ಸಿನಿಮಾ ಮನರಂಜನೆಯ ಒಂದು ಅದ್ಭುತ ಮಾಧ್ಯಮ. ಕಲೆಯೇ ಇಲ್ಲಿ ಪ್ರಧಾನ, ಭಾಷೆ ಹಿಂದುಳಿದು ಪ್ರತಿಭೆ ಗೆಲ್ಲುತ್ತದೆ. ಸಿನಿಪ್ರೇಮಿಗಳು ಭಾಷೆಯ ನೆಪದಿಂದ ಉತ್ತಮ ಚಿತ್ರ ನೋಡದೆ ಇರಲಾರರು. ಬದಲಿಗೆ ವೈವಿಧ್ಯತೆಗಳ ನಡುವೆ ಮನರಂಜನೆಯ ಸಂಪೂರ್ಣ ಲಾಭ ಪಡೆಯುತ್ತಾರೆ. ಹೀಗಾಗಿಯೇ `ಪ್ಯಾನ್‌ ಇಂಡಿಯಾ’ ಚಿತ್ರಗಳು ನಮ್ಮ ದೇಶದುದ್ದಕ್ಕೂ ಹೆಸರು ಗಳಿಸುತ್ತಿವೆ. ಹೀಗಾಗಿ ಭಾರತೀಯರೆಲ್ಲರೂ ಎಲ್ಲಾ ಭಾಷೆಗಳ (ಅಕ್ಷರಶಃ ಅರ್ಥವಾಗದಿದ್ದರೂ) ಚಿತ್ರ ನೋಡಲು ಮುಂದಾಗಿದ್ದಾರೆ. ಇದು ನಮ್ಮ ದೇಶದ ಅದ್ಭುತ ಸಂಸ್ಕೃತಿ, ವೈವಿಧ್ಯತೆಯಲ್ಲಿ ಏಕತೆಯೇ ನಮ್ಮ ಒಗ್ಗಟ್ಟಿನ ಗುಟ್ಟು! ಮುಖ್ಯವಾಗಿ ಪ್ರಾಂತೀಯ ಭಾಷೆಗಳ ಚಿತ್ರಗಳು ವಿಭಿನ್ನ ಸಾಂಸ್ಕೃತಿಕ ಪರಂಪರೆ ಹಾಗೂ ವೈವಿಧ್ಯತೆ ಪ್ರದರ್ಶಿಸುತ್ತಾ, ಭಾಷಾ ಪ್ರಯೋಗದಲ್ಲಿ ಮಾತ್ರವಲ್ಲದೆ, ಆಹಾರ ವಿಹಾರ, ರೀತಿರಿವಾಜು, ಉಡುಗೆ ತೊಡುಗೆ, ಹಬ್ಬಗಳ ಆಚರಣೆ, ವ್ಯಹಾರದಲ್ಲೂ ಅಖಂಡ ವಿಭಿನ್ನತೆ ಕಂಡುಬರುತ್ತದೆ.

ಇವನ್ನೆಲ್ಲ ಬೆಳ್ಳಿ ತೆರೆಯ ಮೇಲೆ ವಿಭಿನ್ನ ದೃಷ್ಟಿಕೋನದಿಂದ ವೀಕ್ಷಕರು ಗಮನಿಸಿದಾಗ ಭಾರತೀಯ ಪ್ರೇಕ್ಷಕರಿಗೆ ಒಂದು ಸಾಭೌಮಿಕ ಅನುಭೂತಿ ಉಂಟಾಗುತ್ತದೆ. ಹೀಗಾಗಿಯೇ ವೈವಿಧ್ಯತೆಗಳ ನಡುವೆ ಮನರಂಜನೆಯನ್ನು ಅದೇ ನಿಲುವಿನಲ್ಲಿ ಉಳಿಸಿಕೊಳ್ಳಲು, ಇಲ್ಲಿ ಗೃಹಶೋಭಾ ಮತ್ತೊಂದು ಹೊಸ ಹೆಜ್ಜೆ ಮುಂದಿಟ್ಟಿದ್ದಾಳೆ! ಇತ್ತೀಚೆಗೆ ನಮ್ಮ ವಿಭಿನ್ನ ಪ್ರಾಂತೀಯ ಭಾಷೆಗಳಲ್ಲಿ ಬಿಡುಗಡೆಗೊಂಡ ಜನಪ್ರಿಯ ಚಿತ್ರಗಳ ವಿಸ್ತೃತ ಮಾಹಿತಿ, ಓದುಗರಿಗಾಗಿ ಈ ಮೂಲಕ ಪ್ರಸ್ತುತಪಡಿಸುತ್ತಿದ್ದಾಳೆ!

01_Poster-of-the-Bengali-Film-'Dhumketu'

ಬಂಗಾಳಿ : ಧೂಮಕೇತು

ಕಳೆದ ಒಂದು ದಶಕದಿಂದ ಹಲವಾರು ಪ್ರತಿಕೂಲ ಸಂದರ್ಭಗಳನ್ನು ಎದುರಿಸುತ್ತಿದ್ದ ಬಂಗಾಳಿ ಚಿತ್ರ `ಧೂಮಕೇತು’ ಕಳೆದ ತಿಂಗಳು ಬಿಡುಗಡೆಯ ಭಾಗ್ಯ ಕಂಡಿತು. ಚಿತ್ರ ಆರಂಭದಿಂದಲೇ ಪ್ರೇಕ್ಷಕರ ಹೃದಯ ಗೆದ್ದಿದೆ. ಪ್ರೇಕ್ಷಕರು ಈ ಚಿತ್ರ ವೀಕ್ಷಿಸಲು ಬಲು ಉತ್ಸುಕರಾಗಿದ್ದರು. ಈ ಚಿತ್ರ ದೇವ್ ‌ಶುಭಶ್ರೀ ನಟನೆಯಿಂದ ಅತ್ಯಧಿಕ ರೋಚಕತೆ ಗಳಿಸಿತ್ತು. ಸಹಜವಾಗಿಯೇ ಬಾಕ್ಸ್ ಆಫೀಸಿನಲ್ಲಿ ಜ್ವಾಲಾಮುಖಿಯಾಗಿ ಸ್ಛೋಟಿಸಿತು. ಚಿತ್ರದ ನಿರ್ದೇಶಕ ಕೌಶಿಕ್‌ ಗಂಗೋಪಾಧ್ಯಾಯ ಈ ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ಬಹಳ ಸಂತೃಪ್ತರು, ವೀಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಚಿತ್ರದ ಬಿಡುಗಡೆಗೆ ಮುನ್ನ ಇದರ ಪ್ರೊಮೋಶನ್‌ ಇವೆಂಟ್ಸ್ ಗಾಗಿ ಬರುತ್ತಿದ್ದ ವೀಕ್ಷಕರ ದಂಡು, ಆಸಕ್ತಿ ಗಮನಿಸಿಕೊಂಡು, ಈ ಚಿತ್ರದ ಬಿಡುಗಡೆಗೆ ಒಂದು ವಾರದ ಮುನ್ನವೇ ಹಲವಾರು ಕಡೆ ಟಿಕೆಟ್‌ ಬುಕಿಂಗ್‌ ಕೌಂಟರ್ಸ್‌ ತೆರೆಯಲಾಗಿತ್ತು. ಈ ಚಿತ್ರಕ್ಕಾಗಿ ಪ್ರೇಕ್ಷಕರು ತೋರಿದ ಅಪಾರ ಆಸಕ್ತಿ ಕಂಡು, ದ. ಬಂಗಾಳದ ರಾಜ್ಯವಿಡೀ ಎಲ್ಲಾ ಥಿಯೇಟರ್‌ ಗಳು ಈ ಬಂಗಾಳಿ ಚಿತ್ರದ ರನ್ನಿಂಗ್‌ ಶೋ ಹೆಚ್ಚಿಸಿ, ಹಲವು ಹಿಂದಿ ಚಿತ್ರಗಳ ಶೋ ರದ್ದುಗೊಳಿಸಿದ! ಈ ಲೇಖನ ಅಚ್ಚಿಗೆ ಹೋಗುವ ಹೊತ್ತಿಗೆ `ಧೂಮಕೇತು’ ಚಿತ್ರ ಒಟ್ಟಾರೆ 28 ಕೋಟಿಗೂ ಅಧಿಕ ಹಣ ಬಾಚಿಕೊಂಡಿತ್ತು!

ಈ ಚಿತ್ರದ ಕಥೆ ಪ. ಬಂಗಾಳ ರಾಜ್ಯದ ಮಲೆನಾಡಿನ ಜೀವಾಳ ಪ್ರತಿಬಿಂಬಿಸುವ, ಅದರ ಒಳಹೊರಗನ್ನು ಸಮರ್ಥವಾಗಿ ನಿರೂಪಿಸುವ ಕಥಾನಕ ಹೊಂದಿದೆ. ಗೆಳೆತನ, ಪ್ರೀತಿಪ್ರೇಮ, ಕೌಟುಂಬಿಕ ಬಾಂಧವ್ಯ, ಹಳ್ಳಿ ಬಿಟ್ಟು ನಗರ ಸೇರುವ ನಾಯಕನ ಕಥೆ, ತಮ್ಮನ ಕೊಲೆಯ ರಹಸ್ಯ ಭೇದಿಸಲು ಮತ್ತೆ ವಾಪಸ್ಸು ಬರುವಿಕೆಯನ್ನು ಒಳಗೊಂಡಿದೆ. ಈ ಚಿತ್ರಕ್ಕಾಗಿ ಅನುಪಮ್ ರಾವ್‌, ಅರಿಜಿತ್‌ ಸಿಂಗ್‌, ಶ್ರೇಯಾ ಘೋಶಾಲ್ ‌ಅದ್ಭುತ ಗೀತೆಗಳನ್ನು ಹಾಡಿ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಎಂದಿನಂತೆ ಮುಖ್ಯ ತಾರಾಗಣದಲ್ಲಿ  ದೇವ್ ‌ಶುಭಶ್ರೀ ಇದ್ದರೆ ಉಳಿದಂತೆ ಚಿರಂಜೀತ್‌ ಚಕ್ರವರ್ತಿ, ರುದ್ರಾನಿ ‌ಘೋಷ್‌, ದುಲಾಲ್ ‌ಲಹಿರಿ, ಪಂಬ್ರತಾ ಚಟರ್ಜಿ ಮುಂತಾದವರು ಇತರ ಪಾತ್ರಗಳಲ್ಲಿದ್ದಾರೆ. `ಧೂಮಕೇತು’ ಚಿತ್ರ `ದಾಗ್‌ ಕ್ರಿಯೆಟಿವ್ ‌ಮೀಡಿಯಾ ದೇವ್ ‌ಎಂಟರ್‌ಟೇನ್ಮೆಂಟ್‌ ವೆಂಚರ್ಸ್‌’ ಬ್ಯಾನರ್‌ ನಡಿ ತಯಾರಾಗಿ, ಅಡಿ ವಿತರಣೆಗೊಂಡಿದೆ.

02_Kannara-film-'Su-from-So'

ಕನ್ನಡ : ಸು ಫ್ರಮ್ ಸೋ

`ಸು ಫ್ರಮ್ ಸೋ’ ಯಾವುದೇ ಹೆಚ್ಚಿನ ಪ್ರಚಾರವಿಲ್ಲದೆ ರಿಲೀಸ್‌ ಗೆ ಮುನ್ನ ತೋರಿಸಿದ್ದ ಕೆಲವೇ ಪ್ರೀಮಿಯರ್‌ ಶೋಗಳಿಂದ ಜನರ ಮಾತುಗಳಿಂದಲೇ ಸ್ಯಾಂಡಲ್ ವುಡ್‌ ಬಾಕ್ಸ್ ಆಫೀಸ್‌ ನಲ್ಲಿ 120 ಕೋಟಿ ರೂಪಾಯಿ ಬಾಚಿಕೊಂಡಂತಹ ಕನ್ನಡ ಸಿನಿಮಾ. ಏಕೆಂದರೆ ಕನ್ನಡದ ಒಂದು ಸಿನಿಮಾ 120 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದರೆ ಅದು ಸುಲಭದ ಮಾತಲ್ಲ, ಅಷ್ಟು ಉತ್ತಮ ವಿಮರ್ಶೆ ಪಡೆದಿದ್ದರಿಂದಲೇ ಸಿನಿಮಾ ಗೆಲುವು ಕಂಡಿದೆ! ಅದೆಷ್ಟರ ಮಟ್ಟಿಗೆ ಎಂದರೆ ಮೂರಕ್ಕೂ ಹೆಚ್ಚು ವಾರಗಳು ಸಿನಿಮಾಗೆ ಟಿಕೆಟ್‌ ಸಿಗದಂತೆ ಆದ. ಜನರು ಈ ರೇಂಜ್‌ ಗೆ ಸಿನಿಮಾ ನೋಡಿದ್ದರು. `ಸು ಫ್ರಮ್ ಸೋ’ ಜುಲೈ 25 ರಂದು ರಿಲೀಸ್‌ ಆಗಿತ್ತು. ಮೊದಲ ದಿನ ಈ ಚಿತ್ರ ಕೇವಲ 75 ಥಿಯೇಟರ್‌ ಗಳಲ್ಲಿ ರಿಲೀಸ್‌ ಆಗಿತ್ತು. ಎರಡನೇ ದಿನ, ಮೂರನೇ ದಿನಕ್ಕೆ ಥಿಯೇಟರ್‌ ಹಾಗೂ ಸ್ಕ್ರೀನ್‌ ಸಂಖ್ಯೆ ಜಾಸ್ತಿ ಆಗಿತ್ತು. ಚಿತ್ರದ ಕಲೆಕ್ಷನ್‌ ಕೂಡ ಜಾಸ್ತಿ ಆಗ್ತಾನೇ ಹೋಯಿತು.

ಮೂರೇ ಮೂರು ದಿನಗಳಲ್ಲಿ ಈ ಚಿತ್ರದ ಕಲೆಕ್ಷನ್‌ 6 ಕೋಟಿ ಆಗಿತ್ತು. ಹಾಗೆ ಈ ಚಿತ್ರ ಎರಡನೇ ವಾರ ಮಲೆಯಾಳಂ ಭಾಷೆಯಲ್ಲಿ ರಿಲೀಸ್‌ ಆಗಿತ್ತು. ಮೂರನೇ ವಾರ ತೆಲುಗು ಭಾಷೆಯಲ್ಲೂ ಈ ಚಿತ್ರ ರಿಲೀಸ್‌ ಆಗಿತ್ತು. ಅಲ್ಲೂ ಒಳ್ಳೆ ಅಭಿಪ್ರಾಯ ಪಡೆದುಕೊಂಡಿತ್ತು.

ಪ್ರತಿಭಾನ್ವಿತ ನಟ ನಿರ್ಮಾಪಕ ರಾಜ್‌ ಬಿ. ಶೆಟ್ಟಿ ಈ ಚಿತ್ರದ ನಿರ್ಮಾಪಕರು. ಜೆ.ಪಿ. ತುಮಿನಾಡ್‌ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾವನ್ನು ರೈಟರ್‌ ಬುದ್ಧ ಫಿಲಮ್ಸ್ ಬ್ಯಾನರ್‌ ಅಡಿ ರಾಜ್‌ ಬಿ. ಶೆಟ್ಟಿ, ಶಶಿಧರ್‌ ಶೆಟ್ಟಿ ಬರೋಡಾ, ರವಿ ರೈ ಕಳಸ ಸೇರಿ ನಿರ್ಮಾಣ ಮಾಡಿದ್ದಾರೆ. ಶನೀವ್ ‌ಗೌತಮ್, ಸಂಧ್ಯಾ ಅರಕೆರೆ, ಪ್ರಕಾಶ್‌ ತುಮಿನಾಡ್‌, ದೀಪಕ್‌ ರೈ ಪಣಾಜೆ, ಮೈಮ್ ರಾವ್ ದಾಸ್‌ ತಾರಾಬಳಗದಲ್ಲಿದ್ದಾರೆ. ರಾಜ್‌ ಬಿ. ಶೆಟ್ಟಿ ಬಂಡಾವಳ ಹೂಡು ಜೊತೆಗೆ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.

ಭರ್ಜರಿ ನಾಯಕ, ವಿಲನ್‌, ಪಟ್ಟಣ, ಸಮಸ್ಯೆಗಳು, ಅತಿರಂಜಿತ ಅಸಹಜ ದೃಶ್ಯಗಳಾವುದೂ ಇಲ್ಲಿ ಇಲ್ಲ. ಮೂಲಕಥೆಗಾರರು ಕರಾಳಿಯವರು. ಹಾಗಾಗಿ ಇದೊಂದು ಅಪ್ಪಟ ಕರಾವಳಿ ಸೊಗಡು ಹೊಂದಿರುವ ಸಿನಿಮಾ ಎನ್ನಬಹುದಾದರೂ, ಈ ಚಿತ್ರದ ಸಂಭಾಷಣೆಗಿಂತಲೂ ನಟರ ರಿಯಾಕ್ಷನ್‌ ಗಳು ಜನರನ್ನು ಹೆಚ್ಚು ನಗುವಂತೆ ಮಾಡಿತ್ತು. ಹೇಗೆಂದರೆ ಭಯ ಮತ್ತಿತರೆ ಸನ್ನಿವೇಶದಲ್ಲಿ ನಟರ ಆಂಗಿಕ ಅಭಿನಯ ನಗುವನ್ನು ತರಿಸುವಂತಿತ್ತು. ಹಳ್ಳಿ ಜೀವನ ಬಲ್ಲವರಿಗೆ ಅಲ್ಲಿನ ಪ್ರತಿಯೊಂದು ಪಾತ್ರ ತಮ್ಮ ಊರಿನಲ್ಲೂ ಇದೆ ಎಂದು ಭಾವಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಹಾಗೆ ನಗಿಸುತ್ತಲೇ ನಮ್ಮೊಳಗೊಂದು ಎಚ್ಚರವನ್ನು ಸಹ ಮೂಡಿಸುತ್ತದೆ.

ಒಟ್ಟಾರೆ ಎರಡು ಗಂಟೆ ಹದಿನೇಳು ನಿಮಿಷ ಕಳೆದದ್ದೇ ಗೊತ್ತಾಗುವುದಿಲ್ಲ. ಒಳ್ಳೆಯ ಟೀಮ್ ವರ್ಕ್‌ ಈ ಚಿತ್ರದ ಗೆಲುವಿಗೆ ಕಾರಣ. ರಾಜ್‌ ಬಿ ಶೆಟ್ಟಿ ಪಾತ್ರ ಚಿತ್ರದ ಅಚ್ಚರಿ. ಜೆಪಿ ತುಮಿನಾಡ್‌ ಮೊದಲ ಪ್ರಯತ್ನದಲ್ಲೇ ನಿರ್ದೇಶಕರಾಗಿ ಗೆದ್ದಿದ್ದಾರೆ.

ಇತ್ತೀಚೆಗೆ ಗ್ಲೋಬಲ್ ಬಾಕ್ಸ್ ಆಫೀಸ್‌ ವಿಚಾರದಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್‌ ಮಾಡಿದ ಕನ್ನಡ ಸಿನಿಮಾಗಳ ಲಿಸ್ಟ್ ಗೆ ರಾಜ್‌ ಶಟ್ರ ಸಿನಿಮಾ ಸೇರಿದೆ.

`ಕೆಜಿಎಫ್‌ ಚಾಪ್ಟರ್‌-2, ಕಾಂತಾರ, ಕೆಜಿಎಫ್‌ ಚಾಪ್ಟರ್‌-1, 777 ಚಾರ್ಲಿ, ವಿಕ್ರಾಂತ್‌ ರೋಣ’ ಲಿಸ್ಟ್ ಗೆ  `ಸು ಫ್ರಮ್ ಸೋ’ ಸಿನಿಮಾ ಸೇರಿದೆ. ಇದಲ್ಲದೇ, ಕಡಿಮೆ ಬಜೆಟ್‌ ನಲ್ಲಿ ನಿರ್ಮಾಣಗೊಂಡು ಬಾಕ್ಸ್ ಆಫೀಸ್‌ ನಲ್ಲಿ ಕಮಾಲ್ ‌ಮಾಡಿದ ಕೆಲವೇ ಸಿನಿಮಾಗಳ ಪಟ್ಟಿಯಲ್ಲೂ `ಸು ಫ್ರಮ ಸೋ’ ಸ್ಥಾನ ಪಡೆದುಕೊಂಡಿದೆ ಎಂದರೆ ಉತ್ಪ್ರೇಕ್ಷೆಯಲ್ಲ.

03_Malayalam-fil-'Lokah-Chapter-1--Chandra'

ಮಲೆಯಾಳಂ : ಲೋಕಾ : ಚಾಪ್ಟರ್ಚಂದ್ರಾ

ಈ ಚಿತ್ರ ಮಲೆಯಾಳಂ ಚಿತ್ರರಂಗಕ್ಕೆ ಹೊಸ ವ್ಯಾಖ್ಯಾನವನ್ನೇ ಬರೆದಿದೆ! ಇದರಲ್ಲಿ ಡಾರ್ಕ್‌ ಫ್ಯಾಂಟಸಿ, ಜಾನಪದ ಕತೆ, ಸೂಪರ್ ಹೀರೋ ಎಲಿಮೆಂಟ್‌, ಎಲ್ಲಾ ಕಲೆತು ಅಮೋಘ ಎನಿಸಿದೆ.

ಇದುವರೆಗೂ ಹಾಲಿವುಡ್‌ ನಲ್ಲಿ ಮಾತ್ರ ಸ್ತ್ರೀ ಪಾತ್ರಗಳು ಮಾತ್ರ ಸೂಪರ್‌ ಹೀರೋಗಳಾಗಿ ವೈಭವೀಕರಣಗೊಂಡಿರುವುದನ್ನು ಕಂಡಿದ್ದೇವೆ. ಆದರೆ ನಮ್ಮದೇ ಜಾನಪದ ಮೂಲದಿಂದ ಒಬ್ಬ ಸೂಪರ್‌ ಹೀರೋ ಹುಟ್ಟಿ ಬಂದು ಲೆಜೆಂಡರಿ ಎನಿಸುವುದು ಇದೇ ಮೊದಲು. ಇದರಲ್ಲಿ ಫೇರಿ ಟೇಲ್ಸ್, ಓಡಿಯಾನ್ಸ್, ಕಥಾನಾರ್ಸ್‌, ಚಾತಾನ್‌, ಎಲ್ಲ ಹೊಸತಾಗಿವೆ. ಪ್ರಿಯದರ್ಶನ್‌ ಇಲ್ಲಿ ತಮ್ಮ ಅಮೋಘ ನಟನೆಯಿಂದ ಆಧುನಿಕ ನಾಯಕಿ ಕಲ್ಯಾಣಕಟ್ಟು ನೀಲಿ ಆಗಿ ಮಿಂಚಿದ್ದಾರೆ.

ಮಲೆಯಾಳಂ ಚಿತ್ರರಂಗಕ್ಕೆ ಖಂಡಿತಾ ಒಬ್ಬ ಮಹಿಳಾ ಸೂಪರ್‌ ಹೀರೋ ಉದಯ ಆಗಿದೆ ಎಂದು ಸಾಬೀತುಪಡಿಸಿದ್ದಾರೆ. `ಲೋಕಾ’ ಮೂಲಕ ಸೇಡು ತೀರಿಸಿಕೊಳ್ಳುವ `ಆ್ಯವೆಂಜರ್ಸ್‌’ ಪರಂಪರೆಗೆ ನಾಂದಿ ಹಾಡಿದ್ದಾರೆ.

ಡಾಮ್ನಿಕ್‌ ಅರುಣ್‌ ನಿರ್ದೇಶಿಸಿರುವ ಈ ಚಿತ್ರದಲ್ಲಿ ಕಲ್ಯಾಣಿ, ನಾಸ್ಲೇನ್‌ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರ ಇದುವರೆಗೂ 200 ಕೋಟಿ ಬಾಚಿಕೊಂಡಿದೆ. ನಟಿ ಶಾಂತಿ ಬಾಲಚಂದ್ರನ್‌ ಇದಕ್ಕೆ ಚಿತ್ರಕಥೆ ಒದಗಿಸಿದ್ದಾರೆ, ಇವರ ಪ್ರತಿಭೆ ಇಲ್ಲಿ ಅದ್ಭುತವಾಗಿ ಬಳಕೆಯಾಗಿದೆ. ಬರವಣಿಗೆಯಿಂದ ಪ್ರಮೋಶನ್ಸ್ ವರೆಗೂ ಈಕೆ ಇಲ್ಲಿ ಪ್ರಧಾನ ಪಾತ್ರ ವಹಿಸಿದ್ದರೆ.

ಖ್ಯಾತ ನಟ ದುಲ್ಕರ್‌ ಸಲ್ಮಾನ್‌ (ಹಿರಿಯ ನಟ ಮಮ್ಮುಟಿಯರ ಮಗ) ಈ ಚಿತ್ರದ ನಿರ್ಮಾಪಕ. ಸಾಧಾರಣ ಹೆಣ್ಣಾದ ಚಂದ್ರಾ ತನ್ನ ಗತಜೀವನದಲ್ಲಿ ನೀಲಿಯಾಗಿ ಗುರುತಿಸಲ್ಪಟ್ಟು ಮಾನಾವತೀತ ಶಕ್ತಿ ಉಳ್ಳವಳಾಗಿರುತ್ತಾಳೆ. ಆಧುನಿಕ ನಾಗರಿಕ ತೊಂದರೆಗಳ ನಡುವೆ ಈ ಚಿತ್ರ ಮಾನವಾತೀತ ಜೀವಗಳು, ಪ್ರಾಚೀನ ಪರಂಪರೆ, ಪ್ರಸ್ತುತ ಲಂಚಾವತಾರದ ಬಗ್ಗೆಯೂ ಮಾತನಾಡುತ್ತದೆ.

ಅದ್ಭುತ ಚಿತ್ರಕಥೆಯೊಂದಿಗೆ ಉನ್ನತ ಪ್ರಾದೇಶಿಕತೆಯ ನಂಟಿರುವ ಈ ಚಿತ್ರ `ಲೋಕಾ’ ಕೇರಳದ ಜಾನಪದ ಕಥೆಯನ್ನು ಸಮರ್ಥವಾಗಿ ಸೆಲ್ಯುಲಾಯ್ಡ್ ಗೆ ಇಳಿಸಿದೆ. ತನ್ನ ಮೂಲ ಸಂಸ್ಕೃತಿಯ ಗಟ್ಟಿ ತಳಹದಿಯಿಂದ, ಸ್ತ್ರೀಪ್ರಧಾನ ಚಿತ್ರವಾಗಿ ಇದು ಆಕರ್ಷಿಸುತ್ತದೆ. ಚಂದ್ರಾ ಪಾತ್ರ ಒಬ್ಬ ಸೂಪರ್‌ ಹೀರೋ ಮಾತ್ರವಲ್ಲದೆ ನೋವು, ಶಕ್ತಿ, ನೈತಿಕ ಸಂರ್ಘಗಳ ಚಿತ್ರಣವಾಗಿದೆ.

ಇಲ್ಲಿ ಕಲ್ಯಾಣಿಯ ನಟನೆಯೇ ಮೂಲಾಧಾರ. ಜೊತೆಗೆ ನಿಮೀಶ್‌ ರವಿಯ ಸಿನಿಮಾಟೋಗ್ರಫಿ ಅತಿ ರಿಚ್‌ ಆಗಿದೆ, ಜೇಕಬ್ಸ್ ಬೆಜಾಯ್‌ ರ ಸಂಗೀತ ಸಹ ಅಷ್ಟೇ ಸ್ಕೋರಿಂಗ್‌ ಆಗಿದೆ. ಈ ಚಿತ್ರದ ಎಫೆಕ್ಟ್ಸ್ ಸುಮಾರಾದ ಬಜೆಟ್‌ ನಲ್ಲಿ ರೂಪುಗೊಂಡಿದ್ದರೂ, ಇಲ್ಲಿನ ಎಲಿಮೆಂಟ್ಸ್ ನಂಬಲರ್ಹ ಆಗಿವೆ, ಮ್ಯಾಜಿಕ್‌ ಮಾಡುತ್ತವೆ. ಕೆಲವು ದೃಶ್ಯಗಳು ಎಳೆದಂತಿದ್ದರೂ ಕೆಲವು ಭವಿಷ್ಯದ ನಿರ್ಣಯಕ್ಕೆ ಬಿಟ್ಟಂತಿವೆ. ಕಥೆ ಹೇಳುವ ರೀತಿ ಇಲ್ಲಿ ಚಮತ್ಕಾರಿಕ! ಇದರ ಆರಂಭವೇ ಅಷ್ಟು ರೋಚಕ. ಈ ಚಿತ್ರ ಪ್ರಾದೇಶಿಕತೆಯ ನೆಲೆಗಟ್ಟಿನಲ್ಲಿ ಬ್ಲಾಕ್‌ ಬಸ್ಟರ್‌ ಆಗಿ ಮೂಡಿದ್ದು, ಅದ್ಭುತ ಪ್ಯಾಂಟಸಿ ಲೋಕಕ್ಕೆ ಕೊಂಡೊಯ್ಯುತ್ತದೆ. ಸ್ತ್ರೀಪ್ರಧಾನ ಚಿತ್ರಗಳಿಗೆ ಇದು ಅದ್ಭುತ ಮೈಲಿಗಲ್ಲಾಗಲಿದೆ, ಮಲೆಯಾಳಂ ಚಿತ್ರರಂಗಕ್ಕೆ ಪ್ರಮುಖ ತಿರುವಾಗಿದೆ. ಚಿತ್ರದ ಅಂತಿಮ ದೃಶ್ಯಗಳು ಮನೋಜ್ಞವಾಗಿದ್ದು, ಪ್ರೇಕ್ಷಕರು ಇದರ ಎರಡನೇ ಭಾಗಕ್ಕೆ ತುದಿಗಾಲ ಮೇಲೆ ಕಾಯುವಂತಾಗಿದೆ.

04_Telugu-Film-'Mirai'

ತೆಲುಗು : ಮಿರಾಯ್

ಕಳೆದ ತಿಂಗಳಷ್ಟೇ ಬಿಡುಗಡೆಗೊಂಡ ಅಪ್ಪಟ ತೆಲುಗು ಪ್ಯಾನ್‌ ಇಂಡಿಯಾ ಚಿತ್ರ `ಮಿರಾಯ್‌’ ಈ ಲೇಖನ ಅಚ್ಚಿಗೆ ಹೋಗುವ ಹೊತ್ತಿಗೆ ಮೊದಲ 4 ದಿನಗಳಲ್ಲೇ 51 ಕೋಟಿಗೂ ಮೀರಿ ಹಣ ಬಾಚಿಕೊಂಡಿತ್ತು. ಇದರ ಮೂಲ ತೆಲುಗು ಅವತರಣಿಕೆ 4.69 ಕೋಟಿ ಗಳಿಸಿದ್ದರೆ, ಹಿಂದಿ ಅವತರಣಿಕೆ 1.65 ಕೋಟಿಗೂ ಮೀರಿ ಗಳಿಸಿತ್ತು.`ಮಿರಾಯ್‌’ ಚಿತ್ರ ಪೌರಾಣಿಕ, ಆ್ಯಕ್ಷನ್‌, ಫ್ಯಾಂಟೆಸಿ ಎಲಿಮೆಂಟ್ಸ್ ಎಲ್ಲವನ್ನೂ ಒಳಗೊಂಡಿವೆ. ಇದರ ಮೂಲ ಕಥೆ : ನಾಯಕ ವೇದ ಪ್ರಜಾಪ್ರತಿ ಒಬ್ಬ ಅನಾಥನಾಗಿದ್ದು, ಸಾಮ್ರಾಟ್ ಅಶೋಕ ಚಕ್ರವರ್ತಿಯ 9 ಧರ್ಮಗ್ರಂಥಗಳ ಭವಿಷ್ಯ ಕಾಪಾಡುವ ಸನ್ನಿವೇಶಕ್ಕೆ ಜೊತೆಯಾಗುತ್ತಾನೆ.

ಈ ಧರ್ಮಗ್ರಂಥಗಳು ಅತೀಂದ್ರಿಯ ಶಕ್ತಿಗಳನ್ನು ಹೊಂದಿದ್ದು ಮುಂದೆ `ಕಪ್ಪು ಖಡ್ಗ’ದ ಜೊತೆಗೆ ಥಳುಕು ಹಾಕಿಕೊಳ್ಳುತ್ತದೆ. ಈ ರೀತಿ ವೇದ ಇದರೊಂದಿಗೆ ಪ್ರಯಾಣಿಸುತ್ತಾ, ಇದರ ಸಂಶೋಧನೆ ಹಾಗೂ ಉಳಿದುಕೊಳ್ಳುವಿಕೆಯೇ ಚಿತ್ರದ ನಿರೂಪಣಾ ವಿಧಾನ ಆಗಿದೆ. ಈ ಮೂಲಕ ನಿರ್ದೇಶಕರು `ಮಿರಾಯ್‌’ನ ಜಿಜ್ಞಾಸೆ ತಣಿಸಲು ಯತ್ನಿಸುತ್ತಾರೆ.

ಈ ಚಿತ್ರದ ಪ್ರಧಾನ ಪಾತ್ರದಲ್ಲಿ ತೇಜಾ ಸಜ್ಜಾ ಬಾಹುಬಲಿಯ ಅಪರಾವತಾರ ಎಂಬಂತೆ ನಟಿಸಿದ್ದಾರೆ. ಜೊತೆಗೆ ಮಂಚು ಮನೋಜ್‌, ರಿತಿಕಾ ನಾಯಕ್‌, ಶಿಯಾ ಶರಣ್‌, ಜಗಪತಿ ಬಾಲು, ಜಯರಾಮ್ ಮುಂತಾದವರು ನಟಿಸಿದ್ದಾರೆ. ಈ ಪ್ರಾಜೆಕ್ಟ್ ನ್ನು `ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ ಅಡಿ ರಿಲೀಸ್‌ ಮಾಡಲಾಗಿದ್ದು, ಸಂಗೀತ ನಿರ್ದೇಶಕರು ಗೌರಾ ಹರಿ.

05_Marathi-film-'Ata-Thambachha-Naah'

ಮರಾಠಿ : ಆತಾ ಥಾಂಬಾಯಚಂ ನೈ

ಈ ಮರಾಠಿ ಚಿತ್ರ `ಆತಾ ಥಾಂಬಾಯಚಂ ನೈ’ ಮೂಲತಃ ಮುಂಬೈನ ಮಹಾನಗರ ಪಾಲಿಕೆಯ ನಗರದ ನೈರ್ಮಲ್ಯ ಕಾಪಾಡುವ  ಪೌರ ಕಾರ್ಮಿಕ ಸಿಬ್ಬಂದಿಯ ಕುರಿತಾದುದು. ಒಬ್ಬ ಹೃದಯವಂತ ಅಸಿಸ್ಟೆಂಟ್‌ ಎಂಜಿನಿಯರ್‌ ಉದಯ್‌, ತನ್ನ ಸಿಬ್ಬಂದಿಯನ್ನು ಕೇವಲ ಕ್ಲೀನಿಂಗ್‌ ನೌಕರರು ಎಂದು ನೋಡುವುದಿಲ್ಲ, ಅವರಿಗೆ 10ನೇ ತರಗತಿ ಪಾಸಾಗಲು ಈವ್ನಿಂಗ್‌ ಸ್ಕೂಲ್ ‌ನಲ್ಲಿ ಕಲಿಸುತ್ತಾರೆ.

ಸುಖಾರಾಮ್ ಮಂಚಿಕರ್‌ (ಭರತ್‌ ಜಾಧವ್) 35 ವರ್ಷದಿಂದ ಮೋರಿ ಶುಚಿಗೊಳಿಸುವವನು, ಇಂದಲ್ಲ ನಾಳೆ ತನ್ನ ಜೀವನಶೈಲಿ ಸುಧಾರಿಸಲಿದೆ ಎಂದು ನಂಬುವ ವ್ಯಕ್ತಿ. ಮಾರುತಿ ಕದಮ್ (ಸಿದ್ದಾರ್ಥ ಜಾಧ್‌) 8ನೇ ತರಗತಿ ಫೇಲಾಗಿ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಲು ಹೋರಾಡುವ ತಂದೆ, ಜಯಶ್ರೀ ಅಪ್ಸರಾ (ಪ್ರಾಜಕ್ತಾ ಹನಮಘರ್‌, ಕಿರಣ್‌ ಖೋಜೆ) ಕಸ ಬಳಿಯುವ ಮಹಿಳೆಯರು, ನೀಲೇಶ್‌ ಮಾಳಿ ಸರ್‌ (ಓಂ ಭತಕರ್‌) ಎಲ್ಲರ ಮಾರ್ಗದರ್ಶಿ ಶಿಕ್ಷಕ, ಉದಯ್‌ ಕರೂರ್‌ ಕರ್‌ (ಆಶುತೋಶ್‌ ಗೋವಾರಿಕರ್‌)  ವಯಸ್ಕರ ಶಿಕ್ಷಣ ಪಡೆಯಬೇಕೆಂದು ಈ ಸಿಬ್ಬಂದಿಯನ್ನು ಪ್ರೋತ್ಸಾಹಿಸುವ ಅಧಿಕಾರಿ.

ಈ ನಗರಪಾಲಿಕೆಯ ಸಿಬ್ಬಂದಿ ದಿನವಿಡೀ ಕೊಳಕು ಗಲೀಜಿನಲ್ಲಿ ಕೆಲಸ ಮಾಡುತ್ತಾ, ಸಮಾಜದ ತಿರಸ್ಕಾರ ಸಹಿಸುತ್ತಾರೆ. ಆದರೂ ಅವರು `ವಯಸ್ಕರ ಶಿಕ್ಷಣ’ ಪಡೆಯಲು ಕಠಿಣ ಸಂಘರ್ಷ ಎದುರಿಸುತ್ತಾರೆ. ಈ ಚಿತ್ರ ಅವರ ಭಾವನೆ, ಸಂಘರ್ಷ, ಸ್ವಾಭಿಮಾನದ ಕುರುಹಾಗಿದೆ.

ಭರತ್‌ ಜಾಧವ್ ಗಂಭೀರ ಪಾತ್ರದಲ್ಲಿ ಜಬದರ್ಸ್ತಾಗಿ ನಟಿಸಿದ್ದಾರೆ. ಸಿದ್ಧಾರ್ಥ್‌ ಜಾಧವ್ ಶಾಂತ, ಪ್ರಭಾವಿ ನಟನೆ ನೀಡಿದ್ದಾರೆ. ಓಂ  ಭುತಕರ್‌ ಬಿಲ್ ‌ಕುಲ್ ‌ಅಸಲಿ ಶಿಕ್ಷಕರಂತೆ ಕಾಣಿಸುತ್ತಾರೆ. ಆಶುತೋಶ್‌ ತಮ್ಮ ಇರುವಿಕೆಯ ದಟ್ಟ ಪ್ರಭಾವ ಬೀರುತ್ತಾರೆ. ಉಳಿದವರೆಲ್ಲರೂ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈ ಚಿತ್ರದ ಕ್ಯಾಮೆರಾ ವರ್ಕ್‌, ಸಂಗೀತ, ಸಂಕಲನ ಉತ್ತಮ ಮಟ್ಟದ್ದಾಗಿದೆ. ಕೆಲವು ದೃಶ್ಯಗಳನ್ನು ಕತ್ತರಿಸಿ ಸಣ್ಣಗಿರಿಸಬಹುದಾಗಿತ್ತು, ಆದರೆ ಚಿತ್ರಕಥೆ ಉತ್ತಮವಾಗಿದೆ. ಚಿತ್ರದ ಹಾಡುಗಳು ಹೈಲೈಟ್‌ ಎನಿಸಿವೆ.

ಕಸ ಬಳಿಯುವ ಬಡ ಸಿಬ್ಬಂದಿಯ ಈ ಕಥೆ ನಿಜಕ್ಕೂ ಪ್ರೇರಣಾದಾಯಕ. ದೊಡ್ಡ ಮಟ್ಟದ ಸ್ಟಾರ್ಸ್‌ ಇಲ್ಲ, ಆದರೆ, ಇಲ್ಲಿ ಕಥೆಯೇ ಹೀರೋ! ವೀಕ್ಷಕರ ಮೆಚ್ಚುಗೆ, ಚಪ್ಪಾಳೆ, ಸೀಟಿಗಳೇ ಈ ಚಿತ್ರದ ಯಶಸ್ಸಿಗೆ ಸಾಕ್ಷಿ.

06_Gujati_Movie-Bachu_Ni_Benpani

ಗುಜರಾತಿ : ಬಚು ನೀ ಬೇನ್ಪಾಣಿ

ಇದೊಂದು ಅದ್ಭುತ ಕಾಮಿಡಿ ಚಿತ್ರವಾಗಿ ಮೂಡಿಬಂದಿದೆ. ಒಬ್ಬ ಜಿಪುಣನ ಅತಿಯಾದ ಹೆಲ್ತ್ ಕಾನ್ಶಿಯಸ್‌ ನೆಸ್‌, ಪ್ರೇಕ್ಷಕರನ್ನು ಚಿತ್ರದುದ್ದಕ್ಕೂ ನಗೆಗಡಲಲ್ಲಿ ತೇಲಿಸುತ್ತದೆ. ಬಚು ಬಾಫೇದರಾ ಎಂಬಾತನಿಗೆ, ಬ್ಯಾಂಗ್‌ ಕಾಕ್‌ ಗೆ ಫ್ರೀ ಟ್ರಿಪ್‌ ಹೋಗಲು ಅವಕಾಶ ಸಿಗುತ್ತದೆ. ಆತ ಅಲ್ಲಿ ಒಬ್ಬ ರಹಸ್ಯಮಯ ಮಹಿಳೆಯನ್ನು ಸಂಧಿಸಿ ಏನೆಲ್ಲ ಭಾನಗಡಿ ನಡೆಸಿದ ಎಂಬುದೇ ತೆರೆ ಮೇಲಿನ ಕಥೆ. ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಸಿದ್ದಾರ್ಥ್‌ ರಣದೇರಿಯಾ ಹಾಗೂ ರತ್ನಾ ಪಾಠಕ್‌ ಶಾಹ್‌ ಇದ್ದಾರೆ. ಈ ಚಿತ್ರ ವಿಮರ್ಶಕರ ಮೆಚ್ಚುಗೆ ಗಳಿಸಿ ತನ್ನ ಭಾವನಾತ್ಮಕ ತುಡಿತಕ್ಕಾಗಿ ಶಭಾಷ್‌ ಗಿರಿ ಗಿಟ್ಟಿಸಿದೆ. ಇವರಿಬ್ಬರ ನಡುವಿನ ಕೆಮಿಸ್ಟ್ರಿ, ಜೀವನವನ್ನು ಪರಿಪೂರ್ಣವಾಗಿ ಆನಂದಿಸಬೇಕು ಎಂಬ ಮೆಸೇಜ್‌, ಕುಟುಂಬದವರೆಲ್ಲರೂ ಒಟ್ಟಾಗಿ ಕುಳಿತು ಈ ಚಿತ್ರ ಎಂಜಾಯ್‌ ಮಾಡುವಂತಾಗಿದೆ. ಸಿದ್ಧಾರ್ಥ್ ಮೂಲತಃ ಒಬ್ಬ ನುರಿತ ಹಾಸ್ಯನಟರಾಗಿದ್ದು, ತಮ್ಮ ಕಲಾನೈಪುಣ್ಯತೆಯಿಂದ ಗುಜರಾತ್‌ ರಾಜ್ಯದ ನಾಟಕ, ಸಿನಿಮಾಗಳಲ್ಲಿ ಈಗಲೂ ಮಿಂಚುತ್ತಿದ್ದಾರೆ.

07_Tamil-Moivie_Tourist-Family

ತಮಿಳು : ಟೂರಿಸ್ಟ್ ಫ್ಯಾಮಿಲಿ

ಇತ್ತೀಚೆಗೆ ಬಿಡುಗಡೆಯಾದ ತಮಿಳು ಚಿತ್ರಗಳಲ್ಲಿ `ಟೂರಿಸ್ಟ್ ಫ್ಯಾಮಿಲಿ’ ಲೋ ಬಜೆಟ್‌ ಚಿತ್ರವಾಗಿದ್ದು, ಎಲ್ಲರ ಪ್ರೀತಿಪಾತ್ರವಾಗಿದೆ. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೇ ಅಭಿಶಾನ್‌ ಜೀವಿಂದ್‌, ಶ್ರೀಲಂಕಾದಿಂದ ತಮಿಳುನಾಡಿಗೆ ಬಂದಿಳಿದ ಒಂದು ಪ್ರವಾಸಿ ಕುಟುಂಬದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿ ಗೆದ್ದಿದ್ದಾರೆ. ಹೊಟ್ಟೆಪಾಡಿಗಾಗಿ ಅನಧಿಕೃತವಾಗಿ ಹೀಗೆ ಬೇರೆ ದೇಶಕ್ಕೆ ಬಂದಿಳಿಯುವುದು ಕಾನೂನುಬಾಹಿರ ಎನಿಸುತ್ತದೆ.

ಈ ಕುಟುಂಬ ತಮಿಳುನಾಡಿಗೆ ಬಂದಿಳಿದಾಗ, ರಾಮೇಶ್ವರದಲ್ಲಿ ಒಂದು ಬಾಂಬ್‌ ಬ್ಲಾಸ್ಟ್ ದುರಂತ ನಡೆಯುತ್ತದೆ. ಪೊಲೀಸರು ಇವರೇ ಅದನ್ನು ನಡೆಸಿರಬಹುದೆಂದು ಸಾಕ್ಷಿಗಾಗಿ ಹುಡುಕಾಡುತ್ತಿರುತ್ತಾರೆ. ಇದಾದ ನಂತರ ಏನಾಯಿತು ಎಂಬುದೇ ಈ ಚಿತ್ರದ ಸ್ವಾರಸ್ಯ. ಇಲ್ಲಿ ಕೌಟುಂಬಿಕ ಜೀವನದ ಕಾಮಿಡಿ ಬಲು ಅಚ್ಚುಕಟ್ಟಾಗಿ ಮೂಡಿಬಂದಿದೆ. ಈ ಚಿತ್ರದ ಪೋಷಕ ಪಾತ್ರಗಳು ಚಿತ್ರದ ಯಶಸ್ಸಿಗೆ ಹೆಚ್ಚಿನ ನೆರವು ನೀಡಿವೆ.

ಇಲ್ಲಿನ ಪಾತ್ರಗಳು ತುಸು ವಿಚಿತ್ರವಾಗಿದ್ದರೂ, ಒಟ್ಟಾರೆ ಕುಟುಂಬದವರೆಲ್ಲ ಕುಳಿತು ಚಿತ್ರ ಎಂಜಾಯ್‌ ಮಾಡಲು ಅಡ್ಡಿಯಿಲ್ಲ. ನಿಜಕ್ಕೂ ಈ ಚಿತ್ರ ಆ ಮಟ್ಟದ ಎಗ್ಸೈಟಿಂಗ್‌ ಉಳಿಸಿಕೊಂಡಿದೆ. 2 ದೇಶಗಳ ನಡುವಿನ ಯುದ್ಧ, ಹೊಡೆದಾಟ, ಆರ್ಥಿಕ ಅಭದ್ರತೆ, ಪರದೇಶಗಳಿಂದ ನಮ್ಮ ದೇಶಕ್ಕೆ ಅನಧಿಕೃತವಾಗಿ ನುಗ್ಗಿ ಬರುತ್ತಿರುವ ನುಸುಳುಕೋರರ ಸಮಸ್ಯೆಗಳು ಇತ್ಯಾದಿ ಈ ಚಿತ್ರದ ಭಾಗವಾಗಿದೆ. ವಿಶ್ವದೆಲ್ಲೆಡೆಯ ಮಾನವತಾವಾದಿಗಳು ಈ ನಿಟ್ಟಿನಲ್ಲಿ ಸರ್ಕಾರದ ನಿಲುವನ್ನು ಖಂಡಿಸುತ್ತಿದ್ದಾರೆ. ಈ ಚಿತ್ರವನ್ನು ಇಂಥ ವಿಷಯದ ಮೇಲೆ ಆಳವಾಗಿ ಚಿತ್ರಸಲಾಗಿದ್ದರೂ, ತೀರಾ ಆರ್ಟ್‌ ಫಿಲ್ಮ್ ಆಗಿ ಇದು ಬೋರ್‌ ಹೊಡೆಸದು. ಬದಲಿಗೆ ಕುಟುಂಬದವರೆಲ್ಲರೂ ನೋಡಿ ನಕ್ಕು ನಲಿಯುವ ಹಾಸ್ಯಮಯ ಚಿತ್ರವಾಗಿದೆ.

ಈ ಚಿತ್ರ 2025ರಲ್ಲಿ ಇದುವರೆಗೂ ಬಿಡುಗಡೆಯಾಗಿರುವ ಭಾರತೀಯ ಲೋ ಬಜೆಟ್‌ ಚಿತ್ರಗಳಲ್ಲೇ, ಅತಿ ಹೆಚ್ಚು ಕೋಟಿ ಹಣ ಬಾಚಿರುವ ಚಿತ್ರವೆನಿಸಿದೆ. ಇತ್ತೀಚೆಗೆ ಬಲು ಅಪರೂಪ ಆಗುತ್ತಿರುವ ಕೌಟುಂಬಿಕ ಚಿತ್ರಗಳಲ್ಲಿ ಇದು ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡಿದೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ