ಕಥೆ – ಶೈಲಾ ಎಸ್. ವಾಲಿ
ಸತತ ನಾಲ್ಕು ಹೆಣ್ಣುಮಕ್ಕಳಾದ ನಂತರ ಸರಸ್ವತಿ ಗಂಡ ಮತ್ತು ಅತ್ತೆ ಮನೆಯವರ ಅನಾದರಕ್ಕೆ ಬೇಸತ್ತು ಆ ಮನೆ ಬಿಟ್ಟು ಬದುಕುವ ದಾರಿ ಕಂಡುಕೊಂಡಳು. ಗಂಡು ಮಗು ಬೇಕೆಂಬ ದುರಾಸೆಯಲ್ಲಿ ಅವಳ ಗಂಡ ಮತ್ತೊಂದು ಮದುವೆಯಾದ. ಮುಂದೆ ಆ ಕುಲದೀಪಕ ಈ ತಂದೆಗೆ ಮಾಡಿದ್ದೇನು…..?
ಸರಸ್ವತಿ ಬೀಡಿ ಕಟ್ಟುತ್ತಾ ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದಳು. ಗಂಡನ ಹಿಂಸೆಯಿಂದ ಪಾರಾಗಿ ಎಲ್ಲರಿಂದ ದೂರಾಗಿ ತನ್ನ ನಾಲ್ಕು ಹೆಣ್ಣುಮಕ್ಕಳನ್ನು ಕರೆದುಕೊಂಡು ಊರುಬಿಟ್ಟು ಊರಿಗೆ ಬಂದು ಎಲ್ಲರ ಕಣ್ತಪ್ಪಿಸಿ ಜೀವನ ರೂಪಿಸಿಕೊಳ್ಳಲು ಪಟ್ಟ ಶ್ರಮ ಕಡಿಮೆಯೇನಲ್ಲ……
ಹದಿನೈದು ವರ್ಷಗಳ ಹಿಂದೆ ನರಸಿಂಹನನ್ನು ಮದುವೆಯಾಗಿ ಬಂದಾಗಿನಿಂದ ಅವಳ ಕಷ್ಟ ಅಷ್ಟಿಷ್ಟಲ್ಲ….. ಸಾಲ್ದಕ್ಕೆ ಅತ್ತೆ ಮಾವಂದಿರ ಕಿರುಕುಳ…. ಗಾಣದೆತ್ತಿನ ಹಾಗೇ ದುಡಿದರೂ ಸ್ವಲ್ಪ ಕನಿಕರ ಇಲ್ಲದ ಮನುಷ್ಯ ಪ್ರಾಣಿಗಳು…. ಒಂದು ಕ್ಷಣ ಕೂರುವ ಹಾಗಿಲ್ಲ…. ಎಲ್ಲರ ಚಾಕರಿ ಮಾಡುವುದರಲ್ಲಿಯೇ ಸರಸ್ವತಿಯ ಜೀವನ ಸುಣ್ಣವಾಗಿತ್ತು.
ವರ್ಷಕ್ಕೊಂದರಂತೆ ಐದು ವರ್ಷದಲ್ಲಿ ಮೂವರು ಮಕ್ಕಳನ್ನು ಕರುಣಿಸಿದ್ದ ಪುಣ್ಯಾತ್ಮ ಗಂಡ. ಅವಳ ಗ್ರಹಚಾರಕ್ಕೆ ಮೂವರೂ ಹೆಣ್ಣುಮಕ್ಕಳೇ…. ಅವರ ಕಿರುಕುಳಕ್ಕೆ ಇದೊಂದು ಹೊಸ ಸೇರ್ಪಡೆ. ಹೆಣ್ಣು ಬಾಳಿನ ಹುಣ್ಣು ಎಂದು ಶಪಿಸುವುದೇ ಅತ್ತೆಯ ಕೆಲಸವಾಗಿತ್ತು.
ಸರಸ್ವತಿ ಮೂವರು ಮಕ್ಕಳ ಬಳಿಕ ಇನ್ನೊಂದು ಮಗು ಬೇಡವೆಂದರೂ ಗಂಡನ ಒತ್ತಾಯಕ್ಕೆ ನಾಲ್ಕನೇ ಬಾರಿ ಬಸುರಿ ಆದಳು. ಆಗ ಮಗು ಹೆಣ್ಣೋ ಗಂಡೋ ಎಂದು ಡಾಕ್ಟರ್ ಗೆ ಲಂಚ ಕೊಟ್ಟು ತಿಳಿದುಕೊಂಡಿದ್ದ. ಈ ಸಲ ಮಗು ಹೆಣ್ಣೇ ಎಂದು ಹೇಳಿದ ಮೇಲೆ ಕೇಳೋ ಹಾಗಿರಲಿಲ್ಲ ಅವನ ಗೋಳು. ಪಾಪ ಸರಸ್ವತಿಯ ಸ್ಥಿತಿ ಯಾವ ಶತ್ರುವಿಗೂ ಬೇಡವಾಗಿತ್ತು.
ಜೊತೆಗೆ ಅತ್ತೆ ಮಾವ ಇಬ್ಬರಿಗೂ ಅವಳೆಂದರೆ ತಿರಸ್ಕಾರ. ಅವಳ ಮುಂದೆಯೇ ಗಂಡ ನರಸಿಂಹನಿಗೆ ಇನ್ನೊಂದು ಮದುವೆ ಆಗುವಂತೆ ಕುಮ್ಮಕ್ಕು. ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದ ಸರಸ್ವತಿ ಗಂಡನಿಗೆ ಇನ್ನೊಂದು ಮದುವೆ ಆಗುವಂತೆ ಅತ್ತೆ ಮಾವ ಹೇಳುವುದನ್ನು ಕೇಳಿ ತಡೆಯಲಾರದೆ ತೀವ್ರ ಆಕ್ಷೇಪ ಮಾಡಿದಳು. ಆದರೂ ಅವಳ ಯಾವೊಂದು ಮಾತೂ ಕೇಳದೆ, ಒಂದು ದಿನ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಅತ್ತೆ ಮಾವ, ಗಂಡ ಹಿಂತಿರುಗಿ ಬರುವಾಗ ಒಂದು ಹೆಣ್ಣಿನ ಜೊತೆ ಬಂದರು. ಇದನ್ನು ನೋಡಿದ ಸರಸ್ವತಿ ಯಾರೆಂದು ಕೇಳಿದಳು.
“ನೀನು ಇನ್ನೇಲೇ ಇವಳ ಜೊತೆ ಹೊಂದಿಕೊಂಡು ಹೋಗುವ…… ನನಗೆ ಗಂಡು ಮಗು ಬೇಕು. ನಮ್ಮ ಮನೆ ಬೆಳಗಲು ಕುಲದೀಪಕ ಮಗ ಬೇಕು. ಅದಕ್ಕೆ ಇನ್ನೊಂದು ಮದುವೆ ಆಗಿದ್ದೇನೆ,” ಎಂದು ನರಸಿಂಹ ಹಾರಿಕೆಯ ಉತ್ತರ ಕೊಟ್ಟ.
ಅಂದಿನ ರಾತ್ರಿಯೇ ತಾನು ಮಲಗುತ್ತಿದ್ದ ಕೋಣೆಯನ್ನು ಬೇರೊಬ್ಬಳಿಗೆ ಬಿಟ್ಟುಕೊಡುವ ಪರಿಸ್ಥಿತಿ ಸರಸ್ವತಿಗೆ ಎದುರಾಯಿತು. ಇನ್ನು ತನಗೆ ಇಲ್ಲಿ ಉಳಿಗಾಲವಿಲ್ಲ ಎನ್ನುವುದು ಅವಳಿಗೆ ಗೊತ್ತಾಯಿತು.
ರಾತ್ರಿಯೆಲ್ಲಾ ನಿದ್ದೆ ಬಾರದೇ ಹೊರಳಾಡಿ ಒಂದು ನಿರ್ಧಾರಕ್ಕೆ ಬಂದಳು. ಬೆಳಗ್ಗೆ ಎದ್ದ ಕೂಡಲೇ ಗಂಡ, ಅತ್ತೆ ಮಾವರಿಗೆ, “ಇನ್ನು ನನಗೂ ನಿಮಗೂ ಯಾವುದೇ ಸಂಬಂಧ ಇಲ್ಲ. ನಾನು ನಿಮ್ಮಿಂದ ದೂರ ಹೋಗುತ್ತಿದ್ದೇನೆ,” ಎಂದು ಹೇಳಿದ ಸರಸ್ವತಿ, ದಿಕ್ಕುತೋಚದೆ ತನಗೆ ಮದುವೆಯಲ್ಲಿ ತನ್ನ ತವರು ಮನೆಯಲ್ಲಿ ಹಾಕಿದ ಬಂಗಾರ ತೆಗೆದುಕೊಂಡು ಮನೆಯಿಂದ ಹೊರಟುಹೋದಳು. ಯಾರೊಬ್ಬರೂ ಅವಳನ್ನು ತಡೆಯುವ ಪ್ರಯತ್ನ ಸಹ ಮಾಡಲಿಲ್ಲ.
ತವರಿನಲ್ಲಿ ಅಣ್ಣ ಅತ್ತಿಗೆ ಇಬ್ಬರೇ. ತಾಯಿ ತಂದೆ ತೀರಿ ಹೋದ ಬಳಿಕ ತವರಿನಲ್ಲಿ ತನಗೆ ಬೆಲೆ ಇಲ್ಲ, ಅತ್ತಿಗೆಯ ನಿರ್ಲಕ್ಷ್ಯ, ತನ್ನ ಮೇಲೆ ಅವರಿಗಿದ್ದ ಅಸಡ್ಡೆಯನ್ನು ಗಮನಿಸಿದ್ದ ಸರಸ್ವತಿಗೆ ಅಲ್ಲಿಯೂ ಹೋಗಲು ಮನಸ್ಸು ಬರಲಿಲ್ಲ. ಗೊತ್ತು ಗುರಿ ಇಲ್ಲದ ಊರಿಗೆ ಬಂದು, ಬಾಡಿಗೆಗೆ ಒಂದು ಮನೆ ಪಡೆದು, ಅಲ್ಲಿ ಎಲ್ಲರಿಗೂ ಗಂಡ ಮಿಲಿಟರಿಯಲ್ಲಿ ಇದ್ದಾರೆ. ಇಷ್ಟು ದಿನ ತವರಿನಲ್ಲಿ ಇದ್ದೆ ಎಂದು ಸುಳ್ಳು ಹೇಳಿದಳು.
ಜೀವನ ನಿರ್ವಹಣೆಗೆ ಏನು ಮಾಡಬೇಕೆಂದಿದ್ದಾಗ, ತನ್ನ ಮನೆಯ ಮಾಲೀಕರ ಹೆಂಡತಿ ಬೀಡಿ ಕಟ್ಟುತ್ತಿದ್ದುದನ್ನು ನೋಡಿ ತಾನೂ ಕಲಿತುಕೊಂಡಳು. ಮನೆಯಲ್ಲಿ ಕುಳಿತು ಮಾಡುವ ಈ ಕೆಲಸ ಅವಳಿಗೆ ವರದಾನವಾಯಿತು.
ಮಕ್ಕಳನ್ನು ಅಲ್ಲಿಯೇ ಸರ್ಕಾರಿ ಶಾಲೆಗೆ ಸೇರಿಸಿದಳು. ಅವಳ ಪುಣ್ಯಕ್ಕೆ ಮಕ್ಕಳು ಒಬ್ಬರಿಗಿಂತ ಒಬ್ಬರು ಕಲಿಯುವುದರಲ್ಲಿ ಮುಂದಿದ್ದರು. ಎಲ್ಲಾ ಮಕ್ಕಳಿಗೂ ವಿದ್ಯಾರ್ಥಿ ವೇತನ ಸಿಗತೊಡಗಿತು. ಅದರ ಸಹಾಯದಿಂದ ಎಲ್ಲಾ ಮಕ್ಕಳೂ ಉನ್ನತ ವ್ಯಾಸಂಗ ಪಡೆದರು. ಈಗ ದೊಡ್ಡ ಮಗಳು ವಿನೀತಾ ಡಾಕ್ಟರ್. ಎರಡನೇ ಮಗಳು ಅನಿತಾ ಎಂಜಿನಿಯರ್ ಕಲಿಯುತ್ತಿದ್ದಾಳೆ, ಮೂರನೇ ಹಾಗೂ ನಾಲ್ಕನೇ ಮಕ್ಕಳಿಬ್ಬರೂ ಬೇರೆ ಊರಿನ ಸರ್ಕಾರಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇದೆಲ್ಲವನ್ನೂ ಮೆಲುಕು ಹಾಕುತ್ತಾ ಕುಳಿತ ಸರಸ್ವತಿಗೆ ಮಗಳು ವಿನೀತಾ ಬಂದು, “ಅಮ್ಮಾ….. ಎಷ್ಟು ಹೊತ್ತಿನಿಂದ ಕರೆಯುತ್ತಿದ್ದೇನೆ. ಏನು ಮಾಡ್ತಾ ಇದ್ದೀಯಾ…..? ಸ್ವಲ್ಪ ಕಾಫಿ ಮಾಡಿ ಕೊಡಮ್ಮಾ…. ತುಂಬಾ ತಲೆ ನೋವು. ಇವತ್ತು ಆಸ್ಪತ್ರೆಯಲ್ಲಿ ವಿಪರೀತ ಪೇಶೆಂಟ್‌ಗಳು,” ಎಂದಳು.
ವಾಸ್ತವಕ್ಕೆ ಬಂದ ಸರಸ್ವತಿ, “ಹ್ಞೂಂನಮ್ಮಾ…. ಒಂದೇ ನಿಮಿಷ ಇರು ಕಾಫಿ ಬೆರೆಸಿಕೊಡ್ತೀನಿ. ಡಿಕಾಕ್ಷನ್ ರೆಡಿ ಇದೆ. ತಿನ್ನಲು ಏನಾದರೂ ಮಾಡಿಕೊಡ್ಲಾ?” ಎಂದು ಕೇಳಿದಳು.
“ಬೇಡಮ್ಮಾ…. ಹಸಿವೇ ಇಲ್ಲ. ಕಾಫಿ ಮಾತ್ರ ಕೊಡು. ನಾನು ಫ್ರೆಷ್ ಆಗಿ ಬರ್ತೀನಿ,” ಎಂದು ವಾಶ್ ರೂಮ್ ಗೆ ಹೋದಳು ವಿನೀತಾ.
ಕಾಫಿ ಬೆರೆಸಿ, ತನಗೊಂದು, ಮಗಳಿಗೊಂದು ಲೋಟ ಕಾಫಿ ಹಿಡಿದು ಬಂದು ಕುಳಿತಳು. ಹಾಗೇ ಮಗಳನ್ನು ದಿಟ್ಟಿಸಿದ ಸರಸ್ವತಿಗೆ ಮನಸ್ಸಿನಲ್ಲಿಯೇ, ತಾನು ಕಷ್ಟಪಟ್ಟು ಓದಿಸಿದ ಮಗಳು, ಈಗ ಡಾಕ್ಟರ್ ಎಂದು ಮಗಳ ಬಗ್ಗೆ ಹೆಮ್ಮೆ ಮೂಡಿತು. ಹಾಗೆಯೇ ಕಾಫಿ ಕುಡಿಯುತ್ತಾ ಕುಳಿತಿದ್ದ ಮಗಳ ಮುಖ ನೋಡಿದಳು. ಆಯಾಸದಿಂದ ಸೋತು ಹೋದ ಮುಖ, ಆದರೂ ಮುಖದಲ್ಲಿ ವಿಶೇಷ ಕಳೆ. ಇನ್ನು ಮಗಳಿಗೆ ಗಂಡು ಹುಡುಕಬೇಕು ಎಂದು ಯೋಚಿಸತೊಡಗಿದಳು.

“ಅಮ್ಮಾ….. ಏನಿತ್ತು ಯಾವತ್ತೂ ಇಲ್ಲದ ಯೋಚನೆ. ನಾನು ಬಂದಾಗಿನಿಂದ ಗಮನಿಸುತ್ತಾ ಇದ್ದೀನಿ. ಯಾಕಮ್ಮಾ….. ಏನಾಯ್ತು…? ಯಾರಾದರೂ ಏನಾದರೂ ಅಂದ್ರಾ ನಿನಗೆ….?” ಎನ್ನುತ್ತಾ ತಾಯಿಗೆ ಒಂದು ಮುತ್ತು ಕೊಟ್ಟಳು.
“ಏನಿಲ್ಲಮ್ಮಾ….. ಯಾಕೋ ಇವತ್ತು ಹಳೆಯದೆಲ್ಲ ನೆನಪಾಯ್ತು ಅಷ್ಟೇ…..” ಎಂದಳು ಸರಸ್ವತಿ.
“ಅಮ್ಮಾ…… ಹೋಗ್ಲಿ ಬಿಡು. ಯಾಕೆ ಹಳೆಯದನ್ನೆಲ್ಲಾ ನೆನಪು ಮಾಡಿಕೊಂಡು ಸಂಕಟಪಡ್ತೀಯಾ……. ನಿನಗೆ ನಾವೆಲ್ಲಾ ಇಲ್ವಾ…..?” ಎನ್ನುತ್ತಾ ವಿನೀತಾ ತಾಯಿಯನ್ನು ಗಟ್ಟಿಯಾಗಿ ತಬ್ಬಿಕೊಂಡಳು.
“ಹ್ಞೂಂನಮ್ಮಾ…. ನೀವು ನಾಲ್ಕು ಮಕ್ಕಳು ನನ್ನ ಕಣ್ಣುಗಳು….. ಯಾವ ಭಂಡ ಧೈರ್ಯ ಮಾಡಿ ಆ ಮನಿ ಬಿಟ್ಟು ಬಂದೆನೋ ಗೊತ್ತಿಲ್ಲ….. ಅಂದು ನಾನು ಹಾಗೆ ಮಾಡದೇ ಇದ್ದಿದ್ದರೆ, ನೀವು ನಾಲ್ಕೂ ಜನ ಆ ಮನೆಯಲ್ಲಿ ಎಷ್ಟು ನರಕ ಅನುಭವಿಸುತ್ತಿದ್ದೀರೋ ಏನೋ ಗೊತ್ತಿಲ್ಲ….” ಎಂದು ಹೇಳಿ ತನಗೆ ತಾನೇ ಹೆಮ್ಮೆ ಪಟ್ಟುಕೊಂಡಳು.
ಇತ್ತ ನರಸಿಂಹನಿಗೆ ಸರಸ್ವತಿ ಬಿಟ್ಟುಹೋದ ನಂತರ ತಾನು ಮಾಡಿದ ತಪ್ಪಿನ ಅರಿವಾಯಿತು. ಹೊಸ ಹೆಂಡತಿ ಹೊಸತರಲ್ಲಿ ಮುದ್ದು ಎನಿಸಿದರೂ ದಿನ ಕಳೆದಂತೆ ಅವಳ ನಿಜ ಬಣ್ಣ ತಿಳಿಯತೊಡಗಿತು.
ನರಸಿಂಹ ಇಷ್ಟಪಟ್ಟಂತೆ ಗಂಡು ಮಗನನ್ನೇ ಹಡೆದ ದೀಪಾಳಿಗೆ ಮತ್ತಷ್ಟು ಸೊಕ್ಕು ಬಂದಿತು. ಈಗ ಅವಳಿಗೆ ಗಂಡ, ಅತ್ತೆ ಮಾವ ಎಲ್ಲರೂ ಕಾಲ ಕಸಕ್ಕಿಂತ ಕಡೆಯಾದರು. ಅವಳು ಯಾರ ಮಾತೂ ಕೇಳುತ್ತಿರಲಿಲ್ಲ. ಕುಳಿತಲ್ಲಿಯೇ ಅವಳಿಗೆ ಊಟ, ಉಪಚಾರ ಮಾಡಬೇಕಾಗಿತ್ತು. ಮನೆಯ ಎಲ್ಲಾ ಕೆಲಸವನ್ನೂ ಅತ್ತೆಯೇ ಮಾಡಬೇಕಿತ್ತು, ಇಲ್ಲದಿದ್ದರೆ ಗಂಡ ಮಾಡಬೇಕಿತ್ತು. ಯಾವಾಗಲೂ ಮಗನನ್ನು ಎತ್ತಿಕೊಂಡು ಕುಳಿತು, ಟಿವಿ ನೋಡುವುದು, ಬಿಟ್ಟರೆ ಮೊಬೈಲ್ ನಲ್ಲೇ ಮಾತನಾಡುವುದೇ ಅವಳ ಕೆಲಸವಾಗಿತ್ತು.
ದೀಪಾವಳಿಗೆ ತವರು ಮನೆಯ ದೊಡ್ಡಸ್ಥಿಕೆ ಬೇರೆ ಇತ್ತು. ಈಗ ನರಸಿಂಹನಿಗೆ ಸರಸ್ವತಿಯ ಬಗ್ಗೆ ಅನುಕಂಪ, ಪ್ರೀತಿ ಮೂಡಿತು. ಆದರೆ ಏನು ಮಾಡೋದು, ಎಲ್ಲವೂ ಮುಗಿದುಹೋದ ಅಧ್ಯಾಯ.
ಒಮ್ಮೆ ಹುಷಾರಿಲ್ಲದೆ, ತಲೆನೋವು ಹೆಚ್ಚಾದಾಗ, ಹೆಂಡತಿಗೆ ಚಹಾ ಮಾಡಿಕೊಡು ಎಂದು ಕೇಳಿದ. ಅದಕ್ಕೆ ಅವಳು ಹಾಲು ಇಲ್ಲ ಎಂದು ಉತ್ತರ ಕೊಟ್ಟಳು. ಅಡುಗೆ ಮನೆಗೆ ಹೋಗಿ ನೋಡಿದಾಗ, ಪಾತ್ರೆ ತುಂಬಾ ಹಾಲಿತ್ತು. ಕೇಳಿದ್ದಕ್ಕೆ, “ಮಗುವಿಗೆ ಕುಡಿಸೋಕೆ ಹಾಲು ಬೇಕು. ನೀನು ಚಹಾ ಕುಡಿಯಲಿಲ್ಲ ಅಂದ್ರೆ ಸತ್ತುಹೋಗ್ತೀಯಾ….” ಎಂದು ಕೇಳಿದಳು. ಆಗ ನರಸಿಂಹನಿಗೆ ಸರಸ್ವತಿ ನೆನಪಾಯ್ತು. ಹಿಂದೊಮ್ಮೆ ಮಗಳು ವಿನೀತಾ, `ಅಮ್ಮಾ…. ಹಾಲು ಕುಡಿಯಬೇಕು ಅನಿಸ್ತಿದೆ. ಹಾಲು ಕೊಡು,’ ಎಂದು ಕೇಳಿದ್ದಕ್ಕೆ, `ಬೇಡ ಮಗಳೇ….. ನೀನೊಬ್ಬಳೇ ಹಾಲು ಕುಡಿಯುವುದಕ್ಕಿಂತ ಹಾಲು ಹಾಕಿ ಪಾಯಸ ಮಾಡ್ತೀನಿ ಇರು. ಎಲ್ಲರೂ ಕುಡಿಯಬಹುದು,’ ಎಂದು ಹೇಳಿ ಅದೇ ಒಂದು ಗ್ಲಾಸ್ ಹಾಲಿನಿಂದ ಒಂದು ಪಾತ್ರೆ ಪಾಯಸ ಮಾಡಿ ಎಲ್ಲರಿಗೂ ಉಣ ಬಡಿಸಿದ್ದಳು.
ಒಮ್ಮೆಯೂ ಗಂಡನಿಗಾಗಲಿ, ಅತ್ತೆ ಮಾವನಿಗಾಗಿ ಎದುರು ನಿಂತು ಮಾತನಾಡಿರಲಿಲ್ಲ. ಮನೆಯ ಎಲ್ಲಾ ಕೆಲಸ ತಾನೊಬ್ಬಳೇ ಯಾರ ಸಹಾಯ ಇಲ್ಲದೆ ಮಾಡಿ ಮುಗಿಸುತ್ತಿದ್ದ ಹೆಂಡತಿ ಸರಸ್ವತಿಯ ಬಗ್ಗೆ ಈಗ ಹೆಮ್ಮೆ ಎನಿಸಿತು.
ಸರಸ್ವತಿ ಮಕ್ಕಳನ್ನು ಬೆಳೆಸುತ್ತಿದ್ದ ರೀತಿಗೂ ಈಗ ಇವಳು ಮಗನನ್ನು ಬೆಳೆಸುತ್ತಿರುವ ರೀತಿಗೂ ಅಜಗಜಾಂತರ ವ್ಯತ್ಯಾಸವಿತ್ತು. ವರ್ಷಗಳು ಉರುಳಿದವು. ಇವರ ಮುದ್ದಿನ ಮಗ ಹಾಳಾಗತೊಡಗಿದ. ಗೊತ್ತಿದ್ದರೂ ಏನೂ ಹೇಳದ ಪರಿಸ್ಥಿತಿ. ಅದೇ ಚಿಂತೆಯಲ್ಲಿ ತನ್ನ ತಾಯಿ ತಂದೆಯನ್ನೂ ಕಳೆದುಕೊಂಡ. ಅವರೂ ಸಹ ಮೊಮ್ಮಗನ ಬುದ್ಧಿ, ನಡವಳಿಕೆ ಕಂಡು ಬೇಸತ್ತಿದ್ದರು. ಮನೆಯಲ್ಲಿ ಏನೂ ತಿನ್ನುತ್ತಿರಲಿಲ್ಲ. ತಿಂಡಿ ಊಟ ಎಲ್ಲ ಹೊರಗೆ, ಓದುವುದು ಇಲ್ಲ, ಅಭ್ಯಾಸ ಇಲ್ಲ. ಯಾವಾಗಲ್ಲೂ ಟಿವಿ ನೋಡುತ್ತಾ ಎಲ್ಲ ಗೆಳೆಯರೊಡನೆ ಪೋಲಿ ಸುತ್ತುವುದು….. ಸಣ್ಣ ವಯಸ್ಸಿನಲ್ಲಿ ಇಲ್ಲ ಸಲ್ಲದ ಚಟಗಳನ್ನು ಕಲಿತು ಹಾಳಾಗುತ್ತಿರುವುದನ್ನು ನೋಡಿಯೇ ಹಿರಿಯ ಜೀವಗಳು ಕಣ್ಮುಚ್ಚಿದ್ದರು.
ನರಸಿಂಹ ಏನಾದರೂ ಬುದ್ಧಿ ಹೇಳಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಹೆಂಡತಿ ದೀಪಾ ಮಗನ ಪರವಹಿಸಿ, ಅವನ ಮುಂದೆಯೇ ಗಂಡನನ್ನು ಅವಮಾನ ಮಾಡುತ್ತಿದ್ದಳು. ಇದನ್ನೆಲ್ಲಾ ನೋಡಿ ನರಸಿಂಹ ತೆಪ್ಪಗಾಗುತ್ತಿದ್ದ.
ಇದೇ ಯೋಚನೆಯಲ್ಲಿದ್ದ ನರಸಿಂಹನಿಗೆ ಮಗ ಕುಡಿದು ತೂರಾಡುತ್ತಾ ಮನೆಗೆ ಬಂದು ಬೆಲ್ ಮಾಡಿದಾಗ ವಾಸ್ತವಕ್ಕೆ ಬಂದ. ಎದ್ದು ಹೋಗಿ ಬಾಗಲು ತೆರೆದ, ಮಗ ಕಂಠಪೂರ್ತಿ ಕುಡಿದು ನಿಲ್ಲಲು ಆಗದೆ ತೂರಾಡುತ್ತಾ, ನರಸಿಂಹನ ಸ್ನೇಹಿತನ ಜೊತೆ ಕೈ ಹಿಡಿದು ನಿಂತಿದ್ದ. ಸ್ನೇಹಿತನ ಜೊತೆ ಮಗನ ಅವತಾರ ನೋಡಿ ನಾಚಿಕೆಯಿಂದ ತಲೆ ತಗ್ಗಿಸಿ ನಿಂತ ನರಸಿಂಹನಿಗೆ ಭೂಮಿ ಬಾಯಿತೆರೆದು ತನ್ನನ್ನು ನುಂಗಬಾರದೇ ಎನಿಸಿತು. ಮಗನನ್ನು ಒಳಗೆ ಒಯ್ದು ಮಲಗಿಸಿ ಹೊರಗೆ ಬಂದು ತನ್ನ ಸ್ನೇಹಿತನ ಮುಂದೆ ತಲೆತಗ್ಗಿಸಿ ನಿಂತ. ಆಗ ಸ್ನೇಹಿತ, “ನೀನು ಮಾಡಿದ ತಪ್ಪು ನೀನೇ ಅನುಭವಿಸಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ….? ನಿನಗೆ, ನಿನ್ನ ಹೆಂಡತಿಗೆ ಎಷ್ಟು ಸಲ ಹೇಳಿದ್ರೂ ಬುದ್ಧಿ ಬರಲಿಲ್ಲ. ಈಗ ಅನುಭವಿಸು. ರಸ್ತೆಯಲ್ಲಿ ಕುಡಿದು ಬಿದ್ದಿದ್ದ. ಯಾವುದಾದರೂ ಗಾಡಿ ಬಂದು ಹೊಡೆದುಕೊಂಡು ಹೋದರೆ ಗತಿ ಏನು ಎನಿಸಿತು. ಮನಸ್ಸು ತಡೆಯಲಿಲ್ಲ. ಅದಕ್ಕೆ ರಿಕ್ಷಾ ಮಾಡಿಕೊಂಡು ಬಿಟ್ಟು ಹೋಗೋಣ ಎಂದು ಬಂದೆ,” ಎಂದು ಹೇಳಿ ಹೊರಟುಹೋದ.
ಇದನ್ನೆಲ್ಲಾ ಹೆಂಡತಿ ದೀಪಾಗೆ ಹೇಳಿದಾಗ, ಅವಳು ಅದೇ ತಾನೇ ತನ್ನ ಕಿಟಿ ಪಾರ್ಟಿ ಮುಗಿಸಿಕೊಂಡು ಬಂದು, ಇನ್ನೂ ಅದರ ಗುಂಗಿನಲ್ಲೇ ಮೊಬೈಲ್ ನಲ್ಲಿ ಮಾತಾಡುತ್ತಾ ತನ್ನ ರೂಮಿಗೆ ಹೋಗಿ ಮಲಗಿದಳು. ಗಂಡ ಏನು ಹೇಳುತ್ತಿದ್ದಾನೆ ಎಂದು ಕೇಳುವ ಕನಿಷ್ಠ ಸೌಜನ್ಯ ಸಹ ಅವಳಲ್ಲಿ ಇರಲಿಲ್ಲ.
ಪಾಪ ನರಸಿಂಹ ಊಟ ಮಾಡಲು ಅಡುಗೆಮನೆಗೆ ಹೋದರೆ ಅಲ್ಲಿ ಮಧ್ಯಾಹ್ನ ಮಾಡಿದ ಸ್ವಲ್ಪ ಅನ್ನ ಉಳಿದಿತ್ತು, ಸಾರು ಇರಲಿಲ್ಲ. ಏಕೋ ಊಟ ಮಾಡಲು ಮನಸ್ಸಾಗದೆ ಹಾಗೇ ನೀರು ಕುಡಿದು ಮಲಗಿದ. ವಾರದಲ್ಲಿ 4-5 ಬಾರಿ ಹೀಗೆಯೇ ಆಗುತ್ತಿದ್ದರಿಂದ ಇದೆಲ್ಲಾ ಅವನಿಗೆ ರೂಢಿ ಆಗಿತ್ತು.
ಇತ್ತ ಸರಸ್ವತಿ ತನ್ನ ನಾಲ್ಕು ಹೆಣ್ಣುಮಕ್ಕಳ ಬಗ್ಗೆ ಹೆಮ್ಮೆ ಪಡುತ್ತಿದ್ದರೆ, ಅಲ್ಲಿ ನರಸಿಂಹ ಇದ್ದ ಒಬ್ಬನೇ ಮಗನ ಸಲುವಾಗಿ ಅವಮಾನ ಪಡುವಂತಾಗಿತ್ತು.
ಹೀಗೆಯೇ ದಿನಗಳು ಕಳೆದವು. ಒಂದು ದಿನ ವಿನೀತಾ ಆಸ್ಪತ್ರೆಯಿಂದ ಬಂದವಳೇ, “ಅಮ್ಮಾ…. ಬೇಗ ಕ್ಯಾರಿಯರ್ ರೆಡಿ ಮಾಡಿಕೊಡು. ನಾನು ನೈಟ್ ಡ್ಯೂಟಿಗೆ ಹೋಗಬೇಕು,” ಎಂದಳು.
“ವಿನೀತಾ, ಹೋದ ವಾರ ತಾನೇ ನಿನ್ನ ನೈಟ್ ಶಿಫ್ಟ್ ಮುಗಿದಿದೆ. ಮತ್ತೆ ನೈಟ್ ಡ್ಯೂಟಿ ಮಾಡ್ತಿಯಾ….?” ಎಂದು ಕೇಳಿದಳು ಸರಸ್ವತಿ.
“ಇಲ್ಲಮ್ಮ ನೈಟ್ ಶಿಫ್ಟ್ ಅಲ್ಲ…. ನನಗೆ ಈಗ ಹೇಳೋಕೆ ಟೈಮ್ ಇಲ್ಲ….. ನಾಳೆ ಬೆಳಗ್ಗೆ ಬಂದು ಹೇಳ್ತೀನಿ ಪ್ಲೀಸ್….. ಕ್ಯಾರಿಯರ್ ರೆಡಿ ಮಾಡಿಕೊಡು ನನಗೆ ಈಗ ಪುರಸತ್ತು ಇಲ್ಲ……” ಎಂದು ಹೇಳುತ್ತಾ ಗಡಿಬಿಡಿಯಲ್ಲಿ ಕಪಾಟಿನಿಂದ ಒಂದಷ್ಟು ದುಡ್ಡು ತೆಗೆದುಕೊಂಡು ತನ್ನ ಪರ್ಸ್ ನಲ್ಲಿ ಇಟ್ಟುಕೊಂಡು, ಕ್ಯಾರಿಯರ್ ತೆಗೆದುಕೊಂಡು, ಸ್ಕೂಟಿ ಸ್ಟಾರ್ಟ್ ಮಾಡಿಕೊಂಡು ಹೊರಟೇಬಿಟ್ಟಳು.
ಮರುದಿನ ಬೆಳಗ್ಗೆ ಮಗಳ ದಾರಿ ಕಾಯುತ್ತಾ ಕುಳಿತ ಸರಸ್ವತಿಗೆ ಮಗಳು ತನ್ನ ಜೊತೆ ಯಾರೋ ಮತ್ತೊಬ್ಬ ವ್ಯಕ್ತಿಯನ್ನು ರಿಕ್ಷಾದಲ್ಲಿ ಕರೆದುಕೊಂಡು ಬಂದಿಳಿದಳು. `ಈ ಹುಡುಗಿ ಯಾರನ್ನು ಕರೆದುಕೊಂಡು ಬಂದ್ಲು?’ ಎಂದು ಬಾಗಿಲಿಗೆ ಬಂದು ನೋಡಿದಾಗ ತಲೆ ತಿರುಗಿದ ಹಾಗಾಯ್ತು. ಏಕೆಂದರೆ ಮಗಳು ನರಸಿಂಹನನ್ನು ಕರೆದುಕೊಂಡು ಬಂದಿದ್ದಳು.
ಏನು ಮಾಡಬೇಕೆಂದು ತೋಚದೆ ಸುಮ್ಮನೆ ಮನೆಯ ಒಳಗೆ ಹೋದಳು. ಮಗಳು ತಂದೆಯನ್ನು ರಿಕ್ಷಾದಿಂದ ಮೆಲ್ಲನೆ ಇಳಿಸಿ, ಹೆಗಲಿಗೆ ಆಸರೆ ಕೊಟ್ಟು ಒಂದೊಂದೇ ಹೆಜ್ಜೆ ಇಡುತ್ತಾ ಮನೆಯೊಳಗೆ ಕರೆತಂದು ಸೋಫಾದ ಮೇಲೆ ಕೂರಿಸಿ, ನೀರು ತಂದು ಕುಡಿಸಿ, ಅಮ್ಮನಿಗೆ ಕಾಫಿ ಮಾಡೋಕೆ ಹೇಳಲು ಅಡುಗೆ ಮನೆಗೆ ಹೋದಳು.
ಅಲ್ಲಿ ಸರಸ್ವತಿ ಅಳುತ್ತಾ ನಿಂತಿದ್ದಳು. ಇದನ್ನು ನೋಡಿದ ವಿನೀತಾ, “ಅಮ್ಮಾ….. ನಿನ್ನ ಪರಿಸ್ಥಿತಿ ನನಗೆ ಅರ್ಥವಾಯಿತು. ಆಮೇಲೆ ನಾನು ನಿನಗೆ ಎಲ್ಲಾ ಹೇಳ್ತೀನಿ. ಈಗ ಕಾಫಿ ಮಾಡಿಕೊಡು. ಪಾಪ….. ಅವರಿಗೆ ಸುಸ್ತಾಗಿದೆ,” ಎಂದಳು.
ಸರಸ್ವತಿ ಕಣ್ಣು ಒರೆಸಿಕೊಂಡು ಕಾಫಿ ಮಾಡಿ ಮಗಳ ಕೈಯಲ್ಲಿ ಕೊಟ್ಟು ತಾನು ಸುಮ್ಮನೆ ಮರೆಯಲ್ಲಿ ನಿಂತು ನೋಡುತ್ತಿದ್ದಳು. ಕೃಶವಾದ ದೇಹ, ಬಿಳಿ ಕೂದಲು, ಬಿಳಿಗಡ್ಡ, ಕಣ್ಣುಗಳಲ್ಲಿ ಅಸಹಾಯಕತೆ ಇದನ್ನೆಲ್ಲ ನೋಡಿ ಇವನೇನಾ ನನ್ನ ಗಂಡ ಆ ಉಗ್ರ ನರಸಿಂಹನಾ…. ಎಂದು ಅನುಮಾನ ಮೂಡಿತು.
ನರಸಿಂಹನಿಗೆ ಕಾಫಿ ಕುಡಿಸಿ, ಸ್ನಾನ ಮಾಡಿಸಿ, ಊಟ ಮಾಡಿಸಿ ಅವನನ್ನು ಮಲಗಿಸಿ ಅಮ್ಮನ ಬಳಿ ಬಂದು ತಂದೆಯ ಕಥೆ ಹೇಳಿದಳು.
ಮಗನ ಕೆಟ್ಟ ಚಟ, ಹೆಂಡತಿಯ ಬೇಜವಾಬ್ದಾರಿತನದಿಂದ ಕಂಗೆಟ್ಟು ಆಸ್ತಿಯೆಲ್ಲಾ ಮಾರಿದ ನರಸಿಂಹ, ಮನೆ ಬಿಟ್ಟು ಹೆಂಡತಿ ಸರಸ್ವತಿಯ ಫೋಟೋವೊಂದನ್ನು ಕಿಸೆಯಲ್ಲಿ ಇಟ್ಕೊಂಡು ಊರು ಬಿಟ್ಟು ಊರಿಗೆ ಬಂದು, ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದ. ಒಮ್ಮೆ ತಲೆ ಸುತ್ತು ಬಂದು ರಸ್ತೆಯಲ್ಲಿ ಬಿದ್ದಿರುವುದನ್ನು ವಿನೀತಾ ಆಕಸ್ಮಿಕವಾಗಿ ನೋಡಿದ್ದಳು. ಆ್ಯಂಬುಲೆನ್ಸ್ ಗೆ ಫೋನ್ ಮಾಡಿ, ತನ್ನ ಆಸ್ಪತ್ರೆಯಲ್ಲಿಯೇ ಸೇರಿಸಿ ಚಿಕಿತ್ಸೆ ಕೊಟ್ಟಿದ್ದಳು. ಆತನ ಕಿಸೆಯಲ್ಲಿದ್ದ ತನ್ನಮ್ಮನ ಫೋಟೋ ನೋಡಿ ಯಾರಿದು ಎಂದು ಕೇಳಿದಾಗ, ನರಸಿಂಹ ತನ್ನ ಕಥೆಯನ್ನೆಲ್ಲ ಹೇಳಿ ಕಣ್ಣೀರು ಹಾಕಿದ್ದ. ಇದನ್ನು ಕೇಳಿದ ವಿನೀತಾಗೆ ಪಶ್ಚಾತ್ತಾಪಕ್ಕಿಂತ ಹೆಚ್ಚಿನ ಶಿಕ್ಷೆ ಇಲ್ಲ ಎಂದೆನಿಸಿ, ಅವನ ಮುಂದೆ ತಾನು ಮಗಳೆಂದು ಹೇಳದೆ ತನ್ನ ಕರ್ತವ್ಯ ಮಾಡಿದ್ದಳು.
ನಿನ್ನೆ ರಾತ್ರಿ ಮನೆಯಿಂದ ಊಟ ಒಯ್ದು ತಿನ್ನಿಸಿ ಆಮೇಲೆ ನಿಧಾನವಾಗಿ ತಾನೇ ಮಗಳೆಂದು ನರಸಿಂಹನಿಗೆ ಹೇಳಿ, “ನೀವಿನ್ನೂ ಯಾವುದೇ ರೀತಿಯ ಚಿಂತೆ ಮಾಡಬೇಡಿ. ನಾನು ಮನೆಗೆ ಕರೆದುಕೊಂಡು ಹೋಗುತ್ತೇನೆ,” ಎಂದು ಭರವಸೆ ನೀಡಿ ಸಮಾಧಾನ ಮಾಡಿ, ಮನೆಗೆ ಕರೆದುಕೊಂಡು ಬಂದೆ ಎಂದು ತಾಯಿಗೆ ಎಲ್ಲಾ ವಿಷಯ ತಿಳಿಸಿದಳು.
ನರಸಿಂಹನಿಗೆ ಈಗ ತಾನು ಮಾಡಿದ ತಪ್ಪಿನ ಅರಿವಾಗಿ ನಾಲ್ಕು ಹೆಣ್ಣುಮಕ್ಕಳ ಜೊತೆ ಪ್ರೀತಿಯ ಹೆಂಡತಿ ಸರಸ್ವತಿಯ ಜೊತೆ ಸಂತೋಷದಿಂದ ಮುಂದಿನ ಜೀವನ ಸಾಗಿಸಿದ.





