ಓಣಂ ಸಧ್ಯಾ ಎಂದರೆ ಭೂರಿ ಭೋಜನದ ಪ್ರತೀಕ! ಇದರಲ್ಲಿ ಕನಿಷ್ಠ 20-25 ಜನಗಳಿದ್ದು ನಿಮ್ಮ ಬಾಯಲ್ಲಿ ನೀರೂರಿಸುತ್ತವೆ. ಇದು ಕೇರಳದ ಸಮೃದ್ಧ ಸಂಸ್ಕೃತಿಯ ಸಾಂಪ್ರದಾಯಿಕ ಹಬ್ಬದಡುಗೆ. ಇದರಲ್ಲಿ ಬಗೆಬಗೆಯ ವ್ಯಂಜನಗಳಿದ್ದು ಪಾಯಸ, ಪರಮಾನ್ನಗಳನ್ನು ಒಳಗೊಂಡು ರಸಗವಳ ಎನಿಸುತ್ತದೆ. ಓಣಂ ಹಬ್ಬದ ನೆಪದಲ್ಲಿ ಇಂಥ ಗ್ರಾಂಡ್ಔತಣ ಸವಿಯಲು ನೀವು ಸಿದ್ಧರಾಗಿ….!

Sambar-Plating

ಸಧ್ಯಾ ಸಾಂಬಾರ್

ಸಾಂಬಾರ್ಕೇರಳದ ಒಂದು ಪ್ರಮುಖ, ಪೌಷ್ಟಿಕ ಡಿಶ್ಆಗಿದ್ದು ಬೇಳೆ, ಇಂಗು, ತರಕಾರಿ, ಮಸಾಲೆಗಳ ಅದ್ಭುತ ಮಿಶ್ರಣವಾಗಿದೆ!

ಸಾಮಗ್ರಿ : 4-5 ಕಪ್‌ ಮಿಶ್ರ ತರಕಾರಿಗಳ ಹೋಳು (ನಿಮ್ಮ ಆಯ್ಕೆ), 1 ಕಪ್‌ ತೊಗರಿಬೇಳೆ, ರುಚಿಗೆ ತಕ್ಕಷ್ಟು ಹುಣಿಸೇ ಕಿವುಚಿದ ರಸ, ತೆಂಗಿನ ತುರಿ, ಹುರಿದ ಕಡಲೆಕಾಯಿ ಬೀಜ, ಉಪ್ಪು, ಖಾರ, ಧನಿಯಾಪುಡಿ, ತುಸು ಉದ್ದು/ಕಡಲೆಬೇಳೆ, 3-4 ಬ್ಯಾಡಗಿ ಮೆಣಸು, ಮೆಂತ್ಯಪುಡಿ, ಕಾಯಾ ಪೌಡರ್‌, 7-8 ತುಂಡು ಒಣ ಮೆಣಸಿನಕಾಯಿ, 2 ಹಸಿಮೆಣಸು, ಅರಿಶಿನ, 3-4 ಹುಳಿ ಟೊಮೇಟೊ, 12-15 ಸಾಂಬಾರ್‌ ಈರುಳ್ಳಿ, ಒಗ್ಗರಣೆಗೆ ತುಸು ಕೊಬ್ಬರಿ ಎಣ್ಣೆ, ಮೆಂತ್ಯ, ಕರಿಬೇವು, ಅಚ್ಚಖಾರ, ಇಂಗು, ಸಾಸುವೆ, ಜೀರಿಗೆ.

ವಿಧಾನ : ಒಂದು ಪ್ರೆಷರ್‌ ಕುಕ್ಕರ್‌ ನಲ್ಲಿ ತೊಗರಿಬೇಳೆ, ತುಸು ಅರಿಶಿನ, ತುಪ್ಪ, ಉಪ್ಪು, 2 ಕಪ್‌ ನೀರು ಬೆರೆಸಿ ಹದನಾಗಿ ಬೇಯಿಸಿ, ಬೇರೆಯಾಗಿಡಿ. ಅದೇ ಕುಕ್ಕರ್‌ ನಲ್ಲಿ ಹೆಚ್ಚಿದ ತರಕಾರಿ ಹೋಳು ಹಾಕಿ 1 ಸೀಟಿ ಬರುವಂತೆ ಬೇಯಿಸಿ.

ನಂತರ ಒಂದು ಸಣ್ಣ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಉ/ಕ ಬೇಳೆ, ಧನಿಯಾ, ಮೆಂತ್ಯ, ತುಂಡರಿಸಿದ ಒಣಮೆಣಸು, ಬ್ಯಾಡಗಿ ಮೆಣಸು ಎಲ್ಲಾ ಸೇರಿಸಿ ಬಾಡಿಸಿ. ಕೊನೆಯಲ್ಲಿ ತೆಂಗಿನ ತುರಿ ಹಾರಿ ಕೆದಕಿ ಕೆಳಗಿಳಿಸಿ.

ಅದೇ ಬಾಣಲೆಯಲ್ಲಿ ಮತ್ತೆ ತುಸು ಎಣ್ಣೆ ಬಿಸಿ ಮಾಡಿ ಇನ್ನಷ್ಟು ತೆಂಗಿನ ತುರಿ, ಹಸಿ ಮೆಣಸು, ಜಜ್ಜಿದ 3-4 ಸಾಂಬಾರ್‌ ಈರುಳ್ಳಿ, ಕರಿಬೇವು ಹಾಕಿ, ಘಮ್ಮೆನ್ನುವಂತೆ ಹುರಿದು ಕೆಳಗಿಳಿಸಿ. ಇದನ್ನು ನೀಟಾಗಿ ರುಬ್ಬಿಕೊಳ್ಳಿ.

ಅದೇ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಬದನೆ, ಟೊಮೇಟೊ ಹೋಳು ಹಾಕಿ ಬಾಡಿಸಿ ಬೇರೆಯಾಗಿಡಿ. ನಂತರ ದಪ್ಪ ತಳದ ಪಾತ್ರೆಯಲ್ಲಿ ಮೊದಲು ಹುಣಿಸೇ ರಸ ಹಾಕಿ ಕುದಿಸಿ. ಇದಕ್ಕೆ ಬೆಂದ ಬೇಳೆ, ತರಕಾರಿ ಹಾಕಿ ಕೈಯಾಡಿಸಿ. ಆಮೇಲೆ ಬದನೆ, ಟೊಮೇಟೊ ಹಾಕಿ 1 ಕುದಿ ಬರಿಸಿ. ನಂತರ ಇದಕ್ಕೆ ರುಬ್ಬಿಕೊಂಡ ಮಿಶ್ರಣ, ಧನಿಯಾ ಮಿಶ್ರಣ ಹಾಕಿ, ಉಪ್ಪು, ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ 10 ನಿಮಿಷ ಸಾಂಬಾರ್‌ ಕುದಿಸಿರಿ.

ನಂತರ ಚಿಕ್ಕ ಬಾಣಲೆಯಲ್ಲಿ ತುಸು ಕೊಬ್ಬರಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸುವೆ, ಜೀರಿಗೆ, ಕರಿಬೇವು, ಇಂಗು ಹಾಕಿ ಒಗ್ಗರಣೆ ಕೊಡಿ. ನಂತರ ಇದಕ್ಕೆ ತುಂಡರಿಸಿದ ಒಣಮೆಣಸು, ಮೆಂತ್ಯ, ಕಾಯಾ ಪೌಡರ್‌ ಹಾಕಿ ಕೆದಕಿ, ಇದನ್ನು ತಕ್ಷಣ ಕುದಿಯುತ್ತಿರುವ ಸಾಂಬಾರ್‌ ಗೆ ರವಾನಿಸಿ. ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿ, ಸಾಂಬಾರ್‌ ಜೊತೆ ಸವಿಯಿರಿ!

Aviyal

ಅವಿಯಲ್

ಕೇರಳದ ಸಾಂಪ್ರದಾಯಿಕ ವ್ಯಂಜನ ವಿಶಿಷ್ಟ, ಪೌಷ್ಟಿಕ ಸ್ಟ್ಯೂ ಆಗಿದೆ. ಇದರಲ್ಲಿ ಹಲವು ಬಗೆಯ ತರಕಾರಿ, ಹೇರಳ ತೆಂಗಿನತುರಿ, ಲೈಟ್ಮಸಾಲೆ ಇರುತ್ತದೆ. ಬಲು ಆರೋಗ್ಯಕಾರಿ!

ಸಾಮಗ್ರಿ : ಮಿಶ್ರ ತರಕಾರಿ ಹೋಳುಗಳು (ಸುವರ್ಣಗೆಡ್ಡೆ, ಆಲೂಗಡ್ಡೆ, ಹುರುಳಿಕಾಯಿ, ಚಪ್ಪರದವರೆ, ಸೋರೆಕಾಯಿ, ಬೂದುಗುಂಬಳ, ಕ್ಯಾರೆಟ್‌, ನುಗ್ಗೆಕಾಯಿ, ಬಾಳೇಕಾಯಿ ಇತ್ಯಾದಿ). 1 ತೆಂಗಿನಕಾಯಿಯ ತುರಿ, 7-8 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಣಿಸೇ ರಸ, ಕೊಬ್ಬರಿ ಎಣ್ಣೆ, ಒಗ್ಗರಣೆ ಸಾಮಗ್ರಿ.

ವಿಧಾನ : ಮೊದಲು ದಪ್ಪ ತಳದ ಬಾಣಲೆಯಲ್ಲಿ ತುಸು ಕೊಬ್ಬರಿ ಎಣ್ಣೆ, ಸಣ್ಣಗೆ ಹೆಚ್ಚಿದ ಹಸಿಮೆಣಸು, ಕರಿಬೇವು ಹಾಕಿ ಬಾಡಿಸಿ. ನಂತರ ಮಾಮೂಲಿ ಒಗ್ಗರಣೆ ಕೊಡಿ. ಆಮೇಲೆ ಇದಕ್ಕೆ ಹೆಚ್ಚಿದ ತರಕಾರಿ ಹಾಕಿ 10 ನಿಮಿಷ ಹದನಾಗಿ ಬಾಡಿಸಿ. ಮಂದ ಉರಿ ಮಾಡಿ, ಮೇಲೆ ಒಂದು ಬಾಳೆಲೆ ಮುಚ್ಚಿಡಿ. ಹೋಳು ಬೆಂದಿದಿಯೇ ಎಂದು ಖಾತ್ರಿಪಡಿಸಿಕೊಂಡು ಹುಣಿಸೇ ರಸ ಬೆರೆಸಿರಿ. ನಂತರ ಇದಕ್ಕೆ ತೆಂಗಿನ ತುರಿ, ಅರಿಶಿನ, ತುಸು ಉಪ್ಪು, ಖಾರ ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಕೈಯಾಡಿಸಿ. ಕೊನೆಯಲ್ಲಿ ಇನ್ನಷ್ಟು ತೆಂಗಿನ ತುರಿ, ಕರಿಬೇವು ಸೇರಿಸಿ ಎಲ್ಲವೂ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಸಿ. ಅನ್ನದ ಜೊತೆಗೆ ಧಾರಾಳ ತುಪ್ಪ ಹಾಕಿ, ಈ ಅವಿಯಲ್ ಜೊತೆ ಸವಿಯಲು ಕೊಡಿ.

puliyinchi

ಪುಳಿ ಇಂಜಿ (ಶುಂಠಿ ಗೊಜ್ಜು)

ಇದು ಇಂಜಿ (ಶುಂಠಿ), ಪುಳಿ (ಹುಣಿಸೇ ರಸ), ಬೆಲ್ಲ ಬೆರೆಸಿ ತಯಾರಿಸುವ ಗೊಜ್ಜು. ಹೀಗಾಗಿ ಇದರ ರುಚಿ ಹುಳಿ, ಸಿಹಿ, ಖಾರವಾಗಿ ಬೊಂಬಾಟ್ಎನಿಸುತ್ತದೆ. ಇದು ಪಚನಕ್ರಿಯೆಗೆ ಬಲು ಸಹಕಾರಿ, ಬಲು ರುಚಿಕರ ಹೌದು!

ಸಾಮಗ್ರಿ : 250 ಗ್ರಾಂ ಶುಂಠಿ, 100 ಗ್ರಾಂ ಹುಣಿಸೇಹಣ್ಣು, 150 ಗ್ರಾಂ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಜೀರಿಗೆಪುಡಿ, 4-5 ಒಣ ಮೆಣಸು, 4 ಎಸಳು ಕರಿಬೇವು, ಒಗ್ಗರಣೆಗೆ ತುಸು ಕೊಬ್ಬರಿ ಎಣ್ಣೆ, ಸಾಸುವೆ, ಜೀರಿಗೆ, ಮೆಂತ್ಯ, ಜಜ್ಜಿದ ಬೆಳ್ಳುಳ್ಳಿ, 3-4 ಸಾಂಬಾರ್‌ ಈರುಳ್ಳಿ.

ವಿಧಾನ : ಶುಂಠಿ ಶುಚಿಗೊಳಿಸಿ ಸಣ್ಣದಾಗಿ ಹೆಚ್ಚಿಡಿ. ಹುಣಿಸೇ ಕಿವುಚಿ ರಸ ಸಿದ್ಧಪಡಿಸಿ. ಹಾಗೆಯೇ ಈರುಳ್ಳಿಯನ್ನೂ ಸಣ್ಣಗೆ ಹೆಚ್ಚಿಡಿ. ಒಂದು ಬಾಣಲೆಯಲ್ಲಿ ತುಸು ಕೊಬ್ಬರಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಕೊಡಿ. ನಂತರ ಇದಕ್ಕೆ ಕರಿಬೇವು, ಶುಂಠಿ, ಬೆಳ್ಳುಳ್ಳಿ, ತುಂಡರಿಸಿದ ಒಣಮೆಣಸು, ಹೆಚ್ಚಿದ ಈರುಳ್ಳಿ ಹಾಕಿ ಮಂದ ಉರಿಯಲ್ಲಿ ಹದನಾಗಿ ಬಾಡಿಸಿ. ನಂತರ ಉಪ್ಪು, ಖಾರ, ಮೆಣಸು ಸೇರಿಸಿ ಕೆದಕಬೇಕು. ನಂತರ ಹುಣಿಸೇ ರಸ, ಬೆಲ್ಲ ಹಾಕಿ ಹದನಾಗಿ ಕುದಿಸಬೇಕು. ಕೆಳಗಿಳಿಸಿ ಬಿಸಿ ಬಿಸಿ ಅನ್ನದ ಜೊತೆ ಸವಿಯಲು ಕೊಡಿ.

kurukku-kalan

ಕುರುಕು ಕಾಲನ್

ಇದರಲ್ಲಿ  ಸುವರ್ಣಗೆಡ್ಡೆ. ಬಾಳೆಕಾಯಿ, ಹುಳಿ ಮೊಸರು ಬಳಕೆಯಾಗುತ್ತದೆ. ಇವೆಲ್ಲ ಕೂಡಿ ಒಳ್ಳೆಯ ಗ್ರೇವಿಯಾಗಿ, ಬೆಣ್ಣೆಯಂತೆ ಥಿಕ್ಕಾಗಿ ಬರುತ್ತದೆ. ಮೊಸರಿನ ಹುಳಿ ಟೇಸ್ಟ್, ತರಕಾರಿಯ ಮೃದುತ್ವ ಇದಕ್ಕೆ ಹೆಚ್ಚಿನ ರುಚಿ ನೀಡುತ್ತದೆ.

ಸಾಮಗ್ರಿ : ಮಧ್ಯಮ ಗಾತ್ರದ 2-3 ಬಾಳೇಕಾಯಿ, 250 ಗ್ರಾಂ ತಾಜಾ ಸುವರ್ಣಗೆಡ್ಡೆ, ರುಚ್ಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಂತ್ಯಪುಡಿ, ಅರಿಶಿನ, ಮೆಣಸು, 4 ಚಮಚ ತುಪ್ಪ, ತೆಂಗಿನ ತುರಿ, 2-3 ಹಸಿ ಮೆಣಸು, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಕರಿಬೇವು, ಮೆಂತ್ಯ, ತುಂಡರಿಸಿದ ಒಣಮೆಣಸು.

ವಿಧಾನ : ಬಾಳೇಕಾಯಿ, ಸುವರ್ಣಗೆಡ್ಡೆ ಶುಚಿಗೊಳಿಸಿ ಸಣ್ಣ ಹೋಳುಗಳಾಗಿ ಹೆಚ್ಚಿ ನೀರು ಮಜ್ಜಿಗೆಗೆ ಹಾಕಿಡಿ. ಅದರ ಸಮೇತ ಒಲೆಯ ಮೇಲಿರಿಸಿ ಕುದಿಯಲು ಬಿಡಿ, ಇದಕ್ಕೆ ಉಪ್ಪು, ಖಾರ, ಅರಿಶಿನ, ಪುಡಿ ಮೆಣಸು ಸೇರಿಸಿ. ನಂತರ ಹುಳಿ ಮೊಸರು, 1 ಕಪ್ ನೀರು ಬೆರೆಸಿ ಕುದಿಸಿರಿ. ಕರಿಬೇವು ಸೇರಿಸಿ. ನಂತರ ಇದಕ್ಕೆ ರುಬ್ಬಿದ ತೆಂಗು, ಜೀರಿಗೆ, ಹಸಿಮೆಣಸಿನ ಮಿಶ್ರಣ ಸೇರಿಸಿ ಕೈಯಾಡಿಸಿ. ನಂತರ ಮೆಂತ್ಯಪುಡಿ, ತುಪ್ಪ ಬೆರೆಸಿ ಕೆದಕಬೇಕು. ಆಮೇಲೆ ಚಿಕ್ಕ ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಬಿಸಿ ಮಾಡಿ ತುಂಡಿರಿಸದ ಒಣಮೆಣಸು, ಮೆಂತ್ಯ, ಕರಿಬೇವು, ಇಂಗು ಹಾಕಿ ಒಗ್ಗರಣೆ ಕೊಡಿ. ಇದನ್ನು ಗ್ರೇವಿಗೆ ಬೆರೆಸಿ ಕೆಳಗಿಳಿಸಿ.

olan

ಓಲನ್ಓಣಂ

ಸಧ್ಯವಾದ ಪ್ರಮುಖ ಖಾದ್ಯಗಳಲ್ಲಿ ಒಂದಾದ ಓಲನ್‌, ಬೂದುಗುಂಬಳ, ತೆಂಗಿನಕಾಯಿಯ ಗಟ್ಟಿ ಹಾಲು, ಲೈಟ್ಮಸಾಲೆಗಳ ಮಿಶ್ರಣವಾಗಿದ್ದು ನಮ್ಮ ಮಜ್ಜಿಗೆ ಹುಳಿಗೆ ಬಲು ಹತ್ತಿರವಾಗಿದೆ. ಇದನ್ನು ಟ್ರೈ ಮಾಡಿ ನೋಡಿ!

ಸಾಮಗ್ರಿ : 500 ಗ್ರಾಂ ಬೂದುಗುಂಬಳ, 1 ತೆಂಗಿನಕಾಯಿಯ ಹಾಲು, 2-3 ಎಸಳು ಬೆಳ್ಳುಳ್ಳಿ, 4-5 ಸಾಂಬಾರ್‌ ಈರುಳ್ಳಿ, 4-5 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಕೊಬ್ಬರಿ ಎಣ್ಣೆ, ಜೀರಿಗೆ.

ವಿಧಾನ : ಬೂದುಗುಂಬಳನ್ನು ಉದ್ದನೆಯ ಹೋಳುಗಳಾಗಿ ಹೆಚ್ಚಿಕೊಂಡು ತೆಂಗಿನ ಹಾಲಿನಲ್ಲಿ ಬೇಯಿಸಿ. ಹಸಿ ಮೆಣಸು, ಬೆಳ್ಳುಳ್ಳಿ, ಸಾಂಬಾರ ಈರುಳ್ಳಿ, ಜೀರಿಗೆ ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಂಡು ಉಪ್ಪಿನ ಜೊತೆ ಇದಕ್ಕೆ ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. ಕೊನೆಯಲ್ಲಿ ಕೊಬ್ಬರಿ ಎಣ್ಣೆಯಲ್ಲಿ ಜೀರಿಗೆ ಒಗ್ಗರಣೆ ನೀಡಿ ಅದನ್ನು ಗ್ರೇವಿಗೆ ಬೆರೆಸಿ ಕುದಿಸಿ, ಕೆಳಗಿಳಿಸಿ.

Madhura-pachadi

ಮಧುರ ಪಚ್ಚಡಿ

ಇದು ಹುಳಿ, ಸಿಹಿ ಮಿಶ್ರಣದ ವ್ಯಂಜನ. ಇದಕ್ಕೆ ಅನಾನಸ್‌, ಬಾಳೆಕಾಯಿ, ಮೆಣಸು, ಅರಿಶಿನ, ಬೆಲ್ಲ ಬಳಕೆಯಾಗುತ್ತದೆ. ಪಚ್ಚಡಿ ಹುಳಿ, ಸಿಹಿ, ತೀಕ್ಷ್ಣವಾಗಿದ್ದು, ಊಟಕ್ಕೆ ಸಮತೋಲನ ರುಚಿ ಒದಗಿಸುತ್ತದೆ.

ಸಾಮಗ್ರಿ : 1 ಚಿಕ್ಕ ಅನಾನಸ್‌ ನ ಸಣ್ಣ ಹೋಳುಗಳು, ಒಂದಿಷ್ಟು ಸೀಡ್ಲಿಸ್‌ ದ್ರಾಕ್ಷಿ, 1 ಬಾಳೆಕಾಯಿ, ರುಚಿಗೆ ತಕ್ಕಷ್ಟು ಹುಳಿ ಮೊಸರು, ಉಪ್ಪು, ಖಾರ, ಮೆಣಸು, ಅರಿಶಿನ, ಹಸಿ ಮೆಣಸು, ಒಗ್ಗರಣೆಗೆ ತುಪ್ಪ, ಸಾಸುವೆ, ಜೀರಿಗೆ, ಕರಿಬೇವು, ಒಣಮೆಣಸು, 1 ಗಿಟುಕು ತೆಂಗಿನ ತುರಿ.

ವಿಧಾನ : ತುಂಡರಿಸಿದ ಅನಾನಸ್‌ ಹೋಳಿಗೆ ತುಸು ಉಪ್ಪು, ಮೆಣಸು, ಅರಿಶಿನ, ನೀರು ಬೆರೆಸಿ ಕುಕ್ಕರ್‌ ನಲ್ಲಿ 1 ಸೀಟಿ ಬರುವಂತೆ ಬೇಯಿಸಿ. ಒಂದು ದಪ್ಪ ತಳದ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದರಲ್ಲಿ ಬಾಳೇಕಾಯಿ ಹೋಳು ಹಾಕಿ ಹದನಾಗಿ ಬಾಡಿಸಿ. ಅದೇ ಸಮಯದಲ್ಲಿ ಜೀರಿಗೆ, ತೆಂಗಿನ ತುರಿ, ಹಸಿ ಮೆಣಸು ಸೇರಿಸಿ ಪೇಸ್ಟ್ ಮಾಡಿಕೊಂಡು ಇದಕ್ಕೆ ಬೆರೆಸಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಅನಾನಸ್‌ (ಬೇಯಿಸಿದ ನೀರಿನ ಸಮೇತ) ಬೆರೆಸಿ ಕೈಯಾಡಿಸಿ. ನಂತರ ಉಪ್ಪು, ಖಾರ, ಮೊಸರು ಬೆರೆಸಿ ಕೈಯಾಡಿಸಬೇಕು. ನಂತರ ಚಿಕ್ಕ ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಸಾಸುವೆ, ಜೀರಿಗೆ, ತುಂಡರಿಸಿದ ಮೆಣಸು, ಕರಿಬೇವು ಸೇರಿಸಿ ಒಗ್ಗರಣೆ ಕೊಟ್ಟು ಅದನ್ನು ಗ್ರೇವಿಗೆ ಸೇರಿಸಿ. ಬಿಸಿ ಇರುವಾಗಲೇ ಅನ್ನದ ಜೊತೆ ಸೇವಿಸಿ.

ada-pradhaman

ಅಡಪ್ರಥಮನ್

ಇದು ಕೇರಳದ ಸಾಂಪ್ರದಾಯಿಕ ಹುಗ್ಗಿ ಎನಿಸಿದೆ. ಓಣಂಸಧ್ಯಾದ ಮುಖ್ಯ ಆಕರ್ಷಣೆಯಾದ ಇದಕ್ಕೆ ರೈಸ್ಫ್ಲೇಕ್ಸ್ (ಅಡ) ಮೂಲ. ಬೆಲ್ಲ, ತೆಂಗಿನ ಹಾಲು ಬೆರೆತ ಗಟ್ಟಿ ಪಾಯಸ. ಏಲಕ್ಕಿ, ಗೋಡಂಬಿ, ದ್ರಾಕ್ಷಿಖರ್ಜೂರ ಬೆರೆತರೆ ರುಚಿ ಹೆಚ್ಚು. ರೈಸ್ಫ್ಲೇಕ್ಸ್ (ಆಯತಾಕಾರವಾಗಿ ಅಕ್ಕಿಯನ್ನು ಕುಟ್ಟಿ ತಯಾರಿಸಿದ್ದು, ರೆಡಿಮೇಡ್ಲಭ್ಯ)ನ್ನು 15 ನಿಮಿಷ ನೆನೆಹಾಕಿ ಬಳಸಿಕೊಳ್ಳಿ.

ಸಾಮಗ್ರಿ : 1 ಕಪ್‌ ರೈಸ್‌ ಫ್ಲೇಕ್ಸ್, 2 ಕಪ್‌ ಪುಡಿ ಮಾಡಿದ ಬೆಲ್ಲ, ತಲಾ 1-1 ಕಪ್‌ ಗಟ್ಟಿ, ಮೀಡಿಯಂ, ತೆಳು ತೆಂಗಿನ ಹಾಲು, ಅರ್ಧ ಕಪ್‌ ತುಪ್ಪ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ (ಒಟ್ಟಾರೆ ಅರ್ಧ ಕಪ್‌), ತುಸು ಏಲಕ್ಕಿ ಪುಡಿ, ಚಿಟಕಿ ಉಪ್ಪು.

ವಿಧಾನ : ಮೊದಲು ರೈಸ್‌ ಫ್ಲೇಕ್ಸ್ ನ್ನು 15-20 ನಿಮಿಷ ತುಸು ಬಿಸಿ ನೀರು ಹಾಲಲ್ಲಿ ನೆನೆಹಾಕಿಡಿ. ನಂತರ ತಣ್ಣೀರಿನಲ್ಲಿ ಚೆನ್ನಾಗಿ ತೊಳೆದು, ಸೋಸಿಕೊಳ್ಳಿ. ಬಾಣಲೆಯಲ್ಲಿ ಅರ್ಧ ಕಪ್‌ ನೀರು ಕುದಿಸಿ, ಬೆಲ್ಲ ಹಾಕಿ ಕರಗಿಸಿ, ಸೋಸಿಕೊಳ್ಳಿ. ನಂತರ ಅದನ್ನು ಬಾಣಲೆಯಲ್ಲಿ ಬಿಸಿ ಮಾಡಿ, ಫ್ಲೇಕ್ಸ್, ಉಪ್ಪು ಹಾಕಿ ಬೇಯಿಸಿ. ನಡು ನಡುವೆ ತುಪ್ಪ ಹಾಕಿ ಕೈಯಾಡಿಸುತ್ತಿರಿ. ನಂತರ ತೆಳು, 5 ನಿಮಿಷ ಬಿಟ್ಟು ಮೀಡಿಯಂ, 5 ನಿಮಿಷ ಬಿಟ್ಟು ಗಟ್ಟಿ ತೆಂಗಿನ ಹಾಲು ಬೆರೆಸಿ ಮಂದ ಉರಿಯಲ್ಲಿ ಕುದಿಸುತ್ತಿರಬೇಕು. ನಂತರ ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ-ದ್ರಾಕ್ಷಿ, ಏಲಕ್ಕಿ ಪುಡಿ ಸೇರಿಸಿ ಎಲ್ಲ ಚೆನ್ನಾಗಿ ಬೆರೆುತಕೊಳ್ಳುವಂತೆ ಮಾಡಿ. ಬಿಸಿ ಬಿಸಿಯಾಗಿ ತುಪ್ಪದ ಜೊತೆ ಅಥವಾ ಆರಿ ತಣ್ಣಗಾದ ಮೇಲೆ ಹಾಲು ಬೆರೆಸಿ ಸವಿಯಲು ಕೊಡಿ.

mathhanga-eriseri

ಮತಂಗಾ ಎರಿಶ್ಶೆರಿ (ಕುಂಬಳದ ಗ್ರೇವಿ)

ಇದೊಂದು ಸಾಂಪ್ರದಾಯಿಕ ಕೇರಳ ವ್ಯಂಜನವಾಗಿದ್ದು, ತನ್ನ ಸಿಹಿ, ಹುಳಿ, ಖಾರದ ರುಚಿಯಿಂದಾಗಿ ಪ್ರಸಿದ್ಧ. ಬೆಂದ ಕುಂಬಳ, ಹೇರಳ ತೆಂಗಿನತುರಿ, ಲೈಟ್ಮಸಾಲೆ ಇದರ ಹೂರಣವಾಗಿದೆ. ಓಣಂ ಸಧ್ಯಾದಲ್ಲಿ ಇದು ಅತಿ ಮುಖ್ಯ ಖಾದ್ಯ ಎನಿಸುತ್ತದೆ.

ಸಾಮಗ್ರಿ : 500 ಗ್ರಾಂ ಸಿಹಿಗುಂಬಳದ ಹೋಳು, 1 ತೆಂಗಿನಕಾಯಿಯ ತುರಿ, 1 ಕಪ್‌ ಬೆಂದ ಹಲಸಂದೆ ಕಾಳು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸು, ವೈಟ್‌ ಪೆಪ್ಪರ್‌, ಅರ್ಧ ಕಪ್‌ಹೆಚ್ಚಿದ ಸಾಂಬಾರ್ ಈರುಳ್ಳಿ, 4-5 ಎಸಳು ಬೆಳ್ಳುಳ್ಳಿ, ಅರಿಶಿನ, ಬೆಲ್ಲ. ಒಗ್ಗರಣೆಗೆ ಜೀರಿಗೆ, ಸಾಸುವೆ, ಕರಿಬೇವು, ಕೊಬ್ಬರಿ, ಎಣ್ಣೆ.

ವಿಧಾನ : ಮೊದಲು ಹಲಸಂದೆ ಕಾಳು, ಸಿಹಿಗುಂಬಳದ ಹೋಳನ್ನು ಕುಕ್ಕರ್‌ ನಲ್ಲಿ ಒಟ್ಟಿಗೆ ಬೇಯಿಸಿಕೊಳ್ಳಿ. ತೆಂಗಿನ ತುರಿಗೆ ಹಸಿ ಮೆಣಸು, ವೈಟ್‌ ಪೆಪ್ಪರ್‌, ಹುಣಿಸೇ ಕಿವುಚಿದ ರಸ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಸಾಸುವೆ, ಜೀರಿಗೆ, ಕರಿಬೇವಿನ ಒಗ್ಗರಣೆ ಕೊಡಿ. ನಂತರ ಜಜ್ಜಿದ ಬೆಳ್ಳುಳ್ಳಿ, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಅದಕ್ಕೆ ರುಬ್ಬಿದ ಮಿಶ್ರಣ, ಉಪ್ಪು, ಖಾರ, ಬೆಲ್ಲ ಎಲ್ಲಾ ಸೇರಿಸಿ 2 ಕುದಿ ಬರಿಸಿ. ಆಮೇಲೆ ಕಾಳು, ಹೋಳು ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕುದಿಸಿ ಕೆಳಗಿಳಿಸಿ. ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿ, ಮೇಲೆ ಇದನ್ನು ಬಡಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ