ಕಥೆ – ಶೇಖರಗೌಡ ವೀ.ಸ.
ಹರೆಯದ ಹುಚ್ಚುಖೋಡಿ ಮನಸ್ಸು ಹೇಗೆಲ್ಲಾ ಚಂಚಲವಾಗುತ್ತದೆ ಎಂಬುದಕ್ಕೆ ಸುಧನ್ವ–ದೇಬಶ್ರೀ ಮತ್ತು ಹಿಮಾಂಶು–ಪ್ರಶಾಂತಿ, ಪ್ರವಾಸಕ್ಕೆ ಬಂದು ಬೀಚ್ ನಲ್ಲಿ ಮೈಮರೆತರು. ಮುಂದೆ ಇವರುಗಳು ತಳೆದ ನಿರ್ಧಾರವಾದರೂ ಏನು…….?
ಶ್ರೀ ಜಗನ್ನಾಥ ಸ್ವಾಮಿ ನೆಲೆಸಿರುವ ಪುರಿ ನಗರದ ಬಂಗಾಳ ಉಪಸಾಗರದ ತಟದ ಬೀಚಿನಲ್ಲಿ ತಲ್ಲೀನರಾಗಿ ತಮ್ಮದೇ ಆದ ವರ್ಣರಂಜಿತ ಭಾವನಾ ಲೋಕದಲ್ಲಿ ಜನತೆ ಮುಳುಗಿತ್ತು. ತಮ್ಮ ಪುಟಾಣಿ ಮಕ್ಕಳೊಂದಿಗೆ ಬಂದಿರುವ ಗಂಡಹೆಂಡತಿಯರು, ಹಿರಿಯ ಸದಸ್ಯರೊಂದಿಗೆ ಬಂದಿರುವ ಕುಟುಂಬದವರು, ಸ್ನೇಹಿತರೊಂದಿಗೆ ಬಂದಿರುವ ಹುಡುಗರು, ಸ್ನೇಹಿತ, ಸ್ನೇಹಿತೆಯರೊಂದಿಗೆ ಬಂದಿರುವ ಹುಡುಗ ಹುಡುಗಿಯರು ತಮ್ಮದೇ ಆದ ಖುಷಿಯ ಕ್ಷಣಗಳಲ್ಲಿ, ಮೋಜುಮಸ್ತಿಯಲ್ಲಿ ನಿರತರಾಗಿದ್ದರು.
ಸೋಲಾ ಸಿಂಗಾರ ಮಾಡಿಕೊಂಡಿರುವ ಒಂಟೆಗಳ ಮೇಲೆ ತಮ್ಮ ಜೀವನದ ಕಣ್ಮಣಿಗಳಾದ ಪುಟಾಣಿ ಮಕ್ಕಳನ್ನು ಕೂಡ್ರಿಸಿಕೊಂಡು ಸಮುದ್ರ ತಟದ ಜಿನುಗು ಉಸುಗಿನ ಮೇಲೆ ಸವಾರಿ ಮಾಡುತ್ತಿದ್ದ ಕೆಲವು ಯುವ ದಂಪತಿಗಳು ಸಂತಸದ ಪರಾಕಾಷ್ಠೆ ಅನುಭವಿಸುತ್ತಿದ್ದರು. ಬಹಳಷ್ಟು ಜನ ಮಧ್ಯ ವಯಸ್ಕರು ಹೆಂಗಸರು, ಗಂಡಸರು ಎನ್ನುವ ಭೇದ ಭಾವ ಮರೆತು ಮೊಣಕಾಲಿನವರೆಗೆ ತಮ್ಮ ಪ್ಯಾಂಟು, ಸೀರೆ, ಚೂಡಿಗಳನ್ನು ಎತ್ತಿಕೊಂಡು ನೀರಿನ ಅಲೆಗಳ ತುಂಟಾಟದ ಸವಿಯ ಮತ್ತಿನಲ್ಲಿದ್ದರು.
ಕೆಳಗೆ ಬರೀ ಚೆಡ್ಡಿ, ಮೇಲೆ ಸಪೂರ ತೋಳುಗಳು, ಹೊಕ್ಕಳ ಸುಳಿ ಕಾಣುವಂಥ ಅರೆಬರೆ ದಿರಿಸುಗಳಲ್ಲಿ ಕೆಲವು ಹುಡುಗಿಯರು ಪಡ್ಡೆ ಹುಡುಗರ ಮನಸ್ಸುಗಳಿಗೆ ಪ್ರಚೋದನೆಯನ್ನೂ ನೀಡತೊಡಗಿದ್ದರು. ಹುಡುಗರೂ ನೇತ್ರಾನಂದ ಮಾಡಿಕೊಳ್ಳುತ್ತಾ ಮನದಣಿಯೆ ಸಂತಸ ಅನುಭವಿಸತೊಡಗಿದ್ದರು. ಒಂದಿಷ್ಟು ಯುವಕ ಯುವತಿಯರು ಸಮುದ್ರದಲ್ಲಿ ನೂರಾರು ಅಡಿಗಳವರೆಗೆ ನೀರಿನಲ್ಲಿ ಮುಂದೆ ಹೋಗಿ ಸಮುದ್ರಗಳಿಗೆ ತಮ್ಮನ್ನು ಒಡ್ಡಿಕೊಂಡು ಮೈ, ಬಟ್ಟೆಗಳನ್ನೆಲ್ಲಾ ಒದ್ದೆ ಮಾಡಿಕೊಂಡು ನೀರಾಟದಲ್ಲಿ ತೊಡಗಿ ಪರಸ್ಪರ ಸಂತಸ ಹಂಚಿಕೊಳ್ಳುತ್ತಾ, ಪರಸ್ಪರರ ದೈಹಿಕ ಸೌಂದರ್ಯದ ಆರಾಧನೆಯ ತುಂಟಾಟದಲ್ಲಿ ಜಗತ್ತನ್ನೇ ಮರೆತಿದ್ದರು.
ಹಲವಾರು ಹುಡುಗಿಯರು ಹುಡುಗರ ದೇಹದಾರ್ಢ್ಯದ ರೂಪು ರೇಷೆಗಳನ್ನು ವಾರೆ ನೋಟದಲ್ಲಿ ಸವಿಯುತ್ತಿದ್ದರೆ, ಹುಡುಗರು ಸಮುದ್ರದ ನೀರಿನಲ್ಲಿ ತೊಯ್ದು ತೊಪ್ಪೆಯಾಗಿದ್ದ ಹುಡುಗಿಯರ ದೇಹದ ಉಬ್ಬು ತಗ್ಗುಗಳನ್ನು ಕಣ್ಮನಗಳಲ್ಲಿ ತುಂಬಿಕೊಳ್ಳತೊಡಗಿದ್ದರೆ, ನವ ವಿವಾಹಿತರು, ಯುವ ಪ್ರೇಮಿಗಳು ತಮ್ಮ ಸಂಗಾತಿಗಳ ಸೌಂದರ್ಯದ ಆರಾಧನೆಯಲ್ಲಿ ನಿರತರಾಗಿದ್ದರು.
ಭುವನೇಶ್ವರದ ಪ್ರಸಿದ್ಧ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೊನೆಯ ಸೆಮ್ ನಲ್ಲಿ ಓದುತ್ತಿದ್ದ ಸುಧನ್ವ-ದೇಬಶ್ರೀ ಹಾಗೂ ಹಿಮಾಂಶು-ಪ್ರಶಾಂತಿ ಎಂಬ ಯುವ ಜೋಡಿಗಳೆರಡು ಈಗಾಗಲೇ ಒಂದು ತಾಸಿನಿಂದ ಸಮುದ್ರದಲೆಗಳ ನವಿರು ಹೊಡೆತಗಳ ಸವಿಯನ್ನು ಮೈಮನಗಳಲ್ಲಿ ತುಂಬಿಕೊಳ್ಳುತ್ತಾ ತಮ್ಮನ್ನು ತಾವೇ ಮರೆತ್ತಿತ್ತು.
ಭುವನೇಶ್ವರದಿಂದ ಬರುವಾಗ ಕೋನಾರ್ಕದ ಪ್ರಸಿದ್ಧ ಸೂರ್ಯ ದೇವಾಲಯದ ಸೊಬಗನ್ನು ಕಣ್ಮನಗಳಲ್ಲಿ ತುಂಬಿಕೊಂಡೇ ಬಂದಿದ್ದರು. ಹದಿಮೂರನೇ ಶತಮಾನದಲ್ಲಿ ನಿರ್ಮಿಸಲಾಗಿರುವ 228 ಅಡಿಗಳ ಎತ್ತರದ ಭವ್ಯ ದೇವಾಲಯದಲ್ಲಿನ ದೊಡ್ಡ ದೊಡ್ಡ ಗಾತ್ರದ 24 ಗಾಲಿಗಳು ಮತ್ತು ಏಳು ಕುದುರೆಗಳ ಕಲ್ಲಿನ ವಿಗ್ರಹಗಳ ಜೊತೆಗೆ ಅಲ್ಲಲ್ಲಿ ಢಾಳವಾಗಿ ಚಿತ್ರಿಸಿದ್ದ ವಿವಿಧ ಭಂಗಿಗಳ ಮಿಥುನ ಶಿಲ್ಪಗಳ ಕುತೂಹಲಕಾರಿ ದೃಶ್ಯಗಳನ್ನು ಕಳ್ಳನೋಟದಲ್ಲಿ ನೋಡುತ್ತಾ ಮನದಲ್ಲಿ ತುಂಬಿಕೊಂಡು ಬಂದಿದ್ದರು.
ಪುರಿಗೆ ಬಂದವರು ನೇರವಾಗಿ ಶ್ರೀ ಜಗನ್ನಾಥ ಸ್ವಾಮಿಯ ಜೊತೆಗೆ ಬಲಭದ್ರ ಮತ್ತು ಸುಭದ್ರಾ ದೇವಿಯರ ದರ್ಶನ ಆಶೀರ್ವಾದ ಪಡೆದು ಮನಸ್ಸುಗಳನ್ನು ಸಂತೃಪ್ತಿಗೊಳಿಸಿಕೊಂಡು ಹೊಸ ಹುಮ್ಮಸ್ಸಿನಿಂದ ಬೀಚಿಗೆ ಬಂದಿದ್ದರು. ಇಪ್ಪತ್ತೆರಡರ ಹರೆಯದ ಎರಡು ಯುವ ಜೋಡಿಗಳ ದೇಹದ ಪ್ರತಿ ಅಂಗಾಂಗಗಳಲ್ಲಿ ನವತಾರುಣ್ಯ ತುಂಬಿ ತುಳುಕಾಡುತ್ತಿತ್ತು. ಹೊಸ ಉತ್ಸಾಹ, ಹೊಸ ಚೈತನ್ಯ, ಹೊಸ ಹುಮ್ಮಸ್ಸಿನಿಂದ ನಾಲ್ವರೂ ಬೀಗುತ್ತಿದ್ದರು. ಸಮುದ್ರಕ್ಕಿಳಿದಿದ್ದ ಜೋಡಿಗಳೆರಡೂ ಕ್ಷಣಾರ್ಧದಲ್ಲಿ ಎದೆ ಎತ್ತರದ ನೀರಿನಾಳದವರೆಗೆ ತಲುಪಿ ತಮ್ಮ ನೀರಾಟ ಶುರು ಮಾಡಿದ್ದರು.
ಸುಧನ್ವ ದೇಬಶ್ರೀಯನ್ನು ತನ್ನ ಬೆನ್ನಿಗೇರಿಸಿಕೊಂಡು ಕೂಸುಮರಿ ಮಾಡಿಕೊಂಡು ಹೊರಟಿದ್ದನ್ನು ಕಂಡ ತಕ್ಷಣ, ಹಿಮಾಂಶು ಸಹ ಪ್ರಶಾಂತಿಯನ್ನು ತನ್ನ ಬೆನ್ನಿಗೇರಿಸಿಕೊಂಡು ನೀರಾಟ ನಡೆಸಿದ್ದ. ಕೆಲವೊಮ್ಮೆ ದೇಬಶ್ರೀ ಸುಧನ್ವನನ್ನು ತನ್ನ ಬೆನ್ನಿಗೇರಿಸಿಕೊಂಡು ನೀರಿನಲ್ಲಿ ಹೆಜ್ಜೆ ಹಾಕುತ್ತಿದ್ದಳು. ಅದನ್ನು ಕಂಡು ಪ್ರಶಾಂತಿಯೂ ಹಿಂದೆ ಬೀಳಲಿಲ್ಲ. ಹಿಮಾಂಶುನನ್ನು ತನ್ನ ಬೆನ್ನಿಗೇರಿಸಿಕೊಂಡು ವಯ್ಯಾರದಿಂದ ಹೆಜ್ಜೆ ಹಾಕಿದ್ದಳು. ಕೆಲವೊಂದು ಸಾರಿ ಪರಸ್ಪರರನ್ನು ನೀರಿನಲ್ಲಿ ಮುಳುಗಿಸಿ, ಮೈಮೇಲೆ ಬಿದ್ದು ತುಂಟಾಟ ಆಡತೊಡಗಿದ್ದರು.
ಎರಡು ಗಂಟೆಗಳ ಭರ್ಜರಿ ನೀರಾಟವಾಡಿದ ನಂತರ ದಂಡೆಗೆ ಬಂದ ಎರಡೂ ಜೋಡಿಗಳು ಫೋಟೋ ಸೆಶನ್ಸ್ ಗೆ ಮುಂದಾಗಿದ್ದರು. ಎರಡೂ ಜೋಡಿಗಳ ಹತ್ತಿರ ಆಧುನಿಕ ತಂತ್ರಜ್ಞಾನದ ಡಿಜಿಟಲ್ ಕ್ಯಾಮೆರಾ ಮತ್ತು ಲೇಟೆಸ್ಟ್ ಟ್ರೆಂಡಿನ ಮೊಬೈಲ್ ಸೆಟ್ ಗಳಿದ್ದವು. ತತ್ ಕ್ಷಣ ತಮ್ಮ ವಿವಿಧ ಭಂಗಿಗಳ ವೈಯಾರದ ಫೋಟೋಗಳನ್ನು ಪಡೆಯಲು ಅಲ್ಲಿದ್ದ ಪ್ರೊಫೆಷನಲ್ ಛಾಯಾಗ್ರಾಹಕರ ಮೊರೆ ಹೋಗಿ ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಪ್ರಶಾಂತಿ-ಹಿಮಾಂಶು ಜೋಡಿಯ ವಿವಿಧ ಭಂಗಿಗಳ ಫೋಟೋಗಳನ್ನು ದೇಬಶ್ರೀ ಕ್ಯಾಮೆರಾದಲ್ಲಿ ಕ್ಲಿಕ್ಕಿಸತೊಡಗಿದ್ದರೆ, ಅವಳಿಗಂಟಿಕೊಂಡು ನಿಂತಿದ್ದ ಸುಧನ್ವ ಪ್ರಶಾಂತಿಯ ದೇಹಸಿರಿಯನ್ನು ತನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುವುದರಲ್ಲಿ ಮುಂದಾಗಿದ್ದವು. ನೀರಿನಲ್ಲಿ ತೋಯ್ದು ತೊಪ್ಪೆಯಾಗಿದ್ದ ಪ್ರಶಾಂತಿಯ ಕೂದಲು, ಮೈಗಂಟಿಕೊಂಡಿದ್ದ ಬಟ್ಟೆಗಳನ್ನು ಯಾವ ಸಂಕೋಚ ಇಲ್ಲದೇ, ಹಿಮಾಂಶು ತಿದ್ದುತ್ತಾ ತೀಡುತ್ತಾ ಸರಿಪಡಿಸುತ್ತಿದ್ದರೆ, ಪ್ರಶಾಂತಿ ಹಿಮಾಂಶುವಿನ ಮೇಕಪ್ ಗೆ ಮುಂದಾಗಿದ್ದಳು. ಅವರಿಬ್ಬರ ಪ್ರತಿಕ್ಷಣದ ಶೃಂಗಾರ ಭರಿತ ಚಲನವಲನಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವಲ್ಲಿ ದೇಬಶ್ರೀ ತಲ್ಲೀನಳಾಗಿದ್ದಳು. ಪ್ರಶಾಂತಿಯ ಹಾಲು ಬಣ್ಣದ ಪ್ರಮಾಣಬದ್ಧ ಶರೀರ ಬೇಲೂರಿನ ಶಿಲಾಬಾಲಿಕೆಯನ್ನು ನಾಚಿಸುವಂತಿತ್ತು. ನೀರಿನಾಟದಿಂದ ತೊಯ್ದಿದ್ದ ಬಿಳಿಯ ತೋಳಿಲ್ಲದ ಶಾರ್ಟ್ ಟಾಪಿನಲ್ಲಿ ಅವಳ ಉನ್ನತ ವಕ್ಷಸ್ಥಳ ಸ್ಛುಟವಾಗಿ ಕಾಣುತ್ತಿತ್ತು. ಪ್ರಶಾಂತಿಯ ಬಾಬ್ ಮಾಡಿದ ಕಪ್ಪನೆಯ ಕರಿಮೋಡದಂತಹ ಮಿರಿ ಮಿರಿ ಮಿಂಚುವ ಕೂದಲು, ಸೇಬುಗಲ್ಲ, ವರ್ಣರಂಜಿತ ತುಟಿ, ಚಂಚಲ ಕಣ್ಣುಗಳು, ಸಿಂಹಕಟಿ, ಶಾರ್ಟ್ ಟಾಪಿನಲ್ಲಿ ಫುಲ್ ಕವರ್ ಆಗದೇ ಇದ್ದುದರಿಂದ ಢಾಳಾಗಿ ಕಾಣುತ್ತಿದ್ದ ಆಕರ್ಷಕ ಹೊಕ್ಕಳು, ನಳಿದೋಳುಗಳು ಮತ್ತು ಅವಳ ದೇಹದ ಇತರ ಸುಂದರ ಅಂಗಗಳನ್ನು ತನ್ನ ಮನದಲ್ಲಿ ಸುಧನ್ವ ಕಳ್ಳನೋಟದಲ್ಲಿ ತುಂಬಿಕೊಳ್ಳತೊಡಗಿದ್ದ.
ಕೊನಾರ್ಕಾದ ಸೂರ್ಯ ದೇವಾಲಯದಲ್ಲಿ ಕಂಡಿದ್ದ ಆಕರ್ಷಕ ಭಂಗಿಗಳಲ್ಲಿದ್ದ ಮಿಥುನ ಶಿಲ್ಪಗಳು ಮನದಲ್ಲಿ ಸುಳಿದು ಹೋದುದರಿಂದ ಮನಸ್ಸು ಅನಿರ್ವಚನೀಯವಾಗಿ ಮುದಗೊಂಡು ಅವನ ಮೈಮನಗಳು ಅವನಿಗೆ ಅರಿವಿಲ್ಲದಂತೆ ಉದ್ರೇಕಗೊಳ್ಳತೊಡಗಿದವು.
ಪಕ್ಕದಲ್ಲಿದ್ದ ತನ್ನ ಪ್ರೀತಿಯ ಹುಡುಗಿ ದೇಬಶ್ರೀಯ ಬಗ್ಗೆ ಸುಧನ್ವನಿಗೆ ಅರಿವೇ ಇರಲಿಲ್ಲ. ಪ್ರಶಾಂತಿಯ ಸೌಂದರ್ಯದ ಮುಂದೆ ದೇಬಶ್ರೀಯ ದೇಹಸಿರಿ ಅಷ್ಟಾಗಿ ಮತ್ತು ಬರಿಸುವಂತಿರಲಿಲ್ಲ. ಐದು ಅಡಿ ನಾಲ್ಕು ಇಂಚಿನ ಎತ್ತರದ ದೇಬಶ್ರೀ ಇತ್ತೀಚೆಗೆ ಸ್ವಲ್ಪ ತೂಕ ಹೆಚ್ಚಿಸಿಕೊಂಡಿದ್ದರಿಂದ ಅವಳ ಸಿಂಹಕಟಿ ಸುಧನ್ವನ ಮನದಲ್ಲಿ ಈಗ ಆಕರ್ಷಣೆ ಕಳೆದುಕೊಂಡಿತ್ತು. ಸುಧನ್ವ, ದೇಬಶ್ರೀಯನ್ನು ಪ್ರೀತಿಯಿಂದ `ಡುಮ್ಮಿ’ ಎಂದು ಆಗಾಗ ಚುಡಾಯಿಸುತ್ತಿದ್ದ.
ಅತ್ತ ಹಿಮಾಂಶುವಿನೊಂದಿಗೆ ಫೋಟೋ ತೆಗೆಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮಗ್ನಳಾಗಿದ್ದ ಪ್ರಶಾಂತಿಯ ಕಣ್ಣುಗಳು ದೇಬಶ್ರೀ ಕ್ಲಿಕ್ಕಿಸುತ್ತಿದ್ದ ಕ್ಯಾಮೆರಾದ ಕಡೆಗೆ ಇದ್ದರೂ ಆಗಾಗ ಕಳ್ಳನೋಟದಲ್ಲಿ ಸುಧನ್ವನ ನೋಟಕ್ಕೆ ತನ್ನ ನೋಟ ಬೆರೆಸಿ ಅಗಾಧವಾದ ಸಂತಸವನ್ನು ಅನುಭವಿಸಿ ತನ್ನೊಳಗೇ ಬೀಗುತ್ತಿದ್ದಳು. ಕಳ್ಳನೋಟದಲ್ಲಿ ಪರಸ್ಪರ ಕಳ್ಳಾಟ ಆಡತೊಡಗಿದ್ದುದು ಹಿಮಾಂಶುವಿಗಾಗಲಿ, ದೇಬಶ್ರೀಗಾಗಲಿ ಗಮನಕ್ಕಿರಲೇ ಇಲ್ಲ.
ಸುಧನ್ವ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಪ್ರಶಾಂತಿ ಮತ್ತು ಹಿಮಾಂಶುರ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರೂ, ಬಹಳಷ್ಟು ಫೋಟೋಗಳಲ್ಲಿ ಬರೀ ಪ್ರಶಾಂತಿಯ ಆಕರ್ಷಕ ಭಂಗಿಗಳನ್ನಷ್ಟೇ ಸೆರೆಹಿಡಿಯತೊಡಗಿದ್ದವು.
ಪ್ರಶಾಂತಿ ಮತ್ತು ಹಿಮಾಂಶುರ ಫೋಟೋ ಸೆಷನ್ ಮುಗಿಯುತ್ತಿದ್ದಂತೆ ದೇಬಶ್ರೀ ಮತ್ತು ಸುಧನ್ವರ ಫೋಟೋ ಸೆಷನ್ ಶುರುವಾಯಿತು. ಹಿಮಾಂಶು ಕ್ಯಾಮೆರಾದಲ್ಲಿ ದೇಬಶ್ರೀ ಮತ್ತು ಸುಧನ್ವರ ವಿವಿಧ ಆಕರ್ಷಕ ಭಂಗಿಗಳನ್ನು ಸೆರೆಹಿಡಿಯಲು ಶುರು ಮಾಡಿದರೆ, ಪ್ರಶಾಂತಿ ತನ್ನ ಮೊಬೈಲ್ ಕ್ಯಾಮೆರಾ ಆನ್ ಮಾಡಿದಳು.
“ಪ್ರಶಾಂತಿ ನೋಡಿಲ್ಲಿ…. ದೇಬಶ್ರೀ ಹೇಗೆ ಡುಮ್ಮಿಯಾಗುತ್ತಿದ್ದಾಳೆ….?” ಎನ್ನುತ್ತಾ ಅವಳ ನಡುವಿಗೆ ಕೈ ಹಾಕಿ ನಡುವಿನಲ್ಲಿ ಶೇಖರಣೆಯಾಗಿದ್ದ ಬೊಜ್ಜನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಅವಳನ್ನು ಕೆಣಕತೊಡಗಿದ್ದ ಸುಧನ್ವ.
“ಹುಡುಗರಿಗೆ ಹುಡುಗಿಯರ ಮೈಯಲ್ಲಿನ ಮೆತ್ತ ಮೆತ್ತನೆಯ ಮಾಂಸ ಕೈಗೆ ಸಿಕ್ಕರೆ ತುಂಬಾ ಖುಷಿಯಾಗುತ್ತೆ. ಅದಕ್ಕೇ ನಾನು ಸ್ವಲ್ಪ ಡುಮ್ಮಿಯಾಗಿದ್ದೇನೆ. ನಮ್ಮ ಒಡಿಸ್ಸಾದ ಹುಡುಗಿಯರೆಲ್ಲಾ ಹಾಗೇ ಅಲ್ವಾ….?
“ಕರ್ನಾಟಕದ ಈ ಸುಧನ್ವನಿಗೆ ಬಳ್ಳಿಯಂತೆ ಬಳಕುವ ಹುಡುಗಿ ನಮ್ಮ ರಾಜ್ಯದಲ್ಲಿ ಅದೆಲ್ಲಿ ಸಿಗಲಿಕ್ಕೆ ಸಾಧ್ಯ? ಕೆಲವು ಹಳ್ಳಿ ಹುಡುಗಿಯರು ಮಾತ್ರ ಸ್ವಲ್ಪ ಹಾಗಿರಲು ಸಾಧ್ಯ. ನಾವು ತಿನ್ನುವ ಜಂಕ್ ಫುಡ್ ನಿಂದ ಆಟೋಮೆಟಿಕ್ ಆಗಿ ದಪ್ಪ ಆಗುತ್ತೇವೆ ಅಲ್ವಾ….?” ಎಂದ ದೇಬಶ್ರೀ ಸುಧನ್ವನ ಮಾತಿಗೆ ಸ್ವಲ್ಪ ಬೇಸರ ಮಾಡಿಕೊಳ್ಳದೇ ಅವನನ್ನು ಖುಷಿಪಡಿಸುವ ಪ್ರಯತ್ನದಲ್ಲಿದ್ದ ಅವಳು ಅವನ ಖುಷಿಗಾಗಿ ತನ್ನೆದೆಯ ಸೀಳನ್ನು ಢಾಳಾಗಿ ಬಯಲಿಗಿಟ್ಟಿದ್ದಳು.
ಸುಧನ್ವ ಮತ್ತು ದೇಬಶ್ರೀಯರ ಪೋಸುಗಳನ್ನು ಕ್ಲಿಕ್ಕಿಸುವ ನೆಪದಲ್ಲಿ ಪ್ರಶಾಂತಿ, ಸುಧನ್ವನ ಕಣ್ಣುಗಳಲ್ಲಿ ತನ್ನ ಕಣ್ಣು ನೆಡುತ್ತಾ ಅವನೊಬ್ಬನದೇ ಹಲವಾರು ಫೋಟೋಗಳನ್ನು ತನ್ನ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಂಡಳು.
`ಈ ಸುಧನ್ವ ತುಂಬಾ ಸ್ಮಾರ್ಟ್ ಗೈ. ನನ್ನಂಥ ಬೆಡಗಿಯನ್ನು ಬಿಟ್ಟು ದೇಬಶ್ರೀಯನ್ನೇಕೆ ಆರಿಸಿಕೊಂಡನೋ ಏನೋ…..? ಇವನನ್ನು ಹೇಗಾದರೂ ಮಾಡಿ ನನ್ನವನನ್ನಾಗಿಸಿಕೊಳ್ಳಬೇಕು,’ ಎಂದು ತನ್ನ ಮನದಲ್ಲಿ ಮಂಡಿಗೆ ಮೆಲ್ಲತೊಡಗಿದಳು.
`ಈ ದೇಬಶ್ರೀ ನಿಜವಾಗಿಯೂ ನನ್ನಷ್ಟು ಸುಂದರಿಯಲ್ಲ. ಅವಳಲ್ಲಿ ಇವನು ಏನನ್ನು ಕಂಡನೋ…? ನಾನೂ ಹಿಮಾಂಶುವಿನ ಹಿಂದೆ ಬಿದ್ದಿಲ್ಲವೇ….? ಸುಧನ್ವನಿಗೆ ಹೋಲಿಸಿದರೆ ಹಿಮಾಂಶು ಅಂತಹ ಸುಂದರನೇನಲ್ಲ…. ಪ್ರೇಮಕ್ಕೆ ಕಣ್ಣಿಲ್ಲವೆಂದು ಇದಕ್ಕೇ ಹೇಳುತ್ತಾರೇನೋ….?’ ಎಂದು ಪ್ರಶಾಂತಿ ತನ್ನೊಳಗೇ ಹೇಳಿಕೊಂಡಳು.
ಕೋನಾರ್ಕದ ಸೂರ್ಯ ದೇವಾಲಯದಲ್ಲಿ ಶೃಂಗಾರ ಲೀಲೆಯಲ್ಲಿ ನಿರತನಾಗಿದ್ದ ಮಿಥುನ ಶಿಲ್ಪಗಳಲ್ಲಿನ ಗಂಡುಹೆಣ್ಣುಗಳು, ಅವರ ಅಂಗಾಂಗಗಳ ರೂಪು ರೇಷೆಗಳನ್ನು ನೆನಪಿಸಿಕೊಂಡ ಪ್ರಶಾಂತಿ ಉದ್ರೇಕಕ್ಕೆ ಒಳಗಾಗತೊಡಗಿದ್ದರಿಂದ ಅವಳ ಸುಪುಷ್ಟವಾದ ಎದೆ ಏರಿಳಿಯತೊಡಗಿದ್ದುದು ಅವಳ ಗಮನಕ್ಕೆ ಬರದೇ ಇದ್ದರೂ, ಸುಧನ್ವನ ಗಮನಕ್ಕೆ ಬಂದಿದ್ದರಿಂದ ನೀರಿನಲ್ಲಿ ತೊಯ್ದು ತೊಪ್ಪೆಯಾಗಿದ್ದ ಅವನ ಮೈಯಲ್ಲಿ ಅವನಿಗರಿವಿಲ್ಲದಂತೆ ಕಾವೇರತೊಡಗಿತ್ತು.
ಸಂಜೆಯ ಸೂರ್ಯ ಪಡುವಣ ದಿಕ್ಕಿನಲ್ಲಿ ಮರೆಯಾಗಲು ಹವಣಿಸುತ್ತಿದ್ದುರಿಂದ ಇಂದಿನ ನೀರಿನಾಟ ಸಾಕೆಂದು ಎರಡೂ ಯುವ ಜೋಡಿಗಳು ಬೀಚಿಗೆ ಸಮೀಪದ ಹೋಟೆಲಿನ ಕಡೆಗೆ ಹೆಜ್ಜೆ ಹಾಕಿದರು. ಏಕೆಂದರೆ ಅವರು ಇಂದು ಪುರಿಯಲ್ಲಿಯೇ ಠಿಕಾಣಿ ಹೂಡಬೇಕೆಂದು ಯೋಚಿಸಿಕೊಂಡೇ ಬಂದಿದ್ದರು. ಎರಡು ರೂಮುಗಳನ್ನು ತೆಗೆದುಕೊಂಡು ಒಂದರಲ್ಲಿ ದೇಬಶ್ರೀ ಮತ್ತು ಪ್ರಶಾಂತಿ ಹಾಗೂ ಇನ್ನೊಂದು ರೂಮಿನಲ್ಲಿ ಸುಧನ್ವ ಮತ್ತು ಹಿಮಾಂಶು ಸೇರಿಕೊಂಡರು.
ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಉನ್ನತ ಅಧಿಕಾರಿಯಾಗಿದ್ದ ಮೂಲತಃ ಕರ್ನಾಟಕದವರಾದ ಸುಧನ್ವನ ತಂದೆಗೆ ಭುವನೇಶ್ವರಕ್ಕೆ ವರ್ಗವಾದಾಗ ಸುಧನ್ವ ಆಗಷ್ಟೇ ಪಿಯುಸಿ ಮುಗಿಸಿದ್ದ. ಭುವನೇಶ್ವರದ ಒಳ್ಳೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅವನಿಗೆ ಅಡ್ಮಿಷನ್ ಸಿಕ್ಕಿತ್ತು. ಸುಧನ್ವ ತನ್ನ ಆರನೇ ಸೆಮ್ ಮುಗಿಸುವಷ್ಟರಲ್ಲಿ ಅವನ ತಂದೆಗೆ ಪುನಃ ಕರ್ನಾಟಕಕ್ಕೆ ವರ್ಗವಾಗಿತ್ತು. ಇನ್ನು ಉಳಿದಿದ್ದ ಎರಡು ಸೆಮ್ ಗಳನ್ನು ಮುಗಿಸಲು ಸುಧನ್ವ ಹಾಸ್ಟೆಲ್ ಗೆ ತನ್ನ ವಸತಿಯನ್ನು ಶಿಫ್ಟ್ ಮಾಡಿದ್ದ.
ದೇಬಶ್ರೀ ಮೂಲತಃ ಭುವನೇಶ್ವರದವಳೇ. ಅದರಂತೆ ಹಿಮಾಂಶು ಸಹ ಭುವನೇಶ್ವರಕ್ಕೆ ಸಮೀಪದ ಊರಿನವನು. ಆದರೆ ಮೂಲತಃ ಆಂಧ್ರದವಳಾಗಿದ್ದ ಪ್ರಶಾಂತಿ ತನ್ನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಕರ್ನಾಟಕದ ಬೆಂಗಳೂರಿನಲ್ಲಿ ಮುಗಿಸಿದ್ದರಿಂದ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಿದ್ದಳು.
ಮನಸ್ವೀ ಹರಟೆ ಹೊಡೆಯುತ್ತಾ ಹೋಟೆಲ್ ನಲ್ಲಿ ಊಟ ಮುಗಿಸಿದ ಜೋಡಿಗಳೆರಡೂ ತಮ್ಮ ತಮ್ಮ ರೂಮುಗಳನ್ನು ಸೇರುವಷ್ಟರಲ್ಲಿ ರಾತ್ರಿ ಹನ್ನೊಂದು ದಾಟಿತ್ತು. ಇಡೀ ದಿನ ತಿರುಗಾಡಿದ್ದರಿಂದ ಹಿಮಾಂಶು ರೂಮಿಗೆ ಬಂದು ಹಾಸಿಗೆಯ ಮೇಲೆ ಅಡ್ಡಾಗುತ್ತಿದ್ದಂತೆ ನಿದ್ದೆಗೆ ಜಾರಿ ಗೊರಕೆ ಹೊಡೆಯತೊಡಗಿದ. ಏಕೋ, ಏನೋ ಸುಧನ್ವನಿಗೆ ನಿದ್ದೆ ದೂರವಾಗಿತ್ತು.
ಹಿಮಾಂಶು ನಿದ್ದೆಗೆ ಜಾರುತ್ತಿದ್ದಂತೆ, ಸುಧನ್ವ ತನ್ನ ಮೊಬೈಲ್ ನಲ್ಲಿ ಬೆಳಗ್ಗೆಯಿಂದ ಕ್ಲಿಕ್ಕಿಸಿದ್ದ ಫೋಟೋಗಳನ್ನು ಕಣ್ಣುಗಳಲ್ಲಿ ತುಂಬಿಕೊಳ್ಳತೊಡಗಿದ. ಪುರಿಯ ಬೀಚ್ ನಲ್ಲಿ ಸೆರೆ ಹಿಡಿದ ಫೋಟೋಗಳಲ್ಲಿನ ಪ್ರಶಾಂತಿಯ ಸೌಂದರ್ಯರಾಶಿ ಅವನ ಮನವನ್ನು ಕೆಣಕತೊಡಗಿತು. ಪ್ರಶಾಂತಿಯ ಆಕರ್ಷಕ ರೂಪಕ್ಕೆ ಅವನು ಮಾರುಹೋಗಿದ್ದ. ಸುಧನ್ವನ ಮೈಯಲ್ಲಿ ಕಾವೇರತೊಡಗಿತು. ಉಸಿರಾಟದಿಂದ ಎದೆಯ ಬಡಿತ ಹೆಚ್ಚಾಗತೊಡಗಿತ್ತು. ಎಷ್ಟೋ ಹೊತ್ತಿನವರೆಗೂ ತನಗೆ ಇಷ್ಟವಾದ ಬಹಳಷ್ಟು ಫೋಟೋಗಳನ್ನು ಮೇಲಿಂದ ಮೇಲೆ ನೋಡಿಯೇ ನೋಡಿದ. ಅವನ ಮನಸ್ಸು ಚಂಚಲವಾಗತೊಡಗಿತು. ಹವಾನಿಯಂತ್ರಿತ ರೂಮಿನಲ್ಲಿಯೂ ಬೆವರತೊಡಗಿದ. ನಿದ್ದೆ ದೂರಾಗಿದ್ದರಿಂದ ನಾಲ್ಕನೇ ಅಂತಸ್ತಿನಲ್ಲಿದ್ದ ರೂಮಿನಿಂದ ಹೊರಬಂದು ಟೆರೇಸಿಗೆ ಬಂದ.

ಆಕಾಶದಲ್ಲಿ ಹುಣ್ಣಿಮೆಯ ಚಂದ್ರ ವಿಜೃಂಭಿಸತೊಡಗಿದ್ದ. ಹಾಲಿನಂಥ ಬೆಳದಿಂಗಳು ಎಲ್ಲೆಡೆ ಹರಡಿತ್ತು. ಶುಭ್ರ ನೀಲಾಕಾಶದಲ್ಲಿ ಚುಕ್ಕಿಗಳು ಮಿನುಗಲು ಪ್ರಯತ್ನಿಸುತ್ತಿದ್ದರೂ, ಚಂದ್ರನ ಪ್ರಭೆಯ ಮುಂದೆ ಮಂಕಾಗಿದ್ದ ಎನ್ನಬಹುದು. ಹೋಟೆಲಿನ ಎದುರುಗಡೆಯೇ ಬೀಚ್ ಇದ್ದುದರಿಂದ ನಾಲ್ಕನೆಯ ಅಂತಸ್ತಿನ ಕಟ್ಟಡದ ಟೆರೇಸಿನಿಂದ ಸಮುದ್ರದಲೆಗಳ ಭೋರ್ಗರೆತ ರಾತ್ರಿಯ ನೀರವತೆಯಲ್ಲಿ ಸ್ಪಷ್ಟವಾಗಿ ಕೇಳುತ್ತಿತ್ತು. ತಂಗಾಳಿಗೆ ಮೈಯೊಡ್ಡಿದ ಸುಧನ್ವನಿಗೆ ತಕ್ಕಮಟ್ಟಿಗೆ ಹಾಯೆನಿಸತೊಡಗಿತು. ಚಂದ್ರನ ತಂಬೆಳಕು, ಸಮುದ್ರದ ಅಲೆಗಳ ಆರ್ಭಟಕ್ಕೆ ಅವನ ಮನಸ್ಸು ಮುದಗೊಳ್ಳತೊಡಗಿತು.
ಅಷ್ಟರಲ್ಲಿ ಏನೋ ಶಬ್ದವಾದಂತಾಗಿದ್ದರಿಂದ ಕೊಂಚ ಹೆದರಿದ ಸುಧನ್ವ ಶಬ್ದ ಬಂದ ಕಡೆಗೆ ತಿರುಗಿದ. ಪ್ರಶಾಂತಿ ಇವನೆಡೆಗೆ ಬರುತ್ತಿರುವುದು ಕಾಣಿಸಿತು. ಅವನ ಮನಸ್ಸು ಅಚ್ಚರಿಯ ಜೊತೆಗೆ ಖುಷಿಯಿಂದ ಅರಳತೊಡಗಿತು. ಅವನಿಗೆ ಒಂದು ರೀತಿಯ ಅನಿರ್ವಚನೀಯ ಆನಂದದ ಹೊಳೆಯಲ್ಲಿ ಈಜಾಡಿದ ಅನುಭವ ಆಗತೊಡಗಿತು. ಸಂತಸದಿಂದ ಬೀಗುತ್ತಿದ್ದ ಸುಧನ್ವನ ಮನಸ್ಸಿಗೆ ಅವಳನ್ನು ಮಾತನಾಡಿಸಬೇಕು ಎನ್ನುವುದೇ ಮರೆತುಹೋಗಿತ್ತು. ತದೇಕ ಚಿತ್ತದಿಂದ ಪ್ರಶಾಂತಿಯ ಚೆಲುವನ್ನು ತನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಿದ್ದ.
“ಹಾಯ್ ಸುಧನ್ವ ನೀನಿಲ್ಲಿ……? ನಿದ್ದೆ ಬರಲಿಲ್ಲವೇ…? ಅದ್ಹೇಗೆ ನಿದ್ದೆ ಬಂದೀತು ಅಲ್ವೇ…..?” ಪ್ರಶಾಂತಿ ತನ್ನ ಜೇನ ದನಿಯಲ್ಲಿ ಉಲಿಯುತ್ತಾ ಸುಧನ್ವನ ಸಮೀಪ ಬಂದಾಗ ಅವನಿಗೇ ಹೇಗ್ಹೇಗೋ ಆಯಿತು. ಅವಳನ್ನು ತಬ್ಬಿ ಹಿಡಿದು ಅವಳ ಚೆಂದುಟಿಗಳನ್ನು ಮುದ್ದಿಸಿಬಿಡಲೇ ಎಂದು ಅವನ ಮನಸ್ಸು ಚಂಚಲವಾದರೂ ಅದು ಹೇಗೋ ಹತೋಟಿಗೆ ತಂದುಕೊಂಡು, “ಪ್ರಶಾಂತಿ ನನಗೆ ನಿದ್ದೆ ಬರದಿದ್ದುದು ನಿನಗ್ಹೇಗೆ ಗೊತ್ತಾಯಿತು?” ಎಂದು ಕೇಳಿದ.
“ಬೀಚಿನಲ್ಲಿ ನೀನು ತೆಗೆದ ಫೋಟೋಗಳನ್ನು ನೋಡುತ್ತಾ ನೋಡುತ್ತಾ ನಿನಗೆ ನಿದ್ದೆ ಬಂದಿರಲಿಕ್ಕಿಲ್ಲ ಅಲ್ಲವೇ….?”
“ಅದ್ಹೇಗೆ ಹೇಳುತ್ತಿರುವಿ…..?”
“ಏಯ್ ಕಳ್ಳ…..! ನನಗೆ ಅಷ್ಟೂ ತಿಳಿಯಲ್ವೇ….? ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಅಂತ ಹಿರಿಯರು ಸುಮ್ಮನೆ ಹೇಳಿದ್ದಾರಾ….? ನೀನು ಬೀಚ್ ನಲ್ಲಿ ಈ ನನ್ನ ದೇಹಸಿರಿಯನ್ನು ನಿನ್ನ ಮೊಬೈಲ್ ನಲ್ಲಿ ಸೆರೆಹಿಡಿದದ್ದು…. ನೀನು ಇದುವರೆಗೂ ಅದನ್ನೇ ನಿನ್ನ ಕಂಗಳಲ್ಲಿ ತುಂಬಿಕೊಂಡಿದ್ದೀ ಎಂದು ನನಗೆ ಚೆನ್ನಾಗಿ ಗೊತ್ತಿದೆ,” ಎಂದು ತುಂಟ ನಗೆ ಬೀರಿದಳು.
“ಹೌದಾ….?” ಎಂದು ಹುಬ್ಬೇರಿಸಿದ.
“ಹೌದು… ನಾನೂ ಸಹ ಇದುವರೆಗೂ ಅದನ್ನೇ ಮಾಡಿದ್ದು. ಇದರಲ್ಲಿ ಮುಚ್ಚಿಡುವುದೇನಿಲ್ಲ. ಸುಧೂ…. ನಾನು ನೇರವಾಗಿಯೇ ಹೇಳುವೆ, ಐ ಲವ್ ಯೂ, ಯೂ ಆರ್ ಆಲ್ಸೋ ಲವಿಂಗ್ ಮಿ…..” ಪ್ರಶಾಂತಿಯ ದಿಟ್ಟ ಮಾತಿಗೆ ದಿಗ್ಭ್ರಾಂತನಾಗಿದ್ದ ಸುಧನ್ವ.
“ಮತ್ತೆ ನನ್ನ ಮತ್ತು ದೇಬಶ್ರೀಯ ಪ್ರೀತಿ ಹಾಗೂ ನಿನ್ನ ಮತ್ತು ಹಿಮಾಂಶುವಿನ ಪ್ರೀತಿ…..?”
“ಸುಧೂ….. ನೀನೊಬ್ಬ ಗುಲ್ಡು ನೋಡು. ನಿನ್ನಿಂದ ಸುಖ ಪಡೆಯಲು ದೇಬಶ್ರೀ ನಿನ್ನನ್ನು ಪ್ರೀತಿಸುತ್ತಿರುನ ನಾಟಕ ಆಡುತ್ತಿದ್ದಾಳೆ ಅಷ್ಟೇ. ಈ ಒಡಿಸ್ಸಾ ಹುಡುಗಿಯರೇ ಅಷ್ಟು. ನಿನ್ನಿಂದ ಎಲ್ಲಾ ಪುಕ್ಕಟೆಯಾಗಿ ಸಿಗುತ್ತಿರುವಾಗ ಅಷ್ಟೂ ನಾಟಕ ಆಡಲು ಅವಳಿಗೆ ಬರುವುದಿಲ್ಲವೇ….?
“ದೇಬಶ್ರೀ ನಿನ್ನಿಂದ ಎಲ್ಲವನ್ನೂ ಪಡೆಯಲು ತನ್ನನ್ನು ತೆರೆದುಕೊಂಡಿರುವಂತೆ ನಾನೂ ಸಹ ತೆರೆದುಕೊಳ್ಳಬಹುದೆಂದು ಈ ಹಿಮಾಂಶು ನಿರೀಕ್ಷೆಯಲ್ಲಿದ್ದಾನೆ. ನಿನಗೆ ತನ್ನೆಲ್ಲವನ್ನೂ ಒಪ್ಪಿಸಿಕೊಂಡಿರುವ ದೇಬಶ್ರೀಯಂತೆ ನಾನೇನು ಅಷ್ಟು ಮತಿಗೆಟ್ಟಿಲ್ಲ….” ಎಂದಳು ಪ್ರಶಾಂತಿ.
“ದೇಬಶ್ರೀಯ ಜೊತೆಗೆ ಸುಖಿಸಿರುವಂತೆ ನಾನು ನಿನ್ನೊಂದಿಗೂ ಸುಖಿಸಿ ಇನ್ನೊಬ್ಬಳನ್ನು ನೋಡಿಕೊಂಡರೆ…..?”
“ಅಂತಹ ಧೈರ್ಯ ನಿನ್ನಲ್ಲಿ ಇಲ್ಲವೆಂದು ನನಗೆ ಮನದಟ್ಟಾಗಿದೆ. ನೀನಂಥ ವಿಷಯಲಂಪಟ ಅಲ್ಲ ಅಂತ ನನಗೆ ಚೆನ್ನಾಗಿ ಗೊತ್ತಿದೆ. ಅದೆಲ್ಲವನ್ನೂ ಚೆನ್ನಾಗಿ ಸ್ಟಡಿ ಮಾಡಿಯೇ ನಾನು ನಿನ್ನನ್ನು ಪ್ರೀತಿಸಿರುವುದು. ಬಹಳ ದಿನಗಳಿಂದ ನನ್ನ ಮನದಲ್ಲಿ ಇದ್ದುದನ್ನು ನಿನ್ನೊಂದಿಗೆ ಹಂಚಿಕೊಳ್ಳಬೇಕೆಂದಿದ್ದೆ. ಇಂದು ಸಮಯ ಕೂಡಿ ಬಂದಿದೆ. ಇಂದು ನಿನ್ನ ಮನದ ನಾಡಿಮಿಡಿತ ನನಗೆ ಸ್ಪಷ್ಟವಾಗಿ ಅರ್ಥವಾಯಿತು.”
“ಹಿಮಾಂಶು ಅಂಥ ಹುಡುಗನಲ್ಲ ಪ್ರಶಾಂತಿ…..”
“ನಿನಗಿಂತಲೂ ಅವನು ನನಗೆ ಚೆನ್ನಾಗಿ ಗೊತ್ತು. ಈಗಾಗಲೇ ಅವನು ಐದನೇ ಸೆಮ್ ನಲ್ಲಿ ಓದುತ್ತಿರುವ ಬಿಪಾಷಾ ಎಂಬ ಬೆಂಗಾಳಿ ಬೆಡಗಿಯ ಹಿದೆ ಬಿದ್ದಿದ್ದಾನೆ. ಮೇಲಾಗಿ ಹಿಮಾಂಶುವಿಗೆ ಕೋಲ್ಕತಾದ ಕಂಪನಿಯೊಂದರಲ್ಲಿ ಪ್ಲೇಸ್ ಮೆಂಟ್ ಆಗಿರುವುದರಿಂದ ಬಿಪಾಷಾ ತುಂಬಾ ಖುಷಿಯಲ್ಲಿದ್ದಾಳೆ.
“ಇಂದು ಇಲ್ಲಿಗೆ ಬಂದಿರುವ ಅವನ ಉದ್ದೇಶವೇ ಬೇರೆ ಇತ್ತು. ನಾನೂ, ಅವನು ಒಂದೇ ರೂಮಿನಲ್ಲೂ, ನೀನೂ ದೇಬಶ್ರೀ ಒಂದು ರೂಮಿನಲ್ಲಿ ಇರಬೇಕು ಎಂಬ ಉದ್ದೇಶವಿತ್ತು.
“ಆದರೆ ನನ್ನ ಹಠದಿಂದ ನಾವಿಬ್ಬರೂ ಹುಡುಗಿಯರು ಒಂದು ರೂಮಿನಲ್ಲೂ, ನೀವಿಬ್ಬರು ಹುಡುಗರು ಒಂದು ರೂಮಿನಲ್ಲಿ ಇರುವಂತಾಯಿತು. ತನ್ನ ಹೆಣ್ತನವನ್ನು ಈಗಾಗಲೇ ನಿನಗೊಪ್ಪಿಸಿರುವ ದೇಬಶ್ರೀಯಂತೆ ನಾನಲ್ಲ.
“ನೀನು ಈಗಾಗಲೇ ಅವಳೊಂದಿಗೆ ರಸಮಯ ಗಳಿಗೆಗಳನ್ನು ಹಂಚಿಕೊಂಡಿದ್ದರೂ ನನ್ನ ಮನಸ್ಸು ನಿನ್ನನ್ನೇ ಪ್ರೀತಿಸು ಎಂದು ಒತ್ತಾಯಿಸುತ್ತಿದೆ. ನಿನ್ನಲ್ಲೇನೋ ಮೋಹ……!!
“ನಮ್ಮ ಈ ಸೆಮ್ ಮುಗಿಯುವಷ್ಟರಲ್ಲಿ ದೇಬಶ್ರೀಯ ವಿವಾಹ ಮುಗಿದು ಹೋದರೆ ಅಚ್ಚರಿಯೇನಲ್ಲ. ನಿಮ್ಮಿಬ್ಬರ ಪ್ರೇಮದ ಬಗ್ಗೆ ದೇಬಶ್ರೀ ತನ್ನ ಮನೆಯವರ ಹತ್ತಿರ ಮಾತಾಡಿದಾಗ, ಅವಳ ಮನೆಯವರು, `ಆ ಸುಧನ್ವ ಅದ್ಯಾವ ರಾಜ್ಯದವನೋ, ಯಾವ ಜಾತಿಯವನೋ ಏನೋ….? ಅದೆಲ್ಲಾ ಬೇಡ. ನಮ್ಮ ಸಂಬಂಧಿಕರಲ್ಲೇ ಪ್ರಭಾವಿ ಸಚಿವರೊಬ್ಬರ ಮಗನ ಜೊತೆಗೆ ನಿನ್ನ ಮದುವೆ ಮಾಡುವ ಇಚ್ಛೆ ನಮಗಿದೆ. `ಹಾಗೇನಾದರೂ ನೀನು ಸುಧನ್ವನಿಗೇ ಹೆಚ್ಚಿನ ಒಲವು ತೋರಿಸಿದರೆ, ಅವನನ್ನು ನಾವು ಕೊಚ್ಚಿ ಹಾಕಿದರೂ ಹಾಕಬಹುದು. ಅವನ ಸಾವಿಗೆ ನೀನು ಕಾರಣಳಾಗಬೇಡ ಅಷ್ಟೇ!’ ಎಂದು ಈಗ್ಗೆ ಒಂದೆರಡು ವಾರದ ಹಿಂದಷ್ಟೇ ಹೇಳಿದ್ದಾರಂತೆ.
“ಹೀಗಾಗಿ ಅವಳು ಅಂದಿನಿಂದ ನಿನಗೆ ಗೊತ್ತಾಗದಂತೆ ನಿನ್ನ ಜೊತೆಗೆ ಮಾತು ಕಡಿಮೆ ಮಾಡುತ್ತಾ ಇದ್ದಾಳೆ. ಇಂದು ನನ್ನ ಜೊತೆ ಬರುತ್ತಿರುವುದಾಗಿ ತನ್ನ ಮನೆಯವರನ್ನು ಯಾಮಾರಿಸಿ ಇಲ್ಲಿಗೆ ಬಂದಿದ್ದಾಳೆ.
“ನಿನ್ನ ಜೀವಕ್ಕೆ ಅಪಾಯ ಮಾಡು ಮನಸ್ಸು ಅವಳಿಗಿಲ್ಲ. ಇನ್ನೇನು ತಿಂಗಳೊಪ್ಪತ್ತಿನಲ್ಲಿ ನಮ್ಮ ಬಿಇ ಕೋರ್ಸ್ ಮುಗಿಯುತ್ತೆ. ಹಿಮಾಂಶು ಕೋಲ್ಕೊತ್ತಾಕ್ಕೆ ಹಾರುತ್ತಾನೆ. ನನಗೂ, ನಿನಗೂ ಬೆಂಗಳೂರಿನ ಕಂಪನಿಗಳಲ್ಲಿ ಪ್ಲೇಸ್ ಮೆಂಟ್ ಆಗಿರುವುದರಿಂದ ನಾವಿಬ್ಬರೂ ಬೆಂಗಳೂರಿಗೆ ಹೊರಡುತ್ತೇವೆ ಅಷ್ಟೆ.
“ಇಂದು ಹೇಗಾದರೂ ಮಾಡಿ ಹಿಮಾಂಶು ನನ್ನನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದಿದ್ದ. ಆದರೆ ನನಗೆ ಮದುವೆಗೆ ಮುಂಚೆ ನನ್ನತನವನ್ನು ಕಳೆದುಕೊಳ್ಳುವ ಇಚ್ಛೆ ಇಲ್ಲ. ನನ್ನ ಬಾಳ ಸಂಗಾತಿಗಾಗಿ ನನ್ನತನ ಮೀಸಲು.
“ದೇಬಶ್ರೀಯಲ್ಲಿ ನೀನೀಗಾಗಲೇ ಆಕರ್ಷಣೆ ಕಳೆದುಕೊಳ್ಳುತ್ತಿರುವುದು ನನ್ನ ಮನದ ಅರಿವಿಗೆ ಬರತೊಡಗಿದೆ. ದೇಬಶ್ರೀಯೂ ತನ್ನ ಮನೆಯವರ ಒತ್ತಡಕ್ಕೆ ಮಣಿದು ನಿನ್ನಿಂದ ದೂರವಾಗಲು ಮಾನಸಿಕವಾಗಿ ಸಿದ್ಧಳಾಗತೊಡಗಿದ್ದಾಳೆ.
“ನಿನ್ನಲ್ಲಿನ ನನ್ನ ಒಲವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ನನ್ನ ಮನಸ್ಸು ನಿನ್ನನ್ನೇ ಬಯಸುತ್ತಿದೆ. ಈಗ ನಿನ್ನ ಮನಸ್ಸಿನಲ್ಲಿ ಇರುವುದನ್ನು ನನಗೆ ಹೇಳು,” ಎಂದು ಪ್ರಶಾಂತಿ ಸುದೀರ್ಘವಾಗಿ ಮಾತಾಡಿದಳು.
ಬೆಪ್ಪನಂತೆ ಎಲ್ಲವನ್ನೂ ಕೇಳಿಸಿಕೊಳ್ಳತೊಡಗಿದ್ದ ಸುಧನ್ವ, “ಅರೇ ಪ್ರಶಾಂತಿ, ಇಷ್ಟೆಲ್ಲಾ ವಿಷಯಗಳನ್ನು ಸಂಗ್ರಹಿಸಿರುವೆಯಲ್ಲಾ…. ಅದು ಹೇಗೆ….? ರಿಯಲಿ ವಂಡರ್ ಫುಲ್. ಹೌದು, ದೇಬಶ್ರೀ ನನಗೆ ಕೈಕೊಡುತ್ತಾಳೆಯೇ…..? ಮತ್ತೆ ನೀನೇಕೆ ನನ್ನನ್ನು ಮೆಚ್ಚಿಕೊಂಡಿರುವಿ…..? ಅಫ್ ಕೋರ್ಸ್ ನಿನ್ನಲ್ಲಿ ನನಗೆ ಒಲವು ಮೂಡುತ್ತಿರುವುದಂತೂ ನಿಜ. ನಿನ್ನ ನಂಬಿಕೆಗೆ ನಾನು ದ್ರೋಹ ಬಗೆದು ಇನ್ನೊಬ್ಬಳ ಬಗ್ಗೆ ಒಲವು ತೋರಿಸಿದರೆ ಹೇಗೆ? ನನ್ನಲ್ಲಿ ನಿನಗೆ ಅಷ್ಟು ನಂಬಿಕೆಯೇ….?”
“ಸುಧೂ, ನೀನು ಹಾಗೆಲ್ಲ ಹೂವಿನಿಂದ ಹೂವಿಗೆ ಹಾರುವ ದುಂಬಿ ಆಗುವುದಿಲ್ಲ ಎಂದು ನನ್ನ ಮನಸ್ಸು ಹೇಳುತ್ತಿದೆ. ನನಗಷ್ಟು ನಂಬಿಕೆ ಇದೆ. ಈಗಲೂ ನಿನಗೆ ನನ್ನ ಬಗ್ಗೆ ಒಲವಿದ್ದರೂ ದೇಬಶ್ರೀ ನಿನ್ನವಳಾಗಲು ತಯಾರಿದ್ದರೆ, ನೀನು ಬಹುಶಃ ಅವಳನ್ನು ಬಿಡಲಿಕ್ಕಿಲ್ಲ ಎಂದು ನನಗನಿಸುತ್ತಿದೆ. ಹೌದಲ್ಲವೇ…?” ಎಂದು ಕೇಳಿದಳು.
“ಹೌದು ಪ್ರಶಾಂತಿ, ನೀನು ಹೇಳಿದ್ದು ಅಕ್ಷರಶಃ ನಿಜ,” ಎಂದು ಪ್ರಾಮಾಣಿಕವಾಗಿ ಹೇಳಿದ.
“ಈ ನಿನ್ನ ಆನೆಸ್ಟ್ ಗುಣಕ್ಕೆ ನಾನು ನಿನ್ನನ್ನು ಮೆಚ್ಚಿರುವುದು,” ಎನ್ನುತ್ತಾ ಪ್ರಶಾಂತಿ ಸುಧನ್ವನನ್ನು ಬಳಸಿ, “ಇದು ನಮ್ಮಿಬ್ಬರ ಪ್ರೀತಿಯ ಗುರುತಿಗಾಗಿ ಮೊದಲ ಕಾಣಿಕೆ,” ಎನ್ನುತ್ತಾ ಅವನ ತುಟಿಗಳಿಗೆ ತನ್ನ ಚೆಂದುಟಿಯನ್ನು ಸೇರಿಸಿ ಸಂಭ್ರಮಿಸತೊಡಗಿದಳು.
ಅದಕ್ಕೆ ಸಾಕ್ಷಿಯಾಗಿ ನೀಲಾಕಾಶದಲ್ಲಿ ಸ್ವಚಂದವಾಗಿ ವಿಹರಿಸುತ್ತಿದ್ದ ಹುಣ್ಣಿಮೆಯ ಚಂದ್ರಮ ನಾಚಿಕೊಂಡು ತನ್ನ ಹತ್ತಿರ ಬಂದ ಮೋಡದಲ್ಲಿ ಮರೆಯಾಗಿ ಪ್ರೇಮಿಗಳ ತುಂಟಾಟಕ್ಕೆ ಪ್ರೋತ್ಸಾಹ ನೀಡಿದ. ಹೂವಿಂದ ಹೂವಿಗೆ ಹಾರಿದ ದುಂಬಿಗಳೆರಡೂ ಒಂದು ನೆಲೆ ಕಂಡುಕೊಂಡವು.
ಪ್ರಶಾಂತಿ ಹೇಳಿದಂತೆ ಅವರ ಬಿಇ ಕೊನೆಯ ಸೆಮ್ ಮುಗಿಯುವುದಕ್ಕಿಂತ ಮೊದಲೇ ದೇಬಶ್ರೀಯ ವಿವಾಹ ಅವಳ ಮನೆಯವರ ಇಚ್ಛೆಯಂತೆ ಅದ್ಧೂರಿಯಾಗಿ ಜರುಗಿತು. ಕೋರ್ಸ್ ಮುಗಿಯುತ್ತಿದ್ದಂತೆ ಹಿಮಾಂಶು ಕೋಲ್ಕೊತ್ತಾಕ್ಕೆ ಹಾರಿದ. ಅವನು ಕರ್ತವ್ಯಕ್ಕೆ ಹಾಜರಾದ ದಿನ ಬಿಪಾಷಾ ಅವನ ಜೊತೆಗಿದ್ದಳು. ಪ್ರಶಾಂತಿ ಮತ್ತು ಸುಧನ್ವ ಇಬ್ಬರೂ ಬೆಂಗಳೂರಿನಲ್ಲಿ ಒಂದು ನೆಲೆ ಕಂಡುಕೊಂಡರು.





