ದಕ್ಷಿಣ ಅಮೆರಿಕದ ವೆನೆಜುವೆಲಾ ದೇಶದಲ್ಲಿ ಪ್ರಕೃತಿ ವಿಕೋಪ ಭೀಕರ ಸ್ವರೂಪ ಪಡೆದಿದ್ದು,  ಬುಧವಾರ ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಭೀಕರ ಅವಳಿ ಭೂಕಂಪಗಳ ಬೆನ್ನಲ್ಲೇ, ಶುಕ್ರವಾರ ಮಧ್ಯಾಹ್ನ ಮತ್ತೊಮ್ಮೆ 4.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಬುಧವಾರ ಸಂಜೆ ಸಂಭವಿಸಿದ್ದ ಪ್ರಬಲ ಭೂಕಂಪಗಳ ಬೆನ್ನಲ್ಲೇ ಇದು ಸಂಭವಿಸಿದೆ. ಅವಳಿ ಭೂಕಂಪದಿಂದ ಸಾವಿರಾರು ಮನೆಗಳು ನೆಲಸಮವಾಗಿದ್ದು, ರಸ್ತೆ, ಸೇತುವೆ, ಆಸ್ಪತ್ರೆಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳು ಭಾರೀ ಹಾನಿಗೊಳಗಾಗಿವೆ. ಹಲವಾರು ಪ್ರದೇಶಗಳು ಸಂಪೂರ್ಣವಾಗಿ ಅವಶೇಷಗಳ ರಾಶಿಯಂತಾಗಿವೆ.

ಭೂಕಂಪದ ಪರಿಣಾಮ ಈವರೆಗೂ ಬಲಿಯಾದವರ ಸಂಖ್ಯೆ ಈಗ 920 ಕ್ಕೆ ಏರಿಕೆಯಾಗಿದೆ. ಇನ್ನೂ 50,000 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ವೆನೆಜುವೆಲಾ ರಾಷ್ಟ್ರೀಯ ಅಸೆಂಬ್ಲಿ ಅಧ್ಯಕ್ಷ ಜಾರ್ಜ್ ರೋಡ್ರಿಗಸ್ ಈ ಕುರಿತು ಮಾಹಿತಿ ನೀಡಿದ್ದು, ಅವಳಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 920ಕ್ಕೆ ಏರಿಕೆಯಾಗಿದೆ. ಇನ್ನೂ 50 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕವಿದೆ ಎಂದಿದ್ದಾರೆ.“ರಕ್ಷಿಸಲಾಗುವ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಅದ್ಭುತ. ಈ ದುರಂತದ ಪ್ರಮಾಣವನ್ನು ನಾವು ಯಾವುದೇ ರೀತಿಯಲ್ಲಿ ಮರೆಮಾಚುವುದಿಲ್ಲ” ಎಂದು ಜಾರ್ಜ್ ರೋಡ್ರಿಗಸ್ ಹೇಳಿದ್ದಾರೆ.

ಕಳೆದ ನೂರು ವರ್ಷಗಳಲ್ಲಿ ವೆನೆಜುವೆಲಾ ಕಂಡ ಅತ್ಯಂತ ಪ್ರಬಲ ಭೂಕಂಪ ಇದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾರಕಾಸ್, ಲಾ ಗುಯಿರಾ ಸೇರಿದಂತೆ ಉತ್ತರ ಕರಾವಳಿ ಭಾಗಗಳು ಹೆಚ್ಚು ಹಾನಿಗೊಳಗಾಗಿದ್ದು, ನೂರಾರು ಕಟ್ಟಡಗಳು ಕುಸಿದು ಬಿದ್ದಿವೆ. ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM) ಪ್ರಕಾರ, ಈ ಭೂಕಂಪದಿಂದ ಸುಮಾರು 67.6 ಲಕ್ಷ ಜನರು ಬಾಧಿತರಾಗುವ ಸಾಧ್ಯತೆ ಇದೆ. ಇವರಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಕಾರಕಾಸ್ ನಗರದಲ್ಲೇ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಎರಡೂ ಭೂಕಂಪಗಳ ಕೇಂದ್ರಬಿಂದು ವೆನೆಜುವೆಲಾದ ಕೆರಿಬಿಯನ್ ಕರಾವಳಿಯ ಮೊರೊನ್ ಪ್ರದೇಶದ ಸಮೀಪವಾಗಿತ್ತು. ಕಾರಕಾಸ್‌ನಿಂದ ಸುಮಾರು 170 ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶದಲ್ಲಿ ಅಲ್ಪ ಆಳದಲ್ಲಿ ಭೂಕಂಪ ಸಂಭವಿಸಿದ್ದರಿಂದ ಹಾನಿಯ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ.

ವಿಶ್ವಸಂಸ್ಥೆ ಪ್ರಕಾರ, ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸುಮಾರು 39 ಲಕ್ಷ ಮಕ್ಕಳು ವಾಸಿಸುತ್ತಿದ್ದು, ಅವರ ನೆರವಿಗೆ ಯುನಿಸೆಫ್ ಸೇರಿದಂತೆ ವಿವಿಧ ಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿವೆ.

ಅಮೆರಿಕವು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ತನ್ನ ತಜ್ಞರ ತಂಡಗಳನ್ನು ವೆನೆಜುವೆಲಾಗೆ ಕಳುಹಿಸಿದೆ. ಅಗ್ನಿಶಾಮಕ ಸಿಬ್ಬಂದಿ, ವೈದ್ಯರು, ರಚನಾ ತಜ್ಞರು ಹಾಗೂ ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚಲು ತರಬೇತಿ ಪಡೆದ ಶ್ವಾನಗಳನ್ನು ಒಳಗೊಂಡ ಎರಡು ವಿಶೇಷ ಶೋಧ ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಲಿವೆ.

ಭೂಕಂಪ ಪೀಡಿತ ವೆನೆಜುವೆಲಾಗೆ ಭಾರತವೂ ಮಾನವೀಯ ನೆರವಿನ ಹಸ್ತ ಚಾಚಿದೆ. ‘ಆಪರೇಷನ್ ಅಮಿಸ್ತಾದ್’ ಹೆಸರಿನ ವಿಶೇಷ ಮಾನವೀಯ ನೆರವು ಕಾರ್ಯಾಚರಣೆಯನ್ನು ಆರಂಭಿಸಿರುವ ಭಾರತ ಸರ್ಕಾರ, ಭಾರತೀಯ ವಾಯುಪಡೆಯ ಎರಡು ಸಿ-17 ಗ್ಲೋಬ್‌ಮಾಸ್ಟರ್ ವಿಮಾನಗಳ ಮೂಲಕ ಪರಿಹಾರ ಸಾಮಗ್ರಿಗಳು ಹಾಗೂ 41 ಸದಸ್ಯರ ರಕ್ಷಣಾ ತಂಡವನ್ನು ವೆನೆಜುವೆಲಾಗೆ ಕಳುಹಿಸಿದೆ.

ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆ ಘಟಕ, 35 ಟನ್‌ಗಿಂತ ಹೆಚ್ಚು ಔಷಧಗಳು, ವೈದ್ಯಕೀಯ ಉಪಕರಣಗಳು ಹಾಗೂ ತುರ್ತು ಚಿಕಿತ್ಸೆಗೆ ನೆರವಾಗುವ ಎರಡು ಭೀಷ್ಮ ಕ್ಯೂಬ್‌ಗಳು (BHISHM Cubes) ಸೇರಿದಂತೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ವಿಪತ್ತಿನ ಈ ಕಠಿಣ ಸಂದರ್ಭದಲ್ಲಿ ವೆನೆಜುವೆಲಾ ಸರ್ಕಾರ ಮತ್ತು ಅಲ್ಲಿನ ಜನರೊಂದಿಗೆ ಭಾರತ ಸದಾ ನಿಲ್ಲಲಿದೆ ಎಂದು ಭಾರತ ಸರ್ಕಾರ ಭರವಸೆ ನೀಡಿದ್ದು, ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿಯೂ ಹೆಚ್ಚಿನ ನೆರವು ನೀಡಲು ಸಿದ್ಧವಿರುವುದಾಗಿ ತಿಳಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ