ಒಂದು ಬಡ ಮಧ್ಯಮ ವರ್ಗದ ಹಳ್ಳಿಯಲ್ಲಿ ಜನಿಸಿ ದಿಲ್ಲಿಯಲ್ಲಿ ಯು.ಪಿ.ಎಸ್.ಸಿ ಗೆದ್ದ ಚೈತ್ರಾಳ ಜೈತ್ರಯಾತ್ರೆ ನೋಡೋಣ ಬನ್ನಿ…….
ಯು.ಪಿ.ಎಸ್.ಸಿ ಪರೀಕ್ಷೆಯನ್ನು ಸಾಮಾನ್ಯಾವಾಗಿ `ಭಾರತದ ಕಠಿಣ ಮತ್ತು ಪ್ರತಿಷ್ಠಿತ ಪರೀಕ್ಷೆ’ ಎಂದು ಕರೆಯುತ್ತಾರೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಖಿಲ ಭಾರತ ಸೇವೆಗಳಾದ ಐಎಎಸ್, ಐಪಿಎಸ್, ಐಎಫ್‌ಎಸ್, ಸಿಎಸ್ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಪರೀಕ್ಷೆಗಳನ್ನು ಮತ್ತು ಸಂದರ್ಶನವನ್ನು ನಡೆಸಿ ಆಯ್ಕೆ ಮಾಡುತ್ತದೆ. ಅದಕ್ಕಾಗಿ ಸಿಎಸ್‌ಸಿ, ಇಎಸ್‌ಸಿ, ಐಎಸ್‌ಎಸ್‌ಮತ್ತು ಇತರ ಕೇಂದ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ.
ನಮ್ಮ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಆವಲತ್ತೂರು ಗ್ರಾಮದ ಚೈತ್ರಾ, ಇಂತಹ ಕಠಿಣ ಪರೀಕ್ಷೆಯನ್ನು ಸತತ ಪ್ರಯತ್ನಗಳೊಂದಿಗೆ ಪ್ರಯತ್ನಿಸಿ, ಉತ್ತೀರ್ಣರಾಗಿ 31ನೇ ರಾಂಕ್ ಪಡೆದ ಯಶೋಗಾಥೆ ನೋಡೋಣ ಬನ್ನಿ.
ವೈಯಕ್ತಿಕ ಹಿನ್ನೆಲೆ
ಮೊದಲು ನಿಮ್ಮ ಪರಿಚಯವನ್ನು ಮಾಡಿಕೊಡಿ.
ನಾನು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು ಆವಲತ್ತೂರು ಗ್ರಾಮ, ನಮ್ಮ ತಾಯಿ ಜಯಲಕ್ಷ್ಮಿ ಮತ್ತು ತಂದೆ ಮಹದೇವೇಗೌಡ ವ್ಯವಸಾಯಗಾರ ಕುಟುಂಬದಿಂದ ಬಂದಿದ್ದು. ನನ್ನ ಪ್ರಾರಂಭಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆದದ್ದು. ನಮ್ಮ ಸ್ವಗ್ರಾಮದಲ್ಲೇ ಒಂದರಿಂದ ನಾಲ್ಕನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ಹಾಗೂ ನಾನು ನಮ್ಮ ಊರಿನ ಸಮೀಪಕ್ಕೆ ಇವರು ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಶಾಲಾ ಕಾಲೇಜಿನ ವಿದ್ಯಾಭ್ಯಾಸ ಅಂದರೆ ಪ್ರೌಢ ಕೆ.ಎಸ್.ಎನ್ ಶಾಲೆ ಮತ್ತು ಕಾಲೇಜು ಡಿ.ಬಿ.ಜೆ.ಸಿ ಪಿ.ಯು.ಸಿಯವರೆಗೆ ಓದಿದ್ದು.

ಎಂಜಿನಿಯರಿಂಗ್ ಆಯ್ಕೆ ಮಾಡಲು ಕಾರಣವೇನು?
ಎಲ್ಲರಂತೆ ನಾನೂ ಕೂಡ ಮುಂದೆ ಸಹಜವಾಗಿಯೇ ಪದವಿ ಎಂದರೆ ಬಿ.ಎಸ್ಸಿ ಮಾಡಲು ನಿರ್ಧರಿಸಿದ್ದು. ಆಕಸ್ಮಿಕವಾಗಿ ಎಂಜಿನಿರಿಂಗ್ ಗಾಗಿ ಎಂಟ್ರೆನ್ಸ್ ಪರೀಕ್ಷೆ ಎದುರಿಸಿದ್ದು. ಅದರಲ್ಲಿ ಉತ್ತಮ ಅಂಕ ಬಂದಿದ್ದರಿಂದ ಈ ವಿದ್ಯಾಭ್ಯಾಸವನ್ನೇ ಆಯ್ಕೆ ಮಾಡಿಕೊಂಡೆ. ಎಟಿಎಂಇ ಕಾಲೇಜ್ ಆಫ್ ಎಂಜಿನಿಯರಿಂಗ್ ಮೈಸೂರ್ ನಲ್ಲಿ ಪ್ರವೇಶ ಪಡೆದೆ. ಪ್ರಾರಂಭದಲ್ಲಿ ನನಗೆ ವೈಯಕ್ತಿಕ ವಿವರಗಳನ್ನು ಇಂಗ್ಲಿಷ್ ನಲ್ಲಿ ಕೊಡಲು ಕಷ್ಟವೇ ಆಗಿತ್ತು. ಆದರೂ ನನ್ನ ಗುರುಗಳ ಮತ್ತು ಮನೆಯವರ ಸಹಕಾರದಿಂದ ಕಲಿಯಬೇಕು ಏನಾದರೂ ಸಾಧಿಸಬೇಕು ಎನ್ನುವ ಹಂಬಲ ಇದ್ದುದರಿಂದ ಶ್ರದ್ಧೆಯಿಟ್ಟು ಓದಲು ಪ್ರಾರಂಭಿಸಿದೆ.
ಹಾಲು ಉತ್ಪಾದಕರ ಸಹಕಾರ ಸಂಘದವರು ಉಚಿತವಾಗಿ ಹಾಸ್ಟೆಲ್ ನಡೆಸುತ್ತಿದ್ದರು. ಇದು ಕೇವಲ ಹಾಲು ಉತ್ಪಾದಕರಿಗೆ ಮಾತ್ರ ಇದ್ದದ್ದು, ಇದನ್ನು ನಾನು ಬಳಸಿಕೊಂಡೆ, ನಾನು ಅಲ್ಲೇ ಸೇರಿ ನನ್ನ ಓದನ್ನು ಮುಂದುವರಿಸಿ ಎಂಜಿನಿಯರಿಂಗ್ ನಲ್ಲಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ಪಡೆದು ಟಾಪರ್ ಆಗಿದ್ದೆ. ನಮ್ಮ ಕುಟುಂಬದಲ್ಲಿ ಪದವಿ ಪಡೆದದ್ದು ನಾನೇ ಮೊದಲು.
ಯು.ಪಿ.ಎಸ್.ಸಿ/ಇ.ಎಸ್.ಇ ಬರೆಯಬೇಕು ಎಂಬ ಕನಸು ಹೇಗೆ ಹುಟ್ಟಿತು?
ಗುರುಗಳ ಸಲಹೆಯ ಮೇರೆಗೆ ಎಂಜಿನಿಯರಿಂಗ್ ನಲ್ಲಿ ಒಳ್ಳೆಯ ಅಂಕಗಳು ಬಂದಿದ್ದರಿಂದ ಎಂ.ಟೆಕ್ ಮಾಡಲು ಎಂಟ್ರೆನ್ಸ್ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ನಾನು ಹೈದರಾಬಾದಿಗೆ ಹೋದೆ. ಗೇಟ್ ಐಇಎಸ್ ಪರೀಕ್ಷೆಗಳನ್ನು ಬರೆಯಲು ಎರಡು ವರ್ಷಗಳ ಕಲಿಕೆಯ ಜೊತೆಗೆ ಆನ್ ಲೈನ್ ಟ್ಯೂಟರ್ ಆಗಿ ಕೆಲಸ ಮಾಡುತ್ತಾ ನನ್ನ ಓದನ್ನು ಮುಂದುವರಿಸುವುದರ ಜೊತೆಗೆ ನನ್ನ ಖರ್ಚು ವೆಚ್ಚಗಳನ್ನು ನಾನೇ ಭರಿಸುತ್ತಿದ್ದೆ. ಹೀಗೆ ಮುಂದುವರಿಯುವ ಹಾದಿಯಲ್ಲಿ ಅಲ್ಲಿ ತರಬೇತಿ ಕೇಂದ್ರಗಳಲ್ಲಿ ಇ.ಎಸ್.ಇ (ಎಂಜಿನಿಯರಿಂಗ್ ಸರ್ವೀಸ್ ಎಗ್ಸಾಮಿನೇಶನ್) ಬಗ್ಗೆ ಸ್ಪಷ್ಟ ಅರಿವು ಉಂಟಾಯಿತು. ಅದಕ್ಕಾಗಿ ಶ್ರದ್ಧೆಯಿಟ್ಟು ಪ್ರಯತ್ನಿಸಿದೆ.

ತಯಾರಿ ಪ್ರಯಾಣ
ಇ.ಎಸ್.ಇ ತಯಾರಿಯನ್ನು ನೀವು ಹೇಗೆ ಆರಂಭಿಸಿದಿರಿ?
ಪ್ಲೇಸ್ ಮೆಂಟ್ ಸಮಯದಲ್ಲಿ ಗೇಟ್ ಬಗ್ಗೆ ಅರಿವು ಬಂದು, ಹೀಗೆ ಹೈದರಾಬಾದಿನಲ್ಲಿ ತರಬೇತಿಗಾಗಿ ಎಂ.ಟೆಕ್ ನಂತರ ಲೆಕ್ಚರರ್ ಆಗಲು ತೆರಳಿದವಳು ನಾನು, ಅಲ್ಲಿ ಹೋದ ಮೇಲೆ ಎಂಜಿನಿಯರಿಂಗ್ ಸರ್ವೀಸ್ ಬಗ್ಗೆ ತಿಳಿಯಿತು. ಅಲ್ಲಿ ದೇಶದ ವಿವಿಧ ಭಾಗಗಳಿಂದ ತರಬೇತಿಗಾಗಿ ಬಂದಿದ್ದ ವಿದ್ಯಾರ್ಥಿಗಳ ಪರಿಚಯ ಮತ್ತು ಮುಂದಿನ ವಿದ್ಯಾಭ್ಯಾಸದ ಸ್ಪಷ್ಟ ಪರಿಕಲ್ಪನೆ ಗೇಟ್ ನ ನಂತರ ನನಗೆ ಆಯಿತು. ತರಗತಿಯಲ್ಲಿನ ಬೋಧನೆ, ಆನ್ ಲೈನ್ ಟ್ಯೂಟರ್ ಕೆಲಸ ಹಾಗೂ ನಿರಂತರ ಓದು ಮತ್ತು ಶ್ರದ್ಧೆ ಇದ್ದೇ ಇತ್ತು. ಸುಮಾರು 400 ಸೀಟುಗಳಿಗೆ ನಾಲ್ಕು ಲಕ್ಷಗಳಿಗೂ ಹೆಚ್ಚಿನ ಅರ್ಜಿಗಳು ಬರುವಂತಹ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಇದಾಗಿರುತ್ತದೆ.
ದಿನಚರಿಯಲ್ಲಿ ತಯಾರಿಗೆ ಎಷ್ಟು ಸಮಯ ಕೊಟ್ಟಿದ್ದೀರಿ?
ದಿನಚರಿಯ ಪೂರ್ಣ ಸಮಯ ನಾನು ಓದಿಗಾಗಿಯೇ ನೀಡಿದ್ದು. ನಾನು ಬೆಳಗ್ಗೆಯಿಂದ ಸಂಜೆಯವರೆಗೆ ಹೆಚ್ಚಾಗಿ ಸ್ಟಡಿ ರೂಮಿನಲ್ಲೇ ಇರುತ್ತಿದ್ದೆ.
ಯಾವ ವಿಷಯ ನಿಮಗೆ ತುಂಬಾ ಕಷ್ಟಕರ ಎನಿಸಿತು? ಅದನ್ನು ಹೇಗೆ ನಿಭಾಯಿಸಿದಿರಿ?
ಪ್ರತಿಸಲ ನಾನು ಸಂದರ್ಶನದವರೆಗೆ ಹೋಗಿ ಆಯ್ಕೆ ಆಗದೆ ಇದ್ದದ್ದು ಹೆಚ್ಚು ಸಂಕಷ್ಟ ನೀಡಿತು. ನನ್ನಂತೆಯೇ ಇದ್ದ ಇನ್ನೂ ಕೆಲವರನ್ನು ನೋಡಿ ಮತ್ತು ಮರಳಿ ಯತ್ನ ಮಾಡುವ ಮೂಲಕ ಯಶ ಕಂಡೆ.
ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳಲ್ಲಿ (ಪ್ರಿಲಿಮ್ಸ್ ಮತ್ತು ಮೈನ್ಸ್) ನಿಮಗೆ ಯಾವುದು ಹೆಚ್ಚು ಸವಾಲಾಗಿತ್ತು?
ಪ್ರಾಥಮಿಕ ಪರೀಕ್ಷೆ ನನಗೆ ಕಷ್ಟ ಎನಿಸಿತು. ಇದರಲ್ಲಿ ಸ್ಪರ್ಧಾರ್ಥಿಗಳು ಹೆಚ್ಚು ಇರುತ್ತಾರೆ. ಆದ್ದರಿಂದ ನನಗೆ ಪ್ರಾಥಮಿಕ ಪರೀಕ್ಷೆಗಳು ಕಷ್ಟ ಅನಿಸಿತು.
ಒತ್ತಡದ ಸಮಯದಲ್ಲಿ ನಿಮ್ಮನ್ನು ಮೋಟಿವೇಟ್ ಮಾಡಿದ್ದು ಯಾವುದು?
ಒತ್ತಡದ ಸಮಯದಲ್ಲಿ ನನಗೆ, ನನ್ನ ತಾಯಿ ತಂದೆ, ಗುರುಗಳು ಮತ್ತು ನನ್ನ ಸಾಧನೆ ಮಾಡಬೇಕೆಂಬ ಮನಸ್ಸು ನನಗೆ ಮುಖ್ಯ ಮೋಟಿವೇಶನ್ ಆಗಿತ್ತು.
ಸಾಧನೆ ಮತ್ತು ಅನುಭವ
ಫಲಿತಾಂಶದಲ್ಲಿ 31ನೇ ರಾಂಕ್ ಬಂದ ಸುದ್ದಿ ತಿಳಿದಾಗ ನಿಮ್ಮ ಮೊದಲ ಪ್ರತಿಕ್ರಿಯೆ ಏನು?
ನನ್ನ ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನ ನನಗೆ ಉತ್ತೀರ್ಣಳಾಗುವ ನಿರೀಕ್ಷೆ ಕೊಟ್ಟಿತ್ತು ಮತ್ತು ಸಹಜವಾಗಿಯೇ ನನಗೆ ತುಂಬಾ ಸಂತಸವಾಯಿತು.
ಈ ಸಾಧನೆಯಲ್ಲಿ ನಿಮ್ಮ ಕುಟುಂಬ/ಗುರು/ಸ್ನೇಹಿತರ ಪಾತ್ರ ಹೇಗಿತ್ತು?
ಈ ಸಾಧನೆಯ ಹಾದಿಯಲ್ಲಿ ನನ್ನ ಗುರುಗಳು, ಅಲ್ಲಿ ಸಿಕ್ಕಿದ ಸ್ನೇಹಿತರು ಮತ್ತು ನನ್ನ ಕುಟುಂಬದ ಎಲ್ಲರೂ ನಿನಗೆ ಇದು ಆಗುತ್ತದೆ ಮಾಡೇ ಮಾಡುತ್ತೀಯ ಪ್ರಯತ್ನಿಸು ಎಂದು ಬೆಂಬಲ ನೀಡಿದರು.
ಸಂದರ್ಶನದ ಅನುಭವನ್ನು ಸ್ವಲ್ಪ ವಿವರಿಸಿ, ಎಕ್ಸಾಮಿನರ್/ಸಂದರ್ಶಕರು ಹೇಗೆ ಪ್ರಶ್ನೆ ಕೇಳಿದರು?
ನನ್ನ ಸಂದರ್ಶನಗಳು ದೆಹಲಿಯಲ್ಲಿ ನಡೆದಿದ್ದು ಮೂರು ನಾಲ್ಕು ಬಾರಿ ಸಂದರ್ಶನದವರೆಗೆ ಬಂದು ಸೆಲೆಕ್ಟ್ ಆಗಿರಲಿಲ್ಲ. ಕೊನೆಗೆ 2024ರಲ್ಲಿ ನನ್ನ ಹೆಸರು ಪಟ್ಟಿಯಲ್ಲಿ ಬಂದು ನಾನು ಆಯ್ಕೆ ಆಗಿದ್ದೆ. (ಡಿಎಎಫ್, ಡೀಟೈಲ್ಡ್ ಅಪ್ಲಿಕೇಶನ್ ಫಾರ್ಮ್) ನನ್ನ ವೈಯಕ್ತಿಕ ವಿವರಗಳ ಪಟ್ಟಿಯಲ್ಲಿ ತುಂಬಿಸಿರುವ ಆಸಕ್ತಿ ಮತ್ತು ಅನುಭವಗಳ ಕುರಿತಾಗಿ ಹೆಚ್ಚಿನ ಪ್ರಶ್ನೆಗಳು ಬಂದಿತ್ತು. ನನಗೆ ಐದು ಭಾಷೆಗಳು ಗೊತ್ತು ಎಂದು ಬರೆದಿದ್ದು, ಅಲ್ಲಿಂದಲೇ ನನ್ನ ಸಂದರ್ಶನ ಪ್ರಾರಂಭವಾಗಿತ್ತು. ಪ್ರಚಲಿತ ವಿದ್ಯಮಾನ ಮತ್ತು ವಿಷಯಾರಿನಲ್ಲಿ ಮುಗಿಯಿತು.
ಮುಂದಿನ ಹಾದಿ
ಸರ್ಕಾರದ ಸೇವೆಯಲ್ಲಿ ಎಂಜಿನಿಯರ್ ಆಗಿ ನಿಮ್ಮ ದೃಷ್ಟಿ ಏನು?
ಪರೀಕ್ಷೆ ಉತ್ತೀರ್ಣಳಾಗಿ 31ನೇ ರಾಂಕ್ ಬಂದ ಮೇಲೆ ಜೂನಿಯರ್ ಟೆಲಿಕಮ್ಯುನಿಕೇಶನ್ ಅಧಿಕಾರಿಯಾಗಿ ನಾನು ಹೈದರಬಾದಿನ ಗಾಜಿಯಾಬಾದಿನಲ್ಲಿ ಹಾಲಿ ತರಬೇತಿಯಲ್ಲಿ ಇದ್ದೇನೆ. ನಾನು ಉತ್ತಮ ಸೇವೆ ನೀಡಬಯಸುತ್ತೇನೆ. ನಾನು ಮೂಲತಃ ಗ್ರಾಮಾಂತರ ಪ್ರದೇಶದಲ್ಲಿ ನೋಡಿ ಅರಿತುಕೊಂಡಿರುವ ಅನುಭವದಲ್ಲಿ ನಿಷ್ಠಾಂತ ಅಧಿಕಾರಿಯಾಗಿ ಕೆಲಸ ನಿರ್ಹಿಸುತ್ತೇನೆ.
ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಹೆಚ್ಚು ಆಸಕ್ತಿ (ರೈಲ್ವೆ ಸಿಪಿಡಬ್ಲುಡಿ, ಡಿಫೆನ್ಸ್)?
ಮುಂದಿನ 2025ರ ನೋಟಿಫಿಕೇಶನ್ ನಲ್ಲಿ ನಾನು ರೈಲ್ವೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಏಕೆಂದರ ಇಲ್ಲಿ ಕ್ಷೇತ್ರ ದೊಡ್ಡದಿದ್ದು ಕಲಿಯಲು ಮತ್ತು ಸೇವೆ ಸಲ್ಲಿಸಲು ಹೆಚ್ಚಿನ ಅಕಾಶವಿರುತ್ತದೆ.
ಮುಂದಿನ ಹತ್ತು ವರ್ಷಗಳಲ್ಲಿ ನಿಮ್ಮನ್ನು ನೀವು ಯಾವ ಹುದ್ದೆಯಲ್ಲಿ ನೋಡಿಕೊಳ್ಳಲು ಇಷ್ಟಪಡುತ್ತೀರಿ?
ಮುಂದಿನ ಪರೀಕ್ಷೆಗಳಲ್ಲಿ ನಾನು ರೈಲ್ವೆ ಟೆಲಿಕಮ್ಯುನಿಕೇಶನ್ ಮತ್ತು ಡಿಫೆನ್ಸ್ ನಲ್ಲಿ ಒಳ್ಳೆಯ ಅವಕಾಶಗಳು ಸಿಕ್ಕರೆ ಖಂಡಿತಾ ಮುಂದುವರಿಯಲು ಇಷ್ಟಪಡುತ್ತೇನೆ.
ಯು.ಪಿ.ಎಸ್.ಸಿ/ಇ.ಎಸ್.ಇ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವ ಜನತೆಗೆ ನೀವು ಏನು ಸಲಹೆ ಕೊಡುತ್ತೀರಾ?
ಎಂದಿಗೂ ಧೃತಿಗೆಡದೆ ಮುಂದೆ ಕಠಿಣ ಅಭ್ಯಾಸ ಮಾಡಿ, ಈ ಹಾದಿಯಲ್ಲಿ ಸರ್ಕಾರದ ಹಲವು ಯೋಜನೆಗಳು ಇದ್ದು ಇದನ್ನು ಬಳಸಿಕೊಳ್ಳಬಹುದು ಮತ್ತು ಕೆಲಸ ಮಾಡುತ್ತಾ ಓದಿಕೊಳ್ಳಬಹುದು ಹಾಗೂ ಕನ್ನಡ ಮಾಧ್ಯಮ ಸಾಧನೆಗೆ ತಡೆಯಾಗುವುದಿಲ್ಲ. ನಿಮ್ಮ ಯಶಸ್ಸಿಗೆ ಶ್ರದ್ಧೆ ಮತ್ತು ಪ್ರಾಮಾಣಿಕ ಪ್ರಯತ್ನ ಮತ್ತು ಕಠಿಣ ಶ್ರಮವಷ್ಟೆ ಯಶ ಕೊಡಬಲ್ಲದು ಎಂದು ಹೇಳುತ್ತೇನೆ. ಹಲವಾರು ಅವಕಾಶಗಳಿವೆ, ಬಳಸಿಕೊಳ್ಳೋಣ.
ಈ ಸಾಧನೆಯ ನಂತರ ನಿಮ್ಮ ಜೀವನದಲ್ಲಿ ಏನು ಬದಲಾವಣೆ ಕಂಡಿರಿ?
ಹೌದು ನನಗೆ ಮತ್ತು ನನ್ನ ತಾಯಿತಂದೆಗೆ ಎಲ್ಲರೂ ಶುಭಾಶಯ ಕೋರಿದ್ದಾರೆ. ನನ್ನ ಹಿತೈಷಿಗಳು ಮತ್ತು ಗುರುಗಳು ತಮ್ಮ ಒಂದು ಸಾಧನೆ ಎಂಬಂತೆ ಖುಷಿಪಟ್ಟಿದ್ದಾರೆ. ಅದಕ್ಕೆ ನಾನು ಆಭಾರಿ. ಗ್ರಾಮಾಂತರ ಪ್ರದೇಶದ ಮಧ್ಯಮ ವರ್ಗದ ಜನರು ಸಹಜವಾಗಿಯೇ ಒಂದು ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಮೊದಲು ಮದುವೆ ಮಾಡುವ ಮನಸ್ಥಿತಿಯಲ್ಲಿಯೇ ಇರುವಾಗ, ನನಗೆ ಮುಂದೆ ಓದಲು ಅವಕಾಶ ನೀಡಿದ್ದಾರೆ. ಜೊತೆಗೆ ನನ್ನನ್ನು ಒಬ್ಬ ಅಧಿಕಾರಿಯಾಗಿ ಮಾಡುವಲ್ಲಿ, ನೋಡುವಲ್ಲಿ ಸಹಕರಿಸಿದ್ದಾರೆ. ಬದಲಾವಣೆ ಇದ್ದೇ ಇದೆ. ಇದು ನನಗೆ ಖುಷಿ ತಂದಿದೆ.
ನಿಮ್ಮ ಯಶಸ್ಸಿನ ಮಂತ್ರ ಯಾವುದು?
ನನ್ನ ಯಶಸ್ಸಿನ ಮಂತ್ರ…. ನಿರಂತರ ಪ್ರಯತ್ನ! ಎಂದಿಗೂ ಎದೆಗುಂದದೆ ಕಲಿಕೆ ಕಲಿಕೆ ಕಲಿಕೆ….. ಅಷ್ಟೆ.
– ಅನುಪಮಾ ಜಿ.





