ಕಥೆ ಭೋಜರಾಜ ಸೊಪ್ಪಿಮಠ

ಒಬ್ಬಳೇ ಮಗಳೆಂದು ಪದ್ಮನಾಭ, ತಾಯಿಯಿಲ್ಲದ ನೀತಾಳನ್ನು ಅತಿ ಮುದ್ದಿನಿಂದ ಸಾಕಿ ಬೆಳೆಸಿದ್ದ. ತಾನಂದುಕೊಂಡಿದ್ದೇ ಸರಿ, ಎನ್ನುವ ಹಠಮಾರಿ ಸ್ವಭಾವದ ನೀತಾ ಮುಂದೆ ತಂದೆಗೆ ಮಾಡಿದ್ದೇನು……..?

“ನಿನ್ನ ಸಾಯಿಸಿ ಬಿಡ್ತೀನಿ!” ಮನೆಯೇ ಮಾರ್ದನಿಸುವಂತೆ ಪದ್ಮನಾಭ ಜೋರಾಗಿ ಕೂಗಿದ.

“ಡ್ಯಾಡಿ, ನೀವು ಹಾಗೆಲ್ಲಾ ಮಾತನಾಡಬಾರದು. ಅಷ್ಟಕ್ಕೂ ನೀವು ಪ್ರಶಾಂತ್‌ ನನ್ನು ಸಾಯಿಸುವಂತಹ ಕೆಲಸ ಅವನೇನು ಮಾಡಿದ?” ಅಷ್ಟೇ ಜೋರಾಗಿ ನೀತಾ ಅಬ್ಬರಿಸಿದಳು.

“ಮಧ್ಯ ಮಾತನಾಡಬೇಡ ನೀನು. ನಿನ್ನಿಂದೇ ಇದೆಲ್ಲಾ ಆಗಿರೋದು…. ನೀನು ಸರಿಯಾಗಿದ್ದರೆ ಈ ಸಂದರ್ಭವೇ ಬರುತ್ತಿರಲಿಲ್ಲ….” ಪದ್ಮನಾಭ ನೀತಾಳನ್ನು ಗದರಿದ.

“ಹೌದು ಡ್ಯಾಡಿ, ಇದೆಲ್ಲಾ ನನ್ನಿಂದಲೇ ಆಗಿರೋದು. ನಾನು ಪ್ರಶಾಂತನನ್ನು ಪ್ರೀತಿಸ್ತಿದ್ದೀನಿ. ಅವನೂ ಕೂಡ ನನ್ನನ್ನು ಪ್ರೀತಿಸ್ತಿದ್ದಾನೆ. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ಮದುವೆ ಕೂಡ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದೇವೆ. ಹಿರಿಯರಾದ ನೀವು ನಮ್ಮನ್ನು ಅರ್ಥ ಮಾಡಿಕೊಂಡು ಆಶೀರ್ವಾದ ಮಾಡಿ. ಬೇಡವೆಂದರೆ ನಮ್ಮಷ್ಟಕ್ಕೆ ನಮ್ಮನ್ನು ಇರಲು ಬಿಡಿ. ಅದು ಬಿಟ್ಟು ಸಾಯಿಸ್ತೀನಿ ಅಂದರೆ ಸರಿ ಇರಲ್ಲ…..” ನೀತಾ ಕಟುವಾಗಿ ಹೇಳಿದಳು.

“ಅದೇನು ನೋಡಿ ನೀನು ಇವನನ್ನು ಪ್ರೀತಿಸ್ತಿದ್ದೀಯಾ…? ಇವನು ಸರಿ ಇಲ್ಲ. ಇವನ್ಯಾರು….. ಇವನ ಫ್ಯಾಮಿಲಿ ಎಂಥದ್ದು….? ಎಲ್ಲಾ ನನಗೆ ಗೊತ್ತು. ದುಡ್ದಿನ ಆಸೆಗೆ ಎಂತಹ ಹೀನಾಯ ಕಾರ್ಯ ಬೇಕಾದರೂ ಮಾಡಲು ಹಿಂಜರಿಯದ ನೀಚ ಇವನು. ಬರೀ ಇವನಲ್ಲ, ಇವನ ಫ್ಯಾಮಿಲಿಯೇ ಅಂತಹದ್ದು. ಇವನನ್ನು ಮರೆತುಬಿಡು. ಸುಮ್ಮನೆ ನಾನು ಹೇಳಿದಂತೆ ಕೇಳು. ನಿನ್ನ ಜೀವನ ಒಳ್ಳೆಯದಾಗುತ್ತೆ,” ಪದ್ಮನಾಭ ಮಗಳ ಮುಂದೆ ಗೋಗರೆಯುತ್ತಿದ್ದ.

“ನೋಡಿ ಸರ್‌, ನಿಮಗೆ ನಾನು ಬೇಡವಾಗಿದ್ದರೆ ನನ್ನ ಬಗ್ಗೆ ಮಾತ್ರ ಮಾತನಾಡಿ. ನನ್ನ ಫ್ಯಾಮಿಲಿಯವರೆಲ್ಲಾ ಅಯೋಗ್ಯರು ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದೀರಲ್ಲ. ಇದನ್ನು ನಾನು ಸಹಿಸೋಲ್ಲ…..” ಈ ಬಾರಿ ಪ್ರಶಾಂತ್‌ ಪದ್ಮನಾಭನ ಮಾತನ್ನು ವಿರೋಧಿಸಿದ.

“ನಿನ್ನ ಬಾಯಲ್ಲಿಯೇ ಆ ಮಾತು ಬಂತಲ್ಲ….. ನೀವೆಲ್ಲರೂ ಅಯೋಗ್ಯರು! ನನ್ನ ಮಗಳಿಗೆ ಪ್ರೀತಿ, ಪ್ರೇಮ ಅಂತೆಲ್ಲಾ ತಲೆ ಕೆಡಿಸಿ ನನ್ನ ಆಸ್ತಿಯನ್ನು ಹೊಡೋ ಪ್ಲಾನ್‌ ನಿನ್ನದು. ನನ್ನ ಮಗಳ ಮೂಲಕ ನಾನು ಒಪ್ಪುವಂತೆ ಮಾಡಿ, ಅವಳ ಬಾಳು ಹಾಳು ಮಾಡುದೊಂದೇ ನಿನ್ನ ಗುರಿ. ನೀನೆಂಥ ಹಲ್ಕಾ ಅಂತ ನನಗೆ ಗೊತ್ತು. ನನ್ನ ಮನೆಯ ಹೊಸ್ತಿಲು ದಾಟಿ ಬರುವ ಯೋಗ್ಯತೆಯೂ ನಿನಗಿಲ್ಲ. ತೊಲಗಾಚೆ ನಾಯಿ,” ಪದ್ಮನಾಭ ಮತ್ತೆ ಕಿರುಚಿದ.

“ತಪ್ಪು ಮಾಡ್ತಿದ್ದೀರಾ ಸರ್‌ ನೀವು, ನನಗೆ ನೀತಾ ಇಷ್ಟ ಆದಳು. ಪ್ರಪೋಸ್‌ ಮಾಡಿದೆ. ಅದಕ್ಕೆ ಅವಳೂ ಒಪ್ಪಿಕೊಂಡಳು. ಇದರಲ್ಲಿ ತಪ್ಪೇನಿದೆ….? ನಾನೇನು ನಿಮ್ಮ ಆಸ್ತಿ ನೋಡಿದ ಮೇಲೆ ಪ್ರೀತಿಸಿದ್ದೀನಾ….?

“ನೀತಾಳನ್ನು ಪ್ರೀತಿಸಿದ ಮೇಲೆಯೇ ನಿಮ್ಮನ್ನೂ, ನಿಮ್ಮ ಮನೆಯನ್ನೂ ನೋಡ್ತಿದ್ದೀನಿ. ಆದರೆ ನೀವು ನನ್ನೊಂದಿಗೆ ನಮ್ಮ ಮನೆಯವರನ್ನೂ ಅವಮಾನಿಸ್ತಿದ್ದೀರಿ. ಇದು ಸರಿಯಲ್ಲ,” ಪ್ರಶಾಂತ್‌ ಕೋಪದಿಂದ ಹೇಳಿದ.

“ಡ್ಯಾಡಿ, ನಾವು ಸುಮ್ಮನಿದ್ದಂತೆ ನೀವು ಯಾಕೋ ಅತಿಯಾಗಿ ಮಾತನಾಡುತ್ತಿದ್ದೀರಿ. ಪ್ರಶಾಂತ್‌ ನಿಮಗೆ ತಪ್ಪಾಗಿ ಕಂಡಿರಬಹುದು. ಅದಕ್ಕೆ ಅವನ ಮನೆಯವರನ್ನು ಏಕೆ ಅವಮಾನ ಮಾಡ್ತಿದ್ದೀರಾ….?” ನೀತಾ ಜೋರಾಗಿ ಕಿರುಚಿದಳು.

“ಅದು ಹಾಗಲ್ಲ ಪುಟ್ಟಾ… ನೀನಿನ್ನೂ ಚಿಕ್ಕವಳು. ಯಾರು ಹೇಗೆ ಏನು ಅಂತ ಅರ್ಥ ಮಾಡಿಕೊಳ್ಳುವ ಶಕ್ತಿ ನಿನಗಿಲ್ಲ. ಬಣ್ಣದ ಮಾತಿಗೆ ಮರುಳಾಗುವ ವಯಸ್ಸು ನಿನ್ನದು. ನನ್ನ ಅನುಭವದಿಂದ ಹೇಳ್ತಿದ್ದೀನಿ. ನನ್ನ ಮಾತನ್ನು ನಂಬು. ಇವನ ಹಿಂದೆ ಹೋಗಬೇಡ, ನಾಶವಾಗಿ ಹೋಗ್ತೀಯಾ…..

“ಇವನಿಗಿಂತ ಸಾವಿರಾರು ಪಟ್ಟು ಅಧಿಕ ಇರುವ, ನಮ್ಮ ಅಂತಸ್ತಿಗೆ ಸರಿಹೊಂದುವ ಹುಡುಗನನ್ನೇ ಆರಿಸಿ ನಿನ್ನ ಮದುವೆಯನ್ನು ಈ ನಗರದಲ್ಲಿ ಯಾರೂ ಮಾಡಿರಬಾರದು ಹಾಗೆ ಮಾಡ್ತೀನಿ. ನೀನು ಮಾತ್ರ ನನ್ನ ಮಾತಿಗೆ ಇಲ್ಲ ಎನ್ನಬೇಡ ಕಂದಾ……” ಮಗಳನ್ನು ಕನ್ವಿನ್ಸ್ ಮಾಡಲು ಮುಂದಾದ ಪದ್ಮನಾಭ.

“ನಾನು ಇಷ್ಟಪಡುವ ಹುಡುಗನನ್ನೇ ನೀವು ಒಪ್ಪುದಿಲ್ಲವೆಂದ ಮೇಲೆ, ಅಂತಸ್ತಿಗೆ ಸರಿ ಹೊಂದಿದರೂ ನನ್ನ ಮನಸ್ಸಿಗೆ ಒಪ್ಪದ ಹುಡುಗನೊಂದಿಗೆ ಹೇಗೆ ಜೀವನ ನಡೆಸಲಿ ಡ್ಯಾಡಿ…?”

“ನೋಡಮ್ಮಾ….. ಈ ಪ್ರೀತಿ, ಪ್ರೇಮವೆಲ್ಲಾ ಸಿನಿಮಾ, ನಾಟಕಗಳಲ್ಲಿ ನೋಡೋಕೆ ಮಾತ್ರ ಚಂದ. ವಾಸ್ತವ ಬದುಕೇ ಬೇರೆಯಾಗಿರುತ್ತದೆ. ಅದಾವುದೂ ನಮಗೆ ಊಟ ಹಾಕುವುದಿಲ್ಲ, ಬದುಕು ನಡೆಸುವುದಕ್ಕೆ ಸಹಾಯ ಮಾಡಲ್ಲ. ನೀನು ಈಗ ಪ್ರೀತಿಯ ಹುಚ್ಚು ಅವೇಶದಲ್ಲಿದ್ದೀಯಾ… ಅದರಿಂದ ಹೊರಗೆ ಬಾ, ಆವೇಶದ ಪ್ರೀತಿಯ ಹೊರೆಯನ್ನು ಕಿತ್ತು ಬಿಸಾಕು. ಮುಖವಾಡ ಹಾಕಿದವರ ಮಾತುಗಳಿಗೆ ಮರುಳಾಗಬೇಡ,” ಅವನಲ್ಲಿ ಅದೇ ದೈನ್ಯತೆ ಇತ್ತು.

“ನೋಡಿ ಡ್ಯಾಡಿ, ನಾನೂ ಮೇಜರ್‌. ಯಾರ ಜೀವನ ಸಂಗಾತಿ ಆಗಬೇಕು/ಆಗಬಾರದು ಎಂದು ನಿರ್ಧರಿಸುವ ಸ್ವಾತಂತ್ರ್ಯ ಹಾಗೂ ಹಕ್ಕು ನನಗಿದೆ. ಇಷ್ಟಕ್ಕೂ ನಾನು ಚೆನ್ನಾಗಿರೋದು ನಿಮಗೆ ಇಷ್ಟ ಇಲ್ವಾ…..? ನಾನು ಪ್ರೀತಿಸಬಾರದಾ? ಪ್ರೀತಿಸಿದವರನ್ನು ಮದುವೆಯಾಗಬಾರದಾ…?” ಅವಳು ಒಂದೊಂದೇ ಉತ್ತರಿಸಲಾಗದ ಪ್ರಶ್ನೆ ಕೇಳುತ್ತಿದ್ದಳು.

“ನೋಡಮ್ಮಾ ನೀತಾ, ನೀನು ಹೇಳುವುದೆಲ್ಲಾ ಸತ್ಯ. ನಿನ್ನ ಜೀವನ ರೂಪಿಸಿಕೊಳ್ಳುವ ಹಕ್ಕು, ಸ್ವಾತಂತ್ರ್ಯ ಎಲ್ಲವೂ ನಿನಗಿದೆ. ದಯವಿಟ್ಟು ನನ್ನ ಪರಿಸ್ಥಿತಿಯನ್ನು ಕೂಡಾ ಒಂದಿಷ್ಟು ಅರ್ಥ ಮಾಡಿಕೋ. ನಾನು ಸಮಾಜದಲ್ಲಿ ಪ್ರತಿಷ್ಠೆಯಿಂದ ಬದುಕುತ್ತಿರುವವನು.

“ನಮ್ಮ ಹಿರಿಯರು ಹೀಗೇ ಅಂತ ಒಂದು ಸಂಪ್ರದಾಯ ಹಾಕಿಕೊಟ್ಟಿದ್ದಾರೆ. ಅದರಲ್ಲಿ ನಾನೊಬ್ಬ ಮಾತ್ರವಲ್ಲ, ನನ್ನಂತೆ ಅನೇಕರು ನಡೆದುಕೊಂಡು ಬರುತ್ತಲೇ ಇದ್ದೇವೆ. ನಾವ್ ಯಾರೂ ಆ ಸಂಪ್ರದಾಯದ ಚೌಕಟ್ಟನ್ನು ದಾಟಿಲ್ಲ. ದಾಟಿದವರನ್ನೂ ಸರಿಯಾಗಿ ಜೀವಿಸಲು ಬಿಟ್ಟಿಲ್ಲ.

“ಇವನು ನಮ್ಮ ಜಾತಿಯವನಲ್ಲ. ನಮ್ಮ ಅಂತಸ್ತಿಗೆ ತಕ್ಕವನೂ ಅಲ್ಲ. ಅದಕ್ಕೇನೇ ನೀನು ಮಗಳಾಗಿದ್ದರೂ ನಿನ್ನನ್ನು ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ. ನಾನು ಇಡೀ ಊರಲ್ಲಿ ತಲೆ ಎತ್ತಿಕೊಂಡು ಗೌರವದಿಂದ ಜೀವನ ನಡೆಸಿಕೊಂಡು ಬಂದಿದ್ದೇನೆ. ನೀನು ಮಾಡುವ ಕೆಲಸದಿಂದ ನನ್ನನ್ನು ತಲೆ ತಗ್ಗಿಸುವಂತೆ ಮಾಡಬೇಡ. ನೀನು ಭ್ರಮೆಯಲ್ಲಿ ಬದುಕುತ್ತಿದ್ದೀಯಾ, ನಾನು ವಾಸ್ತವದಲ್ಲಿದ್ದೇನೆ. ಎಂದಿದ್ದರೂ ನನ್ನ ದಾರಿಯೇ ಸರಿ. ನಾನು ಹೇಳಿದಂತೆ ಕೇಳು.

“ಚಿಕ್ಕಂದಿನಿಂದಲೂ ನೀನು ಏನೇ ಕೇಳಿದರೂ, ಯಾವ ಕ್ಷಣದಲ್ಲಾದರೂ ಇಲ್ಲವೆನ್ನದೇ ಕೊಡಿಸಿದ್ದೇನೆ. ಈಗ ನಾನು ಒಂದೇ ಒಂದು ಮಾತು ಕೇಳಿಕೊಳ್ಳುತ್ತಿದ್ದೇನೆ ಪುಟ್ಟಾ…. ಅವನನ್ನು ಮರೆತು ನಾನು ತೋರಿಸಿದವನನ್ನು ಮದುವೆಯಾಗು. ಇನ್ನೆಂದೂ ಏನೊಂದೂ ನಿನ್ನನ್ನು ಕೇಳುವುದಿಲ್ಲ,” ಇಷ್ಟು ಹೇಳುವಷ್ಟರಲ್ಲಿ ಪದ್ಮನಾಭನ ಗಂಟಲುಬ್ಬಿ ಬಂದಿತ್ತು. ಕಣ್ಣಲ್ಲಿ ಕಣ್ಣೀರು ಚಿಮ್ಮಿತು. ಮಗಳು ತನ್ನ ಮಾತು ಒಪ್ಪಿಕೊಳ್ಳುವಳೆಂಬ ಆಸೆ ಮುಖದಲ್ಲಿ ಮೂಡಿತ್ತು.

“ಏನ್‌ ಡ್ಯಾಡಿ ನೀವು…. ನನ್ನಿಂದ ಪ್ರತ್ಯುಪಕಾರ ಬಯಸುತ್ತಿದ್ದೀರಾ….? ಇಷ್ಟಕ್ಕೂ ನೀವು ಮಾಡಿದ್ದೇನು….? ನನ್ನನ್ನು ಹುಟ್ಟಿಸಿದ್ದೀರಿ, ಹಾಗಾಗಿ ನನ್ನ ಅವಶ್ಯಕತೆಗಳನ್ನು ತೀರಿಸಿದ್ದೀರಿ. ಅದು ನಿಮ್ಮ ಕರ್ತವ್ಯ.

“ಒಂದು ವೇಳೆ ನಾನು ಚೆನ್ನಾಗಿರಲೇಬೇಕು ಎಂಬುದು ನಿಮ್ಮ ಬಯಕೆಯೇ ಆಗಿದ್ದರೆ ನಾನು ಮೆಚ್ಚಿಕೊಂಡ ಹುಡುಗನೊಂದಿಗೇನೇ ಮದುವೆ ಮಾಡಿಕೊಟ್ಟು ನೀವೊಬ್ಬ ಆದರ್ಶ ತಂದೆ ಆಗಬಹುದಿತ್ತು. ನೀವೇಕೆ ಜಿಡ್ಡುಗಟ್ಟಿದ ಈ ಸಮಾಜದಲ್ಲಿ ಹೊಸ ಮೇಲ್ಪಂಕ್ತಿ ಹಾಕಬಾರದು?

“ಮೂಲತಃ ಪ್ರಶಾಂತನೊಂದಿಗೆ ನಾನು ಮದುವೆ ಆಗುವುದು ನಿಮಗೆ ಇಷ್ಟವಿಲ್ಲ. ಆದ್ದರಿಂದಲೇ ಸಮಾಜ, ಸಂಪ್ರದಾಯ ಎಂದೆಲ್ಲಾ ಏನೇನೋ ಕಥೆ ಕಟ್ಟುತ್ತಿದ್ದೀರಿ ಅಲ್ವಾ….?” ಅಪ್ಪನಿಗೇ ಚಾಲೆಂಜ್‌ ಹಾಕುವ ರೀತಿಯಲ್ಲಿ ಮಾತನಾಡಿದಳು.

“ನೋಡಮ್ಮಾ….. ಇಪ್ಪತ್ತು ವರ್ಷಗಳಿಂದ ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಎಲ್ಲೂ ಏನೂ ಲೋಪವಾಗದಂತೆ, ಬಯಸಿದ್ದು ಸಿಗುವಂತೆ ಕಾಪಾಡಿಕೊಂಡು ಬಂದವನು ನಾನು. ನಿನ್ನ ಪುಟ್ಟ ಕಾಲುಗಳಿಂದ ನನ್ನ ಎದೆಗೆ ಒದ್ದಾಗ ಅದನ್ನು ನೋವೆಂದು ಭಾವಿಸದೇ ಹಿತವಾದ ಸುಖವನ್ನು ಅನುಭವಿಸಿದೆ.

“ಸೀನಿದಾಗ ಮೂಗು ಒರೆಸಿ, ಬಿದ್ದಾಗ ಮೇಲೆಬ್ಬಿಸಿ, ರಮಿಸಿ, ಜ್ವರ ಬಂದಾಗ ಡಾಕ್ಟರನ್ನೇ ಮನೆಗೆ ಕರೆಸಿ, ನೀನು ಗುಣಮುಖಳಾಗುವವರೆಗೂ ನಿಗಾ ಇರಿಸಿ, ಕಷ್ಟಪಡುವುದಿರಲಿ, ಆ ಪದಕ್ಕೆ ಅರ್ಥ ಗೊತ್ತಿರದ ರೀತಿಯಲ್ಲಿ ನಿನ್ನನ್ನು ಬೆಳೆಸಿದ್ದೇನೆ. “ನಿನ್ನ ನಂತರ ನಮಗೆ ಬೇರೆ ಮಕ್ಕಳು ಆಗದೆ ಹೋದಾಗ, ನಿನ್ನನ್ನೇ ಮಗ ಮತ್ತು ಮಗಳಾಗಿ ನೋಡಿಕೊಂಡು ಬಂದೆ. ಈ ಇಪ್ಪತ್ತು ವರ್ಷಗಳಲ್ಲಿ ನಾನು ತೋರಿದ ಪ್ರೀತಿಯ ಮುಂದೆ ಇಪ್ಪತ್ತು ದಿನಗಳ ಹಿಂದೆ ನಿನ್ನ ಜೀವನದಲ್ಲಿ ಬಂದವನ ಪ್ರೀತಿಯೇ ನಿನಗೆ ಹೆಚ್ಚಾಯಿತು ಎಂದು ಹೇಳಿದರೆ, ಈ ನಿನ್ನ ತಂದೆಗೆ ಹೇಗಾಗಿರಬೇಡ ಯೋಚಿಸು ಕಂದಾ….

“ಇವನೊಂದಿಗೆ ಮದುವೆಯಾಗಲು ನನ್ನ ತಂದೆ ಒಪ್ಪುತ್ತಿಲ್ಲವೆಂದರೆ, ಅವರ ಮಾತಿನಲ್ಲಿ ಸತ್ಯಾಂಶ ಇರಬಹುದು ಎನ್ನುವ ಒಂದು ಸಣ್ಣ ವಿಚಾರ ನಿನಗೆ ಅರ್ಥವಾಗುತ್ತಿಲ್ಲವೇ….? ನಿಮ್ಮ ಮದುವೆಗೆ ಒಪ್ಪಿಕೊಂಡು ನಾನು ಮೇಲ್ಪಂಕ್ತಿ ಹಾಕುವ ಬದಲಿಗೆ ಸರಿಯೋ ತಪ್ಪೋ … ಅಪ್ಪ ತೆಗೆದುಕೊಳ್ಳುವ ನಿರ್ಧಾರ ನನ್ನ ಒಳ್ಳೆಯದಕ್ಕೇನೆ, ಅವರ ಮಾತನ್ನೂ ಒಂದು ಬಾರಿ ನಂಬುತ್ತೇನೆ ಎಂದು ನೀನೇಕೆ ಒಂದು ಮೇಲ್ಪಂಕ್ತಿ ಹಾಕಬಾರದು?

“ಮಗಳ ಬಾಳು ಹಾಳಾಗಲಿ ಎಂದು ಯಾವ ತಂದೆಯೂ ಹೇಳುವುದಿಲ್ಲ. ಏಕೆಂದರೆ ಯಾವುದೇ ತಂದೆಯಾಗಲಿ ಮಗಳನ್ನು ತನ್ನ ತಾಯಿಯ ರೂಪದಲ್ಲಿಯೇ ಕಾಣುತ್ತಾನೆ. ಪ್ರತಿ ಮಾತಿನಲ್ಲಿಯೂ ಅಮ್ಮಾ….. ಎಂದೇ ಕರೆಯುತ್ತಾನೆ. ನಾನು ಹಾಗೇ ನೀತಾ…. ಇದರಿಂದ ನಾನು ಕೆಟ್ಟವನಾ… ಹೇಳಮ್ಮಾ…..” ಹೇಳುತ್ತಾ ಪದ್ಮನಾಭ ಬಿಕ್ಕಳಿಸಿದ.

“ಡ್ಯಾಡಿ, ಮನ ಮುಟ್ಟುವ ಹಾಗೆ ಏನೇನೋ ಮಾತನಾಡಿಬಿಟ್ಟರೆ ನಾನು ಒಪ್ಪಿಕೊಳ್ಳುತ್ತೇನೆ ಎಂದು ಅಂದುಕೊಳ್ಳಬೇಡಿ. ಅಂತಹ ಮಾತುಗಳಿಗೆ ಮರುಳಾಗುವವಳೂ ನಾನಲ್ಲ.

“ನನ್ನ ಪ್ರೀತಿ, ನನ್ನ ಜೀವನಕ್ಕಿಂತ ನಿಮ್ಮ ಒಣ ಪ್ರತಿಷ್ಠೆಯೇ ನಿಮಗೆ ಮುಖ್ಯವಾಗಿ ಹೋಯಿತು. ನಿಜವಾಗಿಯೂ ನನಗೆ ಒಳ್ಳೆಯದನ್ನು ಬಯಸುವವರು ನೀವಾಗಿದ್ದರೆ ಪ್ರಶಾಂತನೊಂದಿಗೆ ನಾನು ಮದುವೆ ಆಗುಬೇಕೆನ್ನುವುದು ದೊಡ್ಡ ವಿಷಯವೇ ಅಲ್ಲ.

“ಆರ್ಥಿಕವಾಗಿ ಅವರು ನಮ್ಮಷ್ಟು ಸಮರ್ಥವಾಗಿಲ್ಲದೇ ಇರಬಹುದು. ಆದರೆ ಅದನ್ನೇ ಅವರ ದೌರ್ಬಲ್ಯ ಎಂದುಕೊಂಡಿದ್ದೀರಲ್ಲ. ಬಡವರ ಮನಸ್ಸಿನಲ್ಲಿಯೂ ಪ್ರೀತಿ, ಪ್ರೇಮ ಇರುವುದಿಲ್ಲ ಅಂದರೆ ಹೇಗೆ? ತುಂಬಾ ದಿನಗಳಿಂದ ನಾನು ಪ್ರಶಾಂತನನ್ನು ಅರ್ಥ ಮಾಡಿಕೊಂಡಿದ್ದೇನೆ. ಏನೂ ಗೊತ್ತಿರದ ಯಾರೋ ಒಬ್ಬರ ಜೊತೆ ಜೀವನ ನಡೆಸುವುದಕ್ಕಿಂತ ನಾನು ಇವನೊಂದಿಗೆ ನೆಮ್ಮದಿಯ ಜೀವನ ನಡೆಸುತ್ತೇನೆಂಬ ನಂಬಿಕೆ ನನಗಿದೆ,” ನೀತಾ ತನ್ನಪ್ಪನಿಗೆ ಸಿಟ್ಟಿನಿಂದ ನುಡಿದಳು.

“ನೋಡಮ್ಮಾ…. ಮದುವೆಯಾದ ಮೇಲೆಯೂ ಪ್ರೀತಿ ತಾನಾಗಿಯೇ ಒಡಮೂಡುತ್ತದೆ. ನಿನ್ನಮ್ಮ ಮತ್ತು ನಾನು ಪ್ರೀತಿಸಿ ಮದುವೆ ಆಗಲಿಲ್ಲ. ಪರಸ್ಪರ ನೋಡುವುದಿರಲಿ, ಮಾತನಾಡಿರಲೂ ಇಲ್ಲ. ಹಾಗಂತ ನಾವಿಬ್ಬರು ಅನ್ಯೋನ್ಯವಾಗಿರಲಿಲ್ಲವೇ…? ಹಿರಿಯರ ಮಾತನ್ನು ಇಷ್ಟೊಂದು ಎದುರಿಸಬೇಕೆಂಬ ಹಠ ನಿನಗೇಕೆ….? ಇಂದು ನನ್ನ ಮಾತನ್ನು ಧಿಕ್ಕರಿಸುವ ಹಠ ಮತ್ತು ಧೈರ್ಯ ನಿನಗೆ ಬಂದಿರಬಹುದು. ಅದು ಕೇವಲ ನಿನ್ನ ಪ್ರೀತಿಯ ವ್ಯಾಮೋಹದಿಂದ.

“ಮುಂದೊಂದು ದಿನ ಇವನ ಮೋಸದ ಮುಖವಾಡ ಅರ್ಥವಾಗಿ ಪಶ್ಚಾತ್ತಾಪದಲ್ಲಿ ಬಳಲುವಾಗ ನಿನ್ನಪ್ಪನ ಒಂದೊಂದು ಮಾತುಗಳೂ ನಿನಗೆ ನೆನಪಾಗುತ್ತದೆ. ಆದರೆ ಆಗ ಕಾಲ ಮಿಂಚಿ ಹೋಗಿರುತ್ತದೆ. ಆಗ ಪಶ್ಚಾತ್ತಾಪ ಪಡಬಹುದೇ ವಿನಾ, ಮೊದಲಿನ ಜೀವನ ಮತ್ತೆ ಬರುವುದಿಲ್ಲ.

“ಇವನ ಮೋಸದ ಮಾತುಗಳು ಒಂದೆಡೆಯಾದರೆ, ತಂದೆಯ ಮಾತನ್ನು ಧಿಕ್ಕರಿಸಿದೆ ಎಂಬ ಪಾಪಪ್ರಜ್ಞೆ ಮತ್ತೊಂದೆಡೆ ನಿನ್ನನ್ನು ಬಾಧಿಸುತ್ತದೆ. ಹಾಗಾಗುವುದು ಬೇಡ,” ಪದ್ಮನಾಭ ಮಗಳು ತನ್ನ ಮಾತನ್ನು ಕೇಳುವಳೆಂಬ ಭರವಸೆಯಲ್ಲಿ ಅವಳನ್ನು ಓಲೈಸತೊಡಗಿದ.

“ನೋಡಪ್ಪಾ…. ಇದುವರೆಗೂ ಹೇಳಿದ್ದರಲ್ಲಿ ನೀನು ನಿನ್ನ ಮಾತನ್ನೇ ಪ್ರತಿಪಾದಿಸ್ತೀಯಾ…… ನಾನು ನನ್ನ ಮಾತನ್ನೇ ಹೇಳ್ತಿದ್ದೀನಿ…. ಇದರಿಂದ ಏನೂ ಆಗೋಲ್ಲ. ಕೊನೆಯದಾಗಿ ಒಂದು ಮಾತು ಹೇಳು, ನಾನು ಚೆನ್ನಾಗಿರಬೇಕೆಂದರೆ, ನಿನ್ನ ಮುಂದೆ ಎರಡು ಆಯ್ಕೆಗಳಿವೆ. ಒಂದು ಪ್ರಶಾಂತ್‌ ನನ್ನು ನಿನ್ನ ಅಳಿಯ ಎಂದು ಒಪ್ಪಿಕೊಂಡು ನಮಗೆ ಮದುವೆ ಮಾಡಿಸಿ, ಆಶೀರ್ವದಿಸು. ನಿಮ್ಮ ಆಶ್ರಯದಲ್ಲಿ ಇರಬೇಕೆಂದು ನಾವೇನೂ ಬಯಸುತ್ತಿಲ್ಲ.

“ಇಲ್ಲವೆಂದರೆ ನಮ್ಮ ಪಾಡಿಗೆ ನಮ್ಮನ್ನು ಇರಲು ಬಿಡು. ನಾವು ಹೇಗೋ ಬದುಕಿಕೊಳ್ತೀವಿ. ನೀನು, ನಿನ್ನ ಈ ಆಡಂಬರದ ಮನೆ, ಅಷ್ಟೊಂದು ಕೂಡಿಟ್ಟುಕೊಂಡ ಹಣ, ನಿನ್ನ ಅಂಧಶ್ರದ್ಧೆಯ ಸಮಾಜ ಎಲ್ಲವನ್ನೂ ಕಟ್ಟಿಕೊಂಡಿರು,” ನೀತಾ ಒಂದು ನಿರ್ಧಾರಕ್ಕೆ ಬಂದವಳ ಹಾಗೆ ಹೇಳಿದಳು.

ಪದ್ಮನಾಭನಿಗೆ ಏನೂ ಮಾತನಾಡಬೇಕೋ ತಿಳಿಯಲಿಲ್ಲ. ಅಸಹಾಯಕನಾಗಿ ನಿಂತಿದ್ದ. ಮಗಳಿಗೆ ಇಷ್ಟೊಂದು ಹಠವೇಕೆ ಎಂದು ಮನದಲ್ಲಿಯೇ ನೊಂದುಕೊಂಡ. ಅರಮನೆಯಂಥ ಮನೆ, ವೈಭೋಗದ ಜೀವನ, ಕುಳಿತು ತಿಂದರೂ ಸವೆಯಲಾರದಷ್ಟು ಆಸ್ತಿ, ಸಮಾಜದಲ್ಲಿ ಏನೆಲ್ಲಾ ಗೌರವವಿದ್ದರೂ, ಏನೂ ಇಲ್ಲದೆ ಬೆತ್ತಲಾದಂಥ ಅನುಭವ ಮೊಟ್ಟ ಮೊದಲ ಬಾರಿಗೆ ಅವನಲ್ಲಿ ಉಂಟಾಯಿತು.

ಅವನ ಸ್ಥಾನದಲ್ಲಿ ಬೇರಾರೇ ಇದ್ದರೂ ಎದುರು ವಾದಿಸಿದ ಮಗಳನ್ನು ಸಿಗಿದು ಹಾಕಿಬಿಡುತ್ತಿದ್ದರು. ಆದರೆ ಪದ್ಮನಾಭನಿಗೆ ಮಗಳ ಮೇಲಿನ ಅತಿಯಾದ ಪ್ರೀತಿ ವ್ಯಾಮೋಹ ಅವನನ್ನು ಕಟ್ಟಿಹಾಕಿತ್ತು. ಅವನ ಕಣ್ಣು ಮುಂದೆ ನಡೆದ ಎಷ್ಟೋ ಮರ್ಯಾದಾ ಹತ್ಯೆಗಳು ನೆನಪಾದವು. ಮಗಳೇ ತನ್ನೆದುರಿಗೆ ವಾದಿಸುವಷ್ಟರ ಮಟ್ಟಿಗೆ ಪ್ರಶಾಂತ್‌ ಅವಳನ್ನು ಹೇಗೆ ಬ್ರೇನ್‌ ವಾಶ್‌ ಮಾಡಿರಬೇಕು ಎಂದು ತನ್ನ ಸಿಟ್ಟನ್ನು ಪ್ರಶಾಂತನ ಮೇಲೆ ತಿರುಗಿಸಿದ.

ಕ್ಷಣ ಕಾಲ ತಂದೆ ಮಗಳ ನಡುವೆ ಯಾವುದೇ ಮಾತು ಮುಂದುವರಿಯಲಿಲ್ಲ. ಮೌನ ಮಡುಗಟ್ಟಿತ್ತು. ಸ್ವಲ್ಪ ಸಮಯದ ನಂತರ ನೀತಾ ಮೌನ ಮುರಿದು, “ಎಲ್ಲಾದರೂ ಇರಲಿ ಮಗಳು ಚೆನ್ನಾಗಿರಲಿ ಎಂದು ಬಯಸುವ ತಂದೆಯನ್ನು ನೋಡಿದ್ದೇನೆ. ಆದರೆ ನೀವೊಬ್ಬ ಶುದ್ಧ ಕಲ್ಲು. ನೀವು ಯಾರನ್ನೂ ಪ್ರೀತಿಸಲಿಲ್ಲ. ಬರೀ ಹಣವನ್ನು ಪ್ರೀತಿಸಿದಿರಿ, ಪ್ರೀತಿಸಿದವರನ್ನೂ ಒಪ್ಪಿಕೊಳ್ಳಲ್ಲ… ನನ್ನ ಜೀವನ ನಾನು ರೂಪಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ. ಇನ್ನಿದಕ್ಕೆ ನಿಮ್ಮ ಅಂಕೆ ಏಕೆ? ನೀವು ಅಂದುಕೊಂಡಂತೇ ಏಕೆ ನಡೆಯಬೇಕು?

“ನನ್ನಪ್ಪ ಎಂದರೆ ಹಾಗೆ ಹೀಗೆ ಎಂದು ನಾನು ಹೇಗೆಲ್ಲಾ ಕನಸು ಕಟ್ಟಿಕೊಂಡಿದ್ದೆ. ಆದರೆ ಪ್ರೀತಿ ತೋರುವ ಮುಖದ ಹಿಂದೆ ಒಂದು ಕ್ರೂರತೆ ಇದೆ ಎಂದು ನಾನಂದುಕೊಂಡಿರಲಿಲ್ಲ.

“ನನಗೆ ನಿಮ್ಮ ಮುಖವನ್ನು ನೋಡಲೂ ಹೇಸಿಗೆ ಮತ್ತು ಅಸಹ್ಯ ಎನಿಸುತ್ತಿದೆ. ನನ್ನಪ್ಪ ನನ್ನ ಬಾಳಿನ ಹೀರೋ ಎಂದುಕೊಂಡಿದ್ದೆ. ಆದರೆ ಅವರೇ ನನ್ನ ಬಾಳಿಗೆ ವಿಲನ್‌ ಅಂತ ನಾನ್ಯಾತ್ತೂ ಅಂದುಕೊಂಡಿರಲಿಲ್ಲ. ನನ್ನಷ್ಟಕ್ಕೆ ನನ್ನನ್ನು ಇರಲು ಬಿಡಿ. ಅದೇ ನೀವು ನನಗೆ ಮಾಡುವ ಪುಣ್ಯದ ಕೆಲಸ,” ಅವಳು ಆವೇಶಭರಿತವಾಗಿ ಮಾತನಾಡಿದಳು.

ನೀತಾ ಮಾತನಾಡಿದ ಒಂದೊಂದು ಮಾತುಗಳೂ ಪದ್ಮನಾಭನ ಎದೆಯನ್ನು ಚುಚ್ಚಿ ಚುಚ್ಚಿ ಕೊಲ್ಲುತ್ತಿದ್ದ. ಅವನ ರಕ್ತ ಸಂಚಾರ ಒಂದೇ ಸಮನೆ ಏರತೊಡಗಿತು. ಎದೆಯಲ್ಲಿ ಸಣ್ಣಗೆ ನೋವು ಕಾಣಿಸತೊಡಗಿತು. ಕಣ್ಣಿಗೆ ಮಂಜು ಬಂದಂತೆ ಅನಿಸಿತು. ಬೀಳುತ್ತಿದ್ದವನು ಸಾವರಿಸಿಕೊಂಡು ಸೋಫಾವನ್ನು ಗಟ್ಟಿಯಾಗಿ ಹಿಡಿದುಕೊಂಡು, ಕುಸಿದು ಕುಳಿತ.

ಒಂದೆರಡರು ಕ್ಷಣಗಳಲ್ಲಿ ಮೆಲ್ಲನೆ ಸಾವರಿಸಿಕೊಂಡ, ಆ ಗಳಿಗೆಯಲ್ಲಿ ಹೆಂಡತಿ ರುಕ್ಮಿಣಿ ನೆನಪಾದಳು. ನೀತಾ ಹತ್ತು ವರ್ಷದವಳಿದ್ದಾಗ, ಅನಾರೋಗ್ಯದಿಂದಾಗಿ ಅಸುನೀಗಿದ್ದಳು. ಮಗಳು ತಾಯಿಯ ಪ್ರೀತಿಯಿಂದ ವಂಚಿತಳಾಗಬಾರದೆಂದು ಅವಳು ಕೇಳಿದ್ದಕ್ಕೆಲ್ಲಾ ಅಸ್ತು ಎನ್ನುತ್ತಲೇ ಬಂದಿದ್ದ. ಹೆಣ್ಣು ಮಗಳಾದ್ದರಿಂದ ಹದಿಹರೆಯದ ವಯಸ್ಸಿಗೆ ಬಂದಾಗ ಅವಳಲ್ಲಿ ಉಂಟಾಗುತ್ತಿದ್ದ ಮಾನಸಿಕ ಬದಲಾವಣೆಗಳನ್ನು ಗಮನಿಸುವುದಾಗಲಿ, ಅರ್ಥೈಸಿಕೊಳ್ಳುವುದಾಗಲಿ ಅವನಿಗೆ ಸಾಧ್ಯವಾಗಲಿಲ್ಲ. ಅವಳು ಚೆನ್ನಾಗಿರಬೇಕೆಂದು ಕೇಳಿದ್ದನ್ನೆಲ್ಲಾ ಕೊಡಿಸಬೇಕೆಂಬ ತೀರ್ಮಾನಕ್ಕೆ ಬಂದಿದ್ದ.

ತಾಯಿ ಇದ್ದಿದ್ದರೆ ಪ್ರತಿ ಚಲನವಲನಗಳನ್ನು ಗಮನಿಸುತ್ತಿದ್ದಳು. ತಪ್ಪೆಂದು ಕಂಡಾಗ ತಿದ್ದಿ ಬುದ್ಧಿ ಹೇಳುತ್ತಿದ್ದಳು. ಇನ್ನೂ ಪ್ರಾರಂಭಿಕ ಹಂತವಾಗಿದ್ದರೆ, ನನ್ನ ಗಮನಕ್ಕೂ ತಂದು ಅದನ್ನು ಅಲ್ಲಿಗೇ ನಿಲ್ಲಿಸುತ್ತಿದ್ದಳು. ಆದರೆ ನೀತಾ ಈಗ ತೀರಾ ಕೈಗೆ ನಿಲುಕಲಾರದಷ್ಟು ಮುಂದೆ ಹೋಗಿದ್ದಾಳೆ. ನಾನು ನನ್ನ ವ್ಯವಹಾರದಲ್ಲಿ ಮುಳುಗಿ ಹೋದೆ. ಒಬ್ಬ ತಂದೆಯಾಗಿ ಅವಳ ಬೆಳಕು ಬೇಡಗಳನ್ನಷ್ಟೇ ಗಮನಿಸಿದೆ. ಇದಕ್ಕಿಂತಲೂ ಹೆಚ್ಚಿಗೆ ನಾನೇನು ಮಾಡಬೇಕಿತ್ತು?

ಮಗಳನ್ನೇ ಮಗನೆಂದುಕೊಂಡು ಬದುಕಿದೆ. ಅವಳ ಹಸನಾದ ಬದುಕನ್ನು ಕಂಡು ನನ್ನ ಒಂಟಿತನವನ್ನು ಮರೆತೆ. ಎಲ್ಲಾ ವ್ಯವಹಾರಗಳು ನೀತಾಳ ಹೆಸರಿನಲ್ಲಿಯೇ ಇದ್ದ. ಯಾವುದೇ ಕೆಲಸ ಮಾಡಲು ಹೋಗಬೇಕಾದರೂ ಮಗಳ ಮುಖ ಅದೃಷ್ಟವೆಂದು ಅವಳನ್ನು ನೋಡಿಯೇ ಮುಂದುವರಿಯುತ್ತಿದ್ದೆ. ಇಂದು ಅದೇ ಮಗಳಿಗೆ ನನ್ನ ಮುಖವನ್ನು ನೋಡಲು ಹೇಸಿಗೆ ಮತ್ತು ಅಸಹ್ಯವಾಗುತ್ತೆ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳುತ್ತಿದ್ದಾಳೆ. ಅಂದರೆ ನಾನೆಂತಹ ನತದೃಷ್ಟ….! ಅವಳಿಗಾಗಿ ನಾನು ಕಟ್ಟಿದ ಆಶಾ ಸೌಧವನ್ನು ಅವಳು ತನ್ನ ಕೈಯಾರೆ ಕೆಡವಿ ಹಾಕಿದಳೆಂದರೆ…. ಈ ಹಾಳು ಮುಖವನ್ನು ಇಟ್ಟುಕೊಂಡು ನಾನೇಕೆ ಬದುಕಿರಬೇಕು? ಬದುಕಿರುವುದಕ್ಕೆ ನಾನು ಯೋಗ್ಯನಾ…? ಅವನು ಅಷ್ಟೊಂದು ತೀವ್ರವಾಗಿ ಯೋಚಿಸುತ್ತಿರುವಂತೆ ರಕ್ತದ ಒತ್ತಡ ಮತ್ತಷ್ಟು ತೀವ್ರವಾಗಿ ಏರಿತು. ಎದೆಯ ಬಡಿತ ಜೋರಾಯಿತು. ಎಡಗೈಯಿಂದ ಗಟ್ಟಿಯಾಗಿ ಎದೆಯನ್ನು ಹಿಡಿದುಕೊಂಡ. ಮೈ ಬೆರತೊಡಗಿತು. ಕಣ್ಣು ತೀರಾ ಮಂಜಾಯಿತು. ಬಾಯಾರಿದಂತಾಯಿತು. ನೀತಾಳಿಗೆ ಏನೋ ಹೇಳಬೇಕೆಂದರೆ ಮಾತೇ ಬರುತ್ತಿಲ್ಲ. ಅವಳನ್ನು ಕೂಗಬೇಕೆಂದರೆ ಕೈ ಎತ್ತಲೂ ಕೂಡ ಸಾಧ್ಯವಾಗಲಿಲ್ಲ.

“ಇನ್ಯಾವತ್ತೂ ಈ ಮನೆಯ ಹೊಸ್ತಿಲು ತುಳಿಯುವುದಿಲ್ಲ. ನನ್ನ ಪಾಲಿಗೆ ಅಮ್ಮ ಮಾತ್ರವಲ್ಲ, ನೀವು ಸತ್ತು ಹೋಗಿದ್ದೀರಿ ಎಂದುಕೊಳ್ತೀನಿ. ಜಗತ್ತಿನಲ್ಲಿ ಹಣ, ಅಧಿಕಾರ, ಅಂತಸ್ತು, ದರ್ಪ ಇವೆಲ್ಲಕ್ತಿಂತ ಪ್ರೀತಿಯೇ ದೊಡ್ಡದು ಎಂದು ಸಾಬೀತುಪಡಿಸಿ ತೋರಿಸ್ತೀನಿ. ಇನ್ನೆಂದೂ ನಿಮ್ಮ ಮುಖ ನೋಡುವುದಿಲ್ಲ. ಬನ್ನಿ, ಪ್ರಶಾಂತ್‌,” ಎನ್ನುತ್ತಾ ಪ್ರಶಾಂತನ ಕೈಯನ್ನು ಬಲವಾಗಿ ಹಿಡಿದೆಳೆದುಕೊಂಡು ಆ ಮನೆಯ ಹೊಸ್ತಿಲನ್ನು ದಾಟುವುದಕ್ಕೂ, ಅವಳನ್ನು ತಡೆದು ನಿಲ್ಲಿಸಬೇಕೆಂದು ಎತ್ತಲು ಹೋದ ಪದ್ಮನಾಭನ ಕೈ ನಿಶ್ಚಲವಾಗಿ ಬೀಳುವುದಕ್ಕೂ ಸರಿಯಾಯಿತು. ಮಗಳು ಹೋದ ದಿಕ್ಕಿನೆಡೆಗೇ ನೋಡುತ್ತಿದ್ದ ಪದ್ಮನಾಭನ ಕಣ್ಣುಗಳು ಮುಚ್ಚಲೇ ಇಲ್ಲ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ