ಕಥೆ ಅನಿತಾ ಹೆಗಡೆ

ಹೊಸದಾಗಿ ಮದುವೆಯಾಗಿದ್ದ ರಾಘವಿಗೆ ತನ್ನ ವೈವಾಹಿಕ ಜೀವನ ಕುರಿತಾಗಿ ನೂರಾರು ಹೊಂಗನಸು ಮೂಡಿತ್ತು. ಕನಸು ನನಸಾಗಲೆಂದು ಪತಿ ಅಮಿತ್ನೊಂದಿಗೆ ಆತ್ಮವಿಶ್ವಾಸದಿಂದ ಮುನ್ನಡೆದಳು…….!

`ಕನಸ ಕುದುರೆಯನೇರಿ ಸಪ್ತ ಸಾಗರದಾಚೆ ಹಾರಲೇ ನಿನ್ನೊಂದಿಗೆ…..!

ಬಳಿ ನಿಂತ ನಿನ್ನೊಂದಿಗೆ ನನ್ನ ಕೈಯ ಬೆಸೆಯಲೇ?

ಒಳಗೊಳಗೇ ನಾಚುತ್ತಾ ನಿನ್ನೆಡೆಗೆ ಕುಡಿನೋಟ ಬೀರಲೇ….?’ ಅವನನ್ನೇ ನೋಡುತ್ತಿದ್ದ ರಾಘವಿಯ ಮನದೊಳಗಿನ ಸಾಲುಗಳು ಹೀಗೆ ಸಾಗಿತ್ತು.

“ಓಯ್‌ ಏನಾಯ್ತು….? ಎಲ್ಲೋ ಕಳೆದೋಗಿದೀಯಾ….? ಹಳೆ ಪ್ರೇಮಿಯ ನೆನಪಲ್ಲಿ ಅಲ್ಲ ತಾನೇ….?” ಅವಳತ್ತಲೇ ದಿಟ್ಟಿಸಿ ತುಂಟ ನಗೆಯೊಂದಿಗೆ ಪ್ರಶ್ನಿಸಿದವನ ಮಾತು ಅವಳನ್ನು ಎಚ್ಚರಿಸಿತು. ಏನೂ ಇಲ್ಲ ಎಂಬಂತೆ ಕತ್ತು ಅಲ್ಲಾಡಿಸಿದವಳ ನೋಟ ಬಾಗಿತ್ತು

`ಅವನ ಸಪ್ತಸಾಗರಕೆ ನನ್ನನ್ನು ಜೊತೆಯಾಗಿ ಕರೆದೊಯ್ಯುವನೇ….?

ನಾ ಬೆಸೆದ ಕೈಗೆ ಪ್ರತಿಯಾಗಿ ಬೆಸೆವುದೇ ಅವನ ಕೈ?

ನನ್ನ ನೋಟಕ್ಕೆ ಉತ್ತರವಾಗಿ ಒಲುಮೆಯ ಸೂಸುವವೇ ಅವನ ಕಂಗಳು…..?

ನನ್ನೆದೆ ಬಡಿತಕ್ಕೆ ತಾಳವಾಗಿ ಅನೆದೆಯು ಮಿಡಿವುದೇ….?’ ಈಗ ಇನ್ನೊಂದು ತೆರನಾಗಿ ಓಡಿತ್ತು ರಾಘವಿಯ ಮನಸ್ಸು.

ದೇವಸ್ಥಾನದ ಕಡೆ ಹೊರಟಿತ್ತು ಹೊಸ ವಧೂವರರ ಜೋಡಿ.

“ರಾಘವಿ….” ಮುಗಿದ ಕೈಯಿಂದಲೇ ಅವಳನ್ನು ಮೆಲುವಾಗಿ ತಿವಿದ ಅಮಿತ್‌.

“ಏನು….” ಎಂಬಂತೆ ಹುಬ್ಬು ಸಂಕುಚಿಸಿ ಅವನೆಡೆಗೊಂದು ನೋಟ ಹರಿಸಿದಳು. ಅವಳ ಕಲ್ಪನಾ ಲೋಕಕ್ಕೆ ಚ್ಯುತಿಯಾಯಿತೇನೋ….?

`ಪಕ್ಕದಲ್ಲಿ ಅವಳ ಗಂಡ ನಾನಿದ್ದೀನೀ ಅನ್ನೋದನ್ನೂ ಮರೆತು ಕಳೆದುಹೋಗಿದ್ದ ಇವಳು, ಈಗ ನೋಡಿದ್ರೆ ನನ್ನನ್ನೇ ಗುರಾಯಿಸ್ತಿದ್ದಾಳೆ……!’ ಎಂದು ಮನದಲ್ಲೇ ಹೇಳಿಕೊಂಡ ಅಮಿತ್‌ ಮತ್ತೆ ದೇವರ ಕಡೆಗೆ ಮುಖ ಮಾಡಿ ನಿಂತ.

ಇವಳದ್ದು ಮತ್ತೆ ಶುರುವಾಯಿತು….`ನನ್ನಂತೆ ಅವನು, ಅವನಂತೆ ನಾನು. ಬೆಸೆದ ಕೈಗಿಲ್ಲ ಯಾವುದೇ ಅಡೆತಡೆ. ತುಟಿಯಂಚು ಹಸಿಯಾಗಿ, ಕಣ್ಣಂಚು ಗೆಲುವಾಗಿ, ನಿಂತ ನೀರಂಥ ಬದುಕು…..’ ಕೊನೆಯ ಸಾಲು ತಲೆಯಲ್ಲಿ ಮೂಡಿದಾಗ ಥಟ್ಟನೆ ನಿಂತಿತು ರಾಘವಿಯ ಲಹರಿ.

`ನಿಂತ ನೀರಾದರೆ ಬದುಕುವ ಗತಿ ಎಂತು? ಹರಿವ ನೀರ ಸ್ವಚ್ಛಂದತೆ ಇರಲಾರದಲ್ಲ…..! ಹಾಗಂತ ನಮ್ಮ ಬಾಳಲ್ಲಿ ಸೀರಿಯಲ್ ನಂತೆ ಬರೀ ಸಮಸ್ಯೆಯೇ ಇರಬೇಕೇ….? ಅಯ್ಯೋ….. ಇದಕ್ಕೆಲ್ಲ ದೇವರು ಅಸ್ತು ಅಂದುಬಿಟ್ರೆ….’ ಎಂದು ತಡವರಿಸಿ, ತಡೆಯಿಲ್ಲದೇ ಸಾಗಿದ್ದ ಹುಚ್ಚು ಯೋಚನೆಗಳಿಗೆ ತಲೆಕೊಡವಿ, `ತಪ್ಪಾಯಿತು….  ತಪ್ಪಾಯಿತು. ದೇವರೇ ಕ್ಷಮಿಸು, ಅಮ್ಮ ತಾಯೇ ಮಾತೇ, ನನ್ನ ಮಾತನ್ನು ಹಿಂತೆಗೆದು, ನಮ್ಮಿಬ್ಬರ ಬಾಳನ್ನು ಹಸನಾಗಿಸು. ನಮ್ಮಿಬ್ಬರ ಬಂಧ ಗಟ್ಟಿಯಾಗಿ ನೂರ್ಕಾಲ ಖುಷಿಯಾಗಿ ಬಾಳುವಂತೆ ಹರಸು,’ ಎಂದು ತನ್ನ ಕೆನ್ನೆಗೆ ತಪ್ಪಾಯಿತು ಎಂಬಂತೆ ಎರಡು ಬಾರಿ ಬಡಿದುಕೊಂಡು ಕೈಯೆತ್ತಿ ಮುಗಿದಳು.

ಓರೆಗಣ್ಣಿನಲ್ಲಿಯೇ ಅವಳೆಡೆ ನೋಡಿದವನಿಗೆ ಅವಳ ನಡೆ ವಿಚಿತ್ರವೆನಿಸಿತು. ಈಗಷ್ಟೇ ತನ್ನಷ್ಟಕ್ಕೆ ತಾನೇ ಯೋಚಿಸುತ್ತಿದ್ದವಳಿಗೆ ಇದ್ದಕ್ಕಿದ್ದಂತೆ ಏನಾಯ್ತು ಎಂದು ಅವನಿಗೆ ತಿಳಿಯಲಿಲ್ಲ.

ಅವಳು ದೇವರೊಂದಿಗೆ ಕೊಟ್ಟು ತೆಗೆದುಕೊಳ್ಳುವ ನೇರ ಮಾತುಕತೆಯಲ್ಲಿದ್ದಾಳೆ ಎಂದು ಅವನಿಗೇನು ಗೊತ್ತು?

“ರಾಘವೀ….” ಮತ್ತೆ ಎಚ್ಚರಿಸಿದ.

“ಹ್ಞಾಂ……” ಎನ್ನುತ್ತ ಅವನೆಡೆಗೆ ತಿರುಗಿದಳು.

“ಆರ್‌ ಯು ಓಕೆ….?” ಕಾಳಜಿ ಮಿಶ್ರಿತ ಆತಂಕದಿಂದ ಕೇಳಿದ.

“ಹ್ಞೂಂ…. ಹ್ಞೂಂ…..” ಎಂದು ತಲೆಯಾಡಿಸಿದಳು.

“ಪ್ರದಕ್ಷಿಣೆ ಹಾಕಿ ಬರೋಣ…..” ಎಂದ ಹಿರಿಯರ ಮಾತಿನಂತೆ, ದೇವರ ದರ್ಶನಕ್ಕೆಂದು ಬಂದಿದ್ದ ಅಮಿತ್‌ ಮತ್ತು ರಾಘವಿಯ ನವಜೋಡಿ ತಲೆಯಾಡಿಸಿ ಹಿರಿಯರ ಹಿಂದೆ ಹಿಂದೆ ನಡೆದರು.

ತನಗಿಂತ ಎರಡು ಹೆಜ್ಜೆ ಹಿಂದಿದ್ದ ರಾಘವಿಯನ್ನು ಜೊತೆಗೂಡಲೆಂದು, ತನ್ನ ನಡಿಗೆ ಮಂದಗೊಳಿಸಿದ ಅಮಿತ್‌. ಅವಳೆಡೆಗೆ ನೋಡಿದ ಅವಳ ಲಕ್ಷ್ಯ ಇನ್ನೆಲ್ಲೋ ಇತ್ತು!

“ಹೀಗೆ ಆದರೆ ಕಷ್ಟ ಕಷ್ಟ….. ಮುಂದೆ ನನ್ನ ಹೆಂಡತಿಯೊದಿಗೆ ಮೌನ ಸಂಭಾಷಣೆಯನ್ನೇ ನಡೆಸಬೇಕೇನೋ….’ ಎಂದುಕೊಂಡು ತನ್ನಷ್ಟಕ್ಕೆ ತಾನೇ ನಕ್ಕಿದ್ದ.

ತನಗೆ ಸಮನಾಗಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದವಳ ಕೈಗೆ ನಿಧಾನವಾಗಿ ತನ್ನ ಕೈ ಸೇರಿಸಿದ. ಅವನ ಸ್ಪರ್ಶಕ್ಕೆ ಎಚ್ಚೆತ್ತವಳು ಥಟ್ಟನೇ ತಿರುಗಿದಳು, ನಸುನಗುತ್ತಿದ್ದ ಅಮಿತ್‌ ಅವಳತ್ತ ಕಣ್ಣು ಮಿಟುಕಿಸಿದ. ಸಂಕೋಚದಿಂದ ತಲೆತಗ್ಗಿಸಿದಳು ರಾಘವಿ.

ಅವಳ ಬೆರಳಿಗೆ ತನ್ನ ಬೆರಳು ಬೆಸೆದು ಜೊತೆಗಿರುವ ಭಾವ ಮೂಡಿಸಿದ್ದ. ಮುಖ ತಗ್ಗಿಸಿದ್ದರೂ ಅಲ್ಲೇ ಕಿರುನಗೆ ಮೂಡಿತು ರಾಘವಿಗೆ. ನಾಚುತ್ತಲೇ ಅವನೆಡೆಗೆ ನೋಟ ಹರಿಸಿದಳು. ಅವನಂತೂ ಅವಳನ್ನು ನೋಡುವುದರಲ್ಲಿ ತಲ್ಲೀನನಾಗಿದ್ದ. ಇವನ ನಿಶ್ಶಬ್ದ ಹೆಜ್ಜೆಗೆ, ಅವಳ ಗೆಜ್ಜೆಯ ನಾದ ಜೊತೆಯಾಗಿತ್ತು.

ಇಬ್ಬರ ಮನದಲ್ಲೂ ನವ ಜೀವನದ ಕುರಿತಾದ ಆಶಯ, ಕನಸು. ಪ್ರತಿ ಕ್ಷಣ, ದಿನ, ವರುಷ ಹೊಸತನ, ಖುಷಿ, ನೆಮ್ಮದಿಯಿಂದ ಕೂಡಿರಲಿ. ಅಡೆತಡೆಗಳನ್ನೆಲ್ಲ ಜೊತೆಯಾಗಿ ಜಯಿಸುವೆ ಎಂಬ ಭಾವ ಇಬ್ಬರಲ್ಲಿತ್ತು.

ಅಮಿತ್‌ ಅವಳನ್ನು ಮೆಲ್ಲನೆ ಮಾತಿಗೆಳೆದ, “ರಾಘವಿ…. ಕನಸು ಕಾಣ್ತಾ ಇರೋದು ನನ್ನ ಬಗ್ಗೆಯೇ ಅಂತಾದ್ರೆ, ಸುಮ್ಮನೆ ತೊಂದರೆ ಏಕೆ….? ಎದುರಿಗೆ ನಾನೇ ಇದ್ದಿನಲ್ವಾ…. ಅದೇನೇ ಹೇಳಬೇಕೂ ಅಂತಿದ್ರೂ ನನ್ನ ಹತ್ತಿರವೇ ಹೇಳಬಹುದಲ್ವಾ…..” ಎನ್ನುತ್ತಾ ತುಂಟ ನೋಟ  ಬೀರುತ್ತಾ ಹುಬ್ಬು ಹಾರಿಸಿದ. ರಾಘವಿ ಸುಮ್ಮನೆ ಅವನನ್ನೇ ದಿಟ್ಟಿಸಿದಳಷ್ಟೇ.

ಅಮಿತ್‌ ಅವಳ ಸನಿಹಕ್ಕೆ ಬಂದಾಗ ಅಳೆದೆ ಬಡಿತ ಅವಳ ಹಿಡಿತಕ್ಕೇ ಸಿಗದಾಗಿತ್ತು. ಅಮಿತ್‌ ಗೆ ತನ್ನವಳ ಇರುವಿನಿಂದ ಏನೋ ನೆಮ್ಮದಿ. ಇನ್ನೆಂದೂ ಜೊತೆಗಿರುವ ಜೀವದ ಸನಿಹ ಅವನಿಗೆ ಆಪ್ಯಾಯಮಾನವಾಗಿತ್ತು.

ರಾಘವಿಗೆ ಅವನಿರುವುದು ಖುಷಿಯಾದರೂ ತಪ್ಪಿಸಿಕೊಂಡು ಓಡುವ ತವಕ. ನಾಚಿಕೆಯೋ… ಸಂಕೋಚವೋ…. ತನ್ನ ಕೈಯನ್ನು ನಿಧಾನವಾಗಿ ಬಿಡಿಸಿಕೊಳ್ಳಲು ನೋಡಿದಳು. ಆದರೆ ಅವನು ಬಿಡಬೇಕಲ್ಲ…..!

“ಅಮಿತ್‌ ಬಿಡಿ, ಅದು…. ನಾನು ಅಲ್ಲಲ್ಲ ಎಲ್ಲರೂ ನಮ್ಮನ್ನು…..” ಎಳೆಯುತ್ತಿದ್ದವಳನ್ನು ತಡೆದು, “ನೀನು ನನ್ನ ಹೆಂಡತಿ ತಾನೇ….?” ಪ್ರಶ್ನಿಸಿದ.

ಕತ್ತಿನಲ್ಲಿದ್ದ ತಾಳಿ ನೋಡಿ, “ಹ್ಞೂಂ….” ಎಂಬಂತೆ ತಲೆಯಾಡಿಸಿದಳು.

“ಮತ್ತೇ ನನ್ನ ಜೊತೆಗೇ ಇರಬೇಕು ತಾನೇ….? ನನ್ನನ್ನ ಬಿಟ್ಟು ಹೋಗ್ತೀಯಾ….?” ಕಣ್ಣಲ್ಲಿ ಕಣ್ಣಿಟ್ಟು ಕೇಳಿದವನ ಪ್ರಶ್ನೆಗೆ ಬಹಳ ಅರ್ಥ ಇದೆ ಎನಿಸಿತ್ತು.

ತುಸುವೇ ಮುಗುಳ್ನಕ್ಕಳು, ಅವನು ಬೆಸೆದಿದ್ದ ಕೈಗೆ ತನ್ನ ಕೈ ಬಿಗಿಗೊಳಿಸಿ ಜೊತೆಯಾಗಿ ನಡೆದಳು. ಅವಳ ವರ್ತನೆಯಿಂದ ಉತ್ತರ ಸಿಕ್ಕವನಂತೆ ಅವನೂ ಮುಗುಳ್ನಕ್ಕ.

“ಜೀವನ ಪೂರ್ತಿ ಹೀಗೇ ಪ್ರದಕ್ಷಿಣೆ ಹಾಕೋದು ಇದ್ದೇ ಇದೆ. ಇವತ್ತಿಗೆ ಇಷ್ಟು ಸಾಕು, ಪ್ರಸಾದ ತಗೊಂಡು ಮನೆಗೆ ಹೋಗೋಣ,” ಅಮಿತ್‌ ನ ಅಮ್ಮ ನಸುನಗುತ್ತ ಹೇಳಿದರು.

ಸರಿಯೆಂದು ತಲೆಯಾಡಿಸಿದ ಜೋಡಿ ಪ್ರಸಾದ ಸ್ವೀಕರಿಸಿ ತಮ್ಮ ಕಾರನ್ನೇರಿದರು. ಮತ್ತೆ ಬೆಸೆದ ಕೈ ಹೊಸ ಕನಸು ಹೆಣೆದಿತ್ತು.

ಕಾರಿನ ವಿಂಡೋದಿಂದ ಹೊರಗೆ ನೋಟ ಹರಿಸಿದ ರಾಘವಿಯ ಮನ ಮತ್ತೆ ಅಮಿತ್‌ ನತ್ತ ಸುತ್ತತೊಡಗಿತು. `ನಿನ್ನೊಲವು ನಾನಿರಲು, ನನ್ನೊಲವು ನೀನಿರಲು, ಮೊಗೆದಷ್ಟು ಮಿಕ್ಕುವ ಒಲುಮೆಯಾ ಪಾಲಿರಲು…….’ ಹಾಡಿನ ಲಹರಿ ಹಾಗೇ ಮುಂದುವರಿದಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ