಬೇಕಾಗಿ ಬಂದರೂ ಅಡ್ಡಿಯಿಲ್ಲ. ತಾಯಿ ಆದ ಮಾತ್ರಕ್ಕೆ ಕೆರಿಯರ್‌ ಮರೆಯಬೇಕಂತಲ್ಲ, ಹಾಗಂತ ತಾಯ್ತನವನ್ನು ನಿರ್ಲಕ್ಷಿಸಬೇಕು ಅಂತಲೂ ಅಲ್ಲ. ಹೀಗಾಗಿ ಎರಡನ್ನೂ ಬ್ಯಾಲೆನ್ಸ್ ಮಾಡುವ ವಿಧಾನ ಕಂಡುಕೊಳ್ಳಿ.

ಅನಗತ್ಯವಾಗಿ ಎನರ್ಜಿ ಹಾಳುಗೆಡವದಿರಿ

ನೀವು ತಾಯಿ ಆದಿರಿ, ಮಗುವನ್ನು ಬೆಳೆಸಿ ದೊಡ್ಡದು ಮಾಡಬೇಕಿದೆ, ಹಾಗೇಂತ ನಿಮ್ಮನ್ನು ನೀವು 100% ನಿರ್ಲಕ್ಷಿಸಿಕೊಳ್ಳುತ್ತಾ, ಹೇಗೊ ಒಂದು ಇದ್ದರಾಯ್ತು ಬಿಡು, ಎಂದು ನಿಡುಸುಯ್ಯದಿರಿ. ನಿಮ್ಮೆಲ್ಲ ಶಕ್ತಿ ಸಾಮರ್ಥ್ಯಗಳನ್ನು ಕೇವಲ ಮಗುವಿಗಾಗಿ ಮೀಸಲಿಟ್ಟು, ನಿಮ್ಮ ಸ್ವಂತಿಕೆ ಕಳೆದುಕೊಳ್ಳಬೇಡಿ. ದಿನದ ಒಂದು ನಿಶ್ಚಿತ ಅವಧಿ ಮಗುವಿಗಾಗಿ ಮೀಸಲಿರಲಿ, ಉಳಿದ ಸಮಯದಲ್ಲಿ ಕೊಂಚವಾದರೂ ನಿಮಗಿರಲಿ.

ಬೇಕೋ ಬೇಡವೋ ಮಕ್ಕಳಿಗಾಗಿ ರಾಶಿ ರಾಶಿ ಬಟ್ಟೆ, ಆಟಿಕೆ, ಕಾಸ್ಮೆಟಿಕ್ಸ್, ಔಷಧಿ, ತಂದು ಗುಡ್ಡೆ ಹಾಕಬೇಡಿ, ತೀರಾ ಅಗತ್ಯವೆನಿಸಿದಾಗ ಮಾತ್ರ ಕೊಳ್ಳಿರಿ. ಸದಾ ಮಗುವಿನ ಕೋಣೆ ಸಿಂಗರಿಸುತ್ತಾ, ತೊಟ್ಟಿಲು ತೂಗುತ್ತಾ ಅಷ್ಟೇ ಪ್ರಪಂಚ ಎಂದಿದ್ದು ಬಿಡಬೇಡಿ. ಮಗುವಿನ ಕೆಲಸಗಳನ್ನು ಎಷ್ಟು ಮಾಡಿದರೂ ಮುಗಿಯುವುದಿಲ್ಲ ಅಂತ ಅದರಲ್ಲಿ ಮುಳುಗಿಹೋಗಬಾರದು. ಬೆನ್ನು ನೋವು ಬಂದರೂ ಸರಿ, ಎಂದು ಮಗುವಿಗಾಗಿ ಕುಲಾವಿ ಹೆಣೆಯುತ್ತಾ ಕೂತುಬಿಡುತ್ತಾಳೆ.

Dr.-Rennie-Joyy

ನಿಮ್ಮನ್ನು ನೀವು ಗಮನಿಸಿಕೊಳ್ಳಿ

ಇವೆಲ್ಲ ಕೆಲಸಗಳಲ್ಲಿ ನಿಮ್ಮ ಎನರ್ಜಿ ಸಂಪೂರ್ಣ ಸೋರಿಹೋಗದಿರಲಿ. ಮಗುವಿಗಾಗಿ ಒಂದು ನಿಗದಿತ ಸಮಯ ನೀಡಿ, ಆನಂದದಿಂದ ಆ ಕ್ಷಣಗಳನ್ನು ಅನುಭವಿಸಿ. ಅದೇ ತರಹ ನಿಮಗಾಗಿಯೂ ತುಸು ಸಮಯ, ಎನರ್ಜಿ ಉಳಿಸಿಕೊಳ್ಳಿ. ನೀವು ಆಫೀಸಿಗೆ ಹೋಗುತ್ತಿಲ್ಲ ಸರಿ, ಕೆಲಸ ಬಿಟ್ಟಿದ್ದೀರಿ ಸರಿ ಅಥವಾ ಲಾಂಗ್‌ ಲೀವ್ ‌ಇರಲಿ, ಏನೇ ಆದರೂ ನಿಮಗಾಗಿ ತುಸು ಸಮಯ ಮೀಸಲಿಡಿ. ನಿಮ್ಮದೇ ಪ್ರತಿಭೆ ತುಕ್ಕು ಹಿಡಿಯದಂತೆ ನೋಡಿಕೊಳ್ಳಿ.

ನಿಮ್ಮ ನೌಕರಿಗೆ ಸಂಬಂಧಿಸಿದ ಹೊಸ ಸ್ಕಿಲ್ಸ್ ಕಲಿಯಿರಿ. ಮನೆಯಿಂದಲೇ ಏನಾದರೂ ಮಾಡಿ, ಗಳಿಕೆಗೊಂದು ದಾರಿ ಮಾಡಿಕೊಳ್ಳಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಇಂಥ ಹೊತ್ತಲ್ಲಿ ಕಲಿಯುವ ವಿಷಯ, ಮುಂದೆ ಬಹಳ ಕೈ ಹಿಡಿಯುತ್ತದೆ. ಹೀಗಾಗಿ ಅವಕಾಶ ಸಿಕ್ಕಿದಷ್ಟೂ ನಿಮ್ಮನ್ನು ನೀವು ಸ್ಕಿಲ್ ಫುಲ್ ಆಗಿಸಿಕೊಳ್ಳಿ. ಏನಾದರೂ ಹೊಸತನ್ನು ಮಾಡುತ್ತಿರಿ. ತಾಯಿ ಆದ ಮಾತ್ರಕ್ಕೆ, ಹೆಣ್ಣು ತನ್ನತನ ಕಳೆದುಕೊಳ್ಳಬಾರದು.

ಸೇಫ್ಪ್ರಾಡಕ್ಟ್ಸ್ ಹುಡುಕಾಟದಲ್ಲಿ

ಮಾಮಾ ಅರ್ಥ್‌ ಕಂಪನಿಯ ಫೌಂಡರ್‌ ಮುಂಬೈನ ಗಝಲ್ ಅಲಗ್‌ ಗೆ `ಬಿಸ್‌ ನೆಸ್‌ ಟುಡೇ, ಫಾರ್ಚ್ಯೂನ್‌ ಇಂಡಿಯಾ ಮೋಸ್ಟ್  ಪವರ್‌ ಫುಲ್ ವುಮನ್‌, ವರ್ಲ್ಡ್ 40 ಅಂಡರ್‌ 40, ಫಾಪ್ಟ್ ಫಾರ್ವರ್ಡ್ ವುಮನ್‌ ಅಚೀವರ್‌ ಅವಾರ್ಡ್‌, ಬಿಸ್‌ ನೆಸ್‌ ಟುಡೇ ಮೋಸ್ಟ್ ಪವರ್‌ ಫುಲ್ ವುಮನ್‌, ಬಿಸ್‌ ನೆಸ್‌ ವ 40 ಅಂಡರ್‌ 40′ ಇತ್ಯಾದಿ ಅನೇಕ ಪ್ರಶಸ್ತಿ ಪಾರಿತೋಷಕಗಳು ಅರಸಿ ಬಂದಿವೆ. ರಾಷ್ಟ್ರೀಯ ಖ್ಯಾತಿವೆತ್ತ 10 ಮಂದಿ ಮಹಿಳಾ ಕಲಾವಿದರಲ್ಲಿ ಈಕೆಯೂ ಒಬ್ಬರು. ಒಬ್ಬ ನುರಿತ ಕಾರ್ಪೊರೇಟ್‌ ಟ್ರೇನರ್‌, ಒಬ್ಬ ಉತ್ಕೃಷ್ಟ ಕಲಾವಿದೆ, ಅತ್ಯಂತ ಪ್ರಭಾವಶಾಲಿ ಬಿಸ್‌ ನೆಸ್‌ ವುಮನ್‌ ಇತ್ಯಾದಿಗಳ ಜೊತೆ ಈಕೆ ಒಬ್ಬ ಯಶಸ್ವೀ ತಾಯಿಯೂ ಹೌದು!

ತಾಯಿ ಆದಕಾರಣ, ಈಕೆಗೂ ಸಹ ತನ್ನ ಮಗುವಿನ ಪಾಲನೆ ಪೋಷಣೆಗಾಗಿ ಎಷ್ಟೋ ಸಮಸ್ಯೆಗಳನ್ನು ಎದುರಿಸಿದ್ದಾಯಿತು. ಹಾಗಾಗಿ ತಾನು ಪಟ್ಟ ಕಷ್ಟಗಳನ್ನು ಇತರ ತಾಯಂದಿರು ಪಡಬಾರದೆಂದೇ ಹಲವು ಸಮಸ್ಯೆಗಳಿಗೆ ತಾನೇ ಖುದ್ದಾಗಿ ಪರಿಹಾರ ಕಂಡುಕೊಂಡರು. ಆ ಮೂಲಕ ದೊಡ್ಡ ಉದ್ಯಮಕ್ಕೆ ನಾಂದಿ ಹಾಡಿದರು. ಆಕೆ ಮಗುವಿಗೆ ಬೇಕಾದಂಥ ಹೊಸ ಹೊಸ ಬೇಬಿ ನ್ಯಾಚುರಲ್ ಫುಡ್ಸ್ ಬ್ಯೂಟಿ ಪ್ರಾಡಕ್ಟ್ಸ್ ತಯಾರಿಸುವಂಥ ಮಾಮಾ ಅರ್ಥ್‌ ಕಂಪನಿ ಪ್ರಾರಂಭಿಸಿದರು, ಇದರಿಂದ ಯಾವ ಶಿಶುವಿಗೂ ಟಾಕ್ಸಿಕ್ ಕೆಮಿಕಲ್ಸ್ ಬಾಧೆ ತಟ್ಟದಂತೆ ಎಚ್ಚರ ವಹಿಸಿದರು.

ಗಝಲ್ ಹೇಳುತ್ತಾರೆ, ದೊಡ್ಡ ಮಗ ಹುಟ್ಟಿದಾಗ, ನ್ಯಾಚುರಲ್ ಪೌಷ್ಟಿಕ ಆಹಾರ, ಅದೂ ಕೆಮಿಕಲ್ಸ್ (ಟಾಕ್ಸಿಕ್‌) ಫ್ರೀ ಇರುವಂಥ ಪ್ರಾಡಕ್ಟ್ಸ್ ಗಾಗಿ ಮಹಾ ಕಷ್ಟಪಟ್ಟರಂತೆ. ಆಕೆ ಹಲವು ವರ್ಷ ಅಮೆರಿಕಾದಲ್ಲಿ ಇದ್ದುದರಿಂದ, ಇಲ್ಲಿನ ಬೇಬಿ ಪ್ರಾಡಕ್ಟ್ಸ್ ಬಗ್ಗೆ ಆಕೆಗೆ ಚೆನ್ನಾಗಿ ಗೊತ್ತಿತ್ತು. ಅಲ್ಲಿನ ಅಂಗಡಿಗಳಲ್ಲಿ ಕೆಮಿಕಲ್ಸ್ ಸೋಂಕುಳ್ಳ ಪ್ರಾಡಕ್ಟ್ಸ್ ನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಿದ್ದರು. ಅವುಗಳಲ್ಲಿ ಕಾರ್ಸಿನೋಜೆನ್ಸ್ ಎಂಬ ಘಟಕ ಕೂಡಿದ್ದು, ಬೆಳೆಯುವ ಶಿಶುವಿಗೆ ಅದು ಮಾರಕ ಎಂಬುದು ಸಾಬೀತಾಗಿತ್ತು. ಮಗ ಅಗಸ್ತ್ಯನಿಗಾಗಿ ಬಂದಿದ್ದ ಉಡುಗೊರೆಗಳಲ್ಲಿ ಅಂಥ ಅನಗತ್ಯ ಬ್ರಾಂಡ್‌ ನ ಪ್ರಾಡಕ್ಟ್ಸ್ ಇತ್ತು. ಈಕೆ ಅದನ್ನು ಬಳಕೆಗೆ ಬಾರದಂತೆ ತಡೆದರು. ಇತ್ತ ಮಗುವಿಗೆ ಚರ್ಮದ ತೊಂದರೆಗಳಿದ್ದವು. ಅದರ ಚರ್ಮ ಬಲು ಸೂಕ್ಷ್ಮ ಸಂವೇದಿತ ಆಗಿತ್ತು. ಆಗ ಈಕೆಗೆ ಭಾರತದ ಬಹುತೇಕ ಬೇಬಿ ಪ್ರಾಡಕ್ಟ್ಸ್ ನಲ್ಲಿ ಈ ಘಟಕವಿದ್ದು, ಅದು ತನ್ನ ಮಗುವಿಗೆ ಸೆಟ್‌ ಆಗದು ಎಂದರಿತರು.

ಬೇರೆಯವರೇಕೆ ಇಂಥ ಕೆಮಿಕಲ್ಸ್ ಫ್ರೀ ಪ್ರಾಡಕ್ಟ್ಸ್ ತಯಾರಿಸುತ್ತಿಲ್ಲ ಎಂದು ಪತಿಯ ಜೊತೆ ಚರ್ಚಿಸಿದರು. ನಮ್ಮ ದೇಶದ ಮಕ್ಕಳಿಗೆ ಇಂಥ ಕೆಮಿಕಲ್ಸ್ ಬೇಡವೇ ಬೇಡ ಎಂದು ದೃಢ ನಿರ್ಧಾರ ಕೈಗೊಂಡರು. ಆಗ ಈಕೆಯ ಪತಿ ವರುಣ್‌, ಅವರಿವರ ಪ್ರಾಡಕ್ಟ್ಸ್ ಕೆದಕುವ ಬದಲು ನೀವೇ ಏಕೆ ಅಂಥದ್ದನ್ನು ಪ್ರಾರಂಭಿಸಬಾರದು ಎಂದರು. ಹಾಗೆ ರಿಸರ್ಚ್‌ ಮಾಡಿ ಶುರುವಾದದ್ದೇ ಮಾಮಾ ಅರ್ಥ್‌. ಡಿಸೆಂಬರ್‌ 2016ರಲ್ಲಿ 6 ಬಗೆಯ ಬೇಬಿ ಕೇರ್‌ ಪ್ರಾಡಕ್ಟ್ಸ್ ನೊಂದಿಗೆ ಈಕೆ ಈ ಕಂಪನಿ ಆರಂಭಿಸಿದರು.

ಈ ಪ್ರಾಡಕ್ಟ್ಸ್ 100% ಸೇಫ್‌, ಟಾಕ್ಸಿನ್‌ ಫ್ರೀ ಹಾಗೂ ನ್ಯಾಚುರಲ್ ಎಂದು ಮೇಡ್‌ ಸೇಫ್‌ ಆರ್ಗನೈಸೇಶನ್‌ ನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೃಢೀಕರಿಸಲ್ಪಟ್ಟಿದೆ. ಇದು ನಮ್ಮ ದೇಶ ಮಾತ್ರವಲ್ಲದೆ, ಇಡೀ ನಮ್ಮ ಏಷ್ಯಾ ಖಂಡದಲ್ಲೇ ಹೀಗೆ ಸರ್ಟಿಫೈಡ್‌ ಆದ ಮೊದಲ ಪ್ರಾಡಕ್ಟ್ಸ್ ಆಗಿವೆ! ಈ ರೀತಿ ತನ್ನ ಮಗುವಿಗಾಗಿ ಎಂದು ಶುರು ಮಾಡಿದ್ದನ್ನು ಇಡೀ ಖಂಡದ ಎಲ್ಲಾ ಮಕ್ಕಳಿಗೂ ಪೌಷ್ಟಿಕ ಆಹಾರ ಸಿಗುವಂತೆ ಮಾಡುವಲ್ಲಿ ಈಕೆ ಯಶಸ್ವೀ ಆಗಿದ್ದಾರೆ.

Riddhi-Bhagat-,-Founder-Binge-and-Baked(1)

ಕೌಟುಂಬಿಕ ನೆರವಿನಿಂದ ಯಶಸ್ಸು

ರಿದ್ಧಿ ಭಾರತ್‌ ಒಬ್ಬ ಯಶಸ್ವೀ ಕಾರ್ಪೊರೇಟ್‌ ಲೀಗಲ್ ಕನ್ಸಲ್ಟೆಂಟ್‌ ಜೊತೆಗೆ `ಬಿಂಜ್‌ ಆನ್‌ ಬೇಕ್ಡ್’ ಕಂಪನಿಯ ಫೌಂಡರ್‌ ಸಹ! ಬೇಕಿಂಗ್‌ ಈಕೆಯ ಜೀವಾಳ. ಒಬ್ಬೊಬ್ಬರಿಗೂ ಒಂದೊಂದು ಪ್ಯಾಶನ್‌ ಇರುವಂತೆ, ಈಕೆಗೆ ಬೇಕಿಂಗ್‌ ಪಂಚಪ್ರಾಣ ಹವ್ಯಾಸ. ಈಕೆ ಕಾರ್ಪೊರೇಟ್‌ ಕನ್ಸಲ್ಟೆಂಟ್‌ ನ ಕೆಲಸ ಮಾಡುತ್ತೀ, ಈ ಕಂಪನಿಯ ನಿರ್ವಹಣೆಗೂ ಮುಂದಾದರು. ಇದನ್ನು ಲಾಂಚ್‌ ಮಾಡುವ ಉದ್ದೇಶ, ಜನಸಾಮಾನ್ಯರಿಗೆ ಉತ್ಕೃಷ್ಟ ಹೆಲ್ದಿ ಬೇಕರಿ ಪ್ರಾಡಕ್ಟ್ಸ್ ನೀಡುವುದಾಗಿತ್ತು. ಇದರಲ್ಲಿ ಅತಿ ಯಶಸ್ವಿ ಎನಿಸಿದ ಈಕೆ ಬಗೆಬಗೆಯ ಕುಕೀಸ್‌, ಕೇಕ್‌, ಪಫ್‌, ಪಿಜ್ಜಾ, ಕ್ರಸ್ಟ್, ಬ್ರೆಡ್‌, ಬನ್‌, ರಸ್ಕ್ ಇತ್ಯಾದಿ ಸ್ವಾದಿಷ್ಟ ಸ್ನಾಕ್ಸ್ ಒದಗಿಸುತ್ತಿದ್ದಾರೆ.

ಆಗ್ರಾ ನಿವಾಸಿ 33 ವರ್ಷದ ರಿದ್ಧಿ, ನಾವು ನಮ್ಮ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡು ತೊಡಗಿದರೆ, ಅದರಲ್ಲಿ ಬರಬಹುದಾದ ಸವಾಲುಗಳನ್ನು ನಾವು ನಸುನಗುತ್ತಾ ಎದುರಿಸಬಹುದು, ಇದು ಕಾಟಾಚಾರದ ಕೆಲಸ ಆಗುವುದಿಲ್ಲ. ನಾನೂ ಇಂಥ ಹಲವಾರು ಸಮಸ್ಯೆ ಎದುರಿಸಿದ್ದೇನೆ. ನನ್ನ ಇಬ್ಬರು ಮಕ್ಕಳನ್ನು ಸಂಭಾಳಿಸುತ್ತಾ, ಈ ಬಿಸ್‌ ನೆಸ್‌ ನ್ನು ಈ ಮಟ್ಟಕ್ಕೆ ಬೆಳೆಸುವುದು ನಿಜಕ್ಕೂ ನನಗೆ ಭಗೀರಥ ಪ್ರಯತ್ನವೇ ಆಗಿತ್ತು.

ಅನಾರೋಗ್ಯಕ್ಕೆ ಒಳಗಾದ ಮಕ್ಕಳನ್ನು ಬಿಟ್ಟು ಆಫೀಸಿಗೆ ಹೊರಡುವಂಥ ಶಿಕ್ಷೆ ಬೇರೊಂದಿಲ್ಲ. ಆದರೆ ಅಂಥ ಇಕ್ಕಟ್ಟಿನಲ್ಲಿ ನನ್ನ ಅತ್ತೆ ಮನೆಯವರೆಲ್ಲರೂ ನನಗೆ ಬಹಳ ಸಾಥ್‌ ಕೊಟ್ಟಿದ್ದಾರೆ. ಅವರೆಲ್ಲರ ಪ್ರೋತ್ಸಾಹದಿಂದಲೇ ಇಂದು ನಾನು ಒಬ್ಬ ಯಶಸ್ವೀ ಉದ್ಯಮಿ ಎನಿಸಿದ್ದೇನೆ, ಕುಟುಂಬ ಬಿಸ್‌ ನೆಸ್‌ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದೇನೆ, ಎನ್ನುತ್ತಾರೆ.

ಮಕ್ಕಳೊಂದಿಗೆ ಕೆಲಸದ ನಿರ್ವಹಣೆ

ಸುಮಾರು 40ರ ಅಪೇಕ್ಷಾ ನಿರಂಜನ್‌ ಅಂತಾರಾಷ್ಟ್ರೀಯ ಖ್ಯಾತಿವೆತ್ತ ಒಬ್ಬ ಭರತನಾಟ್ಯ ಕಲಾವಿದೆ, ಕೊರಿಯೋಗ್ರಾಫರ್‌ ಹಾಗೂ ನುರಿತ ಶಿಕ್ಷಕಿಯೂ ಹೌದು. ಭಾರತದ ಅನೇಕ ಭಾಷೆಗಳನ್ನು ಮಾತನಾಡಲು ಕಲಿತು, ಓದಿ, ಬರೆಯುವುದನ್ನು ರೂಢಿಸಿಕೊಳ್ಳುವುದೇ ಈಕೆಯ ಹವ್ಯಾಸ! ಈಕೆಯ ನೃತ್ಯಾಭ್ಯಾಸ ಕೊಲ್ಹಾಪುರದಿಂದ ಶುರುವಾಯಿತು. ಮುಂದೆ ಕಥಕ್‌ ಶಾಸ್ತ್ರೀಯ ನೃತ್ಯದಲ್ಲೂ ಪರಿಣಿತಿ ಪಡೆದರು. ಮುಂದೆ ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದಿಂದ ಮಾಸ್ಟರ್ಸ್‌ ಡಿಗ್ರಿ ಪಡೆದರು. ಮುಂದೆ ನಳಂದಾ ನೃತ್ಯ ಅನುಸಂಧಾನ ಕೇಂದ್ರದಿಂದ ಭರತನಾಟ್ಯದಲ್ಲಿ ಅಡ್ವಾನ್ಸ್ಡ್ ಡಿಪ್ಲೋಮಾ ಪಡೆದರು. ಮೂಲ ತಮಿಳಿನವರಾದರೂ, ಅನೇಕ ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಅಪೇಕ್ಷಾ ಕಳೆದ 19 ರ್ಷಗಳಿಂದ ನವ ಮುಂಬೈನಲ್ಲೇ ವಾಸವಾಗಿದ್ದಾರೆ. ತನ್ನ ಸಂಸ್ಥೆ ನೃತ್ಯಾಂಜಲಿ ಪರ್ಫಾರ್ಮಿಂಗ್‌ ಆರ್ಟ್ಸ್ ನ ಮಾಧ್ಯಮದಿಂದ ಅನೇಕಾನೇನಕ ಆಸಕ್ತರಿಗೆ ಭರತನಾಟ್ಯ, ಕಥಕ್‌ ನೃತ್ಯ ಕಲಿಸುತ್ತಿದ್ದಾರೆ. ಇವರಿಗೆ `ರಾಷ್ಟ್ರೀಯ ಸರ್ವೋತ್ತಮ ಕಲಾಕಾರ್‌, ನೃತ್ಯ ಶಿರೋಮಣಿ, ಯುವಾ ಕಲಾರತ್ನ, ವೋಂಗಿ ಕಲಾರತ್ನ, ನೂಪುರ್‌ ಕಲಾರತ್ನ, ನಟರಾಜ್‌ ಸನ್ಮಾನ್‌, ನೃತ್ಯ ಜ್ಯೋತಿ, ನಾಟ್ಯಕಲಾ ಚೂಡಾಮಣಿ, ನೃತ್ಯಾಂಜಿನಿ’ ಮುಂತಾದ ಹಲವು ಪ್ರಶಸ್ತಿ ಪಾರಿತೋಷಕಗಳು ಲಭಿಸಿವೆ.

ಅಪೇಕ್ಷಾ ಹೇಳುತ್ತಾರೆ, ನನ್ನ ಮಗ ರುದ್ರ ಹುಟ್ಟಿದಾಗ, ಆಗ ತಾನೇ ನಾನು ನೃತ್ಯಾಂಜಲಿ ಕ್ಲಾಸಸ್‌ ಆರಂಭಿಸಿದ್ದೆ. ಮಗುವನ್ನು ಜೊತೆಗೆ ಕರೆತಂದು, ಒಂದು ಮೂಲೆಯಲ್ಲಿ ಮಲಗಿಸಿ, ನನ್ನ ಕ್ಲಾಸಸ್‌ ಮುಂದುವರಿಸುತ್ತಿದ್ದೆ. ಇದೇ ರೊಟೀನ್‌ ಅವನ ಶಾಲಾ ದಿನಗಳಲ್ಲೂ ಮುಂದುವರಿಯಿತು. ಅವನು ಶಾಲೆಗೆ ಹೊರಟು, ಬರುವಷ್ಟರಲ್ಲಿ ನಾನು ಕ್ಲಾಸ್‌ ಮುಗಿಸಿಕೊಂಡು ಬರುತ್ತಿದ್ದೆ. ಜೊತೆಗೆ ನನಗೆ ನನ್ನ ಕುಟುಂಬದವರೆಲ್ಲರ ಸಂಪೂರ್ಣ ಸಹಕಾರವಿತ್ತು. ನನ್ನ ಪತಿ ನನ್ನ ಎಲಲ್ ಒಳಗಿನ, ಹೊರಗಿನ ಕೆಲಸಗಳಿಗೆ ಸದಾ ನೆರವಾಗುತ್ತಾರೆ.

ಕೆಲಸದೊಂದಿಗೆ ಮಗುವಿನ ಪಾಲನೆ

ಡಾ. ರೇನಿ ಜಾಯ್‌ ಬ್ಯಾಂಕಿಂಗ್‌ ಸೆಕ್ಟರ್‌ ನಿಂದ ತಮ್ಮ ಕೆರಿಯರ್‌ ಆರಂಭಿಸಿದರು `ಸಿಟಿ ಬ್ಯಾಂಕ್‌, ಲಾ ಮನಿಯಂಥ ದೊಡ್ಡ ಬ್ಯಾಂಕುಗಳಲ್ಲಿ ಉನ್ನತ ಪದವಿಗಳಲ್ಲಿ ದುಡಿದಿದ್ದಾರೆ. ಆ ನಂತರ ತಮ್ಮದೇ ಕಂಪನಿ ಆರಂಭಿಸುವ ಬಯಕೆಯೊಂದಿಗೆ, ಬ್ಯಾಂಕಿಂಗ್‌ ಸೆಕ್ಟರ್‌ ಬಿಟ್ಟರು. ನಂತರ ಲಾ ಫರ್ಮ್ ಆರಂಭಿಸಿದರು. ಜೊತೆಗೆ ಕಾರ್ಪೊರೇಟ್‌ ಲಾಯರ್‌ ಆಗಿಯೂ ದುಡಿಯ ತೊಡಗಿದರು. ನಂತರ ಅಲೇಖ್‌ ಫೌಂಡೇಶನ್‌ ಗೆ ನಾಂದಿ ಹಾಡಿದರು. ಇದು ಯಶಸ್ವೀ ಆಗಿದ್ದು, ತರುಣಿಯರ ಅಭಿವೃದ್ಧಿಗಾಗಿ, ಹಕ್ಕುಗಳಿಗಾಗಿ ಹೋರಾಡುತ್ತದೆ. ಹವಾಮಾನ ಪರಿವರ್ತನೆ, ಜಲ ಸಂರಕ್ಷಣೆಯಂಥ ಸೂಕ್ಷ್ಮ ವಿಷಯಗಳ ಜಾಗೃತಿ ಮೂಡಿಸುತ್ತದೆ.

ಡಾ. ರೇನಿ ಹೇಳುತ್ತಾರೆ, ನನ್ನ ಮಗಳು ಹುಟ್ಟಿದಾಗ, ನನ್ನ ಎದುರಿಗೆ ಅನೇಕ ಸವಾಲುಗಳಿದ್ದವು. ಬ್ಯಾಂಕಿಂಗ್‌ ಸೆಕ್ಟರ್‌ ನ ಫುಲ್ ಟೈಂ ಜಾಬ್‌, ಜೊತೆ ಜೊತೆಯಲ್ಲೇ ತಾಯಿಯ ಕಠೋರ ಕರ್ತವ್ಯ ನಿರ್ವಹಣೆ ಇತ್ತು. ಮೊದಮೊದಲು ಇದು ನನ್ನಿಂದಾಗದ ಕೆಲಸ ಎನಿಸಿಬಿಟ್ಟಿತ್ತು. ಜೊತೆಗೆ ಮನೆಯ ಕೌಟುಂಬಿಕ ವಾತಾವರಣವನ್ನು ಸದಾ ಸಕಾರಾತ್ಮಕವಾಗಿ ಇರಿಸಿಕೊಳ್ಳುತ್ತಾ, ತುಂಬಿದ ಮನೆಯ ಆದರ್ಶ ಸೊಸೆ ಆಗಬೇಕಿತ್ತು. ಆಗ ನನ್ನ ಅತ್ತೆ ಮನೆಯವರು, ಅಮ್ಮ, ಅಜ್ಜಿ ತಾತಾ ಸಹ ನನಗೆ ಬಹು ನೆರವಾಗಿದ್ದಾರೆ.

ನನ್ನ ಕೆಲಸದ ಸಲುವಾಗಿ ನಾನು ಆಗಾಗ ಲಾಂಗ್‌ ಟೂರ್‌ ಹೊರಡಬೇಕಿತ್ತು. ಅದನ್ನೂ ನಾನು ಸಮರ್ಥವಾಗಿ ನಿರ್ವಹಿಸಿದೆ. ಎಷ್ಟೋ ಸಲ ನನ್ನ ಮಗಳಿಗೆ ಆರೋಗ್ಯ ಹದಗೆಡುತ್ತಿತ್ತು. ಆಗೆಲ್ಲ ಮನೆಕೆರಿಯರ್‌ ನಡುವೆ ಬ್ಯಾಲೆನ್ಸ್ ಮಾಡವಷ್ಟರಲ್ಲಿ ಕಂಬನಿ ಮಿಡಿಯುತ್ತಿದ್ದೆ. ಆದರೆ ಮನೆಯವರೆಲ್ಲರ ನಿಸ್ವಾರ್ಥ ಸಹಕಾರದಿಂದ ಇಂದು ನಾನು ಯಶಸ್ವೀ ಉದ್ಯಮಿ ಆಗಿದ್ದೇನೆ, ಎನ್ನುತ್ತಾರೆ.

ಜಿ.ಪಂಕಜಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ