ಕಥೆ ಶೈಲಾ ಎಸ್‌. ವಾಲಿ

ಹಿರಿಯರ ಆಸೆಯಂತೆ ಮನೋಜನ ಕೈ ಹಿಡಿದ ಶ್ವೇತಾ, ಮದುವೆ ಅವನಿಗೆ ಒಲ್ಲದ ಔತಣವೆಂದು ಅರಿತಳು. ತಾನು ಪ್ರೇಮಿಸಿದ್ದ ಹುಡುಗಿ ತನಗೆ ಕೈ ಕೊಟ್ಟಾಗ, ಮುಂದೆ ಮನೋಜನ ನಿರ್ಧಾರ ಏನಾಗಿತ್ತು……?

ಶ್ವೇತಾ ಹಾಲಿನ ಗ್ಲಾಸ್‌ ಹಿಡಿದು ಪ್ರಸ್ತದ ಕೋಣೆಗೆ ಹೋಗುತ್ತಲೇ ಬಾಗಿಲು ಹಾಕಿ ಹೊರಗಿನಿಂದ ಚಿಲಕ ಹಾಕಿದ ಅವಳ ಗೆಳತಿಯರು, “ಶ್ವೇತಾ, ಬೆಳಗ್ಗೆ ನಾವು ಬಂದು ಚಿಲಕ ತೆಗೆಯುವವರೆಗೂ ನೀವು ಒಳಗೆ ಬಂಧಿ ಆಗಿರಬೇಕು….” ಎಂದು ನಗುತ್ತಾ ಹೇಳಿ ಹೋದರು.

ಮನೋಜ್‌ ಕುಳಿತಿದ್ದ ಮಂಚದ ಬಳಿ ನಾಚುತ್ತಲೇ ಬಂದಳು. ಆದರೆ ಕಣ್ಣೆತ್ತಿ ಸಹ ನೋಡದ ಮನೋಜ್‌ ನನ್ನು ಕಂಡು ಶ್ವೇತಾಳಿಗೆ ಏನೋ ಒಂದು ರೀತಿಯ ಸಂಕೋಚ ಹಾಗೂ ಹೆದರಿಕೆಯಿಂದಲೇ ಟೀಪಾಯ್‌ ಮೇಲೆ ಹಾಲಿನ ಗ್ಲಾಸ್‌ ಇಟ್ಟು ಮಂಚದ ತುದಿಯಲ್ಲಿ ಕುಳಿತಳು.

ಆಗಲೂ ಸಹ ಅವಳ ಮುಖ ನೋಡದ ಮನೋಜ್‌, ಎದ್ದು ಹೋಗಿ ಕಿಟಕಿಗೆ ಮುಖ ಮಾಡಿ ನಿಂತ. ಶ್ವೇತಾ ಸಹ ಎದ್ದು ಹೋಗಿ ಮನೋಜ್‌ ನ ಪಕ್ಕದಲ್ಲಿ ನಿಂತಳು.

“ಶ್ವೇತಾ, ನಿಮ್ಹತ್ರ ನಾನು ಒಂದು ವಿಷಯ ಹೇಳಬೇಕು. ಇದನ್ನು ನೀವು ಯಾವ ರೀತಿ ತಗೋಳ್ತೀರಾ ಅಂತ ಗೊತ್ತಿಲ್ಲ. ಆದರೆ ನಾನೀಗ ಹೇಳಲೇಬೇಕಾಗಿದೆ. ಶ್ವೇತಾ, ಬೇಸರ ಮಾಡ್ಕೋಬೇಡಿ….. ನನಗೆ ಈ ಮದುವೆ ಇಷ್ಟ ಇರಲಿಲ್ಲ….. ನಾನು ಬೇರೆ ಒಬ್ಬಳನ್ನು ಪ್ರೀತಿಸ್ತಾ ಇದ್ದೀನಿ…. ನಮ್ಮ ಮನೆಯವರ ಒತ್ತಾಯಕ್ಕೆ ಮಣಿದು ನಿಮ್ಮನ್ನು ಮದುವೆ ಆಗಿದ್ದು. ಅವಳನ್ನು ಮರೆತು ನಿಮ್ಮೊಂದಿಗೆ ಸಂಸಾರ ಮಾಡೋಕೆ ನನ್ನಿಂದ ಸಾಧ್ಯವಿಲ್ಲ.

“ಇನ್ನೊಂದು ಆರು ತಿಂಗಳು ಹೇಗಾದರೂ ಮ್ಯಾನೇಜ್‌ ಮಾಡಿ. ಆಮೇಲೆ ನಾನು ಡೈವೋರ್ಸ್‌ ಗೆ ಅಪ್ಲಿಕೇಶನ್‌ ಹಾಕ್ತೀನಿ…. ನೀವು ಸಹ ಬೇರೆಯವರ ಜೊತೆಗೆ ಮದುವೆ ಆಗಿ ಸಂತೋಷವಾಗಿರಿ. ಈ ಒಂದು ಆರು ತಿಂಗಳವರೆಗೂ ನನಗೆ ತಕ್ಕಂತೆ ಸಹಕರಿಸಿ,” ಎಂದು ಹೇಳಿ ಕೆಳಗೆ ದಿಂಬು ಹಾಗೂ ಬ್ಲಾಂಕೆಟ್‌ ಹಾಸಿಕೊಂಡು ಮಲಗಿದ.

ಪಾಪ, ನೂರಾರು ಸುಂದರ ಕನಸು ಕಂಡಿದ್ದ ಶ್ವೇತಾಳ ಕಣ್ಣಿಂದ ನೀರು ಸುರಿಯುವ ಹಾಗಾಯಿತು. ಶ್ವೇತಾ ಎಂಎಸ್ಸಿ ಗ್ರ್ಯಾಜುಯೇಟ್‌. ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು. ಬೇಕಾದಷ್ಟು ಆಸ್ತಿ ಇದ್ದರೂ ಕೊಂಚ ಸೊಕ್ಕು, ಅಹಂಕಾರ ಇಲ್ಲದ ಚೆಲುವೆ. ತನ್ನ ತಂದೆಯ ಆಸೆಯಂತೆ ಅವರ ಫ್ರೆಂಡ್‌ ಮಗ ಮನೋಜ್‌ ಜೊತೆಗೆ ಹಸೆಮಣೆ ಏರಿದ್ದ ಮುಗ್ಧೆ…..ತಂದೆಯ ಮುದ್ದಿನ ಮಗಳು. ಅವರ ಮನಸ್ಸಿಗೆ ನೋವು ಉಂಟು ಮಾಡಬಾರದು ಎಂಬ ಒಂದೇ ಉದ್ದೇಶದಿಂದ ಹಿಂದು ಮುಂದು ವಿಚಾರ ಮಾಡದೇ ಮದುವೆಗೆ ಒಪ್ಪಿಗೆ ನೀಡಿದ್ದಳು.

ಮದುವೆಗೂ ಮುನ್ನ ಮನೋಜ್‌ ಶ್ವೇತಾಳನ್ನು ಭೇಟಿ ಆಗೋಕೆ ಬಂದಾಗ ಈ ವಿಷಯವನ್ನೆಲ್ಲ ಹೇಳಿ ಹೇಗಾದ್ರೂ ಮದುವೆಯನ್ನು ರದ್ದು ಪಡಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದ, ಆದರೆ ಸಾಧ್ಯವಾಗಿರಲಿಲ್ಲ. ಏಕೆಂದರೆ ಶ್ವೇತಾ ಮನೆಯವರ ಸಂತೋಷ, ಅವನಿಗೆ ನೀಡಿದ ಆತಿಥ್ಯ ಮನೋಜ್‌ ನನ್ನು ಕಟ್ಟಿ ಹಾಕಿತ್ತು. ಕೊನೆಗೂ ಏನೂ ಹೇಳಲಾಗದೆ ಹಾಗೇ ಹೋಗಿದ್ದ.

ಮನೋಜ್‌ ತನ್ನ ಕ್ಲಾಸ್‌ ಮೇಟ್‌ ತನುವನ್ನು ಪ್ರೀತಿಸುತ್ತಿದ್ದ. ಅವಳ ಜಾತಿ ಬೇರೆ ಆದಕಾರಣ ಮನೆಯಲ್ಲಿ ವಿರೋಧವಿತ್ತು. ಮನೋಜ್‌ ತಾನು ಮದುವೆ ಆಗುವುದಾದರೆ ಅವಳನ್ನೇ ಎಂದು ಪಟ್ಟು ಹಿಡಿದು ಕುಳಿತ. ಅದಕ್ಕೆ ಮನೋಜ್‌ ಅಪ್ಪ, “ನೀನೇನಾದ್ರೂ ಆ ಹುಡುಗಿಯನ್ನು ಮದುವೆ ಆದರೆ ನನ್ನ ಆಸ್ತಿಯಲ್ಲಿ ಬಿಡಿಗಾಸು ಸಿಗಲ್ಲ,” ಎಂದು ಖಡಾಖಂಡಿತವಾಗಿ ಹೇಳಿದರು.

ಆದ್ದರಿಂದ ಅನಿವಾರ್ಯವಾಗಿ ಶ್ವೇತಾಳ ಕೊರಳಿಗೆ ತಾಳಿ ಕಟ್ಟಿದ್ದ. ಆದರೆ ಅವನ ಪ್ಲಾನ್‌ ಬೇರೆಯೇ ಇತ್ತು. ಒಂದೆರಡು ತಿಂಗಳು ಗಂಡ ಹೆಂಡತಿ ತರಹ ನಾಟಕ ಆಡಿ, ಆಮೇಲೆ ತನಗೂ ಅವಳಿಗೂ ಹೊಂದಾಣಿಕೆ ಆಗುವುದಿಲ್ಲ ಎಂದು ಹೇಳಿ ಡೈವೋರ್ಸ್ ತೆಗೆದುಕೊಂಡು ತನುವನ್ನು ಮದುವೆ ಆಗಬೇಕೆಂಬ ನಿರ್ಧಾರ ಮಾಡಿಯೇ, ತನುವಿನೊಂದಿಗೆ ಈ ವಿಷಯ ಚರ್ಚಿಸಿಯೇ ಮದುವೆಗೆ ಒಪ್ಪಿಗೆ ನೀಡಿದ್ದ.

ಹಾಗೆಯೇ ತಿಂಗಳು ಸರಿದರೂ ಮನೋಜ್‌ ಶ್ವೇತಾ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ. ಮನೆಯವರ ಒತ್ತಾಯಕ್ಕೆ ಹೊರಗೆ ಶಾಪಿಂಗ್‌, ಸಿನಿಮಾ ಅಂತ ತಿರುಗಾಡೋಕೆ ಹೋದರೂ, ಸುಮ್ಮನೆ ತಿರುಗಾಡಿ, ಹೊರಗೆ ಊಟ ಮಾಡಿ ಬರುತ್ತಿದ್ದರು ಅಷ್ಟೇ. ಇಷ್ಟವಿಲ್ಲದ ಗಂಡನೊಂದಿಗೆ ತಾನೇಕೆ ಮೇಲೆ ಬೀಳಬೇಕು ಎಂದುಕೊಂಡ ಶ್ವೇತಾ, ಮಾತನಾಡಿಸುವ ಸಾಹಸಕ್ಕೂ ಹೋಗುತ್ತಿರಲಿಲ್ಲ.

ಆಷಾಢ ಮಾಸಕ್ಕೆಂದು ತವರಿಗೆ ಬಂದ ಶ್ವೇತಾಳನ್ನು ಭೇಟಿ ಆಗಲು ಬಂದಿದ್ದ ಗೆಳತಿ ಮಧುರಾಳ ಬಳಿ ಶ್ವೇತಾಳ ತಾಯಿ, “ಮಧು, ಶ್ವೇತಾ ಯಾಕೋ ತುಂಬಾ ಇಳಿದು ಹೋಗಿದ್ದಾಳೆ. ಮುಖದಲ್ಲಿ ನವ ವಧುವಿನ ಕಳೆಯಿಲ್ಲ. ಅಲ್ಲಿ ಹೇಗಿದ್ದಾಳೋ ಏನೋ….? ಅವಳ ಗಂಡ, ಸಂಸಾರದ ಬಗ್ಗೆ ನೀನೇ ಸ್ವಲ್ಪ ವಿಚಾರಿಸು. ನನ್ನ ಹತ್ರ ಏನೂ ಹೇಳಲ್ಲ. ತಾನೇ ಒಳಗೆ ನುಂಗ್ತಾಳೆ. ಏನಾದ್ರೂ ಹೇಳಿದ್ರೆ ನಾವು ನೊಂದುಕೊಳ್ತೀವಿ ಅಂತ ಮುಚ್ಚಿಡ್ತಾಳೆ. ನೀನೇ ಸ್ವಲ್ಪ ಸಮಾಧಾನವಾಗಿ ಮಾತಾಡು,” ಎಂದು ಆತಂಕದಿಂದ ಹೇಳಿದರು.

ಶ್ವೇತಾಳ ರೂಮಿಗೆ ಹೋದ ಮಧು ಅವಳೊಂದಿಗೆ ಮಾತಿಗಿಳಿದಳು. ಮೊದಲಿಗೆ ಏನೂ ಗುಟ್ಟು ಬಿಟ್ಟುಕೊಡದ ಶ್ವೇತಾ ನಂತರ ಗೆಳತಿಯ ಬಲವಂತಕ್ಕೆ ಇಷ್ಟು ದಿನ ಎದೆಯೊಳಗೆ ಮಡುಗಟ್ಟಿದ್ದ ನೋವು, ದುಃಖವನ್ನೆಲ್ಲಾ ಕಣ್ಣೀರ ಕೋಡಿಯಾಗಿ ಹರಿಸಿದಳು. ಗೆಳತಿಯನ್ನು ಗಟ್ಟಿಯಾಗಿ ತಬ್ಬಿಕೊಂಡು ತನ್ನ ಮನಸ್ಸು ಹಗುರ ಆಗುವವರೆಗೆ ಅತ್ತು, ನಂತರ ತನ್ನ ಮತ್ತು ಮನೋಜ್‌ ನಡುವಿನ ಕಥೆಯನ್ನು ಬಿಡಿಸಿ ಹೇಳಿದಳು.

ಶ್ವೇತಾಳನ್ನು ಸಮಾಧಾನ ಮಾಡಿದ ಮಧು, ಇದಕ್ಕೆ ನಾನು ಹೇಗಾದ್ರೂ ಪರಿಹಾರ ಕಂಡುಹಿಡಿತೀನಿ. ನೀನು ಧೈರ್ಯವಾಗಿರು ಎಂದು ಭರವಸೆ ಕೊಟ್ಟು ಗೆಳತಿಯ ಮುಖದಲ್ಲಿ ನಗು ತರಿಸಿ ತಾನೂ ಅವಳೊಂದಿಗೆ ಸಾಕಷ್ಟು ಹರಟೆ ಹೊಡೆದು ಮನೆಗೆ ಮರಳಿದಳು.

ಗೆಳತಿ ಶ್ವೇತಾಳ ಕಣ್ಣೀರಿಗೆ ಅಂತ್ಯ ಕಾಣಿಸಬೇಕೆಂದು ಪಣ ತೊಟ್ಟ ಮಧು, ತನ್ನ ಅಣ್ಣನ ಬಳಿ ಗೆಳತಿಯ ನೋವಿನ ಕಥೆಯನ್ನು ಹೇಳಿ ಇದಕ್ಕೊಂದು ಪರಿಹಾರ ಒದಗಿಸುವಂತೆ ಕೇಳಿಕೊಂಡಳು. ಅವಳ ಅಣ್ಣ ವಿಕಾಸ್‌, “ನಾನು ಈ ಸಮಸ್ಯೆಗೆ ಏನಾದರೂ ಒಂದು ಉಪಾಯ ಕಂಡುಹಿಡೀತೀನಿ. ಅದು ಯಶಸ್ವಿಯಾದ ಮೇಲೆ ನಿನಗೆ ತಿಳಿಸುತ್ತೇನೆ,” ಎಂದು ಹೇಳಿ ತಂಗಿಗೆ ಧೈರ್ಯ ತುಂಬಿದ.

ತನುಳ ಬಗ್ಗೆ, ಅವಳು ಮಾಡುತ್ತಿದ್ದ ಕೆಲಸದ ಬಗ್ಗೆ ಸಾಕಷ್ಟು ವಿಚಾರ ಕಲೆ ಹಾಕಿದ ವಿಕಾಸ್‌, ಸಾಮಾಜಿಕ ಜಾಲತಾಣದ ಮೂಲಕ ಅವಳ ಗೆಳೆತನವನ್ನು ಸಂಪಾದನೆ ಮಾಡಿದ. ಚಿಕ್ಕಂದಿನಿಂದ ತನ್ನ ತಂಗಿ ಮಧುಳ ಜೊತೆಗೆ ಆಡಿ ಬೆಳೆದಿದ್ದ ಶ್ವೇತಾಳ ಬಗ್ಗೆ ವಿಕಾಸ್‌ ಗೆ ವಿಶೇಷ ಪ್ರೀತಿ, ವಾತ್ಸಲ್ಯ ಇತ್ತು. ಹೇಗಾದರೂ ಮಾಡಿ ಅವಳ ಜೀವನ ಸರಿಪಡಿಸಬೇಕೆಂಬುದೇ ಅವನ ಗುರಿಯಾಗಿತ್ತು.

ದಿನೇ ದಿನೇ ವಿಕಾಸ್‌ ತನುವನ್ನು ಹೆಚ್ಚೆಚ್ಚು ಫಾಲೋ ಮಾಡತೊಡಗಿದ. ಮೊದಲೇ ವಿಕಾಸ್‌ ಸ್ಛುರದ್ರೂಪಿ ಯುವಕ, ಸ್ಟೈಲ್ ‌ಕಿಂಗ್‌. ಹುಡುಗಿಯರು ಹಿಂದೆ ಬೀಳುವುದರಲ್ಲಿ ಯಾವ ಸಂಶಯ ಇರಲಿಲ್ಲ. ಹಾಗೂ ಹೀಗೂ ಮಾಡಿ ದಿನದಿಂದ ದಿನಕ್ಕೆ ತನುವಿಗೆ ತೀರ ಹತ್ತಿರಾದ. ಇಷ್ಟೆಲ್ಲಾ ಮಾಡಿದ ಅವಳನ್ನು ತನ್ನ ಪ್ರೀತಿಯ ಬಲೆಯಲ್ಲಿ ಬೀಳುವ ಹಾಗೆ ಮಾಡುವುದು ವಿಕಾಸ್‌ ಗೆ ಕಷ್ಟವಾಗಲಿಲ್ಲ.

ಒಂದೆರಡು ವಾರಗಳಲ್ಲಿ ಮನೋಜನ ಒಡನಾಡ ತನುವಿಗೆ ಬೇಡವೆನಿಸತೊಡಗಿತು. ವಿಕಾಸ್‌ ನ ಸಾಂಗತ್ಯ ಹಿತವೆನಿಸತೊಡಗಿತು. ಮನೋಜ್‌ ನ ಫೋನ್‌ ಕಾಲ್ ‌ಕಟ್‌ ಮಾಡತೊಡಗಿದಳು, ಅವನ ಮೆಸೇಜ್‌ ಗೆ ರಿಪ್ಲೈ ಮಾಡುವುದನ್ನು ನಿಲ್ಲಿಸಿದಳು. ಅವನನ್ನು ಪೂರ್ತಿಯಾಗಿ ಅವಾಯ್ಡ್ ಮಾಡತೊಡಗಿದಳು.

10-15 ದಿನಗಳಲ್ಲಿ ಬದಲಾದ ತನುವಿನ ಬಗ್ಗೆ ವಿಷಯ ತಿಳಿದ ಮನೋಜ್‌ ಗೆ ಅವಳ ನಿಜವಾದ ಬಣ್ಣ ಈಗ ಬಯಲಾಗಿತ್ತು. ಇದರಿಂದ ಅವನು ಮಾನಸಿಕವಾಗಿ ಜರ್ಝರಿತನಾದ. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಹುಡುಗಿ ಈಗ ಇನ್ನೊಬ್ಬನೊಂದಿಗೆ ಸಲುಗೆಯಿಂದ ಇದ್ದು, ತನ್ನನ್ನು ತಿರಸ್ಕಾರ ಮಾಡುತ್ತಿರುವುದನ್ನು ಅರಿತ ಅವನಿಗೆ ಹೆಂಡತಿ ಶ್ವೇತಾಳ ನೆನಪಾಯಿತು. ನಿಜವಾದ ಬಂಗಾರಕ್ಕೂ, ಬಂಗಾರದ ಗಿಲೀಟಿನ ತಗಡಿಗೂ ಇರುವ ವ್ಯತ್ಯಾಸ ಅವನಿಗೆ ಅರಿವಾಗಿತ್ತು.

ಶ್ವೇತಾ ತವರಿಗೆ ಹೋಗಿ ಇಷ್ಟು ದಿನವಾದರೂ ಒಮ್ಮೆಯೂ ಸಹ ಅವಳಿಗೆ ಫೋನ್‌ ಅಥವಾ ಮೆಸೇಜ್‌ ಸಹ ಮಾಡಿರಲಿಲ್ಲ. ಆ ದಿನ ಅವಳಿಗೆ ಕಾಲ್ ‌ಮಾಡಿದ ಮನೋಜ್‌, “ಪಿವಿಆರ್‌ ನಲ್ಲಿ ಮೂವಿಗೆ ಟಿಕೆಟ್‌ ಬುಕ್‌ ಮಾಡಿದ್ದೀನಿ, ರೆಡಿ ಆಗಿರು. ನಾನು ಬರುತ್ತೇನೆ,” ಎಂದಷ್ಟೇ ಹೇಳಿ ಕಾಲ್ ಕಟ್‌ ಮಾಡಿದ.

ಶ್ವೇತಾಳಿಗೆ ಅದು ಕನಸೋ ನನಸೋ ಎನ್ನುವ ಸಂಶಯದಿಂದ ತನ್ನನ್ನು ತಾನೇ ಜಿಗುಟಿಕೊಂಡು ಕನ್ಛರ್ಮ್ ಮಾಡಿಕೊಂಡು ಮೂವಿಗೆ ಹೋಗಲು ತಯಾರಿಯಾದಳು. ಮುತುವರ್ಜಿಯಿಂದ ಚೆನ್ನಾಗಿಯೇ ಅಲಂಕಾರ ಮಾಡಿಕೊಂಡು ಮನೋಜ್‌ ಗಾಗಿ ಕಾಯುತ್ತಾ ನಿಂತ ಶ್ವೇತಾಳ ಕಣ್ಣಲ್ಲಿ ಆಸೆಯ ಮಿಂಚು ಕಾಣುತ್ತಿತ್ತು.

ಸ್ವಲ್ಪ ಹೊತ್ತಿಗೆ ಬೈಕ್‌ ಸೌಂಡ್‌ ಕೇಳಿ ಹೊರಗೆ ಓಡಿ ಬಂದ ಶ್ವೇತಾಳನ್ನು ನೋಡಿದ ಮನೋಜ್‌, ಇಂತಹ ದಂತದ ಬೊಂಬೆಯನ್ನು ಬಿಟ್ಟು ಯಾವುದೋ ಶೋಕೇಸ್‌ ಬೊಂಬೆ ಹಿಂದೆ ಬಿದ್ದಿದ್ದೆನಲ್ಲ ಎಂಬ ತಪ್ಪಿನ ಅರಿವಾಯಿತು. ನಿಧಾನವಾಗಿ ಬಂದು ಬೈಕ್‌ ಹತ್ತಿದ ಶ್ವೇತಾ ಮನೋಜ್‌ ಗೆ ದೂರವಾಗಿಯೇ ಕುಳಿತಳು.

ಅದನ್ನು ಗಮನಿಸಿದ ಮನೋಜ್‌ ಕೈ ಚಾಚಿ ಅವಳನ್ನು ತನ್ನತ್ತ ಬಳಸಿಕೊಂಡ. ಶ್ವೇತಾ ನಾಚಿ ಹಾಗೇ ಅವನ ಭುಜಕ್ಕೆ ಒರಗಿದಳು. ಕೊನೆಗೂ ಶ್ವೇತಾಳ ಕನಸು ಸಾಕಾರವಾಯಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ