ಮ್ಯಾಂಗೋ ಡಾಲಿಯಾ ಉಪ್ಮಾ
ಡಾಲಿಯಾ, (ಮುರಿದ ಗೋಧಿ) ಎಂಬುದು ಸಂಪೂರ್ಣ ಗೋಧಿ ಧಾನ್ಯದಿಂದ ನುಚ್ಚುಮಾಡಲಾಗುತ್ತದೆ. ಅನ್ನ ಅಥವಾ ರೋಟಿ ಗೆ ಬದಲಾಗಿ ಡಾಲಿಯಾ ಉಪ್ಮಾ ಒನ್ ಪಾಟ್ ಕುಕಿಂಗ್ ರೆಸಿಪಿ ಮಧುಮೇಹ , ತೂಕ ಇಳಿಸಲು ಒಂದು ಪೌಷ್ಟಿಕ ಆಹಾರ .
ಬೇಕಾಗುವ ಸಾಮಗ್ರಿ :
ಗೋಧಿ ನುಚ್ಚು ೧ ಕಪ್ (ಸುಮಾರು ೩೫೦-೪೦೦ ಗ್ರಾಂ ), ತುರಿದ ತೋತಾಪುರಿ ಮಾವಿನ ಕಾಯಿ ೧/೨ ಕಪ್ ತೆಂಗಿನ ತುರಿ ೧/೨ ಕಪ್, ಒಣಮೆಣಸಿನಕಾಯಿ ೫-೬ ( ಒಮ್ಮೆ ತರಿಯಾಗಿ ಮಿಕ್ಸರ್ ನಲ್ಲಿ ಮಾವು, ತೆಂಗು, ಒಣಮೆಣಸಿನಕಾಯಿಯನ್ನು ತರಿಯಾಗಿ ರುಬ್ಬಿ ಇಟ್ಟುಕೊಳ್ಳಿ ) , ಹಸಿ ಬಟಾಣಿ ೧/೪ ಕಪ್. ರುಚಿಗೆ ತಕ್ಕಷ್ಟು ಉಪ್ಪು , ಅರಿಶಿನ ೧/೪ ಚಮಚ , ಒಗ್ಗರಣೆಗೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ , ಸೋಂಪು ತಲಾ ೧/೪ ಚಮಚ.
ಮಾಡುವ ವಿಧಾನ
ಒಂದು ಕುಕ್ಕರ್ ಪಾತ್ರೆಯಲ್ಲಿ ಮೊದಲು ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಉದ್ದಿನ ಬೇಳೆ , ಸೋಂಪು ಸಿಡಿಸಿ. ರುಬ್ಬಿದ ಮಿಶ್ರಣ , ಅರಿಶಿನ , ಹಸಿ ಬಟಾಣಿ ಸೇರಿಸಿ ಬಾಡಿಸಿ . ಗೋಧಿ ನುಚ್ಚು ( ಡಾಲಿಯಾ) ಸೇರಿಸಿ ಒಮ್ಮೆ ಮಗುಚಿ , ನಂತರ ಅದಕ್ಕೆ ೨ ೧/೨ ಕಪ್ ನೀರು , ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮುಚ್ಚಳ ಮುಚ್ಚಿ ೨ ಸೀಟಿ ಕೂಗಿಸಿ ಉರಿ ಆರಿಸಿ. ಸ್ವಲ್ಪ ತಣಿದ ನಂತರ ಸರ್ವ್ ಮಾಡುವ ಮುನ್ನ ತೆಂಗಿನ ತೂರಿ ಕೊತ್ತಂಬರಿ ಉದುರಿಸಿ ಅಲಂಕರಿಸಿದರೆ ಆರೋಗ್ಯಕರ ಫೈಬರ್ ರಿಚ್ ಮ್ಯಾಂಗೋ ಡಾಲಿಯಾ ಉಪ್ಮಾ ಸವಿಯಲು ಸಿದ್ದ.
– ಕಾವ್ಯ ಭಾರದ್ವಾಜ್






