ಕಥೆ – ಶೇಖರಗೌಡ ವೀ.ಸ.
ವೃತ್ತಿ ಧರ್ಮಕ್ಕೆ ಅನುಸಾರವಾಗಿ ರೋಹನ್ ಹಳ್ಳಿಯ ಯಾವ ಮನೆಗೆ ಬಂದಿದ್ದನೋ, ಮುಂದೆ ಆ ಮನೆಯ ಕೌಟುಂಬಿಕ ಸದಸ್ಯನಾದದ್ದು ಹೇಗೆ……?
“ಪಪ್ಪಾ… ತಮ್ಮ ಪಾಪು ಮುದ್ದು ಮುದ್ದಾಗಿ ಅದೆಷ್ಟು ಕ್ಯೂಟ್ ಆಗಿದ್ದಾನೆ ಅಲ್ವಾ…..? ರಿಯಲೀ ಸೂಪರ್!” ಅಮ್ಮನ ಜೊತೆಗಿದ್ದ ಮುತ್ತಾತ, ತಾತ, ಮುತ್ತಜ್ಜಿ, ಅಜ್ಜಿಯರು ಮತ್ತು ಅಮ್ಮನ ಮನೆಯ ಬಳಗದವರೆಲ್ಲರನ್ನು ಕಂಡು ಸುರಕ್ಷಿತಾಳಿಗೆ ಹಿಡಿಸಲಾರದಷ್ಟು ಹಿಗ್ಗಾಗಿತ್ತು. ಅವರೆಲ್ಲರ ಸಂತೋಷದ ಮುಖಗಳನ್ನು ದಿಟ್ಟಿಸತೊಡಗಿದ್ದ ರೋಹನನ ಮನಸ್ಸು ಎಲ್ಲೋ ಕಳೆದು ಹೋಗತೊಡಗಿತು.
ರಾಜ್ಯದ ಪ್ರಸಿದ್ಧ ದೂರದರ್ಶನ ವಾಹಿನಿಯ `ಮನೆ ಮನೆಗೆ ಭಾಗ್ಯಲಕ್ಷ್ಮಿ’ ಎಂಬ ನೂತನ ಕಾರ್ಯಕ್ರಮವೊಂದನ್ನು ನಿರೂಪಿಸುವ ಜವಾಬ್ದಾರಿ ಯುವ ನಿರೂಪಕ ರೋಹನ್ ನ ಪಾಲಿಗೆ ಬಂದಿತ್ತು. ರೋಹನ್ ಇಪ್ಪತ್ತೆಂಟರ ಹರೆಯದ ಸ್ಛುರದ್ರೂಪಿ ಉತ್ಸಾಹಿ ತರುಣ. ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಿಗೆ ಹೋಗಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಈಗಾಗಲೇ ನಿರೂಪಿಸಿ, ನಾಡಿನ ಜನತೆಯ ಹೃದಯಗಳನ್ನು ಗೆದ್ದಿರುವ ಖ್ಯಾತಿ ಅವನಿಗಿದೆ.
ಈ ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ಕೂಡು ಕುಟುಂಬಗಳನ್ನು ಗುರುತಿಸಿ ಅಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದು ರೋಹನ್ ನ ಕೆಲಸವಾಗಿತ್ತು. ಈ ಬಾರಿ ರೋಹನ್ ಅಂತಹದೊಂದು ಅವಿಭಕ್ತ ಕುಟುಂಬವನ್ನು ಹುಡುಕಿದ್ದು ಮಲೆನಾಡಿನ ಸೆರಗಿನ ಅಂಚಿನಲ್ಲಿರುವ ಕಲಘಟಗಿಗೆ ಕೇವಲ ಐದು ಕಿ.ಮೀ. ದೂರದ ಗ್ರಾಮ ಶಿವಳ್ಳಿಯಲ್ಲಿ. ಮುಂಗಾರು ಮಳೆಯ ಸವಿಯುಂಡ ಭೂದೇವಿ ಹಸಿರು ಪತ್ತಲವನ್ನು ಉಟ್ಟುಕೊಂಡು ಬೀಗುತ್ತಿದ್ದಳು. ಐದಾರು ನೂರು ಮನೆಗಳ ಚಿಕ್ಕ ಊರು ಶಿವಳ್ಳಿ. ರೋಹನನಿಗೆ ಶಿವಳ್ಳಿ ಸುಂದರ ತಾಣ ಎಂದು ಅನಿಸಿತ್ತು. ಮಹಾದೇಪ್ಪ ಸಾಹುಕಾರ ಮೆಣಸಿನಕಾಯಿ ಎಂಬುವರ ಕೂಡು ಕುಟುಂಬ ರೋಹನನ ಮನ ಸೆಳೆದಿತ್ತು. ಅವರ ಕುಟುಂಬದಲ್ಲಿ ಸುಮಾರು ಎಪ್ಪತ್ತೈದು ಜನ ಸದಸ್ಯರಿದ್ದರು.
ಎಂಬತ್ತರ ವಯಸ್ಸಿನ ಮಹಾದೇವಪ್ಪ ಮತ್ತು ಎಪ್ಪತ್ತೈದರ ಚೆನ್ನಮ್ಮ ದಂಪತಿಯರಿಗೆ ಐದು ಜನ ಗಂಡು, ಮೂರು ಹೆಣ್ಣು ಮಕ್ಕಳು, ಮೊದಲನೆಯದು ಗಂಡು ಮಗು ನಂತರ ಇಬ್ಬರು ಹೆಣ್ಣುಮಕ್ಕಳು, ನಂತರ ಮೂರು ಗಂಡು ಮಕ್ಕಳು, ನಂತರ ಹೆಣ್ಣು ಮಗು, ನಂತರ ಕೊನೆಯವನು ಗಂಡು ಮಗ. ಹಿರಿ ಮಗನಿಗೆ ಅರವತ್ತು ವರ್ಷವಾಗಿದ್ದರೆ ಕಿರಿ ಮಗನಿಗೆ ನಲವತ್ತೈದು ವರ್ಷ ವಯಸ್ಸು. ಒಟ್ಟು ಐವತ್ತೈದು ಜನ ಮೊಮ್ಮಕ್ಕಳು, ಮರಿ ಮೊಮ್ಮಕ್ಕಳಿದ್ದರು. ಅದರಲ್ಲಿ ನಲವತ್ತಾರು ಮೊಮ್ಮಕ್ಕಳು ಮತ್ತು ಒಂಬತ್ತು ಮರಿ ಮೊಮ್ಮಕ್ಕಳು. ಊರಿಗೆ ಹೊತ್ತಿಕೊಂಡಿರುವ, ಒಂದೇ ಹಾಸಿಗೆಯಲ್ಲಿರುವ ನಲವತ್ತು ಎಕರೆ ಜಮೀನಿನಲ್ಲಿಯೇ ದೊಡ್ಡದೊಂದು ಮನೆಯನ್ನು ಕಟ್ಟಿಸಿಕೊಂಡು ಅದರಲ್ಲಿ ವಾಸಿಸುತ್ತಿದೆ ಈ ಕೂಡು ಕುಟುಂಬ. ಈಗ್ಗೆ ಮೂವತ್ತು ವರ್ಷಗಳ ಹಿಂದೆಯೇ ಊರಿನಲ್ಲಿದ್ದ ಚಿಕ್ಕ ಮನೆಯಿಂದ ಜಮೀನಿನಲ್ಲಿರುವ ಈ ದೊಡ್ಡ ಮನೆಗೆ ಸ್ಥಳಾಂತರವಾಗಿತ್ತು ಈ ಕುಟುಂಬ.
ಹೆಣ್ಣುಮಕ್ಕಳ ಗಂಡಂದಿರೂ ಸಹ ಇವರೊಂದಿಗೆ ಸಹಜೀವನದಲ್ಲಿರುವುದು ಈ ಕೂಡು ಕುಟುಂಬದ ವಿಶೇಷತೆ. ಮಹಾದೇವಪ್ಪ ಚೆನ್ನಮ್ಮ ದಂಪತಿಯರಿಗೆ ಮಗ ಅಳಿಯ, ಮಗಳು ಸೊಸೆ ಎಂಬ ಭೇದ ಭಾವವಿರಲಿಲ್ಲ. ಎಲ್ಲರೂ ಮನೆ ಮಕ್ಕಳು ಎಂಬಂತಿದ್ದರು.
ಮಹಾದೇವಪ್ಪನವರ ಐದು ಜನ ಗಂಡುಮಕ್ಕಳಲ್ಲಿ ಮೂರು ಸರ್ಕಾರಿ ಉದ್ಯೋಗದಲ್ಲಿದ್ದರು. ಮೂವರೂ ಶಿಕ್ಷಕರಾಗಿಯೇ ಕೆಲಸ ಮಾಡುತ್ತಿದ್ದು, ಅದೂ ಶಿವಳ್ಳಿಗೆ ಸಮೀಪದ ಊರಿನ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಿರಿಯ ಗಂಡುಮಕ್ಕಳಿಬ್ಬರೂ ಮನೆತನದ ಮೂಲ ಉದ್ಯೋಗ ಕೃಷಿ ಕಾಯಕದಲ್ಲಿ ಮುಂದುವರಿದಿದ್ದರು. ಅವರಿಗೆ ಒಬ್ಬ ಅಕ್ಕ ಮತ್ತು ಒಬ್ಬ ತಂಗಿಯ ಗಂಡಂದಿರು ಸಾಥ್ ಕೊಡುತ್ತಿದ್ದರು.
ಭಾವಂದಿರಿಬ್ಬರೂ ಅವರ ಊರಿಗೇ ಹತ್ತಿರವಿರುವ ಗ್ರಾಮದವರಾಗಿದ್ದರಿಂದ ಮಹಾದೇವಪ್ಪನವರ ಇಚ್ಛೆಯ ಮೇರೆಗೆ ಇವರ ಮನೆಯಲ್ಲಿಯೇ ಇದ್ದುಕೊಂಡು ಮಹಾದೇವಪ್ಪನವರ ಕೂಡು ಕುಟುಂಬದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿದ್ದರು. ಇನ್ನೊಬ್ಬ ತಂಗಿಯ ಗಂಡನೂ ಅದೇ ಊರಿನವನಾಗಿದ್ದು ಪಕ್ಕದ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಶಿವಳ್ಳಿಯಿಂದ ಅಲ್ಲಿಗೆ ದಿನಾಲೂ ಹೋಗಿ ಬಂದು ಮಾಡುತ್ತಿದ್ದ.
ರೋಹನ್ ಕಲಘಟಗಿಯ ಲಾಡ್ಜ್ ನಲ್ಲಿ ಇದ್ದುಕೊಂಡು ಅಲ್ಲಿಂದ ದಿನಾಲೂ ಶಿವಳ್ಳಿಗೆ ಅಡ್ಡಾಡಬೇಕೆಂದು ಅಂದುಕೊಂಡಿದ್ದ. ತನ್ನದು ಸುಮಾರು ಒಂದು ವಾರದ ಯೋಜನೆ ಎಂದುಕೊಂಡಿದ್ದ. ಇಬ್ಬರು ಛಾಯಾಗ್ರಾಹಕರು, ಒಬ್ಬ ಸಹಾಯಕ ಹಾಗೂ ವಾಹನದ ಚಾಲಕನಷ್ಟೇ ರೋಹನನ ಸಿಬ್ಬಂದಿ ವರ್ಗ. ತನ್ನ ಯೋಜನೆಯ ಬಗ್ಗೆ ರೋಹನ್ ಮಹಾದೇವಪ್ಪನವರಿಗೆ ವಿವರಿಸಿದ.
“ಅಲ್ರೀ ರೋಹನ್ ಸಾಹೇಬ್ರೇ…. ನೀವು ನಮ್ಮ ಊರಿಗೆ ಅದೂ ನಮ್ಮ ಮನಿಗೆ ಬಂದ ಮ್ಯಾಲ ನೀವು ನಮ್ಮ ಮನೆ ಅತಿಥಿ ಇದ್ದಾಂಗ. ನೀವಿರೋದು ಐದು ಮಂದಿ ಅಲ್ವಾ…? ನಮ್ಮ ಮಹಡಿಯ ಮನ್ಯಾಗ ಮೂರು ಕೋಣೆಗಳ ಒಂದು ಸುಸಜ್ಜಿತ ಮನೆ ಖಾಲಿನೇ ಐತಿ. ಸ್ಪೆಷಲ್ ರೂಮನ್ನು ನೀವಿಟ್ಕೊಂಡ್ರೆ ಊಳಿದ ರೂಮಿನ್ಯಾಗ ನಿಮ್ಮ ಸಿಬ್ಬಂದಿ ವರ್ಗದವರು ಆರಾಮವಾಗಿ ಇರಬಹುದು. ನೀರಿನ ವ್ಯವಸ್ಥೆ ಎಲ್ಲಾ ಚೆನ್ನಾಗೈತಿ.
“ಇಲ್ಲಿನ ಕೆಲಸ ಮುಗಿಯುವ ತನಕ ನೀವಂತೂ ನಮ್ಮ ಮನಿ ಬಿಟ್ಟು ಹೊರಗಡೆ ಎಲ್ಲೂ ಊಟ, ತಿಂಡಿ ಮಾಡೋಂಗಿಲ್ಲ. ನಿಮ್ಗ ಯಾವ ಟೈಮಿಗೆ ಯಾವ ಊಟ, ನಾಷ್ಟಾ ಬೇಕು ಅಂತ ಹೇಳಿದ್ರೆ ಸಾಕು ಎಲ್ಲಾ ತಾನಾಗೇ ತಯಾರಾಗುತ್ತೆ,” ರೋಹನನ ಮಾತನ್ನು ಕೇಳಿಸಿಕೊಂಡ ಮಹಾದೇವಪ್ಪನವರು ತಮ್ಮ ಕಂಠದಿಂದ ಮಾತಿಗೆ ಶುರುವಿಟ್ಟುಕೊಂಡಿದ್ದರು.
“ನಿಮಗ್ಯಾಕಿ ತೊಂದರೆ….? ನಾವು ಹೇಗೋ, ಎಲ್ಲೋ ಅಡ್ಜೆಸ್ಟ್ ಮಾಡಿಕೊಂಡು ನಮ್ಗೆ ಕೊಟ್ಟಿರುವ ಕೆಲ್ಸ ಮುಗಿಸ್ತೀವಿ. ಇಂಥಹದೆಲ್ಲಾ ನಮ್ಗೆ ರೂಢಿ ಆಗೈತೆ. ಮೇಲಾಗಿ ನಮ್ಗೆ ಇಂಥ ಊಟ, ಅಂಥ ಊಟ ಅಂತ ಯಾವುದೇ ಕಂಡೀಷನ್ ಇಲ್ಲ. ನಿಮ್ಮ ಮನೆಯ ಮಾಮೂಲಿ ಊಟ ಏನಿರುತ್ತೋ, ಅದನ್ನೇ ನಮಗೆ ಬಡಿಸಿದರೆ ಸಾಕು ಅಷ್ಟೇ,” ರೋಹನ್ ವಿನಯದಿಂದ ಹೇಳಿದ.
“ನೋಡ್ರೀ ರೋಹನ್, ನೀವು ಬ್ಯಾರೆ ಊರಾಗ ಹೆಂಗ ಪ್ರೋಗ್ರ್ಯಾಂ ಮಾಡ್ತೀರೋ ಏನೋ ನಮಗೆ ಗೊತ್ತಿಲ್ಲ. ಆದ್ರ ನಮ್ಮ ಮನ್ಯಾಗ ಮಾಡೋವಾಗ ಮಾತ್ರ ನೀವು ನಮ್ಮ ಮನಿಯವರಂಗ ಇರ್ಬೇಕು ಅಂತ ನಮ್ಮಾಸೆ. ನಿಮ್ಗ ಯಾವುದಕ್ಕೂ ಏನೂ ತೊಂದ್ರಿ ಆಗ್ದಂದ ನೋಡ್ಕೊಳ್ಳೋ ಜವಾಬ್ದಾರಿ ನಮ್ದು. ನೀವು ಮಾತ್ರ ಯಾವುದಕ್ಕೂ ಭಿಡೇ ಮಾಡ್ಕೊಳ್ಬಾರದು. ನೀವು ನಮ್ಮ ಮನಿಯಾಗಿನ ಒಬ್ಬ ಮೆಂಬರ್ ಇದ್ದಂಗ ಅಂತ ನನ್ನ ಭಾವನೆ,” ಮಹಾದೇವಪ್ಪನವರು ಅವಿನಾಭಾವ ಸಂಬಂಧಕ್ಕೆ ಇಳಿಯತೊಡಗಿದ್ದರು.
ಅವರ ಆತ್ಮೀಯ ಮಾತುಗಳಿಗೆ ರೋಹನನ ಹೃದಯ ತನ್ನೊಳಗೇ ಮಿಡಿಯತೊಡಗಿ, ಬೇಡವೆನ್ನುವುದಕ್ಕೆ ಅವನಿಗೆ ಬಾಯಿ ಕಟ್ಟಿದಂತಾಗಿತ್ತು. ರೋಹನ್ ಯೋಚನೆಯಲ್ಲಿ ಮುಳುಗಿದ.
“ಅಯ್ಯೋ ಸಾಹೇಬ್ರಾ, ಇದಕ್ಯಾಕೆ ಇಷ್ಟು ಗಂಭೀರವಾಗಿ ಯೋಚಿಸ್ಲಿಕ್ಕೆ ಹತ್ತೀರಿ….? ಸುಮ್ನಾ ಹ್ಞೂಂ ಅಂದುಬಿಡ್ರೆಲ್ಲ…. ಇದ್ರೊಳಗೆ ಯೋಚ್ನೆ ಮಾಡೋಂಥಹದ್ದೇನಿದೆ….?” ಎಂದು ಮಹಾದೇವಪ್ಪನವರು ಅಂದಾಗ ರೋಹನ್ ಹ್ಞೂಂ ಎನ್ನಲೇ ಬೇಕಾಗಿತ್ತು.

“ನಿಮ್ಮ ಋಣ ಬಹಳ ಆಗ್ಲಿಕ್ಕೆ ಹತ್ತೇದ ಸಾಹುಕಾರ್ರೇ…..” ರೋಹನ್ ಕೃತಜ್ಞತೆ ಸಲ್ಲಿಸಲು ಮುಂದಾದ.
“ಅಯ್ಯೋ ದ್ಯಾವ್ರೇ…. ಇದ್ರಾಗ ಋಣದ ಪ್ರಶ್ನೆ ಎಲ್ಲಿ ಬರೆತೆ? ಅತಿಥಿ ಸತ್ಕಾರ ಮಾಡೋದು ನಮ್ಮ ಕರ್ತವ್ಯ ಅಲ್ವೇನು….? ಅತಿಥಿ ಸತ್ಕಾರ ಮಾಡೋದಕ್ಕೆ ನಮ್ಗೆ ಇದೊಂದು ಅವಕಾಶ ಅಷ್ಟೇ. ಏನೋ ನೀವು ಅಚಾನಕ್ ಆಗಿ ಬಂದಿರುವಿರಿ, ನಮ್ಮ ಪುಣ್ಯ ಅಂತ ತಿಳ್ಕೋತೀವಿ….” ಎಂದು ಮಹಾದೇವಪ್ಪನವರು ಮತ್ತು ಅವರ ಮನೆಯವರು ತಮ್ಮ ಪಟ್ಟು ಬಿಡದೇ ರೋಹನನ ಬಾಯಿಯನ್ನು ಕಟ್ಟಿ ಹಾಕಿದ್ದರು.
ರೋಹನನ ಒಪ್ಪಿಗೆ ಸಿಗುತ್ತಲೇ ಮಹಾದೇವಪ್ಪನವರು ಮೇಲಿನ ಮನೆಯನ್ನು ಫಟಾಫಟ್ ಅಂತ ತಕ್ಷಣ ಸ್ವಚ್ಛ ಮಾಡಿಸಿ ಅತಿಥಿಗಳಿಗೆ ಇರಲು ಅನುವು ಮಾಡಿಕೊಟ್ಟಿದ್ದರು. ರೋಹನ್ ಮತ್ತು ಅವನ ಸಿಬ್ಬಂದಿಗಳು ಮಹಾದೇವಪ್ಪ ಮತ್ತು ಅವರ ಮನೆಯವರೆಲ್ಲರ ಅತಿಥಿ ಸತ್ಕಾರದ ಭಾರದಲ್ಲಿ ನಲುಗಿ ಹೋಗತೊಡಗಿದ್ದರು.
ಮರುದಿನದಿಂದ ರೋಹನ್ ತನ್ನ ನಿಯೋಜಿತ ಕೆಲಸವನ್ನು ಪ್ರಾರಂಭಿಸಿದ್ದ. ಮಹಾದೇವಪ್ಪನವರ ಮನೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಹಳ್ಳಿಯೆಲ್ಲ ತನ್ನಿಂದ ತಾನೇ ಅದೇನೋ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾದಂತಾಗಿತ್ತು. ಎಲ್ಲೆಲ್ಲೂ ತಳಿರು ತೋರಣ, ಹೂವಿನ ಮಾಲೆ, ಎಳೆ ಬಾಳೆ ದಿಂಡುಗಳಿಂದ ಶಿವಳ್ಳಿ ವಿಜೃಂಭಿಸತೊಡಗಿತ್ತು. ಮಹಾದೇವಪ್ಪನವರ ಮನೆಯ ಮುಂದಿನ ಖಾಲಿ ಜಾಗದಲ್ಲಿ ಭವ್ಯವಾದ ಶಾಮೀಯಾನ ಹಾಕಲಾಗಿತ್ತು. ಸಂಜೆ ಐದಕ್ಕೆ ಗಣೇಶನ ಪೂಜೆಯೊಂದಿಗೆ ಮೊದಲ ದಿನದ ಕಾರ್ಯಕ್ರಮ ಪ್ರಾರಂಭಿಸಿದ ರೋಹನ್.
ಮೊದಲ ದಿನದ ಕಾರ್ಯಕ್ರಮಗಳಲ್ಲಿ ಮುಖ್ಯವಾದವುಗಳು ಮಹಾದೇವಪ್ಪ ದಂಪತಿಯರಿಗೆ ಮೀಸಲಾಗಿದ್ದ ಪ್ರಶ್ನೆಗಳು. ಮೊದಲ ಪ್ರಶ್ನೆ ಮಹಾದೇವಪ್ಪನವರಿಗೆ ಇತ್ತು.
“ಸಾಹುಕಾರರೇ, ನೀವು ನಿಮ್ಮ ಎಲ್ಲಾ ಹೆಣ್ಣುಮಕ್ಕಳು, ಹೆಣ್ಣು ಮೊಮ್ಮಕ್ಕಳು ಮತ್ತು ಹೆಣ್ಣು ಮರಿಮೊಮ್ಮಕ್ಕಳುಗಳ ಹೆಸರುಗಳನ್ನು ಹೇಳಬೇಕು,” ಎಂದು ರೋಹನ್ ತನ್ನ ಕಾರ್ಯಕ್ರಮ, `ಮನೆ ಮನೆಗೆ ಭಾಗ್ಯಲಕ್ಷ್ಮಿ’ಗೆ ನಾಂದಿ ಹಾಡಿದ.
ರೋಹನ್ ಮಹಾದೇವಪ್ಪನವರನ್ನು `ಧಣಿ, ಸಾಹುಕಾರ್ರೆ…..’ ಎಂದು ಪ್ರೀತಿಯಿಂದ ಸಂಬೋಧಿಸತೊಡಗಿದ್ದ. ಮಹಾದೇವಪ್ಪನವರಿಗೆ ಉತ್ತರಿಸಲು ಹತ್ತು ನಿಮಿಷಗಳ ಅವಧಿ ನೀಡಿದ್ದ. ಪ್ರಶ್ನೆ ತುಂಬಾ ಸರಳ ಎನಿಸಿದರೂ ಮಹಾದೇವಪ್ಪನವರಿಗೆ ತಲೆ ಕರೆದುಕೊಳ್ಳುವಂತಾಗಿತ್ತು. ಮೂವರು ಹೆಣ್ಣುಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳುಗಳ ಹೆಸರುಗಳನ್ನು ಅವರು ನಿಧಾನವಾಗಿ ಒಂದೊಂದಾಗಿ ಹೇಳಿ ಮುಗಿಸಿದಾಗ, ಮನೆ ಮಂದಿಯೆಲ್ಲಾ ಖುಷಿಯಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಎಲ್ಲರಿಗಿಂತ ಹೆಚ್ಚಾಗಿ ಪತ್ನಿ ಚೆನ್ನಮ್ಮ ಮತ್ತು ಮೂವರೂ ಹೆಣ್ಣುಮಕ್ಕಳಿಗೆ ಸಂತಸವಾಗಿತ್ತು.
ಮಹಾದೇವಪ್ಪನವರು ಮೊದಲನೇ ಸುತ್ತಿನಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ತಮ್ಮ ಜೇಬಿಗಿಳಿಸಿಕೊಂಡಿದ್ದರು. ರೋಹನ್‌ಅವರನ್ನು ಮನಸಾರೆ ಅಭಿನಂದಿಸಿ ಮುಂದಿನ ಪ್ರಶ್ನೆಗೆ ಮುಂದಾಗಿದ್ದ. ಮುಂದಿನ ಪ್ರಶ್ನೆ ಯಾರಿಗಿರಬಹುದೆಂದು ಎಲ್ಲರಿಗೂ ಕುತೂಹಲವಿತ್ತು.
“ಅಮ್ಮಾ…. ಎರಡನೇ ಪ್ರಶ್ನೆ ನಿಮಗೆ. ನೀವೀಗ ನಿಮ್ಮ ಎಲ್ಲಾ ಗಂಡು ಮಕ್ಕಳ ಹೆಸರುಗಳು ಅವರ ಗಂಡು ಮೊಮ್ಮಕ್ಕಳು ಮರಿಮೊಮ್ಮಕ್ಕಳುಗಳ ಹೆಸರುಗಳನ್ನು ಹೇಳಬೇಕು,” ಎನ್ನುತ್ತಾ ರೋಹನ್ ಚೆನ್ನಮ್ಮನತ್ತ ದೃಷ್ಟಿ ಹರಿಸಿದ.
ಚೆನ್ನಮ್ಮ ನಿರಾಯಾಸವಾಗಿ ಎಲ್ಲರ ಹೆಸರುಗಳನ್ನು ಪಟಪಟ ಅಂತ ಹೇಳಿ ಮುಗಿಸಿ ಮಹಾದೇವಪ್ಪನವರಿಗಿಂತ ತಾನೇನು ಕಡಿಮೆ ಇಲ್ಲ ಎಂಬಂತೆ ಹತ್ತು ಸಾವಿರ ರೂಪಾಯಿಗಳನ್ನು ಪಡೆದುಕೊಂಡರು.
ರೋಹನ್ ಚೆನ್ನಮ್ಮರನ್ನು ತುಂಬು ಹೃದಯದಿಂದ ಅಭಿನಂದಿಸಿದ. ಮುಂದಿನ ಕಾರ್ಯಕ್ರಮ ಏನಿರಬಹುದು ಎಂದು ಎಲ್ಲರ ಮನಸ್ಸಿನಲ್ಲೂ ಕಾತುರತೆ ಕಾಣತೊಡಗಿತು.
ರೋಹನ್ ಇಪ್ಪತ್ತು ವರ್ಷ ವಯಸ್ಸಿನೊಳಗಿನ ಮಕ್ಕಳ ಎರಡು ತಂಡಗಳನ್ನು ರಚಿಸಿದ. ಹುಡುಗಿಯರ ತಂಡ ಬೇರೆ, ಹುಡುಗರ ತಂಡ ಬೇರೆ. ಎರಡೂ ತಂಡಗಳಿಗೆ ಕನ್ನಡ ಚಲನಚಿತ್ರ ಗೀತೆಗಳ ಅಂತ್ಯಾಕ್ಷರಿಯ ಸ್ಪರ್ಧೆ ಏರ್ಪಡಿಸಿದ. ಹುಡುಗಿಯರ ತಂಡಕ್ಕೆ ಜಯಲಕ್ಷ್ಮಿ ಮಾಲೆ ಹಾಕಿದಳು ಎಂದು ಬೇರೆ ಹೇಳಬೇಕಾಗಿಲ್ಲ ಅಲ್ಲವೇ….? ಇದಲ್ಲದೆ ಹೆಣ್ಣುಮಕ್ಕಳಿಗೆ ರಂಗೋಲಿ, ಹಾಲು ಹಿಂಡುವುದು, ನಿಗದಿತ ಅವಧಿಯಲ್ಲಿ ಹೆಚ್ಚು ರೊಟ್ಟಿ ತಟ್ಟುವುದು, ಬೆರಣಿ ತಟ್ಟುವುದು…. ಹೀಗೆ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿ ರೋಹನ್ ಬಹುಮಾನ ವಿತರಣೆ ಮಾಡಿದ.
ಚಿಕ್ಕ ಮಕ್ಕಳಿಗೆ ಸಾಮಾನ್ಯ ಜ್ಞಾನ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ನಿಗದಿತ ಅವಧಿಯಲ್ಲಿ ಅತಿ ಹೆಚ್ಚು ಪುಟಗಳನ್ನು ಬರೆಯುವುದು, ಕುಂಟಾಬಿಲ್ಲೆ ಆಟ ಹೀಗೆ ನಾನಾ ತರಹದ ಪರೀಕ್ಷೆಗಳನ್ನು ಆಯೋಜಿಸಿದ್ದ. ಹೀಗೆ ಎರಡು ದಿನಗಳು ಕಳೆದುಹೋದವು.
ಮಹಾದೇವಪ್ಪನವರ ಅತಿಥಿ ಸತ್ಕಾರಕ್ಕೆ ಮೂಕವಿಸ್ಮಿತನಾಗಿದ್ದ ರೋಹನ್, ಪ್ರಕೃತಿಯ ರಮ್ಯ ಮಡಿಲಲ್ಲಿ ತುಂಬಾ ಖುಷಿಯಾಗಿದ್ದ. ಬೆಳಗ್ಗೆ ಊರಿನ ಪಕ್ಕದ ಕಾಡಿನೊಳಗೆ ಸುತ್ತಾಡುತ್ತಾ, ಹಸಿರು ಗಿಡಮರಗಳು, ನಾನಾ ತರಹದ ಬಳ್ಳಿಗಳು, ನಾನಾ ಬಣ್ಣದ, ರೂಪು ರೇಷೆಯ ಹೂಗಳು, ಅವುಗಳ ಚೆಲುವನ್ನು ಆಸ್ವಾದಿಸುತ್ತಿದ್ದ ಅವನಿಗೆ ವಯೋಸಹಜ ಕುತೂಹಲದಿಂದ ಫಕ್ಕನೆ ಹೆಣ್ಣಿನ ಸೌಂದರ್ಯ ನೆನಪಿಗೆ ಬಂದಿತು. ಹೂಗಳೆಂಬ ಸೌಂದರ್ಯವತಿಯರ ಅಂಕುಡೊಂಕಿನ ಚೆಲುವನ್ನು ನೋಡಿದ ಗಂಡೆಂಬ ಪ್ರಾಣಿ ಹೆಣ್ಣಿನ ಚೆಲುವನ್ನು ಹೂವಿನ ಅಂದಕ್ಕೆ ಹೋಲಿಸುತ್ತಿರುವುದರಲ್ಲಿ ಉತ್ಪ್ರೇಕ್ಷೆ ಇಲ್ಲವೆಂದು ಮನಗಾಣತೊಡಗಿದ.
ಮೂರನೇ ದಿನ ಬೆಳ್ಳಂಬೆಳಗ್ಗೆ ಮಹಾದೇವಪ್ಪನವರ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗಿತ್ತು. ಅಂದು ಬೆಳಗ್ಗೆ ಐದೂವರೆಗೆ ರೋಹನ್ ಸ್ವೆಟರ್ ಹಾಕಿಕೊಂಡು ನಾಲ್ಕೈದು ಕಿ.ಮೀ. ನಡೆದು ಊರಿನ ಪಕ್ಕದ ಕೆರೆಯ ಅರಣ್ಯದಲ್ಲಿ ಸುತ್ತಾಡಿ ಮನಸ್ಸನ್ನು ಮುದಗೊಳಿಸಿಕೊಂಡು ವಾಪಾಸು ಬಂದಾಗ ಬೆಳಗಿನ ಎಂಟು ಗಂಟೆಯಾಗಿತ್ತು. ಮಹಡಿ ಏರಿ ತನ್ನ ಕೋಣೆಯಲ್ಲಿ ಕಾಲಿಡುಷ್ಟವರಲ್ಲಿ ಮಹಾದೇವಪ್ಪನವರ ಧ್ವನಿ ಕೇಳಿಬಂತು.
“ರೋಹನ್, ಇಲ್ನೋಡಪ್ಪಾ…. ಇಂದು ನಮ್ಮ ಮನೆಯಲ್ಲಿ ಅತ್ಯಂತ ಕುತೂಹಲಕಾರಿ ಮತ್ತು ಸಂತೋಷದಾಯಕ ಘಟನೆ ಜರುಗಿದೆ,” ರೋಹನನ ಒತ್ತಾಯಕ್ಕೆ ಮತ್ತು ಆತ್ಮೀಯತೆಗೆ ಮಣಿದು ಮಹಾದೇವಪ್ಪನವರು ರೋಹನ್ ನನ್ನು ಏಕವಚನದಲ್ಲೇ ಮಾತಾಡಿಸ ತೊಡಗಿದ್ದರು. ಮಹಾದೇವಪ್ಪನವರ ಕಡೆಗೆ ರೋಹನ್ ತಿರುಗಿದ. ಅವರ ಹಿಂದೆ ಸುಂದರ ತರುಣಿಯೊಬ್ಬಳು ನಿಂತಿರುವುದು ಅವನ ಗಮನಕ್ಕೆ ಬಂತು.
“ಯಜಮಾನ್ರೆ…. ಬನ್ನಿ ಬನ್ನಿ….. ಕುಳಿತು ಮಾತಾಡೋಣ,” ಎಂದ ರೋಹನನಿಗೆ ಆಶ್ಚರ್ಯ ಕಾದಿತ್ತು.
“ಕುಳಿತುಕೊಳ್ಳುವುದು ಎಲ್ಲಿಂದ ಬಂತು….? ನನಗೆ ಆಕಾಶದಾಗ ಹಾರಾಡೋಷ್ಟು ಸಂತೋಷವಾಗೈತೆ. ನಿನ್ನ ಕಾಲ್ಗುಣವೋ ಏನೋ…. ಕೈ ಬಿಟ್ಟು ಹೋಗಿದ್ದ ಈ ನಮ್ಮ ಮೊಮ್ಮಗಳು ನಂದಿನಿ ಬಂದಾಳೆ. ಈಕೆ ನನ್ನ ಹಿರಿಮಗನ ಮಗಳು. ಈಕೆಗೂ ನಮಗೂ ಸಂಪರ್ಕ ತಪ್ಪಿ ಈಗಾಗ್ಲೇ ನಾಲ್ಕು ವರ್ಷಗಳಾಗ್ಯಾವು. ನಿನ್ನ ಕಾರ್ಯಕ್ರಮದ ಬಗ್ಗೆ ಇವ್ಳಿಗೆ ತಿಳಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾವೇನೋ ಫೋನಿನ್ಯಾಗ ತಿಳಿಸಿದ್ದೆ. ಆದ್ರೆ ನಿನ್ನೆವರೆಗೂ ಈಕೆ ಬರ್ದೇ ಇದ್ದಾಗ, ಈಕಿ ಇನ್ನು ಬರೋಲ್ಲ ಅಂತ ನಮಗೆ ಅನಿಸಿತ್ತು. ನಾಲ್ಕು ವರ್ಷಗಳ ತರುವಾಯ ಈಕಿ ಮೊದ್ಲ ಬಾರಿಗೆ ನಮ್ಮ ಮನಿ ಹೊಸಿಲನ್ನು ತುಳಿದಾಳ. ಇಂದು ನಮ್ಗೆ ಆ ಶಿವನ ಕೃಪೆಯಾಗೈತೆ. ಈಗ ನಿಜವಾಗ್ಲೂ ನಮ್ಮ ಮನಿಗೆ ಭಾಗ್ಯಲಕ್ಷ್ಮಿ ಬಂದಂಗಾಗೈತೆ,” ಎನ್ನುತ್ತಾ ಮಹಾದೇವಪ್ಪ ಸಾಹುಕಾರರು ಮೊಮ್ಮಗಳು ನಂದಿನಿಯ ಪರಿಚಯವನ್ನು ರೋಹನನಿಗೆ ಮಾಡಿಕೊಟ್ಟರು. ಮುಗುಳ್ನಗೆಯ ವಿನಿಮಯದೊಂದಿಗೆ ನಂದಿನಿ ಮತ್ತು ರೋಹನ್ ಪರಸ್ಪರ, `ಹಾಯ್’ ಎಂದು ಹೇಳಿದರು. ಇಷ್ಟು ಹೇಳುವಷ್ಟರಲ್ಲಿ, “ಅಮ್ಮಾ…. ಎಲ್ಲಿರುವಿ….?” ಎನ್ನುತ್ತಾ ಮೂರು ವರ್ಷದ ಹೆಣ್ಣು ಮಗುವೊಂದು ಅಲ್ಲಿಗೆ ಬಂದಿತು.
“ಹಾಯ್ ಅಂಕಲ್ ಹೇಗಿರುವಿರಿ….? ನಾನು ಸುರಕ್ಷಿತಾ ಅಂತ….” ನಂದಿನಿಯ ಮಗಳು ತನ್ನ ಪರಿಚಯನ್ನು ತಾನೇ ಮಾಡಿಕೊಂಡು ರೋಹನನ ಕೈ ಕುಲುಕಿದಳು. ಮಗುವಿನ ಮಾತಿನಿಂದ ರೋಹನನ ಖುಷಿಗೆ ಮಿತಿಯೇ ಇರಲಿಲ್ಲ.
“ಹಾಯ್ ಸುರಕ್ಷಿತಾ, ನಿನ್ನ ಕಂಡು ನನಗೆ ತುಂಬಾ ಸಂತೋಷವಾಗ್ತಿದೆ,” ಎನ್ನುತ್ತಾ ರೋಹನ್ ಮಗವನ್ನು ಎತ್ತಿಕೊಂಡ.
“ಸುರಕ್ಷಿತಾ, ಮತ್ತೆ ನಿಮ್ಮ ಅಪ್ಪಾಜಿ….?” ರೋಹನ್ ಪ್ರಶ್ನಿಸಿದ್ದ.
“ಅಪ್ಪಾಜೀ….?” ಸುರಕ್ಷಿತಾ ಅಮ್ಮನ ಮುಖ ದಿಟ್ಟಿಸತೊಡಗಿದಳು.
“ಪುಟ್ಟಾ….. ನೀನು ಅಮ್ಮನ ಜೊತಿಗೆ ಕೆಳ್ಗೆ ಹೋಗು. ನಾನು ಎಲ್ಲಾ ತಿಳಿಸ್ತೀನಿ….” ಮಹಾದೇವಪ್ಪನವರು ಹೇಳುವಷ್ಟರಲ್ಲಿ ನಂದಿನಿ ಕೊಂಚ ಸಪ್ಪಗಾಗಿದ್ದಳು ಎಂದು ರೋಹನನಿಗೆ ಅನಿಸತೊಡಗಿತು. ಸೂಕ್ಷ್ಮತೆಯನ್ನು ಅರಿತ ರೋಹನ್ ಮಾತನ್ನು ಮುಂದಕ್ಕೆ ಬೆಳಸದೇ ಸುರಕ್ಷಿತಾಳನ್ನು ಕೆಳಗಿಳಿಸಿದ. ಅವಳು, “ಬೈ…ಬೈ… ಅಂಕಲ್,” ಎಂದು ಹೇಳುತ್ತಾ ತಾಯಿಯ ಕೈ ಹಿಡಿದುಕೊಂಡು ಪುಟಪುಟನೇ ಹೊರಟಳು.
ತಾಯಿ ಮಗಳು ಕೆಳಗಿಳಿದು ಹೋಗುತ್ತಿದ್ದಂತೆ, “ರೋಹನ್, ಅದೊಂದು ದೊಡ್ಡ ಕಥೆ,” ಎಂದು ಹೇಳಿದ ಮಹಾದೇವಪ್ಪ, ರೋಹನನ ಎದೆಯಲ್ಲಿ ಕುತೂಹಲ ಮೂಡಿಸಿದರು. `ಅವರವರ ಮನೆಯ ವಿಚಾರ ಅವರಿಗೆ. ನಾನು ಕೆದಕಿ ಕೇಳಿ ಅವರ ಮನಸ್ಸಿಗೆ ನೋವು ಮಾಡುವುದರಲ್ಲೇನು ಅರ್ಥವಿದೆ?’ ಎಂದು ಮನದಲ್ಲೇ ಅಂದುಕೊಂಡು ರೋಹನ್ ಸುಮ್ಮನಾದ.
“ರೋಹನ್, ಹೀಂಗಾ ಹೊರ್ಗ ಸುತ್ತಾಡ್ಕೊಂಡು ಬರೋಣು ನಡೆ,” ಎಂದು ಮಹಾದೇವಪ್ಪ ಹೇಳಿದಾಗ, ರೋಹನ್ ಅವರೊಡನೆ ಮೌನವಾಗಿ ಹೆಜ್ಜೆ ಹಾಕಿದ. ತಮ್ಮ ಹೊಲದ ಉತ್ತರ ದಿಕ್ಕಿನಲ್ಲಿದ್ದ ಕೆರೆಯ ಕಡೆಗೆ ಹೆಜ್ಜೆ ಹಾಕಿದ ಸಾಹುಕಾರರು ಕೆರೆಯ ಏರಿಯ ಮೇಲೆ ಕುಳಿತುಕೊಳ್ಳುವವರೆಗೆ ಪಿಟ್ಟೆನ್ನಲಿಲ್ಲ.

“ರೋಹನ್, ನಮ್ಮ ನಂದಿನಿ ಮೊದಲಿನಿಂದಲೂ ಓದಿನ್ಯಾಗ ಮುಂದು. ಹೀಗಾಗಿ ಪಿಯುಸಿ ನಂತ್ರ ಬೆಂಗಳೂರಿನ್ಯಾಗ ಎಂಜಿನಿಯರಿಂಗ್ ಗೆ ಸೇರ್ಕೊಂಡ್ಳು. ನಮ್ಮ ಮನ್ಯಾಗ ಹೆಚ್ಚು ಓದಿದ್ದೊಳೆಂದ್ರೆ ಈಕಿ ಒಬ್ಬಾಕೀನ. ಅಲ್ಲಿ ಕಾಲೇಜಿನ ಹಾಸ್ಟೆಲಿನ್ಯಾಗ ಇದ್ಲು. ಮೂರ್ನೇ ವರ್ಷ ಓದ್ತಿದ್ದಾಗ ಅದ್ಯಾರೋ ಪಶ್ಚಿಮ ಬಂಗಾಳದ ಹುಡ್ಗಾನ ಪರಿಚಯ ಆಯ್ತುಂತೆ. ಪರಿಚಯ ಮುಂದುವರಿದು ಪ್ರೇಮಕ್ಕೆ ತಿರುಗಿತಂತೆ. ಪ್ರೇಮಕ್ಕೆ ಕಣ್ಣಿಲ್ಲ ಅಂತ ಹೇಳೋಂಗೆ ಅವರು ಒಬ್ಬರಿಗೊಬ್ಬರು ಪ್ರೀತಿಸಲು ಶುರು ಮಾಡಿದ್ರಂತೆ. “ಇನ್ನೇನು ಕಾಲೇಜಿನ ಓದು ಮುಗಿಲಿಕ್ಕ ಒಂದು ತಿಂಗ್ಳ ಬಾಕಿ ಇದೆ ಅನ್ನೋವಾಗ ಇಬ್ಬರೂ ಕೂಡಿ ತಂತಮ್ಮ ಗೆಳೆಯರ ಜೊತಿ ಮಾತಾಡ್ಕೊಂಡು ನಮಗ್ಯಾರಿಗೂ ತಿಳಿಸದಂಗಾ ಗಪ್ ಚಿಪ್ಪಾಗಿ ಮದ್ವಿನೂ ಮಾಡ್ಕೊಂಡು ಬಿಟ್ರಂತೆ. ನಮಗಾ ಹೇಳಿದ್ರೆ ಕೇಳೋದಿಲ್ಲ ಅಂತ ಅಂದ್ಕೊಂಡ್ರಂತೆ. ಓದು ಮುಗಿವಷ್ಟ್ರಲ್ಲಿ ಇಬ್ರಿಗೂ ಬೆಂಗ್ಳೂರಾಗ ಚಲೋ ನೌಕ್ರಿನೂ ಸಿಕ್ಕಂತೆ. ಓದು ಮುಗಿಸಿಕೊಂಡು ಒಂದು ಸಾರೆ ಮನೆಗೆ ಬಂದ ನಂದಿನಿ, ತನ್ನ ಮದ್ವಿ ಬಗ್ಗೆ ನಮ್ಗೆ ಹೇಳ್ದೇ ಬರೀ ನೌಕ್ರಿ ಸಿಕ್ಕ ಬಗ್ಗೆ ಹೇಳಿ ಮತ್ತೇ ಒಂದೇ ವಾರದಲ್ಲಿ ವಾಪಾಸು ಬೆಂಗ್ಳೂರ್ಗೆ ಹೋಗಿಬಿಟ್ಳು. ಆಮ್ಯಾಲೆ ಒಂದು ವರ್ಷದಾಗ ಒಂದೆರಡು ಸಾರೆ ಅಂತ ಊರ್ಗೆ ಬಂದು ಹೋದ್ಲು ಅಷ್ಟೇ….
“ನೌಕ್ರಿ ಮಾಡ್ಲಿಕತ್ತಿ ಒಂದು ವರ್ಷ ಮುಗಿವಷ್ಟ್ರರಲ್ಲಿ ಆ ಹುಡುಗ ಅಮೆರಿಕಾಕ್ಕಂತ ಒಂದು ವರ್ಷ ಹೋದ್ನಂತೆ. ಅವ ಅಮೆರಿಕಾಕ್ಕೆ ಹೋಗೋವಾಗ್ಲೆ ನಂದಿನಿ ಎರ್ಡು ತಿಂಗ್ಳ ಬಸುರಿಯಂತೆ. ಅಮೆರಿಕಾಕ್ಕೆ ಹೋದ ಆ ಹುಡುಗ ಅಲ್ಲೇ ಬಿಳಿ ಹುಡುಗಿ ಒಬ್ಬಾಕಿನ ಕಟ್ಕೊಂಡು ನಮ್ಮ ನಂದಿನಿಗೆ ಅಲ್ಲಿಂದ್ಲೇ ಡೈವೋರ್ಸ್ ಕೊಟ್ಬಿಟ್ನಂತೆ. ಮನೆಯವರ್ಗೆ ತಿಳಿಸಲಾರ್ದೆ ಮದ್ವಿ ಮಾಡ್ಕೊಂಡು, `ನಾನು ನಮ್ಮ ಮನೆತನದ ಗೌರವಕ್ಕೆ ಮಸಿ ಬಳಿದುಬಿಟ್ಟೆ. ನನ್ನಿಂದ ನಿಮ್ಮ ಘನತೆ ಹಾಳಾಗಬಾರದು. ನಾನು ನಿಮ್ಮ ಮನೆಯಲ್ಲಿ ಹುಟ್ಟೇ ಇಲ್ಲಿಂದು ತಿಳಿದುಕೊಂಡು ನನ್ನನ್ನು ಮರೆತುಬಿಡ್ರಿ. ನಾನು ಊರಿಗೆ ಬಂದ್ರಾ ನನ್ ಸಲ್ವಾಗಿ ನೀವು ನೂರೆಂಟು ಚುಚ್ಚು ಮಾತು ಕೇಳಬೇಕಾಗೆತಿ. ನಾನಂತೂ ಜಪ್ಪಯ್ಯ ಅಂದ್ರೂ ಅಲ್ಲಿಗೆ ಬರೂದಿಲ್ಲ,’ ಅಂತ ಫೋನಿನಾಗ ನಂದಿನಿ ತಿಳಿಸಿಬಿಟ್ಲು.
“ನಾವು ಎಷ್ಟೇ ಪ್ರಯತ್ನ ಮಾಡಿದ್ರೂ ಆಕಿ ನಮ್ಮ ಮಾತುಗಳನ್ನು ಕಿವ್ಯಾಗ ಹಾಕಿಕೊಳ್ಳಲೇ ಇಲ್ಲ. ನಮ್ಗೂ ಅಕಿ ಇರೋಕಡೆ ಬರಬಾರ್ದೆಂದು ತಾಕೀತು ಮಾಡಿ, ತಾನೂ ಊರ್ಗೇ ಬರೋದನ್ನೆ ಬಿಟ್ಳು. ಈಗ್ಗೆ ನಾಲ್ಕು ವರ್ಷದಿಂದ ನಮ್ಮ ಊರ್ಗೇ ಬರಲಾರದಾಕಿ ಇಂದು ಬಂದಾಳ. ಆಗಿದ್ದು ಆಗಿ ಹೋಗೈತೆ. ನಾವ್ ಯಾರೂ ನಿನ್ನ ಮ್ಯಾಲ ಸಿಟ್ ಮಾಡ್ಕೊಳ್ಳೋದಿಲ್ಲ ಅಂತ ಅಂದ್ರೂ ಅಕಿ ಮಾತ್ರ ಒಬ್ಬಂಟಿಯಾಗೇ ಇದ್ಬಿಟ್ಳು. ನೀನು ಬಂದಿದ್ದು, ನಿನ್ನ ಕಾರ್ಯಕ್ರಮದ ಬಗ್ಗೆ ತಿಳ್ಸಿ ಹೇಳಿದ್ವಿ ನಾವು. ಆದ್ರೆ ಬಾರ್ತಾಳಂತ ಯಾವ ಆಸಿನೂ ಇರ್ಲಿಲ್ಲ. ಇವತ್ತು ಬಂದಿದ್ದಕ್ಕೆ ಬಾಳ ಸಂತೋಷ ಆಗೈತೆ,” ಮಹಾದೇಪ್ಪ ಚುಟುಕಾಗಿ ಮೊಮ್ಮಗಳ ಕಥಿ ಹೇಳಿ ಮುಗಿಸಿದಾಗ ರೋಹನನಿಗೆ ಆಶ್ಚರ್ಯವಾಗಿತ್ತು.
“ಸಾಹುಕಾರ್ರೇ ದೇವ್ರಿದ್ದಾನೆ, ಒಂದಲ್ಲ ಒಂದಿನ ನಿಮ್ಮ ಮೊಮ್ಮಗಳ ಬಾಳು ಹಸನಾಗುತ್ತೆ. ಚಿಂತೆ ಮಾಡಬ್ಯಾಡ್ರಿ…..” ಎಂದು ರೋಹನ್ ಮಹಾದೇವಪ್ಪನವರಿಗೆ ಸಮಾಧಾನ ಹೇಳಿದ್ದ.
ಆ ಹೊತ್ತಿನಿಂದ ರೋಹನನಿಗೆ ಕುಂತಲ್ಲಿ ನಿಂತಲ್ಲಿ ನಂದಿನಿಯ ರೂಪವೇ ಕಣ್ಣಲ್ಲಿ ಕಟ್ಟುತ್ತಿತ್ತು. ಅಂದು ರಾತ್ರಿ ರೋಹನನಿಗೆ ಸರಿಯಾದ ನಿದ್ದೆಯೇ ಬರಲಿಲ್ಲ. ಅವನ ಮನಸ್ಸು ನಂದಿನಿಯ ಬಗ್ಗೆಯೇ ಯೋಚಿಸುತ್ತಿತ್ತು.
`ನಂದಿನಿಯಂತೂ ನೋಡಲಿಕ್ಕೆ ತುಂಬಾ ಸುಂದರವಾಗೇ ಇದ್ದಾಳೆ. ಹಾಗೆ ನೋಡಿದರೆ ಮದುವೆ ಆಗಿರುವ ಹುಡುಗಿಯಂತೆ ಕಾಣುವುದೇ ಇಲ್ಲ. ಮನೆತನದ ಗೌರವ ಕಾಪಾಡಲು ತಾನು ಮಾಡಿದ ತಪ್ಪನ್ನು ತನ್ನ ಮೇಲೆ ಹಾಕಿಕೊಂಡು ಧೈರ್ಯದಿಂದ ಜೀವನ ಎದುರಿಸುತ್ತಿದ್ದಾಳೆ. ನಾನೇಕೆ ಅವಳಿಗೆ ಹೊಸ ಬಾಳು ಕೊಡಬಾರದು? ನನಗೂ ಹಿಂದಿಲ್ಲ, ಮುಂದಿಲ್ಲ. ಪತ್ರಿಕೋದ್ಯಮದಲ್ಲಿ ಎಂ.ಎ ನಂತರ ಬಿಎಡ್ ಮಾಡಿಕೊಂಡಿರುವ ನಾನು ನಂದಿನಿಗೆ ಇಷ್ಟವಾಗಬಹುದೇ….?
`ಮಹಾದೇವಪ್ಪ ಮತ್ತು ಅವರ ಮನೆಯವರು ಇದಕ್ಕೆ ಒಪ್ಪುತ್ತಾರೆಯೇ…? ಉಂಡೂ ಹೋದ, ಕೊಂಡೂ ಹೋದ ಎಂದು ಜನರು ಆಡಿಕೊಳ್ಳುವಂತಾಗಬಾರದು. ನೋಡೋಣ, ಮೊದಲು ನಂದಿನಿಯ ಜೊತೆಗೆ ಮಾತಾಡೋಣ. ಆಕೆಗೆ ಒಪ್ಪಿಗೆಯಾದರೆ ಮುಂದಿನ ಮಾತಲ್ಲವೇ,’ ಎಂದು ರೋಹನ್ ಇಡೀ ರಾತ್ರಿ ಯೋಚಿಸಿದ.
ಹೀಗಾಗಿ ಬೆಳಗ್ಗೆ ತಡವಾಗಿ ಎದ್ದಿದ್ದ. ಹಲ್ಲುಜ್ಜಿ ಕೆಳಗೆ ಹೋಗಬೇಕೆನ್ನುವಷ್ಟರಲ್ಲಿ ನಂದಿನಿಯೇ ಚಹಾದ ಕಪ್ಪಿನೊಂದಿಗೆ ಮೇಲೆ ಬಂದಿದ್ದಳು.
“ನೀವು ಪ್ರೋಗ್ರಾಂ ತುಂಬಾ ಚೆನ್ನಾಗಿ ಮಾಡುತ್ತಿರುವಿರಿ. ನಿನ್ನೆ ತಾತಾ, ನನ್ನ ಬಗ್ಗೆ ಕೊರೆದು ನಿಮಗೆ ಬೋರ್ ಹೊಡೆಸಿರಬೇಕಲ್ಲವೇ? ನನ್ನಂಥ ಕೆಟ್ಟ ಹುಡುಗಿ ಯಾರೂ ಇರಲಿಕ್ಕಿಲ್ಲವೆಂದು ನಿಮಗೆ ಅನಿಸಿರಬೇಕಲ್ಲವೇ? ಅದೆಲ್ಲಾ ನನ್ನ ಪ್ರಾರಬ್ಧ ಕರ್ಮ…..” ಎಂದು ಮಾತಿಗೆ ಮುಂದಾದಳು ನಂದಿನಿ.
“ಛೀ….ಛೀ…. ನಾನು ಆ ರೀತಿ ಯೋಚಿಸಿಯೇ ಇಲ್ಲ. ಹೌದು, ಅದಿರಲಿ ನೀವು ಮತ್ತೊಂದು ಮದುವೆ ಮಾಡಿಕೊಳ್ಳಬಾರದೇಕೆ….?” ರೋಹನ್ ನಂದಿನಿಯನ್ನು ಪ್ರಶ್ನಿಸಿದ.
“ಒಂದಕ್ಕೇ ಇಷ್ಟು ರಾಮಾಯಣವಾಗಿದೆ. ಮತ್ತೆ ಮಹಾಭಾರತ ಬೇಕಿಲ್ಲ ಅನ್ಸಿದೆ,” ಚುಟುಕಾಗಿ ಹೇಳಿದಳು ನಂದಿನಿ.
“ನಿಮ್ಮ ಮನಸ್ಸಿನ ಭಾವನೆಗಳನ್ನು ಅರಿತುಕೊಂಡು ನಿಮ್ಮ ಕೈ ಹಿಡಿಯುವ ಹುಡುಗನೊಬ್ಬ ನಿಮ್ಮ ಬಾಳಲ್ಲಿ ಬಂದೇ ಬರ್ತಾನೆ ಬಿಡಿ.”
“ಏನು ಕಣಿ ಹೇಳ್ತಿರುವಿರಾ ಹೇಗೆ….?”
“ನಿಜವನ್ನೇ ಹೇಳುತ್ತಿರುವೆ.”
“ನನಗೆ ಅದ್ಯಾವುದೂ ಬೇಕಿಲ್ಲ ಬಿಡಿ…. ಗಂಡಸರೆಲ್ಲಾ ಸಮಯ ಸಾಧಕರು.”
“ಗಂಡಸರೆಲ್ಲಾ ಮೋಸಗಾರರೆಂದು ಎಲ್ಲರೂ ನಿಮ್ಮಂತೆ ತಿಳಿದುಕೊಂಡಿದ್ದರೆ, ಈ ಜಗತ್ತೇ ಮುಂದುವರಿಯುತ್ತಿರಲಿಲ್ಲ…..”
“ಅದೆಲ್ಲಾ ನನಗೆ ಗೊತ್ತಾಗುವುದಿಲ್ಲ….”
“ನಂದಿನಿ, ನೀವು ತಪ್ಪು ತಿಳಿಯದಿದ್ದರೆ ನಿಮ್ಮಲ್ಲಿ ನನ್ನದೊಂದು ಮಾತು….”
“ಒಂದೇಕೆ, ನೂರು ಮಾತು ಹೇಳಿ, ಬೇಡ ಎನ್ನುವರಾರು?”
“ನಾನು ನಿಮ್ಮ ಕೈ ಹಿಡಿದು, ನಿಮ್ಮ ಮಗಳಿಗೆ ತಂದೆಯ ಸ್ಥಾನ ಕೊಡಬೇಕೆಂದು ಅಂದುಕೊಂಡಿದ್ದೇನೆ….. ನಾನೆಂದೂ ನಿಮಗೆ ಮೋಸ ಮಾಡುವುದಿಲ್ಲ.”
“ತಮಾಷೆ ಮಾಡ್ತಿರುವಿರಾ….? ನಿಮಗೆ ಹುಚ್ಚು ಗಿಚ್ಚು ಹಿಡಿದಿಲ್ಲ ತಾನೇ….?”
“ನಾನು ಸೀರಿಯಸ್ಸಾಗೇ ಹೇಳ್ತಿದ್ದೀನಿ….. ಹುಚ್ಚೇನೂ ಹಿಡಿದಿಲ್ಲ, ನಿಜವನ್ನೇ ಹೇಳ್ತಿದ್ದೀನಿ. ನಿಧಾನವಾಗಿ ಯೋಚಿಸಿ, ನಿರ್ಧಾರ ತೆಗೆದುಕೊಳ್ಳಿ, ಅವಸರವೇನಿಲ್ಲ. ಆದರೆ ನಾನು ನಿಮ್ಮ ಹಾಗೆ ಎಂಜಿನಿಯರಿಂಗ್ ಓದಿಲ್ಲ. ಆದರೆ ಮಾನವೀಯತೆಯಿಂದ ನಿಮ್ಮನ್ನು ನೋಡಿಕೊಳ್ಳಬಲ್ಲೆ,” ಎಂದ ರೋಹನ್. ನಂದಿನಿ ಮಾತು ಬೆಳೆಸದೇ ಹಾಗೆ ಹೊರಟು ಹೋದಳು.
ಮರುದಿನ ಬೆಳಗ್ಗೆ ನಂದಿನಿ ಪುನಃ ರೋಹನನಿಗೆ ಚಹಾ ತಂದಳು. ಚಹಾದ ಕಪ್ಪು ಕೊಡುತ್ತಾ, “ರೋಹನ್, ರಾತ್ರಿ ಇಡೀ ನೀವು ಹೇಳಿದ ಮಾತುಗಳ ಸತ್ಯಾಸತ್ಯತೆ ಬಗ್ಗೆ ನನ್ನಲ್ಲೇ ವಿಮರ್ಶಿಸಿದೆ. ಬೆಳಕು ಮೂಡುವಷ್ಟರಲ್ಲಿ ನಿಮ್ಮ ಕಳಕಳಿಯ ಮಾತುಗಳು ನನಗೆ ಇಷ್ಟವಾದವು. ಜಗದ ಜೀವಿಗಳಿಗೆ ನವಚೈತನ್ಯ ನೀಡಲು ನೇಸರ ಉದಯಿಸಿದಂತೆ ನೀವು ನನ್ನ ಜೀವನವನ್ನು ಬೆಳಗಲು ಮುಂದಾಗಿರುವುದಕ್ಕೆ ನನ್ನ ಮನಸ್ಸು ಒಪ್ಪಿದೆ.
“ಆದರೆ ನಮ್ಮಿಬ್ಬರ ಈ ನಿರ್ಧಾರಕ್ಕೆ ತಾತಾ, ಮನೆಯವರೆಲ್ಲರೂ ಒಪ್ಪುವರೇ…..? ಮತ್ತೇನಾದರೂ ಎಡವಟ್ಟಾಗಿ ನಮ್ಮ ಮನೆಯವರು ಅನಾವಶ್ಯವಾಗಿ ನಿಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳಬಾರದು. ತಾತಾ ನಿಮ್ಮ ಮೇಲೆ ಬಹಳಷ್ಟು ವಿಶ್ವಾಸ ಇಟ್ಟುಕೊಂಡಿದ್ದಾರೆ. ನಿಮ್ಮ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಿ ನೋಡಿ…..”
“ನಿಮ್ಮ ತಾತನನ್ನು ಒಪ್ಪಿಸುವ ಜವಾಬ್ದಾರಿ ನನಗಿರಲಿ. ಮೊದಲು ನಿಮಗೆ ಒಪ್ಪಿಗೆಯಾಗಿದೆಯಲ್ಲಾ….. ಅಷ್ಟೇ ಸಾಕು,” ರೋಹನನಿಗೆ ಹಿಡಿಸಲಾರದಷ್ಟು ಸಂತಸವಾಗಿತ್ತು.
ಮಹಾದೇವಪ್ಪನವರ ಬಳಿ ಮಾತನಾಡುತ್ತಿದ್ದ ರೋಹನ್, ಸುತ್ತಿ ಬಳಸಿ, ನಂದಿನಿಗೆ ಇನ್ನೊಂದು ಮದುವೆ ಮಾಡಬಾರದೇಕೆ ಎಂದು ಕೇಳಿದ.
“ಆಕಿನ ಮದುವೆಯಾಗುವಂಥ ಪುಣ್ಯಾತ್ಮ ಸಿಗಬೇಕಲ್ಲ ರೋಹನ್….?” ಮಹಾದೇವಪ್ಪ ಶಂಕೆ ವ್ಯಕ್ತಪಡಿಸಿದರು.
“ಸಿಕ್ಕರೆ ಮಾಡುವಿರಾ….?”
“ಖಂಡಿತವಾಗಲೂ….!”
“ಸಾಹುಕಾರ್ರೆ…. ನನ್ನಂಥ ಬಡವನಿಗೆ ನಿಮ್ಮ ಮನೆಯಲ್ಲಿ ಸ್ಥಾನ ಸಿಗಬಹುದೇ…..?”
“ಅಂದರೆ ರೋಹನ್……! ನಂದಿನಿ ಒಪ್ಪುವಳೇ…..?”
“ಒಪ್ಪಿದರಷ್ಟೇ ಮುಂದಿನ ಮಾತಲ್ಲವೇ ಸಾಹುಕಾರ್ರೆ….? ವಿಚಾರಿಸಿ ನೋಡಿ, ಹ್ಞೂಂ ಎಂದರೆ ನಾನು ಭಾಗ್ಯಶಾಲಿ ಅಂದ್ಕೊತೀನಿ….” ನಂದಿನಿಯ ಜೊತೆಗೆ ಮಾತೇ ಆಡಿಲ್ಲವೆಂಬಂತೆ ಮಾತಾಡಿದ ರೋಹನ್.
ಮಹಾದೇವಪ್ಪನವರು ಕೂಡಲೇ ಮೊಮ್ಮಗಳು ನಂದಿನಿಯನ್ನು ಕೂಗಿ ಕರೆದು ರೋಹನನ ವಿಚಾರ ತಿಳಿಸಿದರು.
“ತಾತಾ, ಅವರು ಒಪ್ಪುವುದಾದರೆ ನನ್ನದೇನೂ ಅಭ್ಯಂತರವಿಲ್ಲ. ನಿಮ್ಮ ತೀರ್ಮಾನವೇ ಅಂತಿಮ,” ರೋಹನನಿಗೂ ತನಗೂ ಯಾವುದೇ ಮಾತುಕತೆ ಆಗಿಲ್ಲವೆಂಬಂತೆ ಜಾಣ್ಮೆಯಿಂದಲೇ ಮಾತಾಡಿದಳು ನಂದಿನಿ. ಒಂದು ವಿಧದಲ್ಲಿ ಇಬ್ಬರೂ ಕಿಲಾಡಿಗಳೇ!
ಮಹಾದೇವಪ್ಪನವರು ತಕ್ಷಣವೇ ಮನೆಯವರನ್ನೆಲ್ಲಾ ಸೇರಿಸಿ, ತಮ್ಮ ನಿರ್ಧಾರವನ್ನು ಪ್ರಕಟಿಸಿಯೇಬಿಟ್ಟರು.
“ಮನೆ ಮನೆಗೆ ಭಾಗ್ಯಲಕ್ಷ್ಮಿ ಎಂಬ ಈ ದೂರದರ್ಶನ ಕಾರ್ಯಕ್ರಮಕ್ಕಾಗಿ ನಮ್ಮ ಮನೆಗೆ ಬಂದು ನಮಗೆ ನಿಜವಾಗಿಯೂ ಭಾಗ್ಯವನ್ನೇ ತಂದುಕೊಡಲು ರೋಹನ್ ನಿರ್ಧರಿಸಿದ್ದಾನೆ. ಬರಡಾಗಿದ್ದ ನಮ್ಮ ಮೊಮ್ಮಗಳ ಬಾಳನ್ನು ಬೆಳಗಿಸಲು ಮುಂದಾಗಿರುವನು.
“ಕತ್ತಲೆ ತುಂಬಿದ್ದ ನಮ್ಮ ಮೊಮ್ಮಗಳ ಬಾಳಲ್ಲಿ ಬೆಳಕನ್ನು ಮೂಡಿಸುವ ಆಶಾಕಿರಣ ಕಾಣುತ್ತಿದೆ. ಇನ್ನೇನು ದೀಪಾವಳಿ ಹಬ್ಬಕ್ಕೆ ಕೇವಲ ನಾಲ್ಕು ದಿನಗಳು ಬಾಕಿ ಇವೆ. ನಂದಿನಿಯ ಬಾಳಲ್ಲಿ ಬೆಳಕನ್ನು ತರುತ್ತಿರುವ ದೀಪಾವಳಿಯನ್ನು ಎಲ್ಲರೂ ಸೇರಿ ಭರ್ಜರಿಯಾಗಿ ಆಚರಿಸೋಣ. ನಂದಿನಿಯ ಬದುಕು ಕತ್ತಲೆಯಿಂದ ಬೆಳಕಿನೆಡೆಗೆ ಸಾಗುತ್ತಿದೆ!” ಎಂದು ಮಹಾದೇವಪ್ಪ ಮನೆಯವರಿಗೆ ಹೇಳಿದರು.
“ನಂದಿನಿ, ನನ್ನ ಬಾಳಲ್ಲಿ ಭಾಗ್ಯಲಕ್ಷ್ಮಿಯಾಗಿ ಬರುವಳು!” ಎಂದು ಸಂಭ್ರಮಿಸಿದ ರೋಹನ್.
“ನೀವು ನನ್ನ ಪಾಲಿನ ದೇವರು!” ಎಂದು ನಂದಿನಿ ರೋಹನ್ ನ ವಿಶಾಲ ಮನಸ್ಸನ್ನು ಹೊಗಳಿದಳು. ಮಹಾದೇವಪ್ಪ ರೋಹನ್ ಮತ್ತು ನಂದಿನಿಯ ಕೈಗಳನ್ನು ಕೂಡಿಸುತ್ತಾ, ಅಭಿನಂದಿಸಿ, ಇಬ್ಬರನ್ನೂ ಆಶೀರ್ದಿಸಿದರು. ಮನೆಯವರೆಲ್ಲರ ಮುಖಗಳು ಸಂತಸದಿಂದ ಬೀಗುತ್ತಿದ್ದವು.
“ಪಪ್ಪಾ…. ನಾನು ಆಗಿನಿಂದ ನಿನ್ನನ್ನು ಮಾತಾಡಿಸುತ್ತಿರುವೆ. ನೀನು ಸುಮ್ಮನೇ ಇರುವಿಯಲ್ಲಾ ಏಕೆ….?” ಸುರಕ್ಷಿತಾ ರೋಹನ್ ನ ಭುಜವನ್ನು ಅಲುಗಾಡಿಸಿದಾಗಲೇ ರೋಹನ್ ನೆನಪಿನ ದೋಣಿಯಿಂದ ಕೆಳಗಿಳಿದ. ರೋಹನ್ ನಂದಿನಿಯರ ಮದುವೆಯಾಗಿ ಆ ಮನೆಯಲ್ಲಿ ಬೆರೆತುಹೋದ ನಂತರ, ನಾಲ್ಕನೇ ವರ್ಷಕ್ಕೆ ಸುರಕ್ಷಿತಾಳಿಗೆ ತಮ್ಮ ಬಂದಿದ್ದ.





